ಸೆಪ್ಟೆಂಬರ್‌ ಭಾರಿ ಮಳೆ ಸಾಧ್ಯತೆ; ಪ್ರಕೋಪ ಎದುರಿಸಲು ಸಿದ್ಧವೇ ಬಿಬಿಎಂಪಿ?

ಎಡೆಬಿಡದೆ ಒಂದು ತಾಸು ಮಳೆ ಸುರಿದರೂ ಪ್ರವಾಹ ಉಂಟಾಗುವ ಬೆಂಗಳೂರಿನಲ್ಲಿ ಈ ತಿಂಗಳು ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಹಾಗಾಗಿ, ಈ ಮಳೆ ಎದುರಿಸಲು ಬಿಬಿಎಂಪಿ ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ

ಪ್ರಸಕ್ತ ವರ್ಷದ ಮಳೆಯ ಪ್ರಕೋಪಕ್ಕೆ ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆ ಅಕ್ಷರಶಃ ನೆಲಕಚ್ಚಿವೆ. ಈ ನಡುವೆ, ಎಡೆಬಿಡದೆ ಒಂದು ತಾಸು ಮಳೆ ಸುರಿದರೂ ಪ್ರವಾಹ ಉಂಟಾಗುವ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್ಎನ್‌ಡಿಎಂಸಿ) ಮುನ್ಸೂಚನೆ ನೀಡಿದೆ. ಇದು ಸಹಜವಾಗಿಯೇ ರಾಜಧಾನಿಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಗೆ ಈ ಮಳೆಯನ್ನು ಎದುರಿಸಲು ಸಿದ್ಧವಾಗಿದೆ ಎಂಬ ಪ್ರಶ್ನೆ ಕೂಡ ಮತ್ತೆ ಮೂಡಿದೆ.

“ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ, ೨೦೧೭ರ ಜೂನ್‌ನಿಂದ ೨೦೧೭ರ ಸೆಪ್ಟೆಂಬರ್ ನಡುವೆ ೧,೦೦೦ ಮಿ.ಮೀಗಿಂತಲೂ ಹೆಚ್ಚು ಮಳೆಯಾದ ಉದಾಹರಣೆ ಇದೆ. ಕಳೆದ ೧೫ ವರ್ಷಗಳಿಂದಲೂ ಬೆಂಗಳೂರು ಪ್ರವಾಹದ ಪರಿಸ್ಥಿತಿ ಎದುರಿಸುತ್ತಿದ್ದು, ರಾಜಧಾನಿಯ ಮೂಲಸೌಕರ್ಯ ಹಾಗೂ ಜನಜೀವನದ ಮೇಲೆ ವ್ಯತಿರಿಕ್ತ ಪ್ರಭಾವ ಉಂಟಾಗುತ್ತಿದೆ. ಈವರೆಗೂ ಸುರಿದಿರುವ ಮಳೆ ಕಳೆದ ವರ್ಷಕ್ಕಿಂತ ಕಡಿಮೆ ಇದ್ದರೂ ಬೆಂಗಳೂರು ನಗರ ಮಳೆಯ ದೃಷ್ಟಿಯಿಂದ ಇನ್ನೂ ಸುರಕ್ಷಿತ ವಲಯದಲ್ಲಿ ಇಲ್ಲ,” ಎನ್ನುತ್ತಾರೆ ಕೆಎಸ್ಎನ್‌ಡಿಎಂಸಿ ಅಧಿಕಾರಿಗಳು.

ರಾಜಧಾನಿಯ ಮಳೆ ಪ್ರಕೋಪಕ್ಕೆ ಕೆರೆಗಳು, ಮಳೆನೀರು ಕಾಲುವೆ ಹಾಗೂ ರಾಜಕಾಲುವೆಗಳ ಒತ್ತುವರಿಯೇ ಕಾರಣ ಎನ್ನಲಾಗಿದೆ. ದೊಡ್ಡ ಪ್ರಮಾಣದ ಮಳೆಯ ಪ್ರಕೋಪಕ್ಕೆ ಬೆಂಗಳೂರು ನಗರ ಮೊದಲು ತುತ್ತಾಗಿದ್ದು ೨೦೦೫-೦೬ರಲ್ಲಿ. ಆ ವೇಳೆ ಬೆಂಗಳೂರಿನ ಅನೇಕ ಭಾಗಗಳಲ್ಲಿ ನೀರು ನುಗ್ಗಿತು. ಮಳೆಯಿಂದಾಗಿ ಪ್ರಾಣಹಾನಿಯೂ ಸಂಭವಿಸಿತು. ಆಗ ಆಡಳಿತಗಾರರು ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಎಲ್ಲ ವಿಧದ ಒತ್ತುವರಿಗಳನ್ನು, ಅದರಲ್ಲೂ ಮುಖ್ಯವಾಗಿ ಕೆರೆದಂಡೆಗಳು, ರಾಜಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸುವ ಬಗ್ಗೆ ಹಾಗೂ ಮಳೆನೀರು ಮತ್ತು ಕೊಳಚೆನೀರು ಹರಿಯುವ ಕಣಿವೆಗಳಾದ ವೃಷಭಾವತಿ, ಚಲ್ಲಘಟ್ಟ, ಕೋರಮಂಗಲ ಹಾಗೂ ಹೆಬ್ಬಾಳ ಇವುಗಳನ್ನು ಪುನರ್ ರೂಪಿಸುವ ಬಗ್ಗೆ ಕ್ರಿಯಾಯೋಜನೆ ತಯಾರಿಸಿತು. ಇದರ ಜೊತೆಗೆ ಮಳೆನೀರಿನ ಹರಿವಿಗೆ ಇರುವ ಎಲ್ಲ ಅಡಚಣೆಗಳನ್ನು ತೊಡೆದುಹಾಕುವ ಯೋಜನೆ ರೂಪಿಸಲಾಯಿತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಆ ಕಾರ್ಯಗಳು ನಡೆಯಲಿಲ್ಲ ಎಂಬುದು ಬಿಟ್ಟರೆ ಯಾವ ಕಾರ್ಯವನ್ನು ಎಲ್ಲಿವರೆಗೆ ಪೂರ್ಣಗೊಳಿಸಲಾಗಿದೆ ಎಂಬುದರ ಬಗ್ಗೆ ಈವರೆಗೆ ಮಾಹಿತಿ ಇಲ್ಲ.

ಅಲ್ಲದೆ, ಕಾಲಕಾಲಕ್ಕೆ ಸರಿಯಾಗಿ ಪ್ರಮುಖ ರಾಜಕಾಲುವೆ ಹಾಗೂ ಕೆರೆಗಳ ಹೂಳು ತೆಗೆಯದಿರುವುದು, ಚರಂಡಿಗಳಿಂದ ಕಟ್ಟಡ ಸಾಮಗ್ರಿ ಭಗ್ನಾವಶೇಷಗಳನ್ನು ತಗೆದುಹಾಕದಿರುವುದು ಹಾಗೂ ರಾಜಕಾಲುವೆಯ ಎರಡು ದಂಡೆಗಳಲ್ಲಿನ ಅಡಚಣೆಗಳನ್ನು ನಿವಾರಿಸದೆ ಇರುವುದು, ರಸ್ತೆಗಳ ನಿರ್ಮಾಣ ಕಳಪೆಯಿಂದ ಕೂಡಿರುವುದು ಹಾಗೂ ಗುತ್ತಿಗೆದಾರರು ಪರಿಪಾಲನಾ ಕೆಲಸ ನಿರ್ವಹಿಸದೆ ಇರುವುದರಿಂದಾಗಿ ಮಳೆಯ ಪ್ರವಾಹ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ಮುಖ್ಯ ಕಣಿವೆಗಳಿಗೆ ರಾಜಕಾಲುವೆಗಳನ್ನು ಜೋಡಿಸಲಾಗಿದ್ದು, ರಾಜಕಾಲುವೆಗಳ ಒಟ್ಟು ಉದ್ದ ೮೪೨ ಕಿಮೀ. ಇದರಲ್ಲಿ ೩೫೦ ಕಿಮೀನಷ್ಟು ರಾಜಕಾಲುವೆಯ ದುರಸ್ತಿ ಮಾಡಲಾಗಿದೆ ಎನ್ನಲಾಗಿದೆ. ರಾಜಕಾಲುವೆಗಳ ದುರಸ್ತಿ ಹಾಗೂ ಮರುನಿರ್ಮಾಣಕ್ಕಾಗಿ ಈವರೆಗೂ ೧,೦೪೮ ಕೋಟಿ ರು. ಖರ್ಚು ಮಾಡಲಾಗಿರುವ ಕುರಿತು ನಾಲ್ಕನೇ ರಾಜ್ಯ ಹಣಕಾಸು ಆಯೋಗದ ವರದಿಯಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ ಸಂಗತಿ. ಆದರೆ, ಇಷ್ಟೆಲ್ಲ ಹಣ ಖರ್ಚಾಗಿದ್ದರೂ ರಾಜಕಾಲುವೆಗಳಿಂದ ಉಂಟಾಗುತ್ತಿರುವ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.

ನಾವು ಕೂಡ ಮಳೆಯಾಗಲಿ ಎಂದೇ ಕಾಯುತ್ತಿದ್ದೇವೆ. ಆದರೂ ಮಳೆಯಾಗಿಲ್ಲ. ಒಂದು ವೇಳೆ ಮಳೆಯಾದರೆ ಬಿಬಿಎಂಪಿ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ
ಎನ್ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

೨೦೧೬ರ ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹೃದಯಭಾಗ ಹೆಚ್ಚಿನ ಹಾನಿಗೊಳಗಾಗಿದ್ದನ್ನು ಇಲ್ಲಿ ನೆನೆಯಬಹುದು. ಆ ವೇಳೆ, ಪ್ರಾಣಹಾನಿಯೂ ಉಂಟಾಗಿತ್ತು. ಅಪಾರ ಆಸ್ತಿಪಾಸ್ತಿ ಹಾನಿಯಾಯಿತು. ತಕ್ಷಣವೇ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳಿಂದ ತ್ವರಿತವಾಗಿ ಕಾಲುವೆ ಒತ್ತುವರಿ ತೆರವು ಕಾರ್ಯಾ ಆರಂಭವಾಯಿತು. ಆದರೆ, ತೆರವು ಕಾರ್ಯಾಚರಣೆ ವೇಳೆ ನಟರ ಹಾಗೂ ಪ್ರಭಾವಿ ರಾಜಕಾರಣಿಗಳ ಆಸ್ತಿಗಳು ಯಾವಾಗ ಮಧ್ಯೆ ಬಂದವೋ ಅಲ್ಲಿಗೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಿಂತುಬಿಟ್ಟಿತು.

೨೦೧೬ರಲ್ಲಿ ನಡೆದ ತೆರವು ಕಾರ್ಯಾಚರಣೆಗಳ ವಿವರ

  • ಬೊಮ್ಮನಹಳ್ಳಿ ವಲಯದ ಅರೆಕೆರೆ ವಾರ್ಡ್‍ನ ನ್ಯಾನಪ್ಪನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ 300 ಮೀಟರ್ ರಾಜಕಾಲುವೆ ಒತ್ತುವರಿ ಹಾಗೂ ಎರಡು ಕಟ್ಟಡ, 3 ಖಾಲಿ ಜಾಗ ತೆರವು.
  • ಯಲಹಂಕ ವ್ಯಾಪ್ತಿಯ ಚೌಡೇಶ್ವರಿ ವಾರ್ಡ್‍ನ ಹಾರೋಹಳ್ಳಿಯಲ್ಲಿ 1,200 ಮೀಟರ್ ರಾಜಕಾಲುವೆ ಒತ್ತುವರಿ ಹಾಗೂ 6 ಖಾಲಿ ಜಾಗ ತೆರವು.
  • ದಾಸರಹಳ್ಳಿಯ ಶೆಟ್ಟಿಹಳ್ಳಿ ವಾರ್ಡ್ ಮ್ಯಾದರಹಳ್ಳಿ ಗ್ರಾಮದಲ್ಲಿ 1,500 ಮೀಟರ್ ರಾಜಕಾಲುವೆ ಒತ್ತುವರಿ ಹಾಗೂ 4 ಖಾಲಿ ಜಾಗ ತೆರವು.
  • ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‍ನ ಹರಳೂರು ಗ್ರಾಮದಲ್ಲಿ 500 ಮೀಟರ್ ರಾಜಕಾಲುವೆ ಒತ್ತುವರಿ ಹಾಗೂ 4 ಖಾಲಿ ಜಾಗ ತೆರವು.

ರಾಜಕಾಲುವೆ ಒತ್ತುವರಿ ಕುರಿತಂತೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ, “ರಾಜಕಾಲುವೆ ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದ್ದರು. ಆದರೆ, ರಾಜರಾಜೇಶ್ವರಿ ನಗರ ವಲಯದ ಐಡಿಯಲ್ಸ್‌ ಹೋಮ್ಸ್‌ ಬಡಾವಣೆಯಲ್ಲಿನ ನಟ ದರ್ಶನ್‌ ಮನೆ ಹಾಗೂ ಮಾಜಿ ಸಚಿವ ಶಾಮನೂರು ಶಿವಂಶಕರಪ್ಪ ಅವರ ಆಸ್ಪತ್ರೆ ರಾಜಕಾಲುವೆ ಒತ್ತುವರಿ ಜಾಗದಲ್ಲಿರುವುದು ಭೂಮಾಪನ ವರದಿಯಲ್ಲಿ ಖಚಿತಗೊಂಡ ತಕ್ಷಣವೇ ತೆರವು ಕಾರ್ಯಾಚರಣೆಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿದೆ.

ನಂತರದಲ್ಲಿ ರಾಜಕಾಲುವೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯಿಂದ 20 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿ, ಬಿಲ್ಡರ್‌ಗಳು ಸೇರಿ ಒಟ್ಟು 26 ಮಂದಿ ವಿರುದ್ಧ ಬಿಬಿಎಂಪಿ ಆಯುಕ್ತರು ಕ್ರಿಮಿನಲ್‌ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಬಿಎಂಟಿಎಫ್ ಅಧಿಕಾರಿಗಳು ಈಗ ‘ಬಿ’ ರಿಪೋರ್ಟ್‌ ಸಲ್ಲಿಸಿದ್ದು, ನಗರಾಭಿವೃದ್ಧಿ ಇಲಾಖೆಯ ೨೦ ಎಂಜಿನಿಯರ್‌ಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹೀಗಾಗಿ, ಇವರ ವಿರುದ್ಧ ಸಿವಿಲ್ ದಾವೆ ಹೂಡಿ ಇವರಿಗೆ ಹಿಂಬಡ್ತಿ ನೀಡಲು ನಗರಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ : ಪ್ರಭಾವಿಗಳಿಂದ ಜಮೀನು ಒತ್ತುವರಿ; ವಿಶೇಷ ನ್ಯಾಯಾಲಯಕ್ಕೆ ಮೊರೆ ಇಟ್ಟ ಬಿಬಿಎಂಪಿ

ಈ ಮಧ್ಯಯೇ, ಮಳೆಗಾಲದಲ್ಲಿ ಉಂಟಾಗುತ್ತಿರುವ ಅನಾಹುತಗಳ ತಡೆಗಾಗಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕುರಿತಂತೆ ಇತ್ತೀಚೆಗೆ ಮಾತನಾಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, “ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಪುನರಾರಂಭಿಸಲಾಗುವುದು. ಈ ಕುರಿತು ಭೂಮಾಪನ ಇಲಾಖೆ ಹೆಚ್ಚುವರಿ ನಿರ್ದೇಶಕರೊಂದಿಗೆ ಚರ್ಚಿಸಲಾಗಿದ್ದು, ಭೂಮಾಪಕರ ಮೂಲಕ ಕಾಲುವೆಗಳ ಮ್ಯಾಪಿಂಗ್‌ ಮಾಡಲು ತಿಳಿಸಲಾಗಿದೆ. ಈ ಸರ್ವೇ ಕಾರ್ಯ ಮುಗಿಯುತ್ತಿದ್ದಂತೆ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು,” ಎಂದಿದ್ದಾರೆ.

ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಕುರಿತು ಮುನ್ಸೂಚನೆ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್ಎನ್‌ಡಿಎಂಸಿ) ಮಾಹಿತಿ ಕುರಿತು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅವರನ್ನು ‘ದಿ ಸ್ಟೇಟ್’ ಮಾತನಾಡಿಸಿದಾಗ ಕೆಎಸ್ಎನ್‌ಡಿಎಂಸಿ ಮುನ್ಸೂಚನೆಯನ್ನು ಅಲ್ಲಗಳೆಯುತ್ತ ಪ್ರತಿಕ್ರಿಯಿಸಿ, “ನಾವು ಕೂಡ ಮಳೆಯಾಗಲಿ ಎಂದೇ ಕಾಯುತ್ತಿದ್ದೇವೆ. ಆದರೂ ಮಳೆಯಾಗಿಲ್ಲ. ಒಂದು ವೇಳೆ, ಮಳೆಯಾದರೆ ಬಿಬಿಎಂಪಿ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ,” ಎಂದು ತಿಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More