ಸಲಿಂಗಪ್ರೇಮ ಕುರಿತ ಸುಪ್ರೀಂ ತೀರ್ಪು ದ್ವೇಷಪ್ರಿಯರಿಗೆ ರವಾನಿಸಿದ ಸಂದೇಶವೇನು?

ತೀವ್ರ ಹಿಂದುತ್ವವು ಉಗ್ರ ಇಸ್ಲಾಮಿನ ಅನುಕರಣೆಯಲ್ಲಿರೋ ಹೊತ್ತಲ್ಲಿ, ಸಲಿಂಗಪ್ರೇಮ ಕುರಿತ ಸುಪ್ರೀಂ ಕೋರ್ಟಿನ ತೀರ್ಪು ದೇಶದ ಜನತೆಗೆ ದೊಡ್ಡ ಸಂದೇಶವನ್ನೇ ರವಾನಿಸಿದೆ; ದೇಶವನ್ನು ಸಂವಿಧಾನ ಮುನ್ನಡೆಸಬೇಕೆಂಬುದನ್ನು ಸಾರಿ ಹೇಳಿದೆ. ಈ ಕುರಿತ ‘ಸ್ಕ್ರಾಲ್’ ವರದಿಯ ಭಾವಾನುವಾದವಿದು

“ಬಹುಸಂಖ್ಯಾತರ ಅಭಿಪ್ರಾಯ ಮತ್ತು ಸರಿ-ತಪ್ಪು ಕುರಿತ ಜನಪ್ರಿಯ ಭಾವನೆಗಳು ಸಾಂವಿಧಾನಿಕ ಹಕ್ಕುಗಳ ಮೇಲೆ ಸವಾರಿ ಮಾಡಲಾಗದು...”

-ಸಲಿಂಗ ಪ್ರೇಮದ ವಿರುದ್ಧದ ೧೫೭ ವರ್ಷ ಹಳೆಯ ವಸಾಹತುಶಾಹಿ ಕಾನೂನನ್ನು ರದ್ದು ಮಾಡಿದ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ಆದೇಶದ ಮೂಲ ಆಶಯದ ಮಾತು ಇದು. ತನ್ನದೇ ಸಂವಿಧಾನಕ್ಕೆ ದಿನೇದಿನೇ ಹೊಸ-ಹೊಸ ಸವಾಲುಗಳು ಎದುರಾಗುತ್ತಿರುವ ಹೊತ್ತಲ್ಲಿ ಭಾರತದ ಮೇಲೆ ಈ ತೀರ್ಪು ಹತ್ತು ಹಲವು ಬಗೆಯಲ್ಲಿ ಪರಿಣಾಮ ಬೀರಲಿದೆ ಎಂಬುದು ಅದರ ಚಾರಿತ್ರಿಕ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಸದ್ಯ ರಾಜಕೀಯ ಚರ್ಚೆ (ಅಲ್ಪಸಂಖ್ಯಾತರ ವಿರುದ್ಧದ ದ್ವೇಷ, ಹಿಂದೂ ಮತದಾರರ ಓಲೈಸುವಿಕೆ), ನಗಣ್ಯ ಕಾನೂನ ಸುವ್ಯವಸ್ಥೆ ಕಾಯಬೇಕಾದ ಅಧಿಕಾರ ವ್ಯವಸ್ಥೆ (ಅಥವಾ ನಿಷ್ಕ್ರಿಯ ವ್ಯವಸ್ಥೆ), ಕಾನೂನು ಬದಲಾವಣೆ (ಗೋರಕ್ಷಣೆ, ದೇಶದ್ರೋಹ), ಶಿಕ್ಷಣದ ಬದಲಾವಣೆ (ಮೊಘಲ್ ಮತ್ತು ಇಸ್ಲಾಂ ಇತಿಹಾಸವನ್ನು ಕೀಳು ಮಾಡಿ, ಹಿಂದೂ ರಾಜರು ಮತ್ತು ಹಿಂದುತ್ವವನ್ನು ವೈಭವೀಕರಿಸುವುದು), ಆಹಾರ ಕ್ರಮ ಬದಲಾವಣೆ (ಅಲ್ಪಸಂಖ್ಯಾತರು ತಿನ್ನುವ ಎಲ್ಲವನ್ನೂ ಅವಮಾನಿಸುವುದು, ನಿರ್ಬಂಧಿಸುವುದು) ಮತ್ತು ಸಾಮಾಜಿಕ ಮಾತುಕತೆಗೆ ವಿಷ ಬೆರೆಸುವುದು (ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ, ಅಸೂಯೆ ಹಬ್ಬಿಸುವುದು, ಯಾವ ಆಧಾರಗಳಿಲ್ಲದೆ ಶತ್ರುಗಳನ್ನು ಹುಟ್ಟಿಸುವುದು) ಮುಂತಾದವುಗಳೆಲ್ಲವನ್ನು ಬಹುಸಂಖ್ಯಾತರ ಅಭಿಮತ ಮತ್ತು ಜನಪ್ರಿಯ ನೈತಿಕತೆ ಬಲದ ಮೇಲೆಯೇ ಕಟ್ಟುತ್ತಿರುವ ದೇಶ ಭಾರತ.

ಆತಂಕಕಾರಿ ಮತ್ತು ಚಿತ್ರವಿಚಿತ್ರ ವಿದ್ಯಮಾನಗಳು ನಿತ್ಯದ ಸಂಗತಿಯಾಗಿರುವ ಹೊತ್ತಲ್ಲಿ, ಸಾಂವಿಧಾನಿಕ ಸರಿ-ತಪ್ಪುಗಳ ನೈತಿಕತೆಯ ಚೌಕಟ್ಟು ಭಾರತವನ್ನು ಆಳಬೇಕು ಎಂದು ಸುಪ್ರೀಂ ಕೋರ್ಟಿನ ಈ ತೀರ್ಪು ಎಚ್ಚರಿಸಿದೆ. ಚತ್ತೀಸ್‌ಗಢದ ವಿಶ್ವವಿದ್ಯಾಲಯವೊಂದು ಹನುಮಾನ್ ಮತ್ತು ಆತನ ಪವಾಡಗಳ (ಪುರಾತನ ಹಾಗೂ ಸಮಕಾಲೀನ ಕಾಲದಲ್ಲಿನ ಆತನ ಅವತಾರಗಳು ಮತ್ತು ಸಾಹಸಗಳನ್ನು ಒಳಗೊಂಡು) ಕುರಿತು ಎರಡು ದಿನ ವಿಚಾರ ಸಂಕಿರಣ ನಡೆಸುತ್ತಿರುವ ಹೊತ್ತಲ್ಲಿ; ವಿವಿಧ ರಾಜ್ಯ ಸರ್ಕಾರಗಳು ಗೋರಕ್ಷಣೆಯ ಪ್ರತ್ಯೇಕ ಇಲಾಖೆ ರಚಿಸುತ್ತಿರುವ ಕಾಲದಲ್ಲಿ; ಜಾಮೀನಿನ ಮೇಲೆ ಬಿಡುಗಡೆಯಾದ ಭಯೋತ್ಪಾದಕನೊಬ್ಬನಿಗೆ ಗುಜರಾತಿನಲ್ಲಿ ಭಗವಾಧ್ವಜ ಬೀಸಿ ನೂರಾರು ಮಂದಿ ರಾಜಮರ್ಯಾದೆಯ ಸ್ವಾಗತ ನೀಡುತ್ತಿರುವಾಗ; ಅತ್ಯಾಚಾರ ಮತ್ತು ಭಯೋತ್ಪಾದನೆಯ ಆರೋಪದ ಮೇಲೆ ಜೈಲು ಸೇರಿರುವರನ್ನು ಹಿಂದೂಗಳು ಎಂಬ ಒಂದೇ ಒಂದು ಕಾರಣಕ್ಕೆ ಅವರನ್ನು ಬಿಡಿಸಲು ಜಮ್ಮು ಮತ್ತು ಮುಂಬೈನಲ್ಲಿ ಭಾರೀ ರ್ಯಾಲಿಗಳನ್ನು ನಡೆಸುತ್ತಿರುವ ಹೊತ್ತಲ್ಲಿ ಸುಪ್ರೀಂ ಕೋರ್ಟಿನ ಈ ಎಚ್ಚರಿಕೆಯ ಮಾತು ಹೊರಬಿದ್ದಿದೆ ಎಂಬುದು ಗಮನಾರ್ಹ.

ಹಿಂದೂ ತೀವ್ರವಾದ ಭಾರತದಲ್ಲಿ ಎಷ್ಟು ಪ್ರಬಲವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಇದು ಕಣ್ಣಿಗೆ ರಾಚುವ ಉದಾಹರಣೆ. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ವಿಚಾರವಾದಿಗಳ ಸರಣಿ ಹತ್ಯೆಯ ಘಟನೆಗಳು ಇದಕ್ಕಿಂತ ಅಪಾಯಕಾರಿ ಬೆಳವಣಿಗೆಯನ್ನು ಸಾರಿ ಹೇಳುತ್ತಿವೆ. ತೀವ್ರವಾದಕ್ಕೂ ಮೀರಿದ ಮಿಲಿಟೆಂಟ್ ಹಿಂದುತ್ವ ಇದೀಗ ಹಿಂದೂ ಕಟ್ಟರ್‌ವಾದಿಗಳ ಹೊಸ ವರಸೆ ಎಂಬುದು ಇದರಿಂದ ಸಾಬೀತಾಗಿದೆ. ಈ ಬೆಚ್ಚಿಬೀಳಿಸುವ ಸತ್ಯ ನಮಗೆ ತಿಳಿದದ್ದು ಕೂಡ ಆ ಎರಡೂ ರಾಜ್ಯಗಳ ಪೊಲೀಸರು, ಇತರ ರಾಜ್ಯಗಳ ಪೊಲೀಸರಂತೆ ಬಹುಸಂಖ್ಯಾತರ ಒತ್ತಡಕ್ಕೆ ಮತ್ತು ಬೇಡಿಕೆಗೆ ಮಣಿಯದೆ, ಸಮಾಜವನ್ನು ಒಡೆಯುವ ಶಕ್ತಿಗಳಿಗೆ ಅಡಿಯಾಳುಗಳಾಗದೆ ಹಿಂದೂಗಳೆಂಬ ಕಾರಣಕ್ಕೆ ಯಾರಿಗೂ ರಿಯಾಯ್ತಿ ನೀಡದೆ ನಿಷ್ಪಕ್ಷಪಾತವಾಗಿ ತಮ್ಮ ಕೆಲಸ ಮಾಡಿದ ಕಾರಣಕ್ಕಾಗಿ. ಆ ಪೊಲೀಸ್ ಅಧಿಕಾರಿಗಳ ಸಂವಿಧಾನಬದ್ಧ ನಡವಳಿಕೆಗೆ ನಾವು ಅಭಿನಂದನೆ ಹೇಳಲೇಬೇಕಿದೆ.

ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ವರ್ಷದ ಹಿಂದೆ ಹತ್ಯೆ ಮಾಡಿದಾಗ ಒಂದು ಕೆಂಪು ಬಣ್ಣದ ಮೋಟಾರ್ ಸೈಕಲ್ ಮತ್ತು ಹಂತಕನ ಅಸ್ಪಷ್ಟ ಸಿಸಿಟಿವಿ ದೃಶ್ಯವನ್ನು ಹೊರತುಪಡಿಸಿ ಇನ್ನಾವುದೇ ಸಾಕ್ಷ್ಯ ಇರಲಿಲ್ಲ. ಆದರೂ ಪೊಲೀಸರು, ನೂರಾರು ಫೋಟೋಗಳನ್ನು ತಡಕಾಡಿದರು, ನೂರಾರು ಜಾಗಗಗಳಲ್ಲಿ ತಪಾಸಣೆ ನಡೆಸಿದರು, ನೂರಾರು ಜನರನ್ನು ವಿಚಾರಣೆಗೊಳಪಡಿಸಿದರು, ೧.೫ ಕೋಟಿ ಫೋನ್ ಕರೆಗಳ ವಿಶ್ಲೇಷಣೆ ಮತ್ತು ಅತ್ಯಾಧುನಿಕ ಗೇಯ್ಟ್ ತಂತ್ರಜ್ಞಾನ ಬಳಸಿ ಹಂತಕರನ್ನು ಚಹರೆಯನ್ನು ಖಚಿತಪಡಿಸಿಕೊಂಡರು.

ಗೌರಿ ಹತ್ಯೆ ತನಿಖೆಯ ಬೆನ್ನು ಹತ್ತಿದ ಪೊಲೀಸರು, ಸಣ್ಣಪುಟ್ಟ ಪಟ್ಟಣಗಳ ಹಿಂದೂ ಯುವಕರನ್ನೊಳಗೊಂಡ ವ್ಯಾಪಕ ಜಾಲವನ್ನೇ ಪತ್ತೆ ಮಾಡಿದರು. ರಹಸ್ಯ ಕಾರ್ಯಾಚರಣೆಯ ಉದ್ದೇಶದಿಂದ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಶಿಬಿರಗಳ ಮಾಹಿತಿಯೂ ಹೊರಬಿತ್ತು. ಉಗ್ರಗಾಮಿ ಸಂಘಟನೆಗಳ ಮಾದರಿಯಲ್ಲೇ ಸಂಪೂರ್ಣ ಸಜ್ಜಾಗಿರುವ ತಂಡಗಳ ಸದಸ್ಯರು ಪರಸ್ಪರ ಅಪರಿಚಿತರಾಗೇ ಉಳಿದುಕೊಂಡು ತಮ್ಮ-ತಮ್ಮ ಗುರಿಗಳನ್ನು ಮುಗಿಸಲು ಕೆಲಸ ಮಾಡುತ್ತಿದ್ದರು ಎಂಬುದು ಕೂಡ ಬೆಳಕಿಗೆ ಬಂದಿತು. ಇಸ್ಲಾಂ ಉಗ್ರ ಸಂಘಟನೆಗಳ ಮಾದರಿಯಲ್ಲೇ ಈ ಹಿಂದೂ ಸಂಘಟನೆ ಕೂಡ ಕೆಲಸ ಮಾಡುತ್ತಿರುವುದು ಗಮನಾರ್ಹ. ಹಿಂದೂ ಭಯೋತ್ಪಾದಕರ ಈ ಜಾಲ ಹೀಗೆ ಗೌರಿ ಹತ್ಯೆಯ ತನಿಖೆಯ ಮೂಲಕ ಜಗಜ್ಜಾಹೀರಾಗುತ್ತಿರುವ ಹೊತ್ತಿಗೇ, ಮತ್ತೊಂದು ಕಡೆ ೨೦೦೭ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಬ್ಬರು ಉಗ್ರರಿಗೆ ಶಿಕ್ಷೆ ವಿಧಿಸಿದ್ದು, ಉಗ್ರಗಾಮಿ ಚಟುವಟಿಕೆಯ ಮಾದರಿಯಲ್ಲಿ ಎರಡೂ ಘಟನೆಗಳಿಗೆ ಸಾಮ್ಯತೆ ಇರುವುದು ಕೂಡ ಬೆಳಕಿಗೆ ಬಂದಿತು. ಖಚಿತವಾಗಿ ಹೇಳಬೇಕೆಂದರೆ, ಹಿಂದೂ ಭಯೋತ್ಪಾದನೆಗಿಂತ ಇಸ್ಲಾಮಿಕ್ ಭಯೋತ್ಪಾದನೆ ಬಹಳಷ್ಟು ಮುಂದಿದೆ. ದಶಕಗಳಿಂದ ಅದು ಅತ್ಯಂತ ಹಿಂಸಾತ್ಮಕ ಮತ್ತು ಪರಿಣಾಮಕಾರಿ ಉಗ್ರತ್ವವಾಗಿ ಬೆಳೆದಿದೆ. ಆದರೆ, ಅದೇ ಹೊತ್ತಿಗೆ ಕೋಮು ಗಲಭೆಗಳಲ್ಲಿ ಮೃತಪಟ್ಟವರಲ್ಲಿ ಮುಸ್ಲಿಮರೇ ಅಧಿಕ ಹಾಗೂ ಉಗ್ರ ಹಿಂದುತ್ವ ಈಗ ಇಸ್ಲಾಮಿಕ್ ಮಾದರಿಗೆ ಸರಿಗಟ್ಟುವ ಪೈಪೋಟಿಗೆ ಇಳಿದಿದೆ ಎಂಬುದನ್ನು ಮರೆಯುವಂತಿಲ್ಲ.

ಬಹುಸಂಖ್ಯಾತವಾದ ಮತ್ತು ಜನಪ್ರಿಯ ನೈತಿಕತೆ

ಹಿಂದೂ ತೀವ್ರವಾದದ ನೆಲೆಯೇ ಬಹುಸಂಖ್ಯಾತವಾದದ ಮೇಲೆ ನಿಂತಿದೆ. ತೀರಾ ಶಿಥಿಲವಾಗಿರುವ ಆ ಅಡಿಪಾಯದ ಇಟ್ಟಿಗೆಗಳನ್ನು ಒಂದಕ್ಕೊಂದು ಭದ್ರಪಡಿಸಿರುವುದೇ ಜನಪ್ರಿಯ ನೈತಿಕತೆಯ ಗಾರೆ! ಈ ಜನಪ್ರಿಯ ನೈತಿಕತೆ ಎಂಬುದು ಬಹಳ ವಿಸ್ತಾರವಾದ ಸಂಗತಿ. ಅದು ಉಗ್ರಗಾಮಿಗಳನ್ನು ಒಪ್ಪಿಕೊಳ್ಳುವುದರಿಂದ ಹಿಡಿದು, ಸಾರ್ವಜನಿಕ ಧಾರ್ಮಿಕ ಅಂಧಾದುಂದಿ (ಹಿಂಸೆ ಮತ್ತು ಗೂಂಡಾಗಿರಿಯ ಹೊರತಾಗಿಯೂ ಯಾವುದೇ ಕಾನೂನು ಕಡಿವಾಣವಿಲ್ಲದೆ ವಿಜೃಂಭಿಸುವ ಕನ್ವಾರಿಯಾಸ್‌ನಂತಹ ಗುಂಪುಗಳಿಗೆ ಸರ್ಕಾರಿ ಅಭಯ), ಒಂದು ಕಾಲದಲ್ಲಿ ಖಾಸಗಿ ನಂಬಿಕೆ ಮತ್ತು ಆಚರಣೆಗಳಾಗಿದ್ದ (ಹಿಂದೂ, ಜೈನ ಆಚರಣೆಗಳ ದಿನ ಮಾಂಸ ಮಾರಾಟ ನಿಷೇಧದಂಥವು) ಸಂಗತಿಗಳನ್ನು ಸರ್ಕಾರಿ ನೀತಿಗಳನ್ನಾಗಿ ಮಾಡುವವರೆಗೆ ಈ ಜನಪ್ರಿಯ ನೈತಿಕತೆಯ ವ್ಯಾಪ್ತಿ ಹಿಗ್ಗಿದೆ. ಇಷ್ಟು ದೂರ ಕ್ರಮಿಸಿದ ಬಳಿಕ ಇನ್ನೇನು, ಪೊಲೀಸ್ ಅಧಿಕಾರಿಗಳು ಹಿಂದೂ ಮೆರವಣಿಗೆಗಳ ನೇತೃತ್ವ ವಹಿಸಿ, ಜೈಶ್ರೀರಾಮ್ ಎಂದು ಘೋಷಣೆ ಕೂಗುವುದು ದೂರದ ಮಾತಲ್ಲ. ಹೀಗೆ, ಜನಪ್ರಿಯ ನೈತಿಕತೆಯನ್ನೇ ಮುಖ್ಯವಾಹಿನಿಯ ನಿಯಮವಾಗಿ, ರೂಢಿಯಾಗಿ ಪರಿವರ್ತಿಸಿರುವುದರೊಂದಿಗೆ, ಸಮಾಜದ ವಿಭಜನೆ, ರಾಜಕಾರಣಿಗಳು, ಆಡಳಿತ ವರ್ಗ ಹಾಗೂ ನ್ಯಾಯಾಧೀಶರು ಸೇರಿದಂತೆ ಭಾರತ ಸರ್ಕಾರದ ಪ್ರತಿನಿಧಿಗಳೇ ಬಹುಸಂಖ್ಯಾತರ ನಡವಳಿಕೆಯನ್ನೇ ಅಧಿಕೃತ ನೀತಿಯಾಗಿ ಪಾಲಿಸುವುದು ಕೂಡ ಜೊತೆಜೊತೆಯಲ್ಲೇ ಘಟಿಸುತ್ತಿದೆ.

ಸಲಿಂಗ ಪ್ರೇಮವನ್ನು ನಿರಪರಾಧಗೊಳಿಸುವ ತಮ್ಮ ಮಹತ್ವದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಗುರುವಾರ (ಸೆ.6), “ಜನಪ್ರಿಯ ಭಾವನೆ ಅಥವಾ ಬಹುಸಂಖ್ಯಾತವಾದಕ್ಕೆ ಮೇಲುಗೈ ಆಗದಂತೆ ಅದನ್ನು ಬಗ್ಗುಬಡಿಯುವುದು ಸರ್ಕಾರದ ಮೂರೂ ಅಂಗಗಳ ಹೊಣೆಗಾರಿಕೆ,” ಎಂದಿದ್ದಾರೆ. ಅದೇ ನ್ಯಾ.ಮಿಶ್ರಾ ಅವರೇ ರಾಷ್ಟ್ರಗೀತೆಯನ್ನು ಸಿನಿಮಾ ಮಂದಿರಗಳಲ್ಲಿ ಕಡ್ಡಾಯಗೊಳಿಸಿದ್ದ ತಮ್ಮ ತೀರ್ಪಿನಲ್ಲಿ ಇದೇ ಬಹುಸಂಖ್ಯಾತವಾದಕ್ಕೆ ತಲೆಬಾಗಿದ್ದರು ಎಂಬುದು ಬೇರೆ ವಿಷಯ. ಆದರೆ, ಇದೀಗ ಅವರು “ಏಕರೀತಿಯ, ನಿರಂತರ ಮತ್ತು ಸಿದ್ಧ ಮಾದರಿಯ ತತ್ವ-ಸಿದ್ದಾಂತವನ್ನು ಇಡೀ ಸಮಾಜದ ಮೇಲೆ ಹೇರುವುದು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆ ಆಗುತ್ತದೆ,” ಎಂದು ಈ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. “ಯಾವುದೋ ಕಾಲಘಟ್ಟದಲ್ಲಿ ಅತ್ಯಂತ ಜನಪ್ರಿಯವಾದ ಭಾವನೆಗಳನ್ನು ಸಾಂವಿಧಾನಿಕ ನೈತಿಕತೆ ಮತ್ತು ಬದ್ಧತೆಗೆ ಬದಲಾಗಿ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ,” ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ : ಚರ್ಚೆ, ವಿವಾದದ ದೀರ್ಘ ದಾರಿ ಸವೆಸಿ ಕೊನೆಗೂ ಕಾನೂನಿನ ಒಪ್ಪಿಗೆ ಪಡೆದ ಸಲಿಂಗ ಪ್ರೇಮ

ಸಕಾಲಿಕ ಎಚ್ಚರಿಕೆ

ವೈವಿಧ್ಯತೆಯನ್ನೇ ಮೆರೆಸುವ ಕಾನೂನುಗಳನ್ನು ಹೊಂದಿರುವ ವೈವಿಧ್ಯಮಯ ದೇಶದ ಚಿತ್ರಣ ಇದು. ದ್ವೇಷ-ಸೇಡಿನ ಉದ್ದೇಶದಿಂದಲ್ಲದೆ, ಮುಗುಮ್ಮಾಗಿ ಅಲ್ಲದೆ ಅಥವಾ ಆಡಳಿತರಾರೂಢ ಸಮುದಾಯದ ದ್ವೇಷದ ಸರ್ಕಾರದ ಆಣತಿಯಂತೆ ಅಲ್ಲದೆ, ನ್ಯಾಯವನ್ನು ಅದರ ನಿಜವಾದ ವಿಶಾಲ ಮತ್ತು ಮುಕ್ತ ರೀತಿಯಲ್ಲಿ ಅನುಸರಿಸಿದ್ದಲ್ಲಿ ಏನಾಗಬಹುದು ಎಂಬುದಕ್ಕೆ ಈ ತೀರ್ಪು ನಿದರ್ಶನ. ಹಾಗೆ, ಮುಕ್ತ ಮತ್ತು ತರತಮರಹಿತ ನ್ಯಾಯದಾನ ನ್ಯಾಯಸಮ್ಮತ ಮತ್ತು ಒಳಿತಿನ ಎಲ್ಲವನ್ನೂ ಪ್ರೇರೇಪಿಸುತ್ತದೆ, ಸ್ಫೂರ್ತಿ ತುಂಬುತ್ತದೆ. ಅಂತಹ ನ್ಯಾಯದಾನ ದ್ವೇಷವನ್ನು ಕೂಡ ಭರವಸೆಯನ್ನಾಗಿ ಮಾಡಬಲ್ಲದು ಎಂಬುದಕ್ಕೆ ೩೭೭ನೇ ವಿಧಿಯನ್ನು ರದ್ದುಪಡಿಸಿದ ನ್ಯಾಯಾಂಗದ ಕ್ರಮವೇ ನಿದರ್ಶನ. ಆವರೆಗೆ ಸಮಾಜವನ್ನು ಒಡೆಯುವವರು, ಪೂರ್ವಗ್ರಹಪೀಡಿತರು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಮತ್ತು ಸರ್ಕಾರಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದ ಆ ಕಾನೂನನ್ನು ರದ್ದುಪಡಿಸಿದ ತೀರ್ಪು ಹೊರಬೀಳುತ್ತಿದ್ದಂತೆ, ಆ ವಿಷಯ ದಿಢೀರನೆ ಎಲ್ಲರನ್ನೂ ಒಂದುಮಾಡುವ ಸಂಗತಿ ಆಗಿಬಿಟ್ಟಿತು. ಆವರೆಗೆ ಸಲಿಂಗರತಿಯ ವಿರುದ್ಧ ದೊಡ್ಡ ಪ್ರತಿರೋಧ ಒಡ್ಡಿದವರು ಮತ್ತು ನಾಯಸಮ್ಮತವಲ್ಲದ ಹಿಂದಿನ ಕಾನೂನಿನ ಸಮರ್ಥಕರಾಗಿದ್ದವರು ಕೂಡ ಏಕಾಏಕಿಯಾಗಿ ತಾವು ಸಮರ್ಥಿಸಿದ್ದ ಅದೇ ಕಾನೂನಿನ ಅಂತ್ಯಕ್ಕೆ ತಾವೇ ಕಾರಣ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳತೊಡಗಿದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಮಹತ್ವವನ್ನು ಅರಿಯಬೇಕಿದೆ.

ಸದ್ಯ ತೀರಾ ಸಹಜ ಎಂಬಂತಾಗಿರುವ ವಿದ್ಯಮಾನಗಳು ನಿಜವಾಗಿಯೂ ಅಸಹಜ ಎಂಬುದನ್ನು ಆ ತೀರ್ಪು ಸಕಾಲಿಕವಾಗಿ ಎಚ್ಚರಿಸಿದೆ. ಕಾನೂನು ಮತ್ತು ಅದರ ಪಾಲನೆ ಯಾವಾಗಲೂ ನ್ಯಾಯಾಂಗದ ಪ್ರಕ್ರಿಯೆಯ ಮೇಲೆ ನೆಲೆ ಆಗಿರಬೇಕೇ ವಿನಾ ಗುಂಪು ಅಥವಾ ಬಹುಸಂಖ್ಯಾತರ ಜನಪ್ರಿಯ ಭಾವನೆಗಳ ಮೇಲಲ್ಲ ಎಂಬುದನ್ನು ಸಾರಿ ಹೇಳಿದೆ. ಭಾರತ ದೇಶವಿನ್ನೂ, ಹಿಂದೂ ತೀವ್ರವಾದಿಗಳು ನಿರಂತರವಾಗಿ ಪ್ರಯತ್ನಿಸುತ್ತಿರುವ ರೀತಿ, ಸರಿಪಡಿಸಲಾಗದ ಮಟ್ಟಿಗೆ ಕೈತಪ್ಪಿ ಹೋಗಿಲ್ಲ ಎಂಬುದನ್ನೂ ಆ ತೀರ್ಪು ನೆನಪಿಸಿದೆ. ವೈವಿಧ್ಯಮಯ, ಭಿನ್ನ ಒಕ್ಕೂಟವನ್ನು ಸತಾನತ ಮತ್ತು ದೈವಿಕ ಶಾಸ್ತ್ರಗಳ ಬದಲಾಗಿ, ಕೇವಲ ೬೯ ವರ್ಷಗಳ ಹಿಂದಿನ ಸಂವಿಧಾನದ ಬಲದ ಮೇಲೆ ಭದ್ರಪಡಿಸಬಹುದು ಎಂಬುದನ್ನೂ ಈ ತೀರ್ಪು ತೋರಿಸಿಕೊಟ್ಟಿದೆ. ಹಾಗೇ, ಆಧುನಿಕ ಭಾರತಕ್ಕೆ ಮುಂದೆ ಸಾಗಲು ಇರುವುದು ಒಂದೇ ದಾರಿ; ಅದು ಸಂವಿಧಾನವನ್ನು ಅನುಸರಿಸುವುದು ಎಂಬುದನ್ನೂ ಮಹತ್ವದ ಆ ತೀರ್ಪು ಹೇಳಿದೆ.

ಚಿತ್ರಕೃಪೆ: ಸುರಂಜನ ತಿವಾರಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More