ರೈತರ ಹೆಸರಲ್ಲಿ ಕಡಿಮೆ ಬಡ್ಡಿದರಕ್ಕೆ ಕೃಷಿ ಸಾಲ ಪಡೆಯುತ್ತಿವೆ ಕಾರ್ಪೊರೆಟ್‌ ಕಂಪನಿಗಳು!

ಬ್ಯಾಂಕುಗಳು ತಮ್ಮ ಒಟ್ಟು ಸಾಲದ ಪೈಕಿ ಶೇಕಡ 18ರಷ್ಟು ಸಾಲವನ್ನು ಆದ್ಯತಾ ವಲಯವಾದ ಕೃಷಿಗೆ ನೀಡಲೇಬೇಕೆಂಬ ನಿಯಮ ಇದೆ. ಆದರೆ, ಬ್ಯಾಂಕುಗಳು ತಮ್ಮ ಅನುಕೂಲಕ್ಕಾಗಿ ಕಾರ್ಪೊರೆಟ್‌ಗಳಿಗೆ ಕೃಷಿ ಸಾಲ ನೀಡಿ ರೈತರನ್ನು ವಂಚಿಸುತ್ತಿವೆ. ಈ ಕುರಿತ ‘ದಿ ವೈರ್’ ವರದಿಯ ಭಾವಾನುವಾದ ಇಲ್ಲಿದೆ

ಸಾರ್ವಜನಿಕ ವಲಯದ ಬ್ಯಾಂಕುಗಳ ಮತ್ತೊಂದು ವಂಚನೆ ಬಯಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಕಾರ್ಪೊರೆಟ್‌ಗಳಿಗೆ ರೈತರ ಹೆಸರಿನಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುತ್ತಿವೆ. ಅದು ಸಾಲ ನೀಡುತ್ತಿರುವ ಮೊತ್ತ ಎಷ್ಟು ಗೊತ್ತೇ? ವಾರ್ಷಿಕ ಸರಾಸರಿ 60,000 ಕೋಟಿ ರುಪಾಯಿಗಳು. 2016ನೇ ಸಾಲಿನಲ್ಲಿ 58,561 ಕೋಟಿ ರುಪಾಯಿಗಳನ್ನು 615 ಖಾತೆಗಳಿಗೆ ಕೃಷಿ ಸಾಲವೆಂದು ನೀಡಲಾಗಿದೆ. ಪ್ರತಿ ಖಾತೆಗೆ ನೀಡಿರುವ ಸರಾಸರಿ ಸಾಲದ ಮೊತ್ತ 95 ಕೋಟಿ ರುಪಾಯಿಗಳು.

ವಾಸ್ತವವಾಗಿ ರೈತರಿಗೆ ಅತಿ ಹೆಚ್ಚೆಂದರೆ 9 ಲಕ್ಷ ರುಪಾಯಿ ಸಾಲ ನೀಡುತ್ತವೆ ಬ್ಯಾಂಕುಗಳು. 10 ಲಕ್ಷ ಮೀರಿದ ಸಾಲಕ್ಕೆ ಹೆಚ್ಚಿನ ಖಾತ್ರಿ ಬಯಸುತ್ತವೆ. ಆದರಿಲ್ಲಿ, ಸರಾಸರಿ 95 ಕೋಟಿ ರುಪಾಯಿ ಸಾಲವನ್ನು ರೈತರ ಹೆಸರಿನಲ್ಲಿ ಕಾರ್ಪೊರೆಟ್‌ಗಳಿಗೆ ನೀಡಿವೆ. ಸುಲಭ ದರದಲ್ಲಿ ಸಾಲ ಲಭ್ಯವಾಗುತ್ತದೆಂದು ಕಾರ್ಪೊರೆಟ್‌ಗಳೂ ಈ ವಾಮಮಾರ್ಗದಲ್ಲಿ ಸಾಲ ಪಡೆಯುತ್ತಲೇ ಬಂದಿವೆ. 2007ರಿಂದಲೂ ಇದು ನಡೆದುಕೊಂಡು ಬಂದಿದೆ.

‘ದಿ ವೈರ್’ ಆರ್‌ಬಿಐನಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯನ್ನಾಧರಿಸಿ ಈ ಬಗ್ಗೆ ವಿಸ್ತೃತ ವರದಿ ಮಾಡಿದೆ. ವರದಿ ಪ್ರಕಾರ, 2007ರಲ್ಲಿ 43,664 ಕೋಟಿ ರುಪಾಯಿಗಳನ್ನು ಸಾಲ ಪಡೆಯಲಾಗಿತ್ತು; ಪ್ರತಿವರ್ಷ ಈ ವಾಮಮಾರ್ಗದ ಸಾಲದ ಪ್ರಮಾಣ ಏರುತ್ತಲೇ ಬಂದಿದ್ದು, 2016ರಲ್ಲಿ 58,561 ಕೋಟಿ ರುಪಾಯಿಗೆ ಏರಿದೆ. 2007ರಲ್ಲಿ ಪ್ರತಿ ಖಾತೆಗೆ ನೀಡಲಾದ ಸರಾಸರಿ ಸಾಲವು 74.7 ಕೋಟಿ ರುಪಾಯಿಗಳಿದ್ದದ್ದು 2016ರಲ್ಲಿ 95.2 ಕೋಟಿಗೆ ಏರಿದೆ.

ಸಾಮಾನ್ಯ ಸಾಲಗಳಿಗೆ ಬ್ಯಾಂಕುಗಳು ವಿಧಿಸುವ ಬಡ್ಡಿದರಕ್ಕೆ ಹೋಲಿಸಿದರೆ ಕೃಷಿ ಸಾಲದ ಮೇಲಿನ ಬಡ್ಡಿದರ ಅತ್ಯಲ್ಪ ಇರುತ್ತದೆ. ಅಲ್ಲದೆ, ಷರತ್ತುಗಳು ಹೆಚ್ಚಿರುವುದಿಲ್ಲ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಬೀಳುವ ಸರಾಸರಿ ಬಡ್ಡಿ ಶೇ.4ರಷ್ಟು ಮಾತ್ರ.

ರೈತರ ಸ್ವರಾಜ್ಯ ವೇದಿಕೆ ರೈತ ಸಂಘಟನೆಯ ಸ್ಥಾಪಕ ಕಿರಣ್ ಕುಮಾರ್ ವಿಸ್ಸಾ ಅವರ ಪ್ರಕಾರ, ಹಲವು ದೊಡ್ಡ ದೊಡ್ಡ ಕಂಪನಿಗಳು ಕೃಷಿ ವ್ಯಾಪಾರದಲ್ಲಿ ತೊಡಗಿವೆ. ಅವುಗಳು ಕೃಷಿ ವರ್ಗದಡಿ ಸಾಲ ಪಡೆದಿವೆ. ರಿಲಯನ್ಸ್ ಫ್ರೆಶ್‌ನಂತಹ ಕಂಪನಿಗಳು ಕೃಷಿ ವ್ಯಾಪಾರದ ವರ್ಗದಡಿ ಬರುತ್ತವೆ; ಇವು ಕೃಷಿ ಉತ್ಪನ್ನ ಖರೀದಿ ಮತ್ತು ಮಾರಾಟ ಮಾಡುತ್ತಿದ್ದು, ಕೃಷಿ ಸಾಲದಡಿ ಬೃಹತ್ ಸಾಲ ಪಡೆದು ಗೋದಾಮು ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳಿಗೆ ಬಳಸುತ್ತಿವೆ.

ಕೆಲವು ವಲಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಆದ್ಯತಾ ವಲಯವೆಂದು ಆರ್‌ಬಿಐ ವರ್ಗೀಕರಿಸಿದೆ. ಆದ್ಯತಾ ವಲಯಕ್ಕೆ ಇಂತಿಷ್ಟು ಪ್ರಮಾಣದಲ್ಲಿ ಕಡ್ಡಾಯವಾಗಿ ಸಾಲ ನೀಡಲೇಬೇಕು ಎಂದು ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಕೃಷಿ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮವರ್ಗದ ಉದ್ಯಮಗಳು, ರಫ್ತು ಸಾಲ, ಶಿಕ್ಷಣ, ವಸತಿ ಮತ್ತು ಸಾಮಾಜಿಕ ಮೂಲಭೂತ ಸೌಲಭ್ಯ ಮತ್ತು ಪುನರ್ಬಳಕೆ ಮಾಡಬಹುದಾದ ಇಂಧನಗಳನ್ನು ಆದ್ಯತಾ ವಲಯವೆಂದು ವರ್ಗೀಕರಿಸಿದೆ.

ಆದ್ಯತಾ ವಲಯ ನೀತಿ ಪ್ರಕಾರ, ಪ್ರತಿ ಬ್ಯಾಂಕು ತನ್ನ ಒಟ್ಟು ಸಾಲದ ಪೈಕಿ ಶೇ.18ರಷ್ಟು ಸಾಲವನ್ನು ಕೃಷಿ ವಲಯಕ್ಕೆ ನೀಡಲೇಬೇಕು. ಮುಖ್ಯವಾಗಿ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಆದ್ಯತೆ ಮೇಲೆ ಸಾಲ ನೀಡಿಬೇಕು. ಕಿರಣ್ ಕುಮಾರ್ ವಿಸ್ಸಾ ಅವರ ಪ್ರಕಾರ, ಮುಖ್ಯ ಸಮಸ್ಯೆ ಎಂದರೆ, ಶೇ.18ರಷ್ಟು ಸಾಲದ ಪೈಕಿ ಬಹುಪಾಲ ಸಾಲವನ್ನು ಕಾರ್ಪೊರೆಟ್ ಅಥವಾ ದೊಡ್ಡ ಕಂಪನಿಗಳಿಗೆ ನೀಡಲಾಗುತ್ತದೆ, ಇದರಿಂದಾಗಿ ಸಣ್ಣ, ಮಧ್ಯಮ ರೈತರು ಕೃಷಿ ಸಾಲ ಪಡೆಯಲು ಸಾಧ್ಯವಾಗುವುದೇ ಇಲ್ಲ.

“ಕಾರ್ಪೊರೆಟ್ ಕಂಪನಿಗಳಿಗೆ ಇಂತಹ ಸಾಲ ಪಡೆಯುವುದು ಬಹಳ ಸುಲಭ. ಬೇರೆ ಸಾಲಗಳಿಗಿಂತ ಕಡಿಮೆ ಬಡ್ಡಿದರ ಇರುವುದರಿಂದ ಕಾರ್ಪೊರೆಟ್‌ಗಳು ಈ ರೀತಿಯ ಸಾಲವನ್ನೇ ಪಡೆಯುತ್ತವೆ. ಬ್ಯಾಂಕುಗಳು ಇಂತಹ ಕಂಪನಿಗಳಿಗೇ ಸಾಲ ನೀಡುತ್ತವೆ. ಯಾಕೆಂದರೆ, ಕಾರ್ಪೊರೆಟ್‌ಗಳು ಕಡಿಮೆ ಬಡ್ಡಿದರದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುತ್ತವೆ. ಇದರಿಂದ ಬ್ಯಾಂಕುಗಳಿಗೆ ವಸೂಲಾತಿ ಸಲೀಸಾಗುತ್ತದೆ. ಅಲ್ಲದೆ, ಆರ್‌ಬಿಐ ನಿಯಮಗಳನ್ನು ಪಾಲಿಸಿದಂತಾಗುತ್ತದೆ,” ಎನ್ನುತ್ತಾರೆ ಕಿರಣ್ ಕುಮಾರ್.

‘ದಿ ವೈರ್’ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಶಾಖೆಗಳಲ್ಲಿನ ಮಾಹಿತಿ ಕೋರಿತ್ತು. ಆದರೆ, ಮುಂಬೈ ವಲಯ ಶಾಖೆ ಹೊರತಾಗಿ ಉಳಿದ ಯಾವುದೇ ಶಾಖೆಯೂ ಮಾಹಿತಿ ನೀಡಿಲ್ಲ. ಮುಂಬೈ ವಲಯದ ನಗರ ಶಾಖೆಯು 29.95 ಕೋಟಿ ರುಪಾಯಿಗಳನ್ನು ಮೂರು ಖಾತೆಗಳಿಗೆ ಸಾಲ ನೀಡಿರುವುದಾಗಿ ತಿಳಿಸಿದೆ.

“ಕಾರ್ಪೊರೆಟ್‌ಗಳಿಗೆ ರೈತರ ಹೆಸರಿನಲ್ಲಿ ಕೃಷಿ ಸಾಲ ನೀಡಲಾಗುತ್ತಿದೆ. ಇನ್ನೊಂದೆಡೆ, ರೈತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೊಳ್ಳುತ್ತಾರೆ,” ಎನ್ನುತ್ತಾರೆ ಕೃಷಿ ತಜ್ಞ ದೇವೆಂದರ್ ಶರ್ಮ. “100 ಕೋಟಿ ಸಾಲ ಪಡೆಯುವ ಇವರು ಯಾವ ರೀತಿಯ ರೈತರು? ಇದೆಲ್ಲವೂ ತೋರಿಕೆ. ಉದ್ಯಮಗಳಿಗೆ ರೈತರ ಹೆಸರಿನಲ್ಲೇಕೆ ಸಾಲ ನೀಡಬೇಕು?” ಎಂದು ಪ್ರಶ್ನಿಸುತ್ತಾರೆ ದೇವೆಂದರ್ ಶರ್ಮ.

“ರೈತರ ಹೆಸರಿನಲ್ಲಿ ಉದ್ಯಮಗಳಿಗೆ ಸಾಲ ನೀಡುವ ಪ್ರಕ್ರಿಯೆಯಲ್ಲಿ ಬ್ಯಾಂಕುಗಳಿಗೂ ಲಾಭ ಇದೆ. ಆದ್ದರಿಂದಲೇ ಅಷ್ಟು ದೊಡ್ಡ ಪ್ರಮಾಣದ ಸಾಲವನ್ನು ಕೃಷಿ ಹೆಸರಿನಲ್ಲಿ ನೀಡಲಾಗುತ್ತಿದೆ. ಇಲ್ಲಿ 100 ಕೋಟಿ ರುಪಾಯಿ ಸಾಲವನ್ನು ಒಂದು ಕಂಪನಿಗೆ ಸಲೀಸಾಗಿ ನೀಡಲಾಗುತ್ತದೆ. ಇದೇ ಮೊತ್ತವನ್ನು ರೈತರಿಗೆ ನೀಡಬೇಕೆಂದರೆ 200 ರೈತರು ಬೇಕಾಗುತ್ತದೆ. ಬ್ಯಾಂಕುಗಳು ಉದ್ಯಮಿಗಳಿಗೆ ಅಷ್ಟು ಸಲೀಸಾಗಿ ಸಾಲ ನೀಡುವುದು ತಮ್ಮ ಸಾಲ ಮರುಪಾವತಿಯಾಗುತ್ತದೆ ಮತ್ತು ಶೇ.18ರ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ,” ಎಂದು ವಿಶ್ಲೇಷಿಸುತ್ತಾರೆ ಶರ್ಮ.

ಎನ್‌ಡಿಎ ಸರ್ಕಾರ 2014-15ರಲ್ಲಿ 8.5 ಲಕ್ಷ ಕೋಟಿ ಸಾಲವನ್ನು ಕೃಷಿ ವಲಯಕ್ಕೆ ನೀಡಿತ್ತು. 2018-19ನೇ ಸಾಲಿನಲ್ಲಿ 11 ಲಕ್ಷ ಕೋಟಿ ಗುರಿ ಹಾಕಿಕೊಂಡಿದೆ. ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ, ಈ ಸಾಲದ ಪೈಕಿ ಬಹುದೊಡ್ಡ ಪಾಲು ಕೃಷಿ ಹೆಸರಿನಲ್ಲಿ ಪಡೆಯುವ ಉದ್ಯಮಗಳಿಗೆ ಹರಿಯುತ್ತದೆ. ಕೃಷಿ ತಜ್ಞರ ಪ್ರಕಾರ ಬಹುತೇಕ ಸಾಲವು ಕೃಷಿ ವ್ಯಾಪಾರ ಕಂಪನಿಗಳು ಮತ್ತು ಉದ್ಯಮಗಳ ಪಾಲಾಗುತ್ತದೆ.

ಇದನ್ನೂ ಓದಿ : ಚುನಾವಣೆ ಮೇಲೆ ಮೋದಿ ಕಣ್ಣು; ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಗರಿಷ್ಠ ಏರಿಕೆ

ಕೃಷಿ ಸಾಲವನ್ನು ಮೂರು ವರ್ಗದಲ್ಲಿ (ಕೃಷಿ ಸಾಲ, ಕೃಷಿ ಮೂಲಭೂತ ಸೌಲಭ್ಯ ಮತ್ತು ಪೂರಕ ಚಟುವಟಿಕೆ) ನೀಡಲಾಗುತ್ತದೆ. ಗೋದಾಮು ಮತ್ತು ಶೀಥಲೀಕರಣ ಕೇಂದ್ರಗಳು ಕೃಷಿ ಮೂಲಭೂತ ಸೌಲಭ್ಯಗಳ ವರ್ಗದಲ್ಲಿ ಬರುತ್ತವೆ. ಇದಕ್ಕೆ 100 ಕೋಟಿ ರುಪಾಯಿಗಳಷ್ಟು ಗರಿಷ್ಠ ಸಾಲ ನೀಡಲಾಗುತ್ತದೆ. ಪೂರಕ ಚಟುವಟಿಕೆ ವ್ಯಾಪ್ತಿಯಲ್ಲಿ ಅಗ್ರಿ ಕ್ಲಿನಿಕ್ ಮತ್ತು ಅಗ್ರಿ ಬ್ಯುಸಿನೆಸ್ ಸೆಂಟರ್‌ಗಳು ಬರುತ್ತವೆ. ಇವುಗಳಿಗೂ ಸಾಲದ ಗರಿಷ್ಠ ಮಿತಿ 100 ಕೋಟಿ ರುಪಾಯಿಗಳು.

ಅಂಕಿ-ಅಂಶಗಳ ಪ್ರಕಾರ, 2016ರಲ್ಲಿ ಕೃಷಿ ಹೆಸರಿನಲ್ಲಿ ಭಾರಿ ಮೊತ್ತದ ಸಾಲವನ್ನು ನೀಡಲಾಗಿದೆ. 2015ರಲ್ಲಿ 604 ಖಾತೆಗಳಿಗೆ 52,143 ಕೋಟಿ ಸಾಲ ನೀಡಲಾಗಿದೆ. ಪ್ರತಿ ಖಾತೆಗೆ ನೀಡಿರುವ ಸರಾಸರಿ ಸಾಲದ ಮೊತ್ತ 86.33 ಕೋಟಿ ರುಪಾಯಿ. 2014ರಲ್ಲಿ 60,156 ಕೋಟಿ ಸಾಲ ನೀಡಲಾಗಿದ್ದು, ಪ್ರತಿ ಖಾತೆಗೆ ನೀಡಿರುವ ಸಾಲದ ಮೊತ್ತವು 91.28 ಕೋಟಿ ರುಪಾಯಿಗಳು. ಯುಪಿಎ ಸರ್ಕಾರದ ಅವಧಿಯಲ್ಲೂ ಇದೇ ರೀತಿ ಸಾಲ ವಿತರಿಸಲಾಗಿದೆ. 2013ರಲ್ಲಿ 665 ಖಾತೆಗಳಿಗೆ 56,000 ಕೋಟಿ ಸಾಲ ನೀಡಲಾಗಿದೆ. ಪ್ರತಿ ಖಾತೆಯ ಸರಾಸರಿ ಸಾಲದ ಮೊತ್ತವು 84.30 ಕೋಟಿ ರುಪಾಯಿಗಳಾಗಿದೆ. 2012ರಲ್ಲಿ 698 ಖಾತೆಗಳಿಗೆ ಸರಾಸರಿ 89.51 ಕೋಟಿ ರುಪಾಯಿಗಳಂತೆ ಒಟ್ಟು 55,504 ಕೋಟಿ ಸಾಲ ನೀಡಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More