₹2,000 ಹರಿದ ನೋಟು ಬದಲಾಯಿಸಿದರೆ ಸಿಗುವುದು ಅರ್ಧದಷ್ಟು ಮೊತ್ತ ಮಾತ್ರ!

2,000 ಮತ್ತು 200 ರುಪಾಯಿ ಹೊಸ ನೋಟು ಬದಲಾಯಿಸಿಕೊಳ್ಳಲು ಇದ್ದ ಮಾರ್ಗಸೂಚಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಪಾಡು ಮಾಡಿದೆ. ನೋಟು ಎಷ್ಟು ಹಾಳಾಗಿದೆ ಅಥವಾ ಹರಿದಿದೆ ಎಂಬುದರ ಮೇಲೆ ಮರುಪಾವತಿ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಪೂರ್ತಿ ಹರಿದಿದ್ದರೆ ಶೂನ್ಯ ಪಾವತಿ!

ನಿಮ್ಮಲ್ಲಿ ಹರಿದುಹೋದ 2,000 ಅಥವಾ 200 ರುಪಾಯಿ ನೋಟುಗಳಿದ್ದರೆ ಅದನ್ನು ನೀವು ಬದಲಾಯಿಸಿಕೊಳ್ಳಲು ಅವಕಾಶ ಇದೆ. ಆದರೆ, ಬದಲಾಯಿಸಿಕೊಂಡಾಗ ನಿಮಗೆ ಆ ನೋಟಿನ ಅರ್ಧದಷ್ಟು ಮೊತ್ತ ಮಾತ್ರ ಸಿಗಬಹುದು ಅಥವಾ ನಿಮಗೆ ‘ಶೂನ್ಯ’ ಮೊತ್ತ ದಕ್ಕಬಹುದು. ನೋಟು ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಅಥವಾ ಹರಿದಿದೆ ಎಂಬುದನ್ನು ಆಧರಿಸಿ ಹೊಸ ನೋಟುಗಳನ್ನು ಬದಲಾಯಿಸಿಕೊಡಲಾಗುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಬದಲಾವಣೆಗೆ ಇದ್ದ ಮಾರ್ಗಸೂಚಿಗಳಿಗೆ ತಿದ್ದುಪಡಿ ತಂದಿದೆ. ಹೊಸ ಮಾರ್ಗಸೂಚಿ ಪ್ರಕಾರ ನೋಟುಗಳು ಹಾಳಾಗಿರುವ ಪ್ರಮಾಣವನ್ನು ಆಧರಿಸಿ ಮೊತ್ತವನ್ನು ಪಾವತಿಸಲಾಗುತ್ತದೆ. ತಿದ್ದುಪಡಿ ನಿಯಮಗಳು ಹೊಸ 2,000, 200 ಮುಖಬೆಲೆ ನೋಟುಗಳಲ್ಲದೆ, ಮಹಾತ್ಮ ಗಾಂಧಿ ಸರಣಿಯಲ್ಲಿ ಮುದ್ರಿಸಲಾಗಿರುವ ಹೊಸ 10, 20, 50 ಮತ್ತು 100 ರುಪಾಯಿ ನೋಟುಗಳಿಗೂ ಅನ್ವಯವಾಗುತ್ತದೆ.

ಅಪನಗದೀಕರಣದ ನಂತರ ಮುದ್ರಿಸಿದ 2,000, 200 ಮತ್ತು ಮಹಾತ್ಮ ಗಾಂಧಿ ಸರಣಿಯ ನೋಟುಗಳಿಗೆ ಅಳತೆಯಲ್ಲಿ ಚಿಕ್ಕವು ಎಂಬ ಕಾರಣಕ್ಕೆ ನೋಟು ಬದಲಾವಣೆಯ ಹಿಂದಿನ ನಿಯಮಗಳು ಅನ್ವಯವಾಗುತ್ತಿರಲಿಲ್ಲ. ಹೀಗಾಗಿ, ನೋಟು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರಲಿಲ್ಲ. ನೋಟು ಅತ್ಯಲ್ಪ ಪ್ರಮಾಣದಲ್ಲಿ ಹಾಳಾಗಿ ಅಥವಾ ಹರಿದಿದ್ದರೂ ಯಾರೂ ಅಂತಹ ನೋಟುಗಳನ್ನು ಸ್ವೀಕರಿಸುತ್ತಿರಲಿಲ್ಲ. ಈ ಸಮಸ್ಯೆ ನಿವಾರಿಸುವ ಸಲುವಾಗಿ ಆರ್‌ಬಿಐ ಹಾಲಿ ಇದ್ದ ಮಾರ್ಗಸೂಚಿಗಳಿಗೆ ತಿದ್ದುಪಡಿ ತಂದಿದೆ.

ಹೊಸ ನಿಯಮಗಳ ಪ್ರಕಾರ, 2,000 ರುಪಾಯಿ ನೋಟಿನ ಒಂದು ಪೂರ್ಣಭಾಗವು ಶೇ.88ರಷ್ಟು ಮತ್ತು ಅದಕ್ಕಿಂತ ಹೆಚ್ಚಿದ್ದರೆ ಪೂರ್ಣ ಪ್ರಮಾಣದಲ್ಲಿ ಮೊತ್ತ ಪಾವತಿಸಲಾಗುತ್ತದೆ. ಅಂದರೆ, ನೋಟಿನ ಅಂಚಿನಲ್ಲಿ ಹರಿದು ಅಥವಾ ಹಾಳಾಗಿದ್ದು ಶೇ.88ರಷ್ಟು ಭಾಗ ಹಾನಿಯಾಗದೆ ಉತ್ತಮವಾಗಿದ್ದರೆ ಮಾತ್ರ ಪೂರ್ಣ ಪ್ರಮಾಣದ ಮೊತ್ತ ಪಾವತಿಸಲಾಗುತ್ತದೆ. ಶೇ.44ರಷ್ಟು ನೋಟಿನ ಭಾಗ ಹಾನಿಯಾಗದೆ ಇದ್ದರೆ ನೋಟಿನ ಮೌಲ್ಯದ ಅರ್ಧದಷ್ಟು ಮೊತ್ತ ಪಾವತಿಸಲಾಗುತ್ತದೆ.

200 ರುಪಾಯಿ ಬದಲಾಯಿಸುವಾಗ ನೋಟಿನ ಒಂದು ಭಾಗ ಶೇ.78ರಷ್ಟು ಸುಸ್ಥಿತಿಯಲ್ಲಿದ್ದರೆ ಪೂರ್ಣ ಪ್ರಮಾಣದ ಮೊತ್ತ ಪಾವತಿಸಲಾಗುತ್ತದೆ. ಶೇ.39ರಷ್ಟು ನೋಟು ಸುಸ್ಥಿತಿಯಲ್ಲಿದ್ದರೆ ಅರ್ಧದಷ್ಟು ಮೊತ್ತ ಪಾವತಿಸಲಾಗುತ್ತದೆ.

ಇದನ್ನೂ ಓದಿ : ನೋಟು ಅಪಮೌಲ್ಯ ನಂತರದ ಆರ್ಥಿಕತೆ; ನಿಮಗೆ ಗೊತ್ತಾಗಲೇಬೇಕಾದ 10 ಸಂಗತಿ

ಮಹಾತ್ಮ ಗಾಂಧಿ ಸರಣಿಯಲ್ಲಿ ಮುದ್ರಿಸಿರುವ 100 ರುಪಾಯಿ ನೋಟನ್ನು ಪೂರ್ಣ ಮೊತ್ತಕ್ಕೆ ಬದಲಾಯಿಸಿಕೊಳ್ಳಬೇಕಾದರೆ ನೋಟಿನ ಒಂದು ಭಾಗ ಶೇ.75ರಷ್ಟು ಸುಸ್ಥಿತಿಯಲ್ಲಿರಬೇಕು. ಅರ್ಧದಷ್ಟು ಮೊತ್ತ ಪಾವತಿಸಬೇಕಾದರೆ, ನೋಟಿನ ಶೇ.38ರಷ್ಟು ಭಾಗ ಸುಸ್ಥಿತಿಯಲ್ಲಿರಬೇಕು. 50 ರುಪಾಯಿ ಪೂರ್ಣ ಪಾವತಿಗೆ ನೋಟಿನ ಒಂದು ಭಾಗದ ಶೇ.75ರಷ್ಟು, ಅರ್ಧದಷ್ಟು ಪಾವತಿಗೆ ಶೇ.36ರಷ್ಟು ಸುಸ್ಥಿತಿಯಲ್ಲಿರಬೇಕು.

ಆರ್‌ಬಿಐ ಕಳೆದ ವಾರ ಮಾರ್ಪಾಡಿತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದು ಗೆಜೆಟ್‌ನಲ್ಲಿ ಪ್ರಕಟವಾದ ಕೂಡಲೇ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಜನರು ಹರಿದ ನೋಟುಗಳನ್ನು ಆರ್‌ಬಿಐ ಕಚೇರಿ ಮತ್ತು ನಿಯೋಜಿತ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬಹುದು. ಆದರೆ, ನೋಟು ಎಷ್ಟು ಸುಸ್ಥಿತಿಯಲ್ಲಿದೆ ಎಂಬುದನ್ನು ಆಧರಿಸಿ ಮೊತ್ತ ಪಾವತಿಸಲಾಗುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More