ದೈವ ಸಾಮ್ರಾಜ್ಯದ ಕನಸು ಕಾಣುತ್ತಿರುವ ಉಗ್ರ ಹಿಂದು ಸಂಘಟನೆ ಸನಾತನ ಸಂಸ್ಥೆ

ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ಪಾರಾಗಿದ್ದ ಸನಾತನ ಸಂಸ್ಥಾ, ಗೌರಿ ಲಂಕೇಶ್ ಸೇರಿದಂತೆ ವಿಚಾರವಾದಿಗಳ ಹತ್ಯೆ ಪ್ರಕರಣ ಮತ್ತು ಭಯೋತ್ಪಾದನಾ ನಿಗ್ರಹ ದಳದ ಆರೋಪಗಳಲ್ಲಿ ಮತ್ತೆ ಸಿಲುಕಿದೆ. ತನಿಖೆ ಎದುರಿಸುತ್ತಿರುವ ಸಂಸ್ಥಾ ಕುರಿತು ‘ದ ವೀಕ್’ ಪ್ರಕಟಿಸಿರುವ ವಿಶೇಷ ವರದಿಯ ಭಾವನುವಾದ

ಸನಾತನ ಸಂಸ್ಥಾದ ಘೋಷಿತ ಗುರಿ “ಪವಿತ್ರ ದೈವ ಸಾಮ್ರಾಜ್ಯವನ್ನು ಮರುಸ್ಥಾಪಿಸುವುದು”. ಹಿಪ್ನೋಥೆರಫಿಸ್ಟ್ ಜಯಂತ್ ಅಥಾವಳೆ ೧೯೯೧ರಲ್ಲಿ ಸ್ಥಾಪಿಸಿದ ಉಗ್ರ ಹಿಂದೂ ಸಂಘಟನೆ, ಹಿಂದೂ ಧರ್ಮ ರಾಜ್ಯ ಸ್ಥಾಪನೆಯ ತನ್ನ ಆ ಗುರಿಯನ್ನು ನಿಜವಾಗಿಸಲು ಎಲ್ಲಾ ಯೋಜನೆಗಳನ್ನು ಅದು ಹೊಂದಿದೆ ಎನಿಸುತ್ತದೆ. ಗೋವಾದ ಪೋಂಡಾದಲ್ಲಿ ತನ್ನ ಮುಖ್ಯ ಕಚೇರಿ ಹೊಂದಿರುವ ಸಂಸ್ಥಾ, ದೇಶದ ಮೂಲೆಮೂಲೆಗೆ ತನ್ನ ಸಂಘಟನೆಯನ್ನು ವಿಸ್ತರಿಸುತ್ತಿದ್ದು, ಸುಮಾರು ೩೦೦ ಅಂಗಸಂಸ್ಥೆಗಳು ಈಗ ಅದರಡಿ ಕಾರ್ಯನಿರ್ವಹಿಸುತ್ತಿವೆ. ೨೦೦೨ರಲ್ಲಿ ಸ್ಥಾಪಿಸಲಾದ ಹಿಂದೂ ಜನಜಾಗೃತಿ ಸಮಿತಿ(ಎಚ್‌ಜೆಎಸ್) ಸದ್ಯ ಅದರ ಬಹಿರಂಗ ಮುಖವಾಗಿದ್ದು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಮಾತೃಸಂಸ್ಥೆಗಿಂತ ಹೆಚ್ಚು ಜನಪ್ರಿಯವಾಗಿದೆ.

ಇಂತಹ ಸಂಸ್ಥಾ ಮೊದಲ ಬಾರಿಗೆ ದೇಶದ ಗಮನಸೆಳೆದದ್ದು ಮಾತ್ರ ಕೆಟ್ಟ ಕಾರಣಗಳಿಗಾಗಿ. ಮುಂಬೈ ಹೊರವಲಯದ ಪಾನ್‌ವೆಲ್, ಥಾಣೆ ಮತ್ತು ವಾಷಿಯಲ್ಲಿ ೨೦೦೮ರಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಅದರ ಹೆಸರು ಕೇಳಿಬಂದಿತ್ತು. ಹಿಂದೂ ದೇವತೆಗಳನ್ನು ಅವಮಾನಕರವಾಗಿ ಚಿತ್ರಿಸಲಾಗಿದೆ ಎಂದು, ‘ಆಮ್ಹಿ ಪಾಚ್ಪುಟೆ’ ಎಂಬ ನಾಟಕ ಪ್ರದರ್ಶನ ವಿರೋಧಿಸಿ ಕಟ್ಟಾ ಹಿಂದೂ ಕಾರ್ಯಕರ್ತರು ಅಲ್ಲಿನ ಸಾಂಸ್ಕೃತಿಕ ವೇದಿಕೆಗಳ ಬಳಿ ಕಚ್ಛಾ ಬಾಂಬ್ ಇಟ್ಟಿದ್ದರು ಎನ್ನಲಾಗಿತ್ತು. ಘಟನೆಯ ತನಿಖೆ ನಡೆಸಿದ ಪೊಲೀಸರು, ಬಾಂಬ್ ಸ್ಫೋಟಿಸಿದ್ದ ಎಲ್ಲಾ ಆರು ಮಂದಿಯೂ ಸಂಸ್ಥಾದ ಸದಸ್ಯರು ಎಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಆ ಪೈಕಿ ಇಬ್ಬರಿಗೆ ಶಿಕ್ಷೆಯೂ ಆಗಿತ್ತು.

ಅದಾಗಿ ಒಂದು ವರ್ಷದ ಬಳಿಕ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆ ಸಂಸ್ಥೆಯ ಹೆಸರು ಮತ್ತೊಮ್ಮೆ ಕೇಳಿಬಂತು. ೨೦೧೬ರ ಸೆಪ್ಟೆಂಬರ್‌ನಲ್ಲಿ ವಿಶೇಷ ತನಿಖಾ ತಂಡ, ಪಾಲ್ವೆಲ್‌ನ ಸಂಸ್ಥಾದ ಆಶ್ರಮದಲ್ಲಿ ಮಾದಕ ದ್ರವ್ಯ ವಶಪಡಿಸಿಕೊಂಡಿರುವುದಾಗಿ ಹೇಳಿತು.

ಆ ಬಳಿಕ ಇಡೀ ದೇಶವೇ ಸಂಸ್ಥಾದ ಕಡೆ ಆತಂಕದಿಂದ ನೋಡುವಂತೆ ಮಾಡಿದ್ದು ವಿಚಾರವಾದಿಗಳ ಸರಣಿ ಹತ್ಯೆ ಪ್ರಕರಣಗಳು. ವಿಚಾರವಾದಿ ನರೇಂದ್ರ ದಾಭೋಲ್ಕರ್(೨೦೧೩ರಲ್ಲಿ ಹತ್ಯೆ), ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ(೨೦೧೫), ವಿಚಾರವಾದಿ, ಸಾಹಿತಿ ಎಂ ಎಂ ಕಲ್ಬುರ್ಗಿ(೨೦೧೫) ಮತ್ತು ಪತ್ರಕರ್ತ ಗೌರಿ ಲಂಕೇಶ್(೨೦೧೭) ಅವರುಗಳ ಬರ್ಬರ ಹತ್ಯೆಯಲ್ಲಿ ಸಂಸ್ಥಾದ ಹೆಸರು ತಳಕುಹಾಕಿಕೊಂಡಿದೆ. ಗೌರಿ ಹತ್ಯೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಆಕೆಯ ಹತ್ಯೆಯ ಹಿಂದೆ ದೊಡ್ಡ ಜಾಲ ಕೆಲಸ ಮಾಡಿದ್ದು, ಯುವಕರ ತಲೆಯಲ್ಲಿ ಧರ್ಮ ರಕ್ಷಣೆಯ ಬೋಧನೆ ತುಂಬಿ, ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಿ ವ್ಯವಸ್ಥಿತವಾಗಿ ಈ ಕೃತ್ಯಕ್ಕೆ ಇಳಿಸಲಾಗಿತ್ತು ಎಂದು ತನಿಖಾ ತಂಡ ಹೇಳಿದೆ. ಅಲ್ಲದೆ, ಆರೋಪಿಗಳು ೨೫ ಮಂದಿ “ಹಿಂದು ವಿರೋಧಿ ಬುದ್ಧಿಜೀವಿ”ಗಳನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್) ಇತ್ತೀಚೆಗೆ ವೈಭವ್ ರಾವತ್ ಎಂಬ ಸಂಸ್ಥಾ ಸೇವಕನ ಮನೆಯಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ಆ ಸಂಬಂಧ ಐವರನ್ನು ಬಂಧಿಸಿದೆ. ರಾಜ್ಯದ ಹಲವೆಡೆ ದಾಳಿ ಉದ್ದೇಶದಿಂದಲೇ ಅ ಸ್ಫೋಟಕಗಳನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ.

ಆದರೆ, ಸಂಸ್ಥಾ ಪ್ರಕಾರ, ಈ ಆರೋಪಗಳು ಸಂಸ್ಥೆಯ ಹೆಸರಿಗೆ ‘ಮಸಿ ಬಳಿಯುವ’ ಮತ್ತು ‘ಕೇಸರಿ ಭಯೋತ್ಪಾದನೆ’ ಎಂಬ ಗ್ರಹಿಕೆಯನ್ನು ಬಿತ್ತುವ “ಹುನ್ನಾರ”. “ಎಟಿಎಸ್ ಬಂಧಿಸಿರುವ ವ್ಯಕ್ತಿಗಳು ನಮ್ಮ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿರಬಹುದು” ಎನ್ನುವ ಸಂಸ್ಥಾದ ವಕ್ತಾರ ಚೇತನ್ ರಾಜ್‌ಹನ್ಸ್, “ಅವರು ಹಿಂದುತ್ವದ ಕಟ್ಟಾ ಬೆಂಬಲಿಗರೂ ಇರಬಹುದು. ಆದರೆ ಅದರರ್ಥ ಅವರೆಲ್ಲಾ ನಮ್ಮ ಸದಸ್ಯರು ಎಂದೇನಲ್ಲ” ಎನ್ನುತ್ತಾರೆ.

ಇದನ್ನೂ ಓದಿ : ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೊಲೀಸರೇ ಅಡ್ಡಿ ಎಂದಿತ್ತು ‘ಸನಾತನ ಪ್ರಭಾತ್‍’!

ಆದರೆ, ಸಂಸ್ಥಾದ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದರೆ, ಅದು ಕೇವಲ ಧಾರ್ಮಿಕ ಸಂಸ್ಥೆಯಷ್ಟೇ ಅಲ್ಲ; ಅದಕ್ಕಿಂತ ಮಿಗಿಲಾದ ಚಟುವಟಿಕೆಗಳಿಲ್ಲಿ ತೊಡಗಿಸಿಕೊಂಡಿದೆ ಎನ್ನಿಸದೇ ಇರದು. ತನ್ನ ವ್ಯಾಪಕ ಜಾಲದ ಮೂಲಕ ದೇಶ- ವಿದೇಶಗಳ ಪ್ರತಿ ಆಗುಹೋಗುಗಳ ಬಗ್ಗೆ ಸದಾ ಕಣ್ಣಿಟ್ಟಿರುವ ಅದು ಒಂದು ಪ್ರಭಾವಿ ಸಾಮಾಜಿಕ ಮತ್ತು ರಾಜಕೀಯ ಸಂಘಟನೆ. ಹಿಂದೂ ಧಾರ್ಮಿಕ ಆಚರಣೆ, ರೀತಿ-ರಿವಾಜುಗಳ ಕುರಿತು ಸತತ ಸಮಾವೇಶಗಳನ್ನು, ನಡೆಸುವ ಅದು, ‘ಲವ್ ಜಿಹಾದ್’ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಕುರಿತ ಕಾರ್ಯಾಗಾರಗಳನ್ನೂ ನಡೆಸುತ್ತಿದೆ. ಅಲ್ಲದೆ, ಹಿಂದೂ ಧರ್ಮದ ಬಲವರ್ಧನೆ ಮತ್ತು ಪ್ರಸಾರದ ಉದ್ದೇಶದಿಂದ ಸಾಮಾಜಿಕ ಜಾಲತಾಣ ನಿರ್ವಹಣಾ ಶಿಬಿರಗಳನ್ನೂ ನಡೆಸುತ್ತಿದೆ. ಜಾತಿಯನ್ನು ಮೀರಿ ಎಲ್ಲಾ ಹಿಂದೂಗಳ ಸಂಘಟನೆ ಮೂಲಕ ಹಿಂದುತ್ವ ಬಲಪಡಿಸಲು ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ತನ್ನದೇ ಜಾಲದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಅಹಮದಾಬಾದ್‌ನ ಶನಿಸಿಂಗಣಾಪುರ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ವಿರುದ್ಧ ಅದು ಆಂದೋಲನವನ್ನೂ ನಡೆಸಿತ್ತು. ಹಾಗೇ ಕರ್ನಾಟಕದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಮರುನಾಮಕರಣ ಮಾಡುವ ವಿರುದ್ಧವೂ ಅದು ಹೋರಾಟ ನಡೆಸಿತ್ತು.

ಸಂಸ್ಥಾದ ಸಂಸ್ಥಾಪಕ ಅಥಾವಳೆ

ಅಥಾವಳೆ(೭೬) ಯಶಸ್ವಿ ಹಿಪ್ನೋಥೆರಪಿಸ್ಟ್ ಆಗಿ ತಮ್ಮ ವೃತ್ತಿಬದುಕಿನ ನಟ್ಟನಡುವೆಯೇ ಸಂಸ್ಥಾ ಸ್ಥಾಪಿಸಿದರು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ನಾಗಠಾಣಾದಲ್ಲಿ ಹುಟ್ಟಿದ ಅಥಾವಳೆ, ವೈದ್ಯಕೀಯ ಮತ್ತು ಮನೋರೋಗ ಚಿಕಿತ್ಸೆಯಲ್ಲಿ ಪದವಿ ಪಡೆದು, ಬಳಿಕ ಬ್ರಿಟನ್‌ನಲ್ಲಿ ಏಳು ವರ್ಷ ಹಿಪ್ನೋಥೆರಫಿಯಲ್ಲಿ ಸಂಶೋಧನೆ ನಡೆಸಿದರು. ಅಲ್ಲಿಂದ ೧೯೭೮ರಲ್ಲಿ ಭಾರತಕ್ಕೆ ಮರಳಿದ ಬಳಿಕ ಮುಂಬೈನಲ್ಲಿ ಹಿಪ್ನೋಥೆರಫಿ ಚಿಕಿತ್ಸೆ ನೀಡತೊಡಗಿದರು. ಜೊತೆಗೆ ಸುಮಾರು ೪೦೦ ಮಂದಿ ವೈದ್ಯರಿಗೆ ಹಿಪ್ನೋಥೆರಫಿ ತರಬೇತಿಯನ್ನೂ ನೀಡಿದರು.

ಅಥಾವಳೆಯ ವೃತ್ತಿಗೆ ತಿರುವು ನೀಡಿದ್ದು, ತನ್ನ ಚಿಕಿತ್ಸೆಗೆ ಸ್ಪಂದಿಸದ ಹಲವು ರೋಗಿಗಳು ತೀರ್ಥಯಾತ್ರೆ, ಯೋಗಿಗಳ ದರ್ಶನ ಅಥವಾ ಧಾರ್ಮಿಕ ಕಾರ್ಯಗಳ ಬಳಿಕ ಚೇತರಿಕ ಕಾಣುತ್ತಿದ್ದಾರೆ ಎಂಬ ಸಂಗತಿ. ವೈದ್ಯಕೀಯ ವಿಜ್ಞಾನದಂತಲ್ಲದೆ, ದೈವೀ ವಿಜ್ಞಾನ ಮನುಷ್ಯನ ದೇಹ ಮತ್ತು ಮನಸ್ಸಿನ ಮಟ್ಟದಲ್ಲಿ ಚಿಕಿತ್ಸೆ ನೀಡುತ್ತದೆ ಎಂಬುದನ್ನು ಅಥಾವಳೆ ಕಂಡುಕೊಂಡರು. ಆ ದೈವೀ ವಿಜ್ಞಾನದ ಕಲಿಕೆಯ ಹುಡುಕಾಟ ಅವರನ್ನು ಸಂತರು, ಯೋಗಿಗಳ ಬಳಿ ಕರೆದೊಯ್ಯಿತು. ೧೯೮೭ರಲ್ಲಿ ಇಂಧೋರಿನ ಭಕ್ತರಾಜ್ ಮಹರಾಜ್ ಎಂಬುವರಿಂದ ‘ಗುರು ಮಂತ್ರ’ ಬೋಧನೆ ಪಡೆದು ಜೀವನದ ಆಧ್ಯಾತ್ಮಿಕ ಪಯಣ ಆರಂಭಿಸಿದರು. ಬಳಿಕ ೧೯೯೦ರಲ್ಲಿ ಸನಾತನ ಭಾರತೀಯ ಸಂಸ್ಕೃತಿ ಸಂಸ್ಥಾ ಹುಟ್ಟುಹಾಕಿದ ಅವರು, ನಂತರ ೧೯೯೧ರಲ್ಲಿ ಸನಾತನ ಸಂಸ್ಥಾ ಆರಂಭಿಸಿದರು.

ನಂತರ ಅಥಾವಳೆ ಹಿಂದೂ ಸಂಘಟನೆ ಮತ್ತು ‘ದೇಶ ರಕ್ಷಣೆ’ಯ ಕಾರ್ಯವನ್ನು ಕೈಗೆತ್ತಿಕೊಂಡು, ತಮ್ಮೊಂದಿಗೆ ಕೆಲಸ ಮಾಡುವವರಿಗೆ ‘ಧರ್ಮ ರಕ್ಷಕ’ ಎಂಬ ಬಿರುದು ನೀಡಲಾರಂಭಿಸಿದರು. ಹಿಂದುತ್ವ ಮತ್ತು ಹಿಂದೂ ದೇವರು, ಪವಿತ್ರಗ್ರಂಥ, ಸಾಧುಸಂತರು ಮತ್ತು ರಾಷ್ಟ್ರೀಯ ನಾಯಕರ ಅವಹೇಳನದ ವಿರುದ್ಧ ದನಿ ಎತ್ತುವಂತೆ ಹಿಂದೂಗಳಿಗೆ ಕರೆ ನೀಡತೊಡಗಿದರು. ಅಂತಿಮವಾಗಿ ಈ ಧೋರಣೆಯೇ ಸಂಸ್ಥಾ ಅನುಯಾಯಿಗಳನ್ನು ಉದಾರವಾದಿಗಳ ಮುಕ್ತ ಚಿಂತನೆಗಳ ವಿರುದ್ದ ಎತ್ತಿಕಟ್ಟಿತು.

ಆಶ್ರಮಕ್ಕೆ ಸದಾ ಭೇಟಿ ನೀಡುವವರ ಪ್ರಕಾರ, ಅಥಾವಳೆ ಇತ್ತೀಚಿನ ದಿನಗಳಲ್ಲಿ ಯಾರನ್ನೂ ಭೇಟಿ ಮಾಡುತ್ತಿಲ್ಲ. ತಮ್ಮ ಕೋಣೆಯಲ್ಲಿ ಏಕಾಂಗಿಯಾಗಿ ಇರುತ್ತಾರೆ. ಕಳೆದ ಒಂದು ದಶಕದಿಂದ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಈ ನಡುವೆ, ೨೦೧೭ರ ಮೇನಲ್ಲಿ ಆಶ್ರಮ ಅವರ ೭೫ನೇ ಹುಟ್ಟುಹಬ್ಬ ಆಚರಿಸಿದ್ದು, ಆಗ ನಡೆದ ಹಲವು ಯಜ್ಞಗಳಲ್ಲಿ ಅವರು ಪಾಲ್ಗೊಂಡಿದ್ದರು. ಸಂಸ್ಥಾದ ಅಧಿಕೃತ ಬ್ಲಾಗ್ ಮತ್ತು ವೆಬ್‌ತಾಣ ಮಾಹಿತಿ ಪ್ರಕಾರ, ಅವರು ‘ಆಧ್ಯಾತ್ಮಿಕ ಬದಲಾವಣೆ’ಗೆ ಒಳಗಾಗಿದ್ದು, ಕಮಲ ಮತ್ತು ತ್ರಿಶೂಲದ ಗುರುತುಗಳು ಅವರ ದೇಹದಲ್ಲಿ ಕಾಣಿಸಿಕೊಂಡಿವೆ. ‘ದೈವಿಕ ಕಣ’ಗಳು ಅವರ ದೇಹದಿಂದ ಹೊರಸೂಸುತ್ತಿವೆ.

ಅತಿ ಬೇಗ ಆಧ್ಯಾತ್ಮಿಕ ಸಿದ್ಧಿ ಹೊಂದಲು ಗುರುಕೃಪ ಯೋಗ-ಕರ್ಮಯೋಗ, ಧ್ಯಾನಯೋಗ ಮತ್ತು ಭಕ್ತಿಯೋಗಗಳ ಸಮ್ಮಿಶ್ರ ಯೋಗ- ಅನುಸರಿಸುವಂತೆ ಅಥಾವಳೆ ಹೇಳುತ್ತಾರೆ. ಈ ಯೋಗಸಾಧನೆಯಲ್ಲಿ ವ್ಯಕ್ತಿ ವ್ಯಷ್ಠಿ ಸಾಧನಾ(ವೈಯಕ್ತಿಕ ಒಳಿತು) ಮತ್ತು ಸಮಷ್ಠಿ ಸಾಧನಾ(ಸಮಾಜದ ಒಳಿತು) ಮೂಲಕ ರಾಷ್ಟ್ರ ಮತ್ತು ಧರ್ಮದ ಔನತ್ಯ ಸಾಧಿಸುತ್ತಾನೆ. ಗುರುವಿನ ಮಾರ್ಗದರ್ಶನದ ಮೂಲಕ ಈ ಸಾಧನೆ ಪಡೆಯುವ ವ್ಯಕ್ತಿ ಅತಿಬೇಗ ಸಿದ್ಧಿ ಮತ್ತು ದೇವರ ಸಾಕ್ಷಾತಾರ ಪಡೆಯುತ್ತಾನೆ. ಆ ಮೂಲಕ ಜನನ-ಮರಣದ ಬದುಕಿನ ಚಕ್ರದಿಂದ ಮುಕ್ತಿ ಪಡೆಯುತ್ತಾನೆ ಎಂಬುದು ಅಥಾವಳೆ ಪ್ರತಿಪಾದನೆ.

ಸಂತರು ಅಹಂನಿಂದ ಸಂಪೂರ್ಣ ಮುಕ್ತರಾಗಿರುತ್ತಾರೆ ಮತ್ತು ಎಲ್ಲರನ್ನೂ ಪ್ರೀತಿಸುವ ಮನಸ್ಸು ಹೊಂದಿರುತ್ತಾರೆ ಎಂಬುದು ಅಥಾವಳೆ ಉಕ್ತಿ. “ಆಧ್ಯಾತ್ಮಿಕ ಚಿಕಿತ್ಸೆ, ಮಂತ್ರಪಠಣ, ಯೋಚನಾಶೂನ್ಯ ಮನಸ್ಥಿತಿ, ಆನಂದ ಮತ್ತು ಶಾಂತಿಯನ್ನು ಸಂತರ ಸಾನ್ನಿಧ್ಯದಲ್ಲಿ ಪಡೆಯಲು ಸಾಧ್ಯ” ಎಂಬುದು ಅಥಾವಳೆ ಮಾತು. ಗುರುವಿನ ಅನುಗ್ರಹ ಇರದೆ ಮೋಕ್ಷ ಸಿಗಲಾರದು. ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಸಾಧನೆ-ಸತ್ಸಂಗ ಭಜನೆ, ಸತ್ಸೇವೆ, ಆಧ್ಯಾತ್ಮಿಕ ಪ್ರೇಮಕ್ಕಾಗಿ ಫಲಾಪೇಕ್ಷೆರಹಿತ ಸೇವೆ, ಭಾವ ಜಾಗೃತಿ, ಅಹಂ ಮೀರಿ, ವ್ಯಕ್ತಿತ್ವ ದೋಷ ನಿವಾರಣೆಯಂತಹ ಸಾಧನೆಯ ಮೂಲಕ ಗುರುವಿನ ಅನುಗ್ರಹ ಪಡೆಯಬೇಕು. ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಒಳಿತನ್ನಷ್ಟೇ ಅಲ್ಲದೆ, ಸಮಾಜದ ಒಳಿತಿಗೂ ಪ್ರಯತ್ನಿಸಿದಾಗ ಮಾತ್ರ ದೇವರ ಸಾಕ್ಷಾತ್ಕಾರ ಸಾಧ್ಯ ಎನ್ನುವುದು ಅಥಾವಳೆ ಬೋಧನೆ.

ಸಂಸ್ಥಾದ ಮುಖವಾಣಿ ಸನಾತನ್ ಪ್ರಭಾತ್(ಕನ್ನಡವೂ ಸೇರಿ ಹಿಂದಿ, ಮರಾಠಿ, ಇಂಗ್ಲಿಷ್ ಮತ್ತು ಗುಜರಾತ್ ಭಾಷೆಯಲ್ಲಿ ಪ್ರಕಟವಾಗುತ್ತಿದೆ) ಸಂಸ್ಥೆಯ ಮೂಲಕ ಈಗಾಗಲೇ ೧೧೪೨ ಮಂದಿ; ಮಹಿಳೆ-ಮಕ್ಕಳನ್ನೂ ಒಳಗೊಂಡು; ಶೇ.೬೦ಕ್ಕಿಂತ ಅಧಿಕ ಆಧ್ಯಾತ್ಮಿಕ ಶಕ್ತಿಯನ್ನು ಪಡೆದಿದ್ದಾರೆ ಮತ್ತು ಆ ಪೈಕಿ ೮೦ ಮಂದಿ ಸಂತತ್ವವನ್ನೂ ಪಡೆದುಕೊಂಡಿದ್ದಾರೆ ಎಂದು ಪ್ರತಿಪಾದಿಸುತ್ತದೆ.

ಹಿಂದೂ ದೇವರು, ಹಬ್ಬ, ಆಚರಣೆ, ಗಂಡು- ಹೆಣ್ಣಿನ ಸಾಂಪ್ರದಾಯಿಕ ಪಾತ್ರ, ಹಿಂದೂ ಸಮಾಜ ಮತ್ತು ಸಂಬಂಧಗಳ ಕುರಿತು ತನ್ನ ಶಿಬಿರ, ವಿಚಾರಗೋಷ್ಠಿಗಳ ಮೂಲಕ ಸಂಸ್ಥಾ ಹಿಂದೂಗಳಿಗೆ “ಸರಿಯಾದ ತಿಳಿವಳಿಕೆ” ನೀಡುವ ಕಾರ್ಯ ಮಾಡುತ್ತಿದೆ. ಅಲ್ಲದೆ ಸಮಾಜದ ವಿವಿಧ ವೃತ್ತಿಗಳನ್ನು ಕೂಡ ಸಂಸ್ಥಾದ ಆಧ್ಯಾತ್ಮಿಕ ದೃಷ್ಟಿಯಿಂದ ವ್ಯಾಖ್ಯಾನಿಸಲಾಗುತ್ತದೆ. ಉದಾಹರಣೆಗೆ; ವಕೀಲರು ಧರಿಸುವ ಕಪ್ಪು ಉಡುಪು ಆಧ್ಯಾತ್ಮಿಕ ಅಶಾಂತಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಸಂಸ್ಥಾದಲ್ಲಿನ ಸಂತರೊಬ್ಬರು. ಹಾಗಾಗಿ ನ್ಯಾಯಾಲಯದಲ್ಲಿ ವಕೀಲರು ಸುಳ್ಳನ್ನು ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಆಶ್ಚರ್ಯವೇನಲ್ಲ ಎನ್ನುತಾರೆ ಅವರು.

ಸಂಸ್ಥಾದ ಮುಖವಾಣಿ ಸನಾತನ್ ಪ್ರಭಾತ್‌ನಲ್ಲಿ ಇಂತಹ ವಿಷಯಗಳು ಮಾತ್ರವಲ್ಲದೆ, ಎನ್‌ಆರ್‌ಸಿ(ರಾಷ್ಟ್ರೀಯ ನಾಗರಿಕ ನೋಂದಣಿ), ಭಾರತದ ಜಲಕ್ಷಾಮ, ಅಸಹಿಷ್ಣುತೆಯ ಚರ್ಚೆ, ಅಯೋಧ್ಯಾ ರಾಮಮಂದಿರ ನಿರ್ಮಾಣ ವಿಷಯದಲ್ಲಿ ರಾಜಕೀಯ ಪಕ್ಷಗಳ ನಿಲುವು ಸೇರಿದಂತೆ ಹಲವು ವಿಷಯಗಳ ಕುರಿತ ಆಧ್ಮಾತ್ಮಿಕ ಅಭಿಪ್ರಾಯಗಳನ್ನೂ ಮಂಡಿಸುತ್ತದೆ. ಆದರೆ, ಅಂತಹ ಎಲ್ಲಾ ಅಭಿಪ್ರಾಯಗಳೂ, ನಿಲುವುಗಳೂ ಹಿಂದೂರಾಷ್ಟ್ರ ಸಿದ್ಧಾಂತಕ್ಕೆ ಪೂರಕವಾಗಿಯೇ ಇರುತ್ತವೆ. ಇಸ್ರೇಲ್ ಸಂಸತ್ ಯಹೂದಿ ರಾಷ್ಟ್ರ ಕಾಯ್ದೆಗೆ ಅನುಮೋದನೆ ನೀಡಿದ್ದನ್ನು ಮೆಚ್ಚಿಕೊಂಡಿದ್ದ ಅದು, ಇಸ್ರೇಲ್ ಹೀಬ್ರೂ ಭಾಷೆ ಮತ್ತು ಕ್ಯಾಲೆಂಡರಿಗೆ ಮಾನ್ಯತೆ ನೀಡಿದಂತೆಯೇ, ಹಿಂದೂ ರಾಷ್ಟ್ರ ಕೂಡ ಸಂಸ್ಕೃತ ಭಾಷೆ ಪ್ರಸರಣ ಮಾಡಲಿದೆ ಮತ್ತು ಹಿಂದೂ ಕ್ಯಾಲೆಂಡರ್ ಅನುಸರಿಸಲಿದೆ ಎಂದು ತನ್ನ ಅನುಯಾಯಿಗಳಿಗೆ ಹೇಳಿತ್ತು.

ಸಂಸ್ಥಾದಲ್ಲಿ ಗುರು ಪೂರ್ಣಿಮೆ ಬಹಳ ಪ್ರಮುಖ ಆಚರಣೆ. ಈ ಆಚರಣೆ ವೇಳೆ ಪ್ರಮುಖವಾಗಿ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ಕುರಿತು ಅನುಯಾಯಿಗಳಿಗೆ ಪ್ರಮುಖವಾಗಿ ಮನವರಿಕೆ ಮಾಡಲಾಗುತ್ತದೆ. ರಾಮರಾಜ್ಯ, ಛತ್ರಪತಿ ಶಿವಾಜಿಯ ಹಿಂದವಿ ಸ್ವರಾಜ್ಯದಂತ ಆದರ್ಶ ರಾಷ್ಟ ನಿರ್ಮಾಣಕ್ಕೆ ಚಾರಿತ್ರ ಮುಖ್ಯ ಎಂಬುದು ಸನಾತನ ಸಂಸ್ಥಾ ನಿಲುವು. ಆದರೆ, ಇಂದಿನ ಆಡಳಿತಗಾರರು ಪೋರ್ನೋಗ್ರಫಿ, ಪಬ್, ಲಿವ್ ಇನ್ ರಿಲೇಷನ್‌ಶಿಪ್‌ಗಳಿಗೆ ಅವಕಾಶ ನೀಡುವ ಮೂಲಕ ಜನರ ಚಾರಿತ್ರ್ಯ ನಾಶ ಮಾಡುತ್ತಿದ್ದಾರೆ ಎನ್ನುತ್ತದೆ ಸಂಸ್ಥಾ. ಜಾತಿ ತಾರತಮ್ಯ ಇರದ, ಮೀಸಲಾತಿ ಇರದ ಹಿಂದೂ ರಾಷ್ಟ್ರ ಕಟ್ಟುವ ಪಣ ತೊಟ್ಟಿರುವ ಸಂಸ್ಥಾ, ಅದು ಬ್ಯಾಲೆಟ್ ಮತ್ತು ರಾಜಕೀಯ ನಾಯಕತ್ವದಿಂದ ಸಾಧ್ಯವಿಲ್ಲ ಎಂದು ನಂಬುತ್ತದೆ ಮತ್ತು ಸಂತರ ಆಶೀರ್ವಾದದಿಂದ ಸಾಧ್ಯ ಎಂದು ಪ್ರತಿಪಾದಿಸುತ್ತದೆ.

ಭಾರತವನ್ನು ಹಿಂದೂ ರಾಷ್ಟ್ರ ಎಂಬುದು ಘೋಷಣೆಯನ್ನು ಮೀರಿದ್ದು ಎಂದು ಭಾವಿಸುವ ಸಂಸ್ಥಾ, ೨೦೨೩ರ ಹೊತ್ತಿಗೆ ಆ ಕನಸು ನನಸಾಗಲಿದೆ ಎಂದು ನಂಬಿದೆ. “ಮುಸ್ಲಿಂ ಮತ್ತು ಕ್ರೈಸ್ತರ ದಾಳಿ ಮತ್ತು ಆಡಳಿತಕ್ಕೆ ಮುಂಚೆ ಭಾರತ ಒಂದು ಹಿಂದೂ ರಾಷ್ಟ್ರವಾಗಿತ್ತು” ಎಂದು ಸಾಧಕ ಉಮೇಶ್ ಶರ್ಮ, ತಮ್ಮ ಗುರುಪೂರ್ಣಿಮಾ ಭಾಷಣದಲ್ಲಿ ಹೇಳಿದ್ದರು. “ಭರತ, ಹರಿಶ್ಚಂದ್ರ, ಪ್ರಭು ಶ್ರೀರಾಮ, ಆಪ್ಘಾನಿಸ್ತಾನದ ದೊರೆ ದಾಹಿರ್, ರಾಜಸ್ತಾನ ಮಹಾರಾಣಾ ಪ್ರತಾಪ್‌ ಸಿಂಗ್ ಸೇರಿದಂತೆ ಯಾವ ರಾಜರೂ ಸೆಕ್ಯುಲರ್ ಆಗಿರಲಿಲ್ಲ. ಅವರ ರಾಜ್ಯಗಳು ಹಿಂದೂ ರಾಜ್ಯಗಳಾಗಿದ್ದವು. ಸ್ವಾತಂತ್ರ್ಯ ಪಡೆದ ಹೊತ್ತಲ್ಲೂ ದೇಶದಲ್ಲಿ ೫೬೬ ಹಿಂದೂ ರಾಜ್ಯಗಳಿದ್ದವು. ಆದರೆ, ೧೯೭೬ರಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ; ವಿರೋಧಪಕ್ಷಗಳ ನಾಯಕರು ಜೈಲಿನಲ್ಲಿರುವಾಗ, ಇಂದಿರಾ ಗಾಂಧಿ ಉದಾರವಾದಿಗಳ ಒತ್ತಡಕ್ಕೆ ಮಣಿದು, ಸಂವಿಧಾನದಲ್ಲಿ ‘ಸೆಕ್ಯುಲರ್’ ಪದ ಅಳವಡಿಸಿದರು. ಈ ಜಾತ್ಯತೀತ ಪ್ರಜಾಪ್ರಭುತ್ವ ಎಂಬುದು ದೇಶಕ್ಕೆ ಮತ್ತು ಹಿಂದೂಗಳಿಗೆ ದೊಡ್ಡ ಹಾನಿ ಮಾಡಿತು. ಕಟ್ಟಾ ಹಿಂದೂಗಳಾಗಿ ಮತ್ತು ಹಿಂದೂ ಸಂಘಟನೆಗಳಾಗಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲಾ ಒಂದಾಗಬೇಕು” ಎಂದು ಅವರು ಕರೆ ನೀಡಿದ್ದರು.

ಯುವಕರಿಗೆ ಪ್ರಚೋದಿಸಿ ಗಂಭೀರ ಅಪರಾಧಗಳಿಗೆ ಕುಮ್ಮಕ್ಕು ನೀಡುತ್ತಿರುವ ಆರೋಪದ ಮೇಲೆ ಸಂಸ್ಥಾದ ಮೇಲೆ ಕೆಲವು ಕಾಲದಿಂದ ಪೊಲೀಸರು ಕಣ್ಣಿಟ್ಟಿದ್ದಾರೆ. ಆದರೆ, ಅದರ ವಕ್ತಾರ ರಾಜ್ಹನ್ಸ್ ಪ್ರಕಾರ ಸಂಸ್ಥಾವನ್ನು ಉದ್ದೇಶಪೂರ್ವಕವಾಗಿ ಗುರಿಮಾಡಲಾಗಿದೆ. “ಈ ಮೊದಲು ಆರ್‌ಎಸ್ಎಸ್ ಗುರಿಮಾಡಿಕೊಳ್ಳಲಾಗಿತ್ತು. ಆದರೆ, ಈಗ ಅದು ದೊಡ್ಡದಾಗಿಯೂ, ಪ್ರಭಾವಶಾಲಿಯಾಗಿಯೂ ಬೆಳೆದಿದೆ. ಹಾಗಾಗಿ ಹಿಂದೂ ವಿರೋಧಿ ಉದಾರವಾದಿಗಳು ಮತ್ತು ರಾಜಕಾರಣಿಗಳು ಸಂಸ್ಥಾವನ್ನು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಅದರೆ, ಎಂದಿಗೂ ಸತ್ಯಕ್ಕೇ ಜಯ” ಎಂಬುದು ಅವರ ಸ್ಪಷ್ಟನೆ.

ತನ್ನ ಗುರಿ ಸಾಧನೆ ಮತ್ತು ಸವಾಲುಗಳನ್ನು ಎದುರಿಸಲು ಅಗತ್ಯ ಸೌಲಭ್ಯ ಮತ್ತು ಬಲವನ್ನು ಸಂಸ್ಥಾ ಪಡೆದುಕೊಂಡಿದೆ. ಎಚ್‌ಜೆಎಸ್‌ ಅಡಿಯಲ್ಲಿ ಕಾರ್ಯನಿರ್ವಹಿಸುವ ವಕೀಲರ ಸಂಘಟನೆಯಾದ ‘ಹಿಂದೂ ವಿಧಿಧ್ನ್ಯಾಯ ಪರಿಷತ್’ ಹಿಂದೂ ಕಾರ್ಯಕರ್ತರ ವಿರುದ್ಧದ ಪ್ರಕರಣಗಳಲ್ಲಿ ಕಾನೂನು ನೆರವು ನೀಡುತ್ತದೆ. ಕರ್ನಾಟಕದ ಹಿಂದೂ ವಿಧಿಧ್ನ್ಯಾಯ ಪರಿಷತ್ ಸದಸ್ಯ ವಕೀಲ ಎನ್‌ ಪಿ ಅಮೃತೇಶ್, “ನಾವು ಹಿಂದೂ ಕಾರ್ಯಕರ್ತರ ಪರ ಇದ್ದೇವೆ” ಎಂದಿದ್ದಾರೆ. “ಬೇರೆಯವರು ತಮ್ಮ ಬೆಂಬಲಕ್ಕೆ ದೊಡ್ಡ ಬಲವನ್ನೇ ಹೊಂದಿದ್ದಾರೆ. ಅವರಿಗೆ ಕಾನೂನು ನೆರವು ನೀಡಿ, ಬಿಡುಗಡೆ ಮಾಡುತ್ತಾರೆ. ಆದರೆ, ಹಿಂದೂ ಕಾರ್ಯಕರ್ತರು ಪೊಲೀಸರ ಹಿಂಸೆಗೆ ಗುರಿಯಾಗುತ್ತಿದ್ದಾರೆ. ರಾಜಕೀಯ ಬಲಿಪಶುಗಳಾಗುತ್ತಿದ್ದಾರೆ. ಅದನ್ನು ತಡೆಯಲು ನಾವು ಯಾವುದೇ ಸಂಘಟನೆಗೆ ಸೇರಿರಲಿ, ಎಲ್ಲಾ ಹಿಂದೂ ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ನೀಡುತ್ತೇವೆ” ಎನ್ನುತ್ತಾರೆ ಅಮೃತೇಶ್.

ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ಪಾರಾಗಿದ್ದ ಸನಾತನ ಸಂಸ್ಥಾ ಇದೀಗ ವಿಚಾರವಾದಿಗಳ ಹತ್ಯೆ ಮತ್ತು ಭಯೋತ್ಪಾದನಾ ನಿಗ್ರದ ದಳದ ಆರೋಪಗಳಲ್ಲಿ ಮತ್ತೊಮ್ಮೆ ಸಿಲುಕಿಕೊಂಡಿದೆ. ಆ ಆರೋಪಗಳನ್ನು ರಾಜಕೀಯ ವಿವಾದ ಎಂದು ಅದು ತಳ್ಳಿಹಾಕುತ್ತಿದ್ದರೂ, ಆಶ್ರಮದಲ್ಲಿ ಆತಂಕ ಮನೆ ಮಾಡಿರುವುದು ಎದ್ದುಕಾಣದೇ ಇರದು. ಗುರುಪೂರ್ಣಿಮೆ ದಿನ ಅಪರಿಚಿತ, ಆಗಂತುಕರಿಗೂ ತನ್ನ ಬಾಗಿಲು ತೆರೆದಿಡುತ್ತಿದ್ದ ಗೋವಾದ ಆಶ್ರಮ, ಇದೀಗ ದಿಢೀರನೇ ಅನ್ಯರಿಗೆ ಬಾಗಿಲು ಮುಚ್ಚಿದೆ. “ಇಲ್ಲ, ಆಶ್ರಮದೊಳಗೆ ಮಾಧ್ಯಮಗಳಿಗೆ ಪ್ರವೇಶವಿಲ್ಲ” ಎಂದು ಟ್ರಸ್ಟಿಯೊಬ್ಬರು ಹೇಳಿದರು. ಸಂಸ್ಥಾವನ್ನು ನಿಷೇಧಿಸಬೇಕು ಎಂಬ ‘ದುರುದ್ದೇಶದ ಹೋರಾಟ’ದಿಂದಾಗಿ ಈ ಕ್ರಮ ಎಂಬುದು ಅವರ ಸಮರ್ಥನೆ.

‘ದ ವೀಕ್’ ಇಂಗ್ಲಿಷ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ‘ಸ್ಪಿರಿಚ್ಯುವಲ್ ಪಜಲ್; ದಿ ಸ್ಟೋರಿ ಆಫ್ ಸನಾತನ ಸಂಸ್ಥಾ- ಡಸ್ ಇಟ್ ಬ್ರೀಡ್ ಸೇಂಟ್ಸ್ ಆರ್ ಸಿನ್ನರ್ಸ್’ ವರದಿಯ ಆಯ್ದಭಾಗ ಇದು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More