ಅಮ್ಮ ಯಾವಾಗಲೂ ಹೇಳುತ್ತಿದ್ದರು, “ನಾನು ಹಣ ಗಳಿಸಿಲ್ಲ ಜನ ಗಳಿಸಿದ್ದೀನಿ”

ಮಹಾರಾಷ್ಟ್ರದ ಪುಣೆ ಪೊಲೀಸರು ಆಗಸ್ಟ್ 28ರಂದು ಬಂಧಿಸಿದ ಐವರು ಮಾನವ ಹಕ್ಕುಗಳ ಹೋರಾಟಗಾರರ ಪೈಕಿ ಸುಧಾ ಭಾರದ್ವಾಜ್ ಕೂಡ ಒಬ್ಬರು. ಅವರ ಮಗಳು, ವೃತ್ತಿಯಲ್ಲಿ ವಕೀಲರಾಗಿರುವ ಮಾಯ್ಶಾ ಬರೆದ ಪತ್ರವಿದು. ‘ದಿ ವೈರ್’ ಜಾಲತಾಣ ಪ್ರಕಟಿಸಿರುವ ಪತ್ರದ ಭಾವಾನುವಾದ ಇಲ್ಲಿದೆ

ಸಾಮಾಜಿಕ ಕಾರ್ಯಕರ್ತರಾದ ಗೌತಮ್ ನವಲಖಾ, ವರ್ನನ್ ಗೊನ್ಸಾಲ್ವೇಸ್, ವರವರ ರಾವ್ ಹಾಗೂ ಅರುಣ್ ಫೆರೇರಾ ಜೊತೆ ಸುಧಾ ಭಾರದ್ವಾಜ್ ಅವರನ್ನು ಕೂಡ ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಹೊತ್ತಿನಲ್ಲಿ ಸುಧಾ ಅವರ ಮಗಳು ಮಾಯ್ಶಾ, ತನ್ನ ತಾಯಿಯ ಕುರಿತಂತೆ ಪತ್ರದ ಮೂಲಕ ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

***

ಎಲ್ಲರ ಹಾಗಲ್ಲ ನನ್ನಮ್ಮ...

ಅವತ್ತು ಬೆಳಗ್ಗೆ 7 ಗಂಟೆ. ಮಮ್ಮಾ ನನ್ನನ್ನು ನಿದ್ದೆಯಿಂದ ಎಬ್ಬಿಸಿದರು. “ಅವರು ಮನೆ ಶೋಧಿಸೋಕೆ ಬಂದಿದ್ದಾರೆ, ಎದ್ದೇಳು,” ಎಂದರು. ನಂತರ ಏನಾಯಿತು ಅಂತ ಎಲ್ಲರಿಗೂ ಗೊತ್ತೇ ಇದೆ. ಎಲ್ಲರೂ ಅಮ್ಮನ ಬಗ್ಗೆ ಬರೀತಿದ್ದಾರೆ. ನನಗೂ ಹಾಗೆ ಮಾಡಬೇಕು ಅನ್ನಿಸಿದೆ.

ಮಮ್ಮಾ ಯೋಚನೆ ಮಾಡುವುದಕ್ಕೂ ನಾನು ಮಾಡುವುದಕ್ಕೂ ಯಾವಾಗಲೂ ವ್ಯತ್ಯಾಸ ಇರುತ್ತಿತ್ತು. ನನ್ನ ಯೋಚನೆಗಳಿಗೂ ಅವರ ಯೋಚನೆಗಳಿಗೂ ಬಹುಶಃ ಹೊಂದಾಣಿಕೆ ಆಗ್ತಾ ಇರಲಿಲ್ಲ. ಹಾಗಾಗೇ ನಾವಿಬ್ರೂ ವಾದ ಮಾಡ್ತಿದ್ವಿ. ನಾನು ಯಾವಾಗ್ಲೂ, “ಅಮ್ಮಾ ನಾವೇಕೆ ಹೀಗೆ ಬದುಕಬೇಕು? ಎಲ್ಲರ ಥರ ಯಾಕೆ ಆರಾಮಾಗಿ ಬದುಕಬಾರದು?” ಅಂತ ಕೇಳ್ತಾ ಇದ್ದೆ.

ಮಮ್ಮಾ ಆಗ ಹೇಳ್ತಾ ಇದ್ರು, “ಮಗಳೇ, ನಾನು ಬಡವರೊಟ್ಟಿಗೆ ಬದುಕಿ ಅವರ ಜೊತೆ ಕೆಲಸ ಮಾಡ್ತೇನೆ. ನೀನು ದೊಡ್ಡವಳಾದ ಮೇಲೆ ನಿನಗೆ ಹೇಗೆ ಬೇಕೋ ಹಾಗೆ ಬದುಕು.” ಆಗೆಲ್ಲ ಪಿಚ್ಚೆನಿಸ್ತಾ ಇತ್ತು. “ನೀನು ಬಹಳ ವರ್ಷ ಬೇರೆಯವರಿಗಾಗಿ ಬದುಕಿದ್ದೀಯ. ಈಗಲಾದರೂ ನಿನಗಾಗಿ ಸ್ವಲ್ಪ ಸಮಯ ಇಟ್ಟು ಆರಾಮಾಗಿ ಬದುಕು,” ಅನ್ನುತ್ತಿದ್ದೆ. ಮಮ್ಮಾ ನನಗೆ ಸಮಯ ಕೊಡ್ತಾ ಇಲ್ಲ ಅಂತ ನನಗೆ ಅಸಮಾಧಾನ ಆಗ್ತಿತ್ತು. ಆಕೆಯ ಬಹಳಷ್ಟು ಸಮಯ ಜನರಿಗಾಗಿ ಮೀಸಲಾಗಿತ್ತು, ನನಗಾಗಿ ಅಲ್ಲ.

ಚಿಕ್ಕಂದಿನಲ್ಲಿ ನಾನು, ಯೂನಿಯನ್‌ನಲ್ಲಿದ್ದ ಒಬ್ಬ ಅಜ್ಜಿ ಮತ್ತವರ ಕುಟುಂಬದ ಜೊತೆ ಇರ್ತಾ ಇದ್ದೆ. ಅವರಿಗೆ ಕೂಡ ಮಕ್ಕಳಿದ್ದರು. ನಾವೆಲ್ಲ ಒಟ್ಟಿಗೆ ಇರ್ತಿದ್ವಿ. ಅಮ್ಮನ ನೆನಪಾದಾಗಲೆಲ್ಲ ಅಜ್ಜಿ ಸೀರೆ ಹಿಡಿದು ಅಳ್ತಾ ಇದ್ದೆ. ನನಗೀಗಲೂ ನೆನಪಿದೆ, ನನಗೆ ಜ್ವರ ಬಂದಾಗ ಅಜ್ಜಿ ಬಂದು ನನ್ನ ತಲೆ ನೇವರಿಸುತ್ತಿದ್ದರು. ಅಮ್ಮನೇ ಇರಬೇಕು ಅಂದುಕೊಂಡಿದ್ದೆ. “ಅಮ್ಮಾ...” ಅಂತ ಕೂಗಿದೆ. ಕಣ್ಣು ಬಿಟ್ಟಾಗ ಅಲ್ಲಿ ಇದ್ದದ್ದು ಅಜ್ಜಿ. ಚಿಕ್ಕವಳಿದ್ದಾಗ ಅಮ್ಮನ ಜೊತೆ ಜಾಸ್ತಿ ಸಮಯ ಕಳೆಯೋಕೆ ಆಗಲೇ ಇಲ್ಲ.

ಆರನೇ ಕ್ಲಾಸಿಗೆ ಬಂದ ನಂತರ ಅಮ್ಮನ ಜೊತೆ ಸರಿಯಾಗಿ ಇರತೊಡಗಿದೆ. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೆ ಇರೋದಕ್ಕೆ ಇದೇ ಕಾರಣ ಅಂತ ಕಾಣಿಸುತ್ತೆ. ಬೇರೆಯವರಿಗಾಗಿ ಹೋರಾಡೋದಕ್ಕಾಗಿ, ಅವರಿಗೆ ಅನುಕೂಲ ಮಾಡೋದಕ್ಕಾಗಿ ಮಮ್ಮಾ ಸರಿಯಾಗಿ ಊಟ, ನಿದ್ದೆ ಕೂಡ ಮಾಡದೆ ಕೆಲಸ ಮಾಡ್ತಿದ್ದರು. ಮಮ್ಮ ತನ್ನ ಬಗ್ಗೆಯೂ ಯೋಚಿಸೋದಿಲ್ವಲ್ಲ ಅಂತ ಬೇಜಾರಾಗ್ತಾ ಇತ್ತು. ಯಾವುದಾದರೂ ಕೇಸಿಗೆ ಸಂಬಂಧಪಟ್ಟ ಹಾಗೆ ಕೆಲಸ ಮಾಡುವಾಗ ಬಹಳ ಚಿಂತೆ ಮಾಡ್ತಿದ್ದರು. ಆಗೆಲ್ಲ ಅದು ಅವಳ ವೃತ್ತಿ, ಅದಕ್ಕೆ ಯಾಕೆ ಇಷ್ಟು ಚಿಂತೆ ಮಾಡಬೇಕು ಅಂದುಕೊಳ್ಳುತ್ತಿದ್ದೆ. ಅದನ್ನು ಅಮ್ಮನಿಗೂ ಹೇಳ್ತಾ ಇದ್ದೆ. ಆಗೆಲ್ಲ ಅವರು, “ಇದರ ಬಗ್ಗೆ ಎಲ್ಲಾ ನಾವು ಯೋಚನೆ ಮಾಡದೆ ಇನ್ಯಾರು ಮಾಡಬೇಕು?” ಅಂತ ಪ್ರಶ್ನಿಸುತ್ತಿದ್ದರು.

ಇದನ್ನೂ ಓದಿ : ಸಾಮಾಜಿಕ ಕಾರ್ಯಕರ್ತರ ಬಂಧನ: ರೋಮಿಲಾ ಥಾಪರ್ ಮತ್ತಿತರರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ?
ಇದನ್ನೂ ಓದಿ : ಮಹಾರಾಷ್ಟ್ರ ಪೊಲೀಸರಿಗೆ ಸುಧಾ ಭಾರದ್ವಾಜ್ ಬರೆದ ಬಹಿರಂಗ ಪತ್ರದಲ್ಲೇನಿದೆ?

ಆದಿವಾಸಿಗಳ ಬಗ್ಗೆ ಕೆಲಸ ಮಾಡ್ತೀವಿ ಎಂದು ನ್ಯೂಸ್‌ನಲ್ಲಿ ಬರುವವರನ್ನು ನಾನು ನೋಡಿದ್ದೆ. ಅದೆಲ್ಲ ಪ್ರದರ್ಶನಕ್ಕಾಗಿ ಅನ್ನಿಸ್ತಾ ಇತ್ತು. ಯಾಕಂದ್ರೆ, ಅವರ ಮಕ್ಕಳೆಲ್ಲ ಅಮೆರಿಕದಲ್ಲಿ ಓದ್ತಾ ಇರೋರು. ಅವರಿಗೆಲ್ಲ ನಾನು ಸರ್ಕಾರಿ ಶಾಲೆಯ ಹಿಂದಿ ಮೀಡಿಯಂನಲ್ಲಿ ಓದಿದ್ದು ಅಂತ ಗೊತ್ತಿಲ್ಲದೆ ಇರಬಹುದು. “ಅಮ್ಮಾ, ನೀನು ಮಾತ್ರ ಇಂಗ್ಲೀಷ್ ಮೀಡಿಯಂನಲ್ಲಿ ಓದಿ ನನ್ನನ್ನ ಹಿಂದಿ ಮೀಡಿಯಂಗೆ ಸೇರಿಸಿದ್ದೀಯಾ?” ಅಂತ ನಾನು ಜಗಳ ಆಡ್ತಾ ಇದ್ದೆ. ನಾನೇ ಖುದ್ದಾಗಿ ಇಂಗ್ಲಿಷ್ ಓದಲು, ಮಾತಾಡಲು ಕಲಿತೆ ಅನ್ನೋದು ಬೇರೆ ವಿಚಾರ. 12ನೇ ಕ್ಲಾಸಿಗೆ ಬಂದಾಗ ನಿಯೋಸ್‌ನಲ್ಲಿ ಇಂಗ್ಲೀಷ್ ಮೀಡಿಯಂಗೆ ಸೇರಿಸು ಅಂತ ಒತ್ತಾಯ ಮಾಡಿದೆ.

ಇದನ್ನೂ ಓದಿ : ಸಾಮಾಜಿಕ ಕಾರ್ಯಕರ್ತರ ಬಂಧನ: ರೋಮಿಲಾ ಥಾಪರ್ ಮತ್ತಿತರರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ?
ಇದನ್ನೂ ಓದಿ : ಮಹಾರಾಷ್ಟ್ರ ಪೊಲೀಸರಿಗೆ ಸುಧಾ ಭಾರದ್ವಾಜ್ ಬರೆದ ಬಹಿರಂಗ ಪತ್ರದಲ್ಲೇನಿದೆ?

ಮಮ್ಮಾನ ನಕ್ಸಲೈಟ್ ಅಂತ ಕರೀತಾ ಇದ್ದಾರೆ. ಆದರೆ ಜನರಿಗೆ ಹುಚ್ಚು ಹಿಡಿದಿದೆ; ಸತ್ಯ ತಿಳೀದೆ ಅವರು ಏನೇನೋ ಮಾತಾಡ್ತಾ ಇದ್ದಾರೆ ಅನ್ನಿಸ್ತಾ ಇದೆ. ಜನರು ಅಥವಾ ಪೊಲೀಸರು ಏನು ಹೇಳ್ತಾರೋ ಅದಕ್ಕೆ ನಾನು ತಲೆಕೆಡಿಸಿಕೊಳ್ಳೋಕೆ ಹೋಗಲ್ಲ. ಏಕೆಂದರೆ, ನನ್ನ ತಾಯಿ ಬಗ್ಗೆ ನನಗಿಂತ ಅವರಿಗೆ ಜಾಸ್ತಿ ಗೊತ್ತಿರೋದು ಸಾಧ್ಯ ಇಲ್ಲ.

ಆದಿವಾಸಿಗಳಿಗಾಗಿ ಹೋರಾಡೋರನ್ನು, ಕಾರ್ಮಿಕರು, ರೈತರಿಗಾಗಿ ಧ್ವನಿ ಎತ್ತೋರನ್ನು, ದಮನ, ಶೋಷಣೆ ವಿರುದ್ಧ ತಿರುಗಿಬೀಳೋರನ್ನು ಯಾರಾದರೂ ನಕ್ಸಲೈಟರು ಅಂತ ಕರೆದರೆ ನಾನು ನಕ್ಸಲೈಟರೇ ಬಹಳ ಒಳ್ಳೆಯವರು ಅಂದುಕೊಳ್ತೀನಿ!

ಜನ ಏನು ಬೇಕಾದ್ರೂ ಅಂದುಕೊಳ್ಳಲಿ. ನಾನು ಆಕೆಯ ಮಗಳಾಗಿರೋದಕ್ಕೆ ಹೆಮ್ಮೆಪಡ್ತೀನಿ.

ಮಮ್ಮಾ ಯಾವಾಗಲೂ, “ಮಗಳೇ, ನಾನು ಹಣ ಗಳಿಸಿಲ್ಲ, ಜನ ಗಳಿಸಿದ್ದೀನಿ,” ಅಂತ ಹೇಳ್ತಾ ಇದ್ದರು. ಆಕೆ ಹೇಳಿದ್ದು ನಿಜ. ಅದು ನನಗೆ ಈಗ ಕಾಣ್ತಾ ಇದೆ.

ಐ ಲವ್ ಯೂ ಅಮ್ಮಾ...

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More