ಸೆಕ್ಷನ್‌ 377 | ಘನತೆ, ಸಮಾನತೆ ಮತ್ತು ಖಾಸಗಿತನದ ಹಕ್ಕಿನ ಹೋರಾಟಗಾರರು

ಸಲಿಂಗಪ್ರೇಮವೂ ಸಹಜವೆಂದು, ಸಲಿಂಗಪ್ರೇಮಿಗಳಿಗೆ ಎಲ್ಲರಂತೆ ಹಕ್ಕುಗಳು ಲಭಿಸಬೇಕೆಂದು ಕಳೆದ ಎರಡು ದಶಕಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಇಂದು ಸೆಕ್ಷನ್‌ ೩೭೭ ಕುರಿತು ಸುಪ್ರೀಂನ ಮಹತ್ವದ ತೀರ್ಪು ಹೊರಬೀಳುವಲ್ಲಿ ಸುದೀರ್ಘ ಹೋರಾಟ ಮತ್ತು ಹೋರಾಟಗಾರರ ಶ್ರಮವಿದೆ

ಬ್ರಿಟಿಷರ ಆಡಳಿತವಿದ್ದ ಕಾಲ ಅಂದರೆ, ೧೮೬೦ರಲ್ಲಿ ಇಬ್ಬರು ಪುರುಷರ ನಡುವೆ ಒಪ್ಪಿತ ಸಂಬಂಧವನ್ನು ಅಪರಾಧವೆಂದು ಕರೆಯಲಾಗಿತ್ತು. ಅದೇ ಕಾನೂನು ಸ್ವಾತಂತ್ರ್ಯಾನಂತರವೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು. ಕಳೆದ ಎರಡು ದಶಕಗಳಿಂದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಡೆದ ಹೋರಾಟಗಳು ಸಲಿಂಗ ಸಂಬಂಧವನ್ನು ಮಾನ್ಯ ಮಾಡುವಂತೆ, ಸಮಾನ ಹಕ್ಕುಗಳನ್ನು ನೀಡುವಂತೆ ಆಗ್ರಹಿಸಿದ್ದವು. ಹೀಗೆ ಹೋರಾಟ ನಡೆಸಿದ ಕೆಲವು ಪ್ರಮುಖ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ನಾಝ್‌ ಫೌಂಡೇಷನ್‌

ದೆಹಲಿ ಮೂಲದ ಈ ಫೌಂಡೇಷನ್‌ ಸಲಿಂಗ ಪ್ರೇಮ ಕುರಿತ ಚರ್ಚೆಯನ್ನು ಸಾರ್ವಜನಿಕ ವೇದಿಕೆಗಳಿಗೆ ತರುವ ಮೂಲಕ ಸದಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಎಚ್‌ಐವಿ ಸೋಂಕಿತರ ಹಕ್ಕು ಮತ್ತು ಲೈಂಗಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಈ ಸಂಸ್ಥೆ, ೨೦೦೧ರಲ್ಲಿ ದಿ ಲಾಯರ್ಸ್‌ ಕಲೆಕ್ಟಿವ್‌ ಜೊತೆಸೇರಿ ಸೆಕ್ಷನ್‌ ೩೭೭ ಅನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಲಿಂಗ ಪ್ರೇಮವನ್ನು ಅಪರಾಧವೆಂದು ಹೇಳುವ ಕಾನೂನು ಪ್ರಶ್ನಿಸಿ ಸಲ್ಲಿಸಲಾದ ದೇಶದ ಮೊದಲ ಅರ್ಜಿ ಇದಾಗಿತ್ತು. ನಾಝ್‌ ಸಂಸ್ಥೆಯ ಅಂಜಲಿ ಗೋಪಾಲನ್‌ ಮತ್ತು ಪ್ರಸಿದ್ಧ ಹಿರಿಯ ನ್ಯಾಯವಾದಿ ಆನಂದ್‌ ಗ್ರೋವರ್‌ ಈ ಕಾನೂನು ಹೋರಾಟದ ಮುಂಚೂಣಿಯಲ್ಲಿದ್ದರು. ನಾಝ್‌ ಜೊತೆಗೆ ಅನೇಕ ಸಂಘಟನೆಗಳು ದನಿಗೂಡಿಸಿ ಹೋರಾಟವನ್ನು ಇನ್ನಷ್ಟು ಬಲಪಡಿಸಿದವು. ಫಲವಾಗಿ, ೨೦೦೯ರಲ್ಲಿ ದೆಹಲಿ ಹೈಕೋರ್ಟ್‌ ಒಪ್ಪಿತ ಹಾಗೂ ಖಾಸಗಿಯಾದ ಲೈಂಗಿಕ ಸಂಬಂಧವನ್ನು ಅಪರಾಧವೆಂದು ಪರಿಗಣಿಸಬಾರದು ಎಂದು ತೀರ್ಪು ನೀಡುವ ಮೂಲಕ ಸೆಕ್ಷನ್‌ ೩೭೭ ಅನ್ನು ಸಡಿಲಗೊಳಿಸಿತು. ಸುಪ್ರೀಂ ಕೋರ್ಟ್‌ ೨೦೧೩ರಲ್ಲಿ ಈ ತೀರ್ಪನ್ನು ತಳ್ಳಿಹಾಕುವ ಮೂಲಕ ಮೂಲಕ ಸಲಿಂಗ ಪ್ರೇಮವನ್ನು ಸಂದಿಗ್ದಕ್ಕೆ ತಳ್ಳಿತು.

ಸುನೀಲ್‌ ಮೆಹ್ರಾ ಮತ್ತು ನವ್‌ತೇಜ್‌ ಜೋಹರ್‌

ಇಪ್ಪತ್ತು ವರ್ಷಗಳ ಕಾಲ ಸಲಿಂಗ ದಂಪತಿಗಳಾಗಿರುವ ದೆಹಲಿಯ ಸುನೀಲ್‌ ಮೆಹ್ರಾ ಮತ್ತು ನವ್‌ತೇಜ್‌ ಜೋಹರ್‌, ಭಾರತದಲ್ಲಿ ಸಲಿಂಗ ಪ್ರೇಮಿಗಳ ಹಕ್ಕುಗಳಿಗಾಗಿ ಹೋರಾಡುತ್ತ ಬಂದವರು. ಸೆಕ್ಷನ್‌ ೩೭೭ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕವಾಗಿ ತಮ್ಮ ಸಲಿಂಗ ಸಂಬಂಧವನ್ನು ಘೋಷಿಸಿಕೊಂಡಿದ್ದರು. ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಮೆಹ್ರಾ, ನೃತ್ಯ ಕಲಾವಿದರಾಗಿರುವ ಜೋಹರ್‌ ಎಲ್ಲ ರೀತಿಯ ಸಾಮಾಜಿಕ ಸವಾಲುಗಳನ್ನು ಎದುರಿಸುತ್ತ, ನಿಧಾನವಾಗಿ ಬೆಂಬಲವನ್ನು ಪಡೆಯುತ್ತ ಬಂದರು. ತಮಗೆ ಸಿಕ್ಕ ಬೆಂಬಲವನ್ನೇ ಆಧರಿಸಿ ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವಲ್ಲೂ ಯಶಸ್ವಿಯಾದರು.

ಮೇನಕಾ ಗುರುಸ್ವಾಮಿ

ವಕೀಲರಾದ ಮೇನಕಾ ಗುರುಸ್ವಾಮಿ, ಲೈಂಗಿಕ ಅಲ್ಪಸಂಖ್ಯಾತರ ಪರ ಕಾನೂನು ಹೋರಾಟದಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್‌ ಲಾ ಸ್ಕೂಲ್‌ನಲ್ಲಿ ಪದವಿ ಪಡೆದ ಇವರು, ನ್ಯೂಯಾರ್ಕ್‌ ಮೂಲದ ಕಾನೂನು ಸಂಸ್ಥೆಯೊಂದರಲ್ಲಿ ಮಾನವ ಹಕ್ಕುಗಳ ಹೋರಾಟದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಐಐಟಿ ವಿದ್ಯಾರ್ಥಿಗಳು ಸೆಕ್ಷನ್‌ ೩೭೭ರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದಾಗ ಅವರಿಗೆ ನೆರವಾದವರು ಮೇನಕಾ ಗುರುಸ್ವಾಮಿ. "ಈ ಪ್ರೀತಿಯನ್ನು ಸಾಂವಿಧಾನಿಕವಾಗಿ ಮಾನ್ಯ ಮಾಡಬೇಕು, ಕೇವಲ ಲೈಂಗಿಕತೆಯನ್ನಲ್ಲ,'' ಎಂದು ವಾದ ಮಂಡಿಸಿದ್ದರು.

ರಿತು ದಾಲ್ಮಿಯಾ

ಸೆಕ್ಷನ್‌ ೩೭೭ರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆಹೋದ ಐದು ಮಂದಿ ಅರ್ಜಿದಾರರಲ್ಲಿ ರಿತು ದಾಲ್ಮಿಯಾ ಕೂಡ ಒಬ್ಬರು. ತಮ್ಮ ೨೩ನೇ ವಯಸ್ಸಿಗೆ ಯುವತಿಯೊಬ್ಬರನ್ನು ಇಷ್ಟಪಟ್ಟ ದಾಲ್ಮೀಯ, ತಮ್ಮ ಶ್ರೀಮಂತ ಹಾಗೂ ಸಂಪ್ರದಾಯಸ್ಥ ಕುಟುಂಬದವರ ಮುಂದೆ ಈ ಸುದ್ದಿ ಹೊರಹಾಕಿ ಬದುಕಿನಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟರು. ಉದ್ಯಮಿಯಾಗಿ ಬದುಕು ಕಟ್ಟಿಕೊಂಡಿರುವ ಇವರು, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ತಮ್ಮನ್ನು ಕಾರ್ಯಕರ್ತೆ ಎಂದು ಕರೆದುಕೊಳ್ಳದಿದ್ದರೂ, ಭಾರತದಲ್ಲಿ ಸಲಿಂಗ ಪ್ರೇಮಿಗಳ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳ ವಿರುದ್ಧ ದನಿ ಎತ್ತುತ್ತ ಬಂದಿದ್ದಾರೆ. "ನಾನು ಪಿಟಿಷನ್‌ಗೆ ಸಹಿ ಹಾಕಲು ಮುಂದಾದಾಗ ಎಚ್ಚರಿಸಿದ್ದರು. ನನ್ನ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದರು. ಆದರೆ, ನನ್ನ ಪಾಲಿನ ಕರ್ತವ್ಯವನ್ನು ನಾನು ನಿರ್ವಹಿಸಿದೆ. ನಮಗೆ ಬೇಕಿರುವುದು ಕೋಟಾ ಅಲ್ಲ, ಮೀಸಲಾತಿಯಲ್ಲ, ನಮ್ಮನ್ನು ಅಲ್ಪಸಂಖ್ಯಾತರಂತೆ ನೋಡುವುದೂ ಬೇಕಾಗಿಲ್ಲ; ಬದಲಿಗೆ, ನಮಗೆ ಬೇಕಿರುವುದು ಘನತೆ ಮತ್ತು ಖಾಸಗಿತನ. ನಾವೇನಾಗಿದ್ದೇವೆಯೋ ಅದಾಗಿ ಉಳಿಯುವ ಹಕ್ಕು,'' ಎಂದು ರಿತು ದಾಲ್ಮಿಯಾ ಹೇಳಿದ್ದರು.

ಇದನ್ನೂ ಓದಿ : ಸಲಿಂಗ ಪ್ರೇಮ ಅಪರಾಧವಲ್ಲ; ಸುಪ್ರೀಂ ಕೋರ್ಟ್‌ನಿಂದ ಸೆಕ್ಷನ್‌ 377 ರದ್ದು

ಅಕ್ಕೈ ಪದ್ಮಶಾಲಿ

ಬೆಂಗಳೂರು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ತಮ್ಮ ೨೦ನೇ ವಯಸ್ಸಿನಲ್ಲೇ ಸೆಕ್ಷನ್‌ ೩೭೭ ವಿರುದ್ಧ ದನಿ ಎತ್ತಿದವರು. ಭಿಕ್ಷಾಟನೆ, ವೇಶ್ಯಾವಾಟಿಕೆ ಮುಂತಾದ ಎಲ್ಲ ಸಂಕಟದ ದಿನಗಳನ್ನು ಎದುರಿಸಿದ ಪದ್ಮಶಾಲಿ, ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ರೂಪಿಸಿ ಬೆಳೆಸಿದರು. ಈಗಲೂ ಕರ್ನಾಟಕ ರಾಜ್ಯಾದ್ಯಂತ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ಸಂಘಟಿಸುವುದರಲ್ಲಿ ಅಕ್ಕೈ ಅವರದು ಮುಂಚೂಣಿಯ ಹೆಸರು.

ಗೀತಾಂಜಲಿ ಮಿಶ್ರಾ

ಲೈಂಗಿಕತೆ, ಲಿಂಗ ಸಮಾನತೆ ಮತ್ತು ಹಕ್ಕಗಳಿಗಾಗಿ ಸಂಘಟಿತ ಹೋರಾಟ ರೂಪಿಸಿದ ಭಾರತದ ಕೆಲವೇ ಕೆಲವು ಮಹಿಳೆಯರಲ್ಲಿ ಗೀತಾಂಜಲಿ ಕೂಡ ಒಬ್ಬರು. ‘ಕ್ರಿಯೇಟಿಂಗ್‌ ರಿಸೌರ್ಸಸ್‌ ಫಾರ್‌ ಎಂಪವರ್‌ಮೆಂಟ್‌ ಇನ್‌ ಆಕ್ಷನ್‌’ ಹೆಸರಿನ ಸಂಘಟನೆಯನ್ನು ಕಟ್ಟಿ, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟ ನಡೆಸುತ್ತಿದ್ದಾರೆ. ಸೆಕ್ಷನ್‌ ೩೭೭ರ ವಿರುದ್ಧ ದೇಶಾದ್ಯಂತ ವ್ಯಕ್ತವಾದ ವಿರೋಧ, ಹೋರಾಟದಲ್ಲಿ ಸಹಭಾಗಿಯಾಗಿ ಲೈಂಗಿಕ ಅಲ್ಪಸಂಖ್ಯಾತರ ಪರ ದನಿಯಾಗಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More