ದಲಿತರು ಒಂದಾಗುವುದನ್ನು ತಪ್ಪಿಸಲೆಂದೇ ಕೇಂದ್ರದಿಂದ ದಲಿತ ಪದ ನಿಷೇಧದ ಹುನ್ನಾರ

ಬೆಂಗಳೂರಿನಲ್ಲಿ ಗುರುವಾರ (ಸೆ.೬) ದ.ಭಾರತದ ದಲಿತ ಹೋರಾಟಗಾರರ ಸಮಾಲೋಚನಾ ಸಮಾವೇಶ ನಡೆಯಿತು. ಈ ವೇಳೆ, ದೇವನೂರ ಮಹಾದೇವ ಹಾಗೂ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ದಲಿತ ಸಮುದಾಯದ ಮುಂದಿನ ಹೋರಾಟ ಕುರಿತು ಕೆಲವು ನಿರ್ಣಯ ಕೈಗೊಳ್ಳಲಾಗಿದೆ

“ದಲಿತ ಪದವನ್ನು ಉಪಯೋಗಿಸಬಾರದು ಎಂದು ಸುತ್ತೋಲೆ ಹೊರಡಿಸಿರುವ ಕೇಂದ್ರ ಸರ್ಕಾರದ ಹುನ್ನಾರವನ್ನು ಅರ್ಥಮಾಡಿಕೊಂಡು, ಮುಂದಿನ ದಿನಗಳಲ್ಲಿ ದಲಿತ ಪದವನ್ನೇ ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕು. ಇದರಿಂದ ಕೊನೆಗೆ ಸುತ್ತೋಲೆ ಹೊರಡಿಸಿದವರಿಗೆಯೇ ತಲೆ ಕೆಟ್ಟುಹೋಗಬೇಕು…” -ಹೀಗೆ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದವರು ಸಾಹಿತಿ ದೇವನೂರ ಮಹಾದೇವ.

ಪರಿಶಿಷ್ಟ ಜಾತಿಗಳಿಗೆ ‘ದಲಿತ’ ಎಂಬ ಪದವನ್ನು ಬಳಸಬೇಡಿ ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವಾಲಯ ಇತ್ತೀಚೆಗೆ ಮಾಧ್ಯಮಗಳಿಗೆ ಸೂಚಿಸಿರುವ ಬೆನ್ನಲ್ಲೇ, ಕೇಂದ್ರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ವಿರೋಧದ ಭಾಗವಾಗಿಯೇ ಗುರುವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಆವರಣದ ಸೆನೆಟ್ ಹಾಲ್‌ನಲ್ಲಿ ದಕ್ಷಿಣ ಭಾರತದ ದಲಿತ ಹೋರಾಟಗಾರರು ಆಯೋಜಿಸಿದ್ದ ಸಮಾಲೋಚನಾ ಸಮಾವೇಶದ ಉದ್ಘಾಟನೆಗೂ ಮುನ್ನ ನಡೆದ ದುಂಡುಮೇಜಿನ ಸಭೆಯಲ್ಲಿ ದೇವನೂರ ಮಹಾದೇವ ಮಾತನಾಡಿ, “ದೇಶಾದ್ಯಂತ ಅಸಮಾನತೆ ಅಭಿವೃದ್ಧಿಯಾಗುತ್ತಿದೆ. ಪ್ರಾಕೃತಿಕ ವಿಕೋಪದ ಹಾನಿಯಂತೆ ದಲಿತರ ಮೇಲೆ ಕೋಮುವಾದಿ ಶಕ್ತಿಗಳ ವಿಕೋಪ ಹೆಚ್ಚಾಗಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದುವರಿದು, “ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವಾರು ದಲಿತ ಸಂಘಟನೆಗಳು ಜಡವಾಗಿರಬಹುದು. ಆದರೆ, ಇವೆಲ್ಲ ಅಸ್ತಿತ್ವದಲ್ಲಿ ಇವೆ ಎಂಬುದೇ ದೊಡ್ಡ ಸಂಗತಿ. ದಸಂಸ ಸಂಘಟಕರು, ಕಾರ್ಯಕರ್ತರು ಅಭಿಪ್ರಾಯಗಳನ್ನು ಕೇಳುವವರಾಗಿದ್ದಾರೆಯೇ ಹೊರತು ರೂಪಿಸುವವರಾಗಿಲ್ಲ. ಇನ್ನು, ಪ್ರತಿ ವಿಷಯಗಳಿಗೆ ಪ್ರತಿಕ್ರಿಯಿಸುತ್ತಾರೆಯೇ ಹೊರತು ಕಾರ್ಯರೂಪಕ್ಕೆ ತರುವುದಿಲ್ಲ. ಈ ಎರಡೂ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳುವ ಕಾಲ ಬಂದಿದೆ,” ಎಂದರು.

“ನ್ಯಾಯಾಂಗ, ಕಾರ್ಯಾಂಗಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ದೇಶಾದ್ಯಂತ ದೇಶದ್ರೋಹದ ಪದ ಬಳಕೆ ಹೆಚ್ಚಾಗಿದೆ. ವ್ಯವಸ್ಥೆಯನ್ನು ವಿರೋಧಿಸುವವರು ಇಂದು ದೇಶದ್ರೋಹಿಗಳಾಗುತ್ತಿದ್ದಾರೆ. ಒಂದೊಂದು ಸಮುದಾಯದ ದನಿಯನ್ನೇ ನಾಶಪಡಿಸುವ ಶಕ್ತಿಗಳು ಬಲಗೊಂಡಿವೆ. ಇತ್ತೀಚೆಗೆ ಬಂಧನವಾದವರು ವ್ಯಕ್ತಿಗಳಲ್ಲ, ಬದಲಿಗೆ ಒಂದೊಂದು ವಿಚಾರ,” ಎಂದು ವಿವರಿಸಿದರು.

ಗೌರಿ ಪ್ರಕರಣವನ್ನು ಎಸ್ಐಟಿ ಅದ್ಬುತವಾಗಿ ತನಿಖೆ ನಡೆಸಿದೆ. ರಾಜ್ಯದ ಪೊಲೀಸರಿಂದಾಗಿ ಕೊಂದ ಶಕ್ತಿಗಳು ಬಯಲಿಗೆ ಬರಲಾರಂಭಿಸಿವೆ. ಬೇರೆ ತನಿಖಾ ದಳದವರೊಂದಿಗೆ ನಮ್ಮ ಎಸ್ಐಟಿಯನ್ನು ಹೋಲಿಕೆ ಮಾಡದೆ ಬೇರೆ-ಬೇರೆ ರಾಜ್ಯಗಳಲ್ಲಿ ಎಸ್ಐಟಿ ತಂಡವನ್ನು ಅಭಿನಂದಿಸುವ ಕಾರ್ಯ ಮಾಡಬೇಕು.
ದೇವನೂರು ಮಹಾದೇವ, ಸಾಹಿತಿ

ಗುಜರಾತಿನ ಶಾಸಕ ಹಾಗೂ ದಲಿತ ಯುವ ನಾಯಕ ಜಿಗ್ನೇಶ್ ಮೇವಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, “ನಮ್ಮ ಮುಂದಿರುವ ದೊಡ್ಡ ಗುರಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯನ್ನು ಅಧಿಕಾರ ಕೇಂದ್ರದಿಂದ ದೂರವಿಡುವುದೇ ಆಗಿದೆ. ಈ ನಿಟ್ಟಿನಲ್ಲಿಯೇ ನಾನು ಕರ್ನಾಟಕದೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದೇನೆ. ೨೦೧೯ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದೇಶದ ಮೂಲೆಮೂಲೆಗೆ ಹೋಗಿ ಮೋದಿ ಹಾಗೂ ಆರ್‌ಎಸ್‌ಎಸ್‌ ಮುಖವಾಡ ಕಳಚುವೆ,” ಎಂದರು.

“ದಲಿತ ಹೋರಾಟದ ಭಾಗವಾಗಿ ಹುಟ್ಟಿಕೊಂಡಿರುವ ‘ಜೈ ಭೀಮ್’ ಎಂಬ ಘೋಷಣೆ ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಹೀಗಾಗಿಯೇ ಅವರು ‘ದಲಿತ’ ಎಂಬ ಪದವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ದಲಿತ ಆಂದೋಲನಗಳನ್ನು ‘ನಕ್ಸಲ್ ಆಂದೋಲನ’ ಎಂದು ಬಿಂಬಿಸುತ್ತಿದ್ದಾರೆ. ಈಗ ನಮಗೆ ಸೂಕ್ತ ಸಮಯ ಬಂದಿದ್ದು, ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ದಟು ಕರ್ನಾಟಕದ ಎಲ್ಲ ದಲಿತ ಸಂಘಟನೆಗಳು ಒಂದೇ ವೇದಿಕೆಯಡಿ ಬರಬೇಕು. ಹೊಸ ಭಾರತವನ್ನು ಕಟ್ಟಲು ತೊಡಗಿಸಿಕೊಳ್ಳಬೇಕು,” ಎಂದು ಕೋರಿದರು.

ಹಿರಿಯ ವಕೀಲ ರವಿವರ್ಮ ಕುಮಾರ್ ಸಮಾವೇಶ ಉದ್ದೇಶಿಸಿ ಮಾತನಾಡಿ, “ದಲಿತ ಪದವನ್ನು ಹತ್ತಿಕ್ಕುವ ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯನ್ನು ಕುಗ್ಗಿಸುವ ಹುನ್ನಾರ ಹಿಂದಿಗಿಂತ ಈಗ ಹೆಚ್ಚಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸುವ ನ್ಯಾಯಮೂರ್ತಿಗಳು ಇಲ್ಲದಿರುವುದು ಮುಖ್ಯ ಕಾರಣ. ಹೀಗಾಗಿ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಸ್ಥಾನಕ್ಕೆ ದಲಿತರನ್ನು ನೇಮಕ ಮಾಡಬೇಕು,” ಎಂದು ಆಗ್ರಹಿಸಿದರು.

ಇದನ್ನೂ ಓದಿ : ದಲಿತ ಪದ ಬಳಕೆ ತಡೆಯುವ ಹುನ್ನಾರಕ್ಕೆ ಹೋರಾಟಗಾರ, ಚಿಂತಕರ ಪ್ರತಿಕ್ರಿಯೆ ಏನು?

ಸಮಾವೇಶದ ಪ್ರಮುಖ ನಿರ್ಣಯಗಳು

  • ದಲಿತ ಅಸ್ಮಿತೆಯನ್ನು ಎತ್ತಿಹಿಡಿಯುವುದು ಹಾಗೂ ಬಲಪಡಿಸುವುದು
  • ಪ್ರಜಾತಾಂತ್ರಿಕ ಮೌಲ್ಯಗಳಿಗೆ ಕಂಟಕವಾಗಿರುವ ಶಕ್ತಿಗಳನ್ನು ಹಿಮ್ಮಟ್ಟಿಸುವುದನ್ನು ತುರ್ತು ಆದ್ಯತೆಯಾಗಿ ಪರಿಗಣಿಸುವುದು
  • ಅಖಿಲ ಭಾರತ ಮಟ್ಟದಲ್ಲಿ ಎಲ್ಲ ದಲಿತ ಶಕ್ತಿಗಳನ್ನು ಒಂದೇ ವೇದಿಕೆಯಡಿ ತರುವ ಪ್ರಕ್ರಿಯೆ ಆರಂಭ ಮಾಡುವುದು
  • ೧೮೬೦ರ ಭಾರತೀಯ ದಂಡಸಂಹಿತೆ ಸೆಕ್ಷನ್ ೧೨೪ (ಎ), ವಸಾಹತುಶಾಹಿ ಕಾಲದ ದೇಶದ್ರೋಹದ, ಕಳಂಕಿತ ಕಾಯ್ದೆಯನ್ನು ರದ್ದುಪಡಿಸಲು ಆಗ್ರಹಿಸುವುದು
  • ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ (ರಾವಣ್) ಅವರ ಬಿಡುಗಡೆಗೆ ಒತ್ತಾಯಿಸುವುದು ಹಾಗೂ ಭೀಮಾ ಕೋರೆಗಾಂವ್ ಚಳವಳಿಗಾರರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂತಗೆದುಕೊಳ್ಳಲು ಹೋರಾಡುವುದು
  • ಕಾರ್ಪೋರೆಟ್ ಕುಳಗಳಿಗೆ ವರವಾಗಿರುವ ಗುಲಾಮಗಿರಿಯ ೧೯೩೪ ರ ಕಾಯ್ದೆ ಆರ್‌ಬಿಐ-೪೫-ಇ ರದ್ಧತಿಗೆ ಆಗ್ರಹಿಸುವುದು
  • ಅಕ್ಟೋಬರ್ ತಿಂಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಅಥವಾ ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ದುಂಡು ಮೇಜಿನ ಸಭೆ ನಡೆಸಿ, ಅದರಲ್ಲಿ ದಲಿತ ಅಜೆಂಡಾ ಏನೆಂಬುದನ್ನು ರೂಪಿಸುವುದು
  • ಎಲ್ಲ ದಲಿತ ಸಂಘಟನೆಗಳ ಜೊತೆ ಸಮಾಲೋಚಿಸಿ ನವೆಂಬರ್ ೨೬ರಂದು ‘ಸಂವಿಧಾನದೊಂದಿಗೆ ದೆಹಲಿ’ ಹೋರಾಟ ರೂಪಿಸುವುದು
  • ದಲಿತ, ಪ್ರಗತಿಪರ ಹೋರಾಟಗಾರರು, ಸಾಹಿತಿಗಳ ಬಂಧನ ಹಾಗೂ ಅವರನ್ನು ನಕ್ಸಲಿಯರು ಎಂದು ಬಿಂಬಿಸುತ್ತಿರುವ ದುಷ್ಟ ಬೆಳವಣಿಗೆಯನ್ನು ದೇಶಾದ್ಯಂತ ಪ್ರತಿಭಟಿಸುವುದು
  • ದಲಿತ ಸಂಸ್ಕೃತಿಯ ಅಭಿವ್ಯಕ್ತಿಯಾಗಿ ಸಾಂಸ್ಕೃತಿಕ ಅಭಿಯಾನ ಆರಂಭಿಸುವ ದಿಕ್ಕಲ್ಲಿ ಹೆಜ್ಜೆ ಇಡುವುದು
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More