ಸರ್ಕಾರಿ ಭೂಕಬಳಿಕೆ: ‘ಭೂಮಿ’ ನಿರ್ವಹಣೆ ಕೇಂದ್ರ ಕಚೇರಿಯಲ್ಲೇ ಒಳಸಂಚು?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಹಕ್ಕು ಬದಲಾವಣೆ ಮಾಡಿರುವ ಪ್ರಕರಣ ಕುರಿತ ‘ದಿ ಸ್ಟೇಟ್‌’ ವರದಿ ‘ಭೂಮಿ’ ಕೇಂದ್ರ ಕಚೇರಿಯಲ್ಲಿ ಸದ್ದು ಮಾಡಿದೆ. ಹೊರರಾಜ್ಯದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಪ್ರಕರಣದ ಹಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ

ಸರ್ಕಾರಿ ಬೀಳುಭೂಮಿ ಕಬಳಿಸುವ ಉದ್ದೇಶದಿಂದ ನೇರವಾಗಿ ‘ಭೂಮಿ’ ಸಾಫ್ಟ್‌ವೇರ್‌ಗೆ ಕೈಹಾಕಿ ಹಕ್ಕು ಬದಲಾವಣೆ ಮಾಡಿಸಿದ್ದ ಪ್ರಕರಣವು, ‘ಭೂಮಿ’ ತಂತ್ರಾಂಶ ನಿರ್ವಹಣೆಯ ಕೇಂದ್ರ ಕಚೇರಿಯಲ್ಲಿ ಸಂಚಲನ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪ್ರಕರಣದ ಹಿಂದೆ ಆಂಧ್ರ ಸೇರಿದಂತೆ ಹೊರರಾಜ್ಯದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಭಾಗಿ ಆಗಿರುವ ಸಾಧ್ಯತೆಗಳಿವೆ.

ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದ ಸರ್ಕಾರಿ ಬೀಳುಭೂಮಿ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ತಡವಾಗಿ ಎಚ್ಚೆತ್ತುಕೊಂಡಿದೆಯಾದರೂ, ಇದನ್ನು ಸೈಬರ್‌ ಕ್ರೈಂ ಠಾಣೆಗೆ ವಹಿಸಿಲ್ಲ. ಅಲ್ಲದೆ, ಕ್ರಿಮಿನಲ್‌ ಮೊಕದ್ದಮೆಯನ್ನೂ ದಾಖಲಿಸಿಲ್ಲ. ಬದಲಿಗೆ ವಂಚನೆ ಅಪರಾಧ ಅಡಿಯಲ್ಲಿ ಸ್ಥಳೀಯ ವಿಜಯಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ತಿಳಿದುಬಂದಿದೆ. ಇದು ಅಧಿಕಾರಿಗಳ ವಲಯದಲ್ಲಿ ಅಚ್ಚರಿ ಮೂಡಿಸಿದೆ.

“ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದಲೇ ಒಳಸಂಚು ಮಾಡಿ ಗಣಕ ಯಂತ್ರದಲ್ಲಿ ಫೋರ್ಜರಿ ಮಾಡಿ ಪಹಣಿ ಬದಲಾವಣೆ ಮಾಡಲಾಗಿದೆ,” ಎಂದು ತಹಶೀಲ್ದಾರ್ ನೀಡಿರುವ ವರದಿಯೇ, ಪ್ರಕರಣದಲ್ಲಿ ‘ಭೂಮಿ’ ಸಾಫ್ಟ್‌ವೇರ್‌ ನಿರ್ವಹಣೆಯ ಕೇಂದ್ರ ಕಚೇರಿ ತಂತ್ರಜ್ಞರು, ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಂತಾಗಿದೆ.

ಈ ಪ್ರಕರಣವನ್ನೇ ನಿದರ್ಶನವಾಗಿಟ್ಟುಕೊಂಡು ‘ಭೂಮಿ’ ಸಾಫ್ಟ್‌ವೇರ್ ನಿರ್ವಹಣೆಯ ಕೇಂದ್ರ ಕಚೇರಿಯಲ್ಲಿನ ಅಧಿಕಾರಿ, ಸಿಬ್ಬಂದಿಯನ್ನು ತನಿಖೆಗೊಳಪಡಿಸಿದ್ದಲ್ಲಿ ರಾಜ್ಯದ ವಿವಿಧೆಡೆ ಸರ್ಕಾರಿ ಬೀಳುಭೂಮಿ ಹೇಗೆಲ್ಲ ಖಾಸಗಿ ವ್ಯಕ್ತಿ, ಕಂಪನಿಗಳಿಗೆ ಹಕ್ಕು ಬದಲಾವಣೆ ಆಗಿವೆ ಎಂಬುದನ್ನು ಪತ್ತೆಹಚ್ಚಬಹುದಿತ್ತು. ಅಲ್ಲದೆ, ಇಂತಹ ಪ್ರಕರಣಗಳ ಹಿಂದೆ ಕೆಲಸ ಮಾಡುತ್ತಿರುವ ಜಾಲವನ್ನು ಬಹಿರಂಗಗೊಳಿಸಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ವಲಯದಲ್ಲೇ ಅನುಮಾನಗಳು ವ್ಯಕ್ತವಾಗಲು ಕಾರಣವಾಗಿದೆ.

“ಗಣಕೀಕೃತ ಪಹಣಿಯಲ್ಲಿ ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಹೆಸರು ದಾಖಲು ಮಾಡಿರುವುದು ಕ್ರಿಮಿನಲ್‌ ಪ್ರಕರಣವಾಗಿದ್ದು, ಸರ್ಕಾರಿ ಆಸ್ತಿ ದೋಚಲು ನಡೆಸಿರುವ ಪ್ರಯತ್ನ ಆಗಿರುವುದರಿಂದ ಎಫ್‌ಐಆರ್‌ ದಾಖಲಿಸುವುದು ಅವಶ್ಯ. ಆದುದರಿಂದ ಸರ್ಕಾರಿ ಆಸ್ತಿಯನ್ನು ದೋಚಲು ಗಣಕೀಕೃತ ದಾಖಲೆಗಳನ್ನು ತಿದ್ದಲು ಪ್ರಯತ್ನಿಸಿದವರನ್ನು ಪತ್ತೆಹಚ್ಚಲು ಪ್ರಕರಣ ದಾಖಲಿಸಲು ಸೂಚಿಸಿದೆ,” ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರು ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಜಮೀನು ಕಬಳಿಸಲು ಭೂಮಿ ಸಾಫ್ಟ್‌ವೇರ್‌ಗೆ ಕೈ ಹಾಕಿತೇ ಭೂ ಮಾಫಿಯಾ?

ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದ ಸರ್ವೆ ನಂಬರ್‌ ೬೪ರಲ್ಲಿನ ೧೯ ಎಕರೆ ೧೪ ಗುಂಟೆ ಸರ್ಕಾರಿ ಬೀಳುಭೂಮಿಯು, ಅನಧಿಕೃತ ವ್ಯಕ್ತಿ ಎಂದು ಹೇಳಲಾಗಿರುವ ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರಿಗೆ ಹಕ್ಕು ಬದಲಾವಣೆ ಆಗಿತ್ತು. ಈ ಪ್ರಕ್ರಿಯೆ ೨೦೧೮ರ ಜೂನ್ ೨ರಿಂದ ಆಗಸ್ಟ್ ೧೩ರ ಮಧ್ಯದಲ್ಲಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳು ೨೦೧೮ರ ಆಗಸ್ಟ್‌ ೩೦ರಂದು ‘ಭೂಮಿ’ ಕೇಂದ್ರದ ಪಹಣಿಗಳನ್ನು ಪರಿಶೀಲನೆ ಮಾಡಿದ್ದರು. ೨೦೦೨ನೇ ಸಾಲಿನಿಂದ ಈವರೆಗೆ ಪಹಣಿ ಬದಲಾವಣೆ ಆಗಿದೆ ಎಂಬುದು ಕಂಡುಬಂದಿದೆ. “ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಸರ್ಕಾರಿ ಬೀಳು ಎಂಬುದು ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರ ಹೆಸರಿಗೆ ಪಹಣಿ ಕಾಲಂ(೯)ರಲ್ಲಿ ದಾಖಲಾಗಿದೆ. ಆದರೆ, ದೇವನಹಳ್ಳಿ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಪಹಣಿ ತಿದ್ದುಪಡಿ ಮತ್ತು ಮ್ಯುಟೇಷನ್‌ ಆಗಿರುವ ಬಗ್ಗೆ ಯಾವುದೇ ವಹಿವಾಟುಗಳು ನಡೆದಿರುವುದು ಕಂಡುಬರುವುದಿಲ್ಲ. ಆದರೆ, ಪಹಣಿ ಕಾಲಂ(೯)ರಲ್ಲಿ ಹುಚ್ಚಪ್ಪ ಬಿನ್ ನಂಜಪ್ಪ ಅವರ ಹೆಸರಿಗೆ ಖಾತೆ ಎಲ್ಲಿ ಹೇಗೆ ನಮೂದಾಗಿರುತ್ತದೆ ಎಂಬುದು ತಿಳಿದುಬಂದಿಲ್ಲ,” ಎಂದು ತಿಳಿಸಿರುವುದು ಗ್ರಾಮಲೆಕ್ಕಿಗರಾದ ಎಂ ಪಿ ರಮ್ಯ ಅವರು ಸ್ಥಳೀಯ ತಹಶೀಲ್ದಾರ್‌ ಅವರಿಗೆ ನೀಡಿರುವ ಹೇಳಿಕೆಯಿಂದ ತಿಳಿದುಬಂದಿದೆ.

ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಗೊಬ್ಬರಗುಂಟೆ ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಜಮೀನು ಸರ್ಕಾರಿ ಬೀಳು ಎಂದು ವರ್ಗೀಕೃತವಾಗಿತ್ತು. ೧೯೬೮-೬೯ರಿಂದ ೨೦೦೧-೦೨ನೇ ಸಾಲಿನ ಕೈ ಬರಹದ ಪಹಣಿ ಮತ್ತು ಆರ್‌ ಟಿ ಸಿ ಕಾಲಂ(೯)ರಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿತ್ತು. ಅಲ್ಲದೆ, ಕಾಲಂ ೧೨(೨)ರಲ್ಲಿ ವಿ ಪಿ ಫಾರೆಸ್ಟ್‌ ಎಂದು ದಾಖಲಾಗಿತ್ತು. ಅಲ್ಲದೆ, ೨೦೧೬-೧೭ನೇ ಸಾಲಿನಲ್ಲಿ ಸರ್ಕಾರದಿಂದ ಗ್ರಾಮ ಲೆಕ್ಕಿಗರಿಗೆ ನೀಡಿರುವ ಗಣಕೀಕೃತ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ದಾಖಲಾಗಿತ್ತು.

ಇನ್ನು, ಕರ್ನಾಟಕ ಭೂಕಂದಾಯ ಕಾಯ್ದೆ-೧೯೬೪ರ ಕಲಂ ೯೪ ಸಿ ಅಡಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಮನೆ ಕಟ್ಟಿರುವ ವ್ಯಕ್ತಿಗಳಿಗೆ ಕಾಯಂ ಹಕ್ಕುಪತ್ರ ನೀಡುವ ಸಂದರ್ಭದಲ್ಲಿಯೂ ಜನರಿಗೆ ಸ್ಕೆಚ್‌ ಮತ್ತು ಕಡತಗಳನ್ನು ತಯಾರಿಸುವ ಸಂದರ್ಭದಲ್ಲಿ ಪಡೆದಿರುವ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ನಮೂದಾಗಿತ್ತು. ಹಲವು ವರ್ಷಗಳಿಂದಲೂ ಸರ್ಕಾರಿ ಬೀಳು ಎಂದು ದಾಖಲಾಗಿದ್ದರೂ ಗಣಕೀಕೃತ ಪಹಣಿಯಲ್ಲಿ ಇದ್ದಕ್ಕಿದ್ದಂತೆ ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರ ಹೆಸರು ಸೇರ್ಪಡೆಯಾಗಿದೆಯಲ್ಲದೆ, ಇವರ ಹೆಸರಿಗೇ ೧೯ ಎಕರೆ ೧೪ ಗುಂಟೆ ಹಕ್ಕು ಬದಲಾವಣೆ ಆಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More