ಗಿರೀಶ್‌‌ ಕಾರ್ನಾಡರ ಮೇಲೆ ದೂರು; ಪ್ರಗತಿಪರರು ಮಾತನಾಡುತ್ತಿಲ್ಲವೇಕೆ?

‘ನಾನು ಕೂಡ ನಗರ ನಕ್ಸಲ್‌’ ಫಲಕವನ್ನು ಕೊರಳಿಗೆ ಹಾಕಿಕೊಂಡಿದ್ದ ಸಾಹಿತಿ ಗಿರೀಶ್‌ ಕಾರ್ನಾಡರ ಮೇಲೆ ದೂರುಗಳು ದಾಖಲಾಗಿವೆ. ಆದರೆ, ಈ ಬಗ್ಗೆ ಪ್ರಗತಿಪರರು ಮಾತನಾಡುತ್ತಿಲ್ಲ. ಕಾರ್ನಾಡರ ನಿಲುವುಗಳನ್ನು ಬೆಂಬಲಿಸುವವರು ಈ ಸಂದರ್ಭದಲ್ಲಿ ಅವರ ಪರವಾಗಿ ನಿಲ್ಲುತ್ತಿಲ್ಲವೇಕೆ?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸೆಪ್ಟೆಂಬರ್ 5ರಂದು ಅಭಿವ್ಯಕ್ತಿ ಹತ್ಯೆ ವಿರೋಧಿ ದಿನಾಚರಣೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್‌, ಕೊರಳಿಗೆ ‘ME TOO URBAN NAXAL’ ಫಲಕ ಹಾಕಿಕೊಂಡಿದ್ದರು. ಭೀಮಾ ಕೊರೆಗಾವ್ ಕೇಸ್‌ಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ಐವರು ಎಡಪಂಥೀಯ ಹೋರಾಟಗಾರರನ್ನು ನಕ್ಸಲ್‌ ಬೆಂಬಲಿಗರು ಎಂದು ಬಂಧಿಸಿದ್ದರು. ಕಾರ್ನಾಡರು ಈ ಬೆಳವಣಿಗೆ ಪ್ರತಿಭಟಿಸುವ ಸೂಚಕದಂತೆ ಕೊರಳಿಗೆ ಫಲಕ ಹಾಕಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾರ್ನಾಡರು, “ಪೊಲೀಸರು ಬುದ್ಧಿಜೀವಿಗಳಿಗೆ ನಕ್ಸಲ್ ಪಟ್ಟ ಕಟ್ಟಿದ್ದು, ಅವರು ರಾಜಕಾರಣಿಗಳ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ,” ಎಂದು ಖಂಡಿಸಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್, “ಆದಿವಾಸಿಗಳು, ರೈತರು, ಬಡವರ ಪರ ಧ್ವನಿ ಎತ್ತುವವರನ್ನು ‘ನಗರದ ನಕ್ಸಲರು’ ಎಂದು ಕರೆಯುವುದಾದರೆ ನಾನು ಕೂಡ ‘ನಗರ ನಕ್ಸಲ್,‌” ಎಂದಿದ್ದರು. ಹೀಗೆ ಕಾರ್ನಾಡರ ಅಭಿವ್ಯಕ್ತಿಗೆ ಅಲ್ಲಿದ್ದವರ ಎಲ್ಲರ ಬೆಂಬಲ ವ್ಯಕ್ತವಾಗಿತ್ತು.

ಗೌರಿ ಕಾರ್ಯಕ್ರಮ ನಡೆದ ಎರಡು ದಿನಗಳ ನಂತರ ಗಿರೀಶ್ ಕಾರ್ನಾಡರ ಮೇಲೆ ದೂರುಗಳು ದಾಖಲಾಗಿವೆ. ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮಸೇನೆ ಕಾರ್ಯಕರ್ತರು, ‘ನಾನೂ ಕೂಡ ನಗರ ನಕ್ಸಲ್‌’ ಎಂದು ಹೇಳಿಕೊಂಡಿರುವ ಕಾರ್ನಾಡರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಬೆಂಗಳೂರು ಪೊಲೀಸ್‌ ಕಮಿಷನರ್ ಟಿ ಸುನೀಲ್ ಕುಮಾರ್‌ ಅವರಿಗೆ ದೂರು ನೀಡಿದ್ದರು. “ನಕ್ಸಲ್ ಸಂಘಟನೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಿಷೇಧ ಮಾಡಲಾಗಿದೆ. ಹೀಗಿರುವಾಗ, ‘ನಾನೂ ನಕ್ಸಲ್’ ಎಂದು ಹೇಳಿಕೊಂಡಿರುವುದು ಸಂವಿಧಾನ ವಿರೋಧಿ ಕೃತ್ಯ. ಹೀಗಾಗಿ ಅವರನ್ನು ಬಂಧಿಸಬೇಕು," ಎನ್ನುವುದು ದೂರಿನ ಸಾರ. ಅದೇ ದಿನ ವಕೀಲ ಎನ್ ಪಿ ಅಮೃತೇಶ್‌ ಅವರಿಂದ ಈ ಸಂಬಂಧ ಮತ್ತೊಂದು ದೂರು ಕೂಡ ದಾಖಲಾಗಿತ್ತು.

ಗಿರೀಶ್ ಕಾರ್ನಾಡರ ವಿರುದ್ಧ ದೂರು ದಾಖಲಾಗಿ ಮೂರು ದಿನಗಳಾಗಿವೆ. ಆದರೆ, ಈ ಕುರಿತಾಗಿ ಪ್ರಗತಿಪರರು ಯಾರೂ ಕಾರ್ನಾಡರ ಪರ ಮಾತನಾಡಿಲ್ಲ. ಎಲ್ಲಿಯೂ ಕಾರ್ನಾಡರನ್ನು ಸಮರ್ಥಿಸಿಕೊಂಡ ಹೇಳಿಕೆಗಳು ಇದುವರೆಗೂ ದಾಖಲಾಗಿಲ್ಲ. ಹಾಗಾಗಿ, ಗೌರಿ ದಿನಾಚರಣೆಯಂದು ಕಾರ್ನಾಡರ ನಿಲುವುಗಳನ್ನು ಬಹುವಾಗಿ ಸಮರ್ಥಿಸಿಕೊಂಡಿದ್ದವರು ಈಗೇಕೆ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಕಾರ್ನಾಡರ ಪರವಾಗಿ ಮಾತನಾಡಿ ಅವರಿಗೆ ನೈತಿಕ ಬೆಂಬಲ ಸೂಚಿಸಬಹುದಿತ್ತಲ್ಲವೇ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಈವರೆಗೂ ಎಲ್ಲೂ ಪ್ರಗತಿಪರರಾಗಲೀ, ಪ್ರಗತಿಪರ ವೇದಿಕೆಗಳಾಗಲಿ ಸಂಘಟಿತವಾಗಿ, ಅಧಿಕೃತವಾಗಿ ತುಟಿ ಬಿಚ್ಚಿಲ್ಲ.

ಪ್ರಗತಿಪರರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೇ? ಇದನ್ನು ಅಲ್ಲಗಳೆಯುವ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಶಿವಸುಂದರ್, “ಈ ದೂರುಗಳು ದುರುದ್ದೇಶಪೂರ್ವಕ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಮ್ಮ ಸಮಾನಮನಸ್ಕರ ವೇದಿಕೆಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ದುರದೃಷ್ಟವತಾಶ್‌ ನಾಡಿನ ಪ್ರಮುಖ ದಿನಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಮ್ಮ ವಿಚಾರಗಳಿಗೆ ವೇದಿಕೆ ಸಿಗುತ್ತಿಲ್ಲ. ಈ ಹಿಂದೆ ನಮ್ಮ ಪ್ರತಿಕ್ರಿಯೆಗಳನ್ನು ಅವರು ನಿರ್ಲಕ್ಷಿಸಿದ ಉದಾಹರಣೆಗಳಿವೆ. ಪತ್ರಿಕೆಗಳಲ್ಲಿ ಏನು ಹಾಕಬೇಕು, ಏನು ಹಾಕಬಾರದು ಎನ್ನುವುದು ಪೂರ್ವನಿರ್ಧರಿತವಾಗಿರುತ್ತದೆ,” ಎನ್ನುತ್ತಾರೆ.

ಇಂತಹ ದುರುದ್ದೇಶಪೂರ್ವಕ ಕೃತ್ಯಗಳ ಬಗ್ಗೆ ಖೇದ ವ್ಯಕ್ತಪಡಿಸುವ ಶಿವಸುಂದರ್,‌ ಕಾರ್ನಾಡರ ವಿರುದ್ಧದ ದೂರುಗಳು ಕಾನೂನಾತ್ಮಕವಲ್ಲ ಎನ್ನುವ ಸೂಕ್ಷ್ಮವನ್ನು ಹೇಳುತ್ತಾರೆ. “ಸಾವರ್ಕರ್‌ ಅಥವಾ ನಕ್ಸಲ್ ಚಿಂತನೆಯನ್ನು ಒಪ್ಪುವುದು ಅಪರಾಧವಲ್ಲ. ಆದರೆ, ಸ್ವತಃ ತಾವೇ ಆ ಕೃತ್ಯದಲ್ಲಿ ತೊಡಗುವುದು ಇಲ್ಲವೇ ಇತರರನ್ನು ಪ್ರಚೋದಿಸುವುದು ಅಪರಾಧ. ಕಾರ್ನಾಡರು ಕೂಡ ನಕ್ಸಲ್‌ ಸಿದ್ಧಾಂತವನ್ನು ಬೆಂಬಲಿಸುವವರಲ್ಲ. ಆದರೆ, ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವವರನ್ನು ‘ನಗರ ನಕ್ಸಲರು’ ಎಂದು ಹಣೆಪಟ್ಟಿ ಕಟ್ಟಿರುವುದನ್ನು ಆಕ್ಷೇಪಿಸಿದ್ದಾರೆ. ನೊಂದವರ ಪರವಾಗಿ ಹೋರಾಟ ನಡೆಸುವವರು ‘ನಗರ ನಕ್ಸಲ್’ ಎಂದಾದರೆ ತಾವೂ ‘ನಗರ ನಕ್ಸಲ್’‌ ಎನ್ನುವುದನ್ನು ರೂಪಕವಾಗಿ ಅಭಿವ್ಯಕ್ತಿಗೊಳಿಸಿದ್ದಾರಷ್ಟೆ,” ಎನ್ನುತ್ತಾರೆ ಶಿವಸುಂದರ್‌.

ಗೌರಿ ಸೇರಿದಂತೆ ನಾಲ್ವರು ಪ್ರಗತಿಪರರ ಹತ್ಯೆ ಹಿಂದೆ ಹಿಂದೂ ಸಂಘಟನೆಯೊಂದರ ಹೆಸರು ಪ್ರಧಾನವಾಗಿ ಕೇಳಿಬರುತ್ತಿದೆ. ಇದನ್ನು ಮರೆಮಾಚುವ ಸಲುವಾಗಿಯೂ ಇಂತಹ ದೂರು ದಾಖಲಿಸುವ ಕೃತ್ಯಗಳು ನಡೆಯುತ್ತಿವೆ ಎನ್ನುವ ಅಭಿಪ್ರಾಯಗಳು ಪ್ರಗತಿಪರರ ನೆಲೆಯಲ್ಲಿ ವ್ಯಕ್ತವಾಗುತ್ತಿವೆ. ಮಾನವ ಹಕ್ಕುಗಳ ಪರವಾಗಿ ದನಿ ಎತ್ತುವವರ ವಿರುದ್ಧ ಚಿತಾವಣೆ ನಡೆಯುತ್ತಿದ್ದು, ಕಾರ್ನಾಡರು ಇದನ್ನು ಖಂಡಿಸಲು ರೂಪಕವಾಗಿ ಫಲಕ ಹಾಕಿಕೊಂಡಿದ್ದಾರೆ. ಹಿಂದೂಪರ ಸಂಘಟನೆಗಳು ಈ ವಿವೇಚನೆಯಿಲ್ಲದೆ ದೂರು ದಾಖಲಿಸಿದ್ದಾರೆ ಎನ್ನುವುದು ಪ್ರಗತಿಪರ ಬಳಗದ ಖಾಸಗಿ ಹೇಳಿಕೆ. ಇಂತಹ ವಿಚಾರಗಳನ್ನು ಖಂಡಿಸಲು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತಮಗೆ ವೇದಿಕೆ ಇಲ್ಲವಾಗುತ್ತಿದೆ ಎನ್ನುವ ಅಸಮಾಧಾನವೂ ಅವರಿಂದ ವ್ಯಕ್ತವಾಗುತ್ತದೆ.

ಅಭಿವ್ಯಕ್ತಿ ಹತ್ಯೆ ವಿರೋಧಿ ದಿನಾಚರಣೆ ಆಯೋಜಕರಲ್ಲಿ ದಕ್ಷಿಣಾಯನ ಸಂಘಟನೆಯೂ ಒಂದು. ದಕ್ಷಿಣಾಯನ ಸಂಘಟನೆಯ ಪ್ರಮುಖರಾದ ರಾಜೇಂದ್ರ ಚೆನ್ನಿ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಮಾತನಾಡಿ, “ಇದಕ್ಕೆ ಸಂಬಂಧಿಸಿದಂತೆ ನಾವು ಭಾರತೀಯ ಲೇಖಕರ ಒಕ್ಕೂಟಕ್ಕೆ ದಕ್ಷಿಣಾಯನದ ಪರವಾಗಿ ಪತ್ರ ಬರೆದಿದ್ದೇವೆ,” ಎನ್ನುತ್ತಾರೆ. ಆದರೆ, ಆ ಪತ್ರ ಮಾಧ್ಯಮಗಳಿಗೆ ಬಿಡುಗಡೆಗೊಂಡಿಲ್ಲ. ಕಾರ್ನಾಡರ ವಿರುದ್ಧದ ದೂರಿನ ವಿಚಾರಕ್ಕೆ ಗೌರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಪ್ರಕಾಶ್ ರೈ ಅವರನ್ನು ಸಂಪರ್ಕಿಸಲು ‘ದಿ ಸ್ಟೇಟ್‌’ ಪ್ರಯತ್ನಿಸಿತು. ಅವರು ಸಂಪರ್ಕಕಕ್ಕೆ ಸಿಗಲಿಲ್ಲ. ಒಟ್ಟಾರೆ ನೋಡಿದಾಗ, ಈ ಬೆಳವಣಿಗೆಯಲ್ಲಿ ಸಂಘಟಿತರಾಗಿ ಕಾರ್ನಾಡರನ್ನು ಯಾರೂ ಸಮರ್ಥಿಸಿಕೊಂಡಿಲ್ಲ ಎನ್ನುವುದು ಕಂಡುಬರುತ್ತದೆ.

ಇದನ್ನೂ ಓದಿ : ಮಹಾರಾಷ್ಟ್ರ ಪೊಲೀಸರಿಗೆ ಸುಧಾ ಭಾರದ್ವಾಜ್ ಬರೆದ ಬಹಿರಂಗ ಪತ್ರದಲ್ಲೇನಿದೆ?

ಈ ‘ಅರ್ಬನ್ ನಕ್ಸಲ್‌’ ಎಂಬ ಹಣೆಪಟ್ಟಿ ಎಲ್ಲಿಂದ, ಯಾರಿಂದ ಶುರುವಾಯಿತು ಎಂದು ಮೂಲ ಹುಡುಕುತ್ತಾ ಹೋದರೆ ವಿವೇಕ್‌ ಅಗ್ನಿಹೋತ್ರಿ ಹೆಸರು ಪ್ರಸ್ತಾಪವಾಗುತ್ತದೆ. ಬಲಪಂಥೀಯ ವಿಚಾರಗಳಲ್ಲಿ ನಂಬಿಕೆಯುಳ್ಳ, ಪ್ರಧಾನಿ ಮೋದಿ ಅವರನ್ನು ಬಹುವಾಗಿ ಸಮರ್ಥಿಸಿಕೊಳ್ಳುವ ಈ ಸಿನಿಮಾ ನಿರ್ದೇಶಕ ಪ್ರಗತಿಪರರನ್ನು ಕುಚೋದ್ಯ ಮಾಡಲೆಂದೇ ಕೆಲ ದಿನಗಳ ಹಿಂದೆ 'ಅರ್ಬನ್‌ ನಕ್ಸಲ್ಸ್’ ಎಂಬ ಪದಪುಂಜವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಅಷ್ಟೇ ಅಲ್ಲ, ಬಲಪಂಥೀಯ ವಿಚಾರಧಾರೆ ಬಗ್ಗೆ ತಕರಾರು ಇರುವ ಎಲ್ಲರನ್ನೂ ‘ಅರ್ಬನ್‌ ನಕ್ಸನ್ಸ್’ ಎಂದು ಪಟ್ಟಿ ಮಾಡಲಾಗಿತ್ತು. ಬಲಪಂಥೀಯ ವಿಚಾರಧಾರೆ ಒಪ್ಪದವರನ್ನು ಹೀಗಳೆಯುವ ಹುನ್ನಾರವಿದು ಎಂದೇ ಹಲವರು ಮಾತನಾಡಿಕೊಂಡಿದ್ದರು. ಈ ಚರ್ಚೆ ಸುದ್ದಿವಾಹಿನಿಗಳಲ್ಲೂ ಆದಾಗ, ಮೊದಮೊದಲು ತಮಾಷೆಗೆಂದು ಬಳಕೆಯಾಗಿದ್ದ 'ಅರ್ಬನ್‌ ನಕ್ಸಲ್‌' ಪದ ಗಂಭೀರ ಸ್ವರೂಪವನ್ನು ಪಡೆದುಕೊಂಡಿತು. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರು ‘ನಾನೂ ಅರ್ಬಲ್ ನಕ್ಸಲ್‌’ ಎಂದು ಹಾಕಿಕೊಂಡಿದ್ದರು. ಆದರೆ, ಗೌರಿ ದಿನಾಚರಣೆಯಂದು ಕೊರಳಿಗೆ ಫಲಕ ಹಾಕಿಕೊಂಡು ಬಂದಿದ್ದ ಕಾರ್ನಾಡರ ಮೇಲೆ ದೂರು ಬಿದ್ದಿರುವುದು ವಿಪರ್ಯಾಸ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More