ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ದೇಶ ಹಾಳು ಮಾಡುವ ಪಕ್ಷ ಕಾಂಗ್ರೆಸ್: ಅಮಿತ್ ಶಾ

ಕಾಂಗ್ರೆಸ್ ಪಕ್ಷ ದೇಶವನ್ನು ಹಾಳುಮಾಡುವುದಕ್ಕಾಗಿ ಕೆಲಸ ಮಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶನಿವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಉದ್ದೇಶಿಸಿ ಮಾತನಾಡಿದ ಶಾ, “2014ಕ್ಕಿಂತಲೂ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ, “ಮಹಾಘಟಬಂಧನ್ ಎಂಬುದು ಜನರ ಕಣ್ಣೊರೆಸುವ ತಂತ್ರ ಹಾಗೂ ಅದೊಂದು ಭ್ರಮೆ,” ಎಂದು ಬಣ್ಣಿಸಿದರು.

ತೈಲ ದರ ಏರಿಕೆ ಹಿನ್ನೆಲೆ; ಸೋಮವಾರ ಸಾರಿಗೆ ಸೇವೆ ಕಡಿತ

ತೈಲ ದರ ಏರಿಕೆ ವಿರುದ್ಧ ಈಗಾಗಲೇ ದೇಶವ್ಯಾಪಿ ಪ್ರತಿಭಟನೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಘಟಕ ಸೋಮವಾರ ಭಾರತ ಬಂದ್‌ಗೆ ಕರೆ ನೀಡಿದೆ. ಬಿಎಂಟಿಸಿ ಹಾಗೂ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಸೋಮವಾರದಂದು ಸಾರಿಗೆ ಸೇವೆ ಸಿಗುವುದು ಅನುಮಾನ. 1. 25 ಲಕ್ಷ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದಲ್ಲಿ ಒಟ್ಟು 28 ಸಾವಿರ ಬಸ್‌ಗಳು ಸೋಮವಾರದಂದು ಸೇವೆ ಸ್ಥಗಿತಗೊಳಿಸುತ್ತವೆಂದು ಅಂದಾಜಿಸಲಾಗಿದೆ. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅನಂತ್ ಸುಬ್ಬಾರಾವ್ ಬಂದ್‌ಗೆ ಬೆಂಬಲ ಸೂಚಿಸುವುದನ್ನು ಖಚಿತಪಡಿಸಿದ್ದಾರೆ.

ವಿದ್ಯುತ್ ವಾಹನಗಳ ಸಂಬಂಧ ಹೊಸ ನೀತಿ ರಚನೆ: ಪ್ರಧಾನಿ ಮೋದಿ

ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯ ನಿರಂತರ ಏರಿಕೆಯಿಂದ ಮೋದಿ ಸರ್ಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಿದೆ. ವಿದ್ಯುತ್ ಚಾಲಿತ ಮೋಟಾರು ವಾಹನಗಳಿಗ ಬಳಕೆಯನ್ನು ಉತ್ತೇಜಿಸುವಂತೆ ಹಾಗೂ ಮೋಟಾರು ವಾಹನಗಳಿಗೆ ಹೊಸ ನೀತಿಯನ್ನು ರಚಿಸಲಾಗುವುದು ಎಂದು ಪ್ರಧಾನಿ ಮೋದಿ ಶುಕ್ರವಾರ ನೀತಿ ಆಯೋಗ ಆಯೋಜಿಸಿದ್ದ ಗ್ಲೋಬಲ್ ಮೊಬಿಲಿಟಿ ಸಮಿಟ್‌ನಲ್ಲಿ ಘೋಷಿಸಿದ್ದಾರೆ. ವಿದ್ಯುತ್ ವಾಹನಗಳಿಗೆ ರಸ್ತೆಯ ಪರವಾನಿಗೆ ವಿನಾಯಿತಿ ನೀಡಲಾಗುವುದು ಎಂದು ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ಏಳು ವರ್ಷಗಳ ಹಿಂದಿನ ಫುಕುಶಿಮಾ ಅಣುಸ್ಥಾವರ ಸ್ಪೋಟ; ವ್ಯಕ್ತಿ ಸಾವು

ಏಳು ವರ್ಷಗಳ ಹಿಂದೆ ನಡೆದಿದ್ದ ಭೂಕಂಪ ಮತ್ತು ಸುನಾಮಿಯಿಂದ ನಾಶವಾಗಿದ್ದ ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದಲ್ಲಿನ 50 ವರ್ಷ ವಯಸ್ಸಿನ ಕೆಲಸಗಾರನೊಬ್ಬ ಅಸು ನೀಗಿದ್ದು, 2011 ರಲ್ಲಿ ಸಂಭವಿಸಿದ್ದ ಸ್ಪೋಟದ ವಿಕಿರಣಗಳು ಇಂದಿಗೂ ಬೀರುತ್ತಿರುವ ಪ್ರಭಾವದಿಂದ ವ್ಯಕ್ತಿ ಸಾವನ್ನಪಿರುವ ಕುರಿತು ವರದಿಗಳು ದಾಖಲಾಗಿವೆ. 2011 ರ ಸುನಾಮಿಯಲ್ಲಿ 18 ಸಾವಿರ ಜನ ಜಪಾನಿಗರು ಸಾವಿಗೀಡಾಗಿದ್ದರು, ಎಳು ವರ್ಷಗಳ ಹಿಂದೆ ಸ್ಪೋಟಗೊಂಡಿದ್ದ ಅಣು ಸ್ಥಾವರದ ವಿಕಿರಣಗಳು ಇಂದಿಗೂ ಆ ಪ್ರದೇಶದ ಜನಗಳ ಮೇಲೆ ಪ್ರಭಾವ ಬೀರುತ್ತಿವೆ.

ಬಟ್ಲರ್ ಅರ್ಧಶತಕದೊಂದಿಗೆ ೩೩೨ ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೩೩೨ ರನ್‌ಗಳಿಗೆ ಆಲೌಟ್ ಆಯಿತು. ಜೋಸ್ ಬಟ್ಲರ್ (೮೯) ದಾಖಲಿಸಿದ ಮನೋಜ್ಞ ಅರ್ಧಶತಕದಿಂದಾಗಿ ಇಂಗ್ಲೆಂಡ್, ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ೧೮೧ ರನ್‌ಗಳಿಗೆ ೭ ವಿಕೆಟ್‌ಗಳಿಂದ ಎರಡನೇ ದಿನದಾಟ ಮುಂದುವರೆಸಿದ ಇಂಗ್ಲೆಂಡ್, ಬಟ್ಲರ್ ಮತ್ತು ಸ್ಟುವರ್ಟ್ ಬ್ರಾಡ್ (೩೮) ಜತೆಯಾಟದಲ್ಲಿ ಮನೋಜ್ಞ ಇನ್ನಿಂಗ್ಸ್ ಕಟ್ಟಿತಲ್ಲದೆ, ಅದ್ಭುತ ಪ್ರದರ್ಶನ ನೀಡಿತು. ರವೀಂದ್ರ ಜಡೇಜಾ ೭೯ಕ್ಕೆ ೪ ವಿಕೆಟ್ ಗಳಿಸಿದರೆ, ಜಸ್ಪ್ರೀತ್ ಬುಮ್ರಾ (೮೩ಕ್ಕೆ ೩) ಮತ್ತು ಇಶಾಂತ್ ಶರ್ಮಾ (೬೨ಕ್ಕೆ ೩) ತಲಾ ಮೂರು ವಿಕೆಟ್ ಉರುಳಿಸಿದರು. ಇನ್ನಿಂಗ್ಸ್ ಆರಂಭಿಸಿದ ಭಾರತ, ಶಿಖರ್ ಧವನ್ (೩) ಅವರನ್ನು ಬಲುಬೇಗ ಕಳೆದುಕೊಂಡು ಆತಂಕ ಅನುಭವಿಸಿತು. ೩ ಓವರ್‌ಗಳಲ್ಲಿ ೧ ವಿಕೆಟ್‌ಗೆ ೧೦ ರನ್ ಗಳಿಸಿದ್ದ ಭಾರತದ ಪರ ಕನ್ನಡಿಗ ಕೆ ಎಲ್ ರಾಹುಲ್ (೭) ಮತ್ತು ಚೇತೇಶ್ವರ ಪೂಜಾರ (೦) ಹೋರಾಟ ಮುಂದುವರೆಸಿದ್ದರು.

ಆಸ್ಟ್ರೇಲಿಯಾ ಎ ತಂಡಕ್ಕೆ ಆಸರೆಯಾದ ಮಿಚೆಲ್ ಮಾರ್ಶ್

ಏಳನೇ ವಿಕೆಟ್‌ಗೆ ಅಜೇಯ ಶತಕದ ಜತೆಯಾಟವಾಡಿದ ಮಿಚೆಲ್ ಮಾರ್ಶ್ (೮೬) ಮತ್ತು ಮಿಚೆಲ್ ನೆಸೆರ್ (೪೪) ಭಾರತ ಎ ತಂಡದ ವಿರುದ್ಧ ಉತ್ತಮ ಮೊತ್ತ ಪೇರಿಸಿತು. ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಇಂದು ಶುರುವಾದ ಭಾರತ ಎ ತಂಡದ ವಿರುದ್ಧ ಆಸ್ಟ್ರೇಲಿಯಾ ಎ ತಂಡ, ಮೊದಲ ದಿನದಾಟದ ಅಂತ್ಯಕ್ಕೆ ೯೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೯೦ ರನ್ ಗಳಿಸಿತು. ೩ ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡು ತತ್ತರಿಸಿದ ತಂಡಕ್ಕೆ ಕುರ್ಟಿಸ್ ಪ್ಯಾಟರ್ಸನ್ (೪೮) ಮತ್ತು ಟ್ರಾವಿಸ್ ಹೆಡ್ (೬೮) ಎರಡನೇ ವಿಕೆಟ್‌ಗೆ ೯೨ ರನ್ ಪೇರಿಸಿಕೊಟ್ಟು ತಂಡದ ಸ್ಥಿತಿಯನ್ನು ಚೇತರಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ತಂಡ ಮತ್ತೊಮ್ಮೆ ಕಂಗೆಟ್ಟಿತು. ಈ ವೇಳೆ ಮಿಚೆಲ್ ಮಾರ್ಶ್ ಮತ್ತು ಮಿಚೆಲ್ ನೆಸೆರ್ ಜತೆಯಾಟ ತಂಡವನ್ನು ಮತ್ತೆ ಪುಟಿದೇಳುವಂತೆ ಮಾಡಿತು. ಭಾರತ ಎ ತಂಡದ ಪರ ಕುಲದೀಪ್ ಯಾದವ್ (೬೮ಕ್ಕೆ ೨) ಮತ್ತು ಶಹಬಾಜ್ ನದೀಮ್ (೬೪ಕ್ಕೆ ೨) ಮತ್ತು ರಜನೀಶ್ ಗುರ್ಬಾನಿ ಹಾಗೂ ಕೆ ಗೌತಮ್ ತಲಾ ಒಂದು ವಿಕೆಟ್ ಗಳಿಸಿದರು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶ್ರೀದೇವಿ ಪ್ರತಿಮೆ

ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸೋದ್ಯಮ ಇಲಾಖೆ ಬಾಲಿವುಡ್ ನಟಿ ಶ್ರೀದೇವಿ ಗೌರವಾರ್ಥ ಪ್ರತಿಮೆ ನಿರ್ಮಿಸಲು ಯೋಜಿಸಿದೆ. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಪ್ರಾದೇಶಿಕ ಸಿನಿಮಾಗಳ ಹಾಡುಗಳ ಚಿತ್ರೀಕರಣಕ್ಕೆ ಸ್ವಿಟ್ಜರ್‌ಲ್ಯಾಂಡ್ ಅಚ್ಚುಮೆಚ್ಚಿನ ತಾಣ. ಈ ಹಿನ್ನೆಲೆಯಲ್ಲಿ ಭಾರತೀಯರನ್ನು ಆಕರ್ಷಿಸಲು ಅಲ್ಲಿನ ಪ್ರವಾಸೋದ್ಯಮ ಇಲಾಖೆ ನಟಿ ಶ್ರೀದೇವಿ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿದೆ. ಈಗಾಗಲೇ ಸ್ವಿಟ್ಜರ್‌ಲ್ಯಾಂಡ್‌ನ ಇಂಟರ್‌ಲೇಕರ್‌ನಲ್ಲಿ ಬಾಲಿವುಡ್ ನಿರ್ದೇಶಕ ಯಶ್ ಚೋಪ್ರಾ ಪ್ರತಿಮೆ ಅನಾವರಣಗೊಂಡಿದೆ. ಈಗ ಶ್ರೀದೇವಿಗೆ ಈ ಗೌರವ ಸಿಗಲಿದೆ. ನಟ, ನಿರ್ದೇಶಕ ರಾಜ್‌ಕಪೂರ್‌ ತಮ್ಮ ‘ಸಂಗಮ್‌’ (1964) ಚಿತ್ರಕ್ಕೆ ಮೊದಲ ಬಾರಿಗೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಚಿತ್ರೀಕರಣ ನಡೆಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ನೂರಾರು ಭಾರತೀಯ ಸಿನಿಮಾಗಳಿಗೆ ಅಲ್ಲಿ ಶೂಟಿಂಗ್ ನಡೆದಿದೆ.

2013ರ ಪ್ರತಿಭಟನೆ; ಈಜಿಪ್ಟ್‌ನ ೭೫ ಜನರಿಗೆ ಗಲ್ಲುಶಿಕ್ಷೆ

೨೦೧೩ರಲ್ಲಿ ಮುಸ್ಲಿಂ ಬ್ರದರ್‌ಹುಡ್ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾದವರಲ್ಲಿ ೭೫ ಜನರಿಗೆ ಈಜಿಪ್ಟ್ ಕೈರೋ ನ್ಯಾಯಾಲಯ ಶನಿವಾರ ಗಲ್ಲುಶಿಕ್ಷೆ ವಿಧಿಸಲಾಗಿದೆ. ಹಾಗೂ ಬ್ರದರ್‌ಹುಡ್ ನಾಯಕ ಮೊಹಮೊದ್ ಬ್ಯಾಡಿ ಸೇರಿದಂತೆ ೪೭ ಜನರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿದೆ. ತಮ್ಮ ಆಡಳಿತದ ವಿರುದ್ಧ ದಂಗೆ ಎದ್ದ ಕಾರಣಕ್ಕೆ 2012ರ ಡಿಸೆಂಬರ್‌ನಲ್ಲಿ ಹಲವಾರು ಪ್ರತಿಭಟನಾಕಾರರನ್ನು ಕೊಲ್ಲಿಸಿದ ಪ್ರಕರಣ ಸಂಬಂಧ ಪದಚ್ಯುತ ಮಾಜಿ ಅಧ್ಯಕ್ಷ ಮೋರ್ಸಿ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅದರ ಬೆನ್ನಲ್ಲೇ ಈಗ ಗಲ್ಲುಶಿಕ್ಷೆಯನ್ನೂ ಜಾರಿಗೊಳಿಸಲಾಗಿದೆ.

ವಾಲ್ಮಾರ್ಟ್-ಫ್ಲಿಪ್‌ಕಾರ್ಟ್ ವಹಿವಾಟು; ಕೇಂದ್ರಕ್ಕೆ ₹10,000 ಕೋಟಿ ತೆರಿಗೆ ಸುರಿಮಳೆ!

ಇ- ಕಾಮರ್ಸ್ ದೈತ್ಯ ಬೆಂಗಳೂರು ಮೂಲದ ಫ್ಲಿಪ್ಕಾರ್ಟ್ ಅನ್ನು ಅಮೆರಿಕದ ಚಿಲ್ಲರೆ ಮಾರಾಟ ದೈತ್ಯ ವಾಲ್ಮಾರ್ಟ್ ಖರೀದಿಸಿದ್ದರಿಂದ ಭಾರತ ಸರ್ಕಾರಕ್ಕಂತೂ ಭಾರಿ ಲಾಭವಾಗಿದೆ. ಫ್ಲಿಪ್ಕಾರ್ಟ್ ಅನ್ನು 16 ಬಿಲಿಯನ್ ಡಾಲರ್ ಗಳಿಗೆ ವಾಲ್ಮಾರ್ಟ್ ಖರೀದಿಸಿದೆ. ಈ ಪೈಕಿ 2 ಬಿಲಿಯನ್ ಡಾಲರ್ ಹೊಸದಾಗಿ ಹೂಡಿಕೆ ಮಾಡುತ್ತಿದೆ. ಉಳಿದ 14 ಬಿಲಿಯನ್ ಡಾಲರ್ ಮೌಲ್ಯದ ಫ್ಲಿಪ್ಕಾರ್ಟ್ ಷೇರುಗಳನ್ನು ಖರೀದಿಸಿರುವ ವಾಲ್ಮಾರ್ಟ್ ಅದಕ್ಕೆ 10000 ಕೋಟಿ ರುಪಾಯಿ ತೆರಿಗೆಯನ್ನು ಪಾವತಿಸುತ್ತಿದೆ. ವಾಲ್ಮಾರ್ಟ್ ತೆರಿಗೆ ಪಾವತಿಸಲು ಒಪ್ಪಿರುವುದರೊಂದಿಗೆ ಫ್ಲಿಪ್ಕಾರ್ಟ್ ವಹಿವಾಟಿನ ಬಗ್ಗೆ ಇದ್ದ ಅನಿಶ್ಚಿತತೆ ದೂರವಾಗಿದೆ. ಕೇಂದ್ರ ಸರ್ಕಾರಕ್ಕೆ 10,000 ಕೋಟಿ ರುಪಾಯಿ ತೆರಿಗೆ ಸುರಿಮಳೆಯಾಗಿದೆ!

ಅಮಿತಾಬ್ ಚೌಧರಿ ಆ್ಯಕ್ಸಿಸ್ ಬ್ಯಾಂಕ್ ಮುಂದಿನ ಸಾರಥಿ

ಎಚ್ಡಿಎಫ್ಸಿ ಲೈಫ್ ಮ್ಯಾನೆಜಿಂಗ್ ಡೈರೆಕ್ಟರ್ ಅಮಿತಾಬ್ ಚೌಧರಿ ಅವರು ಅ್ಯಕ್ಸಿಸ್ ಬ್ಯಾಂಕ್ ನ ಮುಂದಿನ ಎಂಡಿ ಮತ್ತು ಸಿಇಒ ಆಗಿ ನಿಯೋಜಿತರಾಗಿದ್ದಾರೆ. ನಾಲ್ಕನೇ ಅವಧಿಗೆ ನೇಮಕವಾಗಿದ್ದ ಶಿಖಾ ಶರ್ಮ ಅವರು ಅವಧಿಗೆ ಮುನ್ನವೇ ವರ್ಷಾಂತ್ಯಕ್ಕೆ ಹುದ್ದೆ ತೊರೆಯುತ್ತಿದ್ದಾರೆ. ಆ ಹುದ್ದೆಗೆ ಅಮಿತಾಬ್ ಚೌಧರಿ ಅವರನ್ನು ನೇಮಕ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ. ಇದರೊಂದಿಗೆ ಆ್ಯಕ್ಸಿಸ್ ಬ್ಯಾಂಕ್ ಮುಂದಿನ ಸಾರಥಿ ಯಾರೆಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಅಮಿತಾಬ್ ಚೌಧರಿ ಅವರ ನೇಮಕಕ್ಕೆ ಅರ್ಬಿಐ ಅನುಮೋದನೆ ನೀಡಿದೆ ಎಂದು ಆ್ಯಕ್ಸಿಸ್ ಬ್ಯಾಂಕ್ ಆಡಳಿತ ಮಂಡಳಿ ಪ್ರಕಟಿಸಿದೆ. ಚೌಧರಿ ಅವರು 2019 ಜನವರಿ 1ರಿಂದ 2021 ಡಿಸೆಂಬರ್ 31ರವರೆಗೆ ಈ ಹುದ್ದೆಯಲ್ಲಿರುತ್ತಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More