ಸದ್ದು ಮಾಡುವ ನ್ಯಾ ಗೊಗೊಯ್ ಸುಪ್ರೀಂ ಕೋರ್ಟಿನಲ್ಲಿ ಕಳೆದ ಅವಿಸ್ಮರಣೀಯ ಕ್ಷಣಗಳು

ಅತ್ಯಂತ ಹಿರಿಯ ನ್ಯಾಯಮೂರ್ತಿಗೆ ಅಧಿಕಾರ ಹಸ್ತಾಂತರಿಸುವ ಸಂಪ್ರದಾಯದ ಪ್ರಕಾರ ಹಾಲಿ ಸಿಜೆಐ ದೀಪಕ್ ಮಿಶ್ರಾ ಅವರು ನ್ಯಾಯಮೂರ್ತಿ ಗೊಗೊಯ್ ಅವರನ್ನು ಸಿಜೆಐ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಈ ಸಂಬಂಧ ಎದ್ದ ವಿವಾದಗಳಿಗೆ ತೆರೆಬಿದ್ದಿದೆ 

ಪ್ರಜಾತಂತ್ರವನ್ನು ರಕ್ಷಿಸಿಕೊಳ್ಳುವುದಕ್ಕೆ ನಮಗೆ "ಕೇವಲ ಸ್ವತಂತ್ರ ನ್ಯಾಯಾಧೀಶರು ಮತ್ತು ಸದ್ದು ಮಾಡುವ ಪತ್ರಕರ್ತರು ಮಾತ್ರವಲ್ಲ, ಸ್ವತಂತ್ರ ಪರ್ತಕರ್ತರು ಮತ್ತು ಕೆಲವೊಮ್ಮೆ ಸದ್ದು ಮಾಡುವ ನ್ಯಾಯಾಧೀಶರೂ" ಬೇಕಾಗುತ್ತಾರೆ, ಎಂದು ಹೇಳಿದವರು ಇನ್ನೇನು ಸದ್ಯದಲ್ಲೇ ಭಾರತದ ಸುಪ್ರೀಂ ಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕವಾಗಲಿರುವ ನ್ಯಾಯಮೂರ್ತಿ ರಂಜನ್ ಗೋಗೊಯ್.

ನ್ಯಾಯಾಂಗ ಆಡಳಿತದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ 2018ರ ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಲ್ವರು ಹಿರಿಯ ‘ಸದ್ದು ಮಾಡುವ’ ನ್ಯಾಯಾಧೀಶರ ಪೈಕಿ ನ್ಯಾಯಮೂರ್ತಿ ಗೊಗೊಯ್ ಕೂಡ ಒಬ್ಬರು. ವಾರ್ಷಿಕ ‘ರಾಮನಾಥ್ ಗೊಯೆಂಕಾ ಉಪನ್ಯಾಸ’ ನೀಡುವಾಗ ಅವರು ಆ ಆಡಿದ ಈ ಮಾತುಗಳಿಗೆ ಔಚಿತ್ಯ ಬರುತ್ತದೆ. ಆ ಚಾರಿತ್ರಿಕ ಸುದ್ದಿಗೋಷ್ಠಿಯಲ್ಲಿ ಗೊಗೊಯ್ ಮತ್ತು ಅವರೊಂದಿಗಿದ್ದ ಇತರ ನ್ಯಾಯಾಧೀಶರು ಭಾರತದ ಪ್ರಜಾಸತ್ತೆ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದನ್ನು ನೋಡಿದಾಗ ಅವರು ಸಿಜೆಐ ಆಗಿ ನೇಮಕವಾಗುವುದು ಸಾಧ್ಯವಿಲ್ಲ ಎಂದೇ ಕಾನೂನು ಸಮುದಾಯ ನಂಬಿತ್ತು.

ಆದರೆ, ಅತ್ಯಂತ ಹಿರಿಯ ನ್ಯಾಯಮೂರ್ತಿಗೆ ಅಧಿಕಾರ ಹಸ್ತಾಂತರಿಸುವ ಸಂಪ್ರದಾಯದ ಪ್ರಕಾರ ಹಾಲಿ ಸಿಜೆಐ ಆಗಿರುವ ದೀಪಕ್ ಮಿಶ್ರಾ ಅವರು ನ್ಯಾಯಮೂರ್ತಿ ಗೊಗೊಯ್ ಅವರನ್ನು ಸಿಜೆಐ ಸ್ಥಾನಕ್ಕೆ ಶಿಫಾರಸ್ಸು ಮಾಡುವುದರೊಂದಿಗೆ ಈ ಎಲ್ಲಾ ಲೆಕ್ಕಾಚಾರಗಳಿಗೆ ತೆರೆಬಿದ್ದಿದೆ. ಕೇಂದ್ರ ಸರ್ಕಾರವೂ ಈ ಶಿಫಾರಸ್ಸಿಗೆ ಯಾವುದೇ ತಕರಾರು ಎತ್ತದಿರುವ ತೀರ್ಮಾನ ಮಾಡಿರುವುದರಿಂದ ಸಿಜೆಐ ಮಿಶ್ರಾ ಅವರು ನಿವೃತ್ತರಾದ ಮೇಲೆ 2018ರ ಅಕ್ಟೋಬರ್ 3ರಂದು ನ್ಯಾಯಮೂರ್ತಿ ಗೊಗೊಯ್ ಅವರು ನೂತನ ಸಿಜೆಐ ಆಗಿ ಅಧಿಕಾರ ಸ್ವೀಕರಿಸುವುದು ಹೆಚ್ಚೂ ಕಡಿಮೆ ಖಾತ್ರಿಯಾಗಿದೆ.

ಆದರೆ, ನ್ಯಾಯಮೂರ್ತಿ ಗೊಗೊಯ್ ಅವರು ಯಾವ ರೀತಿಯ ಸಿಜೆಐ ಆಗಲಿದ್ದಾರೆ? ಇಲ್ಲಿಯ ತನಕ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ಅವರು ಕಳೆದ ಅವಧಿಯಲ್ಲಿ ನಡೆದ ಮುಖ್ಯ ಘಟನಾವಳಿಗಳು ಇಲ್ಲಿವೆ:

ಸುಪ್ರೀಂ ಕೋರ್ಟಿನಲ್ಲಿ ನ್ಯಾಯಮೂರ್ತಿ ಗೊಗೊಯ್ ಅವರು ನೀಡಿದ ಪ್ರಮುಖ ತೀರ್ಪುಗಳು

2012 ಏಪ್ರಿಲ್ 23ರಂದು ನ್ಯಾಯಮೂರ್ತಿ ಗೊಗೊಯ್ ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು. 2001ರಲ್ಲಿ ಗುವಾಹಟಿ ಹೈಕೋರ್ಟ್ ಮೂಲಕ ಉನ್ನತ ನ್ಯಾಯಾಂಗಕ್ಕೆ ಪದಾರ್ಪಣೆ ಮಾಡಿದ ಅವರು 2011ರ ಫೆಬ್ರವರಿ 12ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ನ್ಯಾಯಮೂರ್ತಿ ಗೊಗೊಯ್ ಅವರು ಅನೇಕ ಮಹತ್ವಪೂರ್ಣ ತೀರ್ಪುಗಳನ್ನು ಬರೆದಿರುವುದು ಮಾತ್ರವಲ್ಲ, ಕೆಲವು ಪ್ರಮುಖ ಪ್ರಕರಣಗಳಲ್ಲಿ ಭಿನ್ನಾಭಿಪ್ರಾಯಗಳನ್ನೂ ದಾಖಲಿಸಿದ್ದಾರೆ.

ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಪ್ರಕರಣದಲ್ಲಿ ಅವರು ಭಿನ್ನಮತ ವ್ಯಕ್ತಪಡಿಸಿದರು. ಮುಖ್ಯ ನ್ಯಾಯಮೂರ್ತಿಗಳು ತೆಗೆದುಕೊಂಡ ನಿಲುವಿಗೆ ಭಿನ್ನವಾದ ಅಲ್ಪಸಂಖ್ಯಾತ ನಿಲುವನ್ನು ತಳೆದಾಗ ಆ ನ್ಯಾಯಪೀಠದಲ್ಲಿ ಅವರು ಕೆಲವೇ ಕೆಲವು ತಿಂಗಳುಗಳನ್ನು ಮಾತ್ರ ಕಳೆದಿದ್ದರು.

ಪ್ರಣಬ್ ಮುಖರ್ಜಿಯವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ 2012ರಲ್ಲಿ ಲೋಕಸಭೆಯ ಮಾಜಿ ಸ್ಪೀಕರ್ ಪಿ ಎ ಸಂಗ್ಮಾ ಅವರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಗ್ಮಾ ಅವರು ಕೊಟ್ಟ ಕಾರಣ ಏನೆಂದರೆ, ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗ ‘ಲಾಭದಾಯಕ ಹುದ್ದೆ’ ಹೊಂದಿದ್ದರು ಹಾಗೂ ಅದು ಸಂವಿಧಾನದ ಉಲ್ಲಂಘನೆಯಾಗಿತ್ತು ಎಂಬುದು. ಈ ಅರ್ಜಿಯು ಸಮರ್ಥನೀಯವಾಗಿದೆಯೇ ಹಾಗೂ ಅದಕ್ಕೆ ಪೂರ್ಣ ವಿಚಾರಣೆಯ ಅಗತ್ಯವಿದೆಯೇ ಎಂಬುದನ್ನು ತೀರ್ಮಾನಿಸುವುದಕ್ಕಾಗಿ ಆರಂಭದಲ್ಲಿ ನ್ಯಾಯಮೂರ್ತಿ ಗೊಗೊಯ್ ಅವರನ್ನೂ ಒಳಗೊಂಡ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ನ್ಯಾಯಪೀಠವನ್ನು ರಚಿಸಲಾಯಿತು.

ನಾಮಪತ್ರ ಸಲ್ಲಿಸುವಾಗ ಪ್ರಣಬ್ ಮುಖರ್ಜಿಯವರು ಹೊಂದಿದ್ದ ಎರಡೂ ಹುದ್ದೆಗಳು (ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್‍ಟಿಟ್ಯೂಟ್ - ಐಎಸ್‍ಐ - ಅಧ್ಯಕ್ಷ ಹುದ್ದೆ ಮತ್ತು ಲೋಕಸಭೆಯ ನಾಯಕನ ಹುದ್ದೆ) ಯಾವ ಕಾರಣದಿಂದಲೂ ಲಾಭದಾಯಕ ಹುದ್ದೆಗಳಲ್ಲವಾದ್ದರಿಂದ ಈ ಅರ್ಜಿಯನ್ನು ಯಥಾಪ್ರಕಾರ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಂದಿನ ಸಿಜೆಐ ಆಗಿದ್ದ ಅಲ್ತಮಸ್ ಕಬೀರ್ ಮತ್ತು ಇತರ ಇಬ್ಬರು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಆದರೆ, ನ್ಯಾಯಮೂರ್ತಿ ಗೊಗೊಯ್ ಮತ್ತು ನ್ಯಾಯಮೂರ್ತಿ ಚಲಮೇಶ್ವರ್ ಅವರು ಈ ಬಹುಮತದ ಅಭಿಪ್ರಾಯವನ್ನು ವಿರೋಧಿಸಿ ಭಿನ್ನಮತ ವ್ಯಕ್ತಪಡಿಸಿದರು. ಐಎಸ್‍ಐ ಅಧ್ಯಕ್ಷ ಹುದ್ದೆಯು ಲಾಭದಾಯಕ ಹುದ್ದೆ ಹೌದೋ ಅಲ್ಲವೋ ಎಂಬುದನ್ನು ತೀರ್ಮಾನಿಸುವುದಕ್ಕೂ ಸಹ ಸಂಗ್ಮಾ ಅವರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ಕೊಟ್ಟು ಪೂರ್ಣ ವಿಚಾರಣೆ ಮಾಡುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಗೊಗೊಯ್ ಅವರು ತಮ್ಮ ಭಿನ್ನಮತದ ನಿಲುವು ತಳೆದಿದ್ದರು.

ಸರ್ಕಾರಿ ಜಾಹಿರಾತುಗಳಲ್ಲಿ ಉನ್ನತ ರಾಜಕಾರಣ ಗಳ ಫೋಟೋ ಹಾಕುವ ಬಗ್ಗೆ

ಸರ್ಕಾರಿ ಜಾಹಿರಾತುಗಳಲ್ಲಿ ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಫೋಟೋಗಳನ್ನು ಮಾತ್ರ ಬಳಸಬೇಕು ಎಂದು 2015ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟಿತು. ರಾಜಕಾರಣಿಗಳು ತಮ್ಮ ಸ್ವಂತ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ತೆರಿಗೆದಾರರ ಹಣವನ್ನು ಬಳಸಿಕೊಳ್ಳದಂತೆ ತಡೆಯುವುದು ಈ ತೀರ್ಮಾನದ ಉದ್ದೇಶವಾಗಿತ್ತು.

ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಗೊಗೊಯ್ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸಿತು. ಸರ್ಕಾರಿ ಜಾಹಿರಾತುಗಳಿಗೆ ಸಂಬಂಧಿಸಿದಂತೆ 2015ರಲ್ಲಿ ಸುಪ್ರೀಂ ಕೋರ್ಟ್ ಆದೇಶದಲ್ಲಿದ್ದ ಇತರ ಎಲ್ಲಾ ನಿರ್ಬಂಧಗಳನ್ನು ಈ ಪೀಠ ಒಪ್ಪಿಕೊಂಡಿತಾದರೂ ಯಾರ ಯಾರ ಭಾವಚಿತ್ರಗಳನ್ನು ಪ್ರಕಟಿಸಬಹುದು ಎಂಬ ವಿಷಯದಲ್ಲಿ ಮಾರ್ಪಾಡು ಮಾಡಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಅಗತ್ಯವಿದ್ದಲ್ಲಿ ನಿರ್ದಿಷ್ಟ ಕ್ಯಾಬಿನೆಟ್ ಮಂತ್ರಿಯ ಭಾವಚಿತ್ರಗಳನ್ನೂ ಈ ಪಟ್ಟಿಗೆ ಸೇರಿಸಿತು. ಸುಪ್ರೀಂ ಕೋರ್ಟಿನ ತೀರ್ಪಿನ ಮರುಪರಿಶೀಲನೆಗೆ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರ್ಕಾರವು ಕೊಟ್ಟ ವಿವರಣೆ ಏನೆಂದರೆ, ವಿವಿಧ ಸರ್ಕಾರಿ ಕಾರ್ಯಕ್ರಮಗಳ ರೂಪಣೆ ಮತ್ತು ಅನುಷ್ಠಾನಗಳಲ್ಲಿ ಯಾರು ಯಾರು ಪಾಲ್ಗೊಂಡಿದ್ದಾರೆ ಎಂಬುದನ್ನು ಅರಿಯುವ ಹಕ್ಕು ಸಾರ್ವಜನಿಕರಿಗಿರುತ್ತದೆ ಹಾಗೂ ಸೀಮಿತ ನಾಯಕರ ಭಾವಚಿತ್ರಗಳನ್ನು ಮಾತ್ರ ಪ್ರಕಟಿಸುವುದರಿಂದ ವ್ಯಕ್ತಿ-ಆರಾಧನೆಗೆ ಹಾದಿ ಮಾಡಿಕೊಡುತ್ತದೆಯಾದ್ದರಿಂದ ಇದು ವಾಕ್ ಸ್ವಾತಂತ್ರ್ಯಕ್ಕೆ ಅಡಚಣೆಯುಂಟು ಮಾಡುತ್ತದೆ ಎಂದು ಹೇಳಿತ್ತು. ನ್ಯಾಯಮೂರ್ತಿ ಗೊಗೊಯ್ ಅವರ 2016ರ ತೀರ್ಪಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಣೆ ಇಲ್ಲ.

ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಿಗೆ ನೀಡಲಾದ ನ್ಯಾಯಾಂಗ ನಿಂದನಾ ನೋಟೀಸು ಮುಖ್ಯವಾದದು

ನಿವೃತ್ತರಾದ ಮೇಲೆ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರು ತಮ್ಮ ಬ್ಲಾಗ್‍ನಲ್ಲಿ ಮತ್ತು ಫೇಸ್‍ಬುಕ್ಕಿನಲ್ಲಿ ಕೆಲವು ತೀರ್ಪುಗಳ ಬಗ್ಗೆ ಮುಕ್ತವಾಗಿ ಮಾತಾಡಿದರು. ಕೇರಳದ ಸೌಮ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಮೂರ್ತಿ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟಿನ ನ್ಯಾಯಪೀಠ ನೀಡಿದ ತೀರ್ಪನ್ನು ಖಟ್ಜು ಕಟುವಾಗಿ ವಿಮರ್ಶಿಸಿದರು. ಹುಡುಗಿಯನ್ನು ಕೊಲ್ಲುವ ಉದ್ದೇಶ ಆರೋಪಿಗೆ ಇರಲಿಲ್ಲವಾದ್ದರಿಂದ ಹಾಗೂ ಆತನ ಕೃತ್ಯಗಳು ಅವಳನ್ನು ಸಾವಿಗೆ ಕಾರಣವಾಗಬಹುದು ಎಂಬ ಅರಿವೂ ಆತನಿಗೆ ಇರಲಿಲ್ಲವಾದ್ದರಿಂದ ಆರೋಪಿಯು ಅತ್ಯಾಚಾರವನ್ನಷ್ಟೇ ಮಾಡಿದ್ದಾನೆಯೇ ಹೊರತು ಕೊಲೆ ಮಾಡಿಲ್ಲ ಎಂದು ಈ ತೀರ್ಪಿನಲ್ಲಿ ಹೇಳಲಾಗಿತ್ತು.

ಈ ತೀರ್ಪಿನಲ್ಲಿ "ಮೂಲಭೂತ ಲೋಪದೋಷಗಳಿವೆ" ಮತ್ತು "ದುರ್ಭರ ತಪ್ಪುಗಳಿವೆ" ಎನ್ನುತ್ತಾ ನ್ಯಾಯಮೂರ್ತಿ ಖಟ್ಜು ಅವರು ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡದೇ ನ್ಯಾಯಮೂರ್ತಿ ಗೊಗೊಯ್ ಬರೆದ ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದರು. ಅವರು ಬರೆದ ಒಂದು ಬ್ಲಾಗ್ ಬರೆಹಕ್ಕೆ "ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಬೌದ್ದಿಕ ಮಟ್ಟ" ಎಂಬ ಶೀರ್ಷಿಕೆ ಕೊಟ್ಟಿದ್ದರು.

ನ್ಯಾಯಮೂರ್ತಿ ಖಟ್ಜು ಅವರನ್ನು ಕೋರ್ಟಿಗೆ ಕರೆಸಿದಾಗ ಖಟ್ಜು ಅವರು ಆವೇಶಭರಿತ ವಿಚಾರಣೆಯಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಂಡರು. ಇದಾದ ಮೇಲೆ ನ್ಯಾಯಮೂರ್ತಿ ಗೊಗೊಯ್ ಅವರು ಮಾಜಿ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಖಟ್ಜು ಅವರಿಗೆ ನ್ಯಾಯಾಂಗ ನಿಂದನೆಯ ನೋಟೀಸು ಜಾರಿಗೊಳಿಸಿದರು. ಇದು ಭಾರತದ ಚರಿತ್ರೆಯಲ್ಲಿ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರೊಬ್ಬರು ನ್ಯಾಯಾಂಗ ನಿಂದನೆಯ ಆರೋಪ ಎದುರಿಸಿದ ಮೊದಲ ಪ್ರಕರಣ ಇದಾಗಿತ್ತು. ಆದರೆ, ಖಟ್ಜು ಅವರು ಲಿಖಿತ ಕ್ಷಮಾಪಣೆ ಕೋರಿದ ನಂತರ ಹಾಗೂ ಆ ಬರೆಹಗಳನ್ನು ಅಳಿಸಿಹಾಕಿದ ಮೇಲೆ ನ್ಯಾಯಮೂರ್ತಿ ಗೊಗೊಯ್ ಅವರು ಪ್ರಕರಣವನ್ನು ಕೈಬಿಡಲು ಒಪ್ಪಿಕೊಂಡರು.

ಲೋಕಪಾಲ ಕಾಯ್ದೆ ಕಾರ್ಯಸಾಧುವಾಗಿದೆ; ವಿಳಂಬ ಮಾಡುವ ಅಗತ್ಯವಿಲ್ಲ

2013ರಲ್ಲಿ ಅಂಗೀಕಾರವಾದ ಲೋಕಪಾಲ ಕಾಯ್ದೆಯ ಅಡಿಯಲ್ಲಿ ಲೋಕಪಾಲ ಮತ್ತು ಲೋಕಾಯುಕ್ತರನ್ನು ನೇಮಕ ಮಾಡಬೇಕು ಎಂದು 'ಕಾಮನ್ ಕಾಸ್ ಮತ್ತು ಜಸ್ಟ್ ಸೊಸೈಟಿ' ಎಂಬ ಸಕಾರೇತರ ಸಂಸ್ಥೆಯೊಂದು 2014ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿತು. ಈ ಅರ್ಜಿಯು ನ್ಯಾಯಮೂರ್ತಿ ಗೊಗೊಯ್ ನೇತೃತ್ವದ ನ್ಯಾಯಪೀಠದ ಎದುರು ವಿಚಾರಣೆಗೆ ಬಂದಿತು.

ಲೋಕಪಾಲ ಕಾಯ್ದೆಯಲ್ಲಿನ ಕೆಲವು ಕ್ಷುಲ್ಲಕ ಲೋಪಗಳನ್ನೇ ಮುಂದು ಮಾಡಿದ ಕೇಂದ್ರ ಸರ್ಕಾರವು ಈ ಕಾಯ್ದೆಯ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಈ ಹುದ್ದೆಗಳನ್ನು ತುಂಬುವುದಕ್ಕೆ ಸಾಧ್ಯವಿಲ್ಲ ಎಂದು ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸಿತು. ಅದು ನೀಡಿದ ಅಂತಹ ಒಂದು ತಾಂತ್ರಿಕ ಸಮಸ್ಯೆ ಎಂದರೆ, ಲೋಕಪಾಲರನ್ನು ನೇಮಿಸುವುದಕ್ಕಾಗಿ ರೂಪಿಸಲಾಗುವ 'ಆಯ್ಕೆ ಸಮಿತಿ'ಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಸದಸ್ಯರಾಗಿ ಇರಬೇಕು; ಆದರೆ, ಲೋಕಸಭೆಯಲ್ಲಿ ಯಾವುದೇ ವಿರೋಧ ಪಕ್ಷವೂ ಅಗತ್ಯವಿರುವ ಕನಿಷ್ಠ ಶೇಕಡ 10ರಷ್ಟು ಸ್ಥಾನಗಳನ್ನು ಗಳಿಸಿಲ್ಲವಾದ್ದರಿಂದ ಅಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರೇ ಇಲ್ಲ.

2017ರ ಮಾರ್ಚ್‍ನಲ್ಲಿ ನೀಡಿದ ಕಠಿಣ ಆದೇಶದಲ್ಲಿ ನ್ಯಾಯಮೂರ್ತಿ ಗೊಗೊಯ್ ಅವರು ಸರ್ಕಾರದ ಈ ವಾದವನ್ನು ಬಲವಾಗಿ ವಿರೋಧಿಸಿದರು. ನ್ಯಾಯಮೂರ್ತಿ ಗೊಗೊಯ್ ಎತ್ತಿದ ತಕರಾರಿನಲ್ಲಿ ಹುರುಳಿಲ್ಲ ಎಂದು ಹೇಳಲಾಗುವುದಿಲ್ಲ; ಏಕೆಂದರೆ 'ಆಯ್ಕೆ ಸಮಿತಿ'ಯಲ್ಲಿ ಹುದ್ದೆಗಳು ಖಾಲಿ ಇವೆ ಎಂಬ ಕಾರಣಕ್ಕಾಗಿ ಲೋಕಪಾಲ ಅಥವಾ ಇತರ ಪದಾದಿಕಾರಿಗಳ ನೇಮಕ ಅಸಿಂಧುವಾಗುವುದಿಲ್ಲ ಎಂದು ಈ ಕಾಯ್ದೆಯ ಸೆಕ್ಷನ್ 4 ಸ್ಪಷ್ಟವಾಗಿ ಹೇಳುತ್ತದೆ. ಈ ಕಾಯ್ದೆಯಲ್ಲಿ ಏನೇನು ಲೋಪಗಳಿವೆ ಎಂದು ಸರ್ಕಾರ ವಾದಿಸಿದೆಯೋ ಅವುಗಳನ್ನು ಸರಿಪಡಿಸುವುದಕ್ಕೆ ಕಾಯ್ದೆಗೆ ತಿದ್ದುಪಡಿ ತರುವ ವಿಚಾರದಲ್ಲೂ ಸರ್ಕಾರ ವಿಫಲವಾಗಿರುವುದರ ಬಗ್ಗೆಯೂ ನ್ಯಾಯಪೀಠವು ಅಸಮಧಾನ ವ್ಯಕ್ತಪಡಿಸಿತು.

ಲೋಕಪಾಲರನ್ನು ನೇಮಕ ಮಾಡುವ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಗೊಗೊಯ್ 2018ರ ಜುಲೈ ತಿಂಗಳಿನಲ್ಲಿ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ ಎಂದು ಹೇಳಿದರು. ಈ ವಿಷಯದಲ್ಲಿ ಈಗಲೂ ತಮ್ಮ ಅಭಿಪ್ರಾಯವನ್ನು ಸಡಿಲಿಸದ ಅವರು ಸರ್ಕಾರದಿಂದ ಏನು ಉತ್ತರ ಬರುತ್ತದೆ ಎಂದು ಕಾಯುತ್ತಿದ್ದಾರೆ.

ಎನ್‍ಆರ್‌ಸಿ ಸಂಗ್ರಹ

ಪ್ರಾಯಶಃ ನ್ಯಾಯಮೂರ್ತಿ ಗೊಗೊಯ್ ಅವರಿಗೆ ಸಂಬಂಧಪಟ್ಟ ಅತ್ಯಂತ ವಿವಾದಾತ್ಮಕ ಪ್ರಕರಣ ಎಂದರೆ ಎನ್‍ಆರ್‍ಸಿಗೆ [ರಾಷ್ಟ್ರೀಯ ಪೌರರ ನೋಂದಣಿ ] ಸಂಬಂಧಿಸಿದ್ದು. 'ಅಸ್ಸಾಂ ಒಪ್ಪಂದ'ದ ಅಡಿಯಲ್ಲಿ ಬರುವ ಜನರಿಗೆ ಅನ್ವಯವಾಗುವಂತಹ ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಅಡಿಯಲ್ಲಿನ 'ವಿಶೇಷ ಪೌರತ್ವ ಮಾನದಂಡ'ದ ವಿಷಯವನ್ನು ನ್ಯಾಯಮೂರ್ತಿ ಗೊಗೊಯ್ ಮತ್ತು ನ್ಯಾಯಮೂರ್ತಿ ರೋಹಿನ್ಟನ್ ನಾರಿಮನ್ ಅವರಿದ್ದ ಪೀಠವು ವಿಶಾಲ ಪೀಠಕ್ಕೆ ವರ್ಗಾಯಿಸಿತು. ಆದರೆ, ಆಸ್ಸಾಮಿನಲ್ಲಿ 'ರಾಷ್ಟ್ರೀಯ ಪೌರರ ನೊಂದಣ 'ಯನ್ನು ತಯಾರಿಸಬೇಕು ಎಂದು ಅವರೆಂದೂ ನಿರ್ದೇಶನ ನೀಡಲಿಲ್ಲ.

ಸುಮಾರು 40 ಲಕ್ಷ ನಿವಾಸಿಗಳನ್ನು ಹೊರಗಿಟ್ಟ ಎರಡನೇ ಎನ್‍ಆರ್‍ಸಿ ಕರಡು ಪಟ್ಟಿ ಅಂತಿಮವಾಗಿ ಬಿಡುಗಡೆಯಾಗುವುದರೊಂದಿಗೆ ಈಗ ನ್ಯಾಯಮೂರ್ತಿ ಗೊಗೊಯ್ ಮತ್ತು ನ್ಯಾಯಮೂರ್ತಿ ನಾರಿಮನ್ ಅವರು ಈ ಕರಡು ಪಟ್ಟಿಗೆ ಸಂಬಂಧಿಸಿದಂತೆ ಮಂಡನೆಯಾದ ಹಕ್ಕುಗಳನ್ನು ಮತ್ತು ತಕರಾರುಗಳನ್ನು ಬಗೆಹರಿಸಲು ಕೇಂದ್ರ ಮತ್ತು ಆಸ್ಸಾಂ ಸರ್ಕಾರಗಳು ರೂಪಿಸಿದ 'ಮಾದರಿ ಕಾರ್ಯಾಚರಣಾ ಪ್ರಕ್ರಿಯೆ'ಯನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನಾಯಮೂರ್ತಿಯಾಗಿ ರಂಜನ್ ಗೊಗೊಯ್ ನೇಮಕ

ಈ ತೀರ್ಪಿಗೆ ವ್ಯಕ್ತವಾದ ವಿರೊಧದಲ್ಲಿ ಬಹುಪಾಲು ಬೊಟ್ಟು ಮಾಡಿ ತೋರುವುದು ಇದರಲ್ಲಿ ನ್ಯಾಯಮೂರ್ತಿಗಳು ಬಳಸಿದ ಭಾಷೆಯ ಕಡೆಗೆಯೇ ಆದರೂ ಇಂತಹ ವಿಷಯದ ವಿಚಾರಣೆ ಮಾಡುವ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಗೊಗೊಯ್ ಇರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಗಳೂ ಎದ್ದಿವೆ. ಏಕೆಂದರೆ, ಖುದ್ದು ಗೊಗೊಯ್ ಅವರೇ ಎನ್‍ಆರ್‍ಸಿ ಒಳಗೆ ಸೇರುವುದಕ್ಕೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಾಗಿ, ಈ ವಿಷಯದ ವಿಚಾರಣೆಯಲ್ಲಿ ಅವರು ಹಿತಾಸಕ್ತಿಗಳ ಸಂಘರ್ಷದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಕಾಣುತ್ತದೆ. ಕೆಲವು ವಿಮರ್ಶಕರ ಪ್ರಕಾರ, ಗೊಗೊಯ್ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿತ್ತು.

ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳನ್ನು ತಮ್ಮ ಹತ್ತಿರವೇ ಇಟ್ಟುಕೊಳ್ಳುವಂತಿಲ್ಲ

ಮಾಜಿ ಮುಖ್ಯಮಂತ್ರಿಗಳು ತಮಗೆ ಅಧಿಕಾರದಲ್ಲಿದ್ದಾಗ ನೀಡಲಾಗಿದ್ದ ಸರ್ಕಾರಿ ಬಂಗಲೆಗಳನ್ನು ತಮ್ಮ ವಶದಲ್ಲೇ ಇಟ್ಟುಕೊಳ್ಳುವುದಕ್ಕೆ ಅವಕಾಶ ನೀಡುವ ಹಾಗೆ 2016ರಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನಿಗೆ ತಿದ್ದುಪಡಿ ತರಲಾಯಿತು. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಇದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್ ಗೊಗೊಯ್ ಈ ಕಾನೂನು ಇಂತಹ ಮಾಜಿ ಸಾರ್ವಜನಿಕ ಸೇವಕರ ಪ್ರತ್ಯೇಕ ವರ್ಗವೊಂದನ್ನೇ ಸೃಷ್ಟಿಸುತ್ತದೆ ಹಾಗೂ ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಅಭಿಪ್ರಾಯಪಡುತ್ತಾ ಈ ತಿದ್ದುಪಡಿಗಳನ್ನು ರದ್ದುಗೊಳಿಸಿ ತೀರ್ಪು ನೀಡಿದರು.

ನ್ಯಾಯಮೂರ್ತಿ ಕರ್ಣನ್ ವಿರುದ್ಧದ ನ್ಯಾಯಾಂಗ ನಿಂಧನಾ ಪ್ರಕರಣ

ಕಲ್ಕತ್ತಾ ಹೈಕೋರ್ಟಿನ ನ್ಯಾಯಮೂರ್ತಿ ಕರ್ಣನ್ ಅವರು ನ್ಯಾಯಾಂಗ ನಿಂದನೆಯ ಅಪರಾಧ ಮಾಡಿದ್ದಾಗಿ ತೀರ್ಪಿತ್ತ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಗೊಗೊಯ್ ಅವರೂ ಇದ್ದರು. ನ್ಯಾಯಾಂಗದ ಅತ್ಯುನ್ನತ ಪದರುಗಳಲ್ಲಿ ಭ್ರಷ್ಟಾಚಾರವಿದೆ ಎಂದು ನ್ಯಾಯಮೂರ್ತಿ ಕರ್ಣನ್ ಆರೋಪ ಮಾಡಿದ್ದರಲ್ಲದೇ ತಮ್ಮ ವಿರುದ್ಧ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದೂ ಆಪಾದನೆ ಮಾಡಿದ್ದರು. ಎಷ್ಟರ ಮಟ್ಟಿಗೆ ಎಂದರೆ ತಮ್ಮ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರೇ ತಮ್ಮ ವಿರುದ್ಧ ಜಾತಿನಿಂದನೆಯ ಅಪರಾದ ಎಸಗಿದ್ದಾರೆಂದು ತೀರ್ಪಿತ್ತಿದ್ದರು.

ಈ ವಿಷಯದಲ್ಲಿ ನ್ಯಾಯಮೂರ್ತಿ ಗೊಗೊಯ್ ಮತ್ತು ನ್ಯಾಯಮೂರ್ತಿ ಚಲಮೇಶ್ವರ್ ಅವರು ಬಹುಸಂಖ್ಯಾತ ತೀರ್ಪಿಗೆ ಪೂರಕವಾದ ಪ್ರತ್ಯೇಕ ತೀರ್ಪನ್ನು ನೀಡಿ ಅದರಲ್ಲಿ ಸುಪ್ರೀಂ ಕೋರ್ಟು ಅಥವಾ ಹೈಕೋರ್ಟಿನ ನ್ಯಾಯಾಧೀಶರ ವಿರುದ್ಧ ತೆಗೆದುಕೊಳ್ಳಬಹುದಾದ ಶಿಸ್ತುಕ್ರಮಗಳನ್ನು ಅಗತ್ಯವನ್ನು ಒತ್ತಿ ಹೇಳಿದ್ದರು. ಸಧ್ಯಕ್ಕಿರುವ ಏಕೈಕ ಆಯ್ಕೆ ಎಂದರೆ ವಾಗ್ದಂಡನೆಯಾಗಿದ್ದು ಅದೊಂದು ತೀರಾ ತ್ರಾಸದಾಯಕ ರಾಜಕೀಯ ಪ್ರಕ್ರಿಯೆಯಾಗಿದೆ. 2018ರ ಜನವರಿಯಲ್ಲಿ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲೂ ಹಾಗೂ ಅದಕ್ಕೂ ಮುಂಚೆ ಅವರು ಸಿಜೆಐ ಅವರಿಗೆ ಬರೆದ ಪತ್ರದಲ್ಲೂ (ಅದನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು) ಈ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು.

ಸುಪ್ರೀಂ ಕೋರ್ಟಿನಲ್ಲಿ ಮಕ್ಕಳ ಆರೈಕೆ ಮತ್ತು ಹಿರಿಯ ನ್ಯಾಯವಾದಿಗಳ ಸುಧಾರಣೆ

ನ್ಯಾಯವಾದಿ ಸಮುದಾಯದ ಸುಧಾರಣೆಗಾಗಿನ ಅವರ ತುಡಿತವನ್ನು ಮೆಚ್ಚಿಕೊಳ್ಳುವಂತಹ ಎರಡು ಮಹತ್ವಪೂರ್ಣ ಕೆಲಸಗಳನ್ನೂ ನ್ಯಾಯಮೂರ್ತಿ ಗೊಗೊಯ್ ನೀಡಿದ್ದಾರೆ. ಅರ್ಹತೆಗಿಂತ ಅಂತಸ್ತಿಗೇ ಹೆಚ್ಚಿನ ಮಹತ್ವ ಕೊಡುತ್ತಿದ್ದ 'ಹಿರಿಯ ವಕೀಲರು' ಎಂಬ ಕರೆಯಲಾಗುವ ಅಪಾರದರ್ಶಕ ನಾಮಧೇಯದ ಬದಲಿಗೆ ನ್ಯಾಯಮೂರ್ತಿ ಗೊಗೊಯ್ ಅವರು 2017ರ ಅಕ್ಟೋಬರ್ ತಿಂಗಳಿನಲ್ಲಿ, ಯಾವ ವಕೀಲರನ್ನು ಹಿರಿಯ ವಕೀಲರನ್ನಾಗಿ ನಿಯೋಜಿಸಬಹುದು ಎಂಬುದನ್ನು ತೀರ್ಮಾನಿಸುವುದಕ್ಕಾಗಿ ಕೆಲವು ಅಂಕ-ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಿದರು.

ಸುಪ್ರೀಂ ಕೋರ್ಟಿನಲ್ಲಿ ಮಕ್ಕಳ ಆರೈಕೆಯ ಸೌಲಭ್ಯಗಳನ್ನು ಸುಧಾರಿಸುವುದಕ್ಕೂ ನ್ಯಾಯಮೂರ್ತಿ ಗೊಗೊಯ್ ಅವರು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಈ ಸೌಲಭ್ಯಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಹಾಗೂ ಈ ವಿಷಯದಲ್ಲಿ ರೂಪಿಸಲಾಗಿರುವ ನಿಯಮಗಳು ತಾರತಮ್ಯ ಮತ್ತು ಸಮಸ್ಯೆಗಳಿಂದ ಕೂಡಿವೆ ಎಂಬ ಆರೋಪಗಳಿದ್ದುದರಿಂದ ಅವುಗಳನ್ನು ನಿವಾರಿಸಲು ಗಮನ ಕೊಟ್ಟಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More