ಎನ್‌ಬಿಎಸ್ಎ ಆದೇಶದ ನಂತರವೂ ಕ್ಷಮೆ ಯಾಚಿಸದ ರಿಪಬ್ಲಿಕ್ ಟಿವಿ

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಅಸಮಂಜಸ ಟೀಕೆಗಳಿಗಾಗಿ ಪ್ರೇಕ್ಷಕರಿಂದ ಕ್ಷಮೆ ಯಾಚಿಸುವಂತೆ ಎನ್‌ಬಿಎಸ್‌ಎ ನಿರ್ದೇಶನ ನೀಡಿತ್ತು. ಆದರೆ, ಅಂತಿಮ ಗಡುವು ಮುಗಿದುಹೋದರೂ ಚಾನೆಲ್ ಕ್ಷಮೆ ಯಾಚಿಸಿಲ್ಲ ಎನ್ನುವ ‘ದಿ ವೈರ್‌’ ವರದಿಯ ಭಾವಾನುವಾದ ಇಲ್ಲಿದೆ

ಸುದ್ದಿ ಮಾಧ್ಯಮ ಸಂಘಟನೆಯ ಸ್ವತಂತ್ರ ಸಂಘಟನೆಯಾಗಿರುವ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿ (ಎನ್‌ಬಿಎಸ್‌ಎ) ಕಳೆದ ಆಗಸ್ಟ್ ೩೦ರಂದು, ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಮಾಲೀಕತ್ವದ ರಿಪಬ್ಲಿಕ್ ಟಿವಿಗೆ ಪೂರ್ಣತೆರೆಯ ಕ್ಷಮೆ ಯಾಚಿಸಬೇಕು ಎಂದು ನಿರ್ದೇಶನ ನೀಡಿದೆ. ಆದರೆ, ಈವರೆಗೂ ರಿಪಬ್ಲಿಕ್ ಟಿವಿ ಕ್ಷಮಾಪಣೆ ಯಾಚಿಸಿಲ್ಲ. ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮಾಡಿರುವ ಅಸಮಂಜಸವಾದ ಟೀಕೆಗಳಿಗಾಗಿ ಪ್ರೇಕ್ಷಕರಿಂದ ಕ್ಷಮೆ ಯಾಚಿಸುವಂತೆ ಎನ್‌ಬಿಎಸ್‌ಎ ಈ ನಿರ್ದೇಶನ ನೀಡಿತ್ತು.

ಆದರೆ, ಎನ್‌ಬಿಎಸ್‌ಎ ನೀಡಿದ ಅಂತಿಮ ಗಡುವು ೨೦೧೮ ಸೆಪ್ಟೆಂಬರ್ ೭ರಂದು ಕೊನೆಯಾಗಿದ್ದರೂ ರಿಪಬ್ಲಿಕ್ ಟಿವಿ ಕ್ಷಮಾಪಣೆ ಕೇಳಿಲ್ಲ. ಎ ಸಿಂಗ್ ಮತ್ತು ಪ್ರತಿಷ್ಠಾ ಸಿಂಗ್ ಅವರು ರಿಪಬ್ಲಿಕ್ ಟಿವಿ ವಿರುದ್ಧ ಎನ್‌ಬಿಎಸ್‌ಎಗೆ ದೂರು ಕೊಟ್ಟಿದ್ದರು. ರಿಪಬ್ಲಿಕ್ ಟಿವಿ ವರದಿಗಾರರಾದ ಶಿವಾನಿ ಗುಪ್ತಾ ಅವರು ವಡಗಂ ಶಾಸಕ ಜಿಗ್ನೇಶ್ ಮೇವಾನಿ ಅವರ ಕಾರ್ಯಕ್ರಮ ‘ಫ್ಲಾಪ್‌ ಶೋ’ ಎಂದು ವರದಿ ಮಾಡುತ್ತಿರುವಾಗ ಅವರ ಮೇಲೆ ದೂರುದಾರರು ದೌರ್ಜನ್ಯ ಎಸಗಿದ್ದಾರೆ ಎಂದು ರಿಪಬ್ಲಿಕ್ ಟಿವಿ ವಿಡಿಯೋವೊಂದರಲ್ಲಿ ಸುದ್ದಿ ಪ್ರಸಾರ ಮಾಡಿತ್ತು.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಮೋದಿ ಕುರಿತ ಟೀಕೆ ಹತ್ತಿಕ್ಕಲು ಪ್ರಯತ್ನಿಸುವ ಮಾಧ್ಯಮಗಳ ವಿರುದ್ಧ ಕಿಡಿ

“ಜಿಗ್ನೇಶ್ ಮೇವಾನಿಯ ಫ್ಲಾಪ್‌ಶೋನಲ್ಲಿ ಉಪಸ್ಥಿತರಿದ್ದ ಆ ವ್ಯಕ್ತಿಗಳ ಮುಖ ಸ್ಪಷ್ಟವಾಗಿ ಕಾಣುವಂತೆ ವೃತ್ತ ಹಾಕಿ ತೋರಿಸಲು ನಾನು ಬಯಸುತ್ತೇನೆ. ಆ ಅಗ್ಗದ ಗೂಂಡಾಗಳ ಕುಟುಂಬಸ್ಥರು ಈ ಕಾರ್ಯಕ್ರಮ ನೋಡಬೇಕು ಎಂದು ಬಯಸುತ್ತೇನೆ. ಈ ವ್ಯಕ್ತಿಗಳನ್ನು ಹೆಸರಿಸಿ ಅವರ ಮರ್ಯಾದೆ ಕಳೆಯೋಣ,” ಎಂದು ಅರ್ನಬ್ ಗೋಸ್ವಾಮಿ ಅವರು ಹೇಳುತ್ತ, ಸಣ್ಣ ವಿಡಿಯೋವನ್ನು ತಮ್ಮ ತೆರೆಯ ಮೇಲೆ ತೋರಿಸಿ ಚರ್ಚೆ ಆರಂಭಿಸಿದ್ದರು.

ಅತಿ ದೀರ್ಘ ಚರ್ಚೆಯ ಸಂದರ್ಭದಲ್ಲಿ ಹಲವು ಬಾರಿ ಅರ್ನಬ್ ಗೋಸ್ವಾಮಿ ದೂರುದಾರರನ್ನು ಅವಾಚ್ಯ ಪದ ಪ್ರಯೋಗಿಸಿ ಟೀಕಿಸಿದ್ದರು. ದೂರುದಾರರು ಹಲವು ಇಮೇಲ್‌ಗಳನ್ನು ಕಳುಹಿಸಿದ ನಂತರ ಚಾನಲ್‌ನ ಯುಟ್ಯೂಬ್ ಖಾತೆಯಿಂದ ವಿಡಿಯೋ ತೆಗೆಯಲಾಗಿದೆ. ಆದರೆ ಚಾನಲ್‌ನ ವೆಬ್‌ಸೈಟ್‌ನಲ್ಲಿ ಚರ್ಚೆಯ ವಿವರಗಳು ಮತ್ತು ದೃಶ್ಯಗಳು ಈಗಲೂ ಇವೆ.

ವಿಡಿಯೋದಲ್ಲಿ ಗುಪ್ತಾ ಅವರು ಸಣ್ಣ ಸಮೂಹವನ್ನು ಸುತ್ತುವರಿದು ಕಾರ್ಯಕ್ರಮಕ್ಕೆ ಬೆಂಬಲವಿಲ್ಲ ಎಂದು ವರದಿ ಮಾಡುತ್ತಿದ್ದರು. ನಂತರ ಪೊಲೀಸರ ಕಾವಲಿನಲ್ಲಿ ಆಕೆ ಹೊರಬಂದಿದ್ದರು. ಆರಂಭದ ಉತ್ತರದಲ್ಲಿ ರಿಪಬ್ಲಿಕ್ ಟಿವಿ, “ಸಿಂಗ್ ಅವರು ಅನುಚಿತವಾಗಿ ಮತ್ತು ಉಗ್ರವಾಗಿ ವರ್ತಿಸಿ, 'ಸುಳ್ಳು ಹೇಳುತ್ತಿದ್ದಾಳೆ' ಎನ್ನುತ್ತ ವರದಿಗಾರರ ಕೆಲಸಕ್ಕೆ ಅಡ್ಡಿ ಮಾಡಿದ್ದರು,” ಎಂದು ಹೇಳಿತ್ತು. ದೂರುದಾರರು ವರದಿಗಾರರ ಮೇಲೆ ಹಲವು ಘೋಷಣೆಗಳನ್ನು ಕೂಗಿದ್ದರು ಎಂದೂ ರಿಪಬ್ಲಿಕ್ ಟಿವಿ ಹೇಳಿತ್ತು.

ರಿಪಬ್ಲಿಕ್ ಟಿವಿಯ ಆರೋಪಗಳಿಗೆ ಉತ್ತರಿಸಿರುವ ಸಿಂಗ್, “ಆ ವಿಡಿಯೋದಲ್ಲಿ ‘ನಿಮಗೆ ಯಾರೂ ತೊಂದರೆ ಕೊಡುತ್ತಿಲ್ಲ. ಏಕೆ ಸುಳ್ಳು ಹೇಳುತ್ತಿದ್ದೀರಿ?’ ಎಂದು ಹೇಳಿದ್ದೇವೆ. ಇದನ್ನು ಅವಾಚ್ಯ ಪದಗಳನ್ನು ಬಳಸಿ ತಮ್ಮ ಕಾರ್ಯಕ್ರಮದಲ್ಲಿ ವ್ಯಕ್ತಿಗತ ಟೀಕೆ ಮಾಡಿದ್ದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ. ಸಿಂಗ್ ಅವರು ಚಾನೆಲ್ ಕ್ಷಮಾಪಣೆ ಕೇಳಬೇಕು ಎಂದು ಹೇಳಿದ್ದಾರೆ. ಕಾರ್ಯಕ್ರಮ ಪ್ರಸಾರವಾದ ನಂತರ ಕುಟುಂಬಸ್ಥರು ಆಘಾತ ವ್ಯಕ್ತಪಡಿಸಿದ್ದು, ತಮ್ಮ ಗೌರವಕ್ಕೆ ಚ್ಯುತಿಯಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಆಗಸ್ಟ್ ೩೦ರಂದು ಎನ್‌ಬಿಎಸ್‌ಎ ನೀಡಿದ ಆದೇಶದಲ್ಲಿ, “ವಿಡಿಯೋ ದೃಶ್ಯಾವಳಿಯಲ್ಲಿ ದೂರುದಾರರು ವರದಿಗಾರರ ಮೇಲೆ ಅಕ್ಷ್ಯಮ್ಯವಾಗಿ ವರ್ತಿಸಿರುವ ವಿವರವಿಲ್ಲ,” ಎಂದು ಅಭಿಪ್ರಾಯಪಟ್ಟಿದೆ. ಅರ್ನಬ್ ಗೋಸ್ವಾಮಿ ಅವರು ತಮ್ಮ ಕಾರ್ಯಕ್ರಮದಲ್ಲಿ ಬಳಸಿದ ಪದಗಳ ಬಗ್ಗೆ ಎನ್‌ಬಿಎಸ್‌ಎ ಗಂಭೀರವಾದ ಪ್ರತಿಕ್ರಿಯೆ ನೀಡಿದೆ. “ನಿರೂಪಣೆ ಮಾಡುವಾಗ ಅರ್ನಬ್ ಗೋಸ್ವಾಮಿ ಬಳಸಿದ ಪದಗಳು ಅನಗತ್ಯವಾಗಿದ್ದು, ಅವು ಸಮರ್ಥನೀಯವಲ್ಲ. ಇದು ಮಾಧ್ಯಮ ಸಂಸ್ಥೆಯ ಗುಣಮಟ್ಟವನ್ನು ಉಲ್ಲಂಘಿಸಿದೆ,” ಎಂದು ಎನ್‌ಬಿಎಸ್‌ಎ ಹೇಳಿದೆ.

ರಿಪಬ್ಲಿಕ್ ಟಿವಿ ಕ್ಷಮಾಪಣೆ ಕೇಳುವ ಪ್ರಸಂಗ ಬಂದಿರುವುದು ಇದೇ ಮೊದಲಲ್ಲ. ಹಿಂದೆ ಎಬಿಪಿ ನ್ಯೂಸ್ ವರದಿಗಾರನಿಗೂ ಅರ್ನಬ್ ಗೋಸ್ವಾಮಿ ಕ್ಷಮೆ ಯಾಚಿಸಬೇಕಾಗಿ ಬಂದಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More