ಟ್ವಿಟರ್ ಸ್ಟೇಟ್ | ಇಂಧನ ಬೆಲೆ ಏರಿಕೆ ಪ್ರಶ್ನಿಸಿದವರನ್ನೇ ತಪ್ಪಿತಸ್ಥರನ್ನಾಗಿಸುವ ಪ್ರಯತ್ನ

ಭಾರತ್ ಬಂದ್ ಮೂಲಕ ಇಂಧನ ಬೆಲೆ ಏರಿಕೆ ವಿಚಾರದಲ್ಲಿ ಸರ್ಕಾರದ ಮೌನವನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಆದರೆ, ಬೆಲೆ ಏರಿಕೆ ಬಗ್ಗೆ ಮಾತನಾಡದೆ, ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎನ್ನುವುದನ್ನೇ ಬಿಜೆಪಿ ಮುಖ್ಯವಾಗಿ ಜನರ ಮುಂದೆ ಇಡಲು ಪ್ರಯತ್ನಿಸುತ್ತಿದೆ

ಇಂಧನ ದರ ಏರಿಕೆ ವಿರೋಧಿಸಿ ಸೋಮವಾರ ಆಚರಿಸಿದ ‘ಭಾರತ್ ಬಂದ್’ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ, ಆಡಳಿತ ಪಕ್ಷ ಬಿಜೆಪಿ ಈ ಬಂದ್‌ಗೆ ಹೊಸ ಟ್ವಿಸ್ಟ್ ಕೊಡಲು ಪ್ರಯತ್ನಿಸುತ್ತಿದೆ. ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎನ್ನುವುದನ್ನೇ ಬಿಜೆಪಿ ಮುಖ್ಯವಾಗಿ ಜನರ ಮುಂದೆ ಇಡಲು ಪ್ರಯತ್ನಿಸುತ್ತಿದೆ. ಈ ಸಂಬಂಧ ಟ್ವಿಟರ್‌ನಲ್ಲೂ ಸಾಕಷ್ಟು ಚರ್ಚೆಯಾಗಿದೆ.

ಮುಖ್ಯವಾಗಿ, ಕನ್ನಡಿಗ ಮೋಹನ್ ದಾಸ್ ಪೈ ಅವರು ಇಂಧನ ಬೆಲೆ ಏರಿಕೆ ಬಗ್ಗೆ ಹೊಸ ಸಿದ್ಧಾಂತವನ್ನೇ ಮುಂದಿಟ್ಟಿದ್ದಾರೆ. ಸಾಮಾನ್ಯವಾಗಿ ಬಿಜೆಪಿ ಪರವಾಗಿಯೇ ಟ್ವೀಟ್ ಮಾಡುವ ಮೋಹನ್ ದಾಸ್ ಪೈ ಅವರ ಈ ಟ್ವೀಟ್ ಕೂಡ ಮೋದಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತಿದೆ. “ರಾಜ್ಯ ಸರ್ಕಾರಗಳು ತಮ್ಮ ತೆರಿಗೆಗಳನ್ನು ಕಡಿಮೆ ಮಾಡಲಿ. ಕೇವಲ ಕೇಂದ್ರವನ್ನು ಮಾತ್ರ ಏಕೆ ದೂಷಿಸಬೇಕು? ರಾಜ್ಯ ಸರ್ಕಾರಗಳೂ ತೆರಿಗೆಯನ್ನು ಕಡಿಮೆ ಮಾಡಿ ಬೆಲೆ ಇಳಿಸಬಹುದಲ್ಲವೇ? ಕಳೆದ ೩೦ ದಿನಗಳಲ್ಲಿ ಎಷ್ಟು ರಾಜ್ಯದ ತೆರಿಗೆಗಳು ಏರಿವೆ ಎನ್ನುವುದನ್ನು ಒಮ್ಮೆ ಗಮನಿಸಿ,” ಎಂದು ಅವರು ಮಾಡಿದ್ದಾರೆ.

ಆದರೆ ಟ್ವೀಟಿಗರು, ಮೋಹನ್ ದಾಸ್ ಪೈ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿಲ್ಲ. ಅರ್ಥಶಾಸ್ತ್ರಜ್ಞೆ ರೂಪಾ ಸುಬ್ರಹ್ಮಣ್ಯ ಅವರು ಮೋಹನ್‌ದಾಸ್ ಪೈ ಅವರಿಗೆ ಉತ್ತರಿಸಿ, “ರಾಜ್ಯ ಸರ್ಕಾರಗಳು ಏಕೆ ಭಾರವನ್ನು ಹೊರಬೇಕು? ಕೇಂದ್ರಕ್ಕೆ ತೆರಿಗೆ ಪಡೆಯಲು ಹಲವು ಮೂಲಗಳಿವೆ. ಜಿಎಸ್‌ಟಿ ನಂತರ ರಾಜ್ಯಗಳು ತೆರಿಗೆ ಹಾಕುವ ಅವಕಾಶ ಕೂಡ ಕಡಿಮೆಯಾಗಿದೆ. ತೆರಿಗೆ ವಿಚಾರದಲ್ಲಿ ಹೆಚ್ಚು ಲಾಭ ಮಾಡಿಕೊಂಡ ಕೇಂದ್ರ ಸರ್ಕಾರ ಭಾರ ಇಳಿಸಬೇಕಾಗಿರುವುದು,” ಎಂದು ಟ್ವೀಟ್ ಮಾಡಿದ್ದಾರೆ. ರೂಪಾ ಅವರಿಗೆ ಉತ್ತರಿಸಿರುವ ಹೊಟೇಲ್ ಉದ್ಯಮಿ ಹಾಗೂ ಬಿಜೆಪಿ ಬೆಂಬಲಿಗ ಸುರೇಶ್ ಕೊಚ್ಚಟ್ಟಿಲ್, “೧೪ನೇ ಹಣಕಾಸು ಆಯೋಗದ ನಂತರ ಶೇ.೪೫ರಷ್ಟು ಕೇಂದ್ರದ ತೆರಿಗೆಗಳು ರಾಜ್ಯಕ್ಕೇ ವಿನಿಯೋಗವಾಗುತ್ತವೆ. ಡೀಸೆಲ್ ಮತ್ತು ಪೆಟ್ರೋಲ್‌ನ ಸುಂಕ ಕೇಂದ್ರದ ತೆರಿಗೆ ಆದಾಯದ ಶೇ.೧೯ರಷ್ಟಿರುತ್ತವೆ. ಕೇಂದ್ರ ಸರ್ಕಾರ ತೆರಿಗೆ ಕಡಿತ ಮಾಡಿ ರಾಜ್ಯಕ್ಕೆ ಸಿಗಬೇಕಾದ ಮೊತ್ತವನ್ನು ಕಡಿಮೆ ಮಾಡಬೇಕೇ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರೂಪಾ, “ಅದು ಹೇಗೆ ಸಾಧ್ಯ ಎಂದು ತಿಳಿಯರಿ. ಕೇಂದ್ರ ತೆರಿಗೆಯನ್ನು ಕಡಿಮೆ ಮಾಡುವುದರಿಂದ ಮೊದಲಿಗೆ ಬೆಲೆ ಇಳಿಯುತ್ತದೆ ಮತ್ತು ನಂತರ ರಾಜ್ಯದ ಆದಾಯ. ದುಬಾರಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಸಮಾಧಾನ ಸಿಗಬೇಕು ಎನ್ನುವುದು ನನ್ನ ಟ್ವೀಟ್ ಉದ್ದೇಶ,” ಎಂದು ಹೇಳಿದ್ದಾರೆ. ಈ ನಡುವೆ, ಸುಪ್ರೀಂ ಕೋರ್ಟ್ ವಕೀಲ ಸಿದ್ ಅವರು ಟ್ವೀಟ್ ಮಾಡಿ, “ಬಿಜೆಪಿ ೨೦ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ಇಂಧನ ಬೆಲೆ ಇಳಿಸುವ ಧೈರ್ಯವನ್ನು ಯಾವ ರಾಜ್ಯವೂ ಮಾಡಿಲ್ಲ. ಪಕ್ಷದ ಬಳಿ ಅಷ್ಟೊಂದು ಅಧಿಕಾರವಿದ್ದು ಏನು ಪ್ರಯೋಜನ?” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಭಾರತ್ ಬಂದ್ | ಹಾವೇರಿ

ಈ ನಡುವೆ, ವಿರೋಧ ಪಕ್ಷಗಳ ಪ್ರತಿಭಟನೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, ಇಂಧನ ಬೆಲೆ ಏರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಬಹಳಷ್ಟು ಕಾಂಗ್ರೆಸ್ ಟ್ವೀಟಿಗರು ಇಂಧನ ಬೆಲೆ ಏರಿಕೆ ಬಗ್ಗೆ ತಮ್ಮ ವಿರೋಧವನ್ನು ಟ್ವಿಟರ್ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಟ್ವೀಟಿಗರು ಹಲವು ಅಂಕಿ-ಅಂಶಗಳನ್ನೂ ಮುಂದಿಟ್ಟಿದ್ದಾರೆ. “ಬಿಜೆಪಿ ಭರವಸೆ ನೀಡಿದ ‘ಅಚ್ಛೇ ದಿನ್’ ಎಲ್ಲಿ ಹೋಯಿತು?” ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಎಡಪಕ್ಷಗಳ ಮುಖಂಡರು ಮತ್ತು ಇತರ ವಿರೋಧಪಕ್ಷಗಳ ನಾಯಕರು ಟ್ವಿಟರ್ ಮೂಲಕ ಇಂಧನ ಬೆಲೆ ಏರಿಕೆ ಕುರಿತ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಸರ್ಕಾರದ ನೀತಿಗಳಿಂದ ಕೆಲವು ಕಾರ್ಪೋರೆಟ್ ಸಂಸ್ಥೆಗಳಿಗೆ ಮಾತ್ರ ಲಾಭವಾಗುತ್ತಿದೆ. ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಧನ ಬೆಲೆ ಹೀಗೇ ಏರಿದರೆ ಇತರ ವಸ್ತುಗಳ ಬೆಲೆಯೂ ಏರಲಿದೆ,” ಎಂದು ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಟ್ವೀಟ್ ಮಾಡಿ, “ಕೇಂದ್ರ ಸರ್ಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸುವ ಅಗತ್ಯವಿದೆ,” ಎಂದು ಹೇಳಿದ್ದಾರೆ.

ಇನ್ನು, ಬಿಜೆಪಿ ಪರ ಟ್ವೀಟಿಗರು ಕಾಂಗ್ರೆಸ್ ಮೇಲೆ ಗೂಂಡಾಗಿರಿಯ ಆರೋಪ ಹೊರಿಸಲು ಪ್ರಯತ್ನಿಸಿದ್ದು ಕಂಡುಬಂದಿದೆ. ಉಡುಪಿಯಲ್ಲಿ ಬಂದ್ ಸ್ವಲ್ಪ ಸಮಯ ಹಿಂಸಾಚಾರಕ್ಕೆ ತಿರುಗಿದ ಕಾರಣ ಕರ್ನಾಟಕದ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಕಾಂಗ್ರೆಸ್ ಟ್ವೀಟಿಗರು ತಮ್ಮ ಕಾರ್ಯಕರ್ತರಿಗೆ ಗಾಯವಾಗಿರುವ ಫೋಟೋಗಳನ್ನು ಪ್ರಕಟಿಸುತ್ತಿದ್ದರೆ, ಬಿಜೆಪಿಗರು ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ.

ಈ ನಡುವೆ, ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿ ಕರೆದು, “ಬಿಹಾರದಲ್ಲಿ ಭಾರತ್ ಬಂದ್ ಕಾರಣದಿಂದ ಎರಡು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ,” ಎಂದು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳನ್ನು ದೂರಿದ್ದರು. ಎರಡು ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸುವುದು ಮುಷ್ಕರದ ಕಾರಣದಿಂದ ತಡವಾಗಿ ಆಕೆ ಅಸುನೀಗಿದ್ದಳು ಎಂದೇ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ನಂತರ, ಬಾಲಕಿಯ ತಂದೆಯೇ ಈ ಮಾತನ್ನು ಅಲ್ಲಗಳೆದಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಬಾಲಕಿಯ ತಂದೆ, “ಅಂಬುಲೆನ್ಸ್ ತಡವಾಗಿರುವ ಕಾರಣ ಬಾಲಕಿ ಮೃತಪಟ್ಟಿಲ್ಲ,” ಎಂದು ತಿಳಿಸಿದ್ದಾರೆ.

ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, “ರವಿ ಶಂಕರ್ ಪ್ರಸಾದ್ ಅವರೇ, ನೀವು ಜವಾಬ್ದಾರಿಯುತ ಕೇಂದ್ರ ಸಚಿವರು. ಹೀಗೆ ನಾಚಿಕೆಯಿಲ್ಲದೆ ರಾಷ್ಟ್ರಕ್ಕೆ ಏಕೆ ಸುಳ್ಳು ಮಾಹಿತಿಯನ್ನು ಕೊಡುತ್ತಿದ್ದೀರಿ? ಬಾಲಕಿಯ ತಂದೆ, ನಿಮ್ಮದೇ ರಾಜ್ಯ ಸರ್ಕಾರ ಮತ್ತು ಜೆಹನಾಬಾದ್‌ನ ಆಡಳಿತಾಧಿಕಾರಿಗಳ ಹೇಳಿಕೆಗಳನ್ನು ಕೇಳಿಸಿಕೊಂಡರೆ ನಿಮಗೆ ಸತ್ಯ ತಿಳಿಯಬಹುದು,” ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಸಲ್ಮಾನ್ ನಜ್ಮಿ ಅವರು, “ಬಿಹಾರ್‌ನ ದುರ್ಬಲ ಆರೋಗ್ಯ ಸೇವೆಯೇ ಬಾಲಕಿಯ ಸಾವಿಗೆ ಕಾರಣ,” ಎಂದು ಟ್ವೀಟ್ ಮಾಡಿದ್ದಾರೆ.

ಈ ನಡುವೆ, ಪ್ರತಿಭಟನೆಯ ಸಂದರ್ಭ ಕಾರ್ಯಕರ್ತರ ಹೆಗಲ ಮೇಲೇರಿ ಘೋಷಣೆ ಕೂಗುತ್ತಿದ್ದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ವಿಡಿಯೋ ಮುಂದಿಟ್ಟು ಬಿಜೆಪಿ ಟೀಕಿಸುತ್ತಿದೆ. “ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಅವಹೇಳನಾತ್ಮಕವಾಗಿ ನಡೆದುಕೊಂಡಿದ್ದಾರೆ,” ಎಂದು ಬಿಜೆಪಿಯ ಪ್ರೀತಿ ಗಾಂಧಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಬೆಳಗಾವಿಯಲ್ಲಿ ‘ಭಾರತ್ ಬಂದ್’ ಸಂದರ್ಭ ಇಂಧನ ಬೆಲೆ ಏರಿಕೆ ವಿರುದ್ಧ ಕೂಗುವ ಬದಲಾಗಿ ‘ಇಂಧನ ಬೆಲೆ ಏರಿಸಿ’ ಎಂದು ಕೂಗಿದ ಆಪ್ ಕಾರ್ಯಕರ್ತರೊಬ್ಬರ ತಪ್ಪಿಗೆ ಅವರದೇ ಪಕ್ಷದ ನಾಯಕ ಕೆನ್ನೆಗೆ ಹೊಡೆಯುವ ವಿಡಿಯೋ ಕೂಡ ವೈರಲ್ ಆಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More