ಸಹಭಾಗಿ ಪತ್ರಿಕೋದ್ಯಮ | ಆಡಳಿತ ಲೋಪ ಬಹಿರಂಗಪಡಿಸುವಲ್ಲಿ ಕೈಜೋಡಿಸಿದ ‘ಎಕನಾಮಿಕ್ ಟೈಮ್ಸ್’

ಬೆಂಗಳೂರು ಗ್ರಾಮಾಂತರದ ಸರ್ಕಾರಿ ಭೂಮಿ ಲಪಟಾಯಿಸಲು ಹೂಡಿರುವ ಕರಾಮತ್ತಿನ ಕುರಿತು ‘ದಿ ಸ್ಟೇಟ್’ ಪ್ರಕಟಿಸಿದ್ದ ವರದಿ ಕಂದಾಯ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ‘ಎಕನಾಮಿಕ್ ಟೈಮ್ಸ್‌’ ಕೂಡ ಈ ಕುರಿತು ವರದಿ ಪ್ರಕಟಿಸುವ ಮೂಲಕ ಲೋಪಗಳನ್ನು ಬೆಳಕಿಗೆ ತಂದಿದೆ

‘ಭೂಮಿ’ ಕೇಂದ್ರಕ್ಕೆ ಲಗ್ಗೆ ಇಟ್ಟಿರುವ ವ್ಯವಸ್ಥಿತ ಜಾಲ ಹೇಗೆ ಸರ್ಕಾರಿ ಬೀಳುಭೂಮಿಗಳನ್ನು ಕಬಳಿಸಲು ಸಾಫ್ಟ್‌ವೇರ್‌ ಬಳಸಿಕೊಳ್ಳುತ್ತಿದೆ ಎಂಬುದನ್ನು ‘ದಿ ಸ್ಟೇಟ್‌’ ಸೆ.೫ ಮತ್ತು ೬ರಂದು ಬಹಿರಂಗಪಡಿಸಿತ್ತು. ಇದು ‘ಭೂಮಿ’ ಸಾಫ್ಟ್‌ವೇರ್‌ ಕೇಂದ್ರ ಕಚೇರಿಯಲ್ಲಿನ ತಂತ್ರಜ್ಞರ ವಲಯದಲ್ಲಿ ನಡುಕ ಹುಟ್ಟಿಸಿತ್ತು.

ಇದೀಗ ಇದೇ ವರದಿಯನ್ನು ‘ದಿ ಎಕನಾಮಿಕ್ ಟೈಮ್ಸ್‌’ ಕೂಡ ಪ್ರಕಟಿಸಿದೆ. ಸರ್ಕಾರಿ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ‘ದಿ ಸ್ಟೇಟ್‌’ನ ವರದಿಯನ್ನು ಮುಂದುವರಿಸಿದೆಯಲ್ಲದೆ, ಸಹಭಾಗಿ ಪತ್ರಿಕೋದ್ಯಮವನ್ನು ವಿಸ್ತರಿಸಿದೆ. ಮಾಧ್ಯಮ ವಲಯದಲ್ಲಿ ಇದೊಂದು ಉತ್ತಮ ಬೆಳವಣಿಗೆ.

ಕಂದಾಯ ಇಲಾಖೆಯ ಅಧಿಕಾರಿಗಳು, ಕೆಲ ಸಿಬ್ಬಂದಿ ತಂತ್ರಾಂಶವನ್ನು ದುರುಪಯೋಗಪಡಿಸಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಗೊಬ್ಬರಗುಂಟೆ ಗ್ರಾಮದಲ್ಲಿ ೧೯ ಎಕರೆ ವಿಸ್ತೀರ್ಣದ ಸರ್ಕಾರಿ ಬೀಳುಭೂಮಿಯನ್ನು ಕಬಳಿಸಲು ಶಾಮೀಲಾಗಿರುವುದನ್ನು ಬೆಳಕಿಗೆ ತಂದಿತ್ತು. ಅಲ್ಲದೆ, ಬಹುಕೋಟಿ ರು. ಮೌಲ್ಯವುಳ್ಳ ಸರ್ಕಾರಿ ಬೀಳುಭೂಮಿಗಳು ರಿಯಲ್‌ ಎಸ್ಟೇಟ್‌ ಕಂಪನಿಗಳು, ಭೂ ಮಾಫಿಯಾ ಮತ್ತು ಪ್ರಭಾವಿಗಳ ಪಾಲಾಗುತ್ತಿರುವುದನ್ನು ವರದಿ ಮೂಲಕ ಬಹಿರಂಗಪಡಿಸಿತ್ತು.

ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಗೊಬ್ಬರಗುಂಟೆ ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಜಮೀನು ಸರ್ಕಾರಿ ಬೀಳು ಎಂದು ವರ್ಗೀಕೃತವಾಗಿದೆ. ೧೯೬೮-೬೯ರಿಂದ ೨೦೦೧-೦೨ನೇ ಸಾಲಿನ ಕೈಬರಹದ ಪಹಣಿ ಮತ್ತು ಆರ್‌ಟಿಸಿ ಕಾಲಂ (೯)ರಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿತ್ತು. ಅಲ್ಲದೆ, ಕಾಲಂ ೧೨(೨)ರಲ್ಲಿ ವಿ ಪಿ ಫಾರೆಸ್ಟ್‌ ಎಂದು ದಾಖಲಾಗಿತ್ತು. ಅಲ್ಲದೆ, ೨೦೧೬-೧೭ನೇ ಸಾಲಿನಲ್ಲಿ ಸರ್ಕಾರದಿಂದ ಗ್ರಾಮಲೆಕ್ಕಿಗರಿಗೆ ನೀಡಿರುವ ಗಣಕೀಕೃತ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ದಾಖಲಾಗಿತ್ತು.

ಇದನ್ನೂ ಓದಿ : ಸರ್ಕಾರಿ ಭೂಕಬಳಿಕೆ: ‘ಭೂಮಿ’ ನಿರ್ವಹಣೆ ಕೇಂದ್ರ ಕಚೇರಿಯಲ್ಲೇ ಒಳಸಂಚು?

ಹಲವು ವರ್ಷಗಳಿಂದಲೂ ಸರ್ಕಾರಿ ಬೀಳು ಎಂದು ದಾಖಲಾಗಿದ್ದರೂ ಗಣಕೀಕೃತ ಪಹಣಿಯಲ್ಲಿ ಇದ್ದಕ್ಕಿದ್ದಂತೆ ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರ ಹೆಸರು ಸೇರ್ಪಡೆಯಾಗಿದೆಲ್ಲದೆ, ಇವರ ಹೆಸರಿಗೇ ೧೯ ಎಕರೆ ೧೪ ಗುಂಟೆ ನಮೂದಾಗಿತ್ತು.

ಗೊಬ್ಬರಗುಂಟೆ ಗ್ರಾಮ, ದೇವನಹಳ್ಳಿ ಪಟ್ಟಣಕ್ಕೆ ಕೇವಲ ೩ ಕಿಮೀ ದೂರದಲ್ಲಿದೆ. ಹೀಗಾಗಿ, ಈ ಭಾಗದಲ್ಲಿ ಜಮೀನುಗಳಿಗೆ ತುಂಬಾ ಬೇಡಿಕೆ ಇದೆಯಲ್ಲದೆ, ಮಾರುಕಟ್ಟೆ ದರವೂ ಹೆಚ್ಚಿದೆ. ಕೃಷಿಭೂಮಿ ಎಕರೆಗೆ ಒಂದು ಕೋಟಿ ರು. ಮಾರುಕಟ್ಟೆ ದರವಿದ್ದರೆ, ಸಬ್‌ ರಿಜಿಸ್ಟ್ರಾರ್‌ ದರ ಎಕರೆಗೆ ೩೦ರಿಂದ ೪೦ ಲಕ್ಷ ರು.ಇದೆ. ಭೂ ಪರಿವರ್ತನೆಯಾಗಿದ್ದಲ್ಲಿ ಈ ದರ ದುಪ್ಪಟ್ಟಾಗಲಿದೆ. ವಾಸಯೋಗ್ಯ ನಿವೇಶನಕ್ಕೆ ಚದರ ಅಡಿಗೆ ೧,೦೦೦ ರು.ಗಳಿಂದ ೨,೨೦೦ ರು. ದರವಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಸರ್ಕಾರಿ ಬೀಳು ಜಮೀನುಗಳ ಮೇಲೆ ಭೂ ಮಾಫಿಯಾ ಕಣ್ಣು ಹಾಕಿದೆ ಎನ್ನಲಾಗುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More