ಅಮೆರಿಕ ಸರ್ಕಾರದ ‘ರಾಷ್ಟ್ರದ್ರೋಹ’ದ ಅಸ್ತ್ರಕ್ಕೆ ಮಣೆ ಹಾಕದ ನೈಕ್‌ಗೆ ಪ್ರಶಂಸೆ

ರಾಷ್ಟ್ರಭಕ್ತಿ ಎನ್ನುವುದು ಪ್ರತೀ ದೇಶದಲ್ಲೂ ಸೂಕ್ಷ್ಮವಾದ ವಿಚಾರ. ಹೀಗಾಗಿ, ‘ರಾಷ್ಟ್ರದ್ರೋಹಿ’ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಲು ಯಾರೂ ಸಿದ್ಧರಿರುವುದಿಲ್ಲ. ಅಂತಹ ಧೈರ್ಯ ಮಾಡಿದ ಅಮೆರಿಕದ ಫುಟ್ಬಾಲ್ ಆಟಗಾರ ಕಾಲಿನ್ ಕಾಪರ್ನಿಕ್ರನ್ನು ಬೆಂಬಲಿಸಿ ನೈಕ್ ಸಂಸ್ಥೆ ಯಶಸ್ಸು ಗಳಿಸಿರುವುದು ಗಮನಾರ್ಹ

ಜಾಗತಿಕವಾಗಿ ‘ರಾಷ್ಟ್ರದ್ರೋಹ’ ಎನ್ನುವುದು ಪ್ರತೀ ರಾಷ್ಟ್ರದಲ್ಲೂ ಜನಸಾಮಾನ್ಯರ ಮೇಲೆ ಆಡಳಿತ ಯಂತ್ರ ಪ್ರಯೋಗಿಸುವ ಅತೀ ಗಂಭೀರ ಮತ್ತು ದೊಡ್ಡ ಅಸ್ತ್ರ. ಇಂತಹ ಅಸ್ತ್ರವನ್ನು ಎದುರಿಸಲು ಜನಸಾಮಾನ್ಯರು ಮಾತ್ರವಲ್ಲ, ಪ್ರಸಿದ್ಧ ವ್ಯಕ್ತಿಗಳೂ ಹೆಚ್ಚು ಬಯಸುವುದಿಲ್ಲ. ಆಡಳಿತದ ವಿರುದ್ಧ ಹೋಗುವ ಧೈರ್ಯ ಪ್ರದರ್ಶಿಸುವವರು ಬಹಳ ವಿರಳ. ಅಂತಹ ಒಬ್ಬ ಕ್ರೀಡಾಳು ಅಮೆರಿಕದಲ್ಲಿದ್ದಾರೆ. ಅಮೆರಿಕದ ಫುಟ್‌ಬಾಲ್ ಆಟಗಾರ ಕಾಲಿನ್ ರಾಂಡ್‌ ಕಾಪರ್ನಿಕ್‌ ಅವರು ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ ಎಸಗುತ್ತಿರುವುದನ್ನು ವಿರೋಧಿಸಿ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ಪಂದ್ಯಕ್ಕೆ ಮೊದಲು ರಾಷ್ಟ್ರಧ್ವಜಕ್ಕೆ ಗೌರವವಂದನೆ ತೋರಿಸಬೇಕಾದಾಗ ನೇರವಾಗಿ ನಿಲ್ಲುವ ಬದಲಾಗಿ ಮಂಡಿಯೂರಿ ನಿಂತು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ೨೦೧೬ರಲ್ಲಿ ಇಂತಹ ರಾಷ್ಟ್ರದ್ರೋಹದ ಆರೋಪ ಹೊತ್ತ ಮೇಲೆ ಕಾಪರ್ನಿಕ್ ಅಮೆರಿಕದ ರಾಷ್ಟ್ರೀಯ ಫುಟ್‌ಬಾಲ್ ವಲಯದಲ್ಲಿ ಜನರು ಅತೀ ದ್ವೇಷಿಸುವ ಕ್ರೀಡಾಳುವಾದರು. ಇದರಿಂದಾಗಿ ಅವರ ವೃತ್ತಿಪರ ಕ್ರೀಡಾಜೀವನವೇ ಮುಳುಗಿಹೋಯಿತು. ‘ರಾಷ್ಟ್ರದ್ರೋಹಿ’ ಎನ್ನುವ ಪಟ್ಟ ಕಟ್ಟಿಕೊಂಡ ಕಾಪರ್ನಿಕ್ ಜೊತೆ ಗುರುತಿಸಿಕೊಳ್ಳಲು ಅಮೆರಿಕದ ಕ್ರೀಡಾಸಂಸ್ಥೆಗಳು ಇಚ್ಛಿಸಲಿಲ್ಲ. ಅವರು ಈಗ ಯಾವುದೇ ಫುಟ್‌ಬಾಲ್ ಸಂಸ್ಥೆ ಜೊತೆಗೆ ಕಾಂಟ್ರಾಕ್ಟ್‌ಗೆ ಸಹಿ ಹಾಕದ ಸ್ವತಂತ್ರ ಹವ್ಯಾಸಿ ಕ್ರೀಡಾಳು. ಈ ಕ್ರೀಡಾಸಂಸ್ಥೆಗಳು ತಮ್ಮನ್ನು ಪ್ರತ್ಯೇಕವಾಗಿ ಇಟ್ಟಿರುವ ವಿರುದ್ಧ ಕಾಪರ್ನಿಕ್ ಅವರು ಮನವಿ ಸಲ್ಲಿಸಿದ್ದಾರೆ. ಅಮ್ನೆಸ್ಟಿ ಸಂಸ್ಥೆ ಕಾಪರ್ನಿಕ್ ಅವರನ್ನು ಸನ್ಮಾನಿಸಿ ಅವರ ನಿಲುವನ್ನು ಶ್ಲಾಘಿಸಿದೆ.

ಈಗ ಎರಡು ವರ್ಷದ ನಂತರ ಮತ್ತೆ ಕಾಪರ್ನಿಕ್ ಸುದ್ದಿಯಾಗಿದ್ದಾರೆ. ಪ್ರಸಿದ್ಧ ಕ್ರೀಡಾ ಉತ್ಪನ್ನಗಳ ತಯಾರಕ ಸಂಸ್ಥೆ ‘ನೈಕ್‌’ ಕಾಪರ್ನಿಕ್ ಅವರನ್ನು ತಮ್ಮ ಬ್ರಾಂಡ್ ಅಂಬಾಸಡರ್ ಆಗಿ ಆರಿಸಿರುವುದು ಕಳೆದೊಂದು ವಾರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ‘ರಾಷ್ಟ್ರದ್ರೋಹಿ’ ಎನ್ನುವ ಪಟ್ಟ ಕಟ್ಟಿಕೊಂಡ ಕಾಪರ್ನಿಕ್ ಅವರನ್ನು ರಾಯಭಾರಿಯಾಗಿ ಮಾಡಿಕೊಂಡು ನೈಕ್ ಸಂಸ್ಥೆಯೂ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಕಾಪರ್ನಿಕ್ ಅವರನ್ನು ರಾಯಭಾರಿಯಾಗಿ ತೆಗೆದುಕೊಂಡ ನೈಕ್ ಸಂಸ್ಥೆಯ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಅಮೆರಿಕದ ಹಲವು ಶಾಲೆಗಳು ಮತ್ತು ಕ್ರೀಡಾಸಂಸ್ಥೆಗಳು ಬಹಿರಂಗವಾಗಿಯೇ ಹೇಳಿಕೆ ನೀಡಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ನೈಕ್ ಸಂಸ್ಥೆಯನ್ನು ಮತ್ತು ಕಾಪರ್ನಿಕ್ ಅವರನ್ನು ಟೀಕಿಸಿದ್ದಾರೆ. ಹೀಗಾಗಿ, ನೈಕ್ ಸಂಸ್ಥೆಯೂ ‘ರಾಷ್ಟ್ರದ್ರೋಹ’ ಎಸಗಿದ ಆರೋಪವನ್ನು ಎದುರಿಸಬೇಕಾಗಿ ಬಂದಿದೆ. ಆದರೆ, ಆಡಳಿತ ಯಂತ್ರಗಳ ಜೊತೆಗೆ ಸದಾ ಹೊಂದಾಣಿಕೆಯಲ್ಲಿ ಕೆಲಸ ಮಾಡುವ ಕಾರ್ಪೋರೇಟ್ ಸಂಸ್ಥೆಗಳಿಗೆ ವಿರುದ್ಧವಾಗಿ ನಡೆದುಕೊಂಡ ನೈಕ್‌ ಕ್ರಮವನ್ನು ಪ್ರಶಂಸಿಸಿದವರೂ ಬಹಳಷ್ಟು ಮಂದಿ ಇದ್ದಾರೆ.

ಇದನ್ನೂ ಓದಿ : ಅಂತರ್ಜಾಲ ಮೀರಿ ಬೆಳೆದ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಕೊಲೆ ಬೆದರಿಕೆ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾರ್ವಜನಿಕವಾಗಿ ನೈಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಸಂಸ್ಥೆಗೆ ಹೆಚ್ಚು ಪ್ರಚಾರ ನೀಡಿದಂತಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. “ಕಾಪರ್ನಿಕ್ ಅವರನ್ನು ರಾಯಭಾರಿಯಾಗಿ ಆರಿಸಿದ ನೈಕ್ ಜನರ ಆಕ್ರೋಶ ಮತ್ತು ಬಹಿಷ್ಕಾರಗಳಿಂದ ಮುಳುಗಿಹೋಗಲಿದೆ,” ಎಂದು ಕಳೆದ ವಾರ ಟ್ರಂಪ್ ಟ್ವೀಟ್ ಮಾಡಿದ್ದರು. ಅದಾದ ನಂತರ ಟ್ವಿಟರ್‌ನಲ್ಲಿ ನೈಕ್ ಉತ್ಪನ್ನಗಳನ್ನು ಜನರು ನಾಶ ಮಾಡುವ ವಿಡಿಯೋಗಳನ್ನೂ ಹರಿಯಬಿಡಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ನೈಕ್ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಲಾಯಿತು.

ಆದರೆ, ಇದೆಲ್ಲದರ ಫಲವಾಗಿ ಕಾಪರ್ನಿಕ್ ಅವರನ್ನು ತಮ್ಮ ಪ್ರಚಾರದ ಮುಖ್ಯ ರಾಯಭಾರಿಯನ್ನಾಗಿ ಆರಿಸಿಕೊಂಡ ನಂತರ ನೈಕ್ ಉತ್ಪನ್ನಗಳ ಮಾರಾಟ ಶೇ.೩೧ರಷ್ಟು ಏರಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ಮುಖ್ಯ ವಿಶ್ಲೇಷಕರಾಗಿರುವ ಮಾರ್ಷಲ್ ಕೊಹೆನ್‌, “ವಿವಾದಾತ್ಮಕ ವ್ಯಕ್ತಿಗಳನ್ನು ಪ್ರಚಾರಕ್ಕಾಗಿ ನೇಮಿಸುವುದು ಸಂಸ್ಥೆಗೆ ಸಾಕಷ್ಟು ಪ್ರಚಾರ ಕೊಡುತ್ತದೆ. ನೈಕ್ ಸಂಸ್ಥೆ ಬಳಸಿರುವ ಹೇಳಿಕೆಗಳು ಮತ್ತು ಆರಿಸಿದ ವ್ಯಕ್ತಿ ಅವರ ಬ್ರಾಂಡ್ ಮಾರಾಟದ ಮೇಲೆ ಅತೀ ದೊಡ್ಡ ಪರಿಣಾಮ ಬೀರಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಎಡಿಸನ್ ಟ್ರೆಂಡ್ಸ್‌ ಎನ್ನುವ ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕಾಪರ್ನಿಕ್ ಅವರನ್ನು ಬ್ರಾಂಡ್ ಅಂಬಾಸಡರ್ ಆಗಿ ‘ಜಸ್ಟ್ ಡೂ ಇಟ್‌’ ಎನ್ನುವ ಟ್ಯಾಗ್‌ಲೈನ್ ಬಳಸಿದ ನಂತರ ನೈಕ್ ಸಂಸ್ಥೆಯ ಆನ್‌ಲೈನ್ ಮಾರಾಟ ಶೇ.೩೧ರಷ್ಟು ಏರಿದೆ.

ಸಾಮಾನ್ಯವಾಗಿ ಯುವಜನರ ಅಭಿಪ್ರಾಯ, ಆಕ್ರೋಶ, ಕೆಚ್ಚನ್ನು ಪ್ರತಿನಿಧಿಸುವಂತಹ ಜಾಹೀರಾತುಗಳನ್ನೇ ಹೆಚ್ಚಾಗಿ ಪ್ರದರ್ಶಿಸುವ ನೈಕ್ ಸಂಸ್ಥೆ, ವಿವಾದಾತ್ಮಕ ಆಟಗಾರನನ್ನು ಮುಂದಿಟ್ಟುಕೊಂಡು ಜಾಗತಿಕವಾಗಿ ಇಂದು ಅತೀ ಹೆಚ್ಚು ಪ್ರಯೋಗವಾಗುತ್ತಿರುವ ಒಂದು ಪದವಾದ ‘ರಾಷ್ಟ್ರದ್ರೋಹ’ದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಸಾಮಾಜಿಕ ಉದ್ದೇಶಗಳಿಗೆ ತಾನು ರಾಯಭಾರಿಯಾಗಿ ನಿಲ್ಲುತ್ತಿದ್ದೇನೆ ಎಂದು ತೋರಿಸಿಕೊಡುತ್ತ, ತನ್ನ ಮಾರುಕಟ್ಟೆಯ ಉದ್ದೇಶಗಳನ್ನೂ ನೈಕ್ ಈಡೇರಿಸಿಕೊಂಡಿದೆ. ಹಾಗೆಂದು ಸಾಮಾಜಿಕ ಉದ್ದೇಶಗಳಿಗೆ ಧ್ವನಿಗೂಡಿಸುವ ಜಾಹೀರಾತನ್ನು ನೈಕ್ ಇದೇ ಮೊದಲ ಬಾರಿಗೆ ಪ್ರದರ್ಶಿಸಿಲ್ಲ. ಹಿಂದೆಯೂ ಏಡ್ಸ್, ಲಿಂಗ ತಾರತಮ್ಯ, ವಿಕಲಚೇತನರು, ಧರ್ಮ ಮತ್ತು ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಿಸಿದ ಸಾಮಾಜಿಕ ಸಂದೇಶಗಳಿಗೆ ತನ್ನ ಜಾಹೀರಾತನ್ನು ನೈಕ್ ವೇದಿಕೆಯಾಗಿಸಿದೆ. ಪ್ರಗತಿಪರ ಕಾರ್ಪೋರೇಟ್ ಕಂಪನಿ ಎನ್ನುವ ತನ್ನ ವರ್ಚಸ್ಸನ್ನು ನೈಕ್ ಸದಾ ಕಾಪಾಡಿಕೊಂಡು ಬಂದಿದೆ.

ನೈಕ್ ಸಂಸ್ಥೆ ವಿವಾದಾತ್ಮಕ ಆಟಗಾರನಿಂದ ಲಾಭ ಮಾಡಿಕೊಂಡಿರಬಹುದು. ಆದರೆ, ಬಹಿರಂಗವಾಗಿ ಡೊನಾಲ್ಡ್ ಟ್ರಂಪ್ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಕಾಲಿನ್ ಕಾಪರ್ನಿಕ್ ಅವರ ವೃತ್ತಿಜೀವನಕ್ಕೆ ಹಿನ್ನಡೆಯಾಗಿದೆ. ನೈಕ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮುನ್ನ ಕಳೆದೆರಡು ವರ್ಷಗಳಲ್ಲಿ ಕಾಪರ್ನಿಕ್ ಕ್ರೀಡಾ ವಲಯದಲ್ಲಿ ಅಲಕ್ಷ್ಯಕ್ಕೆ ಒಳಗಾಗಿದ್ದರು. ಆದರೆ, “ಕರಿಯ ಜನರು ಮತ್ತು ಇತರ ವರ್ಣದ ಜನರ ಮೇಲೆ ದೌರ್ಜನ್ಯ ಎಸಗುವ ರಾಷ್ಟ್ರದ ಧ್ವಜಕ್ಕೆ ಗೌರವ ತೋರಿಸಲು ತಾವು ಎದ್ದುನಿಲ್ಲುವುದಿಲ್ಲ,” ಎಂದು ಕಾಪರ್ನಿಕ್ ಖಡಾಖಂಡಿತವಾಗಿ ಹೇಳಿದ್ದಾರೆ. “ನನಗೆ ಜನಾಂಗೀಯ ತಾರತಮ್ಯದ ಸಮಸ್ಯೆ ಫುಟ್‌ಬಾಲ್‌ಗಿಂತಲೂ ದೊಡ್ಡ ವಿಚಾರ. ನಾನು ಅದನ್ನು ಅಲಕ್ಷಿಸಿದಲ್ಲಿ ಸ್ವಾರ್ಥಿಯಾಗುತ್ತೇನೆ. ರಸ್ತೆಯಲ್ಲಿ ದೇಹಗಳು ಉರುಳುತ್ತಿವೆ. ಕೊಲೆ ಮಾಡಿದವರು ಖುಲಾಸೆಗೊಳ್ಳುತ್ತಿದ್ದಾರೆ,” ಎಂದು ಕಾಪರ್ನಿಕ್ ಹೇಳಿದ್ದಾರೆ. ಕಾಪರ್ನಿಕ್ ಅವರ ಈ ಹೇಳಿಕೆಗೆ ಅಮೆರಿಕದಾದ್ಯಂತ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ರಾಷ್ಟ್ರೀಯ ಫುಟ್‌ಬಾಲ್ ಲೀಗ್, ಇತರ ಫುಟ್‌ಬಾಲ್ ಕ್ರೀಡಾಕೂಟಗಳು ಮತ್ತು ಹೈಸ್ಕೂಲ್ ಅಥ್ಲೀಟ್‌ಗಳೂ ಮಂಡಿಯೂರಿ ನಿಂತು ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತಿರುವುದು ವರದಿಯಾಗಿದೆ. ಕೆಲವರು ತಮ್ಮ ಪ್ರತಿಭಟನೆ ಅಥವಾ ಭಿನ್ನಾಭಿಪ್ರಾಯಗಳನ್ನು ಪ್ರಕಟಿಸಲು ಕ್ರೀಡಾಕೂಟಗಳು ವೇದಿಕೆಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬಹಳಷ್ಟು ಮಂದಿ ಕಾಪರ್ನಿಕ್ ಅವರು ಕ್ರೀಡಾ ಜಗತ್ತಿನಲ್ಲಿ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಕ್ರೀಡಾ ತಾರೆಯರು ಅಥವಾ ಯಾವುದೇ ಕ್ಷೇತ್ರಗಳ ತಾರೆಯರು ತಮ್ಮದೇ ಆದ ವರ್ಚಸ್ಸನ್ನು ಹೊಂದಿರುತ್ತಾರೆ. ತಾರೆಯರ ಮಾತಿಗೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಹೆಚ್ಚಿನ ಮಹತ್ವ ಕೊಡುತ್ತವೆ. ಹೀಗಾಗಿ, ಸಾಮಾಜಿಕ ಉದ್ದೇಶಗಳು ಅಥವಾ ಇತರ ಕಾರಣಗಳಿಗಾಗಿ ತಾರೆಯರು ದೃಢ ನಿಲುವು ಪ್ರಕಟಿಸಿದಾಗ ವಿವಾದ ಸೃಷ್ಟಿಯಾಗುವುದು ಸಾಮಾನ್ಯ ವಿಚಾರ. ಆಡಳಿತದ ಜೊತೆಗೆ ಹೊಂದಿಕೊಂಡು ಹೋಗಬಯಸುವ ಬಹಳಷ್ಟು ಮಂದಿ ಈ ತಾರೆಯರನ್ನು ಬಹಿಷ್ಕರಿಸುತ್ತಾರೆ, ತಿರಸ್ಕರಿಸುತ್ತಾರೆ. ಇಂತಹ ಆರೋಪಗಳು ಭಾರತದಲ್ಲಿಯೂ ಸಿನಿಮಾ ಮತ್ತು ಕ್ರೀಡಾ ತಾರೆಯರ ಮೇಲೆ ಬಂದದ್ದಿದೆ. ಅಮೀರ್ ಖಾನ್‌ರಂತಹ ಪ್ರಸಿದ್ಧ ನಟರು ಹೇಳಿದ ಸಾಮಾಜಿಕ ಸಂದೇಶ ನೀಡುವ ಮಾತುಗಳಿಗಾಗಿ ಅವರು ಪ್ರಾಯೋಜಿಸುತ್ತಿದ್ದ ಸಂಸ್ಥೆಯ ಉತ್ಪನ್ನಗಳನ್ನು ಬಹಿಷ್ಕರಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಾಭಿಯಾನ ನಡೆದಿತ್ತು. ಅಲ್ಲದೆ, ಅವರು ಜಾಹೀರಾತು ರಾಯಭಾರಿಯಾಗಿದ್ದ ಕೆಲವು ಸಂಸ್ಥೆಗಳೂ ಅವರಿಂದ ಅಂತರ ಕಾಪಾಡಿಕೊಂಡಿದ್ದವು.

ನೈಕ್ ಮತ್ತು ಕಾಪರ್ನಿಕ್ ಸದ್ಯ ‘ರಾಷ್ಟ್ರದ್ರೋಹ’ ಎನ್ನುವ ಆಡಳಿತದ ಅಸ್ತ್ರದ ವಿರುದ್ಧ ತಿರುಗಿಬಿದ್ದಿದ್ದಾರೆ. ಅಮೆರಿಕದಲ್ಲಿ ಬಹಳಷ್ಟು ಮಂದಿ ಅವರನ್ನು ಬೆಂಬಲಿಸುವ ಧೈರ್ಯವನ್ನೂ ಪ್ರಕಟಿಸಿದ್ದಾರೆ. ಸದಾ ಬದಲಾವಣೆಗಾಗಿ ಅಮೆರಿಕವನ್ನು ನೋಡುವ ಇತರ ದೇಶಗಳು ಮತ್ತು ಭಾರತವೂ ಇಂತಹುದೇ ಧೈರ್ಯವನ್ನು ಪ್ರಕಟಿಸುವ ಅಗತ್ಯವಿದೆ. ಭಾರತದಲ್ಲೂ ಇಂದು ‘ರಾಷ್ಟ್ರದ್ರೋಹ’ದ ಆರೋಪ ಹೊರುವ ಭಯ ಇದೆ. ರಾಷ್ಟ್ರಭಕ್ತಿಯನ್ನು ವೈಭವೀಕರಿಸಿ ರಾಜಕೀಯ ಲಾಭವನ್ನು ಪಡೆಯುವವರೂ ಸಾಕಷ್ಟಿದ್ದಾರೆ. ಆಡಳಿತ ಸರ್ಕಾರಗಳು, ರಾಜಕಾರಣಿಗಳು ಮತ್ತು ಮುಖ್ಯವಾಗಿ ಬಲಪಂಥೀಯ ರಾಜಕೀಯ ಪಕ್ಷಗಳ ಪ್ರಿಯ ಅಸ್ತ್ರವಾಗಿರುವ ‘ರಾಷ್ಟ್ರಭಕ್ತಿ’ ಅಥವಾ ‘ರಾಷ್ಟ್ರದ್ರೋಹ’ದ ಆರೋಪವನ್ನು ಸಶಕ್ತವಾಗಿ ಎದುರಿಸುವುದು ಸಾಧ್ಯವಾಗದ ವಿಚಾರ. ಆದರೆ, ಕಾಪರ್ನಿಕ್ ಅವರನ್ನು ಬೆಂಬಲಿಸಿ ನೈಕ್ ಸಂಸ್ಥೆ ಅಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿರುವುದು ಸಕಾರಾತ್ಮಕವಾದ ಬೆಳವಣಿಗೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More