ಬೂದಿಮಳೆ ಕುರಿತು ಉಡುಪಿಯ ಜನ ಕೇಳುವ ಪ್ರಶ್ನೆಗಳಿಗೆ ಸರ್ಕಾರ ಕಿವಿಗೊಡುವುದೇ?

ಉಡುಪಿಯಲ್ಲಿ ಬೂದಿಮಳೆಯಾಗಿ ಒಂದು ತಿಂಗಳು ಗತಿಸಿದೆ. ವಿಶ್ಲೇಷಣಾ ವರದಿಗಳು ಕೂಡ ಮಳೆಯಲ್ಲಿ ಬೂದಿಯ ಅಂಶ ಇರುವುದನ್ನು ಒಪ್ಪಿಕೊಂಡಿವೆ. ಆದರೆ ಅದರ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚದೇ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ

ಆಗಸ್ಟ್ 3 ಮತ್ತು 4. ಕರಾವಳಿಯ ಬಹುತೇಕ ಕಡೆ ಮಳೆ ಸುರಿಯುತ್ತಿತ್ತು. ಆದರೆ ಉಡುಪಿ ನಗರದ ಜನ ಕಳವಳಗೊಂಡರು. ಕಾರಣ ನಗರದ ರಥಬೀದಿ, ಕಲ್ಸಂಕ, ಕಡಿಯಾಳಿ, ಮಿಷನ್ ಕಾಂಪೌಂಡ್, ಮಣಿಪಾಲ ಸುತ್ತಮುತ್ತ ಸುರಿದ ಮಳೆ ಸಹಜವಾಗಿರಲಿಲ್ಲ. ಬಿಳಿ ಮತ್ತು ಹಳದಿ ಬಣ್ಣದ ಬೂದಿ ನೀರಿನೊಂದಿಗೆ ಇಳಿಯುತ್ತಿತ್ತು. ನೀರಿನ ಹನಿಯೂ ಗಡುಸಾಗಿತ್ತು. ಗಿಡಗಳ ಮೇಲೆ, ರಸ್ತೆ ಬದಿ ನಿಲ್ಲಿಸಿದ್ದ ಬೈಕಿನ ಮೇಲೆ ಹೀಗೆ ಎಲ್ಲೆಂದರಲ್ಲಿ ಬೂದಿಮಳೆಯದ್ದೇ ಅವಾಂತರ. ಪಕ್ಕದ ಕುಂದಾಪುರದಲ್ಲಿಯೂ ಇದೇ ಸ್ಥಿತಿ.

ಸಾಮಾಜಿಕ ಜಾಲತಾಣಗಳಲ್ಲೂ ಬೂದಿಮಳೆಯದ್ದೇ ಚರ್ಚೆ. ಉಡುಪಿಯಲ್ಲೇನೂ ಹಾರುಬೂದಿ ಸೂಸುವ ಕಾರ್ಖಾನೆಗಳಿರಲಿಲ್ಲ ಆದರೂ ಬೂದಿಮಳೆಯಾಗಿದ್ದು ಹೇಗೆ ಎಂಬ ಅಚ್ಚರಿ. ಎನ್ ಕೆ ಮಧ್ಯಸ್ಥ ರೀತಿಯ ಪರಿಸರ ತಜ್ಞರು ಇದು ಪರಾಗ ಮಳೆ ಇರಬಹುದು ಎಂದು ಊಹಿಸಿದರು. ಭೂಗರ್ಭ ಶಾಸ್ತ್ರಜ್ಞರು ಕೂಡ ಇಂತಹ ಮಳೆಗೆ ಕಾರಣವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿಲ್ಲ. ಇದೇ ವೇಳೆ ಅನುಮಾನದ ಅಲೆ ಉಡುಪಿಗೆ ಅನತಿ ದೂರದಲ್ಲಿರುವ ಪಡುಬಿದ್ರಿ ಸಮೀಪದ ಯೆಲ್ಲೂರು ಬಳಿ ತಲೆ ಎತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದತ್ತ ಹರಿಯಿತು. ಅದು ಅದಾನಿ ಒಡೆತನದ ಕಂಪೆನಿ. ಯುಪಿಸಿಎಲ್ ಮುಖ್ಯಸ್ಥರು ಆಗಸ್ಟ್ 4ರಂದು ಪ್ರತಿಕ್ರಿಯಿಸಿ, “ರಾಜ್ಯದಲ್ಲಿ ಜಲಾಶಯಗಳು ತುಂಬಿದ್ದು, ವಿದ್ಯುತ್ ಗೆ ಬೇಡಿಕೆ ಕಡಿಮೆ ಇರುವ ಹಿನ್ನೆಲೆಯಲ್ಲಿ (ಘಟಕ) ತಾತ್ಕಾಲಿಕವಾಗಿ ಕಾರ್ಯ ಸ್ಥಗಿತಗೊಳಿಸಿದೆ. ಹೀಗಿರುವಾಗ ಹಾರುಬೂದಿ ಪ್ರಶ್ನೆಯೇ ಉದ್ಭವಿಸದು,” ಎಂದರು. ಕೆಲವರು ಅದಕ್ಕೆ ಪೂರಕವಾಗಿ “ಅರಬ್ ರಾಷ್ಟ್ರಗಳಿಂದ ಹಾರಿದ ಬೂದಿ ಉಡುಪಿಯಲ್ಲಿ ಬಿದ್ದಿರಬೇಕು,” ಎಂಬ ಲಹರಿಯೊಂದನ್ನು ಹರಿಬಿಟ್ಟರು.

ಈ ಮಧ್ಯೆ “ಉಡುಪಿಯಲ್ಲಿ ಬಿದ್ದದ್ದು ಹಾರುಬೂದಿಯಲ್ಲ ಬದಲಿಗೆ ಸಿಲಿಕಾ,” ಎಂದು ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಆಗಸ್ಟ್ 20ರಂದು ಹೇಳಿಕೆ ನೀಡಿತು. ಇದಕ್ಕೆ ಉಡುಪಿ ಜನತೆಯಿಂದ ಭಾರಿ ಆಕ್ಷೇಪ ವ್ಯಕ್ತವಾಯಿತು. ಸಾಮಾಜಿಕ ಕಾರ್ಯಕರ್ತ ರಾಜಾರಾಂ ತಲ್ಲೂರು ಹಾರುಬೂದಿಯನ್ನೇ ಉದ್ದೇಶಿಸಿ ವ್ಯಂಗ್ಯಭರಿತ ಬಹಿರಂಗ ಪತ್ರವೊಂದನ್ನು ಬರೆದರು: “ಆಗಸ್ಟ್ 3-4 ರಂದು ಉಡುಪಿ ಮಣಿಪಾಲಗಳಲ್ಲಿ ಸುರಿದಿರುವ ಹಾರುಬೂದಿ ಎಂದು ನಾವಂದುಕೊಂಡಿರುವ ನಿಗೂಢ ವಸ್ತುವೇ, ನಮಸ್ಕಾರ!

ನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯು ನೀನು ‘ಸಿಲಿಕಾ’ ಎಂದು ತೀರ್ಮಾನ ಕೊಟ್ಟಿದೆ. ಅದಕ್ಕೆಂದೇ “ಮಣಿಪಾಲದ ಭೂಗರ್ಭಜ್ಞರು ಮತ್ತು ಎನ್ ಐ ಟಿ ಕೆ ಸುರತ್ಕಲ್ಲಿನ ತಜ್ಞರು ಅದು ಸಿಲಿಕಾ ಎಂದು ಗುರುತಿಸಿದ್ದಾರೆ” ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದು ಬೆಳಗ್ಗೆ ನೋಡಿದ್ದೇನೆ.

ನೀನು ಗಲ್ಫಿನಿಂದ ಬಂದದ್ದು ಹೌದಾದರೆ, ನಿನಗೆ ಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿ ಇರುವ ಉಡುಪಿಯೇ ಏಕೆ ಕಣ್ಣಿಗೆ ಬಿತ್ತು ಎಂದು ಗೊತ್ತಾಗಲಿಲ್ಲ. ಹೆಚ್ಚಿನಂಶ ಇಲ್ಲಿನವರು ಬಹಳ ಮಂದಿ ದುಬಾಯಿಯಂತಹ ಕಡೆ ಇರುವವರ ಮೂಲ ಉಡುಪಿ ಆಗಿರುವುದರಿಂದ ಅವರ ಮಣ್ಣಿನ ಋಣ ತೀರಿಸಲು ನೀನು ಇಲ್ಲಿಗೆ ಬಂದದ್ದಿರಬೇಕು ಎಂದುಕೊಂಡಿದ್ದೇನೆ. ಇರಲಿ. ಗಲ್ಫಿನಲ್ಲಿ ಎಲ್ಲವೂ ಕುಶಲವೇ? ಕ್ಷೇಮವೇ?!!” ಎಂದು ಕಟುಕುತ್ತದೆ ಪತ್ರ.

ಮುಂದುವರಿದು, “ಸುಡುವ ಕಲ್ಲಿದ್ದಲು ಎಲ್ಲಿಂದ ಬಂದಿದೆ ಎಂಬುದನ್ನಾಧರಿಸಿ, ಅದರ ಹಾರುಬೂದಿಯಲ್ಲಿ ಬೇರೆ ಬೇರೆ ಅಂಶಗಳಿರಬಹುದು. ಆದರೆ ಈ ಮೂರು ಅಂಶಗಳು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಅವು ಯಾಕಿರುತ್ತವೆ ಎಂದರೆ, ಹಲವು ಬಗೆಯ ಖನಿಜಾಂಶಗಳಿರುವ ಕಲ್ಲಿನ ಪದರಗಳಡಿಯಲ್ಲೇ ಈ ಕಲ್ಲಿದ್ದಲು ಸಿಗುವುದು! ಆ ಮೂರು ಅಂಶಗಳು ಯಾವುವೆಂದರೆ:

  • ಹರಳು ಗಟ್ಟಿದ ಅಥವಾ ಹರಳುಗಟ್ಟಿರದ “ಸಿಲಿಕಾ” (SiO2)
  • ಅಲ್ಯುಮೀನಿಯಂ ಆಕ್ಸೈಡ್ (Al2O3)
  • ಕ್ಯಾಲ್ಷಿಯಂ ಆಕ್ಸೈಡ್ (CaO)

ಇವಲ್ಲದೇ ಸಣ್ಣ ಪ್ರಮಾಣದಲ್ಲಿ ಆರ್ಸೆನಿಕ್, ಬೆರಿಲಿಯಂ, ಬೊರಾನ್, ಕ್ಯಾಡ್ಮಿಯಂ, ಕೋರಿಯಂ, ಕೋಬಾಲ್ಟ್, ಸೀಸ, ಮ್ಯಾಂಗನೀಸ್, ಪಾದರಸ, ಮಾಲಿಬ್ಡಿನಂ, ಸೆಲೆನಿಯಂ, ಸ್ಟ್ರೋಂಟಿಯಂ, ಥಾಲಿಯಂ, ವಾನಾಡಿಯಂ ಇತ್ಯಾದಿ ಲೋಹಾಂಶಗಳು, ವಿಷಕಾರಿ ರಾಸಾಯನಿಕಗಳೂ ಇರಬಹುದು. ಸಿಲಿಕಾ ಚರ್ಮಕ್ಕೆ ತಾಗಿದಾಗ ಚರ್ಮದ ಕಿರಿಕಿರಿ, ಶ್ವಾಸಕೋಶದ ತೊಂದರೆಗಳು, ಸಿಲಿಕೋಸಿಸ್ ಎಂಬ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಜೊತೆಗೆ ಹರಳು ಸಿಲಿಕಾ ಕ್ಯಾನ್ಸರ್ ಕಾರಕ ಎಂದು ಅಮೆರಿಕದ ತಜ್ಞರು ಕಂಡುಕೊಂಡಿದ್ದಾರೆ,” ಎಂದು ಆತಂಕ ವ್ಯಕ್ತಪಡಿಸಿತು.

ಆತಂಕಕಾರಿ ಮಳೆ ಸುರಿದು ಮಂಗಳವಾರಕ್ಕೆ ಸರಿಯಾಗಿ ಒಂದು ತಿಂಗಳು ತುಂಬಿದೆ. ಆದರೆ ಕಾರ್ಖಾನೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಸಿಟ್ಟಿಗೆ ಕಾರಣ. ಬುಧವಾರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ರಾಜಾರಾಂ ತಲ್ಲೂರು ಮತ್ತು ಮನಃಶಾಸ್ತ್ರಜ್ಞ ಪಿ ವಿ ಭಂಡಾರಿ ಮಾಹಿತಿ ಹಕ್ಕು ಕಾನೂನಿನಡಿ ಅರ್ಜಿ ಸಲ್ಲಿಸಿ ಪಡೆದುಕೊಂಡ ಎನ್ ಐ ಟಿ ಕೆ ವಿಶ್ಲೇಷಣಾ ವರದಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.

“ಮಳೆಯಲ್ಲಿ ಉದುರಿದ ಬಿಳಿಯ ವಸ್ತು ಬೂದಿ ಎಂಬುದನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ ತಪಾಸಣೆ ನಡೆಸಿದ ಸುರತ್ಕಲ್ಲಿನ ಎನ್ ಐ ಟಿ ಕೆ ರಾಸಾಯನಿಕ ಎಂಜಿನಿಯರಿಂಗ್ ವಿಭಾಗ ತನ್ನ ವಿಶ್ಲೇಷಣಾ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಮಂಡಳಿ ಸಂಗ್ರಹ ಮಾಡಿದ ಮಾದರಿಯಲ್ಲಿ ಅದರ ತೂಕದ 71.43 ಶೇಕಡಾ ಬೂದಿ, 12.51 ಶೇಕಡಾ ಫಿಕ್ಸೆಡ್ ಕಾರ್ಬನ್, 10.92 ಶೇಕಡಾ ವಲಟೈಲ್ ರಾಸಾಯನಿಕಗಳು ಮತ್ತು 5.09 ಶೇಕಡಾ ತೇವಾಂಶ ಇತ್ತು ಎಂದು ವರದಿ ಸ್ಪಷ್ಟಪಡಿಸಿದೆ” ಎಂದು ತಲ್ಲೂರು ಹೇಳಿದರು.

ಪಿ ವಿ ಭಂಡಾರಿ ಅವರು ಮಾತನಾಡಿ “ಕೊಡಗು ಹಾಗೂ ಕೇರಳದಲ್ಲಿ ಮಾನವ ನಿರ್ಮಿತ ಅಪಘಾತಗಳನ್ನು ಕಣ್ಣಾರೆ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪರಿಸರ ನಾಶ ಚಟುವಟಿಕೆಗಳ ಕುರಿತು ಎಚ್ಚೆತ್ತುಕೊಳ್ಳಬೇಕು. ಉಡುಪಿಯಲ್ಲಿ ಬೂದಿ ಪ್ರಕರಣದ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು. ಈ ಪ್ರಕರಣ ಸುತ್ತಮುತ್ತಲಿನ ಕೈಗಾರಿಕೆಗಳು ನಮ್ಮ ಪರಿಸರವನ್ನು ಹಾನಿ ಮಾಡುವ ಸಾಧ್ಯತೆಗಳ ಬಗ್ಗೆ ಎಲ್ಲ ಚಿಹ್ನೆಗಳನ್ನು ತೋರಿಸುತ್ತಿದೆ” ಎಂದರು.

ಇಬ್ಬರೂ ಈಗ ಪರಿಸರ ನಿಯಂತ್ರಣ ಮಂಡಳಿ ಮತ್ತು ಉಡುಪಿ ಜಿಲ್ಲಾಡಳಿತಕ್ಕೆ ಏಳು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಅವು ಹೀಗಿವೆ

  • ಎನ್ ಐ ಟಿ ಕೆ ತಪಾಸಣಾ ವರದಿಯಲ್ಲಿ ಬಿದ್ದಿರುವುದು ಬೂದಿ ಎಂದು ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಈವತ್ತಿನ ತನಕ ಮಂಡಳಿ ಏನೇನು ಕ್ರಮಗಳನ್ನು ಕೈಗೊಂಡಿದೆ?
  • ಮಂಡಳಿಯನ್ನು ಉಲ್ಲೇಖಿಸಿ ಮಾಧ್ಯಮಗಳ ಒಂದು ವರ್ಗ ಬಿದ್ದದ್ದು ಬೂದಿ ಅಲ್ಲ ಮರಳು (ಸಿಲಿಕಾ) ಎಂದು ಸಾರ್ವಜನಿಕರ ಹಾದಿ ತಪ್ಪಿಸಿದೆ. ಇದನ್ನು ಯಾರು, ಯಾವ ಉದ್ದೇಶಕ್ಕಾಗಿ ಮಾಡಿದರು ಎಂಬ ಬಗ್ಗೆ ಜಿಲ್ಲಾಡಳಿತ ಮತ್ತು ಮಾಧ್ಯಮಗಳ ಆಡಳಿತ ಮಂಡಳಿ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಅಲ್ಲವೆ?
  • ಉಡುಪಿ ಜಿಲ್ಲಾಡಳಿತಕ್ಕೆ ಈ ಎನ್ ಐ ಟಿ ಕೆ ತಪಾಸಣಾ ವರದಿ ತಲುಪಿದೆಯೆ? ತಲುಪಿದ್ದರೆ, ಈ ನಿಟ್ಟಿನಲ್ಲಿ ಅವರು ಈವತ್ತಿನ ತನಕ ಏನು ಕ್ರಮ ಕೈಗೊಂಡಿದ್ದಾರೆ?
  • ಮಾಹಿತಿ ಹಕ್ಕಿನಡಿ ಕೇಳಿದಾಗ, ಇಂತಹ ಮಳೆ ಆದರೆ ಅದನ್ನು ತಪಾಸಣೆ ನಡೆಸಲು, ಮಾದರಿ ಸಂಗ್ರಹಿಸಲು ತಮ್ಮಲ್ಲಿ ಯಾವುದೇ ಸ್ಟಾಂಡರ್ಡ್ ಪ್ರೊಸೀಜರ್ ಇಲ್ಲ ಎಂದು ಮಂಡಳಿ ಲಿಖಿತವಾಗಿ ಹೇಳಿದೆ. ಉಡುಪಿ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲೇ ದೊಡ್ಡ ಉಷ್ಣವಿದ್ಯುತ್ ಸ್ಥಾವರದಂತಹಾ ಕಾರ್ಖಾನೆಗಳು ಇರುವಾಗ ಈ ರೀತಿಯ ಮುನ್ನೆಚ್ಚರಿಕೆಗಳೊಂದಿಗೆ ಸನ್ನದ್ಧ ಆಗಿರುವುದು ಮಂಡಳಿ ಮತ್ತು ಜಿಲ್ಲಾಡಳಿತದ ಕರ್ತವ್ಯ ಅಲ್ಲವೇ?
  • ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ಹರಡುವ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಚರ್ಮದ ಅಲರ್ಜಿ ತೊಂದರೆಗಳು, ಶ್ವಾಸಕೋಶದ ಅಲರ್ಜಿಯಂತಹ ತೊಂದರೆಗಳ ಬಗ್ಗೆ ಸಮಗ್ರ ಅಧ್ಯಯನ ಆಗಿದೆಯೆ? ಆಗಿರದಿದ್ದರೆ ಅದು ನಡೆಯಬೇಕು ಮತ್ತು ಈ ಸಮೀಕ್ಷಾ ವರದಿ ಸಾರ್ವಜನಿಕರಿಗೆ ಸಿಗಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದ್ದೇವೆ.
  • ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ನಿಗಾ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಕಾರ್ಖಾನೆಯವರು ಇಲಾಖೆಗೆ ಸಲ್ಲಿಸುವ ಅಂಕಿ-ಅಂಶ, ರೀಡಿಂಗ್ ಗಳು ವಾಸ್ತವದಷ್ಟೇ ಇವೆಯೇ ಎಂಬುದನ್ನು ಮಂಡಳಿ ಯಾವಾಗ ಪರಿಶೀಲನೆ ನಡೆಸಿದೆ? ಈ ಬಗ್ಗೆ ತಪಾಸಣೆ ನಡೆದಿದೆಯೆ? ಎಂಬುದನ್ನು ಪರಿಸರ ಮಂಡಳಿ ಸಾರ್ವಜನಿಕರಿಗೆ ತಿಳಿಸಬೇಕು. ಯಾಕೆಂದರೆ ಮಂಡಳಿ ಕೊಟ್ಟಿರುವ ಪರವಾನಿಗೆಯಲ್ಲಿ ಈ ರೀತಿಯ ತಪಾಸಣೆಗಳನ್ನು ನಡೆಸಬೇಕು ಎಂದು ಉಲ್ಲೇಖಿಸಲಾಗಿದೆ.
  • ಮಂಡಳಿ ಯುಪಿಸಿಎಲ್ ಗೆ ನೀಡಿರುವ ಪರವಾನಿಗೆ ಪತ್ರದಲ್ಲಿ ಹಾಕಿರುವ ಷರತ್ತುಗಳಲ್ಲಿ (ಜನರಲ್ ಕಂಡೀಷನ್ಸ್ ಎಚ್ 5) ಅಕಸ್ಮಾತ್ ಆಗಿ ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಕಲುಷಿತ ವಸ್ತುಗಳು ವಾತಾವರಣಕ್ಕೆ ಬಿಡುಗಡೆ ಆದರೆ, ಕಾರ್ಖಾನೆ ಆ ಬಗ್ಗೆ ತಕ್ಷಣ ಮಂಡಳಿಗೆ ತುರ್ತು ಮಾಹಿತಿ ನಿಡಬೇಕು ಎಂದಿದೆ. ಅಂತಹ ಮಾಹಿತಿ ಮಂಡಳಿಗೆ ಕಾರ್ಖಾನೆಯಿಂದ ಬಂದಿದೆಯೆ?
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More