20 ದಿನಗಳಲ್ಲಿ 10 ಮಹತ್ವದ ಪ್ರಕರಣಗಳ ತೀರ್ಪು ನೀಡಲಿರುವ ಸಿಜೆಐ ದೀಪಕ್‌ ಮಿಶ್ರಾ

ನ್ಯಾ. ದೀಪಕ್‌ ಮಿಶ್ರಾ ನೇತೃತ್ವದಲ್ಲಿ ದೇಶದ ಅತ್ಯಂತ ಮಹತ್ವದ ಪ್ರಕರಣಗಳ ವಿಚಾರಣೆ ನಡೆದಿದ್ದು, ಮುಂದಿನ 20 ದಿನಗಳಲ್ಲಿ 10 ಪ್ರಕರಣಗಳ ತೀರ್ಪು ಹೊರಬೀಳುತ್ತಿರುವುದು ದೇಶದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ದಾಖಲೆ ಬರೆಯಲಿದೆ ಎಂದು ತಿಳಿದುಬಂದಿದೆ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಅ.02 ರಂದು ನಿವೃತ್ತಿ ಹೊಂದಲಿದ್ದು, ಮುಂದಿನ 20 ದಿನಗಳ ಅವಧಿಯೊಳಗೆ 10 ಕ್ಕೂ ಹೆಚ್ಚು ಪ್ರಮುಖ ಪ್ರಕರಣಗಳ ಅಂತಿಮ ತೀರ್ಪು ನೀಡಲಿದ್ದಾರೆ. ಸಲಿಂಗ ಹಕ್ಕು, ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಅಯೋಧ್ಯೆ ವಿವಾದ, ಆಧಾರ್‌ ಕಾನೂನು ಸೇರಿದಂತೆ ಇನ್ನೂ ಹಲವು ಮಹತ್ವದ ಪ್ರಕರಣಗಳ ಬಗ್ಗೆ ಅವರು ತೀರ್ಪು ನೀಡಬೇಕಿದೆ. ದೇಶದ ಸಾಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ತೀರ್ಪುಗಳು ಮುಂದಿನ 20 ದಿನಗಳಲ್ಲಿ ಹೊರಬೀಳಲಿರುವ ವಿಚಾರವೀಗ ತೀವ್ರ ಕೂತುಹಲಕ್ಕೆ ಕಾರಣವಾಗಿದೆ. ನ್ಯಾ. ದೀಪಕ್‌ ಮಿಶ್ರಾ ನೇತೃತ್ವದಲ್ಲಿ ದೇಶದ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಪ್ರಕರಣಗಳ ವಿಚಾರಣೆ ನಡೆದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತೀರ್ಪು ಹೊರಬೀಳಲಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ದಾಖಲೆ ಬರೆಯಲಿದೆ.

ಆಧಾರ್ ಪ್ರಕರಣ ಎಲ್ಲಕ್ಕಿಂತ ಮುಖ್ಯವಾದುದು. 12-ಅಂಕಿಯ ವಿಶಿಷ್ಟ ಗುರುತಿನ ಆಧಾರ್‌ ಸಂಖ್ಯೆಯನ್ನು ಎಲ್ಲ ರೀತಿಯ ಸೇವೆಗಳಿಗೆ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ಆಧಾರ್‌ ಅನ್ನು ಕಡ್ಡಾಯಗೊಳಿಸುವುದು ನಾಗರಿಕರ ಖಾಸಗಿತನದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಎಂಬುದು ಅರ್ಜಿದಾರರ ವಾದವಾಗಿತ್ತು. ಈ ಪ್ರಕರಣದ ವಿಚಾರಣೆ ಆರಂಭಿಸಿದ ಪೀಠವು ಖಾಸಗಿತನದ ಹಕ್ಕಿನ ಬಗ್ಗೆ ಮಾತನಾಡುತ್ತಲೇ ಬಂದಿತ್ತು. ಆಧಾರ್‌ ಸಿಂಧುತ್ವದ ಅಂತಿಮ ತೀರ್ಪನ್ನು ಕಾಯ್ದಿರಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಇದೇ ತಿಂಗಳಲ್ಲಿ ಅಂತಿಮ ತೀರ್ಪು ನೀಡಲಿದ್ದಾರೆ.

ಸಲಿಂಗ ಕಾಮವನ್ನು ಅಪರಾಧವೆಂದು ಪರಿಗಣಿಸುವ ಸೆಕ್ಷನ್ 377 ಅನ್ನು ರದ್ದುಗೊಳಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ದೀಪಕ್‌ ಮಿಶ್ರಾ ನೇತೃತ್ವದ ಪೀಠದ ಅಂತಿಮ ತೀರ್ಪಿಗಾಗಿ ಎಲ್‌ಜಿಬಿಟಿ ಸಮುದಾಯವು ಕುತೂಹಲದಿಂದ ಕಾಯುತ್ತಿದೆ. ಈ ಪ್ರಕರಣದ ವಿಚಾರಣೆ ಸಮಯದಲ್ಲಿ ಪೀಠವು ಸಲಿಂಗ ಕಾಮದ ವಿಚಾರವಾಗಿ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವ ಪರಿಣಾಮ ತೀರ್ಪಿನ ಬಗ್ಗೆ ಸಲಿಂಗ ಸಮುದಾಯದಲ್ಲಿ ಭರವಸೆ ಮೂಡಿದೆ.

ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತ ನಿರೀಕ್ಷಿತ ತೀರ್ಪು ಕುತೂಹಲ ಕೆರಳಿಸಿದೆ. “ಪುರುಷರಿಗಾಗಿ ಪ್ರತ್ಯೇಕ ಖಾಸಗಿ ದೇವಸ್ಥಾನ ಪರಿಕಲ್ಪನೆಯೇ ನಮ್ಮಲ್ಲಿಲ್ಲ. ಪುರುಷರಂತೆ ಮಹಿಳೆಯರು ಸಹ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಅರ್ಹರು,” ಎಂದು ದೀಪಕ್‌ ಮೀಶ್ರಾ ನೇತೃತ್ವದ ಪೀಠವು ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶದ ಮೇಲೆ ಸಾಂಪ್ರದಾಯಿಕ ನಿಷೇಧ ಹೇರಲಾಗಿತ್ತು. ಆ ಪ್ರಕರಣದ ವಿಚಾರಣೆ ಕಳೆದ ವರ್ಷ ಅಕ್ಟೊಬರ್‌ನಲ್ಲಿ ಕೈಗೆತ್ತಿಕೊಂಡ ಪೀಠವು, ಮಹಿಳೆಯರ ಮೂಲಭೂತ ಹಕ್ಕಿನ ಪರವಾಗಿ ನಿಂತಿತ್ತು. ಆ ಮೂಲಕ ಶಬರಿಮಲೆ ಪ್ರಕರಣದ ತೀರ್ಪು ಮಹಿಳೆಯರ ಹಕ್ಕನ್ನು ಕಾಪಾಡುವ ನಿಟ್ಟಿನಲ್ಲಿ ಹೊರಬೀಳಲಿದೆ ಎಂಬ ಅಭಿಪ್ರಾಯ ಕೇಳಿಬಂದಿವೆ.

ಇದನ್ನೂ ಓದಿ : ಸಂಕಲನ | ಆಧಾರ್‌ ವ್ಯವಸ್ಥೆ ಕುರಿತ ವಿಶೇಷ ವರದಿ ಹಾಗೂ ವಿಶ್ಲೇಷಣೆಗಳು

ಮದುವೆಯಾಚೆಯ ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸುವ ಸೆಕ್ಷನ್ 497, ಭಾರತೀಯ ದಂಡ ಸಂಹಿತೆಯ ಮೇಲಿನ ತೀರ್ಪು ಇದೇ ತಿಂಗಳಲ್ಲಿ ಹೊರಬೀಳಬೇಕಿದೆ. ಅಕ್ರಮ ಸಂಬಂಧಗಳಲ್ಲಿ ಪುರುಷನೊಬ್ಬನೇ ಆರೋಪಿ, ಮಹಿಳೆ ಸಂತ್ರಸ್ತೆ ಎಂದು ಸೆಕ್ಷನ್‌ 497 ಹೇಳುತ್ತದೆ. ಆ ಬಗ್ಗೆ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ತೀರ್ಪು ನೀಡಬೇಕಿದೆ.

ರಾಜಕೀಯವಾಗಿ ಸೂಕ್ಷ್ಮವಾದ ಅಯೋಧ್ಯೆ ಪ್ರಕರಣದ ತೀರ್ಪು ದೀಪಕ್‌ ಮಿಶ್ರಾ ಅವರ ನೇತೃತ್ವದ ಪೀಠದ ಮುಂದಿದೆ. 1994 ರಲ್ಲಿ ಮಸೀದಿ ಬಗ್ಗೆ ಸುಪ್ರಿಂ ಕೋರ್ಟ್‌ ನೀಡಿದ್ದ ತೀರ್ಪನ್ನು ಮುಸ್ಲಿಂ ಸಂಘಟನೆಗಳು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ಮಸೀದಿಯು ಮುಸ್ಲಿಮರ ಪ್ರಾರ್ಥನೆಯ ಅವಿಭಾಜ್ಯ ಅಂಗವಲ್ಲವೆಂದು ತೀರ್ಪು ನೀಡಲಾಗಿತ್ತು. ಆ ಪ್ರಕರಣದ ಮರುವಿಚಾರಣೆ ಕೈಗೆತ್ತಿಕೊಂಡಿದ್ದ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ತೀರ್ಪನ್ನು ನೀಡಲಿದೆ. ಇದು ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More