ಕೇರಳದಲ್ಲಿ ವರ್ಷದವರೆಗೆ ಸರ್ಕಾರಿ ಸಂಭ್ರಮ ರದ್ದು; ನಮ್ಮಲ್ಲಿ ಹಂಗೇನಿಲ್ಲ ಬಿಡಿ!

ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಮುಂದಿನ ಒಂದು ವರ್ಷ ಸರ್ಕಾರದ ನೆರವಿನಲ್ಲಿ ನಡೆಯುವ ಎಲ್ಲ ಉತ್ಸವ ರದ್ದು ಮಾಡಿ, ಆ ಬಾಬ್ತಿನ ಹಣವನ್ನು ಪರಿಹಾರಕ್ಕೆ ಬಳಸಿಕೊಳ್ಳುವ ನಿರ್ಧಾರ ಮಾಡಲಾಗಿದೆ. ಆದರೆ, ನೆರೆಹೊರೆಯಲ್ಲಿ ಅಪಾರ ನೋವು ಇದ್ದರೂ ಮೈಸೂರು ದಸರಾ ಸಂಭ್ರಮಕ್ಕೆ ಅಣಿಗೊಳ್ಳುತ್ತಿದೆ

ಕಳೆದ ತಿಂಗಳು ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಕೇರಳದ ಬಹುತೇಕ ಭಾಗ ಮತ್ತು ಕರ್ನಾಟಕದ ಕೊಡಗು ಜಿಲ್ಲೆ ತತ್ತರಿಸಿದವು. ಸಾವು-ನೋವು, ಕಷ್ಟ-ನಷ್ಟ ಎಷ್ಟೆನ್ನುವುದು ಇನ್ನೂ ಅಳತೆಗೆ ನಿಲುಕಿಲ್ಲ. ಪ್ರಕೃತಿಯ ಮುನಿಸು ಕೆಲವೇ ತಾಸಿನಲ್ಲಿ ಸಾವಿರಾರು ಜನರ ಬದುಕನ್ನು, ಭವಿಷ್ಯವನ್ನು ಬೀದಿಗೆ ತಂದಿತು. ನಲುಗಿದ ನೆಲದಿಂದ ಕಡುನೋವಿನ ಕಥನಗಳು, ಮಾನವೀಯ ಸ್ಪಂದನದ ಮನ ಮಿಡಿಯುವ ವರದಿಗಳು ಹರಿದುಬರುತ್ತಲೇ ಇವೆ. ಈ ಮಧ್ಯೆ, ಕೇರಳ ಮತ್ತು ನಮ್ಮ ಸರ್ಕಾರಗಳ ಸ್ಪಂದನೆ, ಬದ್ಧತೆಯಲ್ಲಿ ಭಿನ್ನತೆಯೂ ಎದ್ದುಕಂಡಿದೆ.

ಕೇರಳವನ್ನು ಮತ್ತೆ ಕಟ್ಟುವುದು ಅಲ್ಲಿನ ಸರ್ಕಾರಕ್ಕೆ ಆದ್ಯತೆಯ ವಿಷಯ. ಹಾಗೆಂದೇ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಕೆ-೨೦೧೮) ಸಹಿತ ಎಲ್ಲ ಸರ್ಕಾರಿ ಪ್ರಾಯೋಜಿತ ಮತ್ತು ಸರ್ಕಾರದ ಹಣಕಾಸು ಬೆಂಬಲದಲ್ಲಿ ನಡೆಯುವ ಸಾಂಸ್ಕೃತಿಕ ಸಂಭ್ರಮಗಳನ್ನು ಮುಂದಿನ ಒಂದು ವರ್ಷದವರೆಗೆ ರದ್ದುಗೊಳಿಸಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಮಾತ್ರವಲ್ಲ, ಈ ಬಾಬ್ತಿಗೆ ಮೀಸಲಿಟ್ಟ ಎಲ್ಲ ಹಣವನ್ನೂ ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ವಿಪತ್ತು ನಿಧಿಗೆ ವರ್ಗಾಯಿಸುವಂತೆಯೂ ಸೂಚಿಸಲಾಗಿದೆ.

ಆದರೆ, ನಮ್ಮಲ್ಲಿ ಹಾಗಿಲ್ಲ. ಕೊಡಗಿನ ಅದೆಷ್ಟೋ ಕುಟುಂಬಗಳು ಇನ್ನೂ ನಿರಾಶ್ರಿತರ ಶಿಬಿರದಲ್ಲಿವೆ. ಮನೆಗೆ ಮರಳಿದವರು ಭಯದ ನೆರಳಿನಲ್ಲೇ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ. ಈ ಮಧ್ಯೆ, ‘ಡಿಸಾಸ್ಟರ್‌ ಟೂರಿಸಂ’ ಪರಿಕಲ್ಪನೆಯೊಂದು ಶುರುವಾಗುವುದರಲ್ಲಿತ್ತು. ರೆಸಾರ್ಟ್, ಹೋಮ್‌ ಸ್ಟೇ ಮತ್ತು ಹೋಟೆಲ್‌ಗಳವರು ಈ ಅವಧಿಯಲ್ಲಿ ‘ರಿಯಾಯಿತಿ’ ಆಮಿಷ ಒಡ್ಡಿ ಕೊಡಗಿಗೆ ಪ್ರವಾಸಿಗರನ್ನು ಸೆಳೆಯುವ ಮತ್ತು ಪ್ರಕೋಪಕ್ಕೆ ತುತ್ತಾದ ಪ್ರದೇಶಗಳನ್ನು ಅವರಿಗೆ ತೋರಿಸುವ ನಿರ್ಲಜ್ಜ ಸಾಹಸಕ್ಕೆ ಮುಂದಾಗಿದ್ದರು. ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೊಡಗು ಜಿಲ್ಲಾಡಳಿತ ಸೆ.೯ರವರೆಗೆ ಜಿಲ್ಲೆಯ ಯಾವುದೇ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಪ್ರವಾಸಿಗರಿಗೆ ಕೊಠಡಿ ನೀಡದಂತೆ ನಿರ್ಬಂಧಿಸಿ ಆದೇಶ ಹೊರಡಿಸಿತು. ನಮ್ಮದೇ ಜನರ ಸಂಕಟ, ನೋವನ್ನು ಪ್ರದರ್ಶನಕ್ಕೆ ಇಟ್ಟು ಹಣ ಮಾಡಿಕೊಳ್ಳಲು ಲಾಭಕೋರರು ಹೇಸುವುದಿಲ್ಲ ಎನ್ನುವುದಕ್ಕೆ ಇದು ನಿದರ್ಶನ. ಈ ಮಧ್ಯೆ, ಈ ಬಾರಿಯ ಮಡಿಕೇರಿ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಲು ಸಂಘಟಕರು ನಿರ್ಧರಿಸಿದ್ದಾರೆ.

ನೆರೆಮನೆಯಲ್ಲಿ ಸಂಕಟ ಇದ್ದಾಗಲೂ ಹಬ್ಬ ಆಚರಿಸುವುದು, “ನಮ್ಮ ಸಂತೋಷ ನಮ್ಮದು. ನಮ್ಮ ವ್ಯವಹಾರ ನಮ್ಮದು,’’ ಎಂದು ಸಂಭ್ರಮಿಸುವುದು, ಭ್ರಮಿಸುವುದು ವ್ಯಕ್ತಿಗತ ನೆಲೆಗಷ್ಟೇ ಸೀಮಿತವಲ್ಲ; ನಮ್ಮ ಸರಕಾರದ ಅಧಿಕಾರಸ್ಥರು ಕೂಡ ಈ ವಿಷಯದಲ್ಲಿ ಕಡಿಮೆಯೇನಿಲ್ಲ. ಏನೇ ನಷ್ಟವಾದರೂ ಸರಿ, ಮುಂದಿನ ೧ ವರ್ಷ ಯಾವುದೇ ಉತ್ಸವ ಏರ್ಪಡಿಸದಿರಲು ಕೇರಳ ಸರ್ಕಾರ ನಿರ್ಧರಿಸುತ್ತದೆ. ಆದರೆ, ನೆರೆಯ ಕೊಡಗು ನೋವು, ತಳಮಳ ಮತ್ತು ಅತಂತ್ರ ಸ್ಥಿತಿಯಲ್ಲಿ ಮುಳುಗಿರುವಾಗ ನಮ್ಮ ಮೈಸೂರು ಸಂಭ್ರಮದ ದಸರೆಗೆ ಅಣಿಗೊಳ್ಳುತ್ತಿದೆ. “ಪ್ರಕೋಪದ ಹಿನ್ನೆಲೆಯಲ್ಲಿ ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ನಡೆಯಲಿದೆ,’’ ಎಂದು ಮುಖ್ಯಮಂತ್ರಿ ಸಹಿತ ಎಲ್ಲ ಅಧಿಕಾರಸ್ಥರು ಹೇಳುತ್ತಿದ್ದಾರಾದರೂ ಸಂಘಟಕರ ನಡೆ-ನುಡಿಯನ್ನು ನೋಡಿದರೆ, ಅದರಲ್ಲಿ ಯಾವ ಸರಳತೆಯೂ ವ್ಯಕ್ತವಾಗುತ್ತಿಲ್ಲ.

ಹೇರಳ ಹಣ ಹರಿದು ಬರಲಾರಂಭಿಸಿದ ಕಾರಣಕ್ಕೆ ಮೈಸೂರು ದಸರೆಯ ‘ಸಾಂಪ್ರದಾಯಿಕತೆ’ಯ ಪಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಯಾದ ಗಜಪಯಣ ಮತ್ತು ಗಜಪಡೆಗೆ ಅರಮನೆ ಆವರಣದಲ್ಲಿ ಸ್ವಾಗತ ನೀಡುವ ಕಾರ್ಯಕ್ರಮಗಳು ಈ ಬಾರಿ ಕೂಡ ಸಾಕಷ್ಟು ವೈಭವದಿಂದಲೇ ನಡೆದವು. ಏರ್‌ ಶೋ ಸಹಿತ ಅನೇಕ ಕಾರ್ಯಕ್ರಮ ವೈವಿಧ್ಯಗಳನ್ನು ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. “ಕಳೆದ ವರ್ಷದ ಬಾಕಿ ಏಳೂವರೆ ಕೋಟಿ ರು. ಬಿಡುಗಡೆಯಾಗಿದೆ. ಈ ವರ್ಷದ ಬಾಬ್ತನ್ನು ಶೀಘ್ರ ನೀಡಲಾಗುವುದು. ದಸರೆಗೆ ಹಣದ ಕೊರತೆ ಇಲ್ಲ,’’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ದಶಕಗಳ ಹಿಂದೆ ರಾಜ್ಯದಲ್ಲಿ ಭೀಕರ ಬರ ಇದ್ದ ಸಂದರ್ಭ ಸಹಿತ ಕೆಲವು ಬಾರಿ ಸರಳ ದಸರಾ ಆಯೋಜಿಸಿದ್ದಕ್ಕೂ, ಈಗಿನ ‘ಸರಳತೆ’ಗೂ ಅಜಗಜಾಂತರ ವ್ಯತ್ಯಾಸವಿದೆ. ‘ಸರಳ’ ಎನ್ನುತ್ತಲೇ ಅದ್ಧೂರಿಯಾಗಿ ನಡೆಸಿ, ಕೋಟ್ಯಂತರ ರು.ಗಳನ್ನು ಹುಡಿ ಹಾರಿಸಿದ್ದಕ್ಕೂ ಅನೇಕ ನಿದರ್ಶನಗಳಿವೆ. ಈ ಬಾರಿಯೂ ಅದೇ ರೀತಿ ಆಗುವ ಸೂಚನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಫೋಟೋ ಸ್ಟೋರಿ | ಕೊಡಗಿನಲ್ಲಿ ನೀರಸ ಕೈಲ್ ಮುಹೂರ್ತ ಹಬ್ಬ ಆಚರಣೆ 

ರಾಜ್ಯವೇ ಹೊತ್ತಿ ಉರಿದರೂ, ನೆರೆಹೊರೆಯ ಜನ ಪ್ರವಾಹದಲ್ಲಿ ಮುಳಗಿದರೂ ತಮ್ಮ ವ್ಯವಹಾರಕ್ಕೆ, ಉತ್ಸವದ ಉತ್ಸಾಹಕ್ಕೆ, ಕೋಟಿಗಳನ್ನು ಉಡಾಯಿಸುವ ಸಡಗರಕ್ಕೆ ಭಂಗ ಬರಬಾರದೆನ್ನುವುದು ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಂಸ್ಕೃತಿಕ ಗುತ್ತಿಗೆದಾರರು ಮತ್ತು ಕೆಲವು ಉದ್ಯಮಿಗಳ ಮನದಿಂಗಿತ. ಹಾಗೆಂದೇ, ಸರಳ ದಸರಾ ಆಚರಣೆಯ ಪ್ರಸ್ತಾಪ ಮಾಡುತ್ತಿದ್ದಂತೆ ಪ್ರವಾಸೋದ್ಯಮಕ್ಕೆ ನಷ್ಟವಾಗುತ್ತದೆಂದು ಹುಯಿಲೆಬ್ಬಿಸುತ್ತಾರೆ. ನಾನಾ ರೀತಿಯ ಒತ್ತಡ ತಂತ್ರಗಳನ್ನು ಅನುಸರಿಸಿ, ಎಂದಿನಂತೆ ಅದ್ಧೂರಿತನ ಮೆರೆಯಲು ಹೋರಾಡುತ್ತಾರೆ. ಪ್ರವಾಸೋದ್ಯಮವನ್ನು ಅತಿಯಾಗಿ ನಂಬಿದ ಮತ್ತು ಅಗತ್ಯಕ್ಕಿಂತ ಹೆಚ್ಚು ವಿಜೃಂಭಿಸಿದ ಕೊಡಗು, ಕೇರಳದ ದುರಂತ ಕತೆ ಕಣ್ಮುಂದೆ ಇದ್ದಾಗಲೂ ಅದದೇ ಕತೆಯನ್ನು ಹೆಣೆಯುತ್ತಾರೆ.

ಈ ವಿಷಯದಲ್ಲಿ ನಾವು ಕೇರಳದಿಂದ ಕಲಿಯಬೇಕಾದ ಕೆಲವು ಪಾಠಗಳಿವೆ. ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ೨೩ ವರ್ಷದಿಂದ ನಿರಂತರವಾಗಿ ಸಂಘಟಿಸುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (ಐಎಫ್‌ಎಫ್‌ಕೆ) ಸಿನಿಮಾ ವಲಯದಲ್ಲಿ ಜಾಗತಿಕ ಮನ್ನಣೆ ಇದೆ. ಅಂತಾರಾಷ್ಟ್ರೀಯ ಮಟ್ಟದ ಹಲವು ಸಿನಿಮಾ ಉತ್ಸವಗಳ ಯಾದಿಯಲ್ಲಿ ತಿರುವನಂತಪುರದಲ್ಲಿ ನಡೆಯುವ ಐಎಫ್‌ಎಫ್‌ಕೆ ಕೂಡ ಪ್ರಮುಖವಾದುದು. ಅಂತಾರಾಷ್ಟ್ರೀಯ ಸಿನಿ ಉತ್ಸವದ ಸರ್ಕ್ಯೂಟ್‌ಗೆ ಅನುಗುಣವಾಗಿ ಪ್ರತಿ ಡಿಸೆಂಬರ್‌ ಮೊದಲ ಶುಕ್ರವಾರದಿಂದ ನಂತರದ ಶುಕ್ರವಾರದವರೆಗೆ (ಈ ಬಾರಿ ಡಿ.೭ರಿಂದ ೧೪) ಎಂಟು ದಿನ ನಡೆಯುವ ಉತ್ಸವದಲ್ಲಿ ಹಲವು ಅಂತಾರಾಷ್ಟ್ರೀಯ ಸಿನಿಮಾಗಳು ವಿವಿಧ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತವೆ. ನಿಯಮಾವಳಿಯಂತೆ ಇವೆಲ್ಲ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ನಿರ್ಮಿತ ಸಿನಿಮಾಗಳು. ಒಂದು ಉತ್ಸವ ನಿಂತರೆ ಅವುಗಳನ್ನು ಮುಂದಿನ ವರ್ಷದ ಉತ್ಸವದಲ್ಲಿ ಸೇರಿಸಲಾಗದು. ಈ ಕಾರಣಕ್ಕೆ ಸಿನಿಮಾ ಪ್ರಪಂಚದ ಬಹಳಷ್ಟು ಕಲಾವಿದರು, ತಂತ್ರಜ್ಞರು, ಸಿನಿಮಾ ಪ್ರಯೋಗಪ್ರಿಯರು ಐಎಫ್‌ಎಫ್‌ಕೆಯನ್ನು ಕಾತರದಿಂದ ಕಾಯುತ್ತಾರೆ. “ಇಂಥ ಪ್ರತಿಷ್ಠಿತ ಉತ್ಸವ ನಿಂತರೆ ನಿರಂತರತೆಗೆ ಭಂಗವಾಗುತ್ತೆ. ಮುಂದಿನ ವರ್ಷ ಸಂಘಟಿಸುವಾಗ ಹಲವು ತೊಡಕುಗಳನ್ನು ಎದುರಿಸಬೇಕಾಗುತ್ತದೆ,’’ ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ .

ಮಾತ್ರವಲ್ಲ, ಹಿರಿಯ ನಿರ್ದೇಶಕ ಅಡೂರ್‌ ಗೋಪಾಲಕೃಷ್ಣ, ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಕಮಲ್‌ ಸಹಿತ ಅನೇಕರು ,“ಉತ್ಸವ ರದ್ದು ಸೂಕ್ತವಲ್ಲ,’’ ಎಂದು ಪ್ರತಿಕ್ರಿಯಿಸಿದ್ದಾರೆ. “ಈ ವರ್ಷದ ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಚಿತ್ರಗಳನ್ನು ತೆರೆಯಲ್ಲಿ ಕಾಣುವ ವಾರ್ಷಿಕ ಉತ್ಸವವು ನಿಂತರೆ ಈ ಚಲನಚಿತ್ರಗಳನ್ನು ಮತ್ತೊಮ್ಮೆ ಉತ್ಸವ ಮತ್ತು ಸ್ಪರ್ಧೆಯ ಚೌಕಟ್ಟಿಗೆ ತರುವುದು ಕಷ್ಟ. ಪ್ರಮುಖ ವಿಭಾಗಗಳನ್ನು ಉಳಿಸಿಕೊಂಡು, ಜೀವಮಾನ ಸಾಧನೆ ಪ್ರಶಸ್ತಿ ನೀಡುವುದು ಸಹಿತ ಕೆಲವನ್ನು ಕೈಬಿಟ್ಟು ಸರಳವಾಗಿ ನಡೆಸುವುದು ಸೂಕ್ತವಿತ್ತು. ಅದರ ಬದಲು ಇಡೀ ಉತ್ಸವವನ್ನೇ ರದ್ದು ಮಾಡಿದ್ದು ಪ್ರಮಾದದ ಸಂಗತಿ,’’ ಎನ್ನುವುದು ಗೋಪಾಲಕೃಷ್ಣ ಅವರ ಎಚ್ಚರಿಕೆ ಮತ್ತು ಸಲಹೆ. “ಉತ್ಸವ ರದ್ದಾದರೆ ಮಲಯಾಳಂ ಚಿಲನಚಿತ್ರಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಸರಕಾರದ ಮೇಲಿನ ಹೊರೆ ತಗ್ಗಿಸಲು ಪ್ರತಿನಿಧಿ ಶುಲ್ಕ ಹೆಚ್ಚಳ ಸಹಿತ ತನ್ನದೇ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಬೇಕೆನ್ನುವ ಸಲಹೆಗಳು ಬಂದಿವೆ. ಈಗಿರುವ ಸಂಪನ್ಮೂಲವನ್ನು ಬಳಸಿಕೊಂಡು ಸರಳವಾಗಿ ಉತ್ಸವ ಸಂಘಟಿಸಬಹುದು,’’ ಎನ್ನುವುದು ಅಕಾಡೆಮಿ ಅಧ್ಯಕ್ಷರ ಅಭಿಪ್ರಾಯ.

ಆದಾಗ್ಯೂ,ರಾಜ್ಯದ ಜನ ಎದುರಿಸುತ್ತಿರುವ ಪ್ರಕೋಪ ಸಂಬಂಧಿ ಕಷ್ಟಕೋಟಲೆಗಳೆದುರು ಇಂಥ ನಷ್ಟಗಳನ್ನು ಕೇರಳ ಸರ್ಕಾರ ದೊಡ್ಡದೆಂದು ಭಾವಿಸಿದಂತಿಲ್ಲ. ಯಾವುದೇ ಜನತಂತ್ರ ಸರ್ಕಾರವೊಂದಕ್ಕೆ ತನ್ನ ಜನರ ನೋವು, ಕಷ್ಟಗಳು ದೊಡ್ಡದಾಗಿ ಕಾಣಬೇಕು; ಅವುಗಳನ್ನು ಪರಿಹರಿಸುವುದು ಆದ್ಯತೆ, ಬದ್ಧತೆ ಆಗಬೇಕು. ಸಾರ್ವತ್ರಿಕವಾಗಿ ಕಾಡುವ ನೋವುಗಳು ಮುಗಿದವೆನಿಸಿದ ಮೇಲೆ ನಲಿವಿನ ವಿಷಯ. ಸಾಂಸ್ಕೃತಿಕ ವೈಭವದ ಮಾತುಕತೆ. ಕೇರಳ ಸರ್ಕಾರದ ಸ್ಪಂದನೆ ಈ ಬಗೆಯದು. ಆದ್ದರಿಂದಲೇ ಮುಂದಿನ ಒಂದು ವರ್ಷ ಸರ್ಕಾರದ ಹಣದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ ಎಂದು ಘೋಷಿಸಿದೆ.

“ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕೇರಳದ ೨೩ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅಮಾನತುಗಳಿಸಲಾಗಿದೆ,’’ ಎನ್ನುವ ಸೂಚನೆಯನ್ನು ಉತ್ಸವ ಸಂಘಟಕರು ಸಾರ್ವಜನಿಕವಾಗಿ ಮತ್ತು ಐಎಫ್‌ಎಫ್‌ಕೆಯ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ, ಡಿ.14ರಿಂದ 21ರವರೆಗೆ ಕೊಚ್ಚಿಯಲ್ಲಿ ನಡೆಯುವ 'ಕೊಚ್ಚಿ-ಮುಜರಿಸ್‌ ಬಿನಾಲೆ' ಕಲಾಕೂಟ ನಡೆಯುವುದು ಅನಿಶ್ಚಿತ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಸಮ್ಮಿಲನಗೊಳ್ಳುವ ಈ ಉತ್ಸವದ ಸಂಘಟಕರು ಕಲೆಯ ಮೂಲಕ ಕೇರಳದ ಸಂಕಟಕ್ಕೆ ಮಿಡಿದಿದ್ದಾರೆ ಕೂಡ. ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಓಣಂ ಮತ್ತು ನೆಹರು ಟ್ರೋಫಿ ಬೋಟ್‌ ರೇಸ್‌ಗಳನ್ನು ಕೇರಳ ಸರ್ಕಾರ ರದ್ದುಗೊಳಿಸಿತ್ತೆನ್ನುವುದು ಗಮನಾರ್ಹ.

ಪ್ರಕೃತಿ ವಿಕೋಪದಲ್ಲಿ ೪೮೩ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡು, ೧೪ಕ್ಕೂ ಹೆಚ್ಚು ಮಂದಿಯ ಸುಳಿವು ಇನ್ನೂ ಪತ್ತೆಯಾಗದಿರುವ ಮತ್ತು ಸುಮಾರು ೨೦ ಸಾವಿರ ಕೋಟಿ ರು. ನಷ್ಟ ಸಂಭವಿಸಿರುವ ಸಂದರ್ಭದಲ್ಲಿ, ನೋವಿಗೆ ಸ್ಪಂದಿಸುವುದಕ್ಕಿಂತ ದೊಡ್ಡ ಸಂಗತಿ ಯಾವುದೂ ಇಲ್ಲ ಎಂದು ಕೇರಳ ಭಾವಿಸಿದಂತಿದೆ. ಅಲ್ಲಿನ ಸಾವುನೋವು, ಕಷ್ಟನಷ್ಟಕ್ಕೆ ಹೋಲಿಸಿದರೆ ಕೊಡಗಿನದ್ದು (೧೬ ಸಾವು. ನೂರಾರು ಮನೆ, ಆಸ್ತಿ ನೆಲಸಮ. ೨ ಸಾವಿರ ಕೋಟಿ ರು. ನಷ್ಟದ ಅಂದಾಜು) ಕಡಿಮೆಯೇ. ಆದರೂ, ನೋವು ನೋವೇ, ಸಂಕಟ ಸಂಕಟವೇ. ದಸರೆಯನ್ನು ಸಂಭ್ರಮಿಸಲು ಆರಂಭಿಸಿರುವ ಮೈಸೂರಿಗೆ ಕೊಡಗಿನಂತೆಯೇ ಕೇರಳ ಕೂಡ ನೆರೆಹೊರೆ. ಮೈಸೂರಿನ ಪ್ರವಾಸೋದ್ಯಮದ ಕೊಡುಕೊಳ್ಳುವಿಕೆ ಮತ್ತು ಶ್ರೀಮಂತಿಕೆಯಲ್ಲಿ ಕೇರಳ ಮತ್ತು ಕೊಡಗಿನ ಕೊಡುಗೆ ದೊಡ್ದದಿದೆ. ಅಲ್ಲಿನ ಜನ ಪ್ರವಾಹದಲ್ಲಿ ಮುಳುಗಿದ್ದಾಗ ನಾವು ಸಂಭ್ರಮದಲ್ಲಿ ಮುಳುಗೇಳುವುದು ತರವೇ ಎನ್ನುವುದು ನಮ್ಮ ಅಧಿಕಾರಸ್ಥರು ಕೇಳಿಕೊಳ್ಳಲೇಬೇಕಾದ ನೈತಿಕ ಪ್ರಶ್ನೆ.

ನಾಡಿನ ಸಾಂಸ್ಕೃತಿಕತೆಯನ್ನು ಸಂಭ್ರಮಿಸಲು, ದಸರೆಯ ಸಂಪ್ರದಾಯವನ್ನು ಮೆರೆಯಲು, ಹಾಡಿ ನಲಿಯಲು ಮುಂದಿನ ವರ್ಷ ಮತ್ತೊಂದು ದಸರೆ ಬಂದೇ ಬರುತ್ತದೆ. ಆದ್ದರಿಂದ, ದಸರೆಯೂ ಸೇರಿದಂತೆ ರಾಜ್ಯದಲ್ಲಿ ನಡೆಯುವ ಎಲ್ಲ ಸರ್ಕಾರಿ ಪ್ರಾಯೋಜಿತ ಉತ್ಸವಗಳಲ್ಲಿನ ಅದ್ಧೂರಿತನವನ್ನು ವರ್ಷದ ಮಟ್ಟಿಗೆ ನಿಜವಾಗಿಯೂ ಸರಳತೆಗೆ ಸೀಮಿತಗೊಳಿಸಿ, ಉಳಿದ ಮೊತ್ತವನ್ನು ಕೊಡಗು, ಕೇರಳದ ಜನರ ಬದುಕು ಕಟ್ಟಲು ಬಳಸುವುದು ವಿವೇಕ ಎನ್ನಿಸುತ್ತದೆ.

ಚಿತ್ರ: ಸಂಗ್ರಹ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More