ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ೫ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಮುಖ್ಯಮಂತ್ರಿ ಎಚ್ಡಿಕೆ ಮೈಸೂರು ಜಿಲ್ಲಾ ಪ್ರವಾಸ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಮೈಸೂರು ಜಿಲ್ಲಾ ಛಾಯಾಗ್ರಾಹಕರು ಆಯೋಜಿಸಿರುವ ವಿಶ್ವ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿರುವ ಅವರು, ಮಹಾರಾಣಿ ಕಾಲೇಜು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಪುಟ ಉಪ ಸಮಿತಿ ಸಭೆ

ಕಂದಾಯ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಮಂಗಳವಾರ ಸಂಪುಟ ಉಪ ಸಮಿತಿ ಸಭೆ ನಡೆಯಲಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಾಜ್ಯದ ೧೬ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದ್ದು, ೮೯ ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ೩೩ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಈ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲು ಶಿಫಾರಸು ಮಾಡುವ ಸಾಧ್ಯತೆ ಇದೆ.

ತೆಲಂಗಾಣಕ್ಕೆ ಕೇಂದ್ರ ಚುನಾವಣಾ ಅಧಿಕಾರಿಗಳ ತಂಡ

ಅವಧಿಪೂರ್ಣ ಚುನಾವಣೆಗೆ ಮುಂದಾಗಿರುವ ತೆಲಂಗಾಣ ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕಿಸಲು ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ನೇತೃತ್ವದ ತಂಡ ಮಂಗಳವಾರದಿಂದ ಎರಡು ದಿನ ತೆಲ‌ಂಗಾಣ ಪ್ರವಾಸ ಕೈಗೊಳ್ಳಲಿದೆ. ವಿವಿಧ ರಾಜಕೀಯ ಪಕ್ಷಗಳು, ಅಧಿಕಾರಿಗಳ ಜೊತೆ ಸಿನ್ಹಾ ಅವರು ಚರ್ಚೆ ನಡೆಸಲಿದ್ದಾರೆ. ಅಕ್ಟೋಬರ್ ಎರಡನೇ ವಾರದಲ್ಲಿ ತೆಲಂಗಾಣದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜಪಾನ್ ಓಪನ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯಲ್ಲಿ ಸಿಂಧು

ಈಚೆಗಷ್ಟೇ ಮುಕ್ತಾಯ ಕಂಡ ಏಷ್ಯನ್‌ ಕ್ರೀಡಾಕೂಟ ಸೇರಿದಂತೆ ಮೂರು ಪ್ರಮುಖ ಟೂರ್ನಿಗಳಲ್ಲಿ ರಜತ ಗೆದ್ದ ಬೆಳ್ಳಿ ಬೆಡಗಿ ಪಿ ವಿ ಸಿಂಧು ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಜಪಾನ್ ಓಪನ್‌ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ.ಇಂಡೋನೇಷ್ಯಾದಲ್ಲಿ ನಡೆದ ೧೮ನೇ ಏಷ್ಯಾಡ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂದೆನಿಸಿಕೊಂಡಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲೂ ಅವರು ಚಿನ್ನ ಗೆಲ್ಲಲು ವಿಫಲರಾಗಿದ್ದರು.

ಸಿನ್ಹಾ, ಶೌರಿ, ಪ್ರಶಾಂತ್ ಭೂಷಣ್‌ ಸುದ್ದಿಗೋಷ್ಠಿ

ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಮಂಗಳವಾರ ಸಂಜೆ ೪ ಗಂಟೆಗೆ ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕಳೆದ ತಿಂಗಳು ಈ ಮೂವರು ಪ್ರಮುಖರು ಸುದ್ದಿಗೋಷ್ಠಿ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಫೇಲ್ ಯುದ್ಧವಿಮಾನ ಖರೀದಿ ಹಗರಣದ ಆರೋಪ ಮಾಡಿದ್ದರಲ್ಲದೆ, ಜಂಟಿ ಸಂಸದೀಯ ಸಂಸ್ಥೆಯಿಂದ ತನಿಖೆಗೆ ಆಗ್ರಹಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More