ಐಎಎಸ್‌ ಅಧಿಕಾರಿಯ ನವಜಾತ ಶಿಶುವಿಗೆ ಚಿತ್ರಹಿಂಸೆ; ಖಾಸಗಿ ನರ್ಸಿಂಗ್‌ ಹೋಂ ವಿರುದ್ಧ ದೂರು

ಖಾಸಗಿ ಆಸ್ಪತ್ರೆಗಳ ದುಂಡಾವರ್ತನೆ ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಅಲ್ಲಿನ ವೈದ್ಯಾಧಿಕಾರಿಗಳಾಗಲೀ, ಆಡಳಿತ ಮಂಡಳಿಯಾಗಲೀ ಇನ್ನೂ ಸುಧಾರಿಸಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರು ಯಾತನೆ ಅನುಭವಿಸಿರುವುದು ಇದಕ್ಕೆ ನಿದರ್ಶನ

ನವಜಾತ ಶಿಶುವಿಗೆ ಚಿಕಿತ್ಸೆ ಮತ್ತು ಆರೈಕೆ ವಿಚಾರದಲ್ಲಿ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯ ಗಂಭೀರ ಲೋಪ ಕುರಿತು ಖುದ್ದು ಐಎಎಸ್‌ ಮಹಿಳಾ ಅಧಿಕಾರಿ ಪಲ್ಲವಿ ಅಕುರಾತಿ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಸಣ್ಣಪುಟ್ಟ ಚಿಕಿತ್ಸೆಗೂ ದುಬಾರಿ ಸ್ಕ್ಯಾನಿಂಗ್, ಅನಗತ್ಯ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕರಿಂದ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ. ಆದರೆ, ಈ ಬಾರಿ ಆಕ್ರೋಶ ವ್ಯಕ್ತಪಡಿಸಿರುವುದು ಐಎಎಸ್ ಮಹಿಳಾ ಅಧಿಕಾರಿ ಎಂಬುದು ಗಮನಾರ್ಹ. ಇವರು ಜನ್ಮ ನೀಡಿದ ನವಜಾತ ಶಿಶುವಿಗೆ ಖಾಸಗಿ ಆಸ್ಪತ್ರೆಯ ವೈದ್ಯರು ಅನಗತ್ಯ ಚಿಕಿತ್ಸೆ ನೀಡಿರುವ ಆಘಾತಕಾರಿ ಸಂಗತಿ ಕುರಿತು ದೂರಿನಲ್ಲಿ ವಿವರಿಸಲಾಗಿದೆ.

ಆರೋಪಕ್ಕೆ ಗುರಿಯಾಗಿರುವುದು ಬೆಂಗಳೂರಿನ ಇಂದಿರಾ ನಗರದಲ್ಲಿರುವ ‘ಲೈಫ್ ಫ್ಲಸ್‌’ ಹೆಸರಿನ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಎಂಬುದು ದೂರಿನಿಂದ ತಿಳಿದುಬಂದಿದೆ. ವೈದ್ಯರು ಮತ್ತು ನರ್ಸ್ ಸೇರಿದಂತೆ ಇತರ ಸಿಬ್ಬಂದಿಯ ಕರ್ತವ್ಯಲೋಪ ಹಾಗೂ ಅವರ ಅನುಚಿತ ವರ್ತನೆಯಿಂದಾಗಿ ಆಸ್ಪತ್ರೆಯಲ್ಲಿ ಅನುಭವಿಸಿದ್ದ ಯಾತನೆ ಕುರಿತು ಐಎಎಸ್‌ ಮಹಿಳಾ ಅಧಿಕಾರಿ ಪಲ್ಲವಿ ಅಕುರಾತಿ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ಇಮೇಲ್ ಮೂಲಕ ಸಲ್ಲಿಸಿರುವ ದೂರಿನಲ್ಲಿ ನೋವು ತೋಡಿಕೊಂಡಿದ್ದಾರೆ. ಈ ದೂರಿನ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ದೂರು ಬಂದಿರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್‌ ಅವರು ‘ದಿ ಸ್ಟೇಟ್‌’ಗೆ ಖಚಿತಪಡಿಸಿದ್ದಾರೆ. ಈ ಸಂಬಂಧ ತಜ್ಞರ ತಂಡವನ್ನು ನೇಮಿಸಲಾಗಿದೆ ಎಂದೂ ಪ್ರತಿಕ್ರಿಯೆ ನೀಡಿದ್ದಾರೆ.

೨೦೦೯ನೇ ಬ್ಯಾಚ್‌ನ ಪಲ್ಲವಿ ಅಕುರಾತಿ ಅವರು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಡಿಪಿಎಆರ್) ಜಾಗೃತ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆಗಳನ್ನು ಈ ವಿಭಾಗ ಮೇಲ್ವಿಚಾರಣೆ ನಡೆಸುತ್ತಿದೆ.

“ಐಎಎಸ್‌ ಅಧಿಕಾರಿಗೆ ಇಂತಹ ಅನುಭವ ಅಗಿದೆ ಎಂದರೆ, ಅನಕ್ಷರಸ್ಥ ಮಂದಿಗೆ ಇಂತಹ ಆಸ್ಪತ್ರೆಗಳಲ್ಲಿ ಎಷ್ಟರಮಟ್ಟಿಗೆ ಚಿಕಿತ್ಸೆ ದೊರೆಯಲಿದೆ? ಹೀಗಾಗಿ, ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು,” ಎಂದು ದೂರಿನಲ್ಲಿ ಅವರು ಹೇಳಿದ್ದಾರೆ.

ಪಲ್ಲವಿ ಅಕುರಾತಿ ಅವರು ಕಳಿಸಿರುವ ದೂರನ್ನು ಗಮನಿಸಿದ್ದೇನೆ. ಇಲಾಖೆಯಲ್ಲಿ ನಡೆಯುತ್ತಿರುವ ನಿರಂತರ ಸಭೆಗಳಲ್ಲಿ ಭಾಗವಹಿಸುತ್ತಿದ್ದು, ಸಭೆಗಳು ಪೂರ್ಣಗೊಂಡ ಬಳಿಕ ಕರ್ನಾಟಕ ವೈದ್ಯಕೀಯ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ.
ಶ್ರೀನಿವಾಸ್‌, ಡಿಎಚ್‌ಒ, ಬೆಂಗಳೂರು ನಗರ ಜಿಲ್ಲೆ (ಪ್ರಭಾರ)

ಲೈಫ್‌ ಫ್ಲಸ್‌ ಆಸ್ಪತ್ರೆಗೆ ದಾಖಲಾಗಿದ್ದ ಪಲ್ಲವಿ ಅಕುರಾತಿ ಅವರು, ೨೦೧೮ ಜುಲೈ ೧೮ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಅದಕ್ಕೂ ಮುನ್ನ, ಅಂದರೆ, “೩೯ ವಾರ ೬ ದಿನಗಳ ಗರ್ಭಾವಸ್ಥೆಯಲ್ಲಿ ತಪಾಸಣೆ ನಡೆಸಿದ್ದ ಡಾ.ಭಾರ್ಗವಿ ಅವರು, ಮಗುವಿನ ತಲೆ ಇನ್ನೂ ಸೂಕ್ತವಾದ ಜಾಗದಲ್ಲಿ ಇಲ್ಲವೆಂದು ಹೇಳಿದ್ದರಲ್ಲದೆ, ಭ್ರೂಣದ ಹೃದಯ ಬಡಿತ ಮೇಲ್ವಿಚಾರಣೆ ಪರೀಕ್ಷೆ ಕೂಡ ನಡೆಸಿದ್ದರು. ಈ ಆಧಾರದ ಮೇಲೆ ಭ್ರೂಣದ ಹೃದಯ ಬಡಿತವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಅಲ್ಲದೆ, ಇದೇ ವೇಳೆಯಲ್ಲಿ ಪ್ರಸವ ವೇದನೆಯೂ ಆರಂಭಗೊಂಡಿರುತ್ತದೆ. ಆದರೆ, ಈ ರೀತಿಯ ನೋವು ಅರಿವಿಗೆ ಬರುತ್ತಿಲ್ಲ ಎಂದು ಡಾ.ಭಾರ್ಗವಿ ಅವರು ತಮಗೆ ತಿಳಿಸಿದ್ದರು,” ಎಂದು ಪಲ್ಲವಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೀಗಾಗಿ, ಸಾಮಾನ್ಯ ಹೆರಿಗೆ ನಡೆಸುವುದು ಅಸಾಧ್ಯವೆಂದು ತಿಳಿಸಿದ್ದ ವೈದ್ಯರು, ಸಿಜೇರಿಯನ್ ಮಾಡುವುದೇ ಸುರಕ್ಷಿತವೆಂದು ಸೂಚಿಸಿದ್ದರು. “ವೈದ್ಯರ ಸಲಹೆ, ಸೂಚನೆ ಮೇರೆಗೆ ಸಿಜೇರಿಯನ್‌ಗೆ ಒಳಗಾಗಿದ್ದೆ. ಆದರೆ, ಈ ಸಲಹೆ ನೀಡುವ ಮುನ್ನ ಆಸ್ಪತ್ರೆ ವೈದ್ಯರು ತಮ್ಮನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಿಲ್ಲ!” ಎಂದು ದೂರಿನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಎಂಆರ್‌ಐ ಸ್ಕ್ಯಾನ್‌; ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಯತ್ನ?

ಕರ್ತವ್ಯದಲ್ಲಿದ್ದ ನರ್ಸ್‌ಗಳಿಗೆ ಸರಿಯಾದ ತರಬೇತಿ ಇರಲಿಲ್ಲ. ಅಲ್ಲದೆ, ಕೋಣೆಯೊಳಗೆ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಬರುತ್ತಿದ್ದ ಇತರ ನರ್ಸ್‌ಗಳು ಅನಗತ್ಯವಾಗಿ ಮಧ್ಯಪ್ರವೇಶಿಸುತ್ತಿದ್ದರು. ನವಜಾತ ಶಿಶುವಿನ ಪೋಷಣೆ ವಿಚಾರದಲ್ಲಿ ಅಜಾಗೂರೂಕತೆ ಮತ್ತು ಅಸಡ್ಡೆಯಿಂದ ನಡೆದುಕೊಂಡಿದ್ದರು ಎಂಬ ಅಂಶ ಪಲ್ಲವಿ ಅವರು ನೀಡಿರುವ ದೂರಿನಿಂದ ತಿಳಿದುಬಂದಿದೆ.

ಈ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡುವ ಬದಲು ಸಿಜೇರಿಯನ್‌ ನಡೆಸುತ್ತಿದ್ದಾರೆ. ಮಕ್ಕಳ ವಿಭಾಗದ ತಜ್ಞವೈದ್ಯೆ ಅರುಲ್ ಸೆಲ್ವಿ ಅವರು ನವಜಾತ ಶಿಶುವಿನ ಮೇಲೆ ಫೋಟೋಥೆರಪಿ ಮಾಡಿಸಲು ಬಲವಂತಪಡಿಸಿದ್ದರು. ಬಿಲೀರುಬಿನ್ ಪ್ರಮಾಣ ಕಡಿಮೆಯಾಗಲಿದೆ ಎಂದು ತಪ್ಪು ತಿಳಿವಳಿಕೆ ನೀಡಿ ಪೋಷಕರಲ್ಲಿ ಭಯ ಹುಟ್ಟಿಸಿದ್ದರು. ಇದನ್ನಾಧರಿಸಿಯೇ ಫೋಟೋಥೆರಪಿ ಮಾಡಿದ್ದರು. ಇದಾದ ನಂತರವೂ ಮಗುವಿನ ಆರೈಕೆಯಲ್ಲಿಯೂ ಅಸಡ್ಡೆಯಿಂದ ನಡೆದುಕೊಂಡಿದ್ದರು ಎಂಬ ಸಂಗತಿ ದೂರಿನಿಂದ ಗೊತ್ತಾಗಿದೆ.

“ನವಜಾತ ಶಿಶುವಿಗೆ ಬಲವಂತವಾಗಿ ಫೋಟೋಥೆರಪಿ ಚಿಕಿತ್ಸೆ ಮಾಡಿಸುವುದಲ್ಲದೆ ಮಗುವಿನ ಬಟ್ಟೆಗಳನ್ನು ಹಲವು ಬಾರಿ ಬದಲಾಯಿಸುವ ಮೂಲಕ ದೊಡ್ಡ ಚಿತ್ರಹಿಂಸೆ ನೀಡುವುದರಿಂದ ಆಘಾತಕ್ಕೆ ಒಳಗಾಗಬೇಕಾಗುತ್ತದೆ. ಫೋಟೋಥೆರಪಿ ಚಿಕಿತ್ಸೆಗೆ ಪ್ರತಿದಿನಕ್ಕೆ ೩,೦೦೦ ರು. ಶುಲ್ಕದಂತೆ ಎರಡು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕು ಎಂದು ಶಿಫಾರಸು ಮಾಡುತ್ತಿದ್ದಾರೆ. ೬,೦೦೦ ರು.ಗಳಿಗಾಗಿ ನವಜಾತ ಶಿಶುಗಳು ಚಿತ್ರಹಿಂಸೆಗೆ ಒಳಗಾಗಬೇಕಾಗುತ್ತಿದೆ,” ಎಂದು ಪಲ್ಲವಿ ಅಕುರಾತಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಅಲ್ಲದೆ, ಈ ಆಸ್ಪತ್ರೆಯ ಆಡಳಿತ ಮಂಡಳಿಯು ಪಲ್ಲವಿ ಅಕುರಾತಿ ಅವರಿಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ವರದಿ ನೀಡಿರಲಿಲ್ಲ. ಈ ಬಗ್ಗೆ ಒತ್ತಾಯಿಸಿದಾಗ ಹಿಂದಿನ ದಿನಾಂಕವನ್ನು ನಮೂದಿಸಿ ಬಿಡುಗಡೆ ವರದಿ ನೀಡಿದ್ದಾರೆ. ಆದರೆ, ಈ ವರದಿಯೂ ಹಲವು ತಪ್ಪುಗಳಿಂದ ಕೂಡಿದೆ. ಹಾಗೆಯೇ, ಆಸ್ಪತ್ರೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳೂ ಇಲ್ಲ ಎಂಬುದನ್ನು ಪಲ್ಲವಿ ಅವರು ದೂರಿನಲ್ಲಿ ಬೆಳಕಿಗೆ ತಂದಿದ್ದಾರೆ. ಈ ಕುರಿತು, ಲೈಫ್‌ ಫ್ಲಸ್‌ ಆಸ್ಪತ್ರೆಯನ್ನು ‘ದಿ ಸ್ಟೇಟ್‌’ ಸಂಪರ್ಕಿಸಿತ್ತಾದರೂ ಆಸ್ಪತ್ರೆಯ ಮಂಡಳಿ ಮತ್ತು ವೈದ್ಯರ ತಂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಾಳೆ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ ಸಿಬ್ಬಂದಿ, ಸಂಪರ್ಕವನ್ನು ಕಡಿತಗೊಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More