ಚರ್ಚೆ, ವಿವಾದದ ದೀರ್ಘ ದಾರಿ ಸವೆಸಿ ಕೊನೆಗೂ ಕಾನೂನಿನ ಒಪ್ಪಿಗೆ ಪಡೆದ ಸಲಿಂಗ ಪ್ರೇಮ

ಸೆಕ್ಷನ್ 377 ಅನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸಲಿಂಗಿಗಳು ದೇಶಾದ್ಯಂತ ಸಂಭ್ರಮ ಆಚರಿಸುತ್ತಿದ್ದಾರೆ. ಆದರೆ, ಈ ತೀರ್ಪಿಗೆ ಮೊದಲು ದೇಶದಲ್ಲಿ ಸಲಿಂಗ ಪ್ರೇಮಕ್ಕೆ ಸಂಬಂಧಿಸಿದ ಸಾಕಷ್ಟು ಚರ್ಚೆಗಳು ನಡೆದಿವೆ. ಸಲಿಂಗಿಗಳು ವಿವಾದಕ್ಕೂ ಈಡಾಗಿದ್ದಾರೆ

ಭಾರತದಲ್ಲಿ ಸಲಿಂಗ ಪ್ರೇಮವನ್ನು ನಿಷೇಧಿಸುವ ಸೆಕ್ಷನ್ 377 ಅನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸಲಿಂಗಿಗಳು ದೇಶಾದ್ಯಂತ ಸಂಭ್ರಮ ಆಚರಿಸುತ್ತಿದ್ದಾರೆ. ಆದರೆ, ಈ ತೀರ್ಪಿಗೆ ಮೊದಲು ದೇಶದಲ್ಲಿ ಸಲಿಂಗ ಪ್ರೇಮಕ್ಕೆ ಸಂಬಂಧಿಸಿದ ಸಾಕಷ್ಟು ಚರ್ಚೆಗಳು ಮತ್ತು ವಾದ, ವಿವಾದಗಳು ನಡೆದಿವೆ. ಸಲಿಂಗ ಪ್ರೇಮ ಸಾಮಾನ್ಯ ನಡವಳಿಕೆ ಎಂದು ನಾನಾ ದೇಶದ ಸುಪ್ರೀಂ ಕೋರ್ಟ್‌ಗಳು, ಸರ್ಕಾರಗಳು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಹಲವು ಪ್ರತಿಭಟನೆಗಳು, ಮೆರವಣಿಗೆಗಳು, ಸಾವು-ನೋವುಗಳು ಸಂಭವಿಸಿವೆ. ಭಾರತದಲ್ಲಿಯೂ ಈಗಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಲಿಂಗ ಪ್ರೇಮಿಗಳ ಹೋರಾಟ ನಡೆಯುತ್ತಲೇ ಬಂದಿತ್ತು.

ಗಂಡು-ಗಂಡಿನ ನಡುವೆ, ಹೆಣ್ಣು-ಹೆಣ್ಣಿನ ಮಧ್ಯೆ ಪ್ರೀತಿ ಮತ್ತು ಲೈಂಗಿಕ ಸಂಬಂಧ ನೈಸರ್ಗಿಕವಾದುದಲ್ಲ, ಅಸಹಜವಾದುದು, ವಿಕೃತವಾದುದು ಎಂದು ಹೇಳಿದ್ದ ಭಾರತದ ಕಾನೂನು (ಸೆಕ್ಷನ್ 377) ಅಂತಹ ಸಂಬಂಧವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿತ್ತು. ಈ ಕಾರಣದಿಂದ ಅಂಥವರನ್ನು ಪೊಲೀಸರು ಬಂಧಿಸಿ ಮೊಕದ್ದಮೆ ಹೂಡುತ್ತಿದ್ದರು, ಕಿರುಕುಳ ಕೊಡುತ್ತಿದ್ದರು. ಸಮಾಜ ಕೂಡ ಅಂಥವರನ್ನು ಕೀಳಾಗಿ ನೋಡಿ ಅವಹೇಳನ ಮಾಡುತ್ತಿತ್ತು. ಆದ್ದರಿಂದಲೇ ಸಲಿಂಗಿ ಸಮುದಾಯ ಅಂಥ ಕಾನೂನಿನ ವಿರುದ್ಧ ಹೋರಾಟ ನಡೆಸುತ್ತ ಬಂದಿತ್ತು.

ನವದೆಹಲಿಯ ಸಲಿಂಗಿ ದಂಪತಿಗಳಾದ ಸುನೀಲ್ ಮೆಹ್ರಾ ಮತ್ತು ನವ್‌ತೇಜ್ ಜೋಹರ್ ಅವರು ಕಳೆದ ಎರಡು ದಶಕಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಸಲಿಂಗಿ ಮದುವೆಯ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ೧೯೯೪ರಿಂದ ಪರಸ್ಪರ ಪ್ರೇಮಿಸುತ್ತಿರುವ ಭರತನಾಟ್ಯ ಕಲಾವಿದರಾದ ಜೋಹರ್ ಹಾಗೂ ಪತ್ರಕರ್ತ ಸುನೀಲ್ ಮೆಹ್ರಾ ಅವರು, ಕೆಲ ವರ್ಷಗಳ ಹಿಂದೆಯಷ್ಟೇ ಸಾರ್ವಜನಿಕವಾಗಿ ತಾವು ಸಲಿಂಗಿ ಸಂಗಾತಿಗಳು ಎನ್ನುವುದನ್ನು ಘೋಷಿಸಿಕೊಂಡು ದೇಶದಲ್ಲಿ ದೊಡ್ಡ ಮಟ್ಟಿಗಿನ ಚರ್ಚೆಗೆ ಕಾರಣರಾದವರು.

ಇದನ್ನೂ ಓದಿ : ಸಲಿಂಗ ಪ್ರೇಮ ಅಪರಾಧವಲ್ಲ; ಸುಪ್ರೀಂ ಕೋರ್ಟ್‌ನಿಂದ ಸೆಕ್ಷನ್‌ 377 ರದ್ದು

ಸುಪ್ರೀಂ ಕೋರ್ಟ್‌ನಲ್ಲಿ ಸಲಿಂಗಿ ಮದುವೆಗಾಗಿ ಅರ್ಜಿ ಸಲ್ಲಿಸಿದ ಮತ್ತೊಬ್ಬ ದಂಪತಿ ರೆಸ್ಟೊರೆಂಟ್ ಮಾಲೀಕರಾದ ರಿತು ದಾಲ್ಮಿಯಾ ಮತ್ತು ಅವರ ಸಂಗಾತಿ. ೨೩ನೇ ವಯಸ್ಸಿನಲ್ಲಿಯೇ ಸಲಿಂಗಿ ಜೊತೆ ಪ್ರೇಮಕ್ಕೆ ಬಿದ್ದ ದಾಲ್ಮಿಯಾ, ಸಲಿಂಗಿ ಸಮುದಾಯದ ಹಕ್ಕಿಗಾಗಿ ಹೋರಾಡುತ್ತ ಚರ್ಚೆಗೆ ಕಾರಣರಾದವರು. ರಿತು ದಾಲ್ಮಿಯಾ ಅವರು ಬಹಿರಂಗವಾಗಿ ತಮ್ಮನ್ನು ಸಲಿಂಗಿ ಎಂದು ಘೋಷಿಸಿಕೊಂಡು ಸಲಿಂಗ ಪ್ರೇಮದ ವಿರೋಧಿಗಳ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

ಆದರೆ, ದೇಶದಲ್ಲಿ ಸಲಿಂಗ ಪ್ರೇಮವನ್ನು ವಿರೋಧಿಸುತ್ತಿದ್ದವರಿಗೆ ಆಘಾತ ನೀಡಿದ ಘೋಷಣೆ ಎಂದರೆ, ರಾಜಕುಮಾರ ಮನವೇಂದ್ರ ಸಿಂಗ್ ಗೋಹಿಲ್ ಅವರ ಘೋಷಣೆ. ೨೦೦೫ರಲ್ಲಿ ಗುಜರಾತ್‌ನ ರಾಜಪೀಪ್ಲಾದ ರಾಜಕುಮಾರ ಮನ್ವೇಂದರ್ ಸಿಂಗ್ ತಾವು ಸಲಿಂಗಿ ಎಂದು ಘೋಷಿಸಿದ್ದರು. ರಾಜಮನೆತನದ ಸಲಿಂಗಿ ವ್ಯಕ್ತಿ ಶೀಘ್ರವೇ ಭಾರತ ಮತ್ತು ವಿದೇಶಗಳಲ್ಲಿ ಜನಪ್ರಿಯರಾದರು. ಭಾರತದ ಮಾಧ್ಯಮಗಳಲ್ಲಿ ಮನ್ವೇಂದರ್ ಸಿಂಗ್ ಬಗ್ಗೆ ಅತಿ ಕೆಟ್ಟ ಪ್ರಚಾರ ನಡೆಯಿತು. “ಸ್ನೇಹಿತರೇ ನನ್ನ ಜೊತೆಗೆ ಮಾತನಾಡದ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದೇಶಕ್ಕೆ ವಾಪಸಾಗಲು ಇಷ್ಟವೇ ಇಲ್ಲ,” ಎಂದು ಮನ್ವೇಂದರ್ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದರು.

೨೦೦೮ರ ಜೂನ್ ೨೮ರಂದು ಭಾರತದ ಐದು ನಗರಗಳಾದ ದೆಹಲಿ, ಬೆಂಗಳೂರು, ಕೋಲ್ಕತ್ತಾ, ಇಂದೋರ್ ಮತ್ತು ಪಾಂಡಿಚೇರಿಗಳಲ್ಲಿ ಸಲಿಂಗಿ ಸಮುದಾಯ ಪ್ರದರ್ಶನ ಮತ್ತು ಮೆರವಣಿಗೆ ನಡೆಸಿ ಮತ್ತೆ ತಮ್ಮ ಹಕ್ಕುಗಳು ಮುಖ್ಯವಾಹಿನಿಯಲ್ಲಿ ಚರ್ಚೆ ಆಗುವಂತೆ ಮಾಡಿದರು. ಸುಮಾರು ೨,೦೦೦ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

೨೦೦೯ರ ಜುಲೈ ೨ರಂದು ದೆಹಲಿ ಹೈಕೋರ್ಟ್ ಸಲಿಂಗ ಪ್ರೇಮವನ್ನು ಕಾನೂನುಬದ್ಧಗೊಳಿಸಿದ ಕಾರಣ ಭಾರತದ ಮೊದಲ ಅಂತರ್ಜಾಲ ಪತ್ರಿಕೆ ‘ಪಿಂಕ್ ಪೇಜಸ್‌’ ಉದ್ಘಾಟನೆಯಾಗಿತ್ತು. ನಂತರ ಸಲಿಂಗ ಪ್ರೇಮಿಗಳ ಹಕ್ಕಿಗಾಗಿ ಭಾರತದಲ್ಲಿ ಸಾಕಷ್ಟು ಪ್ರದರ್ಶನ ಮತ್ತು ಹೋರಾಟಗಳು ನಡೆದಿವೆ.

ಆದರೆ, ಈ ನಡುವೆ ಸಲಿಂಗಿಗಳೆಂದು ಹೇಳಿಕೊಳ್ಳಲಾಗದೆ ಪ್ರಾಣ ಕಳೆದುಕೊಂಡವರೂ ಸುದ್ದಿಯಾಗಿದ್ದಾರೆ. ಜೆಎನ್‌ಯು ಪ್ರೊಫೆಸರ್ ಶ್ರೀನಿವಾಸ್ ರಾಮಚಂದ್ರ ಶಿರಸ್ ಅವರ ಹೆಸರು ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಉಲ್ಲೇಖಿಸಬೇಕಾಗುತ್ತದೆ. ಶ್ರೀನಿವಾಸ್ ರಾಮಚಂದ್ರ ಅವರ ಬದುಕಿನ ಬಗ್ಗೆ ‘ಅಲಿಘರ್‌’ ಎನ್ನುವ ಸಿನಿಮಾವೂ ತೆರೆಗೆ ಬಂದಿದೆ. ೨೦೧೦ರ ಏಪ್ರಿಲ್‌ನಲ್ಲಿ ಶ್ರೀನಿವಾಸ್ ರಾಮಚಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದರು. ಶ್ರೀನಿವಾಸ್ ಅವರ ಸಂಗಾತಿಯಾಗಿದ್ದ ವ್ಯಕ್ತಿ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಬದುಕುಳಿದರು. ಇವರಿಬ್ಬರ ಪ್ರೇಮ ಮತ್ತು ಸಲಿಂಗಿ ಹಕ್ಕುಗಳಿಲ್ಲದ ದೇಶದಲ್ಲಿ ಅವರನ್ನು ಪೊಲೀಸರು ಮತ್ತು ಸಮಾಜ ನಡೆಸಿಕೊಂಡ ರೀತಿ ಭಯಾನಕ. ಶ್ರೀನಿವಾಸ್ ರಾಮಚಂದ್ರ ಆತ್ಮಹತ್ಯೆ ಮಾಡಿಕೊಂಡ ದಿನವೇ ಅವರು ತಮ್ಮ ಸಲಿಂಗಿ ಸಂಗಾತಿ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ಚಿತ್ರೀಕರಣ ನಡೆಸಲಾಗಿತ್ತು. ಈ ವಿಡಿಯೋ ಬಹಿರಂಗವಾಗುವ ಭಯದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸೆಕ್ಷನ್ ೩೭೭ ತೀರ್ಪಿಗೆ ಬಹಳ ಆನಂದಪಡಬಹುದಾದ ಮತ್ತೊಂದು ಜೋಡಿ ಎಂದರೆ, ಪಂಜಾಬ್‌ನ ಜೈಲ್ ವಾರ್ಡನ್ ಮನ್‌ಜಿತ್ ಮತ್ತು ಆಕೆಯ ಪ್ರೇಮಿ ಸೀರತ್ ಸಂಧು. ದೇಶಾದ್ಯಂತ ಕಳೆದ ಎರಡು ದಶಕದಲ್ಲಿ ಕಂಡುಬಂದ ಮೌನ ಪ್ರತಿಭಟನೆಯ ಮತ್ತೊಂದು ಉದಾಹರಣೆ ಮನ್‌ಜಿತ್ ಮತ್ತು ಸೀರತ್ ಅವರ ಸಲಿಂಗ ಪ್ರೇಮ. ದೇಶದಲ್ಲಿ ಸಲಿಂಗ ಮದುವೆಗೆ ಅಂಗೀಕಾರ ನೀಡದೆ ಇದ್ದರೂ ೨೦೧೭ ಜೂನ್‌ನಲ್ಲಿ ಇವರಿಬ್ಬರೂ ಅಬ್ಬರದ ಪಂಜಾಬಿ ಮದುವೆ ಮಾಡಿಕೊಂಡರು. ಜಲಂಧರ್‌ನ ಪಕ್ಕಾ ಭಾಗ್ ದೇವಾಲಯದಲ್ಲಿ ಇವರ ಮದುವೆ ನಡೆಯಿತು. ಜೋಡಿ ಕುದುರೆಗಳು ಓಡಿಸುವ ಜಟಕಾದ ಮೇಲೆ ಮದುವೆ ಮೆರವಣಿಗೆ ಸಾಗಿದ ಚಿತ್ರಗಳು ದೇಶಾದ್ಯಂತ ತಲ್ಲಣ ಎಬ್ಬಿಸಿದ್ದವು. ಮನ್‌ಜಿತ್ ಮೇಲಧಿಕಾರಿಗಳು ಮತ್ತು ಪಂಜಾಬ್ ಪೊಲೀಸರು ಅಧಿಕೃತವಾಗಿ ವಿವರಣೆ ನೀಡುವಂತೆ ಆಕೆಗೆ ನೋಟಿಸ್ ಕಳುಹಿಸಿದ್ದರು. ಇಂದಿಗೂ ಅವರ ಮದುವೆಗೆ ಕಾನೂನು ಅಂಕಿತ ಇಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪು ಮನ್‌ಜಿತ್ ಮತ್ತು ಸೀರತ್‌ ದಂಪತಿಗೆ ಅತಿ ದೊಡ್ಡ ಸುದ್ದಿ.

ಭಾರತದಾಚೆಯ ಸಲಿಂಗ ಪ್ರೇಮದ ಚರ್ಚೆಗೀಗ ಶತಮಾನ

ಭಾರತದಲ್ಲಿ ಸಲಿಂಗಿ ಮದುವೆ ಬಗ್ಗೆ ಕಳೆದ ಎರಡು ದಶಕಗಳಿಂದ ಹೆಚ್ಚು ಚರ್ಚೆಯಾಗಿದೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ೧೯ನೇ ಶತಮಾನದಿಂದಲೇ ಸಲಿಂಗಿ ಹಕ್ಕುಗಳು ಮತ್ತು ಸಲಿಂಗಿ ಮದುವೆ ಚರ್ಚೆಯ ವಿಷಯವಾಗಿರುವುದಲ್ಲದೆ ಹಲವು ಕಾನೂನು ಬದಲಾವಣೆಗಳೂ ಆಗಿವೆ. ೧೯೮೦ರಲ್ಲಿ ಇತಿಹಾಸಜ್ಞ ಜಾನ್ ಈಸ್ಟ್‌ಬರ್ನ್‌ ಬೋಸ್ವೆಲ್ ತಮ್ಮ ಸಲಿಂಗ ಪ್ರೇಮವನ್ನು ಬಹಿರಂಗವಾಗಿ ಘೋಷಿಸಿದ್ದಲ್ಲದೆ, ಕ್ಯಾಥೊಲಿಕ್ ಸಮುದಾಯದಲ್ಲಿ ಸಲಿಂಗಿ ಮದುವೆಗೆ ಹಿಂದಿನಿಂದಲೂ ಅಂಕಿತವಿದೆ ಎಂದು ಘೋಷಣೆ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬೋಸ್ವೆಲ್ ಅವರು ಕ್ಯಾಥೊಲಿಕ್ ಚರ್ಚ್‌ ಸಲಿಂಗಿ ಮದುವೆಯನ್ನು ಒಪ್ಪಿಕೊಂಡಿದೆ ಎಂದು ಸಾಬೀತು ಮಾಡುವ ಇತಿಹಾಸ ಪುಸ್ತಕವನ್ನು ಬರೆದಿದ್ದರು. ಇದು ಸಲಿಂಗಿ ಮದುವೆಯನ್ನು ಅಂಗೀಕರಿಸಬಹುದು ಎಂದು ಘೋಷಿಸಿದ ಮೊದಲನೇ ಶೈಕ್ಷಣಿಕ ಪಠ್ಯಪುಸ್ತಕವೆಂದೂ ಹೇಳಬಹುದು. ಈ ಪುಸ್ತಕಕ್ಕೆ ಸಂಬಂಧಿಸಿದ ವಿವರಗಳನ್ನು ತೆಗೆದುಕೊಂಡು ಕಾರ್ಟೂನಿಸ್ಟ್ ಗ್ಯಾರಿ ಟ್ರುಡೇವ್ ‘ಡೂನ್ಸ್‌ಬರಿ’ ಎನ್ನುವ ಕಾರ್ಟೂನ್ ಸರಣಿಯನ್ನು ೧೯೯೪ರಲ್ಲಿ ಪ್ರಕಟಿಸಿದಾಗ, ಮತ್ತೆ ಸಲಿಂಗಿ ಮದುವೆಯ ಸುದ್ದಿ ಕ್ರಿಶ್ಚಿಯನ್ ಸಮುದಾಯದಲ್ಲಿ ಚರ್ಚೆಯಾಗಿತ್ತು. ಸಾಂಪ್ರದಾಯಿಕ ಸಮಾಜ ಈ ಬದಲಾವಣೆಯನ್ನು ಒಪ್ಪಲು ಸಿದ್ಧರಿರಲಿಲ್ಲ.

ಅಮೆರಿಕ ಮತ್ತು ಯೂರೋಪ್‌ಗಳಲ್ಲಿ ನಿಧಾನವಾಗಿ ಬದಲಾವಣೆಯ ಗಾಳಿ ಬೀಸಿತು. ಸಲಿಂಗಿಗಳ ಮದುವೆಗೆ ಅಂಕಿತ ಹಾಕಿದ ಮೊದಲ ಪಾಶ್ಚಾತ್ಯ ದೇಶ ಅರ್ಜೆಂಟೀನಾ. ನಂತರ ಇತರ ದೇಶಗಳು ನಿಧಾನವಾಗಿ ತಮ್ಮ ಕಾನೂನುಗಳನ್ನು ಬದಲಿಸಿಕೊಂಡಿವೆ. ಆದರೆ, ಅಮೆರಿಕದ ಅತಿದೊಡ್ಡ ಯುವ ಸಂಘಟನೆ ‘ಬಾಯ್‌ ಸ್ಕೌಟ್ಸ್ ಆಫ್ ಅಮೆರಿಕ’ ೨೦೧೪ರವರೆಗೂ ಸಲಿಂಗಿಗಳಿಗೆ ಮನ್ನಣೆ ಕೊಟ್ಟಿರಲಿಲ್ಲ. ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಸಲಿಂಗಿ ಹಕ್ಕುಗಳ ಹೋರಾಟ, ಸಲಿಂಗಿಗಳು ಬಹಿರಂಗವಾಗಿ ಸಂಬಂಧ ಘೋಷಿಸಿಕೊಳ್ಳುವ ಧೈರ್ಯ ಮಾಡಿರುವುದು ಬದಲಾವಣೆಗೆ ಕಾರಣವಾಯಿತು. ಆದರೆ, ೨೦೧೦ರಲ್ಲಿ ಫ್ಲೋರಿಡಾದ ಸಲಿಂಗಿಗಳ ಬಾರ್‌ ಮೇಲೆ ದಾಳಿ ನಡೆಸಿದ ವ್ಯಕ್ತಿಯೊಬ್ಬ ಕಂಡಲ್ಲಿ ಗುಂಡು ಹೊಡೆದು ಇಬ್ಬರನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದ. ಆರೋಪಿ ಪೀಟರ್ ಅವೆಸ್‌ನ್ಯೂಗೆ ನ್ಯಾಯಾಲಯ ನೇಣುಶಿಕ್ಷೆ ವಿಧಿಸಿದೆ.

ಪಾಶ್ಚಾತ್ಯ ದೇಶಗಳಲ್ಲಿ ಸಲಿಂಗ ಪ್ರೇಮಕ್ಕೆ ಕಾನೂನುಬದ್ಧವಾಗಿ ಅವಕಾಶ ನೀಡಲಾಗಿದೆಯಾದರೂ ಇಂದಿಗೂ ಸಲಿಂಗ ಪ್ರೇಮಿಗಳು ತಾರತಮ್ಯ ಎದುರಿಸಿರುವ ಬಗ್ಗೆ ಸುದ್ದಿಯಾಗುತ್ತಲೇ ಇವೆ. ಕಳೆದ ಒಂದು ಕೆಲವು ತಿಂಗಳಲ್ಲಿ ವರದಿಯಾದ ಅಂತಹ ಕೆಲವು ಪ್ರಕರಣಗಳು ಇಲ್ಲಿವೆ:

  1. ಟೆಕ್ಸಾಸ್‌ನ ಮೆಕ್ಸಿಕನ್ ರೆಸ್ಟೊರೆಂಟ್‌ನಲ್ಲಿ ಸಲಿಂಗಿ ಜೋಡಿಯನ್ನು ಅವಹೇಳನ ಮಾಡಿರುವ ಪ್ರಕರಣದಲ್ಲಿ ಮೆಕ್ಸಿಕನ್ ರೆಸ್ಟೊರಂಟ್ ಸೆಪ್ಟೆಂಬರ್ ೫ರಂದು ಕ್ಷಮೆ ಯಾಚಿಸಿದೆ. ಸಲಿಂಗ ಪ್ರೇಮಿಗಳು ಫೇಸ್‌ಬುಕ್‌ನಲ್ಲಿ ತಮ್ಮ ಅನುಭವ ಬರೆದುಕೊಂಡ ನಂತರ ರೆಸ್ಟೊರಂಟ್ ಕ್ಷಮೆ ಯಾಚಿಸಿತ್ತು.
  2. ಆಗಸ್ಟ್ ೧೬ರಂದು ವರದಿಯಾದ ಪ್ರಕರಣವೊಂದರಲ್ಲಿ ಸಲಿಂಗ ಪ್ರೇಮಿಗಳಿಗಾಗಿ ಕೇಕ್‌ ತಯಾರಿಸಲು ಸಿದ್ಧವಿಲ್ಲ ಎಂದು ಹೇಳಿದ ಅಮೆರಿಕದ ಕೊಲರಡೋದ ಜಾಕ್ ಫಿಲಿಪ್ಸ್‌ ಎಂಬಾತ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗಿ ಬಂದಿದೆ.
  3. ಸಲಿಂಗಿ ದಂಪತಿಗಳಾದ ಜೆಫ್‌ ಕಾಬ್ ಮತ್ತು ಆಕೆಯ ಪತಿ ಸ್ಯಾನ್‌ ಫ್ರಾನ್ಸಿಸ್ಕೋದಿಂದ ತೈವಾನ್‌ನ ತೈಪೆಗೆ ತಮ್ಮ ೧೯ ತಿಂಗಳ ಮಗುವಿನ ಜೊತೆಗೆ ತೆರಳುತ್ತಿದ್ದರು. ಆದರೆ, ವಿಮಾನದಲ್ಲಿ ಸಲಿಂಗಿ ದಂಪತಿಗೆ ‘ಕುಟುಂಬ’ ಎಂದು ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿದೆ.
  4. ಸಲಿಂಗಿ ದಂಪತಿಗಳಾದ ಅಲಿರೆಜಾ ಮತ್ತು ಕಿರಣ್‌ ಅವರನ್ನು ಟರ್ಕಿಯಲ್ಲಿ ಜೊತೆಯಾಗಿ ಪ್ರಯಾಣಿಸಲು ಅವಕಾಶ ನೀಡಿರಲಿಲ್ಲ. ಇರಾನ್‌ನ ಅಲಿರೆಜಾ ಮತ್ತು ಭಾರತದ ಕಿರಣ್ ಅವರನ್ನು ಕುಟುಂಬ ಎಂದು ಒಪ್ಪಿಕೊಳ್ಳಲು ಟರ್ಕಿ ಸಿದ್ಧವಿರಲಿಲ್ಲ. ಇರಾನ್ ಮತ್ತು ಭಾರತದಲ್ಲಿ ಸಲಿಂಗಿ ಮದುವೆ ಕಾನೂನುಬದ್ಧವಲ್ಲ ಎನ್ನುವ ಕಾರಣದಿಂದ ಹೆತ್ತವರಿಗೆ ವಿಷಯ ತಿಳಿಸದೆ ಈ ದಂಪತಿ ಹೊರದೇಶದಲ್ಲಿ ಜೊತೆಯಾಗಿ ನೆಲೆಸಿದ್ದರು.
  5. ಸಲಿಂಗ ಪ್ರೇಮಿಗಳಾದ ಪ್ಯಾವೆಲ್ ಸ್ಟೋಟ್ಸಕೋ ಮತ್ತು ಯೆವ್‌ಗೆನಿ ವೊಯ್ಟೆಸ್ಖೊವ್‌ಸ್ಕಿ, ಮದುವೆಯ ನಂತರ ರಷ್ಯಾದಲ್ಲಿ ನೆಲೆಸಲು ಸಾಧ್ಯವಾಗದೆ ದೇಶ ಬಿಡುವ ಬಗ್ಗೆ ಚಿಂತಿಸಿರುವುದು ಸುದ್ದಿಯಾಗಿದೆ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More