ಸಲಿಂಗ ಪ್ರೇಮ ಅಪರಾಧವಲ್ಲ; ಸುಪ್ರೀಂ ಕೋರ್ಟ್‌ನಿಂದ ಸೆಕ್ಷನ್‌ 377 ರದ್ದು

ಸಲಿಂಗಪ್ರೇಮವನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಿದ್ದ ಬ್ರಿಟಿಷರ ಕಾಲದ ಐಪಿಸಿ ಸೆಕ್ಷನ್‌ ೩೭೭ಕ್ಕೆ ಸುಪ್ರೀಂ ಕೋರ್ಟ್ ವಿದಾಯ ಹೇಳಿದೆ. ಆ ಮೂಲಕ, ವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ವಿಭಿನ್ನ ನೆಲೆ ರಕ್ಷಿಸುವಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಆ ಮೂಲಕ ಸಲಿಂಗಿಗಳ ಘನತೆಯ ಬಾಳಿಗೆ ಮಹತ್ವದ ಮುನ್ನುಡಿ ಬರೆದಿದೆ

ವಯಸ್ಕರ ನಡುವಿನ ಸಮ್ಮತಿಪೂರ್ವಕ ಸಲಿಂಗಪ್ರೇಮವನ್ನು ಭಾರತೀಯ ದಂಡಸಂಹಿತೆಯ ೩೭೭ನೇ ಸೆಕ್ಷನ್ ವ್ಯಾಪ್ತಿಯಿಂದ ಕೈಬಿಟ್ಟು, ಸಲಿಂಗಪ್ರೇಮವನ್ನು ಅಪರಾಧವಲ್ಲವೆಂದು ಪರಿಗಣಿಸಿ ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದೆ. ಆ ಮೂಲಕ, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನೊಳಗೊಂಡಿದ್ದ ಐವರು ನ್ಯಾಯಮೂರ್ತಿಗಳ ಪೀಠವು ವಯಸ್ಕರ ನಡುವಿನ ಸಲಿಂಗ ಸಂಬಂಧವನ್ನು ಕಾನೂನುಬದ್ಧಗೊಳಿಸಿದ್ದು, ಬ್ರಿಟಿಷರ‌ ಕಾಲದ ೧೫೭ ವರ್ಷದ ಹಿಂದಿನ ಘೋರ, ತರ್ಕಹೀನ ಕಾನೂನಿಗೆ ವಿದಾಯ ಹೇಳಿದೆ. ಪ್ರಕರಣದ ತೀರ್ಪು ನೀಡುತ್ತ, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು, “ನಾನಿರುವಂತೆಯೇ ನನ್ನನ್ನು ಸ್ವೀಕರಿಸಿ,” ಎಂದು ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿದು ಹೇಳಿದ ಮಾತು ಸಲಿಂಗ ಹಕ್ಕುಗಳಿಗೆ ಹೋರಾಡುತ್ತಿದ್ದ ಎಲ್‌ಜಿಬಿಟಿ ಸಮುದಾಯಗಳಲ್ಲಿ ಹೆಮ್ಮೆ ಮೂಡಿಸಿದೆ.

“ಸೆಕ್ಷನ್‌ ೩೭೭ ತರ್ಕಹೀನವೂ, ಅಸಮರ್ಥನೀಯವೂ ಆಗಿದೆ. ಬಹುಮತದ ನಿಲುವುಗಳು ಮತ್ತು ಜನಪ್ರಿಯ ನೈತಿಕತೆ ಎನ್ನುವುದು ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲಾಗದು,” ಎಂದು ತೀರ್ಪಿನಲ್ಲಿ ಅಭಿಪ್ರಾಯ ಪಡಲಾಗಿದೆ. ಆ ಮೂಲಕ, ೨೦೧೩ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸುರೇಶ್‌ ಕುಮಾರ್‌ ಕೌಶಲ್ ಇದೇ ವಿಚಾರವಾಗಿ‌ ನೀಡಿದ್ದ ವ್ಯತಿರಿಕ್ತ ತೀರ್ಪನ್ನು ಅನೂರ್ಜಿತಗೊಳಿಸಿದೆ. ಸಲಿಂಗಕಾಮವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ೩೭೭ನೇ ಸೆಕ್ಷನ್‌ ಅನ್ನು ರದ್ದುಪಡಿಸುವಂತೆ ಕೋರಿ ಸಲಿಂಗ ಹಕ್ಕುಗಳ ಹೋರಾಟಗಾರರು ಸುದೀರ್ಘ ಕಾನೂನು ಹೋರಾಟ ಕೈಗೊಂಡಿದ್ದರು. ಈ ಸಂಬಂಧ ಕಾನೂನು ಪರಾಮರ್ಶೆಗೆ ಆಗ್ರಹಿಸಿ ಐದು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲಾಗಿತ್ತು.

ಸುಪ್ರೀಂ ಕೋರ್ಟ್‌ನ ಈ ತೀರ್ಪು, ಸಲಿಂಗಿಗಳ ಹಕ್ಕನ್ನು ಸಹ ಎಲ್ಲ ನಾಗರಿಕರ ಹಕ್ಕಿನಂತೆ ಎತ್ತಿಹಿಡಿದಿರುವುದು ಮಾತ್ರವೇ ಅಲ್ಲದೆ, ಬರಲಿರುವ ದಿನಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ವಿವಿಧ ಕಾನೂನಾತ್ಮಕ ಹೋರಾಟಗಳ ಮೇಲೆ ಸಕಾರಾತ್ಮಕ ದೂರಗಾಮಿ ಪರಿಣಾಮವನ್ನು ಬೀರಲಿದೆ. ಮುಂದಿನ ದಿನಗಳಲ್ಲಿ ಸಲಿಂಗಿಗಳ ವಿವಾಹಕ್ಕೆ ಹಾಗೂ ಮಕ್ಕಳನ್ನು ದತ್ತು ಪಡೆಯಲು ತೀರ್ಪು ಅನುವು ಮಾಡಿಕೊಡಲಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಪಂಚಪೀಠವು, ನ್ಯಾಯಮೂರ್ತಿಗಳಾದ ಆರ್‌ ಎಫ್‌ ನಾರಿಮನ್‌, ಎ ಎಂ ಖಾನ್ವಿಲ್ಕರ್‌, ಡಿ ವೈ ಚಂದ್ರಚೂಡ್‌ ಮತ್ತು ಇಂದು ಮಲ್ಹೋತ್ರ ಅವರನ್ನು ಒಳಗೊಂಡಿತ್ತು. ಪೀಠದ ಐವರು ನ್ಯಾಯಮೂರ್ತಿಗಳು ಸೆಕ್ಷನ್‌ ೩೭೭ರ ಸಲಿಂಗಪ್ರೇಮದ ವಿರುದ್ಧದ ಶಿಕ್ಷೆಯನ್ನು ಕೈಬಿಡುವ ಬಗ್ಗೆ ಏಕ ಅಭಿಪ್ರಾಯವನ್ನು ಹೊಂದಿದ್ದು, ನಾಲ್ಕು ಪ್ರತ್ಯೇಕ ತೀರ್ಪು ನೀಡಿದ್ದಾರೆ. ಅಂತಿಮವಾಗಿ ಎಲ್ಲರೂ ಸಲಿಂಗಿಗಳ ಹಕ್ಕನ್ನು ಎತ್ತಿಹಿಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಖಾನ್ವಿಲ್ಕರ್‌ ಅವರು ತಮ್ಮ ತೀರ್ಪಿನಲ್ಲಿ ಹೇಳಿದ ಮಹತ್ವದ ಅಂಶಗಳು ಹೀಗಿವೆ:

  • ಸಾಂವಿಧಾನಿಕ ಹಕ್ಕುಗಳನ್ನು ಬಹುಮತದ ನಿಲುವು ಮತ್ತು ಜನಪ್ರಿಯ ನೈತಿಕೆಯತೆ ಆಧಾರದಲ್ಲಿ ನಿರ್ಧರಿಸಲಾಗದು. ಬಹುಮತವೆನ್ನುವುದು ಸಾಂವಿಧಾನಿಕ ಸಮರ್ಥನೆಯಲ್ಲ.
  • ಲೈಂಗಿಕತೆಯ ಆಧಾರದಲ್ಲಿ ಮಾಡಲಾಗುವ ಯಾವುದೇ ತಾರತಮ್ಯ ಮೂಲಭೂತ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ. ೧೫೮ ವರ್ಷಗಳ ಹಿಂದೆ ಕಾನೂನು (ಸೆಕ್ಷನ್‌ ೩೭೭) ಜನರನ್ನು ಪ್ರೀತಿಯಿಂದ ವಂಚಿತರನ್ನಾಗಿಸಿತು. ವ್ಯಕ್ತಿಯ ವೈಯಕ್ತಿಕ ಆಯ್ಕೆಯನ್ನು ಗೌರವಿಸುವುದೇ ಸ್ವಾತಂತ್ರ್ಯದ ತಿರುಳಾಗಿದೆ. ಲೈಂಗಿಕ ಅಲ್ಪಸಂಖ್ಯಾತ ಎಲ್‌ಜಿಬಿಟಿ ಸಮುದಾಯವು ಸಂವಿಧಾನದಡಿ ಸಮಾನ ಹಕ್ಕುಗಳನ್ನು ಹೊಂದಿದೆ.
  • ಸಂವಿಧಾನ ಚಲನಶೀಲವಾದದು. ಅದರ ಮೂಲ ಆಶಯವೇ ಚಲನಶೀಲ ಹಾಗೂ ಸಮ್ಮಿಳಿತ ಸಮಾಜವನ್ನು ನಿರ್ಮಿಸುವುದು.
  • ಸಾಮಾಜಿಕ ಮನಸ್ಥಿತಿಯಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹಗಳಿಗೆ ವಿದಾಯ ಹೇಳುವ ಸಮಯ ಬಂದಿದೆ. ಆ ಮೂಲಕ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳೆಡೆಗಿನ ತಾರತಮ್ಯತೆ ತೊಡೆದು, ಸಶಕ್ತಗೊಳಿಸಬೇಕಿದೆ.
  • ಲೈಂಗಿಕ ನೆಲೆಗಟ್ಟುಗಳು ಸಹಜವಾದಂಥವು. ವಿಭಿನ್ನ ಲೈಂಗಿಕ ನೆಲೆಗಳ ಹಿನ್ನೆಲೆಯಲ್ಲಿ ಭೇದಭಾವ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ.
  • ವ್ಯಕ್ತಿಯ ದೈಹಿಕ ಸ್ವಾಯತ್ತೆಯು ಸಾಂವಿಧಾನಿಕವಾಗಿ ರಕ್ಷಣೆಗೊಳಪಡುವಂಥದ್ದು. ಓರ್ವ ವ್ಯಕ್ತಿ ತನ್ನ ಇಷ್ಟದ ಮತ್ತೊಬ್ಬ ವ್ಯಕ್ತಿಯೊಂದಿಗೆ ಆಪ್ತ ಸಂಬಂಧ ಹೊಂದುವುದು ಆತನ ಖಾಸಗಿ ಹಕ್ಕಿನ ಭಾಗವಾಗಿರುತ್ತದೆ.
ಇದನ್ನೂ ಓದಿ : ಮಡಿವಂತಿಕೆ-ರಂಜಕತೆಯ ನಡುವೆ ಸಾಹಿತ್ಯ, ಸಿನಿಮಾದಲ್ಲಿ ಸಲಿಂಗ ಪ್ರೇಮದ ನೆರಳು

ಪಂಚಪೀಠದ ಎಲ್ಲ ನ್ಯಾಯಮೂರ್ತಿಗಳು ಸಲಿಂಗಿಗಳ ಹಕ್ಕಿಗೆ ಕಂಟಕವಾಗಿದ್ದ ಸೆಕ್ಷನ್‌ ೩೭೭ರ ವಿರುದ್ಧವೇ ತೀರ್ಪು ನೀಡಿದ್ದು, ಏಕ ಅಭಿಪ್ರಾಯದ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರೆ. ನ್ಯಾಯಮೂರ್ತಿ ಆರ್‌ ಎಫ್‌ ನಾರಿಮನ್‌ ಅವರು, “ಸಲಿಂಗತೆಯು ಮಾನಸಿಕ ಅಸ್ವಸ್ಥತೆಯಲ್ಲ. ಸಲಿಂಗಿಗಳು ಎಲ್ಲರಂತೆ ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ, ಸಮಾಜದಲ್ಲಿ ಸಲಿಗಿಂಗಳ ಮೇಲೆ ಇರುವ ಕಳಂಕವನ್ನು ತೊಡೆಯುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ರೂಪಿಸುವಂತೆಯೂ ಆದೇಶಿಸಿದರು. ನ್ಯಾಯಮೂರ್ತಿ ಚಂದ್ರಚೂಡ್‌ ಅವರು, “ಸೆಕ್ಷನ್‌ ೩೭೭ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ಪಾಲಿಗೆ (ಎಲ್‌ಜಿಬಿಟಿ) ಮಾರಣಾಂತಿಕವಾಗಿದ್ದು, ದುರಂತಗಳಿಗೆ, ನೋವಿಗೆ ಕಾರಣವಾಗಿದೆ. ಇದನ್ನು ಪರಿಹರಿಸಬೇಕಿದೆ,” ಎಂದು ಅಭಿಪ್ರಾಯಪಟ್ಟರು. ಅಲ್ಲದೆ, “ಈ ಪ್ರಕರಣ ಕೇವಲ ಸೆಕ್ಷನ್‌ ೩೭೭ ಅನ್ನು ಅಶಿಕ್ಷಾರ್ಹಗೊಳಿಸುವುದು ಮಾತ್ರವೇ ಅಲ್ಲ, ಎಲ್‌ಜಿಬಿಟಿ ಸಮುದಾಯದ ಹಕ್ಕುಗಳನ್ನು ಮಾನ್ಯ ಮಾಡುವುದೂ ಆಗಿದೆ,” ಎಂದು ವ್ಯಾಖ್ಯಾನಿಸಿದರು. ಇನ್ನು, ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರು, “ಇತಿಹಾಸವು ಎಲ್‌ಜಿಬಿಟಿ ಸಮುದಾಯವನ್ನು ಶಿಕ್ಷಿಸಿದ್ದಕ್ಕಾಗಿ, ಭೇದವೆಣಿಸಿದ್ದಕ್ಕಾಗಿ ಕ್ಷಮೆ ಯಾಚಿಸಬೇಕಿದೆ,” ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟರು.

ಒಪ್ಪಿತ ಸಲಿಂಗ ಲೈಂಗಿಕ ಸಂಬಂಧವನ್ನು ಅಪರಾಧವಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದರೂ, ಬಲವಂತದ ಲೈಂಗಿಕ ಸಲಿಂಗ ಸಂಬಂಧ ಕಾನೂನು ವ್ಯಾಪ್ತಿಗೊಳಪಡಲಿದೆ. ಅಲ್ಲದೆ, ಸೆಕ್ಷನ್‌ ೩೭೭ರಲ್ಲಿ ಇರುವ, ಪ್ರಾಣಿಗಳೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯೂ ಶಿಕ್ಷಾರ್ಹ ವ್ಯಾಪ್ತಿಗೆ ಒಳಪಡಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More