ಕಪ್ಪುಹಣದ ಪರಿವರ್ತನೆಗೆ ಬಳಕೆಯಾದವೇ ಜನ್‌ಧನ್ ಖಾತೆಗಳು?

ನೋಟು ಅಮಾನ್ಯದ ಬಳಿಕ ಬಡವರ ಶೂನ್ಯ ಠೇವಣಿಯ ಖಾತೆಗಳ ಮೂಲಕ ಅಕ್ರಮ ಹಣ ಬ್ಯಾಂಕಿಂಗ್ ವ್ಯವಸ್ಥೆಯ ಒಳನುಗ್ಗಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಆದರೆ, ನೋಟು ರದ್ದತಿಯ ಬಳಿಕ ಎರಡು ವರ್ಷ ಕಳೆದರೂ ಅಂತಹ ಅಕ್ರಮಗಳ ಬಗ್ಗೆ ಗಂಭೀರ ತನಿಖೆಯೇ ಆಗಿಲ್ಲ ಎಂಬುದು ಗಮನಾರ್ಹ

ಕಪ್ಪುಹಣವನ್ನು ಬಗ್ಗುಬಡಿಯುವುದು ತನ್ನ ನೋಟು ಅಮಾನ್ಯದ ಉದ್ದೇಶವಾಗಿರಲಿಲ್ಲ ಎಂದು ಸರ್ಕಾರ ಈಗ ಹೇಳುತ್ತಿದೆ. ಆದರೆ, ೨೦೧೬ರ ನವೆಂಬರ್ ೮ರಂದು ಸರ್ಕಾರ ದೇಶದ ಅರ್ಥವ್ಯವಸ್ಥೆಗೆ ನೀಡಿದ ಆಘಾತದ ಆ ಕ್ರಮ ಕೇವಲ ಅಕ್ರಮ ಹಣವಂತರು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಅದನ್ನು ಸಕ್ರಮ ಮಾಡಿಕೊಳ್ಳುವ ಅವಕಾಶವನ್ನು ಮಾತ್ರ ಒದಗಿಸಿತು ಎಂಬ ಆರೋಪಗಳಿಗೆ ಕೊರತೆಯೇನಿಲ್ಲ. ಆರ್‌ಬಿಐ ಕಳೆದು ತಿಂಗಳು ನೋಟು ಅಮಾನ್ಯ ಕುರಿತ ತನ್ನ ವರದಿಯಲ್ಲಿ ರದ್ದಾದ ನೋಟುಗಳ ಪೈಕಿ ಶೇ.೯೩.೩ರಷ್ಟು ಬ್ಯಾಂಕುಗಳಿಗೆ ವಾಪಸಾಗಿವೆ ಎಂದು ಹೇಳಿದ ಬಳಿಕ ಇಂತಹ ಆರೋಪ ಮತ್ತು ಗಂಭೀರ ಶಂಕೆಗಳು ಇನ್ನಷ್ಟು ಹೆಚ್ಚಿವೆ. ಏಕೆಂದರೆ, ಚಲಾವಣೆಯಲ್ಲಿರುವ ರದ್ದಾದ ಹಣದ ಪೈಕಿ ಸುಮಾರು ೪-೫ ಲಕ್ಷ ಕೋಟಿ ಮೊತ್ತದ ಅಕ್ರಮ ಹಣವಿದ್ದು, ಅದು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸು ಬರುವುದಿಲ್ಲ. ಆ ಮೂಲಕ, ಆ ಹಣ ರದ್ದಿ ಕಾಗದವಾಗಲಿದೆ ಎಂಬ ನೋಟು ಅಮಾನ್ಯ ಸಂದರ್ಭದ ಸರ್ಕಾರದ ಅಧಿಕೃತ ಹೇಳಿಕೆಗೆ ಆರ್‌ಬಿಐನ ಇತ್ತೀಚಿನ ಈ ವರದಿ ಸಂಪೂರ್ಣ ತದ್ವಿರುದ್ಧವಾಗಿದೆ.

ಸರ್ಕಾರ ಹೇಳಿಕೊಂಡಂತೆ ೪-೫ ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸು ಬರಲೇಬಾರದಿತ್ತು. ಆದರೂ ಆ ಎಲ್ಲ ಕಪ್ಪುಹಣ ಬ್ಯಾಂಕುಗಳಿಗೆ ಸಕ್ರಮ ಹಣವಾಗಿ ವಾಪಸು ಬಂದದ್ದು ಹೇಗೆ? ‘ಮನಿಲೈಫ್’ ಎಂಬ ವೆಬ್ ಕಳೆದ ವಾರ ಆರ್‌ಟಿಐ ಮೂಲಕ ಬ್ಯಾಂಕುಗಳಿಂದ ಪಡೆದ ಮಾಹಿತಿ, ಈ ಕಪ್ಪುಹಣ ಹೇಗೆ ಅಧಿಕೃತ ಹಣವಾಗಿ ಬದಲಾಯಿತು ಎಂಬುದರ ರಹಸ್ಯ ಬಯಲು ಮಾಡಿದೆ. ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿದ್ದ ಬಡವರಿಗೆ ಹಣಕಾಸು ಮತ್ತು ಬ್ಯಾಂಕಿಂಗ್ ಸೌಲಭ್ಯದ ವ್ಯಾಪ್ತಿಗೆ ತರುವ ಉದ್ದೇಶದಿಂದ ೨೦೧೪ರ ಆಗಸ್ಟ್ ೧೫ರಂದು ಜಾರಿಗೆ ಬಂದ ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಶೂನ್ಯ ಠೇವಣಿ ಖಾತೆಗಳ ಮೂಲಕ ಕಪ್ಪುಹಣವನ್ನು ಸಕ್ರಮಗೊಳಿಸಲಾಯಿತು ಎಂಬುದನ್ನು ಆ ಆರ್‌ಟಿಐ ಮಾಹಿತಿ ಸಾಬೀತುಮಾಡಿದೆ. ವಿಪರ್ಯಾಸವೆಂದರೆ, ಬ್ಯಾಂಕ್ ಖಾತೆಗಳಿಗೆ ಕಡ್ಡಾಯ ಆಧಾರ್ ಜೋಡಣೆ ಜಾರಿಗೆ ಬಂದದ್ದೇ ಈ ಜನ್ ಧನ್ ಖಾತೆಗಳ ಮೂಲಕ!

ನೋಟು ಅಮಾನ್ಯ ಬಳಿಕ ಈ ಜನ್‌ ಧನ್ ಖಾತೆಗಳಿಗೆ ಜಮಾ ಆದ ಹಣದ ಪ್ರಮಾಣ ನಿಜಕ್ಕೂ ಬೆಚ್ಚಿಬೀಳಿಸುವ ಪ್ರಮಾಣದ್ದು ಮತ್ತು ಕಪ್ಪುಹಣದ ಪರಿವರ್ತನೆಗೆ ಆ ಖಾತೆಗಳನ್ನು ಶ್ರೀಮಂತರು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ ಎಂಬುದಕ್ಕೆ ಒಂದು ನಿದರ್ಶನವೂ ಆಗಿವೆ. ತಮ್ಮಲ್ಲಿನ ಒಂದು ಜನ್‌ ಧನ್ ಖಾತೆಗೆ ನೋಟು ರದ್ದತಿಯ ಸಂದರ್ಭದಲ್ಲಿ ಅತಿ ಹೆಚ್ಚು ಮೊತ್ತದ ಹಣ ಜಮಾ ಆದ ಖಾತೆಗಳ ಮಾಹಿತಿ ಕೋರಿದಾಗ, ಕೇವಲ ಒಂಬತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರ ಆ ಮಾಹಿತಿ ನೀಡಲು ಒಪ್ಪಿದವು. ಆ ಬ್ಯಾಂಕುಗಳ ನೀಡಿದ ಮಾಹಿತಿ ಮಾತ್ರ ನಿಜಕ್ಕೂ ಆಘಾತಕಾರಿ ಅಂಶಗಳನ್ನು, ಅನಿರೀಕ್ಷಿತ ಪ್ರಮಾಣದ ನಗದು ಜಮಾವಣೆಯನ್ನೂ ಬಹಿರಂಗಪಡಿಸಿದೆ. ಆ ಪೈಕಿ, ಯುನೈಟೆಡ್ ಬ್ಯಾಂಕ್ ಆಫ್‌ ಇಂಡಿಯಾ ಬ್ಯಾಂಕಿನಲ್ಲಿ ಒಬ್ಬ ವ್ಯಕ್ತಿಗೆ ಸೇರಿದ ಒಂದು ಜನ್‌ಧನ್ ಖಾತೆಗೆ ಜಮಾ ಆದ ಅತ್ಯಧಿಕ ಮೊತ್ತ ೯೩.೮೨ ಕೋಟಿ ರು. ಆಗಿದ್ದರೆ, ಬ್ಯಾಂಕ್ ಆಫ್ ಇಂಡಿಯಾದ ಒಂದು ಖಾತೆಯಲ್ಲಿ ೩.೦೫ ಕೋಟಿ ರು. ಜಮಾ ಆಗಿದೆ. ಯೂನಿಯನ್ ಬ್ಯಾಂಕ್‌ನಲ್ಲಿ ಅತ್ಯಧಿಕ ೧.೨೧ ಕೋಟಿ ರು. ಒಂದೇ ಒಂದು ಜನ್‌ ಧನ್ ಖಾತೆಗೆ ಜಮಾ ಆಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಜನ್‌ ಧನ್ ಒಂದು ಖಾತೆಗೆ ೯೮.೪೫ ಲಕ್ಷ ರು., ದೇನಾ ಬ್ಯಾಂಕಿನ ಒಂದು ಜನ್‌ ಧನ್ ಖಾತೆಗೆ ೯೪.೪೫ ಲಕ್ಷ, ಪಂಜಾಬ್-ಸಿಂಧ್ ಬ್ಯಾಂಕಿನ ಒಂದು ಖಾತೆಗೆ ೫೨ ಲಕ್ಷ ಜಮಾ ಆಗಿದೆ. ಆಯಾ ಬ್ಯಾಂಕಿನಲ್ಲಿರುವ ಜನ್‌ಧನ್ ಖಾತೆಗಳ ಪೈಕಿ ನೋಟು ರದ್ದತಿಯ ಅವಧಿಯಲ್ಲಿ ಅತ್ಯಧಿಕ ಹಣ ಜಮಾ ಆದ ಖಾತೆಗಳ ಮಾಹಿತಿ ಇದು.

ಒಂದು ವರ್ಷದ ಅವಧಿಯಲ್ಲಿ ಒಂದು ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಜಮಾ ಆಗುವಂತಿಲ್ಲ ಮತ್ತು ಮಾಸಿಕ ಕೇವಲ ೧೦ ಸಾವಿರ ರು. ಹಿಂಪಡೆಯಲು ಮಾತ್ರ ಅವಕಾಶ ಎಂಬ ಜನ್‌ ಧನ್ ಖಾತೆ ನಿಯಮದ ಹಿನ್ನೆಲೆಯಲ್ಲಿ ಇಷ್ಟು ಬೃಹತ್ ಮೊತ್ತದ ಹಣಕಾಸು ವಹಿವಾಟನ್ನು ಯಾವ ರೀತಿಯಲ್ಲಿ ಕಾನೂನು ಸಮ್ಮತ ಎಂದು ಸಮರ್ಥಿಸಲಾಗದು. ಬ್ಯಾಂಕಿಂಗ್ ತಜ್ಞರ ಪ್ರಕಾರ, ಹಣ ಜಮಾವಣೆಯ ಮಿತಿ ಮೀರುತ್ತಿದ್ದಂತೆ ಆಯಾ ಬ್ಯಾಂಕುಗಳು ಎಚ್ಚೆತ್ತುಕೊಳ್ಳಬೇಕಿತ್ತು ಮತ್ತು ಸಂಬಂಧಪಟ್ಟವರ ವಿಚಾರಣೆ ನಡೆಸಬೇಕಿತ್ತು. ಆದರೆ, ಅಂತಹ ಯಾವ ಕ್ರಮಗಳನ್ನು ಅನುಸರಿಸಲಿಲ್ಲ ಎಂಬುದು ಈ ಅಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿಯೂ ಶಾಮೀಲಾಗಿದ್ದರು ಅಥವಾ ಅಂತಹ ಖಾತೆಗಳಿಗೆ ಭಾರಿ ಹಣ ಜಮಾ ಮಾಡುವಾಗ ಬ್ಯಾಂಕಿನ ಸುರಕ್ಷತಾ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಲಾಗಿದೆ ಎಂಬುದಕ್ಕೆ ನಿದರ್ಶನ.

ಇದನ್ನೂ ಓದಿ : ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ

ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯಿಸಿದ ೧೮ ಬ್ಯಾಂಕುಗಳಲ್ಲೇ ಹೀಗೆ ಜಮಾ ಮಿತಿಯನ್ನು ಮೀರಿ ಭಾರಿ ಮೊತ್ತದ ಹಣಕಾಸು ವಹಿವಾಟು ನಡೆದಿರುವ ಜನ್‌ ಧನ್ ಖಾತೆಗಳ ಪ್ರಮಾಣ, ಬರೋಬ್ಬರಿ ೨೦.೮೦ ಲಕ್ಷ ದಾಟುತ್ತದೆ! ಅದರಲ್ಲೂ, ಯೂನಿಯನ್ ಬ್ಯಾಂಕ್ ಆಫ್‌ ಇಂಡಿಯಾ ಒಂದರಲ್ಲೇ ಅಂತಹ ಅಕ್ರಮ ಹಣ ಜಮಾವಣೆಯಾದ ಖಾತೆಗಳ ಸಂಖ್ಯೆ ೧೧.೮ ಲಕ್ಷ ಇದೆ ಎಂದು ಸ್ವತಃ ಆ ಬ್ಯಾಂಕ್ ನೀಡಿದ ಮಾಹಿತಿಯೇ ಹೇಳುತ್ತದೆ. ಯೂನಿಯನ್ ಬ್ಯಾಂಕಿನಲ್ಲಿ ೩.೨ ಲಕ್ಷ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ೨.೮ ಲಕ್ಷ, ಬ್ಯಾಂಕ್ ಆಫ್ ಬರೋಡಾದಲ್ಲಿ ೭೯,೨೪೦, ಐಡಿಬಿಐ ಬ್ಯಾಂಕಿನಲ್ಲಿ ೬೮,೧೪೭ ಖಾತೆಗಳಲ್ಲಿ ಮಿತಿಗಿಂತ ಅಧಿಕ ಹಣಕಾಸು ವಹಿವಾಟು ನೋಟು ರದ್ದತಿಯ ಅವಧಿಯಲ್ಲಿ ನಡೆದಿರುವುದಾಗಿ ಆಯಾ ಬ್ಯಾಂಕುಗಳೇ ಆರ್‌ಟಿಐ ಮಾಹಿತಿಯಲ್ಲಿ ಒಪ್ಪಿಕೊಂಡಿವೆ. ಆರ್‌ಟಿಐ ಮಾಹಿತಿ ಕೋರಿಕೆಗೆ ಸ್ಪಂದಿಸಿರುವುದು ಕೆಲವೇ ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳಾಗಿರುವುದರಿಂದ ಮತ್ತು ಬೃಹತ್ ಬ್ಯಾಂಕುಗಳು ಆ ಕುರಿತ ಮಾಹಿತಿ ನೀಡಿಲ್ಲವಾದ್ದರಿಂದ ಹಾಗೂ ನೂರಾರು ಸಹಕಾರಿ ವಲಯದ ಬ್ಯಾಂಕುಗಳ ಆ ಮಾಹಿತಿ ಇಲ್ಲಿ ಸೇರಿಲ್ಲವಾದ್ದರಿಂದ, ಈಗ ಬಹಿರಂಗಗೊಂಡಿರುವ ಮಾಹಿತಿ, ಬೆಟ್ಟದಲ್ಲಿ ಒಂದು ಗುಂಡಿನಷ್ಟು ಮಾತ್ರ!

ಇಂತಹ ಭಾರಿ ಹಣಕಾಸು ವಹಿವಾಟು ನಡೆದಿರುವ ಜನ್ ಧನ್ ಖಾತೆಗಳ ಕುರಿತು ತನಿಖೆ ನಡೆಸುವುದು ತನಿಖಾ ಸಂಸ್ಥೆಗಳ ಪಾಲಿಗೆ ಈ ಕೆಳಗಿನ ಕಾರಣಗಳಿಂದಾಗಿ ದೊಡ್ಡ ಸವಾಲಿನ ಸಂಗತಿಯೇ:

  • ಆಧಾರ್ ಕಾರ್ಡ್ ಅಥವಾ ಸ್ವಪ್ರಮಾಣೀಕೃತ ಫೋಟೋ ನೀಡುವ ಮೂಲಕ ಈ ಖಾತೆಗಳನ್ನು ತೆರೆಯಲಾಗಿದೆ. ಖಾತೆದಾರರ ಗುರುತಿಸುವ ನಿಟ್ಟಿನಲ್ಲಿ ನಡೆಸುವ ಕೆವೈಸಿ ಪ್ರಕ್ರಿಯೆಯನ್ನು ಈ ಖಾತೆಗಳಲ್ಲಿ ಮಾಡಿಯೇ ಇಲ್ಲ. ಹಾಗಾಗಿ ನಕಲಿ ಹೆಸರು, ವಿವರಗಳನ್ನು ನೀಡಿ ತೆರೆದ ಖಾತೆಗಳ ಸಂಖ್ಯೆ ಬಹಳಷ್ಟಿರುವ ಸಾಧ್ಯತೆ ಹೆಚ್ಚು.
  • ತೀರಾ ಅವಸರದಲ್ಲಿ ಈ ಜನ್‌ಧನ್ ಖಾತೆಗಳನ್ನು ತೆರೆಯಲಾಗಿತ್ತು. ಏಕೆಂದರೆ, ಬ್ಯಾಂಕುಗಳಿಗೆ ವಾಸ್ತವವಾಗಿ ಸಾಧ್ಯವಿರದ ಪ್ರಮಾಣದ ಗುರಿ ನಿಗದಿ ಮಾಡಲಾಗಿತ್ತು. ೨೦೧೪ರ ಆಗಸ್ಟ್ ೨೩ರಿಂದ ೨೯ರ ನಡುವಿನ ಕೇವಲ ಆರು ದಿನಗಳಲ್ಲಿ ಸುಮಾರು ೧.೮ ಕೋಟಿ ಖಾತೆಗಳನ್ನು ಆರಂಭಿಸುವ ಮೂಲಕ ಒಂದು ವಾರದಲ್ಲಿ ಅತ್ಯಧಿಕ ಬ್ಯಾಂಕ್ ಖಾತೆ ತೆರೆದ ಗಿನ್ನೆಸ್ ದಾಖಲೆ ನಿರ್ಮಿಸಲಾಗಿತ್ತು.
  • ನೋಟು ಅಮಾನ್ಯೀಕರಣದ ಬಳಿಕ ಸುಮಾರು ೪.೩೦ ಕೋಟಿ ಜನ್‌ಧನ್ ಖಾತೆಗಳನ್ನು, ಬಹುತೇಕ ನಗರ ಪ್ರದೇಶಗಳಲ್ಲಿ ತೆರೆಯಲಾಗಿತ್ತು.
  • ೨೦೧೮ರ ಜನವರಿಯಲ್ಲಿ ಅನುಪಮ್ ಸರಾಫ್ ಎಂಬ ಆರ್‌ಟಿಐ ಕಾರ್ಯಕರ್ತರ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಯುಐಡಿಎಐ, ಯಾವುದೇ ವ್ಯಕ್ತಿಯ ಗುರುತು ಪತ್ತೆಯ ವಿಷಯದಲ್ಲಿ ತಾನು ಬಾಧ್ಯಸ್ಥ ಅಲ್ಲ; ಅವರ ಗುರುತಿನ ಬಗ್ಗೆ ಯಾವುದೇ ಖಾತ್ರಿ ಅಥವಾ ಪ್ರಮಾಣೀಕರಣ ನೀಡುವುದಿಲ್ಲ ಎಂದಿತ್ತು. ಒಂದು ಹೆಸರಿನಲ್ಲಿ ನೀಡುವ ಬಯೋಮೆಟ್ರಿಕ್ ದತ್ತಾಂಶವನ್ನು ಜೋಡಣೆ ಮಾಡಲಾಗುವುದಷ್ಟೇ ತನ್ನ ಕೆಲಸ ವಿನಾ ಆ ಹೆಸರಿನ ವ್ಯಕ್ತಿ ಆತನೇ ಅಥವಾ ಅಲ್ಲವೇ ಎಂಬುದನ್ನು ತಾನು ದೃಢೀಕರಿಸಲಾರೆ ಮತ್ತು ಅಂತಹ ಮಾಹಿತಿಯನ್ನು ಬಳಸುವ ಸಂಸ್ಥೆಗಳಿಗೆ ಗ್ಯಾರಂಟಿ ನೀಡಲಾರೆ ಎಂದಿತ್ತು. ಹಾಗಾಗಿ, ನಕಲಿ ಖಾತೆಗಳನ್ನು ತೆರೆದಿರುವ ವ್ಯಕ್ತಿಗಳನ್ನು ಕಾನೂನು ರೀತ್ಯಾ ಗುರುತಿಸುವುದು ಮತ್ತು ಅವರ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟಕರ.
  • ಅಲ್ಲದೆ, ಖಾತೆದಾರರಿಗೆ ತಿಳಿಯದಂತೆ ಅವರ ಖಾತೆಗಳನ್ನು ಹಣ ವರ್ಗಾವಣೆಗೆ ಬಳಸಿಕೊಂಡಿರಲೂಬಹುದು. ೨೦೧೬ರ ಮೇನಲ್ಲಿಯೇ ಇಂತಹ ಸಾಧ್ಯತೆ ಬಗ್ಗೆ ಆರ್‌ಬಿಐ ಡೆಪ್ಯೂಟಿ ಗವರ್ನರ್ ಎಸ್ ಎಸ್ ಮುಂದ್ರಾ ಬ್ಯಾಂಕುಗಳಿಗೆ ಎಚ್ಚರಿಕೆ ನೀಡಿದ್ದರು. “ಹೊಸ ಜನ್‌ಧನ್ ಖಾತೆಗಳು ಅಕ್ರಮಗಳಿಗೆ ಸುಲಭ ರಹದಾರಿ ಆಗಬಹುದು. ಅಕ್ರಮ ಹಣ ವರ್ಗಾವಣೆಗೆ ಈ ಖಾತೆಗಳು ಬಳಕೆಯಾಗದಂತೆ ಬ್ಯಾಂಕುಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಅವರು ಮುಂಬೈನ ಸಮಾವೇಶವೊಂದರಲ್ಲಿ ಎಚ್ಚರಿಸಿದ್ದರು.
  • ನೋಟು ಅಮಾನ್ಯ ಬಳಿಕ ನಡೆದಿರುವ ಇಂತಹ ಹಣ ಜಮಾ/ ವರ್ಗಾವಣೆಯ ಕುರಿತು ತೆರಿಗೆ ಇಲಾಖೆ ಯಾವ ರೀತಿಯ ತನಿಖೆ ಕೈಗೊಂಡಿದೆ ಮತ್ತು ಅಂತಹ ತನಿಖೆಗಳು ಯಾವ ಪ್ರಗತಿ ಕಂಡಿವೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆಗಾಗ ಕೆಲವು ಅಕ್ರಮ ಖಾತೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಸುದ್ದಿಯಾಗುತ್ತದೆ. ಆದರೆ, ಹಾಗೆ ಸ್ಥಗಿತಗೊಂಡಿರುವುದು ಜನ್‌ಧನ್ ಖಾತೆಗಳೇ ಎಂಬ ಬಗ್ಗೆ ಖಚಿತತೆ ಇಲ್ಲ. ಅಲ್ಲದೆ, ಜನ್‌ಧನ್ ಖಾತೆಗಳ ವಿಷಯದಲ್ಲಿ ಏಕಾಏಕಿ ಮೇಲೆಬಿದ್ದು ತನಿಖೆ ನಡೆಸುವುದು ಕೂಡ, ಅಮಾಯಕರನ್ನು (ಖಾತೆದಾರರ ಒಪ್ಪಿಗೆ ಅಥವಾ ಅರಿವಿಲ್ಲದೆ ಹಣ ಜಮಾ ಆಗಿದ್ದರೆ) ಸಂಕಷ್ಟಕ್ಕೆ ದೂಡುವ ಅಪಾಯವೂ ಇದೆ.
  • ೨೦೧೬ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶ ಚುನಾವಣೆಗಳ ಹೊಸ್ತಿಲಲ್ಲಿ, ಮೊರಾದಬಾದ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಜನ್‌ಧನ್ ಖಾತೆಗೆ ಜಮಾ ಮಾಡಿರುವ ಅಕ್ರಮ ಹಣವನ್ನು ಬಡವರಿಗೆ ಹಂಚಲಾಗುವುದು ಎಂದಿದ್ದರು. ಅವರದ್ದೇ ಮಾತುಗಳನ್ನೇ ಉಲ್ಲೇಖಿಸುವುದಾದರೆ, “ಜನ್ ಧನ್ ಖಾತೆದಾರರೇ, ನಿಮ್ಮ ಖಾತೆಗೆ ಬೇರೆಯವರು ಜಮಾ ಮಾಡಿರುವ ಹಣವನ್ನು ನೀವು ಅವರಿಗೆ ವಾಪಸು ಕೊಡಬೇಡಿ. ನೀವು ಹಾಗೆ ಮಾಡುವುದಾಗಿ ಮಾತುಕೊಟ್ಟರೆ, ನಾನು ಅಕ್ರಮವಾಗಿ ನಿಮ್ಮ ಖಾತೆಗೆ ಹಣ ಹಾಕಿದವರನ್ನು ಜೈಲಿಗೆ ಕಳಿಸಲು ಮತ್ತು ಆ ಹಣ ಬಡವರ ಜೇಬು ಸೇರುವಂತೆ ಮಾಡಲು ಒಂದು ಸೂತ್ರ ಕಂಡುಕೊಳ್ಳಲು ಕಷ್ಟಪಡುವೆ.”

ಅಂತಹ ಯಾವ ಹಣವೂ ಬಡವರ ಮನೆಗೆ ತಲುಪಿದ ಒಂದೇ ಒಂದು ಉದಾಹರಣೆಯೂ ಇಲ್ಲ; ಸದ್ಯ ಇಲ್ಲೀತನಕವಂತೂ ದೇಶದ ಯಾವ ಮೂಲೆಯಲ್ಲೂ ಅಂತಹದ್ದೊಂದು ಪವಾಡ ನಡೆದಿಲ್ಲ. ಹಾಗಂತ ಅಂತಹ ಟೊಳ್ಳು ಭರವಸೆಗಳನ್ನು ವಾಪಸು ಪಡೆದ ಬಗ್ಗೆಯೂ ಮಾಹಿತಿ ಇಲ್ಲ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More