ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇಂದಿನಿಂದ

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇಂದಿನಿಂದ ಎರಡು‌ ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ವಿವಿಧ ರಾಜ್ಯಗಳ ಅಧ್ಯಕ್ಷರು ಹಾಗೂ ಸಂಘಟನಾ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕಾರಿಣಿ ಮಹತ್ವ ಪಡೆದಿದೆ. ಮಾಜಿ ಪ್ರಧಾನಿ ಎ ಬಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯನ್ನು ಮುಂದೂಡಲಾಗಿತ್ತು.

ಅಳಗಿರಿಯನ್ನು ಡಿಎಂಕೆ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಸಭೆ

ಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ನೂತನ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರು ಸಹೋದರ ಅಳಗಿರಿಯನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಶನಿವಾರ ಎಲ್ಲ ಜಿಲ್ಲಾ ಪಕ್ಷದ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಹಿಂದಿನ ಲೋಕಸಭಾ ಚುನಾವಣಾ ವೇಳೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಹೋದರ ಎಂ ಕೆ ಸ್ಟಾಲಿನ್ ಮತ್ತು ಇತರರ ವಿರುದ್ಧ ಮೇಲಿಂದ ಮೇಲೆ ಟೀಕೆ ಮಾಡುತ್ತಿದ್ದ ಕಾರಣಕ್ಕೆ ಡಿಎಂಕೆ ಅಧ್ಯಕ್ಷರಾಗಿದ್ದ ಕರುಣಾನಿಧಿಯವರು ಅಳಗಿರಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಮೆರಿಕ ಪ್ರವಾಸ

ಅಮೆರಿಕದ ಶಿಕಾಗೋದಲ್ಲಿ ಭಾನುವಾರ ನಡೆಯಲಿರುವ ಎರಡನೇ ವಿಶ್ವ ಹಿಂದೂ ಸಮಾವೇಶದಲ್ಲಿ ಭಾಗವಹಿಸಲು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತೆರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಸಮಾವೇಶ ಮುಗಿದ ಬಳಿಕ ಭಾರತೀಯ ಮೂಲದವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಸೆರೆನಾ-ಒಸಾಕ ಹಣಾಹಣಿಗೆ ವೇದಿಕೆ ಸಜ್ಜು

ಮಾರ್ಗರೆಟ್ ಕೋರ್ಟ್ ಅವರ ೨೪ ಗ್ರಾಂಡ್‌ಸ್ಲಾಮ್‌ಗಳ ವಿಶ್ವದಾಖಲೆಯನ್ನು ಸರಿಗಟ್ಟಲು ಸಜ್ಜಾಗಿರುವ ಸೆರೆನಾ ವಿಲಿಯಮ್ಸ್ ಮತ್ತು ಜಪಾನ್‌ನ ಯುವ ಆಟಗಾರ್ತಿ ನವೊಮಿ ಒಸಾಕ ಅಮೆರಿಕ ಓಪನ್ ಪಂದ್ಯಾವಳಿಯ ಫೈನಲ್‌ನಲ್ಲಿ ಸೆಣಸಲಿದ್ದಾರೆ. ಭಾರತೀಯ ಕಾಲಮಾನ ಮಧ್ಯರಾತ್ರಿ ೧.೩೦ಕ್ಕೆ ನ್ಯೂಯಾರ್ಕ್‌ನ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ತೀವ್ರ ಕೌತುಕ ಕೆರಳಿಸಿದೆ. ಕಳೆದ ತಿಂಗಳು ನಡೆದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ಏಂಜಲಿಕ್ ಕೆರ್ಬರ್ ವಿರುದ್ಧ ಸೋತಿದ್ದ ಸೆರೆನಾ, ವರ್ಷದ ಕಡೆಯ ಗ್ರಾಂಡ್‌ಸ್ಲಾಮ್ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಒಸಾಕ ಎದುರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾಗಿದ್ದಾರೆ. ಏತನ್ಮಧ್ಯೆ, ಒಸಾಕ ಪಾಲಿಗಿದು ಮೊಟ್ಟಮೊದಲ ಗ್ರಾಂಡ್‌ಸ್ಲಾಮ್ ಫೈನಲ್ ಆಗಿದ್ದು, ಅಚ್ಚರಿಯ ಫಲಿತಾಂಶ ನೀಡುವ ಉತ್ಸುಕದಲ್ಲಿದ್ದಾರೆ. ಸೋನಿ ನೆಟ್ವರ್ಕ್‌ನಲ್ಲಿ ನೇರಪ್ರಸಾರವಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More