ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಕಿವಿಗೆ ಹೂವು ಇಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ: ಡಿ ಕೆ ಶಿವಕುಮಾರ್‌

“ಬೆಂಗಳೂರಿಗೆ ಕಿವಿಗೆ ಹೂವು ಇಟ್ಟುಕೊಂಡು ಬಂದಿಲ್ಲ, ರಾಜಕಾರಣ ಮಾಡಲು ಬಂದಿದ್ದೇನೆ. ರಾಜಕೀಯದಲ್ಲಿ ಗೇಮ್‌ ಆಡುವುದಕ್ಕೆ ನನಗೂ ತಿಳಿದಿದೆ. ಯಡಿಯೂರಪ್ಪ ಅವರ ಮೇಲಿನ ಪ್ರಕರಣಗಳು ಕೋರ್ಟ್‌ನಲ್ಲಿವೆ,” ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. “ಕೆಲವು ಮಾಧ್ಯಮಗಳು ನನ್ನ ಬಂಧನವಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿವೆ. ಯಾವುದೇ ತನಿಖೆಗೆ ನಾನು ಸಿದ್ಧವಾಗಿದ್ದೇನೆ. ಐಟಿ ಅಧಿಕಾರಿಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ವಿಚಾರಣೆಗೆ ತೆರಳಿದ್ದೆ. ದೆಹಲಿಯಲ್ಲಿ ನನಗೆ ಎರಡು ಮನೆಗಳಿವೆ. ಆದರೆ, ಅಕ್ರಮ ಆಸ್ತಿ ನನ್ನ ಬಳಿ ಇಲ್ಲ. ೮೦ ವಕೀಲರ ತಂಡದ ಜೊತೆ ದಿನವೂ ಚರ್ಚೆ ಮಾಡುತ್ತಿದ್ದೇನೆ. ರಾಜಕೀಯವಾಗಿ ಪ್ರಬಲವಾಗಿರುವವರನ್ನು ಟಾರ್ಗೆಟ್‌ ಮಾಡುವುದು ಸಹಜ,” ಅವರು ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ; ಮುಂದಿನ ವಾರದಿಂದ ಬಸ್‌ ಪ್ರಯಾಣ ದರ ಹೆಚ್ಚಳ

ದಿನೇದಿನೇ ಪೆಟ್ರೋಲ್‌, ಡೀಸೆಲ್‌ ಬೆಲೆ ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಪರಿಷ್ಕೃತ ದರ ಮುಂದಿನ ವಾರದಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಹೇಳಿದರು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಸಾರಿಗೆ ಬಸ್‌ ಪ್ರಯಾಣ ದರವನ್ನು ಶೇ ೧೮ರಷ್ಟು ಹೆಚ್ಚಿಸುವ ಕುರಿತು ಪ್ರಸ್ತಾವ ಬಂದಿತ್ತು. ಆದರೆ, ಅದನ್ನು ತಡೆಹಿಡಿಯಲಾಗಿತ್ತು. ಈಗ ದಿನಂಪ್ರತಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಆಗುತ್ತಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ದೇಣಿಗೆ ಸಂಗ್ರಹ: ಎಎಪಿ ಮತ್ತು ಶಿವಸೇನೆಗಿಂತಲೂ ಕುಸಿತ ಕಂಡ ಕಾಂಗ್ರೆಸ್‌

ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ವಿಚಾರದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದ್ದು, ಈಚೆಗಷ್ಟೇ ಅವತರಿಸಿದ ಆಮ್‌ ಆದ್ಮಿ ಪಕ್ಷ ಹಾಗೂ ಶಿವಸೇನೆ ಪಕ್ಷಗಳು ಪಡೆದ ಒಟ್ಟಾರೆ ದೇಣಿಗೆಗಿಂತಲೂ ಕಾಂಗ್ರೆಸ್‌ ಕಡಿಮೆ ದೇಣಿಗೆ ಪಡೆದಿದೆ. ಎಡಿಆರ್‌ ದಾಖಲೆಯ ಪ್ರಕಾರ, ೨೦೧೬-೧೭ನೇ ಸಾಲಿನಲ್ಲಿ ಶಿವಸೇನೆ (೨೬ ಕೋಟಿ ರುಪಾಯಿ) ಮತ್ತು ಆಮ್‌ ಆದ್ಮಿ ಪಕ್ಷಗಳ (೨೫ ಕೋಟಿ ರುಪಾಯಿ) ದೇಣಿಗೆ ಸಂಗ್ರಹವು ೫೧ ಕೋಟಿಗೆ ಏರಿಕೆಯಾಗಿದೆ. ಆದರೆ, ಕಾಂಗ್ರೆಸ್‌ಗೆ ೪೨ ಕೋಟಿ ದೇಣಿಗೆ ದೊರೆತಿದೆ. ಬಿಜೆಪಿಗೆ ೫೩೨ ಕೋಟಿ ದೇಣಿಗೆ ದೊರೆತಿದ್ದು, ಅತಿಹೆಚ್ಚು ದೇಣಿಗೆ ಸಂಗ್ರಹಿಸುವ ಮೂಲಕ ಬಿಜೆಪಿ ಅಗ್ರಸ್ಥಾನ ಪಡೆದಿದೆ.

ವಿರೋಧ ಪಕ್ಷಗಳು ಸುಳ್ಳು ಹರಡುತ್ತಿದ್ದು, ಮಹಾಮೈತ್ರಿ ವಿಫಲವಾಗಲಿದೆ: ಮೋದಿ

ಅಧಿಕಾರದಲ್ಲಿದ್ದಾಗ ವಿಫಲವಾದ ವಿರೋಧ ಪಕ್ಷಗಳು, ವಿರೋಧ ಪಕ್ಷದಲ್ಲಿದ್ದಾಗಲೂ ವಿಫಲವಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹೇಳಿದ್ದಾರೆ. ನೀತಿಗಳನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಆದರೆ, ವಿರೋಧ ಪಕ್ಷಗಳ ಸುಳ್ಳುಗಳನ್ನು ಎದುರಿಸಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷಗಳ ನಾಯಕತ್ವದ ಬಗ್ಗೆ ಯಾರಿಗೂ ತಿಳಿದಿಲ್ಲ. ಅವರ ನೀತಿಗಳಲ್ಲಿ ಸ್ಪಷ್ಟತೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿರೋಧ ಪಕ್ಷಗಳ ಉದ್ದೇಶವೇ ಭ್ರಷ್ಟವಾದುದು ಎಂದು ಮೋದಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಹುಲ್‌ ನಾಯಕತ್ವಕ್ಕೆ ವಿಪಕ್ಷಗಳ ನಾಯಕರು ತಾವಾಗಿಯೇ ಒಪ್ಪಿಗೆ ನೀಡಲಿದ್ದಾರೆ: ಖರ್ಗೆ

ವಿರೋಧ ಪಕ್ಷಗಳ ನಾಯಕರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಯವರ ನಾಯಕತ್ವವನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರ ಕೆಲಸಗಳಿಗೆ ವಿರೋಧ ಪಕ್ಷಗಳ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಇದರರ್ಥ ರಾಹುಲ್‌ ಬಗ್‌ಗೆ ಅವರಿಗೆ ಒಪ್ಪಿಗೆ ಇದೇ ಎಂದರ್ಥ. ಮುಂದಿನ ದಿನಗಳಲ್ಲಿ ರಾಹುಲ್‌ ನಾಯಕತ್ವಕ್ಕೆ ಒಪ್ಪಿಗೆ ಸೂಚಿಸಬಹುದು, ಜಮ್ಮು ಮತ್ತು ಕಾಶ್ಮೀರದಿಂದ ಕಾಶ್ಮೀರದವರೆಗೆ, ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ರಾಹುಲ್‌ ಮಾತುಗಳನ್ನು ಕೇಳಲು ಜನ ಸೇರುತ್ತಿದ್ದಾರೆ. ವಿರೋಧ ಪಕ್ಷಗಳಲ್ಲಿ ಉಳಿದ ಯಾವ ನಾಯಕರಿಗೆ ಈ ವರ್ಚಸ್ಸು ಇದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಅಕ್ರಮ ವಲಸಿಗರ ವಿರುದ್ಧ ಕ್ರಮ; ನೆಲಮಂಗಲ ಸಮೀಪ ಬಂಧನ ಕೇಂದ್ರ ಸ್ಥಾಪನೆ

ಅಕ್ರಮ ವಲಸಿಗರು ಮತ್ತು ಕಾನೂನುಬಾಹಿರವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಬಂಧಿಸಲು ಸರ್ಕಾರ ಮುಂದಾಗಿದ್ದು, ಬೆಂಗಳೂರಿನ ನೆಲಮಂಗಲದ ಸಮೀಪ ಬಂಧನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ವೀಸಾ ಅವಧಿ ಮುಗಿದರೂ ಭಾರತದಲ್ಲಿ ನೆಲೆಸಿರುವ ವಿದೇಶಿಯರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದು, ಆಫ್ರಿಕಾ , ಬಾಂಗ್ಲಾದೇಶದ ಪ್ರಜೆಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಲ್ಲದೆ, ಅಕ್ರಮ ಚಟುವಟಿಕೆಯಲ್ಲಿ ನೆಲೆಸಿರುವುದು ಪತ್ತೆಯಾಗಿದೆ. ಇವರ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ತಿಳಿಸಿದ್ದಾರೆ.

ಏಷ್ಯಾ ಕಪ್‌: ಹಾಂಕಾಂಗ್ ವಿರುದ್ಧದ ಭಾರತ ಪಂದ್ಯಕ್ಕೆ ಏಕದಿನ ಮಾನ್ಯತೆ

ಇದೇ ತಿಂಗಳು ೧೫ರಿಂದ ದುಬೈನಲ್ಲಿ ಶುರುವಾಗಲಿರುವ ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಭಾರತ ಮತ್ತು ಹಾಂಕಾಂಗ್ ನಡುವಣದ ಪಂದ್ಯಕ್ಕೆ ಏಕದಿನ ಪಂದ್ಯದ ಮಾನ್ಯತೆ ದೊರಕಿದೆ. ಭಾರತ ಮಾತ್ರವಲ್ಲದೆ, ಪಾಕಿಸ್ತಾನ ಕೂಡ ಲೀಗ್ ಹಂತದಲ್ಲಿ ಹಾಂಕಾಂಗ್ ವಿರುದ್ಧ ಕಾದಾಡಲಿದೆ. ಪ್ರಸಕ್ತ ಹಾಂಕಾಂಗ್ ತಂಡ ಐಸಿಸಿಯ ಸಹ ಸದಸ್ಯತ್ವ ಪಡೆದಿದ್ದು, ಇನ್ನೂ ಏಕದಿನ ಪಂದ್ಯದ ಮಾನ್ಯತೆ ಸಿಕ್ಕಿರಲಿಲ್ಲ. ಆದರೆ, ಯುಎಇ ತಂಡದ ವಿರುದ್ಧ ಇತ್ತೀಚಿನ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಒಂದು ದಿನದ ಕ್ರಿಕೆಟ್ ಮಾನ್ಯತೆ ಪಡೆದಿತ್ತು. ದೇಶವೊಂದು ಏಕದಿನ ಪಂದ್ಯದ ಮಾನ್ಯತೆ ಪಡೆಯದೆ ಹೋದರೆ, ಅದು ಆಡುವ ಒಂದು ದಿನದ ಪಂದ್ಯಗಳನ್ನು ಅಧಿಕೃತವಾಗಿ ಪರಿಗಣಿಸುವುದಿಲ್ಲ. ಆದರೆ, ಬಿಸಿಸಿಐನ ವಿಶೇಷ ಮನವಿಯನ್ನು ಪುರಸ್ಕರಿಸಿ ಐಸಿಸಿ ಈ ಪಂದ್ಯಗಳಿಗೆ ಏಕದಿನ ಪಂದ್ಯದ ಮಾನ್ಯತೆ ನೀಡಿದೆ.

ಫಾಲೋ ಆನ್ ತಪ್ಪಿಸಿದ ವಿಹಾರಿ-ಜಡೇಜಾ ಜೋಡಿ

ಆತಿಥೇಯ ಇಂಗ್ಲೆಂಡ್ ವಿರುದ್ಧ ಪ್ರವಾಸಿ ಭಾರತ ತಂಡ ಅನುಭವಿಸಿದ್ದ ಮಹಾನ್ ಹಿನ್ನಡೆಯನ್ನು ಚೊಚ್ಚಲ ಪಂದ್ಯವನ್ನಾಡುತ್ತಿರುವ ಹನುಮ ವಿಹಾರಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ತಪ್ಪಿಸಿದರು. ಕೇವಲ ೧೬೦ ರನ್‌ಗಳಿಗೆ ೬ ವಿಕೆಟ್ ಕಳೆದುಕೊಂಡು ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ಹನುಮ ಮತ್ತು ಜಡೇಜಾ ಆಪದ್ಬಾಂಧವರಾದರು. ವಿಹಾರಿ ಏಳನೇ ವಿಕೆಟ್‌ಗೆ ೭೭ ರನ್ ಜೊತೆಯಾಟವಾಡಿ ಅಪಾಯದ ಅಂಚಿನಲ್ಲಿದ್ದ ತಂಡವನ್ನು ಪಾರು ಮಾಡಿದರು. ೧೨೪ ಎಸೆತಗಳನ್ನು ಎದುರಿಸಿದ ವಿಹಾರಿ ೭ ಬೌಂಡರಿ, ೧ ಸಿಕ್ಸರ್ ಸೇರಿದ ೫೬ ರನ್‌ ಗಳಿಸಿ ಮೊಯೀನ್ ಅಲಿ ಬೌಲಿಂಗ್‌ನಲ್ಲಿ ಜಾನಿ ಬೇರ್‌ಸ್ಟೋಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ರವೀಂದ್ರ ಜಡೇಜಾ ಶತಕದತ್ತ ಮುನ್ನಡೆದಿದ್ದರು. ೯೪ ಓವರ್‌ಗಳಾದಾಗ ಭಾರತ ೯ ವಿಕೆಟ್ ನಷ್ಟಕ್ಕೆ ೨೯೨ ರನ್ ಗಳಿಸಿತ್ತು. ಜಡೇಜಾ (೮೬) ಮತ್ತು ಜಸ್ಪ್ರೀತ್ ಬುಮ್ರಾ ೧೪ ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಕ್ರೀಸ್‌ನಲ್ಲಿದ್ದರು.

ಲೂಯಿಸ್ ಹ್ಯಾಮಿಲ್ಟನ್‌ಗೆ ಇಟಾಲಿಯನ್ ಗರಿ

ಫಾರ್ಮುಲಾ ಒನ್ ಲೋಕದ ಪ್ರಚಂಡ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಇಟಾಲಿಯನ್ ಗ್ರ್ಯಾನ್ ಪ್ರೀ ಪ್ರಶಸ್ತಿ ಜಯಿಸಿದರು. ಬ್ರಿಟನ್‌ನ ಹ್ಯಾಮಿಲ್ಟನ್, ಪ್ರಶಸ್ತಿಯೊಂದಿಗೆ ವೃತ್ತಿಬದುಕಿನ ೬೮ನೇ ಟ್ರೋಫಿ ಪಡೆದರು. ಇಂದು ನಡೆದ ರೇಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್, ತನ್ನ ನೆಚ್ಚಿನ ಮರ್ಸಿಡೆಸ್‌ನೊಂದಿಗೆ ಸಹ ಸ್ಪರ್ಧಿ ಕಿಮಿ ರೈಕೊನೆನ್ ವಿರುದ್ಧ ೮.೭ ಸೆ.ಗಳ ಮುನ್ನಡೆಯೊಂದಿಗೆ ಮೊದಲ ಸ್ಥಾನ ಗಳಿಸಿದರು. ಫೆರಾರಿಯ ಮೊದಲ ಸಾಲಿನಲ್ಲಿದ್ದ ಕಿಮಿ, ಫಾರ್ಮುಲಾ ಒನ್ ಇತಿಹಾಸದಲ್ಲೇ ಅತಿ ಶರವೇಗದಲ್ಲಿ ತಮ್ಮ ಲ್ಯಾಪ್ ಪೂರೈಸಿದ್ದರು. ಇನ್ನು, ಇದೇ ಫೆರಾರಿ ಚಾಲಕ ಸೆಬಾಸ್ಟಿಯನ್ ವೆಟೆಲ್ (೩೦) ಅವರಿಗಿಂತ ೧೭ ಪಾಯಿಂಟ್ಸ್ ಮುನ್ನಡೆ ಸಾಧಿಸುವಲ್ಲಿ ಹ್ಯಾಮಿಲ್ಟನ್ ಯಶ ಕಂಡರು. ನಿಗದಿತ ಗುರಿಯನ್ನು ೧:೧೬:೫೪.೪೮೪ ಸೆ.ಗಳಲ್ಲಿ ಕ್ರಮಿಸಿದ ಹ್ಯಾಮಿಲ್ಟನ್ ಗೆಲುವಿನೊಂದಿಗೆ ೨೫ ಪಾಯಿಂಟ್ಸ್‌ಗಳನ್ನು ಕಲೆಹಾಕಿದರು.

ಶಾಸಕರ ವಿರುದ್ಧ ದೂರು ದಾಖಲಿಸಿಕೊಳ್ಳಲು ನಟಿ ರವೀನಾ ಟಂಡನ್ ಆಗ್ರಹ

ಕ್ರೈಸ್ತ ಸನ್ಯಾಸಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇರಳ ಶಾಸಕರೊಬ್ಬರು, ಬಿಷಪ್ ಮೇಲೆ ಅತ್ಯಾಚಾರ ಆರೋಪ ಮಾಡಿರುವ ಕ್ರೈಸ್ತ ಸನ್ಯಾಸಿನಿಯನ್ನು ‘ವೇಶ್ಯೆ’ ಎಂದು ಜರಿಯುವ ಮೂಲಕ ಇದೀಗ ವಿವಾದ ಸೃಷ್ಟಿಸಿದ್ದಾರೆ. ಶಾಸಕರ ಹೇಳಿಕೆಯನ್ನು ಖಂಡಿಸಿರುವ ನಟಿ ರವೀನಾ ಟಂಡನ್, “ಸಂತ್ರಸ್ತೆಯ ಧ್ವನಿಯನ್ನು ಉಡುಗಿಸುವ ಪ್ರಯತ್ನ ಇದಾಗಿದ್ದು, ಈ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲು ಸಾಧ್ಯವೇ?” ಎಂದು ಪ್ರಶ್ನಿಸಿ ಟ್ವೀಟ್ ಮಾಡಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿಗೆ ಟ್ಯಾಗ್ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More