ಲಕ್ಷಕ್ಕಿಂತ ಹೆಚ್ಚು ರೈತರು, ಕಾರ್ಮಿಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದೇಕೆ?

ಆಲ್ ಇಂಡಿಯಾ ಕಿಸಾನ್ ಸಭಾ ನೇತೃತ್ವದಲ್ಲಿ ಬೀದಿಗಿಳಿದಿರುವ ರೈತರು ಮತ್ತು ಕಾರ್ಮಿಕರು ಕನಿಷ್ಠ ವೇತನದ ಹೆಚ್ಚಳದಿಂದ ಮೊದಲುಗೊಂಡು ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವ ತನಕ ಅನೇಕ ಹಕ್ಕೊತ್ತಾಯ ಮುಂದಿಟ್ಟಿದ್ದಾರೆ. ಈ ಕುರಿತ ‘ದಿ ವೈರ್’ ಲೇಖನದ ಭಾವಾನುವಾದ ಇಲ್ಲಿದೆ

ಆಲ್ ಇಂಡಿಯಾ ಕಿಸಾನ್ ಸಭಾದ (ಎಐಕೆಎಸ್) ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಆಗಸ್ಟ್ 29ರಂದು ಬಹಳ ಉದ್ವೇಗದಲ್ಲಿದ್ದರು. ಅಂದು ಸಂಜೆ ಅವರು ದೆಹಲಿಯ ರಾಮಲೀಲ ಮೈದಾನಕ್ಕೆ ಹೋದಾಗ ಸತತವಾಗಿ ಸುರಿದ ಮಳೆ ಮತ್ತು ಒಳಚರಂಡಿಗಳ ಅಸಮರ್ಪಕ ನಿರ್ವಹಣೆಗಳಿಂದಾಗಿ ಇಡೀ ಮೈದಾನ ಜಲಾವೃತಗೊಂಡಿತ್ತು. “ಹೇಗಪ್ಪ ಇದನ್ನೆಲ್ಲ ನಿಭಾಯಿಸೋದು ಅಂತ ನನಗೆ ದಿಕ್ಕೇ ತೋಚದಂತಾಗಿತ್ತು,” ಎಂದು ಕೃಷ್ಣನ್ ‘ದಿ ವೈರ್’ ಜಾಲತಾಣದ ಜೊತೆ ತಮ್ಮ ಆತಂಕ ಹಂಚಿಕೊಂಡಿದ್ದರು.

ಎಐಕೆಎಸ್ ಸಂಘಟನೆಯ ಪ್ರಕಾರ, ದೇಶದ ವಿವಿಧ ಭಾಗಗಳಿಂದ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚಿನ ರೈತರು ಮತ್ತು ಕಾರ್ಮಿಕರು ಸೆ.2ರಂದು ದೆಹಲಿಗೆ ಬರುವವರಿದ್ದರು. ಇದೇ ರಾಮಲೀಲಾ ಮೈದಾನದಲ್ಲೇ ಅವರು ಜತೆಗೂಡುವ ಯೋಜನೆ ಇತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸ್ವಯಂಸೇವಕರು ಮೈದಾನದಲ್ಲಿದ್ದ ನೀರನ್ನು ತೆಗೆದು ಒಂದಿಷ್ಟು ಭಾಗವನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾದರು. ಮರದ ಹಲಗೆಗಳನ್ನು ಹಾಕಿ, ಅವುಗಳನ್ನು ಹಳದಿ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಿ ಅವುಗಳ ಮೇಲೆ ಡೇರೆಗಳನ್ನು ಹಾಕಿದರು.

“ಶೇ.40ರಷ್ಟು ಭಾಗವನ್ನು ಸ್ವಚ್ಛಗೊಳಿಸುವುದಕ್ಕೆ ನಮಗೆ ಸಾಧ್ಯವಾಯಿತು. ಹೀಗಾಗಿ, ಕೆಲವು ಜನರನ್ನು ಗುರುದ್ವಾರಗಳಲ್ಲಿ ಇರಿಸಿದೆವು. ಉಳಿದ ಕೆಲವು ಮಂದಿಯನ್ನು ಶಹಿಬಾಬಾದ್‍ನಲ್ಲಿ ತಂಗಿಸಿದೆವು. ಇನ್ನು ಕೆಲವರು ಅತಿಥಿಗೃಹಗಳಲ್ಲಿ ಉಳಿದುಕೊಂಡರು,” ಎನ್ನುತ್ತಾರೆ ಕೃಷ್ಣನ್.

ರೈತ-ಕಾರ್ಮಿಕರ ಬೃಹತ್ ಪ್ರತಿಭಟನಾ ಪ್ರದರ್ಶನ ಆಯೋಜನೆಯಾದ ಹಿಂದಿನ ದಿನ ಸಂಜೆಯೇ ಸುಮಾರು 30,000 ಜನರು ರಾಮಲೀಲಾ ಮೈದಾನವನ್ನು ತಲುಪಿದ್ದರು. ಅಂದೇ ದೆಹಲಿಯಲ್ಲಿ ಮತ್ತಷ್ಟು ಮಳೆ ಸುರಿಯಿತು. ಮರದ ಹಲಗೆಗಳನ್ನು ಹಾಕಿ, ಅವುಗಳ ಮೇಲೆ ದೊಡ್ಡ-ದೊಡ್ಡ ಪ್ಲಾಸ್ಟಿಕ್ ಹಾಳೆಗಳನ್ನು ಎಳೆದು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಡೇರೆಗಳೇ ಪ್ರತಿಭಟನೆಗಾಗಿ ದೂರದೂರದಿಂದ ಪ್ರಯಾಣ ಮಾಡಿ ದೆಹಲಿಗೆ ಬಂದಿದ್ದ ಜನರಿಗೆ ಮಳೆ, ಗಾಳಿಯಿಂದ ರಕ್ಷಿಸುವ ಆಶ್ರಯದಾಣಗಳಾದವು.

ಕನಿಷ್ಠ ವೇತನವನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯಿಂದ ಹಿಡಿದು ರೈತರ ಬೆಳೆಗಳಿಗೆ ಸಮರ್ಪಕವಾದ ಬೆಂಬಲ ಬೆಲೆ ನೀಡಬೇಕು ಎಂಬ ಬೇಡಿಕೆಯ ತನಕ ಹತ್ತಾರು ಹಕ್ಕೊತ್ತಾಯಗಳನ್ನು ಇಟ್ಟುಕೊಂಡು 23 ರಾಜ್ಯಗಳಿಂದ ಕಾರ್ಮಿಕರು ಮತ್ತು ರೈತರು ಬಂದಿದ್ದರು. ಸುಮಾರು 5,000 ಜನ ಮಹಾರಾಷ್ಟ್ರದ ನಾಸಿಕ್‍ನಿಂದ ಬಂದಿದ್ದರು. ಅವರಲ್ಲಿ ಬಹುತೇಕರು ಈ ವರ್ಷದ ಮಾರ್ಚ್‌ನಲ್ಲಿ ನಾಸಿಕ್‍ನಿಂದ ಮುಂಬೈ ತನಕ ನಡೆದ ರೈತರ ಚಾರಿತ್ರಿಕ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡವರಾಗಿದ್ದರು. ಇನ್ನೊಂದು ರೈತ-ಕಾರ್ಮಿಕರ ಗುಂಪು ಕೇರಳದ ಪಾಲಕ್ಕಾಡ್‍ನಿಂದ ಮೋಟಾರ್‌ ಸೈಕಲ್‌ಗಳಲ್ಲಿ ಬಂದಿತ್ತು. ಮತ್ತೊಂದು ಗುಂಪು ಸ್ಥಳೀಯ ಪೊಲೀಸರ ಬೆದರಿಕೆ ನಡುವೆಯೂ ಮಣಿಪುರದಿಂದ ಬಂದಿತ್ತು. “ಎಲ್ಲ ಸೇರಿ ಸುಮಾರು ಎರಡು ಲಕ್ಷ ಜನರು ಸಂಸತ್ ಭವನಕ್ಕೆ ಹೋಗುವ ಜಾಥಾದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ,” ಎಂದರು ಕೃಷ್ಣನ್.

ಈ ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ 10 ರೂಪಾಯಿ ಶುಲ್ಕ ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು. “ಜನರಲ್ಲಿ ಇದು ತಮ್ಮದು ಎಂಬ ಭಾವನೆ ಮೂಡಬೇಕು. ಹಣ ಸಂಗ್ರಹ ಕೂಡ ಸಣ್ಣ ವಿಷಯವಲ್ಲ,” ಎನ್ನುತ್ತಾರೆ ಕೃಷ್ಣನ್. ರೈತ-ಕಾರ್ಮಿಕರ ಪ್ರತಿಭಟನಾ ಮೆರವಣಿಗೆಯನ್ನು ಸಂಸತ್ ಭವನಕ್ಕೆ ತೆಗೆದುಕೊಂಡು ಹೋಗಲು ಎಐಕೆಎಸ್ ಮಾರ್ಚ್‌ನಲ್ಲೇ ಯೋಜಿಸಿತ್ತು. ಏಪ್ರಿಲ್‍ನಲ್ಲಿ ಅವರು ಆನ್‍ಲೈನ್ ಹಣಸಂಗ್ರಹ ಕೆಲಸವನ್ನು ಪ್ರಾರಂಭಿಸಿ ಇಲ್ಲಿತನಕ ಸುಮಾರು 20 ಲಕ್ಷ ರುಪಾಯಿ ಸಂಗ್ರಹ ಮಾಡಿದ್ದಾರೆ.

“ಇದಲ್ಲದೆ, ಕೇರಳ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣಗಳನ್ನೂ ಒಳಗೊಂಡಂತೆ ನಮ್ಮ ಕೆಲವು ರಾಜ್ಯ ಸಮಿತಿಗಳು ತಮ್ಮ-ತಮ್ಮ ರಾಜ್ಯಗಳಿಂದ ಬರುವ ಜನರ ಪ್ರಯಾಣ ವೆಚ್ಚ ಮತ್ತು ಉಳಿದುಕೊಳ್ಳುವ ವ್ಯವಸ್ಥೆಗಳನ್ನು ತಾವೇ ಖುದ್ದಾಗಿ ಮಾಡಿಕೊಳ್ಳುತ್ತಿವೆ,” ಎನ್ನುತ್ತಾರೆ ಕೃಷ್ಣನ್.

ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ರೈತರಿಗೆ ಎಐಕೆಎಸ್ ರಾಮಲೀಲಾ ಮೈದಾನದ ಒಳಗೆ ಆಹಾರ ಮತ್ತು ತಂಪು ಪಾನೀಯಗಳ ವ್ಯವಸ್ಥೆ ಮಾಡಿದೆ. ದಿನದ ಇಪ್ಪತ್ನಾಲ್ಕು ತಾಸೂ ಕಾರ್ಯನಿರ್ವಹಿಸುವ ವೈದ್ಯಕೀಯ ಕೇಂದ್ರವೊಂದನ್ನು ಸ್ಥಾಪಿಸಲಾಗಿದ್ದು, ಅಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿ ಇದ್ದಾರೆ.

ಇದನ್ನೂ ಓದಿ : ಕೃಷಿಕರ ನೈಜ ಸಮಸ್ಯೆಗಳಿಗೆ ಅಂತ್ಯ ಹಾಡಲಿವೆಯೇ ಈ ಎರಡು ರೈತ ಮಸೂದೆ?

ಮಧ್ಯಪ್ರದೇಶದ ಮಂಡಸೂರ್‍ನಿಂದ ಬಂದಿದ್ದ ಜನರು ‘ಮಧ್ಯಪ್ರದೇಶ’ ಎಂಬ ನಾಮಫಲಕದ ಎದುರು ತಮಗಾಗಿ ನಿರ್ಮಿಸಿದ್ದ ಡೇರೆಗಳ ಹೊರಗೆ ನಿಂತಿದ್ದರು. ಅವರಲ್ಲಿ 56 ವರ್ಷದ ಧೀರಜ್ ಸಿಂಗ್ ಎಂಬ ಬೆಳ್ಳುಳ್ಳಿ ಬೆಳೆಯುವ ರೈತ ಕೂಡ ಒಬ್ಬ. ಮಧ್ಯಪ್ರದೇಶ ಸರ್ಕಾರ ತಮ್ಮ ಬವಣೆಗಳನ್ನು ಕೇಳಿಸಿಕೊಳ್ಳುತ್ತಿಲ್ಲವಾದ್ದರಿಂದ ತಾವೆಲ್ಲ ಅನಿವಾರ್ಯವಾಗಿ ದೆಹಲಿಗೆ ಬರಬೇಕಾಯಿತು ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು. “ಕಳೆದ ವರ್ಷ ಪೊಲೀಸರು ಆರು ರೈತರನ್ನು ಗುಂಡಿಕ್ಕಿ ಕೊಂದ ಮೇಲೂ ಮಧ್ಯಪ್ರದೇಶ ಸರ್ಕಾರ ರೈತರನ್ನು ಅಸಡ್ಡೆಯಿಂದ ನೋಡುತ್ತಿದೆ. ನಮ್ಮ ಯಾವ ಬೇಡಿಕೆಯನ್ನೂ ಅದು ಈಡೇರಿಸಿಲ್ಲ. ನಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನೂ ಕೊಡುತ್ತಿಲ್ಲ,” ಎಂದು ತಮ್ಮ ಗೋಳನ್ನು ಹೇಳಿಕೊಂಡರು ಧೀರಜ್ ಸಿಂಗ್.

ಈ ವರ್ಷ ಬೆಳ್ಳುಳ್ಳಿ ಬೆಲೆ ದಿಢೀರನೆ ನೆಲಕ್ಕೆ ಕುಸಿದಿದ್ದರಿಂದ ಬೆಳ್ಳುಳ್ಳಿ ಬೆಳೆದ ಎಲ್ಲ ರೈತರೂ ಭಾರಿ ನಷ್ಟ ಅನುಭವಿಸಿ ತೊಂದರೆಗೆ ಸಿಕ್ಕಿಕೊಂಡಿದ್ದಾರೆಂದು ಧೀರಜ್ ಸಿಂಗ್ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು. “ಎಲ್ಲ ಹೊರಟುಹೋಯಿತು. ಒಂದು ಕೆ.ಜಿ ಬೆಳ್ಳುಳ್ಳಿ ಬೆಳೆಯುವುದಕ್ಕೆ 20 ರುಪಾಯಿ ತಗಲಿತ್ತು. ಆದರೆ, ಬೆಳ್ಳುಳ್ಳಿ ಬೆಲೆ ಕೆ.ಜಿಗೆ ಒಂದು ರೂಪಾಯಿಗೆ ಕುಸಿದುಬಿಟ್ಟಿತು,” ಎಂದು ಬೆಳ್ಳುಳ್ಳಿ ಬೆಳೆಗಾರರ ಸಂಕಷ್ಟವನ್ನು ಹೇಳಿಕೊಂಡರು.

ಮಧ್ಯಪ್ರದೇಶದಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿಗೆ ಒಂದು ರುಪಾಯಿಗೆ ಕುಸಿದಿದ್ದು, ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷಿ ಭಾವಂತರ್ ಯೋಜನೆಯೂ ಅದಕ್ಕೆ ಸ್ವಲ್ಪ ಮಟ್ಟಿಗೆ ಕಾರಣ ಎಂದು ‘ದಿ ವೈರ್’ ಮೇನಲ್ಲಿ ವರದಿ ಮಾಡಿತ್ತು. “ಬೆಳ್ಳುಳ್ಳಿಯನ್ನು ಭಾವಂತರ್ ಯೋಜನೆಯೊಳಗೆ ಸೇರಿಸುವ ಮೊದಲು ಅದು ಪ್ರತಿ ಕೆ.ಜಿಗೆ 30 ರುಪಾಯಿಯಂತೆ ಮಾರಾಟವಾಗುತ್ತಿತ್ತು (ಅಥವಾ ಪ್ರತಿ ಕ್ವಿಂಟಾಲ್‍ಗೆ 3,000 ರೂಪಾಯಿಗೆ). ಆದರೆ, ಅದನ್ನು ಈ ಯೋಜನೆಯಲ್ಲಿ ಸೇರಿಸಿದ ಮೇಲೆ, ಅದರ ಬೆಲೆ ಗಣನೀಯವಾಗಿ ಕುಸಿಯಲಾರಂಭಿಸಿತು. ಇದರಿಂದ ವ್ಯಾಪಾರಿಗಳೂ ತಮ್ಮ ಬೆಲೆಯನ್ನು ಇಳಿಸುವುದಕ್ಕೆ ನೆಪ ಸಿಕ್ಕಂತಾಯಿತು. ಹೇಗೂ ಸರ್ಕಾರದಿಂದ ನಿಮಗೆ ಬೆಲೆ ಸಿಗುತ್ತಲ್ಲ ಎಂದು ವ್ಯಾಪಾರಿಗಳು ರೈತರಿಗೆ ಹೇಳಲಾರಂಭಿಸಿದರು. ಆದರೆ, ಅದು ಎಂದೂ ಆಗಲಿಲ್ಲ,” ಎಂದು ಧೀರಜ್ ಸಿಂಗ್ ಹೇಳುತ್ತಿರುವಾಗಲೇ, ಅವರ ಸ್ನೇಹಿತರು ಅವರನ್ನು ವೇದಿಕೆಯ ಗೇಟಿನತ್ತ ಕರೆದೊಯ್ದರು.

ಬಿಹಾರದಿಂದ ಬಂದಿದ್ದ ಮಹಿಳೆಯರ ಒಂದು ಗುಂಪು ಜನಪದ ನೃತ್ಯ ಮಾಡುತ್ತಿತ್ತು. ಅವರನ್ನು ಸುತ್ತುವರಿದು ನೋಡುತ್ತಿದ್ದ ಅನೇಕ ಜನ ಆ ನೃತ್ಯವನ್ನು ತಮ್ಮ ಮೊಬೈಲ್ ಫೋನುಗಳಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಈ ನೃತ್ಯ ನಡೆಯುತ್ತಿದ್ದ ಜಾಗದಿಂದ ಅಣತಿ ದೂರದಲ್ಲಿ ಮಹಿಳೆಯರ ಇನ್ನೊಂದು ಗುಂಪು ತಮ್ಮ ಬ್ಯಾಗುಗಳನ್ನಿಟ್ಟುಕೊಂಡು ನಿಂತಿತ್ತು. ಆ ಗುಂಪಿನವರು ಆಗತಾನೇ ತೆಲಂಗಾಣದ ಅದಿಲಾಬಾದಿನಿಂದ ಬಂದಿದ್ದರು. ಅವರಲ್ಲಿ ಕೆಲವರು ಶಾಲಾ ಶಿಕ್ಷಕಿಯರಾಗಿದ್ದರೆ, ಕೆಲವರು ಅಂಗನವಾಡಿ ಕಾರ್ಯಕರ್ತೆಯರಾಗಿದ್ದರು.

“ನಮಗೆ ನಿಗದಿಯಾದ ಡೇರೆ ಎಲ್ಲಿದೆ ಅಂತ ಗೊತ್ತಿಲ್ಲ. ನಮ್ಮ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವವರು ಬಂದು ತೋರಿಸಲಿ ಎಂದು ಕಾಯುತ್ತಿದ್ದೇವೆ,” ಎಂದರು ಇಂದಿರಾ ಧನುರಾಬಿ. ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. 58 ವರ್ಷದ ಧನುರಾಬಿ ಈಗ ನಿವೃತ್ತಿಯ ಅಂಚಿನಲ್ಲಿದ್ದು, 60 ವರ್ಷಕ್ಕೆ ನಿವೃತ್ತಿಯಾಗಲಿದ್ದಾರೆ. “ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಹೆಚ್ಚಿನ ವೃದ್ದಾಪ್ಯವೇತನ ನೀಡಬೇಕು. ಸರ್ಕಾರಿ ಕೆಲಸದಲ್ಲಿರುವವರಿಗೆಲ್ಲ ನಿವೃತ್ತರಾದ ಮೇಲೆ ಘನತೆಯಿಂದ ಜೀವನ ನಡೆಸುವುದಕ್ಕೆ ವೃದ್ದಾಪ್ಯವೇತನ ಬರುತ್ತದೆ. ಅಂಗನವಾಡಿ ಕಾರ್ಯಕರ್ತೆಯರಾದ ನಮಗೇಕೇ ಪೆನ್ಷನ್ ಇಲ್ಲ?” ಎಂದು ಪ್ರಶ್ನಿಸುತ್ತಾರೆ ಧನುರಾಬಿ.

ಲಕ್ಷ್ಮಿ (36) ಕೂಡ ಅಂಗನವಾಡಿ ಕಾರ್ಯಕರ್ತೆ. ಅವರೂ ಕಡಿಮೆ ಸಂಬಳದ ಬಗ್ಗೆ ದೂರುತ್ತಾರೆ. ತೆಲಂಗಾಣವು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 10,500 ರುಪಾಯಿ ವೇತನ ನೀಡುತ್ತದೆ. “ಅದು ಯಾವುದಕ್ಕೂ ಸಾಕಾಗುವುದಿಲ್ಲ. ಪ್ರತೀ ದಿನ ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಆದರೂ ನಮಗೆ ಇಷ್ಟು ಕಡಿಮೆ ವೇತನ ಕೊಡುತ್ತಾರೆ. ನಮ್ಮ ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯ ಜೊತೆಗೆ ತುಂಬಾ ಕಷ್ಟದಲ್ಲಿರುವ ದೇಶದ ರೈತರಿಗೆ ನಮ್ಮ ಬೆಂಬಲವನ್ನು ಸೂಚಿಸುವುದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ,” ಎಂದರು ಲಕ್ಷ್ಮಿ.

ಸೆಪ್ಟೆಂಬರ್ 5ರ ಬೆಳಗ್ಗೆ 9 ಗಂಟೆಗೆ ಕಾರ್ಮಿಕರು ಮತ್ತು ರೈತರು ರಾಮಲೀಲಾ ಮೈದಾನದಿಂದ ಜಾಥಾ ಪ್ರಾರಂಭಿಸಿದರು. ಈ ಜಾಥಾ ಸಂಸತ್ ಭವನದ ಮಾರ್ಗದಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದಿರುವ ಜನಪ್ರತಿನಿಧಿಗಳು ತಮ್ಮ ಕಷ್ಟಗಳನ್ನು ಹೇಳಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದಾರೆ.

ರೈತರು, ಕಾರ್ಮಿಕರ ಪ್ರಮುಖ ಬೇಡಿಕೆಗಳು

 • ಬೆಲೆ ಏರಿಕೆ ನಿಯಂತ್ರಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಿಸಬೇಕು. ಅಗತ್ಯ ವಸ್ತುಗಳ ವಿಷಯದಲ್ಲಿ ಪ್ರಸ್ತುತ ದರದಲ್ಲಿ ಖರೀದಿಸಿ ಭವಿಷ್ಯದಲ್ಲಿ ಇತ್ಯರ್ಥ ಮಾಡಿಕೊಳ್ಳುವ (ಫಾರ್ವರ್ಡ್ ಟ್ರೇಡಿಂಗ್) ಪದ್ಧತಿ ನಿಷೇಧಿಸಬೇಕು.
 • ಸಮರ್ಪಕ ಉದ್ಯೋಗ ಸೃಷ್ಟಿಗಾಗಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು.
 • ಎಲ್ಲ ಕಾರ್ಮಿಕರಿಗೂ 18,000 ರುಪಾಯಿಗೆ ಕಡಿಮೆಯಲ್ಲದ ಕನಿಷ್ಠ ವೇತನವನ್ನು ನಿಗದಿ ಮಾಡಬೇಕು.
 • ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ-ವಿರೋಧಿ ತಿದ್ದುಪಡಿ ತರುವುದನ್ನು ನಿಲ್ಲಿಸಬೇಕು.
 • ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಸಮರ್ಪಕ ಖರೀದಿಯನ್ನು ಖಾತ್ರಿಗೊಳಿಸಬೇಕು.
 • ಬಡ ರೈತರ ಮತ್ತು ಕೃಷಿಕಾರ್ಮಿಕರ ಸಾಲ ಮನ್ನಾ ಮಾಡಬೇಕು.
 • ಕೃಷಿಕಾರ್ಮಿಕರ ಕಲ್ಯಾಣಕ್ಕಾಗಿ ಸಮಗ್ರ ಕಾಯ್ದೆ ರೂಪಿಸಬೇಕು.
 • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯನ್ನು ಎಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಸಮರ್ಪಕವಾಗಿ ಜಾರಿಗೊಳಿಸಿ; ಈ ಕಾಯ್ದೆ ನಗರ ಪ್ರದೇಶಗಳಿಗೂ ಅನ್ವಯವಾಗುವಂತೆ ಸೂಕ್ತ ತಿದ್ದುಪಡಿ ಮಾಡಬೇಕು.
 • ಸರ್ವರಿಗೂ ಆಹಾರ, ಆರೋಗ್ಯ, ಶಿಕ್ಷಣ ಮತ್ತು ವಸತಿ ಭದ್ರತೆಗಳನ್ನು ಖಾತ್ರಿಪಡಿಸಬೇಕು.
 • ಸಾರ್ವತ್ರಿಕ ಸಾಮಾಜಿಕ ಭದ್ರತೆಯನ್ನು ಜಾರಿಗೊಳಿಸಬೇಕು.
 • ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಬೇಕು.
 • ಮರುವಿತರಣೆಯ ಭೂಸುಧಾರಣೆಯನ್ನು ಜಾರಿಗೆ ತರಬೇಕು.
 • ಬಲವಂತದ ಭೂಸ್ವಾಧೀನವನ್ನು ಕೈಬಿಡಬೇಕು.
 • ನೈಸರ್ಗಿಕ ವಿಕೋಪಗಳ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಮತ್ತು ಪುನರ್ವಸತಿ ಖಾತ್ರಿಗೊಳಿಸಬೇಕು.
 • ಉದಾರವಾದಿ ನೀತಿಗಳನ್ನು ಹಿಂಪಡೆಯಬೇಕು.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More