ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಯ ಸಂಕ್ಷಿಪ್ತ ಸಾರ  

ಆರೋಗ್ಯ ಕರ್ನಾಟಕ-ಆಯುಷ್ಮಾನ್‌ ಭಾರತ್‌ ವಿಲೀನಕ್ಕೆ ಚಿಂತನೆ: ಸಿಎಂ ಎಚ್‌ಡಿಕೆ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಆರೋಗ್ಯ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ‘ಆಯುಷ್ಮಾನ್‌ ಭಾರತ’ ಯೋಜನೆಗಳನ್ನು ವಿಲೀನಗೊಳಿಸುವ ನಿಟ್ಟಿನಲ್ಲಿ ವೈದ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಎರಡೂ ಯೋಜನೆಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ವಿಶೇಷವಾಗಿ ಬಡವರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಯುಷ್ಮಾನ್‌ ಯೋಜನೆಯು ಬಡವರಿಗೆ ೫ ಲಕ್ಷ ರುಪಾಯಿ ವರೆಗೆ ಆರೋಗ್ಯ ಸೇವೆ ಕಲ್ಪಿಸಲಿದೆ. ಆರೋಗ್ಯ ಕರ್ನಾಟಕದಡಿ ಬಿಪಿಎಲ್‌ ಕಾರ್ಡ್‌ ಉಳ್ಳವರಿಗೆ ಆರೋಗ್ಯ ಸೇವೆ ಉಚಿತವಾಗಿ ದೊರೆಯಲಿದೆ. ಎಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಶೇ.೩೦ರಷ್ಟು ವಿನಾಯಿತಿ ದೊರೆಯಲಿದೆ.

ಒಂದು ವರ್ಷದ ಅವಧಿಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಕೇರಳ ಸರ್ಕಾರ

ಮಳೆಯ ಪ್ರಕೋಪಕ್ಕೆ ತತ್ತರಿಸಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರ್ಕಾರ ಒಂದು ವರ್ಷ ಅವಧಿಯೊಳಗಿನ ಎಲ್ಲ ಸರ್ಕಾರಿ ಆಚರಣೆ, ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಂಗಳವಾರ ಘೋಷಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೇರಳ ಸರ್ಕಾರ, “ಪ್ರವಾಹದಿಂದಾಗಿ ಕೇರಳ ಬಹಳಷ್ಟು ಹಾನೀಗೀಡಾಗಿದೆ. ಹೀಗಾಗಿ ದೊಡ್ಡ ಮೊತ್ತದ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಕಾರ್ಯಕ್ರಮಗಳಿಗೆ ಖರ್ಚಾಗುವ ಹಣವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ,” ಎಂದು ತಿಳಿಸಿದೆ. ಪ್ರವಾಹದಿಂದಾಗಿ ಕೇರಳ ರಾಜ್ಯ ರೂ.30,000 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರದಿಂದ ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಕಡಿತ ಇಲ್ಲ

ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದಿದ್ದರೂ ಕೇಂದ್ರ ಸರ್ಕಾರವು ಎಕ್ಸೈಜ್ ಸುಂಕ ಕಡಿತ ಮಾಡುವ ಸಾಧ್ಯತೆ ಇಲ್ಲ. ಕೇಂದ್ರ ಸರ್ಕಾರವು ವಿತ್ತೀಯ ವಿವೇಕಪಾಲನೆ ಮಾಡಬೇಕಿರುವುದರಿಂದ ಎಕ್ಸೈಜ್ ಸುಂಕ ಕಡಿತ ಮಾಡುವುದಿಲ್ಲ ಎಂದು ಉನ್ನತಾಧಿಕಾರಿಗಳನ್ನು ಉಲ್ಲೇಖಿಸಿ ಮನಿಕಂಟ್ರೋಲ್ ಡಾಟ್ ಕಾಮ್ ವರದಿ ಮಾಡಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಚಾಲ್ತಿ ಖಾತೆ ಕೊರತೆ ಮತ್ತು ವಿತ್ತೀಯ ಕೊರತೆ ಹಿಗ್ಗಿವೆ. ಈ ಹಂತದಲ್ಲಿ ಎಕ್ಸೈಜ್ ಸುಂಕ ಕಡಿತ ಮಾಡಿದರೆ ಮತ್ತಷ್ಟು ಹಿಗ್ಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಮಿತಿ ಕಾಯ್ದುಕೊಂಡು ವಿತ್ತೀಯ ವಿವೇಕಪಾಲನೆ ಮಾಡಬೇಕಿರುವುದರಿಂದ ಸುಂಕ ಕಡಿತ ಸಾಧ್ಯವಿಲ್ಲ ಎಂದು ಉನ್ನತಾಧಿಕಾರಿ ತಿಳಿಸಿದ್ದಾರೆ.

ಟಾಪ್ ಯೋಜನೆಗೆ ಬೇಡಿಕೆ ಇಟ್ಟ ಮಂಜಿತ್ ಸಿಂಗ್

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಪುರುಷರ ೮೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ಮಂಜಿತ್ ಸಿಂಗ್ ತನ್ನನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಸೇರ್ಪಡೆಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದಾರೆಂಬ ಹಿನ್ನೆಲೆಯಲ್ಲಿ ಒಎನ್‌ಜಿಸಿ ಮಂಜಿತ್ ಅವರೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿತ್ತು. ಎರಡು ವರ್ಷಗಳ ಹಿಂದೆ ಒಎನ್‌ಜಿಸಿ ಒಪ್ಪಂದ ನವೀಕರಣವಾಗದೆ ಹೋದಾಗ ಕನಲಿ ಹೋಗಿದ್ದ ಮಂಜಿತ್, ಕ್ರೀಡಾಬದುಕಿಗೆ ವಿದಾಯ ಹೇಳಲು ಮುಂದಾಗಿದ್ದರು. "ಒಎನ್‌ಜಿಸಿ ನನ್ನೊಂದಿಗಿನ ಒಪ್ಪಂದವನ್ನು ನವೀಕರಣ ಮಾಡಿಕೊಳ್ಳದೆ ಹೋದಾಗ ಮಾರ್ಚ್ ೨೦೧೬ರಿಂದ ನಾನು ನಿರುದ್ಯೋಗಿಯಾಗಿದ್ದೇನೆ. ಈಗ ನಾನು ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ. ಕ್ರೀಡಾ ಸಚಿವಾಲಯ ನನ್ನ ಸಾಧನೆಯನ್ನು ಮನಗಂಡು ನನ್ನ ಶ್ರಮಕ್ಕೆ ಪ್ರತಿಫಲ ನೀಡುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ,'' ಎಂದು ಮಂಜಿತ್ ಸಿಂಗ್ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

ಕೋಲ್ಕಾತ್ತಾದಲ್ಲಿ ಕುಸಿದು ಬಿದ್ದ ಸೇತುವೆ; ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಶಂಕೆ

ದಕ್ಷಿಣ ಕೋಲ್ಕಾತ್ತಾದ ಡೈಮಂಡ್ ಹಾರ್ಬರ್ ರಸ್ತೆಯ ಬಳಿ ಇರುವ 40 ವರ್ಷ ಹಳೆಯ ಮೇಜರ್ಹತ್ ಮೇಲ್ಸೇತುವೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕದ ದಳದ ಸಿಬ್ಬಂದಿ, ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರೈಲ್ವೆ ಹಳಿ ಮೇಲೆ ಹಾದು ಹೋಗಿದ್ದ ಈ  ಸೇತುವೆ ಸಂಜೆ. 4.30ರ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದಿದ್ದರಿಂದ, ಕೆಲವು ಮಂದಿ ಗಾಯಗೊಂಡಿದ್ದು, ಹಲವು ವಾಹನಗಳು ಕೂಡ ಜಖಂಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಕುಸಿದು ಬಿದ್ದಿರುವ ಮೇಲ್ಸೇತುವೆ ಬಳಿ ಮೆಟ್ರೋ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅವಘಡಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಘಟನೆಯ ಕುರಿತಂತೆ ತನಿಖೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶ ನೀಡಿದ್ದಾರೆ.

ಹಿಜಾಬ್ ಧರಿಸಿಕೊಂಡೇ ಮಿಸ್ ಇಂಗ್ಲೆಂಡ್ ಫೈನಲ್ ಹಂತ ತಲುಪಿದ ಪಾಕಿಸ್ತಾನಿ ಮಹಿಳೆ

ಪಾಕಿಸ್ತಾನ ಮೂಲದ ಮಹಿಳೆಯೊಬ್ಳಳು ಹಿಜಾಬ್ ಧರಿಸಿಕೊಂಡೇ ಮಿಸ್ ಇಂಗ್ಲೆಂಡ್ ಬ್ಯೂಟಿ ಸ್ಪರ್ಧೆ ಫೈನಲ್ ಹಂತಕ್ಕೆ ತಲುಪಿದ್ದಾರೆ. ವೆಸ್ಟ್ ಯಾರ್ಕ್‌ಶೈರ್‌ನ ಹುಡ್ಡರ್ಸ್ ಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ೧೯ ವರ್ಷ ವಯಸ್ಸಿನ ಸಾರಾ ಇಫ್ತೆಖರ್ ಈ ಹಿಂದೆ ಮಿಸ್ ಹುಡ್ಡರ್ಸ್‌ಫೀಲ್ಡ್ ೨೦೧೮ ಆಗಿ ಆಯ್ಕೆಯಾಗಿದ್ದರು. ಈಕೆಯ ಹಿಜಾಬ್ ಧರಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಿಂದಲೇ ತಾನು ಈ ಸ್ಪರ್ಧೆಗೆ ಬರಲು ಸಾಧ್ಯವಾಯಿತು ಎಂದು ಸಾರಾ ಹೇಳಿಕೊಂಡಿದ್ದಾರೆ.

ನೂತನ ಡೈಹಾರ್ಡ್ ಸರಣಿ ಮ್ಯಾಕ್‌ಕ್ಲೇನ್‌‌

ಜನಪ್ರಿಯ ‘ಡೈಹಾರ್ಡ್’‌ ಸರಣಿಯ ಹೊಸ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ನೂತನ ಚಿತ್ರದಲ್ಲಿ ಈ ಸರಣಿಯ ಜನಪ್ರಿಯ ನಟ ಬ್ರೂಸ್ ವಿಲ್ಲಿಸ್‌ ಇರುತ್ತಾರೆ ಎನ್ನುತ್ತಾರೆ ನಿರ್ಮಾಪಕ ಲೊರೆನ್ಜೊ. 1988ರಲ್ಲಿ ‘ಡೈಹಾರ್ಡ್‌’ ಮೊದಲ ಸಿನಿಮಾ ತೆರೆಕಂಡಿತ್ತು. ಡೈಹಾರ್ಡ್‌ 2 (1990), ಡೈಹಾರ್ಡ್ ವಿಥ್ ಎ ವೆಂಜಿನೆನ್ಸ್ (1995), ಲಿವ್‌ ಫ್ರೀ (2007), ಎ ಗುಡ್‌ ಡೇ ಟು ಡೈಹಾರ್ಡ್ (2013) ನಂತರ ಇದೀಗ ಮತ್ತೊಂದು ಸರಣಿ ಸೆಟ್ಟೇರಲಿದೆ. ನೂತನ ಸಿನಿಮಾಗೆ ‘ಮ್ಯಾಕ್‌ಕ್ಲೇನ್‌’ ಎಂದು ನಾಮಕರಣವಾಗಿದೆ.

ಅಕ್ಟೋಬರ್ ೪ರಂದು ವಿಂಡೀಸ್ ವಿರುದ್ಧ ರಾಜ್‌ಕೋಟ್‌ನಲ್ಲಿ ಮೊದಲ ಟೆಸ್ಟ್

ಭಾರತ ಮತ್ತು ವೆಸ್ಟ್ಇಂಡೀಸ್ ನಡುವಣದ ಕ್ರಿಕೆಟ್ ಸರಣಿಯ ವೇಳಾಪಟ್ಟಿಯನ್ನು ಇಂದು ಬಿಸಿಸಿಐ ಬಿಡುಗಡೆ ಮಾಡಿದ್ದು, ಅಕ್ಟೋಬರ್ ೪ರಿಂದ ಶುರುವಾಗಲಿರುವ ಮೊದಲ ಟೆಸ್ಟ್ ಪಂದ್ಯ ರಾಜ್‌ಕೋಟ್‌ನಲ್ಲಿ ಜರುಗಲಿದೆ. ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಬಳಿಕ ಈ ಇಂಡೋ-ವಿಂಡೀಸ್ ಸರಣಿ ನಡೆಯಲಿದೆ. ಅಕ್ಟೋಬರ್ ೪ರಿಂದ ಶುರುವಾಗಲಿರುವ ವಿಂಡೀಸ್ ವಿರುದ್ಧದ ಸರಣಿ ನವೆಂಬರ್ ೧೧ಕ್ಕೆ ಮುಗಿಯಲಿದೆ. ಈ ಅವಧಿಯಲ್ಲಿ ಭಾರತ, ೨ ಟೆಸ್ಟ್, ೫ ಏಕದಿನ ಮತ್ತು ೩ ಟಿ೨೦ ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ ೪ರಿಂದ ೮ರವರೆಗೆ ಹೈದರಾಬಾದ್‌ನಲ್ಲಿ ಜರುಗಲಿದೆ. ಅಕ್ಟೋಬರ್ ೨೧ರಂದು ಗುವಾಹತಿಯಲ್ಲಿ ನಡೆಯಲಿರುವ ಏಕದಿನ ಪಂದ್ಯದೊಂದಿಗೆ ಐದು ಪಂದ್ಯ ಸರಣಿಗೆ ಚಾಲನೆ ಸಿಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More