ಗ್ರಾಹಕರಿಗೆ ಕಹಿ ಸುದ್ದಿ; ಬೆಂಗಳೂರಿನಲ್ಲಿ ಪೆಟ್ರೋಲ್ ₹83, ಡಿಸೇಲ್ ₹75

ಪೆಟ್ರೋಲ್ ಮತ್ತು ಡಿಸೇಲ್ ದರ ಅದೆಷ್ಟೇ ಪ್ರಮಾಣದಲ್ಲಿ ಏರಿದರೂ ಎಕ್ಸೈಜ್ ಸುಂಕ ಕಡಿತ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿದೆ. ಪರಿಣಾಮವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ತೀವ್ರಗತಿಯಲ್ಲಿ ಪೆಟ್ರೋಲ್, ಡಿಸೇಲ್ ದರ ಜಿಗಿಯುತ್ತಿದೆ!

ಬೆಂಗಳೂರಿನಲ್ಲಿ ಪೆಟ್ರೋಲ್ 83 ರುಪಾಯಿ ಮುಟ್ಟಿದೆ. ಡಿಸೇಲ್ 75ರ ಸಮೀಪಕ್ಕೆ ಬಂದಿದೆ. ಸತತ ಏರುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ದರ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ತೀವ್ರಗತಿಯಲ್ಲಿ ಏರಿದೆ. ಈ ಹಿಂದಿನ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಪ್ರಮಾಣ ಗಮನಿಸಿದರೆ, ಸೆಪ್ಟೆಂಬರ್ ತಿಂಗಳ ಮೊದಲ ಎಂಟು ದಿನಗಳಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಏರಿಕೆ ಕಂಡಿವೆ.

ಇದುವರೆಗಿನ ಏರಿಕೆಯು ತಿಂಗಳಿಗೆ ಶೇ.2.5ರಿಂದ 4ರಷ್ಟಿರುತ್ತಿತ್ತು. ಆದರೆ, ಸೆಪ್ಟೆಂಬರ್‌ನ ಮೊದಲ ಎಂಟು ದಿನಗಳಲ್ಲಿ ಪೆಟ್ರೋಲ್ ಶೇ.2ರಷ್ಟು ಏರಿದ್ದರೆ, ಡಿಸೇಲ್ ಶೇ.3ರಷ್ಟು ಜಿಗಿದಿದೆ

ಪೆಟ್ರೋಲ್ ಮತ್ತು ಡಿಸೇಲ್ ದರ ಎಷ್ಟೇ ಏರಿದರೂ ಎಕ್ಸೈಜ್ ಸುಂಕ ಕಡಿತ ಮಾಡುವ ಉದ್ದೇಶ ಇಲ್ಲ ಎಂದು ಈ ಕೇಂದ್ರ ಸರ್ಕಾರ ಹಲವು ಬಾರಿ ಸ್ಪಷ್ಟಪಡಿಸಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯೂ ಸದ್ಯಕ್ಕೆ ಇಳಿಯುವ ಸೂಚನೆಗಳಿಲ್ಲ. ಹೀಗಾಗಿ, ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಶೇ.5ಕ್ಕಿಂತ ಹೆಚ್ಚು ಏರಿಕೆ ಆಗುವ ಸಾಧ್ಯತೆ ಇದೆ.

ಆಗಸ್ಟ್ 31ರಂದು 72.46 ರುಪಾಯಿ ಇದ್ದ ಡಿಸೇಲ್ ದರ ಸೆಪ್ಟೆಂಬರ್ 8ರಂದು 74.84 ರುಪಾಯಿಗೆ ಏರಿದೆ. ಅಂದರೆ, ಈ ಎಂಟು ದಿನಗಳಲ್ಲಿ 2.38 ರುಪಾಯಿ ಜಿಗಿದಿದೆ. ಅಂದರೆ, ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 30 ಪೈಸೆಯಷ್ಟು ಏರಿಕೆಯಾಗಿದೆ. ಆಗಸ್ಟ್ 31ರಂದು 81.07 ರುಪಾಯಿ ಇದ್ದ ಪೆಟ್ರೋಲ್ ಸೆಪ್ಟೆಂಬರ್ 8ರಂದು 83 ರುಪಾಯಿ ಮುಟ್ಟಿದೆ. ಈ ಎಂಟು ದಿನಗಳಲ್ಲಿ 1.93 ರುಪಾಯಿ ಏರಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 24 ಪೈಸೆ ಏರಿಕೆಯಾಗಿದೆ.

ಇದನ್ನೂ ಓದಿ : ಮೋದಿ ರೇಟ್ ಕಾರ್ಡ್| ಡಿಸೇಲ್ 21%, ಪೆಟ್ರೋಲ್ 15.24% ಏರಿಕೆ, ರುಪಾಯಿ 12.06% ಇಳಿಕೆ

ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 87.77 ರುಪಾಯಿಗೆ ಮತ್ತು ಡಿಸೇಲ್ ದರ 76.98 ರುಪಾಯಿಗೆ ಜಿಗಿದಿವೆ. ಈ ವರ್ಷಾಂತ್ಯದಲ್ಲಿ ಪೆಟ್ರೋಲ್ ದರ ಮುಂಬೈನಲ್ಲಿ ‘ಶತಕ’ ಬಾರಿಸುವ ನಿರೀಕ್ಷೆ ಇದೆ ಎಂದು ಅಂದಾಜು ಮಾಡಲಾಗಿದೆ.

ಪೆಟ್ರೋಲ್ ಮತ್ತು ಡಿಸೇಲ್‌ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಆದಾಯ ಬರುತ್ತಿದೆ. ಹೀಗಾಗಿ, ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡಿಸೇಲ್ ತರಬೇಕೆಂಬ ಬೇಡಿಕೆ ಸದ್ಯಕ್ಕೆ ಈಡೇರುವ ಸಾಧ್ಯತೆ ಇಲ್ಲ. ಒಂದು ವೇಳೆ ಜಿಎಸ್ಟಿ ವ್ಯಾಪ್ತಿಗೆ ಬಂದರೆ, ಪೆಟ್ರೋಲ್ 50 ರುಪಾಯಿ, ಡಿಸೇಲ್ 40 ರುಪಾಯಿ ದರ ನಿಗದಿ ಆಗುವ ಸಾಧ್ಯತೆ ಇದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More