ಕೋರ್ಟ್ ಕುರಿತು ಹೇಳಿಕೆ; ಪುಣೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಮಾನವ ಹಕ್ಕು ಹೋರಾಟಗಾರರ ಬಂಧನ ವಿಷಯವನ್ನು ಸುಪ್ರೀಂ ಕೋರ್ಟು ಕೈಗೆತ್ತಿಕೊಳ್ಳಬಾರದಿತ್ತು ಎಂಬ ಅಭಿಪ್ರಾಯ ಹೇರುವ ಮೂಲಕ ಕೋರ್ಟನ್ನು ಅವಮಾನಿಸುವ ಪ್ರಯತ್ನ ನಡೆದಿದೆ ಎಂದು ಎಚ್ಚರಿಸಿದ್ದಾರೆ ನ್ಯಾ.ಚಂದ್ರಚೂಡ್. ಈ ಕುರಿತ ‘ಸ್ಕ್ರಾಲ್’ ಜಾಲತಾಣದ ಲೇಖನದ ಭಾವಾನುವಾದ ಇಲ್ಲಿದೆ

ಭೀಮಾ ಕೋರೇಗಾಂವ್ ಹಿಂಸಾಚಾರ ಪ್ರಕರಣದ ತನಿಖೆಯ ಭಾಗವಾಗಿ ಮಹಾರಾಷ್ಟ್ರ ಪೊಲೀಸರು ಐವರು ಕಾರ್ಯಕರ್ತರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 12ರಂದು ನಡೆಸುವುದಾಗಿ ಸುಪ್ರೀಂ ಕೋರ್ಟು ಗುರುವಾರ (ಸೆ.6) ಹೇಳಿತು. ನ್ಯಾಯಾಲಯವು ಕಾರ್ಯಕರ್ತರ ಗೃಹಬಂಧನವನ್ನೂ ಬುಧವಾರದ ತನಕ ವಿಸ್ತರಿಸಿತು. ಈ ಕಾರ್ಯಕರ್ತರನ್ನು ಬಂಧಿಸಿದ ಮರುದಿನವೇ, ಆಗಸ್ಟ್ 29ರಂದು ಐವರು ಗಣ್ಯ ವ್ಯಕ್ತಿಗಳು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಬಂಧನವನ್ನು ವಿರೋಧಿಸಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠವು ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿತು. "ಪುಣೆಯ ಸಹಾಯಕ ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿ ನಡೆಸಿ, ‘ಸುಪ್ರೀಂ ಕೋರ್ಟು ಈ ಹಂತದಲ್ಲಿ ಮಧ್ಯಪ್ರವೇಶ ಮಾಡಬಾರದಿತ್ತು’ ಎಂದು ಪರೋಕ್ಷವಾಗಿ ಹೇಳಿದ್ದನ್ನು ನಾನೇ ನೋಡಿದ್ದೇನೆ. ಅದನ್ನು ಹೇಳುವ ಅಧಿಕಾರ ಅವರಿಗಿಲ್ಲ," ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಪತ್ರಿಕಾಗೋಷ್ಠಿಯನ್ನು ಎಚ್ಚರಿಕೆಯಿಂದ ನೋಡಿದ್ದಾಗಿ ತಿಳಿಸಿದ ನ್ಯಾ.ಚಂದ್ರಚೂಡ್, "ಈ ವಿಷಯವನ್ನು ಸುಪ್ರೀಂ ಕೋರ್ಟು ಕೈಗೆತ್ತಿಕೊಳ್ಳಬಾರದಿತ್ತು ಎಂಬ ಅಭಿಪ್ರಾಯವನ್ನು ಹೇರುವ ಮೂಲಕ ಸುಪ್ರೀಂ ಕೋರ್ಟನ್ನು ಅವಮಾನಿಸುವ ಪ್ರಯತ್ನವಿದು. ಈ ವಿಷಯವನ್ನು ನ್ಯಾಯಪೀಠ ಬಹಳ ಗಂಭೀರವಾಗಿ ಪರಿಗಣಿಸಿದೆ,” ಎಂದು ಎಚ್ಚರಿಸಿದರು. ಮಹಾರಾಷ್ಟ್ರ ಸರ್ಕಾರದ ಪರವಾಗಿ ಮೆಹ್ತಾ ಅವರು ಕ್ಷಮಾಪಣೆ ಕೇಳಿದರು.

ಆದರೆ, ‘ಲೈವ್ ಲಾ’ ವರದಿ ಮಾಡಿದಂತೆ, "ಅರ್ಜಿ ಸಲ್ಲಿಸುವುದಕ್ಕೆ ಮೂರನೇ ಪಕ್ಷದವರಿಗೆ ಹಕ್ಕಿಲ್ಲ," ಎಂದು ವಾದಿಸಿದ ಮೆಹ್ತಾ ಅವರು, ಕಾರ್ಯಕರ್ತರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಲವಾಗಿ ವಿರೋಧಿಸಿದರು. "ಇಂತಹ ವಿಷಯಗಳಲ್ಲಿ ಸುಪ್ರೀಂ ಕೋರ್ಟಿಗೆ ಧಾವಿಸಿಬರುವುದು ಕೆಟ್ಟ ಪೂರ್ವನಿರ್ದಶನವನ್ನು ಹುಟ್ಟುಹಾಕುತ್ತದೆ. ಕಾನೂನು ತನ್ನದೇ ಹಾದಿ ಹಿಡಿಯಬೇಕು," ಎಂದು ಅವರು ಹೇಳಿದ್ದಾಗಿ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಮಧ್ಯಪ್ರವೇಶಿಸುವುದನ್ನು ತಡೆದ 2006ರ ಸುಪ್ರೀಂ ಕೋರ್ಟ್ ತೀರ್ಪನ್ನು ಮೆಹ್ತಾ ಅವರು ಉಲ್ಲೇಖಿಸಿದರು. ಕಾರ್ಯಕರ್ತರ ಮೇಲಿರುವ ಪ್ರಕರಣಗಳು ಗಂಭೀರವಾಗಿದ್ದು, ಪೊಲೀಸರಿಗೆ ಸಿಕ್ಕ ಸಾಕ್ಷ್ಯಗಳ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅಷ್ಟರಲ್ಲಿ, ಈ ಪ್ರಕರಣದಲ್ಲಿ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿರುವ ಪಿರ್ಯಾದಿ ತುಷಾರ್ ದಾಮ್ಗುಡೆ ಅವರ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. ಸಾಳ್ವೆಯವರು ತಮ್ಮನ್ನೂ ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸಬೇಕು ಎಂದು ಬೇಡಿಕೆ ಇಟ್ಟು ಮಧ್ಯಪ್ರವೇಶಿಕೆ ಅರ್ಜಿಯನ್ನು ಸಲ್ಲಿಸಿದರು. ಈ ವಿಷಯವನ್ನು ಬುಧವಾರ ವಿಚಾರಣೆ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

ಇದನ್ನೂ ಓದಿ : ಸಾಮಾಜಿಕ ಕಾರ್ಯಕರ್ತರ ಬಂಧನ: ರೋಮಿಲಾ ಥಾಪರ್ ಮತ್ತಿತರರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ?

ಈ ವಿಷಯವನ್ನು ನ್ಯಾಯಾಲಯದಿಂದ ನೇಮಕಗೊಂಡ ವಿಶೇಷ ತನಿಖಾ ದಳವೇ ಸ್ವತಂತ್ರವಾಗಿ ತನಿಖೆ ನಡೆಸಲಿ ಎಂದು ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಗ್ವಿ ಒತ್ತಾಯಿಸಿದರು.

ಆಗಸ್ಟ್ 28ರಂದು ಪುಣೆ ಪೊಲೀಸರು ದೇಶಾದ್ಯಂತ 10 ಮಂದಿ ಮಾನವ ಹಕ್ಕು ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ ಅವರಲ್ಲಿ ಐವರನ್ನು (ಅರುಣ್ ಫೆರೈರಾ, ವರ್ನನ್ ಗೊಂಜಾಲ್ವೇಸ್, ಗೌತಮ್ ನೌಲಾಖ, ವರವರರಾವ್ ಮತ್ತು ಸುಧಾ ಭಾರದ್ವಾಜ್) ಅವರನ್ನು ಬಂಧಿಸಿದ್ದರು. ಮರುದಿನ, ಈ ಕಾರ್ಯಕರ್ತರನ್ನು ಸೆಪ್ಟೆಂಬರ್ 6ರ ವರೆಗೆ ಗೃಹಬಂಧನದಲ್ಲಿ ಇರಿಸಬೇಕು ಎಂದು ಸುಪ್ರೀಂ ಕೋರ್ಟು ಆದೇಶಿಸಿತ್ತು. "ಭಿನ್ನಮತ ಎಂಬುದು ಪ್ರಜಾತಂತ್ರದ ಸುರಕ್ಷಾ ಕವಾಟ. ಸುರಕ್ಷಾ ಕವಾಟ ಇಲ್ಲದಿದ್ದರೆ ಒತ್ತಡದ ಕುಕ್ಕರ್ ಸ್ಫೋಟಗೊಳ್ಳುತ್ತದೆ," ಎಂದು ಕೋರ್ಟು ಹೇಳಿತ್ತು.

ಬಂಧಿತ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಿ ಮನಸೋಯಿಚ್ಛೆ ನಡೆಸಿದ ಈ ಬಂಧನಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಇತಿಹಾಸತಜ್ಞೆ ರೋಮಿಲಾ ಥಾಪರ್, ಅರ್ಥಶಾಸ್ತ್ರಜ್ಞರಾದ ಪ್ರಭಾತ್ ಪಟ್ನಾಯಕ್ ಮತ್ತು ದೇವಿಕಾ ಜೈನ್, ಸಮಾಜಶಾಸ್ತ್ರಜ್ಞ ಸತೀಶ್ ದೇಶಪಾಂಡೆ ಮತ್ತು ಮಾನವ ಹಕ್ಕುಗಳ ವಕೀಲ ಮಜಾ ದಾರುವಾಲ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ ಸುಪ್ರೀಂ ಕೋರ್ಟು ಈ ಆದೇಶವನ್ನು ನೀಡಿತ್ತು.

ಬಂಧನಗಳ ಸಮರ್ಥನೆ

ಬಂಧಿತ ಐವರು ಕಾರ್ಯಕರ್ತರು ಬೃಹತ್ ಪ್ರಮಾಣದ ಹಿಂಸಾಚಾರಕ್ಕೆ ಯೋಜನೆ ರೂಪಿಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಈ ಕಾರ್ಯಕರ್ತರನ್ನು ಬಂಧಿಸಿದ ಮರುದಿನ ಸುಪ್ರೀಂ ಕೋರ್ಟು ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಿ ಸರ್ಕಾರ ಸಲ್ಲಿಸಿದ ಪ್ರತಿ-ಪ್ರಮಾಣಪತ್ರದಲ್ಲಿ ಈ ರೀತಿ ಹೇಳಲಾಗಿದೆ.

“ಬಂಧಿತ ಕಾರ್ಯಕರ್ತರು ಬೃಹತ್ ಪ್ರಮಾಣದ ಹಿಂಸೆ ಮತ್ತು ಆಸ್ತಿಪಾಸ್ತಿ ನಾಶ ಮಾಡುವುದಕ್ಕಾಗಿ ದೊಡ್ಡ ಮಟ್ಟದ ಯೋಜನೆ ರೂಪಿಸುತ್ತಿದ್ದು ಅದರಿಂದ ಪರಿಸ್ಥಿತಿ ಅಸ್ತವ್ಯಸ್ತವಾಗುತ್ತಿತ್ತು. ಈ ಯೋಜನೆಯು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ ಭಾಗವಾಗಿದೆ. ಈ ಐವರನ್ನು ಬಂಧಿಸಿದ್ದು ಅವರು ಸರ್ಕಾರದೊಂದಿಗೆ ಭಿನ್ನಮತ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಿಗೆ ನಿಷೇಧಿತ ಮಾವೋವಾದಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ ಎಂಬ ಕಾರಣಕ್ಕೆ,” ಎಂದು ಪೊಲೀಸರು ಕೋರ್ಟಿಗೆ ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಭೂಗತ ಆರೋಪಿಯ ನೆರವಿನಿಂದ ಈ ಕಾರ್ಯಕರ್ತರು ಎಲ್ಗಾರ್ ಪರಿಷತ್ ಬ್ಯಾನರ್ ಅಡಿಯಲ್ಲಿ ಸಾರ್ವಜನಿಕ ಸಭೆ ಸಂಘಟಿಸಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ. ಎಲ್ಗಾರ್ ಎಂಬುದು 'ಯಾಳ್ಗಾರ್' ಎಂಬುದರ ರೂಪವಾಗಿದ್ದು, ‘ಯಾಳ್ಗಾರ್’ ಎಂದರೆ ‘ದಾಳಿ’ ಎಂದರ್ಥ ಎಂದು ಪೊಲೀಸರು ಹೇಳಿದ್ದಾರೆ.

ಡಿ.31ರಂದು ನಡೆದ ‘ಎಲ್ಗಾರ್ ಪರಿಷತ್’ನಲ್ಲಿ ಈ ಕಾರ್ಯಕರ್ತರು ಭಾಗಿಯಾಗಿದ್ದು, ಈ ಸಭೆಯ ಕಾರಣದಿಂದಾಗಿಯೇ ಮರುದಿನ ಭೀಮಾ ಕೋರೇಗಾಂವ್ ಹಳ್ಳಿಯ ಬಳಿ ಜಾತಿ ಹಿಂಸಾಚಾರ ಭುಗಿಲೆದ್ದಿತು ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಎಲ್ಗಾರ್ ಪರಿಷತ್ತಿನಲ್ಲಿ ಕಾರ್ಯಕರ್ತರು ಮಾಡಿದ ಭಾಷಣಗಳು ದ್ವೇಷ ಹರಡುವ ಉದ್ದೇಶವನ್ನು ಹೊಂದಿದ್ದವು ಎಂದು ಪೊಲೀಸರು ಆರೋಪಿಸಿದ್ದರು. ಅಲ್ಲದೆ, ತಾವು ‘ಭೂಗತ’ ಮತ್ತು ‘ಬಹಿರಂಗ’ ಮಾವೋವಾದಿಗಳ ನಡುವೆ ವಿನಿಮಯವಾದ ಸಾವಿರಾರು ಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿಯೂ ಪೊಲೀಸರು ಹೇಳಿಕೊಂಡಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More