ಮಾರ್ನಿಂಗ್ ಡೈಜಿಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಶಿಕ್ಷಕರ ದಿನ; ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರಾಜ್ಯಮಟ್ಟದ ಶಿಕ್ಷಕ್ಷರ ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆಯ್ದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಕನ್ನಡ ಮಾಧ್ಯಮ ಶಾಲೆ, ಶಿಕ್ಷಣ ಹಕ್ಕು ಸೇರಿದಂತೆ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವ ಕುರಿತು ಸಿಎಂ ಕುಮಾರಸ್ವಾಮಿ ಅವರು ಮಾತನಾಡುವ ಸಾಧ್ಯತೆ ಇದೆ.

ಬೆಳಗಾವಿ ವಲಯದ ಸಭೆಯಲ್ಲಿ ದಿನೇಶ್ ಗುಂಡೂರಾವ್ ಭಾಗಿ

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಕಾರ್ಯದರ್ಶಿ ಮಣಿಕಮ್ ಠ್ಯಾಗೋರ್ ಅವರು ಹುಬ್ಬಳ್ಳಿಯಲ್ಲಿ ಬುಧವಾರ ಬೆಳಗಾವಿ ವಲಯದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪ್ರಮುಖರ ಸಭೆ ನಡೆಸಲಿದ್ದಾರೆ.

ಸ್ವಾಮಿನಾಥನ್ ವರದಿ ಜಾರಿ ಸೇರಿ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಬೃಹತ್ ಜಾಥಾ

ಸ್ವಾಮಿನಾಥನ್ ವರದಿ ಜಾರಿ, ರೈತರಿಗೆ ಮಾಸಿಕ 5,000 ರೂ. ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಕಿಸಾನ್ ಸಭಾ , ಸಿಐಟಿಯು ಮತ್ತು ಆಲ್ ಇಂಡಿಯಾ ವರ್ಕರ್ಸ್ ಯೂನಿಯನ್ ಸಂಘಟನೆಗಳು ಬುಧವಾರ ದೆಹಲಿಯಲ್ಲಿ ಬೃಹತ್ ಜಾಥಾವನ್ನು ಹಮ್ಮಿಕೊಂಡಿವೆ. ಸಾಲದಿಂದ ರೈತರನ್ನು ಮುಕ್ತರನ್ನಾಗಿಸಬೇಕು, ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕಾನೂನು ಜಾರಿಗೊಳಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಲು ಬೃಹತ್ ರಾಲಿಯನ್ನು ಕೈಗೊಂಡಿದ್ದು, ದೇಶದ ವಿವಿಧೆಡೆಯಿಂದ 5 ಲಕ್ಷ ಜನ ರೈತರು ಸೇರುವ ನಿರೀಕ್ಷೆ ಇದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದ್ದಾರೆ.

ಒಂದೆಡೆ ಸೇರಲಿರುವ ಸುಪ್ರೀಂಕೋರ್ಟ್‌ನ ಎಲ್ಲ ಮಹಿಳಾ ಪೀಠಗಳು

ಇತಿಹಾಸದಲ್ಲೇ ಎರಡನೇ ಬಾರಿಗೆ ಜಸ್ಟೀಸ್ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟೀಸ್ ಆರ್ ಭಾನುಮತಿ ನೇತೃತ್ವದಲ್ಲಿ ಸುಪ್ರೀಂಕೋರ್ಟ್ನ ಮಹಿಳಾ ಪೀಠಗಳು ಒಂದೆಡೆ ಸೇರುವ ಅಪರೂಪದ ವಿದ್ಯಮಾನ ಬುಧವಾರ ನಡೆಯಲಿದೆ. ಈ ಹಿಂದೆ ೨೦೧೩ ರಲ್ಲಿ ಗ್ಯಾನ್ ಸುಧಾ ಮಿಶ್ರಾ ಹಾಗೂ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ಎಲ್ಲ ಮಹಿಳಾ ಪೀಠಗಳು ಒಂದೆಡೆ ಸೇರಿ ವಿಚಾರಣೆ ನಡೆಸಿದ್ದವು. ಅಂಥ ಇತಿಹಾಸ ಇಂದು ಮರುಕಳಿಸಲಿದೆ.

ಯುಎಸ್ ಓಪನ್; ಸೆಮಿಫೈನಲ್ ತಲುಪುವ ವಿಶ್ವಾಸದಲ್ಲಿ ಸಿಲಿಕ್

ಪ್ರತಿಷ್ಠಿತ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಎರಡನೇ ಕ್ವಾರ್ಟರ್‌ಫೈನಲ್ ಪಂದ್ಯವು ಇಂದು ನಡೆಯಲಿದೆ. ೨೦೧೪ರ ಯುಎಸ್ ಓಪನ್ ಚಾಂಪಿಯನ್, ಕ್ರೊವೇಷ್ಯಾದ ಮರಿನ್ ಸಿಲಿಕ್‌ಗೆ ಜಪಾನ್ ಆಟಗಾರ ಕೀ ನಿಶಿಕೊರಿ ಸವಾಲಾಗಿದ್ದಾರೆ. ಇದೇ ನಿಶಿಕೊರಿಯನ್ನು ೨೦೧೪ರ ಯುಎಸ್ ಓಪನ್ ಫೈನಲ್‌ನಲ್ಲಿ ಮಣಿಸಿ ಮೊಟ್ಟಮೊದಲ ಬಾರಿಗೆ ಗ್ರಾಂಡ್‌ಸ್ಲಾಮ್ ಗೆಲುವು ಸಾಧಿಸಿದ್ದ ಸಿಲಿಕ್, ಆನಂತರದಲ್ಲಿ ಮತ್ತೊಂದು ಗ್ರಾಂಡ್‌ಸ್ಲಾಮ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಇತ್ತ, ನಾಲ್ಕು ವರ್ಷಗಳ ಹಿಂದಿನ ಸೋಲಿಗೆ ಸೂಕ್ತ ಉತ್ತರ ನೀಡಲು ನಿಶಿಕೊರಿ ಕಾತರರಾಗಿದ್ದು, ಒಟ್ಟಾರೆ ಸಿಲಿಕ್ ಮತ್ತು ನಿಶಿಕೊರಿ ನಡುವಣದ ಕ್ವಾರ್ಟರ್‌ಫೈನಲ್ ಹಣಾಹಣಿ ಕುತೂಹಲ ಕೆರಳಿಸಿದೆ. ಪಂದ್ಯ ರಾತ್ರಿ ೧೦.೪೫ಕ್ಕೆ ಆರಂಭವಾಗುವ ನಿರೀಕ್ಷೆ ಇದೆ.

ರಫೇಲ್ ಟ್ವಿಸ್ಟ್ | ಮೋದಿ ಸರ್ಕಾರದ ‘ರಿಲಯನ್ಸ್’ ಸೂಚನೆ ಕುರಿತು ಬಾಯಿಬಿಟ್ಟ ಹೊಲಾಂದ್
ಯುವ ಮತದಾರರನ್ನು ಸೆಳೆಯುವ ಅಸ್ತ್ರ ಆಗಲಿದೆಯೇ ಸರ್ಜಿಕಲ್‌ ದಾಳಿ ದಿನಾಚರಣೆ?
ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು
Editor’s Pick More