ರಫೇಲ್‌ ಹಗರಣದಲ್ಲಿ ಮೋದಿ ನೇರ ಹೊಣೆಗಾರರು: ಶೌರಿ, ಸಿನ್ಹಾ, ಭೂಷಣ್ ಆರೋಪ

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಕೇಂದ್ರದ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಮತ್ತೆ ಆರೋಪಿಸಿದ್ದಾರೆ

“ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಹಗರಣದಲ್ಲಿ ಮೋದಿಯವರು ನೇರ ಹೊಣೆಗಾರರು” ಎಂದು ಕೇಂದ್ರದ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ದೆಹಲಿ ಪ್ರೆಸ್‌ ಕ್ಲಬ್‌ ಆಫ್ ಇಂಡಿಯಾದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

೨೦೧೬ರಲ್ಲಿ ೫೮ ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ೩೬ ರಫೇಲ್‌ ಯುದ್ಧ ವಿಮಾನ ಖರೀದಿ ಮಾಡುವ ಸಂಬಂಧ ಭಾರತವು ಫ್ರಾನ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ರಫೇಲ್‌ ವಿಮಾನಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡಲಾಗುತ್ತಿದೆ. ಅಲ್ಲದೇ, ರಕ್ಷಣಾ ವಲಯದಲ್ಲಿ ಯಾವುದೇ ಅನುಭವ ಹೊಂದಿಲ್ಲದ ಅನಿಲ್‌ ಅಂಬಾನಿ ಅವರ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ದೂರಿದೆ.

ಗೌಪ್ಯತೆ ವಿಚಾರ ಮುಂದೆ ಮಾಡಿ ಪ್ರತಿ ವಿಮಾನಕ್ಕೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ನಿರಾಕರಿಸಿರುವ ಕೇಂದ್ರ ಸರ್ಕಾರವು, ಆರೋಪಕ್ಕೆ ಪೂರಕವಾಗಿ ಸಾಕ್ಷ್ಯ ಒದಗಿಸುವಂತೆ ರಚ್ಚೆ ಹಿಡಿದಿದೆ. “ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಸಂಸ್ಥೆ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಸರ್ಕಾರದ ಪ್ರತಿಕ್ರಿಯೆಗಳು ಮೋದಿಯವರಿಗೆ ಅಂಬಾನಿ ಕಲ್ಪಿಸಿರುವ ಸೇವೆಗಳಿಗೆ ಸಲ್ಲಿಕೆಯಾಗಿರುವ ಕಮಿಷನ್‌” ಎಂದು ಭೂಷಣ್‌, ಸಿನ್ಹಾ ಮತ್ತು ಶೌರಿ ಗಂಭೀರ ಆರೋಪ ಮಾಡಿದ್ದಾರೆ.

ಭಾರತ ಮತ್ತು ಫ್ರಾನ್ಸ್‌ ನಡುವಿನ ಒಪ್ಪಂದದಂತೆ ರಫೇಲ್‌ ವಿಮಾನಗಳಿಗೆ ಭಾರತ ಪಾವತಿಸುವ ೫೯ ಸಾವಿರ ಕೋಟಿ ರುಪಾಯಿ ಪೈಕಿ ಶೇ.೫೦ರಷ್ಟ ಹಣವನ್ನು ದಸಾಲ್ಟ್‌ ಸಂಸ್ಥೆಯು ಭಾರತದ ರಕ್ಷಣಾ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಲಿದೆ. ಅಂದರೆ, ಒಪ್ಪಂದ ಪ್ರಕಾರ ಸುಮಾರು ೩೦ ಸಾವಿರ ಕೋಟಿ ರುಪಾಯಿ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಬೇಕಿದೆ. ದಸಾಲ್ಟ್‌ ಮತ್ತು ಅಂಬಾನಿ ಒಡೆತನದ ರಿಲಯನ್ಸ್‌ ಏರೋಸ್ಟ್ರಕ್ಚರ್‌ನಲ್ಲಿ ಈ ಹಣವನ್ನು ವೆಚ್ಚ ಮಾಡಲಾಗುತ್ತದೆ. “ಪ್ರಧಾನಿ ಮೋದಿಯವರು ರಾಷ್ಟ್ರೀಯ ಭದ್ರತೆಯನ್ನು ಬದಿಗೆ ಸರಿಸಿದ್ದು, ಖರೀದಿ ನಿಯಮಗಳನ್ನು ಉಲ್ಲಂಘಿಸುವುದಲ್ಲದೇ ವಿಮಾನಗಳ ಸಂಖ್ಯೆಯನ್ನು ೧೨೬ರಿಂದ ೩೬ಕ್ಕೆ ಇಳಿಕೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ; ಸಿಎಜಿ ತನಿಖೆಗೆ ಸಿನ್ಹಾ, ಶೌರಿ ಆಗ್ರಹ

“ರಕ್ಷಣಾ ಚಟುವಟಿಕೆಯ ಗಂಧಗಾಳಿಯೇ ಇಲ್ಲದ ರಿಲಯನ್ಸ್‌ ಸಂಸ್ಥೆಯನ್ನು ಒಪ್ಪಂದದಲ್ಲಿ ಸೇರಿಸಿರುವುದರ ಉದ್ದೇಶ ಕಮಿಷನ್‌ ಒಡೆಯುವುದಾಗಿದೆ. ಸರ್ಕಾರದ ಅನುಮತಿಯಿಲ್ಲದೇ ರಿಲಯನ್ಸ್‌ ಮುಂದು ಮಾಡಿರುವ ಸಲಹೆಗಳು ತಪ್ಪಾಗಿವೆ. ಸೇನಾಧಿಕಾರಿಗಳ ಮೂಲಕ ಒಪ್ಪಂದ ತುರ್ತಾಗಿ ಆಗಬೇಕಿತ್ತು ಎಂದು ಹೇಳಿಸಿರುವುದು ರಕ್ಷಣಾ ಖರೀದಿ ಮಾನದಂಡಕ್ಕೆ ವಿರುದ್ಧವಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ದ ಭೂಷಣ್, ಶೌರಿ ಮತ್ತು ಸಿನ್ಹಾ ಅವರು “ರಫೇಲ್‌ ದೊಡ್ಡ ಹಗರಣವಾಗಿದೆ” ಎಂದು ದೂರಿದ್ದರು. ಇದಕ್ಕೂ ಮುನ್ನ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು “ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶಕ್ಕೆ ಸುಳ್ಳು ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕಲ್‌‌ ಲಿಮಿಟೆಡ್‌ನಿಂದ ಗುತ್ತಿಗೆ ಹಿಂಪಡೆದು ಸಾಲದ ಸುಳಿಯಲ್ಲಿ ಸಿಲುಕಿರುವ ಅಂಬಾನಿಗೆ ಏಕೆ ಗುತ್ತಿಗೆ ನೀಡಲಾಗಿದೆ” ಎಂದು ಪ್ರಶ್ನಿಸಿದ್ದನ್ನು ಇಲ್ಲಿ ನೆನೆಯಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More