ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ೧೦ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಯ ಸಂಕ್ಷಿಪ್ತ ಸಾರ  

ಕೊಡಗು ಪುನರ್‌ ನಿರ್ಮಾಣಕ್ಕೆ ಅನುದಾನ ಕೋರಲು ಸೆ.೧೧ಕ್ಕೆ ಸಿಎಂ ದೆಹಲಿಗೆ?

ಪ್ರವಾಹದಿಂದಾಗಿ ತತ್ತರಿಸಿರುವ ಕೊಡಗಿನ ಪುನರ್‌ ನಿರ್ಮಾಣಕ್ಕಾಗಿ ಅನುದಾನ ಒದಗಿಸುವಂತೆ ಕೋರಲು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸೆಪ್ಟೆಂಬರ್ ೧೧ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಕುಮಾರಸ್ವಾಮಿ ಅವರ ಜೊತೆ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರನ್ನೊಳಗೊಂಡ ಸಂಸದರ ನಿಯೋಗವನ್ನು ಪ್ರಧಾನಿಯವರ ಬಳಿಗೆ ಕುಮಾರಸ್ವಾಮಿ ಅವರು ಕೊಂಡೊಯ್ಯಲಿದ್ದಾರೆ ಎನ್ನಲಾಗಿದೆ. ಕಳೆದ ವಾರ ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ಅವರು ಪ್ರಧಾನಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್‌, ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಪರಿಹಾರಕ್ಕೆ ಮನವಿ ಮಾಡಿದ್ದರು. ಮೋದಿಯುವರು ನೇಪಾಳ ಪ್ರವಾಸದಲ್ಲಿದ್ದುದರಿಂದ ಅವರನ್ನು ಭೇಟಿ ಮಾಡಲು ಕುಮಾರಸ್ಚಾಮಿ ಅವರಿಗೆ ಸಾಧ್ಯವಾಗಿರಲಿಲ್ಲ.

ಸಿಎಂ ಆಪ್ತರ ಮೇಲಿನ ದಾಳಿ ರಾಜಕೀಯ ಪ್ರೇರಿತವಲ್ಲ: ಐಟಿ ಸ್ಪಷ್ಟನೆ

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳ ವ್ಯಾವಹಾರಿಕ ಚಟುವಟಿಕೆಗಳ ಉಸ್ತುವಾರಿ ಹೊತ್ತಿರುವ ಚಾರ್ಟರ್ಡ್‌ ಅಕೌಂಟೆಂಟ್ ಎಚ್ ಬಿ ಸುನಿಲ್‌ ಅವರ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿಗೆ ಬಿ ಎಸ್‌ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ ವೈ ವಿಜಯೇಂದ್ರ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪವನ್ನು ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ತಮಿಳ್ ಸೆಲ್ವಂ ಅಲ್ಲಗಳೆದಿದ್ದಾರೆ. ಯಾವುದೇ ರಾಜಕಾರಣಿ ಅಥವಾ ಅವರ ಕುಟುಂಬಸ್ಥರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿಲ್ಲ. ಇಲಾಖೆ ಸಂಗ್ರಹಿಸಿದ ದಾಖಲೆಗಳ ಆಧಾರದಲ್ಲಿ ದಾಳಿ ನಡೆಸಲಾಗಿದೆ. ಆದಾಯ ತೆರಿಗೆ ಇಲಾಖೆಯು ನಿಷ್ಪಕ್ಷಪಾತವಾಗಿ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಆಪ್ತರ ಮೇಲಿನ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ತಿಳಿದಿದೆ ಯಡಿಯೂರಪ್ಪ ಅವರ ಪುತ್ರ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿದ್ದು ತಮಗೆ ತಿಳಿದಿದೆ ಎಂದು ಕುಮಾರಸ್ವಾಮಿ ಅವರು ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ರಾಷ್ಟ್ರ ರಾಜಧಾನಿಯಲ್ಲಿ ರೈತ-ಕಾರ್ಮಿಕರ ಬೃಹತ್ ಪ್ರತಿಭಟನೆ

ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ಕಾರ್ಮಿಕರ ಕಾಯ್ದೆಯನ್ನು ಜಾರಿಗೆ ತರುವುದರ ಜೊತೆಗೆ 18 ಸಾವಿರಗಳ ವರೆಗೆ ಕನಿಷ್ಠ ವೇತನ ನಿಗದಿ ಪಡಿಸಬೇಕು, ಅಂಗನವಾಡಿ ಮತ್ತು ಆಶಾ ಕಾರ್ಯಾಕರ್ತೆಯರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಕಿಸಾನ್ - ಮಜ್ದೂರ್ ಬೃಹತ್ ಮೆರವಣಿಗೆ ನಡೆದಿದೆ. ದೇಶದ ಹಲವು ಸಂಘಟನೆಗಳ ಕಾರ್ಯಕರ್ತರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ರೈತರು, ಅಂಗನವಾಡಿ ಕಾರ್ಯಕರ್ತೆಯರು, ಸಂಸತ್ ರಸ್ತೆಯುದ್ದಕ್ಕೂಮೆರವಣಿಗೆ ನಡೆಸಿದ ನಂತರ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

ಬರಹಗಾರರ ಕಲ್ಪನೆಯ ಸ್ವತಂತ್ರವನ್ನು ಆನಂದಿಸಬೇಕು; ಸುಪ್ರೀಂ ಕೋರ್ಟ್ ಆದೇಶ

ಮಲಯಾಳಂ ಭಾಷೆಯ ‘ಮೀಶಾ’ ಕಾದಂಬರಿಯನ್ನು ನಿಷೇಧಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿ ಹಾಕಿ ಕಾದಂಬರಿಕಾರರ ಪರ ಆದೇಶ ನೀಡಿದೆ. ಬರಹಗಾರರ ಸ್ವಾತಂತ್ರ್ಯವನ್ನು ಆನಂದಿಸಬೇಕು ಲೇಖಕರಿಗೆ ಅಭಿಪ್ರಾಯ ಸ್ವಾತಂತ್ರ್ಯ ಅವರ ಮೂಲಭೂತ ಹಕ್ಕು. ಪೂರ್ವಾಗ್ರಹಗಳುಳ್ಳ ಯಾರದೋ ಅಭಿಪ್ರಾಯಕ್ಕೆ ಲೇಖಕಕರನ್ನು ಸೆರೆಯಾಳುಗಳನ್ನಾಗಿಸಬಾರದು ಎಂದು ನ್ಯಾಯಾಧೀಶ ಡಿ ವೈ ಚಂದ್ರಚೂಡ ಅಭಿಪ್ರಾಯಪಟ್ಟರು. ಕಾದಂಬರಿಯಲ್ಲಿ ಹಿಂದೂ ಮಹಿಳೆಯನ್ನು ಅವಮಾನಿಸಲಾಗಿದೆ ಹಾಗೂ ಅಶ್ಲೀಲವಾಗಿ ಚಿತ್ರಿಸಿಲಾಗಿದೆ ಎಂದು ಆರೋಪಿಸಲಾಗಿತ್ತು. ಮೀಶಾ ಕಾದಂಬರಿಯನ್ನು ಕೇರಳದ ಎಸ್ ಹರೀಶ್ ಅವರು ಬರೆದಿದ್ದಾರೆ.

ಒಂದು ಸಾವಿರ ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಸಿಎಂ ಕುಮಾರಸ್ವಾಮಿ

ರಾಜ್ಯದಲ್ಲಿನ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಮಾಡಲು ಹೊಸದಾಗಿ ಒಂದು ಸಾವಿರ ಶಿಕ್ಷಕರನ್ನು ಶೀಘ್ರದಲ್ಲೇ ನೇಮಕ ಮಾಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ವೇಳೆ ಮಾತನಾಡಿದ ಅವರು, “ಇಂಗ್ಲಿಷ್ ಕೇವಲ ಖಾಸಗಿ ಶಾಲೆಗಳ ಶ್ರೀಮಂತರ ಮಕ್ಕಳಿಗೆ ಎಂಬ ಭಾವನೆ ದೂರ ಮಾಡುವ ನಿಟ್ಟಿನಲ್ಲಿ ಹಾಗೂ ಬಡವರ ಮಕ್ಕಳು ಇಂಗ್ಲಿಷ್ ಕಲಿಯಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ,” ಎಂದು ತಿಳಿಸಿದರು.

ಶಿರಾಡಿ ಘಾಟ್ - ಲಘು ವಾಹನಗಳಿಗೆ ಸಂಚಾರ ಮುಕ್ತ: ದ ಕ ಜಿಲ್ಲಾಧಿಕಾರಿ ಆದೇಶ

ಶಿರಾಡಿ ಘಾಟ್ ರಸ್ತೆಯನ್ನು ಲಘು ವಾಹ‌ನಗಳ ಸಂಚಾರಕ್ಕೆ ತಕ್ಷಣದಿಂದಲೇ ಮುಕ್ತ ಮಾಡಿ ದ.ಕ. ಜಿಲ್ಲಾಧಿಕಾರಿ ಬುಧವಾರ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಪ್ರಸಕ್ತ ಭೂ ಕುಸಿತ ಸ್ಥಳಗಳನ್ನು ದುರಸ್ತಿ ಮಾಡಲಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವರದಿ ನೀಡಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ನಡೆಸಿ, ವರದಿ ನೀಡಲು ರಾಷ್ಟ್ರೀಯ ಹೆದ್ದಾರಿ ಕಾರ್ಯಕಾರಿ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ತಂಡ ನೇಮಿಸಿದ್ದರು.

ದೀಪಾ ಮೆಹ್ತಾ ನಿರ್ದೇಶನದಲ್ಲಿ ‘ಫನ್ನಿ ಬಾಯ್’

ದೀಪಾ ಮೆಹ್ತಾ ತಮ್ಮ ನಿರ್ದೇಶನದ ಹೊಸ ಸಿನಿಮಾ ಘೋಷಿಸಿದ್ದಾರೆ. ಕೆನಡಾ ಮೂಲದ ಲೇಖಕ ಶ್ಯಾಂ ಸೆಲ್ವದುರೈ ಅವರ ‘ಫನ್ನಿ ಬಾಯ್‌’ ಕೃತಿಯನ್ನು ಅದೇ ಶೀರ್ಷಿಕೆಯಡಿ ಅವರು ತೆರೆಗೆ ತರುತ್ತಿದ್ದಾರೆ. ಹದಿನೇಳು ವರ್ಷದ ಇಬ್ಬರು ಹುಡುಗರ ಕತೆಯಿದು. 2019ರ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಶ್ರೀಲಂಕಾ ಮತ್ತು ತಮಿಳುನಾಡಿನಲ್ಲಿ ಶೂಟಿಂಗ್ ನಡೆಸುವ ಯೋಜನೆ ಅವರದು. ಈ ಹಿಂದೆ ದೀಪಾ ಮೆಹ್ತಾ ಅವರು ಲೇಖಕ ಸಲ್ಮಾನ್ ರಶ್ದಿ ಅವರ ‘ಮಿಡ್‌ನೈಟ್ಸ್‌ ಚಿಲ್ಡ್ರನ್‌’ ಮತ್ತು ‘ಕ್ರ್ಯಾಕಿಂಗ್‌ ಇಂಡಿಯಾ’ (ಅರ್ಥ್‌) ಕೃತಿಗಳನ್ನು ತೆರೆಗೆ ಅಳವಡಿಸಿದ್ದರು.

ರಫೆಲ್ ಮಧ್ಯವರ್ತಿಗಳನ್ನು ಜೈಲಿಗಟ್ಟುತ್ತೇವೆ- ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಫೆಲ್ ಯುದ್ಧ ವಿಮಾನ ಖರೀದಿ ಅವ್ಯವಹಾರ ಪ್ರಕರಣದ ಮಧ್ಯವರ್ತಿಗಳು ಮತ್ತು ಫಲಾನುಭವಿಗಳು ದಂಡನೆ ಗುರಿಯಾಗುತ್ತಾರೆ ಮತ್ತು ಅವರನ್ನು ಜೈಲಿಗೆ ಅಟ್ಟುತ್ತೇವೆ ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ. ಕಾನ್ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪ್ರಿಯಾಂಕ ಚತುರ್ವೇದಿ, ರಫೆಲ್ ಯುದ್ಧ ವಿಮಾನ ವಹಿವಾಟಿನಿಂದಾಗಿ ದೇಶದ ಬೊಕ್ಕಸಕ್ಕೆ 41 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂರಿದರು. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ ಡಿಎ ಸರ್ಕಾರ, ಫ್ರಾನ್ಸ್ ಸರ್ಕಾರದೊಂದಿಗೆ ನಡೆಸಿರುವ ರಫೆಲ್ ಖರೀದಿ ವ್ಯವಹಾರದ ದಾಖಲೆ ಪತ್ರಗಳನ್ನು ಕೂಡ ಇದೇ ವೇಳೆ ಅವರು ಪ್ರಕಟಿಸಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ರಫೇಲ್‌ ಡೀಲ್‌ ಕುರಿತಾದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರೂಪಿಸಬೇಕೆಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಬೇಡಿಕೆಯನ್ನು ಕೇಂದ್ರ ಸರಕಾರ ಯಾಕೆ ಪುರಸ್ಕರಿಸಿಲ್ಲ ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.

ಉಚಿತ ಟುಟೋರಿಯಲ್ಸ್‌ ಆಫರ್ ನೀಡಿದ ಏಷ್ಯಾಡ್ ಪದಕ ವಿಜೇತ

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಬ್ರಿಡ್ಜ್ ವಿಭಾಗದ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಪ್ರಣಬ್ ಬರ್ದನ್ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿ ತಂದಿತ್ತ ಬ್ರಿಡ್ಜ್‌ ಕ್ರೀಡೆಗೆ ಪ್ರತಿಯಾಗಿ ಕೊಡಲು ಅವರು ಈ ನಿರ್ಧಾರ ತಳೆದಿದ್ದಾರೆ. "ಎಳೆಯ ಆಟದಲ್ಲಿ ನಾನು ಯಶ ಕಂಡೆ. ಮಕ್ಕಳು, ಯುವಕರು ಈ ಕ್ರೀಡೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಡಲು ಸೂಕ್ತ ಮಾರ್ಗದರ್ಶನದ ಅಗತ್ಯವಿರುತ್ತದೆ. ಅಂಥವರಿಗೆ ನಾನು ಉಚಿತ ಟುಟೋರಿಯಲ್ಸ್ ನಡೆಸಲು ಉತ್ಸುಕನಾಗಿದ್ದೇನೆ. ಒಟ್ಟಾರೆ, ನನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿತ್ತ ಕ್ರೀಡೆಗೆ ನಾನು ಪ್ರತಿಯಾಗಿ ಏನನ್ನಾದರೂ ನೀಡಬಯಸುತ್ತಿದ್ದು, ಅದಕ್ಕಾಗಿ ಈ ನಿರ್ಧಾರ ತಳೆದಿದ್ದೇನೆ,'' ಎಂದು ಪ್ರಣಬ್ ಪಿಟಿಐಗೆ ತಿಳಿಸಿದ್ದಾರೆ.

ಆರ್‌ಸಿಬಿ ಕೋಚಿಂಗ್ ಸಿಬ್ಬಂದಿಯಲ್ಲಿ ನೆಹ್ರಾಗೆ ಪ್ರಮುಖ ಸ್ಥಾನ

ಭಾರತ ತಂಡದ ಮಾಜಿ ಎಡಗೈ ವೇಗದ ಬೌಲರ್ ಆಶೀಶ್ ನೆಹ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ತರಬೇತುದಾರರ ಸಿಬ್ಬಂದಿಯಲ್ಲಿ ಪ್ರಮುಖ ಸ್ಥಾನ ವಹಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ಆರಂಭಿಕ ಗ್ಯಾರಿ ಕರ್ಸ್ಟನ್ ಈಗಾಗಲೇ ಡೇನಿಯಲ್ ವೆಟೋರಿ ಸ್ಥಾನವನ್ನು ತುಂಬಿದ್ದು ತಂಡದ ಪ್ರಮುಖ ಕೋಚ್ ಆಗಿ ನೇಮಕವಾಗಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಹೀಗೆ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಗಳಲ್ಲಿ ಆಡಿರುವ ನೆಹ್ರಾ, ಆರ್‌ಸಿಬಿ ತಂಡದ ತರಬೇತುದಾರರ ನಾಯಕತ್ವ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ಆವೃತ್ತಿಯಲ್ಲಾದರೂ ಕಪ್ ಗೆಲ್ಲಬೇಕೆಂಬ ಆರ್‌ಸಿಬಿ ಬಯಕೆಗೆ ನೆಹ್ರಾ ಆಯ್ಕೆ ನೆರವಾಗಬಹುದು ಎಂಬ ಆಶಯ ಇರಿಸಿಕೊಳ್ಳಲಾಗಿದೆ.

ಇಲ್ಲಿ ಯಾವುದೇ ಹಗೆತನವಿಲ್ಲ ಎಂದು ಮಾನಸ ಸರೋವರವನ್ನು ಬಣ್ಣಿಸಿದ ರಾಹುಲ್ ಗಾಂಧಿ

ಕೈಲಾಸ ಮಾನಸಸರೋವರ ಯಾತ್ರೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ವಾತಾವರಣ ಹಾಗೂ ನೀರನ್ನು ಬಣ್ಣಿಸಿ ಮಾನಸ ಸರೋವರ ವಾತಾವರಣದಲ್ಲಿ ಯಾವುದೇ ದ್ವೇಷವಿಲ್ಲ. ಯಾರೂ ಬೇಕಾದರೂ ಇಲ್ಲಿ ನೀರು ಕುಡಿಯಬಹುದು ಇಲ್ಲಿ ಹಗೆತನವಿಲ್ಲ, ಹಾಗಾಗಿಯೇ ಭಾರತದಲ್ಲಿ ನೀರನ್ನು ಪೂಜಿಸಲಾಗುತ್ತದೆ ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More