ಗೌರಿ ನೆನಪು| ವೈಚಾರಿಕತೆಗೆ ಗುಂಡಿಟ್ಟವರ ಪೂರ್ವಾಪರ ಹೇಳುವ ಕರಾಳ ಸತ್ಯವೇನು?

ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧಿತರಾದವರ ಹಿನ್ನೆಲೆ ಗಮನಿಸಿದರೆ ಬೆಚ್ಚಿಬೀಳುವಂತಾಗುತ್ತದೆ. ಎಲ್ಲರಂತೆ ಸಾಮಾನ್ಯರಾಗಿದ್ದ ಅವರ ತಲೆಗೆ ದ್ವೇಷದ ಮದ್ದು ತುಂಬಿ, ಕೈಗೆ ಬಂದೂಕು ಕೊಟ್ಟುವರು, ‘ಧರ್ಮ ರಕ್ಷಣೆ’ ಯ ಹೆಸರಲ್ಲಿ ಕೊಲೆಗಡುಕರನ್ನಾಗಿಸಿದ ಇಡೀ ಸಂಚಿನ ಪ್ರಮುಖ ಸೂತ್ರದಾರಿಗಳು ಇನ್ನಷ್ಟೇ ಬಯಲಾಗ ಬೇಕಿದೆ

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ (ಸೆ.೫, ೨೦೧೮) ಒಂದು ವರ್ಷ ಗತಿಸಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೃತ್ಯದ ಹಿಂದಿರುವ ಸಂಘಟನಾತ್ಮಕ ಜಾಲವನ್ನು ಭೇದಿಸುವಲ್ಲಿ ನಿರ್ಣಾಯಕ ಘಟ್ಟ ತಲುಪಿದ್ದು, ಈವರೆಗೂ ೧೨ ಆರೋಪಿಗಳನ್ನು ಬಂಧಿಸಿದೆ. ಒಂದು ವರ್ಷದ ಅವಧಿಯಲ್ಲಿ ದೃಢವಾಗಿ ತನಿಖೆ ಕೈಗೊಂಡಿರುವ ತಂಡವು, ಕಳೆದ ಎರಡು ತಿಂಗಳ ಅವಧಿಯಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಇದರ ಬೆನ್ನಿಗೆ ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ ಹಾಗೂ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಪ್ರಕರಣಗಳಿಗೇ ಸಂಬಂಧಿಸಿದಂತೆ ಹಲವಾರು ಸುಳಿವುಗಳನ್ನು ಕಲೆಹಾಕಿದೆ.

ಗೌರಿ ಸೇರಿದಂತೆ ದಾಬೋಲ್ಕರ್, ಪನ್ಸಾರೆ ಹಾಗೂ ಕಲಬುರ್ಗಿ ಪ್ರಕರಣದಲ್ಲಿ ಬಂಧಿತರಾಗಿರುವವರು ಉಗ್ರ ಹಿಂದುತ್ವ ಪ್ರತಿಪಾದಕರು ಎಂದು ವರದಿಯಾಗಿದೆ. ಆರೋಪಿಗಳು ಬಂಧನವಾದಾಗ ಅವರ ಹೆಸರಿನ ಜೊತೆ ಯಾವುದಾದರೊಂದು ಹಿಂದೂ ಸಂಘಟನೆಯ ಹೆಸರು ತಳುಕು ಹಾಕಿಕೊಳ್ಳುವುದು, ಅದನ್ನು ಆ ಸಂಘಟನೆಯ ನೇತಾರರು ನಿರಾಕರಿಸುವುದೂ ಎಂದಿನಂತೆ ಮುಂದುವರೆದಿದೆ.

ಬಂಧಿತರ ಕುರಿತು ಎಸ್‌ಐಟಿ ಮೂಲಗಳನ್ನಾಧರಿಸಿ ಮಾಧ್ಯಮಗಳು ಮಾಡಿರುವ ವರದಿಗಳನ್ನು ಗಮನಿಸಿದರೆ ಹತ್ಯಾ ಕೃತ್ಯದ ಹಿಂದೆ ದೊಡ್ಡ ಜಾಲ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಬಂಧಿತರಲ್ಲಿ ಹೆಚ್ಚಿನ ಜನರು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಸನಾತನ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಇನ್ನೂ ಕೆಲ ಬಂಧಿತರು ಶ್ರೀರಾಮ ಸೇನೆ, ಭಜರಂಗದಳ, ಹಿಂದೂ ಯುವ ಸೇನೆ, ಹಿಂದೂ ಜಾಗರಣ ವೇದಿಕೆ ಹಾಗೂ ಆರ್ ಎಸ್ ಎಸ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳೊಂದಿಗೆ ಸಂಪರ್ಕಹೊಂದಿದ್ದಾರೆ ಎಂದು ಮಾಧ್ಯಮದ ವರದಿಗಳು ಹೇಳಿವೆ. ಆದರೆ, ಈ ಬಗ್ಗೆ ಎಸ್ಐಟಿ, ಸಿಬಿಐ, ಸಿಐಡಿ ಎಲ್ಲೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಗೌರಿ ಪ್ರಕರಣ ಸೇರಿದಂತೆ ಉಳಿದ ಪ್ರಕರಣಗಳು ಇಷ್ಟರಲ್ಲೇ ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆ ಗೋಚರಿಸುತ್ತಿದ್ದು, ಈ ನಾಲ್ವರ ಹತ್ಯೆ ಪ್ರಕರಣದಲ್ಲಿ ಈವರೆಗೆ ಸಾಗಿಬಂದ ತನಿಖೆ ಸಾಗಿಬಂದ ಹಾದಿ ಹೀಗಿದೆ;

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ

ಪರಶುರಾಮ್ ವಾಗ್ಮೋರೆ

ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ನಿವಾಸದ ಮುಂದೆ ರಾತ್ರಿ ವೇಳೆ ಗುಂಡಿಟ್ಟು ಹತ್ಯೆ ಮಾಡಿರುವುದು ಪರಶುರಾಮ್ ವಾಗ್ಮೋರೆ (೨೬) ಎಂಬುದು ‘ಪೊಡಿಯಾಟ್ರಿಕ್ ಗೇಯ್ಟ್ ಅನಾಲಿಸಿಸ್’ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ. ಬಂಧಿತ ಆರೋಪಿಗಳ ಪೈಕಿ ಮನೋಹರ ಯಡವೆ ವಿಚಾರಣೆ ವೇಳೆ ಬಾಯ್ಬಿಟ್ಟ ಸಂಗತಿಗಳನ್ನು ಆಧರಿಸಿ ಪರಶುರಾಮ್ ವಾಘ್ಮೋರೆಯನ್ನು ಎಸ್ಐಟಿ ತಂಡ ವಿಜಯಪುರದಲ್ಲಿ ಜೂ.೧೧ ರಂದು ಬಂಧಿಸಿತು. ಗೌರಿಯನ್ನು ತಾನೇ ಗುಂಡಿಟ್ಟು ಕೊಂದಿರುವುದಾಗಿ ಆರೋಪಿ ಬಂಧನವಾದ ಮರುದಿನವೇ ಬಾಯ್ಬಿಟ್ಟಿದ್ದ. ಈ ಸುತ್ತ ಎಸ್ಐಟಿ ಸತ್ಯಾಸತ್ಯತೆ ಪರೀಕ್ಷಿಸಿದಾಗ ವಾಘ್ಮೋರೆಯೇ ಗೌರಿಗೆ ಗುಂಡು ಹಾರಿಸಿದ್ದು ಸಾಬೀತಾಗಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನವನಾದ ಈತ ಬಿಕಾಂ ಪದವೀಧರ. ಸ್ಥಳೀಯವಾಗಿ ಈತನನ್ನು ವಿರಾಟ್ ಕೋಹ್ಲಿ ಅಂತಲೇ ಸ್ನೇಹಿತರು ಕರೆಯುತ್ತಾರೆ. ಆರು ವರ್ಷಗಳ ಹಿಂದೆ ಸಿಂಧಗಿಗೆ ಬಂದು ಸೈಬರ್ ಕೆಫೆ ನಡೆಸುತ್ತಿದ್ದ. ನಂತರ ಕುಟುಂಬ ನಿರ್ವಹಣೆ ಕಷ್ಟವಾದ ಕಾರಣ ಅದನ್ನು ಬಿಟ್ಟು ತಂದೆ ತಾಯಿ ಜೊತೆ ಪಾತ್ರೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಈತ ತಾಲೂಕಿನಲ್ಲಿ ಶ್ರೀರಾಮ ಸೇನೆಯನ್ನು ಕಟ್ಟಿ ಬೆಳೆಸುತ್ತಿದ್ದ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ಬಂದಿದೆ. ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಜೊತೆ ಈತ ತೆಗೆಸಿಕೊಂಡಿದ್ದ ಭಾವಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇತ್ತೀಚೆಗೆ ಮುತಾಲಿಕ್ ಸುದ್ದಿಗೋಷ್ಠಿ ನಡೆಸಿ ಪರಶುರಾಮ್ ವಾಘ್ಮೋರೆ ಆರ್ ಎಸ್ ಎಸ್ ಸಂಘಟನೆಯ ಕಾರ್ಯಕರ್ತ ಎಂದು ಹೇಳಿರುವುದನ್ನು ಇಲ್ಲಿ ನೆನೆಯಬಹುದು.

ಕೆ ಟಿ ನವೀನ್ ಕುಮಾರ್

ಗೌರಿ ಹತ್ಯೆಗೆ ಒಳಸಂಚು ರೂಪಿಸಿದ್ದ ಆರೋಪದಡಿ ಬೆಂಗಳೂರಿನ ಮೆಜೆಸ್ಟಿಕ್ ಬಳಿ ಫೆಬ್ರವರಿ ೧೮ರಂದು ನವೀನ್‌ಕುಮಾರ್‌ (೩೭) ಅಲಿಯಾಸ್‌ ಹೊಟ್ಟೆ ಮಂಜನನ್ನು ಬಂಧಿಸಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕದಲೂರು ಗ್ರಾಮದವನಾದ ನವೀನ್‌ಕುಮಾರ್‌ ಈತನ ಬಳಿ ಪಿಸ್ತೂಲು ಹಾಗೂ ೧೫ ಜೀವಂತ ಗುಂಡುಗಳು ದೊರಕಿವೆ. ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆಗೆ ಜೀವಂತ ಗುಂಡುಗಳನ್ನು ಈತ ಪೂರೈಸಿದ್ದಾನೆ ಎನ್ನಲಾಗಿದೆ. ಗೌರಿ ಹತ್ಯೆ ಕುರಿತು ಸ್ನೇಹಿತರೆದುರು ಮಾಹಿತಿ ಹಂಚಿಕೊಂಡಿದ್ದಾಗಿ, ಹೊರರಾಜ್ಯ ಹಾಗೂ ಕರ್ನಾಟಕದ ಮೂಲದವರಿಗೆ ಬಂದೂಕು ತರಬೇತಿ ನೀಡಿರುವ ಬಗ್ಗೆ ತನಿಖೆ ವೇಳೆ ಈತ ಒಪ್ಪಿಕೊಂಡಿದ್ದಾನೆ. ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿದ್ದ ಈತ ಹಿಂದೂ ಯುವ ಸೇನೆ, ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗದಳಗಳಲ್ಲಿ ಗುರುತಿಸಿಕೊಂಡಿದ್ದ. ಹಿಂದೂ ಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಮೋಲ್ ಕಾಳೆ

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಮೋಲ್ ಕಾಳೆ (೩೭) ಅಲಿಯಾಸ್ ಬಾಯ್ ಸಾಬ್ ಪುಣೆ ಮೂಲದವನು. ಈತನನ್ನು ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿದ್ದು, ಕೆ ಎಸ್ ಭಗವಾನ್ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಮೇ ೨೧ ರಂದು ದಾವಣಗೆರೆಯಲ್ಲಿ ಬಂಧಿತನಾಗಿದ್ದಾನೆ. ಮೆಕ್ಯಾನಿಕ್ ಎಂಜಿನಿಯರಿಂಗ್ ಪದವೀಧರನಾಗಿರುವ ಈತನ ಬಳಿ ದೊರೆತ ಡೈರಿಯಲ್ಲಿ ಸಂಸ್ಕೃತ, ಹಿಂದಿ,ಮರಾಠಿ ಭಾಷೆಯ ಕೋಡ್‌ ವರ್ಡ್ಗಳಿವೆ ಎನ್ನಲಾಗಿದೆ. ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಪಾನ್ಸಾರೆ, ಎಂ ಎಂ ಕಲಬುರ್ಗಿ ಹೆಸರು ಈತನ ಡೈರಿಯಲ್ಲಿದ್ದವು. ಹಿಂದೂ ವಿರೋಧಿ ವಿಚಾರವಾದಿಗಳನ್ನು ಗುರುತಿಸಿ ಹತ್ಯೆ ಮಾಡುವ ಉದ್ದೇಶದ ವ್ಯವಸ್ಥಿತ ಜಾಲ ೬ ವರ್ಷದಿಂದೀಚೆಗೆ ದೇಶಾದ್ಯಂತ ವ್ಯಾಪಿಸಿದ್ದು, ಇದಕ್ಕೆ ರಾಜ್ಯದ ವಿವಿಧ ಹಿಂದೂ ಪರ ಸಂಘಟನೆಗಳ 60 ಸಕ್ರಿಯ ಕಾರ್ಯಕರ್ತರನ್ನು ಕಾಳೆ ನೇಮಿಸಿದ್ದ ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇವರೆಲ್ಲರಿಗೂ ಮಹಾರಾಷ್ಟ್ರದ ಸತಾರಾ, ಗೋವಾ, ಕರ್ನಾಟಕದ ಬೆಳಗಾವಿ, ಧಾರವಾಡ ಸೇರಿದಂತೆ ಹಲವೆಡೆ ಶಸ್ತ್ರಾಸ್ತ್ರ ತರಬೇತಿಯನ್ನು ಕಾಳೆ ನೀಡಿದ್ದಾನೆ. ಧಾರವಾಡದ ಅರಣ್ಯ ಪ್ರದೇಶದಲ್ಲಿ ಪೆಟ್ರೋಲ್‌ ಬಾಂಬ್‌ ಹಾಗೂ ಬೆಳಗಾವಿ ಕಾಡಿನಲ್ಲಿ ಬಂದೂಕು ತರಬೇತಿ ನಡೆಸಿದ್ದ ಸ್ಥಳಗಳನ್ನು ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ. ನವೀನ್ ಕುಮಾರ್ ಗೆ ಆಪ್ತನಾಗಿದ್ದ ಈತ ಗೋವಾ ಮೂಲದ ಸನಾತನ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಯಾಗಿರುವ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಸದಾ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಅಮಿತ್ ದೇಗ್ವೇಕರ್

ಸಾಹಿತಿ ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಅಮಿತ್ ದೇಗ್ವೇಕರ್ (೩೮) ಅಲಿಯಾಸ್ ಪ್ರದೀಪ್ ಮೇ.೨೧ ರಂದು ದಾವಣಗೆರೆಯಲ್ಲಿ ಕಾಳೆಯೊಂದಿಗೆ ಬಂಧಿತನಾದ. ಅಮಿತ್ ದೇಗ್ವೇಕರ್ ಕೂಡ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯವನಾಗಿದ್ದು, ಕಾಳೆ ಗುರುತಿಸಿಕೊಂಡಿದ್ದ ಸಂಘಟನೆಯೊಂದಿಗೆ ಒಡನಾಟ ಇಟ್ಟುಕೊಂಡಿದ್ದಾನೆ. ಕಾಳೆಯ ಸ್ನೇಹಿತನಾಗಿರುವ ಈತ ಪುಣೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಕಾಳೆಯೇ ಈತನಿಗೆ ಶಸ್ತ್ರಾಸ್ತ್ರ ತರಬೆತಿ ನೀಡಿದ್ದ ಎನ್ನಲಾಗಿದ್ದು, ಗೌರಿ ಅವರ ಚಲನವಲನಗಳ ಮೇಲೆ ಈತನೇ ನೀಗಾ ಇಟ್ಟಿದ್ದು ಎಂದು ತಿಳಿದು ಬಂದಿದೆ. ನವೀನ್ ಕುಮಾರ್ ಗೂ ಈತ ಆಪ್ತನಾಗಿದ್ದು, ಆತನೆದುರು ಪ್ರದೀಪ್ ಎಂದು ಗುರುತಿಸಿಕೊಂಡಿದ್ದ. ಗೋವಾ ಮೂಲದ ಸನಾತನ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಯಾಗಿರುವ ಹಿಂದೂ ಜನಜಾಗೃತ ಸಮಿತಿಯೊಂದಿಗೆ ಅಮಿತ್ ನಂಟು ಹೊಂದಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಸನಾತನ ಸಂಸ್ಥೆಯಿಂದ ಪ್ರಕಟಗೊಳ್ಳುತ್ತಿರುವ ‘ಸನಾತನ ಪ್ರಭಾತ್’ ಪತ್ರಿಕೆಯ ಪ್ರವರ್ತಕ ಎಂದು ‘ದಿ ವೀಕ್’ ನಿಯತಕಾಲಿಕೆಯಲ್ಲಿ ವರದಿಯಾಗಿದೆ. ಈತ ಹಾಗೂ ಕಾಳೆ ಜೊತೆಯಲ್ಲಿ ಸೇರಿಕೊಂಡೇ ಹತ್ಯೆಯ ಜಾಲಕ್ಕೆ ಬಂದೂಕು ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ.

ಸುಜಿತ್ ಕುಮಾರ್

ಭಗವಾನ್ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಮೇ. ೧೫ರಂದು ಉಡುಪಿಯಲ್ಲಿ ಸುಜಿತ್ ಕುಮಾರ್ (೩೭) ಅಲಿಯಾಸ್ ಪ್ರವೀಣ್ ಬಂಧಿತನಾಗಿದ್ದಾನೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದವನಾದ ಈತ ವಿಚಾರಣೆ ವೇಳೆ ಜೀವಂತ ಗುಂಡುಗಳನ್ನು ತನ್ನ ಅಜ್ಜಿಯ ಮನೆಯಲ್ಲಿ ಬಚ್ಚಿಟ್ಟಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ಪ್ರವೀಣ್ ಹೆಸರಲ್ಲಿ ಈತ ಗೋವಾದಲ್ಲಿ ಸನಾತನ ಸಂಸ್ಥೆ ಸಭೆಗಳನ್ನು ನಡೆಸುತ್ತಿದ್ದ ಎನ್ನುತ್ತವೆ ಮಾಧ್ಯಮ ವರದಿಗಳು. ನವೀನ್‌ನನ್ನು ಕಾಳೆಗೆ ಪರಿಚಯ ಮಾಡಿಸಿದವನು ಈತನೇ.

ಮನೋಹರ ಯಡವೆ

ಅಮೋಲ್ ಕಾಳೆ ಹಾಗೂ ಅಮಿತ್‌ಗೆ ಹಲವು ವರ್ಷಗಳಿಂದ ಪರಿಚಿತನಾಗಿದ್ದ ಮನೋಹರ ಯಡವೆ (೩೦) ಹತ್ಯೆ ಜಾಲಕ್ಕೆ ಹುಡುಗರನ್ನು ಸೇರಿಸುತ್ತಿದ್ದ ಎನ್ನಲಾಗಿದೆ. ಗೌರಿ ಹತ್ಯೆಯನ್ನು ಯಾರು ಮಾಡಬೇಕೆಂಬುದನ್ನು ಈತನೇ ಗುರುತಿಸಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಮೇ. ೨೧ರಂದು ದಾವಣಗೆರೆಯಲ್ಲಿ ಬಂಧಿತನಾಗಿರುವ ಯಡವೆ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದವನು ಎಂದು ಎಸ್ಐಟಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈತನ ಕುಟುಂಬ ದಶಕಗಳ ಹಿಂದೆಯೇ ಈ ಗ್ರಾಮ ತೊರೆದು ಬೇರೆಡೆ ವಾಸಿಸುತ್ತಿದೆ ಎಂದು ಸ್ನೇಹಿತರು, ಸಂಬಂಧಿಗಳು ತಿಳಿಸಿದ್ದಾರೆ. ಯಡವೆ ಚಿಕ್ಕಂದಿನಿಂದಲೂ ಹಿಂದೂಪರ ಸಂಘಟನೆಗಳಲ್ಲಿ ಆಸಕ್ತಿ ಹೊಂದಿದ್ದು; ಸಂಘಟನೆ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ. ಸುರತ್ಕಲ್‌ ನ ಸನಾತನ ಸಂಸ್ಥೆ ಜೊತೆ ಸಂಪರ್ಕ ಹೊಂದಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೋಹನ್ ನಾಯ್ಕ್

ಗೌರಿ ಹತ್ಯೆಗೆ ಬಂದೂಕು ಒದಗಿಸಿದ್ದು ಮೋಹನ್ ನಾಯ್ಕ್ (೩೦)‌ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಕುಶಾಲನಗರದಲ್ಲಿ ಬಂದೂಕು ಅಂಗಡಿ ಹೊಂದಿರುವ ಈತ ಬೆಂಗಳೂರಿನ ಕುಂಬಳಗೋಡು ಬಳಿ ಕ್ಲಿನಿಕ್ ಇಟ್ಟುಕೊಂಡಿದ್ದು, ಗೌರಿ ಹಂತಕರಿಗೆ ತನ್ನ ಕ್ಲಿನಿಕ್‌ನಲ್ಲೇ ಆಶ್ರಯ ಕೊಟ್ಟಿದ್ದ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಮುಂಡಡ್ಕ ನಿವಾಸಿ ಮೋಹನ್ ನಾಯ್ಕ್ ಜು.೨೨ ರಂದು ಸುಳ್ಯದಲ್ಲಿ ಬಂಧಿತನಾದ. ಈತನ ತಂದೆ ಹೊಗೆಸೊಪ್ಪು ವ್ಯಾಪಾರಿಯಾಗಿದ್ದು, ಸುಮಾರು ೩೦ ಎಕರೆ ಕೃಷಿ ಭೂಮಿಯನ್ನು ಇವರ ಕುಟುಂಬ ಹೊಂದಿದೆ ಎನ್ನಲಾಗಿದೆ. ಉಗ್ರ ಹಿಂದುತ್ವವಾದಿಯಾದ ಕಾರಣಕ್ಕೆ ಅದೇ ರೀತಿಯ ನಿಲುವು ಹೊಂದಿದ್ದ ಗೋವಾ ಮೂಲದ ಸನಾತನ ಸಂಸ್ಥೆಯತ್ತ ಸೆಳೆತ ಹೊಂದಿದ್ದ ಹಾಗೂ ಸನಾತ ಸಂಸ್ಥೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ಥಳೀಯವಾಗಿ ಆತನ ಬಗ್ಗೆ ನಾಟಿ ವೈದ್ಯ, ಸಂಭಾವಿತ ಎನ್ನುವುದನ್ನು ಬಿಟ್ಟರೆ ಹೆಚ್ಚಿನ ಮಾಹಿತಿ ಇಲ್ಲ.

ಗಣೇಶ್ ಮಿಸ್ಕಿನ್

ಜುಲೈ ೨೦ ರಂದು ಹುಬ್ಬಳ್ಳಿಯಲ್ಲಿ ಬಂಧಿತನಾಗಿರುವ ಗಣೇಶ್ ಮಿಸ್ಕಿನ್‌ನೇ (೨೭) ಗೌರಿ ಹತ್ಯೆ ಪ್ರಕರಣದಲ್ಲಿ ಬೈಕ್ ಸವಾರನಾಗಿದ್ದ ಎನ್ನಲಾಗಿದೆ. ಈತನ ಬಂಧನ ಮೂಲಕ ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ವಿವಿಧ ಮಾಧ್ಯಮಗಳು ಆರ್ ಎಸ್ ಎಸ್ ಹೆಸರು ಉಲ್ಲೇಖಿಸಿವೆ. ಮಿಸ್ಕಿನ್ ಆರ್ ಎಸ್ ಎಸ್ ನ ಹುಬ್ಬಳ್ಳಿ ಘಟಕದ ವಾದ್ಯಮೇಳ (ಘೋಷ್) ಪ್ರಮುಖ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ. ವೃತ್ತಿಯಿಂದ ಈತ ಹುಬ್ಬಳ್ಳಿಯಲ್ಲಿ ಅಗರಬತ್ತಿ ಕಾರ್ಖಾನೆ ನಡೆಸುತ್ತಿದ್ದ. ಹತ್ಯೆ ಜಾಲದಲ್ಲಿ ಈತನೂ ಪಾಲ್ಗೊಂಡಿದ್ದು, ಪರುಶರಾಮ್ ವಾಗ್ಮೋರೆ ಹೇಳಿಕೆ ಮೇರೆಗೆ ಈತನ ನಡಿಗೆ ಗುರುತಿಸಿ ಎಸ್ಐಟಿ ತಂಡ ಬಂಧಿಸಿದೆ.

ಅಮಿತ್ ಬದ್ದಿ

ಗೌರಿ ಹತ್ಯೆಯಾದ ಸಂದರ್ಭದಲ್ಲಿ ಗುಂಡು ಹಾರಿಸಿದ ವ್ಯಕ್ತಿ ಹಾಗೂ ಬೈಕ್ ಸವಾರನ ರಕ್ಷಣೆಗೆ ಗೌರಿ ಮನೆಯಿಂದ ಐದು ಕಿ ಮೀ. ದೂರದಲ್ಲಿ ಕಾರಿನಲ್ಲಿ ಕಾಯ್ದು ಗೌರಿ ಹಂತಕರನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿದ್ದೇ ಅಮಿತ್ ಬದ್ದಿ (೨೭) ಎನ್ನಲಾಗಿದೆ. ಈತ ಕೂಡ ಹುಬ್ಬಳ್ಳಿ ಮೂಲದವನಾಗಿದ್ದು, ಜುಲೈ ೨೦ ರಂದು ಮಿಸ್ಕಿನ್ ಜೊತೆಗೆ ಈತನನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ಬನಶಂಕರಿ ದೇವಸ್ಥಾನದ ಬಳಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ ಈತ ಗಣೇಶ್ ಮಿಸ್ಕಿನ್ ನ ಸ್ನೇಹಿತ.

ರಾಜೇಶ್ ಡಿ ಬಂಗೇರಾ

ಗೌರಿ ಹತ್ಯೆ ಪ್ರಕರಣದಲ್ಲಿ ಕಾಳೆಗೆ ೨೦ ಜೀವಂತ ಗುಂಡುಗಳನ್ನು ರಾಜೇಶ್ ಡಿ ಬಂಗೇರಾ (೫೦) ನೀಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ ಐದು ಆರೋಪಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜುಲೈ ೨೩ ರಂದು ಮಡಿಕೇರಿಯಲ್ಲಿ ಬಂಧಿತನಾದ. ಮಡಿಕೇರಿ ಸಮೀಪದ ಪಾಲೂರಿನ ನಿವಾಸಿಯಾಗಿರುವ ಈತನ ಕುಟುಂಬ ದಕ್ಷಿಣ ಕನ್ನಡದಿಂದ ವಲಸೆ ಬಂದಿದೆ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ಅವರ ಅಕಾಲಿಕ ಮರಣದ ನಂತರ ಈತನಿಗೆ ಮಡಿಕೇರಿ ಡಿಡಿಪಿಐ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನ ಕೆಲಸ ದೊರಕಿತ್ತು. ಕೆಲಸಕ್ಕೆ ಸೇರಿ ೧೫ ವರ್ಷ ಕಳೆದಿದ್ದು, ಗೋವಾ ಮೂಲದ ಹಿಂದೂ ಸನಾತನ ಸಂಸ್ಥೆಯ ಜತೆ ಒಡನಾಟದಲ್ಲಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಉಷಾ ದೇವಮ್ಮ ಅವರು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದ ಸಂದರ್ಭ ಈತನನ್ನು ಜಿಪಂ ಗೆ ನಿಯೋಜಿಸಲಾಗಿತ್ತು. ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಆಗಿಯೂ ಕೆಲಸ ಮಾಡಿದ್ದ. ಹಾಗೆಯೇ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕನಾಗಿದ್ದ ಎಂಬುದನ್ನು ವೀಣಾ ಅವರೇ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಎಚ್ ಎಲ್ ಸುರೇಶ್

ಗೌರಿ ಹತ್ಯೆ ಆರೋಪಿಗಳಿಗೆ ಮನೆ ಹಾಗೂ ಬೈಕ್ ನೀಡಿದ್ದು ಎಚ್ ಎಲ್ ಸುರೇಶ್ (೩೬) ಎನ್ನಲಾಗಿದೆ. ಗೌರಿ ಹತ್ಯೆಗೆ ಸಂಚು ರೂಪಿಸುವ ಸಂದರ್ಭದಲ್ಲಿ ಹಂತಕರಿಗೆ ಬೆಂಗಳೂರಿನ ಸುಂಕದಕಟ್ಟೆ ಹತ್ತಿರದ ಸೀಗೇಹಳ್ಳಿಯ ತನ್ನ ಮನೆಯಲ್ಲಿ ಉಳಿಯಲು ಅವಕಾಶ ನೀಡಿದ್ದ ಎಂದು ವರದಿಗಳು ಪ್ರಕಟವಾಗಿವೆ. ಗೌರಿ ಹತ್ಯೆಯಾದ ಸಂದರ್ಭ ಈತನನ್ನು ಠಾಣೆಗೆ ಕರೆದು ವಿಚಾರಿಸಿ ಈತನ ಮೇಲೆ ಎಸ್ಐಟಿ ನಿಗಾ ಇಟ್ಟಿತ್ತು. ಬಂಧಿತ ಆರೋಪಿಗಳು ಸುರೇಶನ ಬಗ್ಗೆ ಬಾಯ್ಬಿಟ್ಟಿದ್ದರಿಂದ ಎಸ್ಐಟಿ ವಶದಲ್ಲಿದ್ದಾನೆ. ಜುಲೈ ೨೫ ರಂದು ಬೆಂಗಳೂರಿನಲ್ಲಿ ಬಂಧಿತನಾಗಿರುವ ಈತ ತುಮಕೂರು ಜಿಲ್ಲೆ ಕುಣಿಗಲ್ ನಿವಾಸಿಯಾಗಿದ್ದು,

ಕೃಷಿಕ ಲಕ್ಷ್ಮಣಪ್ಪ ಮತ್ತು ಸನಾತನ ಧರ್ಮ ಪ್ರಚಾರಕಿ ಭಾಗ್ಯಮ್ಮ ದಂಪತಿಯ ಮಗ. ಹೆರೂರಿನಲ್ಲಿ ಪ್ರೌಢಶಾಲೆ, ಕುಣಿಗಲ್ ನಲ್ಲಿ ಪಿಯುಸಿ ಹಾಗೂ ತುಮಕೂರಿನ ಎಸ್ಐಟಿ ಕಾಲೇಜಿನಲ್ಲಿ ಬಿಇ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರು ಸೇರಿದ್ದ ಎನ್ನಲಾಗಿದೆ. ಮೊದಲಿನಿಂದಲೂ ಸನಾತನ ಸಂಸ್ಥೆಯೊಂದಿಗೆ ಸುರೇಶ್ ಒಡನಾಟ ಹೊಂದಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮೋಲ್ ಕಾಳೆ, ಮೋಹನ್ ನಾಯ್ಕ್ ಗೆ ಸುರೇಶ್ ಹತ್ತಿರವಾಗಿದ್ದ.

ಭರತ್ ಕುರ್ಣೆ

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ೧೨ನೇ ಆರೋಪಿ ಭರತ್ ಕುರ್ಣೆ (೩೭) ಅಲಿಯಾಸ್ ತಮಾತರರ್ ಅಥವಾ ಅಂಕಲ್. ಗೌರಿ ಮತ್ತು ಕಲಬುರ್ಗಿ ಹಂತಕರಿಗೆ ಶಸ್ತ್ರಾಸ್ತ್ರ ತರಬೇತಿಗಾಗಿ ಈತ ತನ್ನ ಭೂಮಿ ಬಿಟ್ಟುಕೊಟ್ಟಿದ್ದ ಎನ್ನಲಾಗಿದೆ. ಆಗಸ್ಟ್ ೯ ರಂದು ಬೆಳಗಾವಿಯಲ್ಲಿ ಭರತನನ್ನು ಬಂಧಿಸಲಾಗಿದ್ದು, ಈತ ಬೆಳಗಾವಿ ಜಿಲ್ಲೆಯ ಬಂಭಾಜಿ ಗಲ್ಲಿ ನಿವಾಸಿ. ತರಕಾರಿ ವ್ಯಾಪಾರಿ ಹಾಗೂ ಹೋಟೆಲ್ ನಡೆಸುತ್ತಿದ್ದಾನೆ.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಸಾವಿನಲ್ಲಿ ಸಿದ್ಧಾಂತದ ಮಿತಿಯನ್ನು ಮೀರಿದ ಗೌರಿಯನ್ನು ಮತ್ತದೇ ಚೌಕಟ್ಟಿಗೆ ಸೀಮಿತಗೊಳಿಸಿದ್ದು ಹೇಗೆ?
ಇದನ್ನೂ ಓದಿ : ಸ್ಟೇಟ್‌ಮೆಂಟ್ | ಗೌರಿ ತನಿಖೆಯ ವಿಷಯದಲ್ಲಿ ನಾವು ವಹಿಸಬೇಕಾದ ಎಚ್ಚರ

ಗೌರಿ ತನಿಖೆಯಿಂದ ಬಯಲಾದ ಹಲವು ಸತ್ಯಗಳು

ಎಸ್ಐಟಿ ನೀಡಿದ ಸುಳಿವಿನ ಮೇರೆಗೆ ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ ಅನುಮಾನದ ಮೇಲೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ಬಲಪಂಥೀಯ ಸಂಘಟನೆಗಳ ಮೂವರು ಕಾರ್ಯಕರ್ತರನ್ನು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಆಗಸ್ಟ್ ೧೧ ರಂದು ಬಂಧಿಸಿದೆ. ವೈಭವ್ ರಾವುತ್ (೪೦), ಸುಧನ್ವ ಗೋಂಧಳೀಕರ್ (೩೯) ಹಾಗೂ ಶರದ್ ಕಾಲಾಸ್ಕರ್ (೨೫) ಬಂಧಿತರು. ಇವರ ಬಂಧನದೊಂದಿಗೆ ಅಪಾರ ಪ್ರಮಾಣದ ಭಾರೀ ಸ್ಫೋಟಕಗಳು, ಬಾಂಬ್ ತಯಾರಿಸಲು ಬಳಸುವ ಸಾಮಗ್ರಿ, ಎಂಟು ಕಚ್ಚಾ ಬಾಂಬ್‌ಗಳು ಹಾಗೂ ಹತ್ತು ನಾಡ ಪಿಸ್ತೂಲುಗಳು ಎಟಿಎಸ್ ಗೆ ಸಿಕ್ಕಿವೆ.

ವೈಭವ್ ರಾವುತ್ ಮಹಾರಾಷ್ಟ್ರದ ಸನಾತನ ಸಂಸ್ಥೆಯ ಕಾರ್ಯಕರ್ತ ಎನ್ನಲಾಗಿದ್ದು, ಗೋವಂಶ ರಕ್ಷಾ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಗೋಂಧಳೀಕರ್ ಹಾಗೂ ಕಲಾಸ್ಕರ್ ಸನಾತನ ಸಂಸ್ಥೆಯ ಅಂಗಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೆಕಾನಿಕಲ್ ಎಂಜಿನಿಯರ್ ಆಗಿರುವ ಸುಧನ್ವ ಗೋಂಧಳೀಕರ್ ಅನಿಮೇಟರ್ ಹಾಗೂ ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಗೌರಿಯನ್ನು ಕೊಲ್ಲಲು ಬಳಸಿದ ಪಿಸ್ತೂಲು ಈತನ ಬಳಿ ಇದೆ ಎನ್ನಲಾಗಿದೆ.

ಬಂಧಿತ ಆರೋಪಿ ಗೋಂಧಳೀಕರ್‌ನನ್ನು ಶಿವಪ್ರತಿಷ್ಠಾನ ಹಿಂದೂಸ್ತಾನ್ ಸದಸ್ಯನೆಂದು ಶಂಕಿಸಲಾಗಿದ್ದು, ಭೀಮಾ ಕೋರೆಗಾಂವ್ ಹಿಂಸಾಚಾರದ ಪ್ರಕರಣದಲ್ಲಿ ಈತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. (2008ರ ಸೆಪ್ಟೆಂಬರ್‌ 8ರಂದು ಮಾಲೇಗಾಂವ್‌'ನಲ್ಲಿ ಮೋಟಾರ್‌ ಸೈಕಲ್‌ನಲ್ಲಿ ಅಳವಡಿಸಿದ್ದ 2 ಬಾಂಬ್ ಸ್ಫೋಟಗೊಂಡು 7 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.) ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಅಮೋಲ್ ಕಾಳೆ ಜೊತೆಗೆ ಈತ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ವಿಚಾರವಾದಿ ದಾಬೋಲ್ಕರ್ ಹತ್ಯೆ ಪ್ರಕರಣ

೨೦೧೩ ಆ.೨೦ ರಂದು ಮಹಾರಾಷ್ಟ್ರದ ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ಬೆಳಗಿನ ವಾಯುವಿಹಾರ ಮಾಡುತ್ತಿದ್ದ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲಾಗಿತ್ತು. ಇತ್ತೀಚೆಗೆ ಎಟಿಎಸ್ ಬಂಧಿಸಿರುವ ಆ ಮೂವರ ಆರೋಪಿಗಳ ತನಿಖೆ ಚುರುಕುಗೊಳ್ಳುತ್ತಿದ್ದಂತೆ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ದಿಢೀರನೇ ಔರಂಗಾಬಾದ್‌ನ‌ ಹಿಂದೂ ಸಂಘಟನೆಯ ಕಾರ್ಯಕರ್ತ ಸಚಿನ್ ಪ್ರಕಾಶರಾವ್ ಅಂದುರೆ ಹಾಗೂ ಮಹಾರಾಷ್ಟ್ರದ ಜಲ್ನಾ ಮಹಾನಗರ ಪಾಲಿಕೆಯ ಶಿವಸೇನೆಯ ಮಾಜಿ ಕಾರ್ಪೊರೇಟರ್ ಶ್ರೀಕಾಂತ ಪಂಗರಕರ್‌ನನ್ನು ಬಂಧಿಸಿದೆ. ಇವರಿಬ್ಬರಲ್ಲಿ ದಾಭೋಲ್ಕರ್ ಅವರನ್ನು ಶೂಟ್ ಮಾಡಿದ್ದು ಅಂದುರೆ ಎಂದು ಹಾಗೂ ಹತ್ಯೆಯ ಸಂಚು ರೂಪಿಸಿದ್ದು, ಪಂಗರ್ಕರ್ ಎಂದು ಸಿಬಿಐ ಹೇಳಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಆದರೆ, ತನಿಖೆಯನ್ನು ನಿರ್ವಹಿಸುತ್ತಿರುವ ಸಿಬಿಐ ನಡೆ ಸುತ್ತ ಹಲವಾರು ಪ್ರಶ್ನೆಗಳು ಮೂಡಿದ್ದು, ಈ ಪ್ರಶ್ನೆಗಳ ಜೊತೆಗೆ ಕೇಂದ್ರ ಸರ್ಕಾರವು ಸನಾತನ ಸಂಸ್ಥೆ ಹಾಗೂ ಅದರ ಸದಸ್ಯರನ್ನು (ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಸದಸ್ಯರು) ರಕ್ಷಿಸಲು ಮುಂದಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ದೂರಿದ್ದು, “ಹತ್ಯೆಯ ಸಂಚುಕೋರರನ್ನು ಹಾಗೂ ಮೂವರು ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲಾಗುತ್ತಿದೆ,” ಎಂದು ಆರೋಪಿಸಿದ್ದಾರೆ. ಚವಾಣ್ ಅವರು ಸಿಬಿಐ ಹಾಗೂ ಕೇಂದ್ರ ಸರ್ಕಾರದ ಸುತ್ತ ಆಡಿರುವ ಈ ಮಾತುಗಳು ಈಗ ವಿಶ್ಲೇಷಣೆಗೆ ಒಳಗಾಗಿವೆ.

ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಈ ಹಿಂದೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿ (ಡಾ.ದಾಭೋಲ್ಕರ್ ಸಂಘಟನೆ) ಮತ್ತು ಸನಾತನ ಸಂಸ್ಥೆಯ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ದಾಬೋಲ್ಕರ್ ಅವರ ಹತ್ಯೆಗೆ ಡಾ. ವಿರೇಂದ್ರ ತಾವಡೆ, ವಿನಯ್ ಪವಾರ್ ಹಾಗೂ ಸಾರಂಗ್ ಅಕೋಲ್ಕರ್ ಅವರು ಸಂಚು ರೂಪಿಸಿದ್ದರು ಎಂದು ಉಲ್ಲೇಖಿಸಿದೆ. ಆ ಸಂಚಿನ ಪ್ರಕಾರವೇ ೨೦೧೩ ಆ.೨೦ ರಂದು ಮಹಾರಾಷ್ಟ್ರದ ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ಬೆಳಗಿನ ವಾಯುವಿಹಾರ ಮಾಡುತ್ತಿದ್ದ ನರೇಂದ್ರ ದಾಭೋಲ್ಕರ್ ಅವರನ್ನು ವಿನಯ್ ಪವಾರ್ ಹಾಗೂ ಸಾರಂಗ್ ಅಕೋಲ್ಕರ್ ಬೈಕ್‌ನಲ್ಲಿ ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದೆ. ಆರು ಪ್ರತ್ಯಕ್ಷದರ್ಶಿಗಳು ಪವಾರ್ ಮತ್ತು ಅಕೋಲ್ಕರ್ ಅವರ ಚಿತ್ರವನ್ನು ಗುರುತಿಸಿದ್ದಾರೆ ಎಂದು ದೋಪಾರೋಪ ಪಟ್ಟಿಯಲ್ಲಿ ಹೇಳಲಾಗಿದ್ದು, ಈ ಮಾಹಿತಿಯನ್ನು ‘ದಿ ವೈರ್’ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಆದರೆ, ಈಗ ಅದೇ ಸಿಬಿಐ ಅಂದುರೆಯೇ ದಾಭೋಲ್ಕರ್ ಅವರನ್ನು ಶೂಟ್ ಮಾಡಿದ್ದು ಎಂದು ನಿರೂಪಿಸಲು ಯತ್ನಿಸುತ್ತಿದೆಯೇ? ಹಾಗೆಯೇ ಹಿಂದೆ ಸಲ್ಲಿಸಿದ ದೋಷಾರೋಪ ಪಟ್ಟಿಯನ್ನು ತಿರಸ್ಕರಿಸುತ್ತದೆಯೇ? ಅಲ್ಲದೇ ಇದೇ ಸಿಬಿಐ ೨೦೧೭ರ ಮಾರ್ಚ್‌ ನಲ್ಲಿ ಪವಾರ್ ಹಾಗೂ ಅಕೋಲ್ಕರ್ ಹುಡುಕಿಕೊಟ್ಟವರಿಗೆ ೫ ಲಕ್ಷ ಘೋಷಿಸಿದ್ದು, ಇದನ್ನು ಕೂಡ ಹಿಂತಗೆದುಕೊಂಡಿಲ್ಲ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಆಗಸ್ಟ್ 19 ರಂದು ಸಿಬಿಐ ವಕೀಲರು ಪುಣೆ ಕೋರ್ಟ್ ನಲ್ಲಿ, “ದಾಭೋಲ್ಕರ್ ಹತ್ಯೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಶೂಟರ್ ಗಳ ಹೆಸರನ್ನು ನಮೂದಿಸಲಾಗಿಲ್ಲ,” ಎನ್ನುವ ಮೂಲಕ ದ್ವಂದ್ವ ಹೇಳಿಕೆ ನೀಡಿದ್ದಾರೆ. ವಿಪರ್ಯಾಸ ಎಂದರೆ ದಾಭೋಲ್ಕರ್ ಶೂಟರ್‌ಗಳ ಹೆಸರು ನಮೂದಿಸಿದ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ತನಿಖೆಯ ಮುಖ್ಯಸ್ಥ ನಂದಕುಮಾರ್ ನಾಯರ್, ಹೆಚ್ಚುವರಿ ಅಧೀಕ್ಷಕ ಪೊಲೀಸ್ ಎಸ್ ಆರ್ ಸಿಂಗ್ ಸಹಿ ಇದೆ.

ಸಂಶೋಧಕ ಕಲಬುರ್ಗಿ ಹತ್ಯೆ ಪ್ರಕರಣ

ಸಂಶೋಧಕ ಎಂ ಎಂ ಕಲಬುರ್ಗಿ ಅವರನ್ನು ೨೦೧೫ ಆಗಸ್ಟ್ ೩೦ ರಂದು ಬೆಳಿಗ್ಗೆ ಧಾರವಾಡದ ಕಲ್ಯಾಣನಗರದ ಅವರ ನಿವಾಸದಲ್ಲಿ ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದರೆ, ಈವರೆಗೂ ಯಾರನ್ನು ಬಂಧಿಸಿಲ್ಲ. ಆದರೆ, ಗೌರಿ ಹಾಗೂ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಕಲಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಕಲಬುರ್ಗಿ ತನಿಖೆ ವೇಳೆ ಡಾ.ವೀರೇಂದ್ರ ತಾವಡೆ ಹೆಸರು ಕೇಳಿಬರುತ್ತಿದ್ದಂತೆ ದಾಭೋಲ್ಕರ್ ಹತ್ಯೆಯಾಗಿ ಮೂರುವರ್ಷಗಳ ನಂತರ ೨೦೧೬ ಜೂನ್ ನಲ್ಲಿ ವೀರೇಂದ್ರ ತಾವಡೆಯನ್ನು ಅವನು ವಾಯುವಿಹಾರ ಮಾಡುವ ಸಂದರ್ಭದಲ್ಲಿ ಸಿಬಿಐ ಬಂಧಿಸಿದೆ. ತಾವಡೆ ಸನಾತನ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಯಾಗಿರುವ ಹಿಂದೂ ಜನಜಾಗೃತ ಸಮಿತಿಯ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಇವನ ಬಂಧನದೊಂದಿಗೆ ಲ್ಯಾಪ್‌ಟಾಪ್ ದೊರಕಿದ್ದು, ಅಲ್ಲಿ ಸಾರಂಗ್ ಅಕೋಲ್ಕರ್ ಹಾಗೂ ವಿನಯ್ ಪವಾರ್ ಬಗ್ಗೆ ಮಾಹಿತಿ ಸಿಕ್ಕ ನಂತರ ಅಕೋಲ್ಕರ್‌ನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, ಈಗ ಅಂದುರೆಯೇ ಶೂಟ್ ಮಾಡಿದ ವ್ಯಕ್ತಿ ಎಂದು ಸಿಬಿಐ ಹೇಳಲು ಮುಂದಾಗುತ್ತಿದೆಯೇ? ಅಲ್ಲದೇ ಅಕೋಲ್ಕರ್ ಈವರೆಗೂ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.

ವಿಚಾರವಾದಿ ಪನ್ಸಾರೆ ಹತ್ಯೆ ಪ್ರಕರಣ

೨೦೧೫ ಫೆಬ್ರವರಿ ೧೬ ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳಗಿನ ವಾಯುವಿಹಾರ ಮುಗಿಸಿಕೊಂಡು ತಾವು ತಮ್ಮ ಪತ್ನಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಹತ್ಯೆಯಾಗಿತ್ತು. ಆದರೆ, ಪತ್ನಿ ಸಾವಿನಿಂದ ಪಾರಾಗಿದ್ದಾರೆ. ಪನ್ಸಾರೆ ಹತ್ಯೆ ಪ್ರಕರಣವನ್ನು ಸಿಬಿಐ ನಡೆಸುತ್ತಿದ್ದು, ೨೦೧೫ ರ ಸೆಪ್ಟೆಂಬರ್ ನಲ್ಲಿ ಸನಾತನ ಸಂಸ್ಥೆಯ ಕಾರ್ಯಕರ್ತ ಎನ್ನಲಾಗಿರುವ ಸಮೀರ್ ಗಾಯಕವಾಡ್ ನ್ನು ಬಂಧಿಸಿದೆ.

ಸನಾತನ ಸಂಸ್ಥೆಯ ನಿಷೇಧಕ್ಕೆ ಹೆಚ್ಚಿದ ಆಗ್ರಹ

ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಗೋವಾದ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕೆಂಬ ಆಗ್ರಹಗಳು ಈಗ ಹೆಚ್ಚಾಗಿವೆ. ಮಹಾರಾಷ್ಟ್ರದ ಸನಾತನ ಸಂಸ್ಥೆಯ ಕಾರ್ಯಕರ್ತರು ಹಲಾವರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಎಟಿಎಸ್ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿಯನ್ನು ೨೦೧೫ ರಲ್ಲಿಯೇ ನೀಡಿತ್ತು. ಪಟ್ಟಭದ್ರ ಹಿಸಾಸಕ್ತಿಗಳ ಪ್ರಭಾವದಿಂದಾಗಿ ಎಟಿಎಸ್ ವರದಿ ಮೂಲೆಗುಂಪಾಯಿತು ಎನ್ನಲಾಗಿದೆ.

೨೦೧೧ ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಅಂದಿನ ಮಹಾರಾಷ್ಟ್ರ ಸರ್ಕಾರವೇ ಕೇಂದ್ರಕ್ಕೆ ಈ ಕುರಿತು ಶಿಫಾರಸು ಮಾಡಿತ್ತು. ಆ ವೇಳೆ ಮುಖ್ಯಮಂತ್ರಿ ಆಗಿದ್ದ ಕಾಂಗ್ರೆಸ್ಸಿನ ಪೃಥ್ವಿರಾಜ್ ಚೌಹಾಣ್ ಅವರು ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಮನವಿ ಮಾಡಿ, “ರಾಜ್ಯದ ಸನಾತನ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿಯಾಗಿವೆ. ತಕ್ಷಣವೇ ಸನಾತನ ಸಂಘಟನೆಯನ್ನು ನಿಷೇಧಿಸಬೇಕು,” ಎಂದಿದ್ದರು. ನಂತರ ೨೦೧೪ ರಲ್ಲಿ ಎರಡನೇ ಬಾರಿಗೆ ಸನಾತನ ಸಂಸ್ಥೆಯ ಅಪರಾಧ ಚಟುವಟಿಕೆಗಳ ಮಾಹಿತಿಯುಳ್ಳ ೧೦೦೦ ಪುಟಗಳ ವರದಿಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೀಡಿ ಸನಾತನ ಸಂಸ್ಥೆಯನ್ನು ನಿಷೇಧಿಸಲು ಆಗ್ರಹಿಸಲಾಗಿತ್ತು. ಆದರೆ, ಕೇಂದ್ರದಿಂದ ಈವರೆಗೂ ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ.

ಅಲ್ಲದೇ, ೨೦೧೬ ರಲ್ಲಿ ಮಹಾರಾಷ್ಟ್ರದ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಹಲವಾರು ದಾಖಲೆಗಳೊಂದಿಗೆ ವಿಜಯ ರೋಖಡೆ ಎಂಬುವರು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮುಂಬೈ ಹೈಕೋರ್ಟ್ ಗೆ ಉತ್ತರಿಸುತ್ತ, “ಬಲಪಂಥೀಯ ‘ಸನಾತನ ಸಂಸ್ಥೆ’ ಅಕ್ರಮ ಚಟುವಟಿಕೆ ಕಾಯ್ದೆಯಡಿ ಭಯೋತ್ಪಾದನೆ ಸಂಘಟನೆ ಎಂದು ಘೋಷಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ,” ಎಂದಿತ್ತು.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಸಾವಿನಲ್ಲಿ ಸಿದ್ಧಾಂತದ ಮಿತಿಯನ್ನು ಮೀರಿದ ಗೌರಿಯನ್ನು ಮತ್ತದೇ ಚೌಕಟ್ಟಿಗೆ ಸೀಮಿತಗೊಳಿಸಿದ್ದು ಹೇಗೆ?
ಇದನ್ನೂ ಓದಿ : ಸ್ಟೇಟ್‌ಮೆಂಟ್ | ಗೌರಿ ತನಿಖೆಯ ವಿಷಯದಲ್ಲಿ ನಾವು ವಹಿಸಬೇಕಾದ ಎಚ್ಚರ

ಇತ್ತ, ಕೆಲವು ವಾರಗಳ ಹಿಂದೆ ಗೋವಾದ ಲೇಖಕ ದಾಮೋದರ್ ಮೌಜೊ ಅವರ ಹತ್ಯೆಗೂ ಸಂಚು ರೂಪಿಸಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗೋವಾದ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ನಿಷೇಧಕ್ಕೂ ಆಗ್ರಹ ಕೇಳಿಬಂತು. ಮೌಜೊ ಅವರಿಗೆ ಜೀವ ಬೆದರಿಕೆ ಅಪಾಯ ಅರಿತ ಗೋವಾ ಸರ್ಕಾರ ಪೊಲೀಸ್ ರಕ್ಷಣೆ ಒದಗಿಸಿದೆ. ತಮಗೆ ಎದುರಾಗಿರುವ ಜೀವ ಬೆದರಿಕೆ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, “ಸನಾತನ ಸಂಸ್ಥೆ ದೇಶಕ್ಕೆ ಕ್ಯಾನ್ಸರ್ ಇದ್ದಂತೆ. ಈ ರೋಗವನ್ನು ಹರಡಲು ಬಿಡಬಾರದು,” ಎಂದಿದ್ದರು.

ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧಿತರಾದವರು ಹಿನ್ನೆಲೆ ಗಮನಿಸಿದರೆ ಸಾಮಾನ್ಯರಂತೆ ಓಡಾಡಿಕೊಂಡಿದ್ದ ವ್ಯಕ್ತಿಗಳೇ ಕೊಲೆಗಡುಕರಾಗಿ ಕಾಣತೊಡಗಿದ್ದಾರೆ. ಎಲ್ಲರಂತೆ ಸಾಮಾನ್ಯರಾಗಿದ್ದ ಅವರ ತಲೆಗೆ ದ್ವೇಷದ ಮದ್ದು ತುಂಬಿದವರು, ಕೈಗೆ ಬಂದೂಕು ಕೊಟ್ಟುವರು, ‘ಧರ್ಮ ರಕ್ಷಣೆ’ ಯ ಹೆಸರಲ್ಲಿ ಕೊಲೆಗಡುಕರನ್ನಾಗಿಸಿದ ಇಡೀ ಸಂಚಿನ ಪ್ರಮುಖ ಸೂತ್ರದಾರಿಗಳು ಇನ್ನಷ್ಟೇ ಬಯಲಿಗೆ ಬರುವುದು ಬಾಕಿ ಇದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More