ವಿಡಿಯೋ | ಅನ್ನದಾಸೋಹಕ್ಕೆ ಹೋದವರು ಸವರ್ಣೀಯರಿಂದ ಹಲ್ಲೆಗೊಳಗಾಗಿ ಬಂದರು

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ದಲಿತ ಯುವಕ ಸವರ್ಣೀಯ ಯುವತಿಯನ್ನು ಪ್ರೀತಿಸಿದನೆಂಬ ಕಾರಣಕ್ಕೆ ಆತನನ್ನು ಬೆತ್ತಲೆಗೊಳಿಸಿದ ಘಟನೆ ಹಸಿರಾಗಿರುವಾಗಲೇ ತುರುವೇಕೆರೆಯಲ್ಲಿ ದಲಿತರೆಂಬ ಕಾರಣಕ್ಕೆ ಊಟ ಹಾಕದೆ ಜಾತಿ ನಿಂದನೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ವರದಿಯಾಗಿದೆ

ನಿತ್ಯವೂ ಜಾತಿಯ ಅವಮಾನವನ್ನುಂಡು ಏನೂ ಮಾಡಲಾಗದೆ ಅಸಹಾಯಕರಾಗಿ ಮೌನವಾಗಿ ಮನೆಯ ಹಾದಿ ಹಿಡಿಯುವವರೇ ಹೆಚ್ಚು. ಇಂತಹ ಅಮಾನವೀಯ ಘಟನೆಗಳು ಬಹುತೇಕ ವರದಿಯಾಗುವುದಿಲ್ಲ. ಜಾತಿ ವ್ಯವಸ್ಥೆಯ ಕರಾಳ ರುದ್ರ ನರ್ತನದ ತಾಜಾ ನಿದರ್ಶನವೆಂದರೆ ತುರುವೇಕೆರೆಯ ಹರಿದಾಸನಹಳ್ಳಿಯ ದಲಿತ ಯುವಕರಿಗಾದ ಅವಮಾನದ ಘಟನೆ. ಈ ಸಂಬಂಧ ತುರುವೇಕೆರೆ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ.

ತುರುವೇಕೆರೆ ತಾಲೂಕು ಹರಿದಾಸನಹಳ್ಳಿ ಭೂತಪ್ಪನ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಅನ್ನದಾಸೋಹ ಕಾರ್ಯ ಏರ್ಪಡಿಸಲಾಗಿತ್ತು. ಪ್ರತೀತಿಯಿಂದ 3ನೇ ಶ್ರಾವಣ ಶನಿವಾರದಂದು ಎಲ್ಲಾ ಜಾತಿಯ ಜನರೂ ಭೂತಪ್ಪನಿಗೆ ಬೇಟೆ ಕಡಿದು ಮಾಂಸಾಹಾರ ಮಾಡಿ ಎಲ್ಲರಿಗೂ ಬಡಿಸುವುದು ರೂಢಿಯಿಂದ ಬಂದಿತ್ತು. ಅದರಂತೆ ಸೆಪ್ಟೆಂಬರ್ 1ರಂದು ರಾತ್ರಿಯೂ ಕೂಡ ಮಾಂಸಾಹಾರದ ಊಟದ ಸಂತರ್ಪಣೆ ನಡೆದಿತ್ತು.

ತುರುವೇಕೆರೆಗೆ ಹೋಗಿದ್ದ ಬಾಣಸಂದ್ರ ಗ್ರಾಮದ ದಲಿತ ಯುವಕರು ಪಟ್ಟಣದಿಂದ ಹಿಂದಿರುಗಿ ಹರಿದಾನಹಳ್ಳಿಯ ಮಾರ್ಗದ ಮೂಲಕ ಬರುವಾಗ ಊಟ ಮಾಡಿಕೊಂಡು ಹೋಗಬಹುದೆಂದು ಭೂತಪ್ಪನ ಗುಡಿಯ ಬಳಿಗೆ ಹೋಗಿ ಸ್ವಲ್ಪ ಹೊತ್ತು ಕಾದು ಕುಳಿತಿದ್ದಾರೆ. ಎರಡು ಪಂಕ್ತಿ ಕಳೆದರೂ ಇವರನ್ನು ಇನ್ನೂ ಸ್ವಲ್ಪ ಕಾಯುವಂತೆ ಸವರ್ಣೀಯ ಯುವಕರು ಹೇಳಿದ್ದಾರೆ. ಕೊನೆಗೆ ಹೋಗಿ ರುದ್ರನರಸಿಂಹ, ರವಿ, ಶಂಕರ್, ಶ್ರೀನಿವಾಸ್ ಮತ್ತು ನವೀನ್ ಊಟಕ್ಕೆ ಕುಳಿದ್ದಾರೆ. ಅಲ್ಲಿಗೆ ಬಂದ ಸವರ್ಣೀಯ ಯುವಕರ ಗುಂಪು ರುದ್ರಸಿಂಹ ಅವರ ಮುಂದೆ ಹಾಕಿದ್ದ ಎಲೆಯನ್ನು ಕಾಲಿನಿಂದ ಒದ್ದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಸವರ್ಣೀಯ ಯುವಕರು ಗುಂಪು ಕೈಯಲ್ಲಿದ್ದ ಬಗೆಟ್‍ಗಳಿಂದ ರುದ್ರಸಿಂಹ ಅವರ ತಲೆಗೆ ಮನಬಂದಂತೆ ಥಳಿಸಿದೆ. ಗಾಯಗೊಂಡ ರುದ್ರಸಿಂಹನನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ತುಮಕೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರುದ್ರಸಿಂಹನ ಜೊತೆಗೆ ಊಟಕ್ಕೆ ಹೋಗಿದ್ದ ರವಿಚಂದ್ರ ಮಾತನಾಡಿ “ದೇವರ ಪ್ರಸಾದಕ್ಕಾಗಿ ಭೂತಪ್ಪನ ಗುಡಿ ಆವರಣದಲ್ಲಿ ಕುಳಿತಿದ್ದೆವು. ಅಕ್ಕಪಕ್ಕದವರಿಗೆಲ್ಲ ಊಟ ಬಡಿಸಿದರೂ ನಮಗೆ ನೀಡಲಿಲ್ಲ. ನಮಗೂ ಊಟ ಬಡಿಸುವಂತೆ ಮನವಿ ಮಾಡಿಕೊಂಡೆವು. ಆಗ ಊಟ ಬಡಿಸುತ್ತಿದ್ದ ಸವರ್ಣೀಯ ವ್ಯಕ್ತಿಗಳು ನಮ್ಮನ್ನು ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿದರು. ರುದ್ರನರಸಿಂಹ ಮತ್ತು ನಮ್ಮ ಮೇಲೆ ಹಲ್ಲೆ ಮಾಡಿದರು. ನಾವು ಊಟ ಕೇಳಿದರೆ ಅವರು ಥಳಿಸಿದ್ದಾರೆ. ಇದು ಯಾವ ನ್ಯಾಯ” ಎಂದು ಅಳಲು ತೋಡಿಕೊಂಡರು.

ಘಟನೆಯ ಕುರಿತು ಮಾಹಿತಿ ನೀಡಿದ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಕುಮಾರ್, ‘’ಇದು ಬೇಕೆಂದೇ ನಡೆದಿರುವ ಘಟನೆ. ಗೊತ್ತಿದ್ದವರೇ ರುದ್ರನರಸಿಂಹ ಮತ್ತು ಗೆಳೆಯರನ್ನು ಮನಬಂದಂತೆ ಥಳಿಸಿದ್ದಾರೆ. ಮಾಮೂಲಿ ಎಲ್ಲರಿಗೂ ಊಟ ಹಾಕುತ್ತಾರೆಂದು ತಿಳಿದು ಅಲ್ಲಿಗೆ ಹೋಗಿದ್ದಾರೆ. ಮೊದಲು ಅವರಿಗೆ ಎಲೆ ಹಾಕಿ ಅದನ್ನು ಕಾಲಿನಿಂದ ಒದ್ದು ಅವಮಾನ ಮಾಡಿದ್ದಾರೆ. ಇದು ಖಂಡನೀಯ. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ತುರುವೇಕೆರೆಯ ಪತ್ರಕರ್ತ ಮಾಯಸಂದ್ರ ಸ್ವಾಮಿ, ದೂರವಾಣಿಯಲ್ಲಿ ಮಾತನಾಡಿ “ಸರ್ ಭೂತಪ್ಪನಗುಡಿಯಲ್ಲಿ ಪ್ರತಿ ಮೂರನೇ ಶನಿವಾರ ಹರಿದಾಸನಹಳ್ಳಿಯ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಕುರಿ, ಮೇಕೆ ಬಲಿ ನೀಡುವುದು ಮತ್ತು ಅದನ್ನು ಸಾರ್ವಜನಿಕರಿಗೆ ಬಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಎಲ್ಲಾ ಜಾತಿಯವರು ಅನ್ನಸಂತರ್ಪಣೆ ಮಾಡುತ್ತಾರೆ. ಈ ಬಾರಿ ಕನಿಷ್ಟ 36 ಮೇಕೆಗಳನ್ನು ಬಲಿ ನೀಡಿದ್ದರು. ರುದ್ರನರಸಿಂಹ ಮತ್ತು ನಾಲ್ವರು ಗೆಳೆಯರು ತುರುವೇಕೆರೆಗೆ ಹೋಗಿದ್ದರು. ಅಲ್ಲಿಂದ ಮಾಯಸಂದ್ರಕ್ಕೆ ಬರುವ ವೇಳೆ ಹರಿದಾಸನಹಳ್ಳಿಗೆ ಹೋಗಿದ್ದಾರೆ. ಮೂರ್ನಾಲ್ಕು ಪಂಕ್ತಿ ಆದ ಮೇಲೆ ಊಟಕ್ಕೆ ಕುಳಿತಿದ್ದಾರೆ. ಆಗ ಸವರ್ಣೀಯ ಯುವಕರು ದಲಿತರನ್ನು ಬೇಕೆಂದೇ ಅವಮಾನ ಮಾಡಿರುವುದು ನಾಚಿಕೆಗೇಡಿನ ಸಂಗತಿ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯಾಗಿರುವ ಸಂದರ್ಭದಲ್ಲೂ ಜಾತಿಯ ಕಾರಣಕ್ಕಾಗಿ ಊಟ ಹಾಕದೆ ಅವಮಾನ ಮಾಡಿರುವುದು ಸರಿಯಲ್ಲ” ಎಂದು ವಿವರಿಸಿದರು.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ದಲಿತ ಯುವಕ ಸವರ್ಣೀಯ ಯುವತಿಯನ್ನು ಪ್ರೀತಿಸಿದನೆಂಬ ಕಾರಣಕ್ಕೆ ಆತನನ್ನು ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿ ಶೋಷಣೆ ಮಾಡಿದ ಘಟನೆ ಹಸಿರಾಗಿರುವಾಗಲೇ ತುರುವೇಕೆರೆಯಲ್ಲಿ ದಲಿತರೆಂಬ ಕಾರಣಕ್ಕೆ ಊಟ ಹಾಕದೆ ಜಾತಿ ನಿಂದನೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More