ಸರ್ಕಾರಿ ಜಮೀನು ಕಬಳಿಸಲು ಭೂಮಿ ಸಾಫ್ಟ್‌ವೇರ್‌ಗೆ ಕೈ ಹಾಕಿತೇ ಭೂ ಮಾಫಿಯಾ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಸರ್ಕಾರಿ ಬೀಳು ಜಮೀನುಗಳ ಮೇಲೆ ಭೂ ಮಾಫಿಯಾ ಕಣ್ಣು ನೆಟ್ಟಿದೆ. ಈ ಮಾಫಿಯಾ, ಬೀಳು ಬಿದ್ದಿರುವ ಸರ್ಕಾರಿ ಜಮೀನುಗಳನ್ನು ಲಪಟಾಯಿಸಲು ಹೂಡಿರುವ ಕರಾಮತ್ತಿನ ಬಗ್ಗೆ ನೀವು ಕೇಳಿದರೆ ಹೌಹಾರುತ್ತೀರಿ. ಇಂಥದ್ದೊಂದು ಜಾಲ ದೇವನಹಳ್ಳಿ ತಾಲೂಕಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ‘ದಿ ಸ್ಟೇಟ್‌’ ಬಹಿರಂಗಪಡಿಸುತ್ತಿದೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಸರ್ಕಾರಿ ಬೀಳು ಭೂಮಿಗಳನ್ನು ಕಬಳಿಸುವ ವ್ಯವಸ್ಥಿತ ಜಾಲವೀಗ ನೇರವಾಗಿ ಭೂಮಿ ಕೇಂದ್ರಕ್ಕೆ ಲಗ್ಗೆ ಇಟ್ಟು ಭೂಮಿ ಸಾಫ್ಟ್‌ವೇರ್‌ಗೆ ಕೈ ಹಾಕಿರುವ ಪ್ರಕರಣಗಳು ಇದೀಗ ಬೆಳಕಿಗೆ ಬಂದಿವೆ. ಅಲ್ಲದೆ, ಭೂಮಿ ತಂತ್ರಾಂಶವನ್ನು ನಿರ್ವಹಿಸುವ ಕೇಂದ್ರ ಕಚೇರಿ ಮೂಲಕವೇ ಈ ಜಾಲ ಕಾರ್ಯಾಚರಣೆ ನಡೆಸುತ್ತಿದೆ. ಭೂಮಿ ತಂತ್ರಾಂಶದ ಮೂಲಕ ಯಾರ ಜಮೀನಿಗೆ ಯಾರ ಹೆಸರನ್ನು ಬೇಕಾದರೂ ಹಕ್ಕು ಬದಲಾವಣೆ ಮಾಡಿಸುವಷ್ಟರ ಮಟ್ಟಿಗೆ ಜಾಲ ಪ್ರಭಾವಿಯಾಗಿದೆ.

ಇತ್ತೀಚಿನ ವರ್ಷಗಳವರೆಗೂ ಸರ್ಕಾರಿ ಬೀಳು ಭೂಮಿ ಎಂದು ದಾಖಲಾತಿಗಳಲ್ಲಿ ನಮೂದಾಗಿದ್ದರೂ, ಸರ್ಕಾರಿ ಬೀಳು ಜಮೀನು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ೧೯೩೦ರ ದಶಕದಲ್ಲೇ ‘ಹರಾಜು ಮೂಲಕ’ ಎಂದು ತೋರಿಸಿ ವ್ಯಕ್ತಿಗಳ ಹೆಸರನ್ನು ಗಣಕೀಕೃತ ದಾಖಲೆಗಳಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಸೇರ್ಪಡೆಯಾಗುತ್ತಿರುವ ಹೆಸರುಗಳು “ಅನಧಿಕೃತ’ ವ್ಯಕ್ತಿಗಳದ್ದು ಎಂದು ಹೇಳಲಾಗಿದೆಯಲ್ಲದೆ, ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಸಂಬಂಧಿಸಿದ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಲಿಖಿತ ಆದೇಶವಿಲ್ಲದೆಯೇ ಗಣಕೀಕೃತ ಪಹಣಿಯಲ್ಲಿ ಬದಲಾವಣೆಗಳಾಗುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಕಂದಾಯ ಇಲಾಖೆಯ ಅಧಿಕಾರಿಗಳು, ಕೆಲ ಸಿಬ್ಬಂದಿ, ಇದರಲ್ಲಿ ಭಾಗಿಯಾಗಿದ್ದು, ಭೂಮಿ ತಂತ್ರಾಂಶವನ್ನು ದುರುಪಯೋಗಪಡಿಸಿಕೊಂಡು ಬಹು ಕೋಟಿ ರೂ.ಮೌಲ್ಯವುಳ್ಳ ಸರ್ಕಾರಿ ಬೀಳು ಭೂಮಿಗಳು ರಿಯಲ್‌ ಎಸ್ಟೇಟ್‌ ಕಂಪನಿಗಳು, ಭೂ ಮಾಫಿಯಾ ಮತ್ತು ಪ್ರಭಾವಿಗಳ ಪಾಲಾಗುತ್ತಿವೆ. ಅದರಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಹಲವೆಡೆ ಇಂತಹ ಕೃತ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ.

ಬೆಳಕಿಗೆ ಬರುತ್ತಿರುವ ಇಂತಹ ಪ್ರಕರಣಗಳನ್ನು ಕಲೆ ಹಾಕಿ ಉನ್ನತ ಮಟ್ಟದ ತನಿಖೆಗೆ ವಹಿಸಬೇಕಿದ್ದ ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಮೈ ಮರೆತಿದ್ದಾರೆ. ಇವರ ಕರ್ತವ್ಯ ಲೋಪದಿಂದಾಗಿ ಸರ್ಕಾರಕ್ಕೆ ಅಪಾರ ಹಾನಿಯಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜಮೀನಿನ ಹಕ್ಕು ಬದಲಾವಣೆಯನ್ನು ಕೇವಲ ತಾಲೂಕು ಭೂಮಿ ಕೇಂದ್ರದಲ್ಲಷ್ಟೇ ಮಾಡಲು ಸಾಧ್ಯವಿದೆ. ಒಂದು ವೇಳೆ ಭೂಮಿ ಸರ್ವರ್‌ನಲ್ಲಿ ಯಾವ ತಂತ್ರಜ್ಞ ಯಾವುದೇ ಬದಲಾವಣೆ ಮಾಡಿದರೂ ದಿನಾಂಕ ಮತ್ತು ಸಮಯದೊಂದಿಗೆ ದಾಖಲಾಗುತ್ತದೆ. ಈ ಅವಕಾಶವಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ತನಿಖೆಗೊಳಪಡಿಸುತ್ತಿಲ್ಲ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಗೊಬ್ಬರಗುಂಟೆ ಗ್ರಾಮದಲ್ಲಿ ೧೯ ಎಕರೆ ವಿಸ್ತೀರ್ಣದ ಸರ್ಕಾರಿ ಬೀಳು ಭೂಮಿಯನ್ನು ಕಬಳಿಸಿರುವ ಪ್ರಕರಣ, ಭೂಮಿ ತಂತ್ರಾಂಶ ನಿರ್ವಹಿಸುತ್ತಿರುವ ಕೇಂದ್ರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯತ್ತ ಬೊಟ್ಟು ಮಾಡಿದೆ. ಸರ್ಕಾರಿ ಬೀಳು ಜಮೀನಿಗೆ ಅನಧಿಕೃತವಾಗಿ ಆರ್‌ ಟಿ ಸಿ ಸೃಷ್ಟಿಸಿರುವುದು ದೇವನಹಳ್ಳಿ ತಹಶೀಲ್ದಾರ್ ತನಿಖೆಯಲ್ಲಿ ದೃಢಪಟ್ಟಿದ್ದರೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಇಂಥ ಜಾಲವನ್ನು ಬೇಧಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

“ಗೊಬ್ಬರಗುಂಟೆ ಪ್ರಕರಣವನ್ನು ನುರಿತ ಸೈಬರ್‌ ಕ್ರೈಂ ಅಧಿಕಾರಿಗಳ ಮೂಲಕ ಸಮಗ್ರ ತನಿಖೆಗೆ ವಹಿಸಿದ್ದಲ್ಲಿ ಈ ಕೃತ್ಯದಲ್ಲಿ ಭಾಗಿ ಆಗಿರುವ ಅಧಿಕಾರಿ, ನೌಕರರೂ ಸೇರಿದಂತೆ ಇದರ ಹಿಂದಿನ ಪ್ರಭಾವಿಗಳೂ ಪತ್ತೆಯಾಗುತ್ತಿದ್ದರು. ಆದರೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ,” ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ಪ್ರಕರಣ ವಿವರ: ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಗೊಬ್ಬರಗುಂಟೆ ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಜಮೀನು ಸರ್ಕಾರಿ ಬೀಳು ಎಂದು ವರ್ಗೀಕೃತವಾಗಿದೆ. ೧೯೬೮-೬೯ರಿಂದ ೨೦೦೧-೦೨ನೇ ಸಾಲಿನ ಕೈ ಬರಹದ ಪಹಣಿ ಮತ್ತು ಆರ್‌ ಟಿ ಸಿ ಕಾಲಂ(೯)ರಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿತ್ತು. ಅಲ್ಲದೆ, ಕಾಲಂ ೧೨(೨)ರಲ್ಲಿ ವಿ ಪಿ ಫಾರೆಸ್ಟ್‌ ಎಂದು ದಾಖಲಾಗಿತ್ತು. ಅಲ್ಲದೆ, ೨೦೧೬-೧೭ನೇ ಸಾಲಿನಲ್ಲಿ ಸರ್ಕಾರದಿಂದ ಗ್ರಾಮ ಲೆಕ್ಕಿಗರಿಗೆ ನೀಡಿರುವ ಗಣಕೀಕೃತ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ದಾಖಲಾಗಿದೆ.

ಇನ್ನು, ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೪ ಸಿ ಅಡಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಮನೆ ಕಟ್ಟಿರುವ ವ್ಯಕ್ತಿಗಳಿಗೆ ಖಾಯಂ ಹಕ್ಕು ಪತ್ರ ನೀಡುವ ಸಂದರ್ಭದಲ್ಲಿಯೂ ಜನರಿಗೆ ಸ್ಕೆಚ್‌ ಮತ್ತು ಕಡತಗಳನ್ನು ತಯಾರಿಸುವ ಸಂದರ್ಭದಲ್ಲಿಯೂ ಪಡೆದಿರುವ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ನಮೂದಾಗಿದೆ. ಹಲವು ವರ್ಷಗಳಿಂದಲೂ ಸರ್ಕಾರಿ ಬೀಳು ಎಂದು ದಾಖಲಾಗಿದ್ದರೂ ಗಣಕೀಕೃತ ಪಹಣಿಯಲ್ಲಿ ಇದ್ದಕ್ಕಿದ್ದಂತೆ ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರ ಹೆಸರು ಸೇರ್ಪಡೆಯಾಗಿದೆಲ್ಲದೆ, ಇವರ ಹೆಸರಿಗೇ ೧೯ ಎಕರೆ ೧೪ ಗುಂಟೆ ನಮೂದಾಗಿದೆ.

ಇದನ್ನು ಆರ್‌ ಟಿ ಸಿ ಕಾಲಂ ೧೧ರಲ್ಲಿ ಎ ಡಬ್ಲ್ಯೂ/೮೮/೧೯೩೭-೩೮ ರಂತೆ ೧೯೩೯ ಜುಲೈ ೨೫ರಂದು ಹರಾಜು ಮೂಲಕ ಎಂದು ನಮೂದಾಗಿದೆ. ಆದರೆ ಈ ಪಹಣಿ ಅನಧಿಕೃತ ಎಂದು ಕಂದಾಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ಮಾಹಿತಿ ನೀಡಿದ್ದಾರೆ.

ಹಾಗೆಯೇ ಇದೇ ಜಮೀನಿಗೆ ಸಂಬಂಧಿಸಿದಂತೆ ತಾಲೂಕು ಹಕ್ಕು ದಾಖಲೆ ಶಿರಸ್ತೆದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸಹಾಯಕರು ಇಲಾಖೆಗೆ ನೀಡಿರುವ ಹೇಳಿಕೆಗಳ ಪ್ರಕಾರ ಈ ಜಮೀನು ಸರ್ಕಾರಿ ಬೀಳು ಎಂದೇ ಇದೆ.ಅಲ್ಲದೆ, ತಾಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ ಯಾವುದೇ ಮ್ಯುಟೇಷನ್‌ ವಹಿವಾಟು ನಡೆದಿಲ್ಲ ಎಂದು ದೇವನಹಳ್ಳಿ ತಾಲೂಕು ಕಚೇರಿಯ ಭೂಮಿ ಕೇಂದ್ರದ ಸಲಹೆಗಾರರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಇನ್ಫೋಸಿಸ್‌ಗೆ ಗೋಮಾಳ ಮಂಜೂರು ಮಾಡಲು ಸರ್ಕಾರ ನಡೆಸಿದೆಯೇ ಹೊಸ ಕಸರತ್ತು ?

ಗೊಬ್ಬರಗುಂಟೆ ಗ್ರಾಮ, ದೇವನಹಳ್ಳಿ ಪಟ್ಟಣಕ್ಕೆ ಕೇವಲ ೩ ಕಿ ಮೀ ದೂರದಲ್ಲಿದೆ. ಹೀಗಾಗಿ ಈ ಭಾಗದಲ್ಲಿ ಜಮೀನುಗಳಿಗೆ ತುಂಬಾ ಬೇಡಿಕೆ ಇದೆಯಲ್ಲದೆ, ಮಾರುಕಟ್ಟೆ ದರವೂ ಹೆಚ್ಚಿದೆ. ಕೃಷಿ ಭೂಮಿ ಎಕರೆಗೆ ಒಂದು ಕೋಟಿ ರೂ. ಮಾರುಕಟ್ಟೆ ದರವಿದ್ದರೆ, ಸಬ್‌ ರಿಜಿಸ್ಟ್ರಾರ್‌ ದರ ಎಕರೆಗೆ ೩೦ರಿಂದ ೪೦ ಲಕ್ಷ ರೂ.ಇದೆ. ಭೂ ಪರಿವರ್ತನೆಯಾಗಿದ್ದಲ್ಲಿ ಈ ದರ ದುಪ್ಪಟ್ಟಾಗಲಿದೆ. ವಾಸ ಯೋಗ್ಯ ನಿವೇಶನಕ್ಕೆ ಚದರ ಅಡಿಗೆ ೧,೦೦೦ ರು.ಗಳಿಂದ ೨,೨೦೦ ರೂ.ದರವಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಸರ್ಕಾರಿ ಬೀಳು ಜಮೀನುಗಳ ಮೇಲೆ ಭೂ ಮಾಫಿಯಾ ಕಣ್ಣು ಹಾಕಿದೆ ಎನ್ನಲಾಗುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More