ಸಿಹಿ ಸುದ್ದಿ; ಪೆಟ್ರೋಲ್, ಡಿಸೇಲ್ ಸುಂಕ ಇಳಿಸಲಿದ್ದಾರೆ ಸಿಎಂ ಕುಮಾರಸ್ವಾಮಿ!

ಪೆಟ್ರೋಲ್ ಮತ್ತು ಡಿಸೇಲ್ ದರ ಅದೆಷ್ಟೇ ಪ್ರಮಾಣದಲ್ಲಿ ಏರಿದರೂ ಎಕ್ಸೈಜ್ ಸುಂಕ ಕಡಿತ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿದೆ. ಆದರೆ, ರಾಜ್ಯ ಸರ್ಕಾರ ವಿಧಿಸುವ ಸುಂಕ ಕಡಿತ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಕಡಿತ ಎಷ್ಟೆಂಬ ಕುತೂಹಲ ಎಲ್ಲರಲ್ಲಿದೆ

ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಆಚರಿಸಿದರೂ ಸುಂಕ ಇಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿದೆ. ಸುಂಕ ಕಡಿತ ಮಾಡುವಷ್ಟು ಅಪಾಯದ ಮಟ್ಟಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಲ್ಲ ಎಂಬುದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಸಮರ್ಥನೆ.

ಅದೇನೇ ಇರಲಿ, ಕರ್ನಾಟಕದ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ರಾಜ್ಯ ಸರ್ಕಾರ ಹೇರಿರುವ ಸುಂಕವನ್ನು ಕಡಿತ ಮಾಡುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ದೆಹಲಿಯಲ್ಲಿ ಸಾಂದರ್ಭಿಕವಾಗಿ ಅವರು ಹೇಳಿದ್ದರೂ, ರಾಜ್ಯದ ಜನತೆ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗೆ ತಗ್ಗಿಸಲಾದರೂ ಅವರು ಸುಂಕ ಕಡಿತ ಮಾಡಲೇಬೇಕಿದೆ.

ಅಷ್ಟಕ್ಕೂ ಕುಮಾರಸ್ವಾಮಿ ಅವರು ಸುಂಕ ಕಡಿತ ಮಾಡಬೇಕೇಕೆ? ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸದಾಗಿ ತೆರಿಗೆ ಹೇರಿದ್ದರು. ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30ರಿಂದ ಶೇ.32ಕ್ಕೆ ಡಿಸೇಲ್ ಮೇಲಿನ ಸುಂಕವನ್ನು ಶೇ.19ರಿಂದ ಶೇ.21ಕ್ಕೆ ಏರಿಸಿದ್ದರು. ಪರಿಣಾಮವಾಗಿ, ರಾಜ್ಯದಲ್ಲಿ ಪೆಟ್ರೋಲ್ 1.16 ರುಪಾಯಿ ಮತ್ತು ಡಿಸೇಲ್ 1.12 ರುಪಾಯಿ ಹೆಚ್ಚಳವಾಗಿತ್ತು.

ಕುಮಾರಸ್ವಾಮಿ ಅವರು ತಾವೇ ಹೇರಿದ ತೆರಿಗೆ ಪ್ರಮಾಣವನ್ನು ಹಿಂದಕ್ಕೆ ಪಡೆದರೆ ಪೆಟ್ರೋಲ್ ಮತ್ತು ಡಿಸೇಲ್ ಕ್ರಮವಾಗಿ 1.16 ಮತ್ತು 1.12 ರುಪಾಯಿ ಕಡಿಮೆಯಾಗುತ್ತವೆ. ಒಂದು ವೇಳೆ, ಪೆಟ್ರೋಲ್ ಮೇಲಿನ ಸುಂಕವನ್ನು 28ಕ್ಕೆ, ಡಿಸೇಲ್ ಮೇಲಿನ ಸುಂಕವನ್ನು ಶೇ.17ಕ್ಕೆ ತಗ್ಗಿಸಿದರೆ ಪೆಟ್ರೋಲ್ ಮತ್ತು ಡಿಸೇಲ್ ಕ್ರಮವಾಗಿ 2.40 ಮತ್ತು 2.30 ರುಪಾಯಿ ಇಳಿಯುತ್ತದೆ.

ಬೆಂಗಳೂರಿನಲ್ಲಿ ಪೆಟ್ರೋಲ್ 83.39 ರುಪಾಯಿ ಮುಟ್ಟಿದೆ. ಡಿಸೇಲ್ 75.20ರ ಸಮೀಪಕ್ಕೆ ಬಂದಿದೆ. ಸತತ ಏರುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ದರ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ತೀವ್ರಗತಿಯಲ್ಲಿ ಏರಿದೆ. ಈ ಹಿಂದಿನ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಪ್ರಮಾಣ ಗಮನಿಸಿದರೆ, ಸೆಪ್ಟೆಂಬರ್ ತಿಂಗಳ ಮೊದಲ ಎಂಟು ದಿನಗಳಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಏರಿಕೆ ಕಂಡಿವೆ. ಇದುವರೆಗಿನ ಏರಿಕೆಯು ತಿಂಗಳಿಗೆ ಶೇ.2.5ರಿಂದ 4ರಷ್ಟಿರುತ್ತಿತ್ತು. ಆದರೆ, ಸೆಪ್ಟೆಂಬರ್‌ನ ಮೊದಲ ಎಂಟು ದಿನಗಳಲ್ಲಿ ಪೆಟ್ರೋಲ್ ಶೇ.25ರಷ್ಟು ಏರಿದ್ದರೆ, ಡಿಸೇಲ್ ಶೇ.3.5ರಷ್ಟು ಜಿಗಿದಿದೆ

ಪೆಟ್ರೋಲ್ ಮತ್ತು ಡಿಸೇಲ್ ದರ ಎಷ್ಟೇ ಏರಿದರೂ ಎಕ್ಸೈಜ್ ಸುಂಕ ಕಡಿತ ಮಾಡುವ ಉದ್ದೇಶ ಇಲ್ಲ ಎಂದು ಈ ಕೇಂದ್ರ ಸರ್ಕಾರ ಹಲವು ಬಾರಿ ಸ್ಪಷ್ಟಪಡಿಸಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯೂ ಸದ್ಯಕ್ಕೆ ಇಳಿಯುವ ಸೂಚನೆಗಳಿಲ್ಲ. ಹೀಗಾಗಿ, ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಶೇ.5ಕ್ಕಿಂತ ಹೆಚ್ಚು ಏರಿಕೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಮೋದಿ ರೇಟ್ ಕಾರ್ಡ್| ಡಿಸೇಲ್ 21%, ಪೆಟ್ರೋಲ್ 15.24% ಏರಿಕೆ, ರುಪಾಯಿ 12.06% ಇಳಿಕೆ

ಆ.31ರಂದು 72.46 ರುಪಾಯಿ ಇದ್ದ ಡಿಸೇಲ್ ದರ ಸೆ.10ರಂದು 75.20 ರುಪಾಯಿಗೆ ಏರಿದೆ. ಅಂದರೆ, ಈ ಹತ್ತು ದಿನಗಳಲ್ಲಿ 2.73 ರುಪಾಯಿ ಜಿಗಿದಿದೆ. ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 30 ಪೈಸೆಯಷ್ಟು ಏರಿಕೆಯಾಗಿದೆ. ಆ.31ರಂದು 81.07 ರುಪಾಯಿ ಇದ್ದ ಪೆಟ್ರೋಲ್, ಸೆ.10ರಂದು 83 ರುಪಾಯಿ ಮುಟ್ಟಿದೆ. ಈ ಎಂಟು ದಿನಗಳಲ್ಲಿ 2.32 ರುಪಾಯಿ ಏರಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 24 ಪೈಸೆ ಏರಿಕೆಯಾಗಿದೆ.

ಪೆಟ್ರೋಲ್ ಮತ್ತು ಡಿಸೇಲ್‌ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಆದಾಯ ಬರುತ್ತಿದೆ. ಹೀಗಾಗಿ, ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡಿಸೇಲ್ ತರಬೇಕೆಂಬ ಬೇಡಿಕೆ ಸದ್ಯಕ್ಕೆ ಈಡೇರುವ ಸಾಧ್ಯತೆ ಇಲ್ಲ. ಒಂದು ವೇಳೆ ಜಿಎಸ್ಟಿ ವ್ಯಾಪ್ತಿಗೆ ಬಂದರೆ, ಪೆಟ್ರೋಲ್‌ಗೆ 50 ರುಪಾಯಿ, ಡಿಸೇಲ್‌ಗೆ 40 ರುಪಾಯಿ ದರ ನಿಗದಿ ಆಗುವ ಸಾಧ್ಯತೆ ಇದೆ.

ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!
ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ
ಖಾಸಗಿ ಮಾಹಿತಿ ಸಂರಕ್ಷಣೆಯ ಮಸೂದೆಯಲ್ಲಿ ಖಾಸಗಿತನಕ್ಕೇ ಇಲ್ಲ ಬೆಲೆ!
Editor’s Pick More