ಪೊಲೀಸರ ಸಾಕ್ಷ್ಯಗಳನ್ನು ಸಮರ್ಥಿಸದ ಎಲ್ಗಾರ್ ಪರಿಷತ್ ವಿಡಿಯೋಗಳು

ಈವರೆಗೂ ಎಲ್ಗಾರ್ ಪರಿಷತ್‌ನಲ್ಲಿ ಭಾಷಣಕಾರರು ಏನು ಮಾತನಾಡಿದ್ದರು ಎನ್ನುವ ಸಂಪೂರ್ಣ ವಿವರಗಳು ಲಭ್ಯವಿರಲಿಲ್ಲ. ‘ಭಾಷಣಕಾರರು ಹಿಂಸೆಗೆ ಪ್ರಚೋದಿಸಿದ್ದರು’ ಎನ್ನುವ ಆರೋಪ ಮಾತ್ರ ವ್ಯಕ್ತವಾಗಿತ್ತು. ಇದೀಗ ‘ಎನ್‌ಡಿಟಿವಿ’ ಈಗ ಬಹಿರಂಗಪಡಿಸಿದ ಭಾಷಣದ ವಿಡಿಯೋಗಳು ಇಲ್ಲಿವೆ

ನಕ್ಸಲ್ ಸಂಪರ್ಕವಿದೆ ಎಂದು ಜೂನ್ ಮತ್ತು ಆಗಸ್ಟ್‌ನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ಹತ್ತು ಮಂದಿಯ ಮೇಲೆ ಇರುವ ಅತೀ ಮುಖ್ಯ ಆರೋಪವೆಂದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್‌ನಲ್ಲಿ ಅವರು ನಿರ್ವಹಿಸಿದ ಪಾತ್ರ. ೨೦೦ ವರ್ಷಗಳ ಹಿಂದೆ ಪೇಶ್ವೆಗಳನ್ನು ಸೋಲಿಸಿದ ಪರಿಶಿಷ್ಟ ಜಾತಿಯ ಸಣ್ಣ ಪಡೆಯ ವಿಜಯೋತ್ಸವ ಆಚರಿಸುವ ಭೀಮಾ ಕೋರೆಗಾಂವ್‌ ಸಂಭ್ರಮಕ್ಕೆ ಕೆಲವೇ ದಿನಗಳ ಮೊದಲು ಎಲ್ಗಾರ್ ಪರಿಷತ್ ನಡೆದಿತ್ತು. ಭೀಮಾ ಕೋರೆಗಾಂವ್ ಸಂಭ್ರಮವು ಕೊನೆಗೆ ಎರಡು ಸಮುದಾಯಗಳ ನಡುವಿನ ಹಿಂಸೆಯಾಗಿ ಪರಿವರ್ತನೆಯಾಗಿತ್ತು. ಈ ಹಿಂಸೆಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿ ಹಲವರು ಗಾಯಗೊಂಡರು. ಹೀಗಾಗಿ ಎಲ್ಗಾರ್ ಪರಿಷತ್ ಆಯೋಜಿಸಲು ನೆರವಾದ ಮಾವೋವಾದಿಗಳು ಈ ಸಂಘರ್ಷವನ್ನು ಪೂರ್ವ ಯೋಜನೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಮರ್ ಖಾಲೀದ್ ಮತ್ತು ಜಿಗ್ನೇಶ್ ಮೇವಾನಿ ಹೆಸರುಗಳೂ ಇವೆ. ಮತ್ತೊಂದರಲ್ಲಿ ಮಹಾರಾಷ್ಟ್ರದ ಎಡಪಂಥೀಯ ಸಂಘಟನೆಗಳ ಆರು ಪ್ರತಿನಿಧಿಗಳ ಹೆಸರಿವೆ.

ಇದನ್ನೂ ಓದಿ : ಭೀಮಾ ಕೋರೆಗಾಂವ್‌ ವಿಜಯೋತ್ಸವ ದಲಿತರಿಗೇಕೆ ಮುಖ್ಯ? ನೋಡಿ ಈ ಸಾಕ್ಷ್ಯಚಿತ್ರ

ಆದರೆ ಈವರೆಗೂ ಎಲ್ಗಾರ್ ಪರಿಷತ್‌ನಲ್ಲಿ ಭಾಷಣಕಾರರು ಏನು ಮಾತನಾಡಿದ್ದರು ಎನ್ನುವ ಸಂಪೂರ್ಣ ವಿವರಗಳು ಲಭ್ಯವಿರಲಿಲ್ಲ. ‘ಭಾಷಣಕಾರರು ಹಿಂಸೆಗೆ ಪ್ರಚೋದಿಸಿದ್ದರು’ ಎನ್ನುವ ಆರೋಪ ಮಾತ್ರ ವ್ಯಕ್ತವಾಗಿತ್ತು. ಎಲ್ಗಾರ್ ಪರಿಷತ್‌ನಲ್ಲಿ ಭಾಗವಹಿಸಿದ ಆರೋಪದ ಹಿನ್ನೆಲೆಯಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿದ್ದು, ಆರು ರಾಜ್ಯಗಳಲ್ಲಿ ೧೭ ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಿ ತನಿಖೆ ಮಾಡಿದ್ದಾರೆ. ಇದು ದೊಡ್ಡ ಮಾವೋವಾದಿ ಪಿತೂರಿ ಎಂದು ಪೊಲೀಸರು ತಿಳಿಸಿದ್ದರು.

ಆದರೆ ಎನ್‌ಡಿಟಿವಿಗೆ ಸಿಕ್ಕಿರುವ ಎಲ್ಗಾರ್ ಪರಿಷತ್‌ನ ವಿಡಿಯೋಗಳು ಬೇರೆಯೇ ವಿವರ ನೀಡಿವೆ. ಪುಣೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಜೊತೆಗೂಡಿ ಸಂವಿಧಾನದ ರಕ್ಷಣೆಗೆ ತಮ್ಮ ಬದ್ಧತೆಯನ್ನು ಪ್ರಕಟಿಸಿದ್ದರು. ಎಲ್ಗಾರ್ ಪರಿಷತ್‌ ಮರುದಿನ ಭೀಮಾ ಕೋರೆಗಾಂವ್‌ ಗ್ರಾಮದಲ್ಲಿ ಜಾತಿಗಳ ನಡುವೆ ಹಿಂಸೆಗೆ ಕಾರಣವಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ಫೇಸ್‌ಬುಕ್‌ನಲ್ಲಿ ಹಾಕಲಾಗಿರುವ ಎಲ್ಗಾರ್ ಪರಿಷತ್ ಕಾರ್ಯಕ್ರಮದ ವಿಡಿಯೋಗಳು ಇದಕ್ಕೆ ಪುಷ್ಠಿ ನೀಡುವುದಿಲ್ಲ. ಎಲ್ಗಾರ್ ಪರಿಷತ್‌ನಲ್ಲಿ, “ಇಂದು ಶೌರ್ಯ ದಿನದ ೨೦೦ನೇ ವಾರ್ಷಿಕೋತ್ಸವದ ಅಂಗವಾಗಿ ಭೀಮಾ ಕೋರೆಗಾಂವ್‌ನಲ್ಲಿ ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪಣ ತೊಡುತ್ತೇವೆ” ಎಂದು ಶಪಥ ಮಾಡುವ ಮೂಲಕ ಕಾರ್ಯಕ್ರಮ ಕೊನೆಗೊಳಿಸಲಾಗಿದೆ.

“ಸಂವಿಧಾನದ ವಿರುದ್ಧ ಮಾತನಾಡುವವರನ್ನು ಅಥವಾ ವಿರೋಧಿಸುವವರನ್ನು ನಾವು ಬೆಂಬಲಿಸುವುದಿಲ್ಲ. ಸಂವಿಧಾನದ ವಿರೋಧಿಗಳಾದ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ನಾವೆಂದೂ ಮತ ಹಾಕುವುದಿಲ್ಲ” ಎಂದು ಕಾರ್ಯಕ್ರಮಕ್ಕೆ ಸೇರಿದ ಜನಸಮೂಹ ಜೊತೆಗೂಡಿ ಒಪ್ಪಿಕೊಂಡಿದ್ದರು. ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿಕೊಂಡಿರುವ ಒಬ್ಬ ಆರೋಪಿಯಾಗಿರುವ ಎಡಪಂಥೀಯ ಕಾರ್ಯಕರ್ತ ಹರ್ಷಾಲಿ ಪೋತದಾರ್ ಅವರು ಈ ಶಪಥವನ್ನು ಘೋಷಿಸಿದ್ದರು. ಮತ್ತೊಂದು ಎಫ್‌ಐಆರ್‌ನಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲೀದ್ ಅವರು ಪರಿಷತ್‌ನಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿರುವುದಾಗಿ ದಾಖಲಿಸಲಾಗಿದೆ.

ತಮ್ಮ ೨೦ ನಿಮಿಷಗಳ ಭಾಷಣದಲ್ಲಿ ಮೇವಾನಿ ಮತ್ತು ಖಾಲಿದ್ ಅವರು, ಆರ್‌ಎಸ್‌ಎಸ್‌ ಮತ್ತು ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವು ಮತ್ತು ಎತ್ತಿ ಹಿಡಿಯುವ ಬಗ್ಗೆಯೇ ಮಾತನಾಡಿದ್ದಾರೆ. “ನಾವೆಲ್ಲರೂ ಒಂದಾದಲ್ಲಿ ಮೋದಿ ಸರ್ಕಾರವನ್ನು ಶೇ. ೧೧೦ರಷ್ಟು ಉರುಳಿಸಬಹುದು. ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬಹುದು” ಎಂದು ಮೇವಾನಿ ಹೇಳಿದ್ದಾರೆ. ಉಮರ್ ಖಾಲೀದ್ ಅವರು, “ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯೇ ನಮ್ಮ ಕರ್ತವ್ಯ. ಮಾನವೀಯತೆಯೂ ಅಪಾಯದಲ್ಲಿದೆ. ಮಾನವೀಯತೆಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದರು.

ಎಡಪಂಥೀಯ ಮರಾಠಿ ಪತ್ರಿಕೆ ‘ವಿದ್ರೋಹಿ’ಯ ಸಂಪಾದಕ ಸುಧೀರ್ ಧಾವಳೆ ಅವರು ಸ್ವಲ್ಪ ಉಗ್ರವಾಗಿ ಭಾಷಣ ಮಾಡಿದ್ದರು. “ಶೋಷಣೆ ಕಂಡರೆ ಬಂಡಾಯವೇಳಬೇಕು. ನಾವು ಆರ್‌ಎಸ್‌ಎಸ್‌ನಿಂದ ಸ್ವತಂತ್ರವಾಗಬೇಕು” ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಪರಿಷತ್ ಆಯೋಜಿಸಿದ ನಿವೃತ್ತ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಕೋಲ್ಸೆ ಪಾಟೀಲ್ ಅವರು ಧಾವಳೆ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. “ಕವಿತೆಯ ಭಾಗವಾಗಿ ಅವರು ಬಂಡಾಯದ ಮಾತನಾಡಿದ್ದಾರೆ. ಅವರು ಮೂಲತಃ ಕವಿ. ಎಡಪಂಥೀಯರಾಗಿರುವ ಅವರು ಬಂಡವಾಳಶಾಹಿ ವಿರುದ್ಧ ಬರೆಯುತ್ತಾರೆ” ಎಂದು ಕೋಲ್ಸೆ ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More