ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ರಮೇಶ್‌ ಜಾರಕಿಹೊಳಿ ಬಹಿರಂಗ ಹೇಳಿಕೆ ನೀಡುವುದು ಸಲ್ಲ: ದಿನೇಶ್

ಕಾಂಗ್ರೆಸ್‌ ಪಕ್ಷವು ಅಶಿಸ್ತನ್ನು ಸಹಿಸುವುದಿಲ್ಲ. ಸಚಿವ ರಮೇಶ್‌ ಜಾರಕಿಹೊಳಿ ಅವರು ಪಕ್ಷದ ನಾಯಕರ ವಿರುದ್ಧವಾಗಿ ಬಹಿರಂಗ ಹೇಳಿಕೆ ನೀಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ವೈಯಕ್ತಿಕ ಹಾಗೂ ಸ್ಥಳೀಯ ವಿಚಾರಗಳ ಬಗ್ಗೆ ಸಚಿವರು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ವಿವಾದ ಬಗೆಹರಿಸುವ ಸಂಬಂಧ ಎಲ್ಲ ನಾಯಕರ ಜೊತೆ ಮಾತುಕತೆ ನಡೆಸಲಾಗುವುದು ಎಂದು ದಿನೇಶ್‌ ಅವರು ಹೇಳಿದ್ದಾರೆ.

ಹೈ-ಕ ಭಾಗದಲ್ಲಿ ವಿಶೇಷ ಸಭೆ: ಸಿಎಂ ಎಚ್‌ಡಿಕೆ

ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಹಾಗೂ ಸಮಸ್ಯೆ ಕುರಿತು ಚರ್ಚಿಸಲು ಆ ಭಾಗದಲ್ಲಿಯೇ ವಿಶೇಷ ಸಭೆ ನಡೆಸಲಾಗುವುದು. ಸಭೆಗೆ ಅಲ್ಲಿನ ಎಲ್ಲ ಜನಪ್ರತಿನಿಧಿಗಳು ಹಾಗೂ ಪ್ರಮುಖರಿಗೆ ಆಹ್ವಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹೈದರಾಬಾದ್‌ ಕರ್ನಾಟಕಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಆದರೆ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿಬ್ಬಂದಿಯ ಕೊರತೆಯಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕ ವೈಜನಾಥ್‌ ಪಾಟೀಲ್‌ ನೇತೃತ್ವದ ಸಮಿತಿಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಸೆಪ್ಟೆಂಬರ್ ೧೦ರಂದು ಭಾರತ್‌ ಬಂದ್‌ಗೆ ಕಾಂಗ್ರೆಸ್‌ ಆಗ್ರಹ

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರ ವಿರೋಧಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೆಪ್ಟೆಂಬರ್‌ ೧೦ರಂದು ಭಾರತ್‌ ಬಂದ್‌ಗೆ ಕರೆ ನೀಡಿದೆ. ಮೋದಿ ಸರ್ಕಾರದ ನಿಲುವುಗಳಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಇದರ ಪರಿಣಾಮ ಜನರ ಮೇಲೆ ಬಿದ್ದಿದೆ ಎಂದಿದೆ. ಕಾಂಗ್ರೆಸ್‌ ಕರೆ ನೀಡಿರುವ ಬಂದ್ಗೆ ವಿರೋಧ ಪಕ್ಷಗಳು ಬೆಂಬಲ ನೀಡಬೇಕು ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಮನವಿ ಮಾಡಿದ್ದಾರೆ.

ಭಯೋತ್ಪಾದನೆ ತಡೆಯಲು ಕ್ರಮ ಕೈಗೊಳ್ಳುವಂತೆ ಪಾಕ್‌ಗೆ ಭಾರತ, ಅಮೆರಿಕ ಆಗ್ರಹ

ತನ್ನ ನೆಲದಿಂದ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಭಾರತ ಹಾಗೂ ಅಮೆರಿಕ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಸಭೆಯಲ್ಲಿ ಮುಂಬೈ, ಪಠಾಣ್‌ಕೋಟ್‌, ಉರಿ ಮತ್ತಿತರ ಕಡೆ ನಡೆದ ಭಯೋತ್ಪಾದನಾ ದಾಳಿಗಳಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಉಭಯ ರಾಷ್ಟ್ರಗಳು ಆಗ್ರಹಿಸಿವೆ.

ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನ ಸೆ.೧೨ರವರೆಗೆ ವಿಸ್ತರಣೆ

ಮಹಾರಾಷ್ಟ್ರದಲ್ಲಿ ವರ್ಷದ ಆರಂಭದಲ್ಲಿ ನಡೆದ ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಸಾಮಾಜಿಕ ಹೋರಾಟಗಾರರ ಗೃಹಬಂಧನವನ್ನು ಸೆ.೧೨ರ ವರೆಗೆ ಸುಪ್ರೀಂಕೋರ್ಟ್‌ ವಿಸ್ತರಿಸಿದೆ. ಮಹಾರಾಷ್ಟ್ರ ಪೊಲೀಸರು ಕಾನೂನು ಉಲ್ಲಂಘಿಸಿ ಬಂಧಿತರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಕ್ರಮವನ್ನು ಕಟು ಶಬ್ದಗಳಲ್ಲಿ ಖಂಡಿಸಿತು. ಪ್ರಕರಣ ನ್ಯಾಯಾಲಯದಲ್ಲಿರುವಾಗ ಸೂಕ್ಷ್ಮವಾಗಿ ವರ್ತಿಸಬೇಕು ಎಂಬುದು ತಿಳಿದಿಲ್ಲವೇ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ರಫೇಲ್‌ ಒಪ್ಪಂದ: ಪ್ರಧಾನಿ ಮೋದಿ ಮೊದಲ ಪ್ರತಿವಾದಿ

ವಿವಾದಿತ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ತಡೆ ನೀಡುವಂತೆ ವಕೀಲ ಮನೋಹರ್‌ ಲಾಲ್‌ ಶರ್ಮಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಸಿಜೆಐ ದೀಪಕ್‌ ಮಿಶ್ರಾ, ನ್ಯಾ ಖಾನ್ವಿಲ್ಕರ್ ಮತ್ತು ನ್ಯಾ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ತುರ್ತು ವಿಚಾರಣೆಗೆ ಸಮ್ಮತಿ ಸೂಚಿಸಿದೆ. ಅರ್ಜಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೊದಲ ಪ್ರತಿವಾದಿಯನ್ನಾಗಿಸಲಾಗಿದೆ.

ಬಾಲಿವುಡ್ ನಟ ದಿಲೀಪ್ ಕುಮಾರ್‌ ಆರೋಗ್ಯದಲ್ಲಿ ಚೇತರಿಕೆ

ಬಾಲಿವುಡ್ ಹಿರಿಯ ನಟ ದೀಲಿಪ್ ಕುಮಾರ್ ತೀವ್ರ ಅನಾರೋಗ್ಯದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ದಿನಗಳಿಂದ ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿರುವ 94 ವರ್ಷದ ದೀಲಿಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ದಿಲೀಪ್ ಕುಮಾರ್ ಪತ್ನಿ ಸೈಯಿರಾ ಭಾನು ಅವರು ದಿಲೀಪ್ ಕುಮಾರ್‌ ಆರೋಗ್ಯ ಸುಧಾರಿಸುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರತ ವಿರುದ್ಧದ ಫೈನಲ್‌ ಟೆಸ್ಟ್‌ನಲ್ಲಿ ಜಾನಿ ಕೀಪಿಂಗ್

ಶುಕ್ರವಾರದಿಂದ (ಸೆ. ೭) ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಾನಿ ಬೇರ್‌ಸ್ಟೋ ಕೀಪಿಂಗ್ ವಹಿಸಿಕೊಂಡಿದ್ದಾರೆ. ಈ ಸಂಗತಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯದಲ್ಲಿ ೨೦೩ ರನ್ ಗೆಲುವು ಸಾಧಿಸಿದ ಭಾರತದ ವಿರುದ್ಧ ಜಾನಿ ಬೇರ್‌ಸ್ಟೋ ಕೀಪಿಂಗ್ ಮಾಡಿದ್ದರಾದರೂ, ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ, ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಜೋಸ್ ಬಟ್ಲರ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದರು. ಅಂದಹಾಗೆ, ಅಲೆಸ್ಟೈರ್ ಕುಕ್ ಪಾಲಿಗೆ ಕಟ್ಟಕಡೆಯ ಪಂದ್ಯವಾಗಿರುವ ಓವಲ್ ಟೆಸ್ಟ್‌ನಲ್ಲಿ ಭಾರತ ಗೆಲುವು ಕಾಣುವುದರೊಂದಿಗೆ ಸರಣಿ ಸೋಲಿನ ಕಹಿಯನ್ನು ಮರೆಯಲು ಸನ್ನದ್ಧವಾಗಿದೆ.

ಪಾಕ್ ಏಷ್ಯಾ ಕಪ್ ತಂಡದಲ್ಲಿ ಆಲ್ರೌಂಡರ್ ಹಫೀಜ್‌ಗಿಲ್ಲ ಸ್ಥಾನ

ಮುಂದಿನ ವಾರ ಅಬುಧಾಬಿಯಲ್ಲಿ ಶುರುವಾಗಲಿರುವ ಪ್ರತಿಷ್ಠಿತ  ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಪಾಕಿಸ್ತಾನ ಕ್ರಿಕೆಟ್ ಆಯ್ಕೆಸಮಿತಿ ಹದಿನಾರು ಮಂದಿಯ ತಂಡವನ್ನು ಪ್ರಕಟಿಸಿದ್ದು, ಆಲ್ರೌಂಡರ್ ಮೊಹಮದ್ ಹಫೀಜ್ ಅವರನ್ನು ಕೈಬಿಟ್ಟಿದೆ. ಆರು ತಂಡಗಳ ನಡುವಣ ಏಷ್ಯಾ ಕಪ್‌ನಲ್ಲಿ ಶಾನ್ ಮಸೂದ್ ಪಾಕ್ ತಂಡವನ್ನು ಪ್ರಥಮ ಬಾರಿಗೆ ಪ್ರತಿನಿಧಿಸಲಿದ್ದಾರೆ. ಎರಡು ದೇಶೀಯ ಏಕದಿನ ಟೂರ್ನಿಯಲ್ಲಿ ೧,೨೦೦ ರನ್ ಕಲೆಹಾಕಿರುವ ಮಸೂದ್‌ಗೆ ಪಾಕ್ ಕ್ರಿಕೆಟ್ ಆಯ್ಕೆಸಮಿತಿಯ ಮುಖ್ಯ ಆಯ್ಕೆದಾರ ಇಂಜಮಾಮ್ ಉಲ್ ಹಕ್ ಸ್ಥಾನ ಕಲ್ಪಿಸಿದ್ದಾರೆ.

ಡಾಲರ್ ವಿರುದ್ಧ 72ರ ಗಡಿ ದಾಟಿದ ರುಪಾಯಿ

ಅಮೆರಿಕ ಡಾಲರ್ ವಿರುದ್ಧ ಸತತ ಕುಸಿಯುತ್ತಿರುವ ರುಪಾಯಿ ಗುರುವಾರದ ವಹಿವಾಟಿನಲ್ಲಿ 72ರ ಗಡಿದಾಟಿತ್ತು. 72.10ರಮಟ್ಟಕ್ಕೆ ಕುಸಿದು ನಂತರ ಕೊಂಚ ಚೇತರಿಸಿಕೊಂಡಿತು. ದಿನದ ಅಂತ್ಯಕ್ಕೆ 71.98ಕ್ಕೆ ಸ್ಥಿರಗೊಂಡಿತು. ಈ ಚೇತರಿಕೆ ತಾತ್ಕಾಲಿಕವಾಗಿದ್ದು ಮತ್ತಷ್ಟು ದಿನಗಳ ಕಾಲ ರುಪಾಯಿ ಕುಸಿತ ಮುಂದುವರೆಯಲಿದೆ. ಈ ನಡುವೆ ಸತತ ಐದು ದಿನಗಳ ಕಾಲ ಕುಸಿದಿದ್ದ ಷೇರುಪೇಟೆ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಶೇ.0.50ರಷ್ಟು ಚೇತರಿಸಿಕೊಂಡವು. ಸೆನ್ಸೆಕ್ಸ್ 224 ಅಂಶ ಏರಿ 38242ಕ್ಕೆ, ನಿಫ್ಟಿ 59 ಅಂಶ ಏರಿ 11536ಕ್ಕೆ ಸ್ಥಿರಗೊಂಡಿವೆ. ಚಿನಿವಾರ ಪೇಟೆಯಲ್ಲಿ ಚಿನ್ನ 350 ರುಪಾಯಿ ಏರಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More