ಶಾಸಕರ ಭವನದಲ್ಲಿ ಅಕ್ರಮ ಆರೋಪ; ವಿಧಾನಸಭೆ ಸಚಿವಾಲಯ ಅಧಿಕಾರಿಗಳಿಂದ ಕಡತ ಶೋಧ!

ಶಾಸಕರ ಭವನದಲ್ಲಿ ನಡೆದಿದೆ ಎನ್ನಲಾದ ವಿವಿಧ ಸ್ವರೂಪದ ಅಕ್ರಮಗಳ ಕುರಿತು ಅಧಿಕಾರಿಗಳ ತಪಾಸಣಾ ತಂಡ ಕಡತಗಳ ಬೆನ್ನು ಬಿದ್ದಿದೆ. ವಶಕ್ಕೆ ಪಡೆದಿರುವ ನೂರಕ್ಕೂ ಹೆಚ್ಚು ಕಡತಗಳ ಪರಿಶೀಲನೆ ನಡೆದಿರುವುದು ಶಾಸಕರ ಭವನದ ಅಧಿಕಾರಿ, ನೌಕರರ ವಲಯದಲ್ಲಿ ನಡುಕಕ್ಕೆ ಕಾರಣವಾಗಿದೆ

ವಿಧಾನಸಭೆ ಸಚಿವಾಲಯದ ಆಡಳಿತ ಸುಧಾರಣೆಗೆ ಮುಂದಾಗಿರುವ ಸ್ಪೀಕರ್‌ ರಮೇಶ್‌ ಕುಮಾರ್‌, ಶಾಸಕರ ಭವನದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮ ಪ್ರಕರಣಗಳನ್ನು ಬೆನ್ನತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆದಿರುವ ಹಾಸಿಗೆ, ದಿಂಬು, ಬೆಡ್‌ ಶೀಟ್‌, ಸೊಳ್ಳೆ ಪರದೆ, ಪೀಠೋಪಕರಣ ಖರೀದಿ ಪ್ರಕ್ರಿಯೆ ಮತ್ತು ಕೊಠಡಿಗಳ ದುರಸ್ತಿ, ನವೀಕರಣ ಕಾಮಗಾರಿಗಳಿಗೆ ಆಗಿರುವ ವೆಚ್ಚ ಮತ್ತು ಖಾಸಗಿ ಕಂಪನಿಗಳಿಗೆ ಪಾವತಿಯಾಗಿರುವ ಮೊತ್ತದ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ.

ಈ ಸಂಬಂಧ ನಿಯೋಜಿತರಾಗಿರುವ ಸಚಿವಾಲಯದ ಹಿರಿಯ ಅಧಿಕಾರಿಗಳು ಶಾಸಕರ ಭವನದಲ್ಲಿಯೇ ಬೀಡುಬಿಟ್ಟಿದ್ದಾರೆ. ಅಲ್ಲದೆ, ಕಡತಗಳ ಶೋಧಕಾರ್ಯ ಕೈಗೊಂಡಿದ್ದಾರೆ. ಅಧಿಕಾರಿಗಳು ಈವರೆಗೆ ೧೯೮ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ!

ಖರೀದಿ ಮತ್ತು ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದರ ಹಿನ್ನೆಲೆಯಲ್ಲಿ ಸ್ಪೀಕರ್‌ ಕಚೇರಿ ತಪಾಸಣೆಗೆ ಸೂಚಿಸಿದೆ ಎಂದು ಹೇಳಲಾಗಿದೆ. ವಶಕ್ಕೆ ಪಡೆದಿರುವ ಬಹುತೇಕ ಕಡತಗಳು ಅಕ್ರಮಗಳಿಗೆ ಸಂಬಂಧಿಸಿದ್ದಾಗಿವೆ ಎನ್ನಲಾಗಿದೆ.

ಈ ಹಿಂದೆ ಇವೇ ಕಡತಗಳನ್ನು ತಪಾಸಣೆಗೆ ಒಪ್ಪಿಸುವಂತೆ ಹಿರಿಯ ಅಧಿಕಾರಿಗಳ ತಂಡ ಸೂಚಿಸಿದ್ದರೂ ಶಾಸಕರ ಭವನದ ಕೆಲ ಅಧಿಕಾರಿಗಳು ಒಪ್ಪಿರಲಿಲ್ಲ. ಕಡತಗಳು ಶಾಖೆಯಲ್ಲಿ ಲಭ್ಯ ಇಲ್ಲ ಎಂದು ಸಬೂಬು ನೀಡಲಾಗುತ್ತಿತ್ತು. ಹೀಗಾಗಿ, ಅನಿರೀಕ್ಷಿತ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕೆಲ ಖಾಸಗಿ ಕಂಪನಿಗಳಿಗೆ ಸೇರಿರುವ ಸೀಲುಗಳು, ಇನ್‌ವಾಯ್ಸ್‌ಗಳು ಕೂಡ ಕಡತಗಳ ಶೋಧ ಕಾರ್ಯಾಚರಣೆ ವೇಳೆಯಲ್ಲಿ ದೊರೆತಿವೆ ಎಂದು ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ಶಾಸಕರ ಭವನದಲ್ಲಿನ ಅಲ್ಮೇರಾಗಳನ್ನು ಬಲವಂತವಾಗಿ ತೆಗೆಸಿ ಅಲ್ಲಿಂದಲೂ ಬಹುಮುಖ್ಯ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಹುಮುಖ್ಯವಾಗಿ, ಶಾಸಕರಿಗೆ ವಿತರಿಸಲೆಂದು ಖರೀದಿಸಿದ್ದ ಬ್ರೀಫ್‌ಕೇಸ್‌ಗೆ ಸಂಬಂಧಿಸಿದ ಕಡತ ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿದ್ದ ಅಧಿವೇಶನ ಮತ್ತು ಅದಕ್ಕೆ ತಗುಲಿರುವ ಖರ್ಚು, ಈ ಸಂಬಂಧ ಗುತ್ತಿಗೆದಾರರಿಗೆ ಪಾವತಿಸಿರುವ ಹಣದ ವಿವರದ ಕಡತಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿದೆ.

ಹೊರಗುತ್ತಿಗೆ ನೌಕರಿಗೂ ಲಂಚ?: ಶಾಸಕರ ಭವನದ ಕೊಠಡಿ ಮತ್ತು ಪ್ರಾಂಗಣವನ್ನು ಶುಚಿಗೊಳಿಸುವ ಕಾರ್ಯನಿರ್ವಹಿಸಲು ಹೊರಗುತ್ತಿಗೆ ಕಂಪನಿಯೊಂದಕ್ಕೆ ಏಜೆನ್ಸಿ ನೀಡಲಾಗಿದೆ. ಈ ಏಜೆನ್ಸಿ ಮೂಲಕ ಸ್ವೀಪರ್ ಕೆಲಸ ಕೊಡಿಸಲು ಶಾಸಕರ ಭವನದ ಅಧಿಕಾರಿಗಳಿಬ್ಬರು ಲಂಚ ಪಡೆದಿದ್ದಾರೆ ಎಂಬ ಸಂಗತಿಯನ್ನು ಕಡತಗಳ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳ ತಂಡ ಹೊರಗೆಡವಿದೆ. ಲಂಚ ನೀಡಿರುವವರಿಗೆ ಕೆಲಸ ಸಿಗದ ಕಾರಣ ಅವರೆಲ್ಲರೂ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ದೂರಿನ ಅನ್ವಯ ಸಂಬಂಧಿಸಿದ ಅಧಿಕಾರಿಗಳಿಬ್ಬರಿಗೆ ನೋಟಿಸ್‌ ನೀಡಲು ಸ್ಪೀಕರ್ ಕಚೇರಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಏರ್‌ ಫ್ಯೂರಿಫೈಯರ್ ಖರೀದಿಯಲ್ಲೂ ಅಕ್ರಮ?: ಶಾಸಕರ ಭವನದ ಕೊಠಡಿಗಳಿಗೆ ೧ ಕೋಟಿ ರು. ವೆಚ್ಚದಲ್ಲಿ ಖರೀದಿಸಲಾದ ಏರ್‌ ಫ್ಯೂರಿಫೈರ್‌ ವ್ಯವಹಾರದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈಗಾಗಲೇ ವಿಧಾನಸಭೆ ಸಚಿವಾಲಯದ ಹಿರಿಯ ಅಧಿಕಾರಿಗಳು ಹೊಂದಿದ್ದ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಮೊಟಕುಗೊಳಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More