ಬಿಜೆಪಿ ಪ್ರಾಬಲ್ಯದ ಕರಾವಳಿಯಲ್ಲೂ ‘ಭಾರತ್ ಬಂದ್‌’ಗೆ ವ್ಯಕ್ತವಾಯಿತು ಜನಬೆಂಬಲ

ತೈಲೋತ್ಪನ್ನಗಳ ಬೆಲೆ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಸೋಮವಾರ ಕರೆ ನೀಡಿದ್ದ ‘ಭಾರತ್ ಬಂದ್’ಗೆ, ಬಿಜೆಪಿ ಪ್ರಾಬಲ್ಯದ ಕರಾವಳಿ ಕರ್ನಾಟಕ ಸ್ಪಂದಿಸುವುದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ, ಆ ಅಭಿಪ್ರಾಯ ತಲೆಕೆಳಗಾಗಿದ್ದು, ಬಂದ್‌ಗೆ ಜನಬೆಂಬಲ ವ್ಯಕ್ತವಾಗಿದೆ

ತೈಲೋತ್ಪನ್ನಗಳ ಬೆಲೆ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಕರಾವಳಿ ಕರ್ನಾಟಕ ಹೇಗೆ ಸ್ಪಂದಿಸುತ್ತದೆ ಎಂಬ ಕುತೂಹಲವಿತ್ತು. ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾದ ಬಿಜೆಪಿ ಇಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಲೋಕಸಭಾ ಕ್ಷೇತ್ರಗಳು ಕೂಡ ಬಿಜೆಪಿ ತೆಕ್ಕೆಯಲ್ಲಿವೆ. ಬಿಜೆಪಿ ಪರವಾದ ಅಲೆ ಇರುವ ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ಕರಾವಳಿ ಕೂಡ ಒಂದು. ಹಾಗಾಗಿ, ಬಂದ್‌ಗೆ ಬೆಂಬಲವಿಲ್ಲ ಎಂದು ಕೆಲ ವ್ಯಾಪಾರಿಗಳು ಮಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಭಾನುವಾರವೇ ಕರಪತ್ರ ಅಂಟಿಸಿದ್ದರು. ಇದೆಲ್ಲದರ ನಡುವೆಯೂ, ತೈಲ ಬೆಲೆ ನಿಯಂತ್ರಿಸಲಾಗದ ಸ್ಥಿತಿ ಬಗ್ಗೆ ಜನಸಾಮಾನ್ಯರ ಆಕ್ರೋಶ ಇರುವುದಕ್ಕೆ ಬಂದ್ ಕನ್ನಡಿ ಹಿಡಿದಿದೆ.

ಆದರೆ, ಬಂದ್ ವೇಳೆ ಕರಾವಳಿಯ ಎರಡೂ ಜಿಲ್ಲೆಗಳು ಹಿಂಸಾಚಾರಕ್ಕೆ ಸಾಕ್ಷಿಯಾಗಿವೆ. ಉಡುಪಿಯ ಕಡಿಯಾಲಿ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಘಟನೆಯಲ್ಲಿ ಎರಡೂ ಕಡೆಯ ಕಾರ್ಯಕರ್ತರು, ಸ್ಥಳೀಯ ನಾಯಕರು ಗಾಯಗೊಂಡರು. ಈ ಮಧ್ಯೆ, ಐಪಿಸಿ ಸೆಕ್ಷನ್ 144 ಅನ್ವಯ ನಗರದಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಆದೇಶ ಹೊರಡಿಸಿದರು.

ಮಂಗಳೂರಿನ ಶಿವಭಾಗ್ ಪ್ರದೇಶದಲ್ಲಿ ಹೋಟೆಲ್ ಮೇಲೆ ದುಷ್ಕರ್ಮಿಯೊಬ್ಬ ಕಲ್ಲು ತೂರಾಟ ನಡೆಸಿದ ಪರಿಣಾಮ ಕಟ್ಟಡದ ಗಾಜುಗಳು ಪುಡಿಪುಡಿಯಾದವು. ಜ್ಯೋತಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಜೆ ಆರ್ ಲೋಬೊ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆ ಪ್ರದೇಶದಲ್ಲಿ ಕಾಣಿಸಿಕೊಂಡಾಗ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿ ತಹಬಂದಿಗೆ ತಂದರು. ಇನ್ನು, ಬೆಂದೂರ್ ವೆಲ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಇಂಧನ ಬೆಲೆ ಏರಿಕೆ ಪ್ರಶ್ನಿಸಿದವರನ್ನೇ ತಪ್ಪಿತಸ್ಥರನ್ನಾಗಿಸುವ ಪ್ರಯತ್ನ

ವಿಧಾನ ಪರಿಷತ್ ಸದಸ್ಯ ವಾನ್ ಡಿಸೋಜ ನೇತೃತ್ವದಲ್ಲಿ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘಟನೆಯ ಸದಸ್ಯರು ಆರ್ ಆರ್ ರಸ್ತೆಯಲ್ಲಿ ಕಾರನ್ನು ಹಗ್ಗಗಳಿಂದ ಎಳೆಯುತ್ತ ತೈಲ ಬೆಲೆ ಏರಿಕೆಯನ್ನು ಪ್ರತಿರೋಧಿಸಿದರು. ಕೆನರಾ ಬಸ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿದ ಪರಿಣಾಮ ಖಾಸಗಿ ಬಸ್ ಸಂಚಾರ ಇರಲಿಲ್ಲ. ಸಿಪಿಎಂ ಪಕ್ಷದ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮೆರವಣಿಗೆ ವೇಳೆ ಪೊಲೀಸರೊಂದಿಗೆ ಕಾರ್ಯಕರ್ತರ ಮಾತಿನ ಚಕಮಕಿ ನಡೆಯಿತು. ಕಡಬದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಂಟ್ವಾಳದಲ್ಲಿ ಬಸ್‌ಗಳ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದರು. ಕೆಲವು ರಿಕ್ಷಾ, ಜೀಪ್, ಟೂರಿಸ್ಟ್ ವಾಹನಗಳು ರಸ್ತೆಗಿಳಿದರೂ ಪ್ರಯಾಣಿಕರಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಬೆಳ್ತಂಗಡಿ ತಾಲೂಕಿನಲ್ಲಿ ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎಂದವು. ಕೆಲವರು ಟೈರ್ ಸುಟ್ಟು ಅಸಮಾಧಾನ ವ್ಯಕ್ತಪಡಿಸಿದರು. ಫರಂಗಿ ಪೇಟೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮೆರವಣಿಗೆ ನಡೆಸುವುದರ ಮೂಲಕ ತಮ್ಮ ಅತೃಪ್ತಿ ದಾಖಲಿಸಿದರು.

ಇದೇ ವೇಳೆ, ಬಂದ್ ವಿರೋಧಿಸುವ ಯತ್ನವೂ ನಡೆಯಿತು. ಪುತ್ತೂರಿನಲ್ಲಿ ಅಂಗಡಿಗಳನ್ನು ಮುಚ್ಚಿಸಲು ಬಂದ ಕಾರ್ಯಕರ್ತರ ವಿರುದ್ಧ ಕೆಲ ವರ್ತಕರು, “ಪೆಟ್ರೋಲ್ ಬೆಲೆ 200ರ ಗಡಿ ದಾಟಿದರೂ ತಮ್ಮ ಬೆಂಬಲ ಪ್ರಧಾನಿ ಮೋದಿ ಅವರಿಗೆ,” ಎಂದು ಹೇಳಿದರು. ಮಂಗಳೂರಿನ ಬಸ್ ನಿಲ್ದಾಣದ ಸಮೀಪ ಶಾಸಕ ವೇದವ್ಯಾಸ ಕಾಮತ್ ಅವರು, ಬಂದ್‌ನಿಂದ ತೊಂದರೆಗೆ ಸಿಲುಕಿಕೊಂಡ ನಾಗರಿಕರಿಗೆ ಉಚಿತ ಆಹಾರ ವಿತರಿಸುವ ವ್ಯವಸ್ಥೆ ಮಾಡಿದ್ದರು. ಉಡುಪಿ ಜಿಲ್ಲೆಯ ಕಾಪು, ಪಡುಬಿದ್ರೆ, ಉಚ್ಚಿಲ, ಪಲಿಮಾರು, ಎರ್ಮಾಳು ಮುಂತಾದ ಪ್ರದೇಶಗಳಲ್ಲಿ ಪ್ರತಿಭಟನಾಕಾರರ ಮನವಿ ಹೊರತಾಗಿಯೂ ಕೆಲ ಅಂಗಡಿ ಮುಂಗಟ್ಟುಗಳು ವ್ಯಾಪಾರದಲ್ಲಿ ತೊಡಗಿದ್ದವು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More