ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಅತಿವೃಷ್ಟಿ ಅವಾಂತರ: ೨ ಸಾವಿರ ಕೋಟಿ ರು. ಬಿಡುಗಡೆಗೆ ಕೇಂದ್ರಕ್ಕೆ ಸಿಎಂ ಎಚ್‌ಡಿಕೆ ಮನವಿ

ಕೊಡಗು ಹಾಗೂ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಅಪಾರ ನಷ್ಟವಾಗಿದೆ. ಇಲ್ಲಿ ಪುನರ್‌ ವಸತಿ ಕಲ್ಪಿಸಲು ತಕ್ಷಣ ೨ ಸಾವಿರ ಕೋಟಿ ರು. ಬಿಡುಗಡೆ ಮಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ನಿಯೋಗ ಆಗ್ರಹಿಸಿದೆ. ದೆಹಲಿಯಲ್ಲಿ ಮೋದಿಯವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು ಅತಿವೃಷ್ಟಿಯಿಂದ ೩,೭೦೬ ಕೋಟಿ ರುಪಾಯಿ ನಷ್ಟವಾಗಿದೆ ಎಂದು ಪ್ರಧಾನಿಯವರಿಗೆ ತಿಳಿಸಿದೆ. ಇದಕ್ಕೆ ಸ್ಪಂದಿಸಿದ ಮೋದಿಯವರು ಸಮೀಕ್ಷೆ ನಡೆಸಲು ಎರಡು ಕೇಂದ್ರ ತಂಡಗಳನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ರಾಜ್ಯದ ೧೭ ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದ ಸಾಕಷ್ಟು ನಷ್ಟವಾಗಿದೆ ಎಂದು ಕುಮಾರಸ್ವಾಮಿ ಅವರು ಮೋದಿಯವರ ಗಮನಸೆಳೆದಿದ್ದಾರೆ. ಸರ್ವಪಕ್ಷ ನಿಯೋಗ ಒಯ್ಯಲಾಗಿತ್ತಾದರೂ ಬಿಜೆಪಿಯ ಯಾವುದೇ ನಾಯಕರು ಹಾಜರಿರಲಿಲ್ಲ.

ಬಂದ್‌ ಯಶಸ್ವಿ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಳವಾಗುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಕರೆ ನೀಡಿದ್ದ ಬಂದ್‌ ಯಶಸ್ವಿಯಾಗಿದೆ. ಬಂದ್‌ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕೆಲವು ಕಡೆ ಬಂದ್‌ ಇದ್ದರೂ ಬೆಂಬಲ ನೀಡಿಲ್ಲ ಎಂದು ಆರೋಪಿಸಿ ಕೆಲವರು ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಿಸಿದ ಘಟನೆಗಳು ವರದಿಯಾಗಿವೆ. ಪೆಟ್ರೋಲ್‌, ಡೀಸೆಲ್‌ ಬೆಲೆ ತಡೆಯುವಲ್ಲಿ ಮೋದಿಯವರ ಸರ್ಕಾರ ವಿಫಲವಾಗಿದೆ. ಅಚ್ಛೇ ದಿನಗಳ ಬದಲಿಗೆ ದುರ್ದಿನಗಳನ್ನು ಎದುರಿಸಬೇಕಿದೆ ಎಂದು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚ್ಚಾತೈಲದ ಬೆಲೆ ನಿಗದಿ ವಿಚಾರ ಕೇಂದ್ರ ಸರ್ಕಾರದ ಕೈಯಲ್ಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಅನುಗುಣವಾಗಿ ಅದು ನಿರ್ಧಾರವಾಗುವುದರಿಂದ ಸರ್ಕಾರ ಏನೂ ಮಾಡಲಾಗದು ಎಂದು ಬಿಜೆಪಿ ಹೇಳಿದೆ.

ಸ್ಪ್ಯಾನಿಷ್‌ ಸಿನಿಮಾ ‘ರೋಮಾ’ಗೆ ಗೋಲ್ಡನ್ ಲಯನ್ ಗೌರವ

‘ರೋಮಾ’ ಸ್ಪ್ಯಾನಿಷ್‌ ಸಿನಿಮಾ 75ನೇ ವೆನಿಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗೋಲ್ಡನ್‌ ಲಯನ್ ಗೌರವಕ್ಕೆ ಪಾತ್ರವಾಗಿದೆ. ಆಸ್ಕರ್ ಪುರಸ್ಕೃತ ನಿರ್ದೇಶಕ ಆಲ್ಫನ್ಸೋ ಕುವಾರಾನ್‌ ನಿರ್ದೇಶನದ ಚಿತ್ರವಿದು. 70ರ ದಶಕದ ಚಿತ್ರಣವಿರುವ ಸಿನಿಮಾದಲ್ಲಿ ಮನೆಗೆಲಸದಾಕೆಯ ದೃಷ್ಟಿಕೋನದಿಂದ ಮೆಕ್ಸಿಕೋ ನಗರದ ಮಧ್ಯಮವರ್ಗದ ಕುಟುಂಬದ ಬದುಕನ್ನು ಚಿತ್ರಿಸಲಾಗಿದೆ. ಚಿತ್ರೋತ್ಸವದ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡಿದ್ದ ಚಿತ್ರ ಗೋಲ್ಡನ್ ಲಯನ್‌ ಪುರಸ್ಕಾರಕ್ಕೆ ಪಾತ್ರವಾಗಿದೆ. 2018ರ ಡಿಸೆಂಬರ್‌ 14ರಂದು ಸಿನಿಮಾ ತೆರೆಕಾಣಲಿದ್ದು, ಅದೇ ದಿನ ನೆಟ್‌ಫ್ಲಿಕ್ಸ್‌ನಲ್ಲೂ ‘ರೋಮಾ’ ಸ್ಟ್ರೀಮ್ ಆಗಲಿದೆ.

ಜಮ್ಮು-ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಿಷ್ಕರಿಸಿದ ಪಿಡಿಪಿ

ಜಮ್ಮು-ಕಾಶ್ಮೀರದಲ್ಲಿ ಡಿಸೆಂಬರ್‌ ತಿಂಗಳಲ್ಲಿ ನಡೆಯಬೇಕಿದ್ದ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪಿಡಿಪಿ ಪಕ್ಷವೂ ಬಹಿಷ್ಕರಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಹಿಷ್ಕರಿಸುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದು, ಮೆಹಬೂಬಾ ಮುಪ್ತಿ ನೇತೃತ್ವದ ಪಿಡಿಪಿ ಕೂಡಾ ಮುಂಬರುವ ನಗರ ಹಾಗೂ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದೆ. ಕಾಶ್ಮೀರಿಗರಿಗೆ ಸಂವಿಧಾನ ನೀಡಿರುವ ವಿಶೇಷ ಅಧಿಕಾರ ಕಲಂ ೩೫ ಎ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ಜ.೧೯ ಕ್ಕೆ ಮುಂದೂಡಿರುವುದು ಈ ಬಹಿಷ್ಕಾರಕ್ಕೆ ಕಾರಣ. ಸುಪ್ರೀಂ ಕೂಡ ಡಿಸೆಂಬರ್‌ನ ಸ್ಥಳೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಕಾರಣ ನೀಡಿತ್ತು.

ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣ; ಇಬ್ಬರಿಗೆ ಮರಣದಂಡನೆ

2007ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಆರೋಪಿಗಳಾದ ಅನಿಕ್ ಶೌಫಿಕ್ ಸಯ್ಯದ್ ಹಾಗೂ ಎಂ ಡಿ ಇಸ್ಲಾಯಿಲ್ ಚೌಧರಿ ಇಬ್ಬರಿಗೆ ಮರಣದಂಡನೆ ವಿಧಿಸಿದ್ದು, ಇನ್ನೋರ್ವ ಆರೋಪಿ ತಾರೀಕ್ ಅಂಜುಂಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ವಿಶೇಷ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. 2007ರ ಅ.೨೫ ರಂದು ಹೈದರಾಬಾದಿನ ಗೋಕುಲ್‌ ಚ್ಯಾಟ್‌ ಮತ್ತು ಲುಂಬಿನಿ ಪಾರ್ಕ್‌ನಲ್ಲಿ ಅವಳಿ ಬಾಂಬ್‌ ಸ್ಫೋಟ ನಡೆದಿತ್ತು. 42 ಜನರು ಮೃತಪಟ್ಟಿದ್ದರು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣ; ಪೊಲೀಸ್ ಅಧಿಕಾರಿಗಳು ನಿರಾಳ

ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್‌ ಪ್ರಕರಣ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ಸೋಮವಾರ ಅಧೀನ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಗುಜರಾತ್ ಎಟಿಎಸ್‌ನ ಮಾಜಿ ಮುಖ್ಯಸ್ಥ ಡಿ ಜಿ ವಂಝಾರ ಮತ್ತು ಗುಜರಾತ್ ಹಾಗೂ ರಾಜಸ್ಥಾನದ ಇತರ ನಾಲ್ವರು ಪೊಲೀಸರ ಕುರಿತಾದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಮೂರ್ತಿ ಎ ಎಂ ಬಾದರ್ ವಜಾಗೊಳಿಸಿದರು. ೨೦೦೫-೦೬ರಲ್ಲಿ ಸೊಹ್ರಾಬುದ್ದೀನ್ ಶೇಖ್, ಪತ್ನಿ ಕೌಸರ್ ಬೀ ಹಾಗೂ ಸಹಚರ ತುಳಸೀರಾಂ ಪ್ರಜಾಪತಿಯನ್ನು ಎನ್‌ಕೌಂಟರ್‌ನಲ್ಲಿ ಕೊಂದ ಪ್ರಕರಣದಲ್ಲಿ ಈ ಮೇಲಿನ ಅಧಿಕಾರಿಗಳ ಹೆಸರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸೊಹ್ರಾಬುದ್ದೀನ್ ಸಹೋದರ ರುಬಾಬುದ್ದೀನ್ ಬಾಂಬೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.

ರುಪಾಯಿ ಕುಸಿತದ ಪರಿಣಾಮ; ಷೇರುಪೇಟೆಯಲ್ಲಿ ತಲ್ಲಣ

ಸತತ ಏರುಹಾದಿಯಲ್ಲಿ ಸಾಗಿದ್ದ ಷೇರುಪೇಟೆಯು ರುಪಾಯಿ ಕುಸಿತ ಮತ್ತು ಜಾಗತಿಕ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ ವಾರದ ಆರಂಭದ ವಹಿವಾಟಿನಲ್ಲೇ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಸೆನ್ಸೆಕ್ಸ್ 467 ಅಂಶ, ನಿಫ್ಟಿ 151 ಅಂಶ ಕುಸಿದಿವೆ. ನಿಫ್ಟಿ 11,500 ಮತ್ತು ಸೆನ್ಸೆಕ್ಸ್ 38,000ದ ನಿರ್ಣಾಯಕ ಮಟ್ಟಕ್ಕಿಂತ ಕೆಳಕ್ಕಿಳಿದಿವೆ. ಮಾರ್ಚ್ 16ರ ನಂತರ ಒಂದೇ ದಿನದಲ್ಲಿ ಇದು ಗರಿಷ್ಠ ಪ್ರಮಾಣದ ಕುಸಿತವಾಗಿದೆ. ನಿಫ್ಟಿ ಐಟಿ ಸೂಚ್ಯಂಕದ ಹೊರತಾಗಿ ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಇಳಿಜಾರಿನಲ್ಲಿ ಸಾಗಿವೆ. ರುಪಾಯಿ ಕುಸಿತ ಮುಂದುವರೆದಂತೆ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 167 ರುಪಾಯಿ ಏರಿದ್ದು 30,660ರ ಆಜುಬಾಜಿನಲ್ಲಿ ವಹಿವಾಟಾಗಿದೆ

ಆಫ್ಘಾನ್ ಮೇಲೆ ತಾಲಿಬಾನ್ ಉಗ್ರರ ದಾಳಿ; ೧೩ ಜನರ ಸಾವು

ಆಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಸೋಮವಾರ ದಾಳಿ ನಡೆಸಿದ್ದು, ೩೭ಕ್ಕೂ ಅಧಿಕ ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ದಷ್ಟಿ ಆರ್ಚಿ ಬಳಿ ೧೩ ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದು, ೧೫ ಸಿಬ್ಬಂದಿಗೆ ತೀವ್ರ ಗಾಯವಾಗಿದೆ. ಗುಂಡಿನ ದಾಳಿಯು ಸೆ.೯ರ ರವಿವಾರದಿಂದ ಆರಂಭವಾಗಿ ಸೋಮವಾರ ಬೆಳಗ್ಗೆವರೆಗೂ ಮುಂದುವರಿದಿತ್ತು ಎಂದು ಪ್ರಾಂತೀಯ ಕೌನ್ಸಿಲ್‌ನ ಮುಖ್ಯಸ್ಥ ಮೊಹಮ್ಮೊದ್ ಯುಸೂಫ್ ಅಯುಬಿ ಮಾಹಿತಿ ನೀಡಿದ್ದಾರೆ.

ಏಷ್ಯಾ ಕಪ್‌ಗೆ ದಿನೇಶ್ ಚಂಡೀಮಲ್ ಅಲಭ್ಯ

ಶ್ರೀಲಂಕಾ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಚಂಡೀಮಲ್ ಇದೇ ತಿಂಗಳು ೧೫ರಿಂದ ದುಬೈನಲ್ಲಿ ಶುರುವಾಗಲಿರುವ ಪ್ರತಿಷ್ಠಿತ ಏಷ್ಯಾ ಕಪ್‌ಗೆ ಅಲಭ್ಯವಾಗಿದ್ದಾರೆ. ೨೮ರ ಹರೆಯದ ಚಂಡೀಮಲ್ ಬದಲಿಗೆ ನಿರೋಷನ್ ಡಿಕ್ವೆಲ್ಲಾಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಬೆರಳ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಚಂಡೀಮಲ್, ವಿಂಡೀಸ್ ಪ್ರವಾಸದ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಐಸಿಸಿಯಿಂದ ಆರು ಪಂದ್ಯಗಳಿಂದ ನಿಷೇಧಕ್ಕೂ ಗುರಿಯಾಗಿದ್ದರು. ಇದರಿಂದ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಅವರು ವಂಚಿತರಾಗಿದ್ದರು. ಪ್ರಕಟಿತ ತಂಡ: ಆಂಜೆಲೊ ಮ್ಯಾಥ್ಯೂಸ್ (ನಾಯಕ), ಕುಶಾಲ್ ಪೆರೇರಾ, ಕುಶಾಲ್ ಮೆಂಡಿಸ್, ಉಪುಲ್ ತರಂಗ, ದನುಷ್ಕಾ ಗುಣತಿಲಕ, ತಿಸಾರ ಪೆರೇರಾ, ದಾಸುನ್ ಶನಾಕ, ಧನಂಜಯ ಡಿಸಿಲ್ವಾ, ಅಕಿಲ ಧನಂಜಯ, ದಿಲ್ರುವಾನ್ ಪೆರೇರಾ, ಅಮಿಲಾ ಅಪೊನ್ಸೊ, ಕಾಸುನ್ ರಜಿತಾ, ಸುರಂಗ ಲಕ್ಮಲ್, ದುಷ್ಮಂತಾ ಚಮೀರಾ, ಲಸಿತ್ ಮಾಲಿಂಗ, ನಿರೋಷನ್ ಡಿಕ್ವೆಲ್ಲಾ.

ವಿದಾಯದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕುಕ್

ಆರಂಭಿಕ ಆಟಗಾರ ಅಲಸ್ಟೇರ್ ಕುಕ್ (೧೪೭) ವಿದಾಯದ ಪಂದ್ಯದಲ್ಲೂ ಶತಕ ದಾಖಲಿಸಿ ಅಪರೂಪದ ಸಾಧನೆ ಮೆರೆದರು. ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ಅವರೊಂದಿಗೆ ನಾಯಕ ಜೋ ರೂಟ್ (೧೨೫) ಕೂಡ ಶತಕ ದಾಖಲಿಸಿದ ಪರಿಣಾಮ ಇಂಗ್ಲೆಂಡ್ ಭಾರೀ ಮುನ್ನಡೆ ಪಡೆಯಿತು. ಚೊಚ್ಚಲ ಪಂದ್ಯವನ್ನಾಡುತ್ತಿರುವ ಹನುಮ ವಿಹಾರಿ ಒಂದೇ ಓವರ್‌ನಲ್ಲಿ ಈ ಇಬ್ಬರನ್ನೂ ಬೇರ್ಪಡಿಸಿದರಾದರೂ, ೨೫೮ ರನ್‌ಗಳ ಅಮೋಘ ಜತೆಯಾಟ ಭಾರತದ ಸಂಕಷ್ಟ ಹೆಚ್ಚಿಸಿತು. ೧೦೩ ಓವರ್‌ಗಳಾದಾಗ ಇಂಗ್ಲೆಂಡ್, ೬ ವಿಕೆಟ್ ನಷ್ಟಕ್ಕೆ ೩೫೮ ರನ್ ಗಳಿಸಿ ಆ ಮೂಲಕ ೩೯೮ ರನ್ ಮುನ್ನಡೆ ಸಾಧಿಸಿತು. ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರನ್ ಕ್ರಮವಾಗಿ ೧೨ ಮತ್ತು ೨ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More