ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ 9 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಕಾಂಗ್ರೆಸ್‌ ಸಚಿವರ ಜೊತೆ ಡಿಸಿಎಂ ಪರಮೇಶ್ವರ್‌ ಚರ್ಚೆ

ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಶುಕ್ರವಾರ ಕಾಂಗ್ರೆಸ್‌ ಸಚಿವರಿಗೆ ಉಪಾಹಾರ ಕೂಟ ಆಯೋಜಿಸುವ ಮೂಲಕ ಅವರನ್ನು ವಿಶ್ವಾಸಕ್ಕೆ ಪಡೆಯುವ ಯತ್ನ ನಡೆಸಿದರು. ಪರಮೇಶ್ವರ್‌ ಅವರು ತಮ್ಮ ಪಕ್ಷದ ಸಚಿವರ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಈ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ, ಬೆಂಗಳೂರು ಮೇಯರ್‌ ಚುನಾವಣೆ, ಬೆಳಗಾವಿ ರಾಜಕಾರಣದಲ್ಲಿನ ಭಿನ್ನಮತ ಮತ್ತು ಲೋಕಸಭಾ ಚುನಾವಣಾ ತಯಾರಿಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ದೊಂಬಿ ಹತ್ಯೆ: ವಾರದೊಳಗೆ ವರದಿ ಸಲ್ಲಿಸುವಂತೆ ರಾಜ್ಯಗಳಿಗೆ ಸುಪ್ರೀಂ ಗಡುವು

ಅಮಾಯಕರ ಮೇಲೆ ನಡೆಯುತ್ತಿರುವ ದೊಂಬಿಹತ್ಯೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಲ್ಲಿ ಇಲ್ಲಿವರೆಗೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ಒಂದು ವಾರದಲ್ಲಿ ವರದಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಾಕೀತು ಮಾಡಿದೆ. ಕಳೆದ ಒಂದು ವರ್ಷದಿಂದೀಚೆಗೆ ದೇಶದಲ್ಲಿ ಹೆಚ್ಚುತ್ತಿರುವ ದೊಂಬಿ ಹಲ್ಲೆ ಅಥವಾ ಹತ್ಯೆಗಳನ್ನು ನಿಯಂತ್ರಿಸುವಂತೆ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಹಾಗೂ ಸಾಮಾಜಿಕ ಕಾರ್ಯಕರ್ತ ತೆಹಸೀನ್ ಪೂನಾವಾಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ಸೂಚನೆ ನೀಡಿದೆ.

೧೪ನೇ ದಿನಕ್ಕೆ ಕಾಲಿಟ್ಟ ಹಾರ್ದಿಕ್ ಉಪವಾಸ, ಆಸ್ಪತ್ರೆಗೆ ದಾಖಲು

ಪಾಟಿದಾರ್‌ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಳೆದ 14 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟಿದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರವಷ್ಟೇ ಹಾರ್ದಿಕ್‌, ತಾನಿನ್ನು ನೀರು ಸೇವಿಸುವುದನ್ನು ಕೂಡ ನಿಲ್ಲಿಸುವೆ ಎಂದು ಗುಜರಾತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಮೊದಲ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ.2.4

ದೇಶದ ಚಾಲ್ತಿ ಖಾತೆ ಕೊರತೆ ಪ್ರಮಾಣವು ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಶೇ.2.4ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.2.5ರಷ್ಟಿತ್ತು ಎಂದು ಆರ್‌ಬಿಐ ಪ್ರಕಟಿಸಿರುವ ಅಂಕಿ-ಅಂಶಗಳು ತಿಳಿಸಿವೆ. ಮೊದಲ ತ್ರೈಮಾಸಿಕದಲ್ಲಿ 15.8 ಬಿಲಿಯನ್ ಡಾಲರ್‌ನಷ್ಟು ಚಾಲ್ತಿ ಖಾತೆ ಕೊರತೆ ಇದೆ. ಕಳೆದ ವರ್ಷ ಈ ಮೊತ್ತವು 15 ಬಿಲಿಯನ್ ಡಾಲರ್‌ಗಳಷ್ಟಿತ್ತು. ದೇಶದ ರಫ್ತು ಪ್ರಮಾಣಕ್ಕಿಂತ ಆಮದು ಪ್ರಮಾಣ ಹೆಚ್ಚಾದಾಗ ಚಾಲ್ತಿ ಖಾತೆ ಕೊರತೆ ಹಿಗ್ಗುತ್ತದೆ. ಪ್ರಸಕ್ತ ರುಪಾಯಿಯು ಡಾಲರ್ ವಿರುದ್ಧ ತೀವ್ರವಾಗಿ ಕುಸಿದಿದೆ. ಅದಕ್ಕೆ ಜಾಗತಿಕ ವಿದ್ಯಮಾನಗಳು ಕಾರಣವಾದಷ್ಟೇ, ದೇಶೀಯ ಚಾಲ್ತಿ ಖಾತೆ ಕೊರತೆ ಪ್ರಮಾಣ ಹಿಗ್ಗುತ್ತಿರುವುದು ಕಾರಣವಾಗುತ್ತದೆ.

ರಾಹುಲ್ ಗಾಂಧಿ ಟೀಕಿಸಿ ಮರುಟೀಕೆಗೆ ಗುರಿಯಾದ ಕೆಸಿಆರ್

“ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ದೊಡ್ಡ ಬಫೂನ್ (ಜೋಕರ್),” ಎಂದು ಟೀಕಿಸಿದ ತೆಲಂಗಾಣ ಹಂಗಾಮಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಈಗ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ತೀಕ್ಷ್ಣ ಟೀಕೆಗೆ ಒಳಗಾಗಿದ್ದಾರೆ. ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಕೆಸಿಆರ್ ಹೇಳಿಕೆ ಖಂಡಿಸಿ, “ತೆಲಂಗಾಣ ಹಂಗಾಮಿ ಮುಖ್ಯಮಂತ್ರಿಗೆ ಕನಿಷ್ಠ ಕೃತಜ್ಞತೆ ಕೂಡ ಇಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಸಹಕಾರ ನೀಡಿದ್ದು ಕಾಂಗ್ರೆಸ್ ನಾಯಕತ್ವ ಎಂಬುದನ್ನು ಕೆಸಿಆರ್ ಮರೆತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ರಾಜ್ಯದ ಸಂಪನ್ಮೂಲ ಕೊಳ್ಳೆ ಹೊಡೆದಿದ್ದು, ಮತದಾರರು ಬರುವ ಚುನಾವಣೆಯಲ್ಲಿ ಕೆಸಿಆರ್‌ಗೆ ತಕ್ಕ ಪಾಠ ಕಲಿಸಬೇಕಿದೆ,” ಎಂದಿದ್ದಾರೆ. ಎನ್‌ಸಿಪಿ ನಾಯಕ ತಾರಿಖ್ ಅನ್ವರ್ ಕೂಡ ಕೆಸಿಆರ್ ಹೇಳಿಕೆ ಖಂಡಿಸಿ, “ಈ ಅವರ ಮಾತುಗಳು ಅವರ ಕೊಳಕು ಮನಸ್ಥಿತಿ ಎತ್ತಿ ತೋರಿಸಿವೆ,” ಎಂದು ಕುಟುಕಿದ್ದಾರೆ.

ಹೊಸ ಇತಿಹಾಸ ಬರೆದ ಇಂಗ್ಲೆಂಡ್ ಕ್ಯಾಪ್ಟನ್ ಜೋ ರೂಟ್

ಭಾರತದ ವಿರುದ್ಧ ಇಂದಿನಿಂದ ಶುರುವಾದ ಕೆನ್ನಿಂಗಟನ್ ಓವಲ್‌ನಲ್ಲಿನ ಐದನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಕಪ್ತಾನ ಜೋ ರೂಟ್, ಆ ಮೂಲಕ ೨೦ ವರ್ಷಗಳಲ್ಲೇ ಹೊಸದೊಂದು ಇತಿಹಾಸ ಬರೆದರು. ಕಳೆದ ನಾಲ್ಕೂ ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಜಯಿಸಿದ್ದ ರೂಟ್, ಕೊನೆಯ ಟೆಸ್ಟ್‌ನಲ್ಲೂ ಟಾಸ್ ಜಯಿಸುವುದರೊಂದಿಗೆ ಐದು ಪಂದ್ಯ ಸರಣಿಯ ಎಲ್ಲದರಲ್ಲೂ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಮೊದಲ ಹಾಗೂ ಒಟ್ಟಾರೆ ಕ್ರಿಕೆಟ್ ಲೋಕದ ಮೂರನೇ ನಾಯಕ ಎನಿಸಿದರು. ಈ ಹಿಂದೆ ಆಸ್ಟ್ರೇಲಿಯಾದ ಮಾರ್ಕ್ ಟೇಲರ್ ೧೯೯೮-೯೯ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯ ಎಲ್ಲ ಪಂದ್ಯಗಳಲ್ಲೂ ಟಾಸ್ ಜಯಿಸಿದ್ದರು. ಇನ್ನು, ಜಾನ್ ಗೊಡಾರ್ಡ್ (೧೯೪೮-೪೯) ಮತ್ತು ಕ್ಲೈವ್ ಲಾಯ್ಡ್ (೧೯೮೨-೮೩) ಭಾರತದ ವಿರುದ್ಧದ ಸರಣಿಯ ಎಲ್ಲ ಪಂದ್ಯಗಳಲ್ಲೂ ಟಾಸ್ ಜಯಿಸಿದ್ದರು. ಏತನ್ಮಧ್ಯೆ, ಲಾಲ್ ಅಮರ್‌ನಾಥ್ ಮತ್ತು ಕಪಿಲ್‌ದೇವ್ ವೆಸ್ಟ್‌ಇಂಡೀಸ್ ವಿರುದ್ಧದ ಐದು ಟೆಸ್ಟ್ ಸರಣಿಯ ಎಲ್ಲ ಪಂದ್ಯಗಳಲ್ಲೂ ಟಾಸ್ ಸೋತಿದ್ದರು.

ತವರಿಗೆ ಮರಳಿದ ಹಿಮಾ ದಾಸ್‌ಗೆ ಅಭೂತಪೂರ್ವ ಸ್ವಾಗತ

ಭಾರತೀಯ ಅಥ್ಲೆಟಿಕ್ಸ್‌ನ ನವತಾರೆ ಹಿಮಾ ದಾಸ್ ತವರಿಗೆ ಇಂದು ಆಗಮಿಸಿದ್ದು ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಗುವಾಹತಿಗೆ ಬಂದಿಳಿದ ಆಕೆಗೆ ಭವ್ಯ ಸ್ವಾಗತ ಕೋರಲಾಯಿತು. ೨೦ ವರ್ಷದೊಳಗಿನವರ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎನಿಸಿ ದಾಖಲೆ ಬರೆದ ಹಿಮಾ ದಾಸ್, ಇತ್ತೀಚೆಗಷ್ಟೇ ಮುಕ್ತಾಯ ಕಂಡ ಇಂಡೋನೇಷ್ಯಾದ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದರು. ಎಲ್‌ಪಿಜಿಪಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಿಮಾ ದಾಸ್‌ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಾಗೂ ಸಂಪುಟದ ಅವರ ಸಹೋದ್ಯೋಗಿಗಳು ಖುದ್ದು ಉಪಸ್ಥಿತರಿದ್ದು, ಅಸ್ಸಾಂನ ಸಾಂಪ್ರದಾಯಿಕ 'ಗಮೋಸಾ'ವನ್ನು ಆಕೆಯ ಕೊರಳಿಗೆ ಹಾಕಿ ಸ್ವಾಗತಿಸಿದರು.

ಐಶ್ವರ್ಯಾ ರೈಗೆ WIFT ಪುರಸ್ಕಾರ

ಬಾಲಿವುಡ್‌ ನಟಿ ಐಶ್ವರ್ಯಾ ರೈ 2018ರ ವಿಮೆನ್‌ ಇನ್ ಫಿಲ್ಮ್‌ ಅಂಡ್ ಟೆಲಿವಿಷನ್ ಇಂಡಿಯಾ (WIFT) ಮೆರಿಲ್ ಸ್ಟ್ರೀಪ್‌ ವಾರ್ಷಿಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ನಾಳೆ (ಸೆಪ್ಟೆಂಬರ್‌ 8) ವಾಷಿಂಗ್ಟನ್‌, ಡಿಸಿಯಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಚಿತ್ರೋತ್ಸವ ಸಮಾರಂಭದಲ್ಲಿ ಐಶ್ವರ್ಯಾಗೆ ಪ್ರಶಸ್ತಿ ಕೊಡಲಾಗುತ್ತಿದೆ. ಬಾಲಿವುಡ್‌ ಮತ್ತು ಹಾಲಿವುಡ್‌ನ ಪ್ರತಿಭಾವಂತ ನಟಿಯರನ್ನು ಪ್ರತಿವರ್ಷ WIFT ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ‘ಧಡಕ್‌’ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಜಾಹ್ನವಿ ಕಪೂರ್ ಕೂಡ WIFT ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಪದಾರ್ಪಣೆ ನಟಿ ವಿಭಾಗದಲ್ಲಿ ಜಾಹ್ನವಿ ‘WIFT ಎಮರಾಲ್ಡ್‌’ ಪ್ರಶಸ್ತಿ ಪಡೆಯುತ್ತಿದ್ದಾರೆ.

ವಿದಾಯದ ಪಂದ್ಯದಲ್ಲಿ ಕುಕ್ ಮನೋಜ್ಞ ಆಟ

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿಂದು ಶುರುವಾದ ಭಾರತ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅಲಸ್ಟೇರ್ ಕುಕ್ ಮನೋಜ್ಞ ಬ್ಯಾಟಿಂಗ್ ನಡೆಸಿದ್ದಾರೆ. ಕಳೆದ ನಾಲ್ಕೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕುಕ್, ವೃತ್ತಿಬದುಕಿನ ಕಟ್ಟಕಡೆಯ ಪಂದ್ಯದಲ್ಲಿ ಯಶಸ್ವಿ ಅರ್ಧಶತಕ ದಾಖಲಿಸಿ ಮುನ್ನಡೆದಿದ್ದರು. ಮೇಲಾಗಿ, ಈ ಮೈದಾನದಲ್ಲಿ ಅವರು ೧ ಸಹಸ್ರ ರನ್ ಗಡಿಯನ್ನೂ ದಾಟಿದರು. ಮಧ್ಯಾಹ್ನದ ಚಹಾ ವಿರಾಮದ ಹೊತ್ತಿಗೆ ಆತಿಥೇಯ ಇಂಗ್ಲೆಂಡ್, ೫೯ ಓವರ್‌ಗಳಲ್ಲಿ ೧೨೩ ರನ್‌ಗಳಿಗೆ ೧ ವಿಕೆಟ್ ಗಳಿಸಿತ್ತು. ಕುಕ್ ಮತ್ತು ಮೊಯೀನ್ ಅಲಿ ಕ್ರಮವಾಗಿ ೬೬ ಹಾಗೂ ೨೩ ರನ್ ಗಳಿಸಿ ಆಡುತ್ತಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More