ಪೊಲೀಸರಿಂದ ಹೆಚ್ಚು ಬಲಪ್ರಯೋಗ?: 9 ವರ್ಷ ಹಿಂದಿನ ಎನ್‌ಕೌಂಟರ್‌ಗೆ ಮರುಜೀವ

ದ.ಕನ್ನಡ ಜಿಲ್ಲೆಯಲ್ಲಿ ೯ ವರ್ಷದ ಹಿಂದೆ ನಡೆದಿದ್ದ ಎನ್‌ಕೌಂಟರ್‌ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಎನ್‌ಕೌಂಟರ್‌ಗೆ ಆತ್ಮರಕ್ಷಣೆ ನೆಪ ನೀಡಿದ್ದ ಪೊಲೀಸರು ಅಗತ್ಯಕ್ಕಿಂತ ಹೆಚ್ಚು ಬಲ ಪ್ರಯೋಗ ಮಾಡಿದ್ದು, ಪೊಲೀಸರ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ

ಮಂಗಳೂರಿನ ಬಜ್ಪೆ ಬಳಿಯ ಪಡವಿನಂಗಡಿಯಲ್ಲಿ ೯ ವರ್ಷಗಳ ಹಿಂದೆ ನಡೆದಿದ್ದ ಪೊಲೀಸ್‌ ಎನ್ ಕೌಂಟರ್ ಪ್ರಕರಣ ಮತ್ತೆ ಸದ್ದು ಮಾಡಿದೆ. ಕುಖ್ಯಾತ ಅಂತಾರಾಜ್ಯ ದರೋಡೆಕೋರ ಸರ್ದಾರ್ ಅಲಿಯಾಸ್ ಬಾಬು ಎಂಬಾತನನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆ ನೆಪದಲ್ಲಿ ಅಗತ್ಯಕ್ಕಿಂತ ಹೆಚ್ಚು ಬಲ ಪ್ರಯೋಗಿಸಿ ಎನ್‌ ಕೌಂಟರ್ ಮಾಡಲಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ‌ಆಯೋಗದ ಸುದೀರ್ಘ ವಿಚಾರಣೆಯಲ್ಲಿ ರುಜುವಾತಾಗಿದೆ.

ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಆಗಿನ ಎಸ್ಪಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಡಿವೈಎಸ್ಪಿ ಮತ್ತು ಪೊಲೀಸ್‌ ಇನ್ಸ್ ಪೆಕ್ಟರ್ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆಯನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಲು ಆಯೋಗ ಆದೇಶಿಸಿದೆ. ಆಯೋಗ ಹೊರಡಿಸಿರುವ ಆದೇಶವನ್ನು ಒಂದು ತಿಂಗಳೊಳಗೆ ಪಾಲಿಸಿ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆಯೋಗ ಆದೇಶಿಸಿದೆ. ಮೈಸೂರಿನ ಹಾಲಿ ಪೊಲೀಸ್ ಕಮಿಷನರ್ ಸುಬ್ರಹ್ಮಣೇಶ್ವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಆಗಿನ ಎಸ್ಪಿ ಮತ್ತು ಗೋಪಾಲ್‌ ಹೊಸೂರ್‌ ಅವರು ಆಗಿನ ಐಜಿಪಿಯಾಗಿದ್ದರು.

ಈ ಪ್ರಕರಣ ಕುರಿತು ಆಯೋಗದ ಸದಸ್ಯ ಆರ್‌ ಕೆ ದತ್ತ (ಮಾಜಿ ಪೊಲೀಸ್‌ ಮಹಾನಿರ್ದೇಶಕ) ಮತ್ತು ಕೆ ಬಿ ಚಂಗಪ್ಪ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ೨೦೧೮ರ ಸೆ.೪ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಮಾನವ ಹಕ್ಕುಗಳ ಆಯೋಗದ ಆದೇಶದ ಪ್ರತಿ

ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರ ಸರ್ದಾರ್‌ ಅಲಿಯಾಸ್‌ ಬಾಬು ಎಂಬಾತನನ್ನು ಬಂಧಿಸಲು ಪೊಲೀಸರು ೨೦೦೯ರ ಅಕ್ಟೋಬರ್ ೮ರಂದು ಪಡುವಿನಂಗಡಿಯ ಸ್ವರ್ಣಗಿರಿ ಬಡಾವಣೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಆರೋಪಿ ಮೃತಪಟ್ಟಿದ್ದ. ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿಎಲ್ ಸಂಘಟನೆ ಮತ್ತು ಬಿ ವಿ ಸೀತಾರಾಮ್‌ ಅವರು ೨೦೦೯ರ ನವೆಂಬರ್ ೪ರಂದು ದೂರು ನೀಡಿದ್ದರು. ಪೊಲೀಸರು ಎನ್‌ಕೌಂಟರ್‌ ನಲ್ಲಿ ಸರ್ದಾರ್‌ ಎಂಬಾತನನ್ನು ಕೊಂದಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಆಯೋಗ, ೯ ವರ್ಷಗಳ ಬಳಿಕ ಆದೇಶ ಹೊರಡಿಸಿದೆ.

“ಪೊಲೀಸ್‌ ಗುಂಡೇಟಿನಿಂದ ಮೃತಪಟ್ಟ ಆರೋಪಿಯು ಪೊಲೀಸ್‌ ಬಂಧನದಲ್ಲಾಗಲೀ, ಕಸ್ಟಡಿಯಲ್ಲಾಗಲೀ ಇರಲಿಲ್ಲ; ಅಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನವನ್ನು ಪ್ರಕರಣದಲ್ಲಿ ಪಾಲನೆ ಮಾಡಿರುವ ಕಾರಣ, ಇದರಿಂದ ತಮ್ಮನ್ನು ಕೈಬಿಡಬೇಕು,” ಎಂದು ಅಧಿಕಾರಿಗಳು ನೀಡಿದ್ದ ಸಮಜಾಯಿಷಿಯನ್ನು ಮಾನವ ಹಕ್ಕುಗಳ ಆಯೋಗ ಪರಿಗಣಿಸಿಲ್ಲ. ಹಾಗೆಯೇ, “ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಿರ್ದೇಶನದ ಪ್ರಕಾರ, ಪೊಲೀಸ್‌ ಕಾರ್ಯಾಚರಣೆಯಲ್ಲಿ ವ್ಯಕ್ತಿಯು ಮೃತಪಟ್ಟರೆ ಅದನ್ನು ಸಹ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿರುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ಪ್ರಕರಣದಲ್ಲಿ ಮೃತ ಸರ್ದಾರ್‌ ಅಲಿಯಾಸ್‌ ಬಾಬು ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟ ಪ್ರಕರಣವಾಗಿರುವುದಿಲ್ಲವೆಂದು ನೀಡಿರುವ ಪ್ರತ್ಯುತ್ತರವನ್ನು ಒಪ್ಪುವುದಿಲ್ಲ,” ಎಂದು ಆಯೋಗದ ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.

“ಸರ್ದಾರ್‌ ಅಲಿಯಾಸ್‌ ಬಾಬು ಎಂಬುವರನ್ನು ಪಿ ಎಸ್ ಐ ಪ್ರಕಾಶ್ ಮತ್ತು ಆರಕ್ಷಕರಾದ ಸುನೀಲ್ ಕುಮಾರ್ ಅವರು ಪೊಲೀಸ್‌ ಎನ್‌ ಕೌಂಟರ್‌ ನಲ್ಲಿ ಆತ್ಮರಕ್ಷಣೆ ನೆಪದಲ್ಲಿ ಸರ್ವಿಸ್‌ ಪಿಸ್ತೂಲಿನಿಂದ ಗುಂಡು ಹಾರಿಸಿ ಅವರ ಸಾವಿಗೆ ಕಾರಣರಾಗಿ ಅವರ ಜೀವಿಸುವ ಮಾನವ ಹಕ್ಕನ್ನು ಉಲ್ಲಂಘನೆ ಉಲ್ಲಂಘನೆ ಮಾಡಿರುವುದು ರುಜುವಾತಾಗಿದೆ. ಇವರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಕಲಂ ೩೦೨(೩೪) ಅನ್ವಯ ರಾ‍ಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನದ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ಸಿಐಡಿ ಪೊಲೀಸರಿಗೆ ಒಪ್ಪಿಸಬೇಕು,” ಎಂದು ಮಂಗಳೂರು ಪೊಲೀಸ್‌ ಆಯುಕ್ತರಿಗೆ ವಿಭಾಗೀಯ ಪೀಠ ಆದೇಶಿಸಿದೆ.

ಆಯೋಗ ಹೊರಡಿಸಿರುವ ಆದೇಶದ ಪ್ರತಿ

ಅದೇ ರೀತಿ, ಮಾನವ ಹಕ್ಕುಗಳ ಆಯೋಗದ ನಿರ್ದೇಶನ ಪಾಲಿಸದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆಯಿಂದ ವರ್ತಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಆಗಿನ ಎಸ್ಪಿ, ಡಿವೈಎಸ್ಪಿ ಮತ್ತು ಪೊಲೀಸ್‌ ಇನ್ಸ್‌ ಪೆಕ್ಟರ್‌ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವಿಭಾಗೀಯ ಪೀಠ ಸೂಚಿಸಿದೆ.

ಇನ್ನು, ಮೃತ ಸರ್ದಾರ್‌ ಅಲಿಯಾಸ್‌ ಬಾಬು ವಾರಸುದಾರರಿಗೆ ೨ ಲಕ್ಷ ರು.ಗಳನ್ನು ಪರಿಹಾರ ನೀಡಲು ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವ ಆಯೋಗ, ಪಿಎಸ್‌ಐ ಪ್ರಕಾಶ್‌ ಮತ್ತು ಪೇದೆ ಸುನೀಲ್‌ ಕುಮಾರ್‌ ಅವರ ಮೇಲೆ ಘಟನೆಯ ವಿಚಾರಣೆಗೆ ತೀರ್ಪಿಗೆ ಒಳಪಟ್ಟು ಅವರ ವೇತನದಿಂದಲೇ ಪರಿಹಾರ ಹಣವನ್ನು ಸರ್ಕಾರಕ್ಕೆ ಜಮಾ ಮಾಡಿಕೊಳ್ಳಲು ಆದೇಶಿಸಿದೆ.

ಆಯೋಗ ಹೊರಡಿಸಿರುವ ಆದೇಶದ ಪ್ರತಿ
ಇದನ್ನೂ ಓದಿ : ಕರಾವಳಿ ಪೊಲೀಸ್ ಕೇಸರೀಕರಣಕ್ಕೆ ಮತ್ತೊಂದು ನಿದರ್ಶನ ಹುಸೈನಬ್ಬ ಪ್ರಕರಣ!

ಎಸ್ಪಿ ನೀಡಿದ್ದ ವರದಿಯಲ್ಲೇನಿತ್ತು?: “ಬಿಜಾಪುರ ಜೈಲಿನಿಂದ ತಪ್ಪಿಸಿಕೊಂಡವರು ಮಂಗಳೂರಿಗೆ ಮೂರು ಜನರೊಂದಿಗೆ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ದರೋಡೆ ಮಾಡುವ ಸಲುವಾಗಿ ಬರುತ್ತಿದ್ದಾರೆ. ಇವರು ಸ್ವರ್ಣಗಿರಿ ಲೇಔಟ್‌ ವ್ಯಾಪ್ತಿಯಲ್ಲಿ ಇದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಪ್ರಕಾರ ಪಿಎಸ್‌ಐ ಪ್ರಕಾಶ್‌, ಸಾಕ್ಷಿದಾರ ಗಿರಿಧರ ಶೆಟ್ಟಿ, ಪೌಲ್‌ ಪ್ರವೀಣ್‌ ಡಿಸೋಜ ಎಂಬುವರು ವ್ಯಾನ್‌ ಅಡ್ಡ ನಿಲ್ಲಿಸಿ ಮಾರುತಿ ಸ್ವಿಫ್ಟ್‌ ಕಾರನ್ನು ತಡೆದಿದ್ದರು. ಆ ಸಂದರ್ಭದಲ್ಲಿ ಕಾರಿನ ಚಾಲಕ ಕಾರನ್ನು ಹಿಂದಕ್ಕೆ ಮುಂದಕ್ಕೆ ತೆಗೆದುಕೊಂಡು ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಪಿಎಸ್‌ಐ ಪ್ರಕಾಶ್‌ ಮತ್ತು ಪೇದೆ ಸುನೀಲ್‌ ಕುಮಾರ್‌ ಅವರು ಕಾರನ್ನು ನಿಲ್ಲಿಸಲು ನೀಡಿದ್ದ ಸೂಚನೆ ಪಾಲಿಸಲಿಲ್ಲ. ಹೀಗಾಗಿ ಕಾರಿನ ಮುಂಭಾಗದ ಎಡಬದಿಯ ಆಸನದಲ್ಲಿ ಕೂತಿದ್ದ ವ್ಯಕ್ತಿ ಕಾರಿನ ಕಿಟಕಿಯ ಗ್ಲಾಸ್‌ ತೆರೆದು ಪೊಲೀಸ್‌ ಪೇದೆ ಸುನೀಲ್‌ ಕಡೆಗೆ ಗುರಿ ಇಟ್ಟು ಗುಂಡು ಹೊಡೆದಾಗ ಅದು ತಪ್ಪಿಹೋಯಿತು. ಇದನ್ನು ಪರಿಗಣಿಸಿ ಪೇದೆ ಸುನೀಲ್‌ ಅವರು ತನ್ನ ಆತ್ಮರಕ್ಷಣೆಗಾಗಿ ತನ್ನ ಸರ್ವೀಸ್‌ ಪಿಸ್ತೂಲಿನಿಂದ ಒಂದು ಗುಂಡನ್ನು ಹಾರಿಸಿದಾಗ ಕಾರಿನ ಚಾಲಕನ ಎಡಬದಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ತಾಗಿತು. ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ,” ಎಂದು ಪ್ರಕರಣದ ಕುರಿತು ಅಂದಿನ ಎಸ್ಪಿ ಆಯೋಗಕ್ಕೆ ನೀಡಿದ್ದ ವರದಿಯಲ್ಲಿ ವಿವರಿಸಿದ್ದರು.

ಆತ್ಮ ರಕ್ಷಣೆಗಾಗಿಯೇ ಗುಂಡು ಹಾರಿಸಿದ್ದರೇ?: ಪ್ರಕರಣ ಕುರಿತು ಎಸ್ಪಿ ನೀಡಿದ್ದ ವರದಿ ಮತ್ತು ಶವಪರೀಕ್ಷೆ ವರದಿಯನ್ನು ಆಯೋಗ ಪರಿಶೀಲಿಸಿದೆ. ಮೃತನ ಎದೆಯ ಎಡಭಾಗದಲ್ಲಿ ಮತ್ತು ಹೊಟ್ಟೆಯ ಬಲಭಾಗದಲ್ಲಿ ತೂತುಗಾಯ ಅಲ್ಲದೆ, ಇತರ ಗಾಯಗಳು ಮತ್ತು ಹೊರಭಾಗದಲ್ಲಿ ಬಾಹು, ಎರಡು ತರಚಿದ ಗಾಯ ಎಡ ಹೆಬ್ಬೆರಳಿನಲ್ಲಿ ಕಂಡುಬರುತ್ತದೆ ಎಂದು ಶವ ಪರೀಕ್ಷೆ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಎಸ್ಪಿ ನೀಡಿದ್ದ ವರದಿ ಪ್ರಕಾರ, ಮೃತನ ಮೈ ಮೇಲೆ ಆಗಿರುವ ಒಂದು ಗಾಯವನ್ನು ಬಿಟ್ಟು ಉಳಿದ ಗಾಯಗಳ ಬಗ್ಗೆ ವಿವರಣೆಗಳು ಇರಲಿಲ್ಲ.

ಆತ್ಮರಕ್ಷಣೆಗಾಗಿ ಪೊಲೀಸರು ಸ್ವಿಫ್ಟ್‌ ಕಾರಿನ ಚಾಲಕನ ಎಡಭಾಗದಲ್ಲಿ ಕುಳಿತಿದ್ದ ವ್ಯಕ್ತಿಗೆ ಒಂದು ಗುಂಡನ್ನು ತನ್ನ ಸರ್ವೀಸ್‌ ಪಿಸ್ತೂಲ್‌ ಉಪಯೋಗಿಸಿ ಹಾರಿಸಿದ್ದ ಪಕ್ಷದಲ್ಲಿ ಮೃತನಿಗೆ ಮೈಮೇಲೆ ಎರಡು ಗುಂಡಿನ ಗಾಯಗಳು ಆಗುವ ಸಾಧ್ಯತೆ ಇರುವುದಿಲ್ಲ. ಅಲ್ಲದೆ, ಗುಂಡನ್ನು ಕಾರಿನ ಕಿಟಕಿಯ ಮೂಲಕ ಹಾರಿಸಿದಾಗ ಮೃತನ ಹೊಟ್ಟೆಗೆ ತಾಗುವ ಸಾಧ್ಯತೆ ಅತಿ ವಿರಳ. ಮೃತನ ಮೈಮೇಲೆ ಕಂಡುಬರುವ ಗಾಯಗಳಿಂದ ಪೊಲೀಸರು ಆತನನ್ನು ಹಿಡಿಯುವ ಸಂದರ್ಭದಲ್ಲಿ ಅವಶ್ಯಕತೆಗಿಂತ ಹೆಚ್ಚು ಬಲಪ್ರಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂಬ ಅಂಶ ಆಯೋಗ ವಿಚಾರಣೆ ವರದಿಯಿಂದ ತಿಳಿದುಬಂದಿದೆ.

ಇದು ಹಳೆಯ ಪ್ರಕರಣ. ಆದೇಶದ ಪ್ರತಿ ಕೈ ಸೇರಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಯಾವ ಅಂಶದ ಆಧಾರದ ಮೇಲೆ ಆದೇಶ ಹೊರಡಿಸಲಾಗಿದೆ ಎಂಬುದನ್ನು ನೋಡಬೇಕು.
ಸುಬ್ರಹ್ಮಣೇಶ್ವರ, ಮೈಸೂರು ಪೊಲೀಸ್‌ ಕಮಿಷನರ್ (ದ.ಕನ್ನಡ ಜಿಲ್ಲೆಯ ಆಗಿನ ಎಸ್ಪಿ)

ಸಿಐಡಿಗೆ ಒಪ್ಪಿಸಲಿಲ್ಲವೇಕೆ?: ಪೊಲೀಸ್‌ ರಕ್ಷಣೆಯಲ್ಲಿ ಅಥವಾ ಎನ್‌ ಕೌಂಟರ್‌ನಲ್ಲಿ ಸಾವು ಉಂಟಾದಾಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನದ ಪ್ರಕಾರ, ಎನ್‌ ಕೌಂಟರ್‌ ಸಾವಿನ ಬಗ್ಗೆ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅದರ ತನಿಖೆಯನ್ನು ಸಿಐಡಿ ಅಥವಾ ಸ್ವತಂತ್ರ ಸಂಸ್ಥೆಗೆ ಒಪ್ಪಿಸಬೇಕು. ಆದರೆ ಹಾಗೆ ಮಾಡಿಲ್ಲ. ಅಲ್ಲದೆ, ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಬೇಕು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ, ಡಿವೈಎಸ್ಪಿ, ಪೊಲೀಸ್‌ ಇನ್ಸ್‌ ಪೆಕ್ಟರ್‌ ಕಾರ್ಯನಿರ್ವಹಿಸಿಲ್ಲ. ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂಬ ವಿಚಾರ ಆಯೋಗದ ವಿಚಾರಣೆ ವರದಿಯಿಂದ ಗೊತ್ತಾಗಿದೆ.

ಪ್ರಕರಣ ನಡೆದಿದ್ದ ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐಜಿಪಿಯಾಗಿದ್ದ ಗೋಪಾಲ್ ಹೊಸೂರ್ ಅವರು, “ಮಾನವ ಹಕ್ಕುಗಳ ಆಯೋಗ ನೀಡಿರುವ ಆದೇಶದ ಪೂರ್ಣ ಪಾಠ ದೊರೆತ ಬಳಿಕ ಪ್ರತಿಕ್ರಿಯಿಸುತ್ತೇನೆ,” ಎಂದು ‘ದಿ ಸ್ಟೇಟ್‌’ಗೆ ತಿಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More