ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರ ಪೂರ್ವಾಪರ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸಲು ಸೂಚಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ತಮಿಳುನಾಡು ಸಚಿವ ಸಂಪುಟ ನಿರ್ಧರಿಸಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಏಳು ಜನರ ಗತ ಬದುಕಿನ ಸಂಕ್ಷಿಪ್ತ ವಿವರ ಇಲ್ಲಿದೆ

ಸಾಂತನ್‌‌ ಅಲಿಯಾಸ್‌ ಟಿ ಸುದಂದಿರ ರಾಜ

ರಾಜೀವ್‌ ಹತ್ಯಾ ಯೋಜನೆ ರೂಪಿಸಿದ ಪ್ರಮುಖ ಹಂತಕ ಒಕ್ಕಣ್ಣಿನ ಶಿವರಾಸನ್ ಜೊತೆ ನಿಕಟ ಸಂಪರ್ಕ ಹೊಂದಿದ್ದವನು ಸಾಂತನ್ ಅಲಿಯಾಸ್‌ ಟಿ ಸುದಂದಿರ ರಾಜ. ರಾಜೀವ್ ಹತ್ಯೆ ಸಂದರ್ಭದಲ್ಲಿ ಶ್ರೀಲಂಕಾ ಪ್ರಜೆಯಾಗಿದ್ದ ಈತ, ಎಲ್‌ಟಿಟಿಇ ಗುಪ್ತಚರ ದಳದ ಸದಸ್ಯನೆಂದು ಹೇಳಲಾಗುತ್ತದೆ. ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌ ಟೆಕ್ನಾಲಜಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಚೆನೈಗೆ ಬಂದು ನೆಲಸಿದ್ದವನು ಸಾಂತನ್‌‌. ರಾಜೀವ್‌ ಹತ್ಯೆ ಯೋಜನೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದನೆಂದು ದೃಢಪಟ್ಟಿದೆ. ಈತನ ವ್ಯಾಸಂಗದ ಖರ್ಚುವೆಚ್ಚವನ್ನು ಎಲ್‌ಟಿಟಿಇ ಸಂಘಟನೆಯೇ ಭರಿಸುತ್ತಿತ್ತು ಎಂದು ತಿಳಿದುಬಂದಿದೆ. ಮಾಜಿ ಪ್ರಧಾನಿ ಹತ್ಯೆ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈತನಿಗೆ ಹತ್ಯೆಯ ಮುಂಚೆ ನಡೆದ ಸಿದ್ಧತೆಯ ಪ್ರತಿ ವಿವರಗಳೂ ತಿಳಿದಿದ್ದವು ಎನ್ನಲಾಗುತ್ತಿದೆ. ರಾಜೀವ್‌ ಹತ್ಯೆಯ ದಿನದಂದೇ ಶಿವರಾಸನ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾಗಿ ಸಾಂತನ್‌ ತಪ್ಪೊಪ್ಪಿಗೆ ನೀಡಿದ್ದನು.

ನಳಿನಿ

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಬದುಕುಳಿದ ಏಕೈಕ ಹೆಣ್ಣುಮಗಳು ನಳಿನಿ. ಶ್ರೀಪೆರಂಬದೂರ್‌ನಲ್ಲಿ ಮಾನವ ಬಾಂಬ್‌ ಆಗಿ ಸ್ಫೋಟಗೊಂಡ ಧನು ಹಾಗೂ ಶುಭಾ ಅವರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ನಳಿನಿ, ರಾಜೀವ್‌ ಹತ್ಯೆಯ ಪ್ರಮುಖ ರೂವಾರಿಗಳಲ್ಲಿ ಒಬ್ಬನಾದ ಮುರುಗನ್‌ನ‌ ಪತ್ನಿ. ಮಾಜಿ ಪ್ರಧಾನಿ ಹತ್ಯೆ ಸಂಚಿನ ಪ್ರಮುಖ ಭಾಗವಾಗಿದ್ದವಳು. ಶ್ರೀಲಂಕಾದಿಂದ ಬಂದು ತಮಿಳುನಾಡಿನಲ್ಲಿ ನೆಲೆಸಿದ್ದ ಎಲ್‌ಟಿಟಿಇ ಮುಖಂಡ ಮರುಗನ್‌ ಜೊತೆ ಪ್ರೇಮಸಂಬಂಧ ಹೊಂದಿದ್ದವಳು.

ಮಾನವ ಬಾಂಬರ್‌ಗಳಾಗಿದ್ದ ಧನು ಮತ್ತು ಶುಭಾ ಅವರನ್ನು ರಾಜೀವ್‌ ಹತ್ಯೆಯ ದಿನದಂದು ಬಟ್ಟೆ ಖರೀದಿಸಲು ಅಂಗಡಿಯೊಂದಕ್ಕೆ ಕರೆತಂದಿದ್ದಳು. ರಾಜೀವ್‌ ಹತ್ಯೆ ಸಂಚು ಮೊದಲೇ ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡದಿರುವ ಆರೋಪ ನಳಿನಿ ಮೇಲಿದೆ. ರಾಜೀವ್‌ ಗಾಂಧಿ ಅವರು ಪಾಲ್ಗೊಂಡಿದ್ದ ಶ್ರೀಪೆರಂಬದೂರ್ ಸಾರ್ವಜನಿಕ ಸಭೆಗೆ ಹತ್ಯಾದಳದ ಸದಸ್ಯರೊಂದಿಗೆ ನಳಿನಿ ತೆರಳಿದ್ದಳು ಎಂಬುದು ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬಯಲಾಗಿದೆ.

ಮುರುಗನ್

ರಾಜೀವ್‌ ಹತ್ಯೆ ಸಂದರ್ಭದಲ್ಲಿ 20 ವರ್ಷ ವಯಸ್ಸಿನ ಹುಡುಗನಾಗಿದ್ದ ಈತ, ತಮಿಳು ಕವಿಯೊಬ್ಬರ ಮಗನೆಂದು ಹೇಳಲಾಗುತ್ತಿದೆ. 1989ರಲ್ಲಿ ಶ್ರೀಲಂಕಾದಲ್ಲಿ ನಡೆಯುತ್ತಿದ್ದ, ಎಲ್‌ಟಿಟಿಇ ಹೋರಾಟದಿಂದ ಸ್ಫೂರ್ತಿ ಪಡೆದಿದ್ದ ಪೇರರಿವಾಲನ್‌ ತಮಿಳು ಹೋರಾಟದ ಸಾಹಿತ್ಯ ಕೃತಿಗಳನ್ನು ಮಾರುವ ಕಾರ್ಯದಲ್ಲಿ ತೊಡಗಿದ್ದನು. ತಮಿಳುನಾಡಿನಿಂದ ಶ್ರೀಲಂಕಾಕ್ಕೆ ತೆರಳಿದಾಗ ಎಲ್‌ಟಿಟಿಇ ಸರ್ವೋಚ್ಚ ನಾಯಕ ಪ್ರಭಾಕರನ್‌ ಸೇರಿದಂತೆ ಉಳಿದ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದನೆಂದು ತಿಳಿದುಬಂದಿದೆ. ಭಾರತದಲ್ಲಿ ಎಲ್‌ಟಿಟಿಇ ನಡೆಸಲು ಬಯಸಿದ್ದ ಉಗ್ರ ಚಟುವಟಿಕೆಗಳಿಗೆ ಆಶ್ರಯ ಒದಗಿಸಿದ ಆರೋಪ ಹೊತ್ತಿದ್ದ ಪೇರರಿವಾಲನ್,‌ ರಾಜೀವ್‌ ಹತ್ಯೆಯ ಸಂಚಿನ ಭಾಗವಾಗಿ ಕೆಲಸ ಮಾಡಿದ್ದು ವಿಚಾರಣೆಯಲ್ಲಿ ತಿಳಿದುಬಂದಿತು.

ಇದನ್ನೂ ಓದಿ : ರಾಜೀವ್ ಹತ್ಯೆ ಮತ್ತು ದ್ವೇಷಪ್ರಿಯರಿಗೆ ನಿಲುಕದ ಅಸೀಮ ಕ್ಷಮೆಯ ಪರಂಪರೆ

ರಾಬರ್ಟ್‌ ಪಿಯಸ್

1990 ರಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಬಂದಿದ್ದ ಎಲ್‌ಟಿಟಿಇ ಕಮಾಂಡೊ ಪಡೆಯ ಭಾಗವಾಗಿದ್ದವನು ರಾಬರ್ಟ್‌ ಪಿಯಸ್‌. ಶ್ರೀಲಂಕಾದಲ್ಲಿ ಶಾಂತಿ ನೆಲಸಲು ಭಾರತೀಯ ಶಾಂತಿ ರಕ್ಷಕ ದಳದ ಸೈನಿಕರು ಎಲ್‌ಟಿಟಿಇ ಉಗ್ರರ ಚಟುವಟಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಭಾರತೀಯ ಸೈನಿಕರು ಶ್ರೀಲಂಕಾದಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ತನ್ನ ಮಗ ಹತನಾಗಿದ್ದಕ್ಕೆ ಕುಪಿತಗೊಂಡಿದ್ದ ರಾಬರ್ಟ್‌ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಮೇಲೆ ಸೇಡು ತೀರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದನು. ರಾಜೀವ್‌ ಹತ್ಯೆಯ ಸಂಚು ರೂಪಿಸಿದವರಲ್ಲಿ ಪ್ರಮುಖನೆಂದು ರಾಬರ್ಟ್‌ ಪಿಯಸ್‌ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಆ ಕಾರಣ ನ್ಯಾಯಂಗವು ಈತನಿಗೆ ಜೀವವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು.

ಜಯಕುಮಾರ್

ರಾಬರ್ಟ್‌ ಪಿಯಸ್‌ ಅಳಿಯ ಜಯಕುಮಾರ್ ಶ್ರೀಲಂಕಾ ಮೂಲದ ತಮಿಳು ಭಾಷಿಗ. 1990 ರಲ್ಲಿ ಎಲ್‌ಟಿಟಿಇ ಕಮಾಂಡೊಗಳೊಂದಿಗೆ ಭಾರತಕ್ಕೆ ಬಂದಿದ್ದವನು. ರಾಜೀವ್‌ ಹತ್ಯೆ ಸಂಚು ರೂಪಿಸಿದವರಿಗೆ ತಮಿಳುನಾಡಿನಲ್ಲಿ ಆಶ್ರಯ ಒದಗಿಸುವ ಜವಾಬ್ದಾರಿ ಜಯಕುಮಾರ್‌ ಹೊತ್ತುಕೊಂಡಿದ್ದನೆಂದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿತ್ತು.

ರವಿಚಂದ್ರನ್

ಶ್ರೀಲಂಕಾ ಮೂಲದ ತಮಿಳು ಭಾಷಿಕನಾದ ರವಿಚಂದ್ರನ್‌ 1990ರಲ್ಲಿ ಭಾರತಕ್ಕೆ ಪ್ರವೇಶಿಸಿದ. ಭಾರತದೊಳಗೆ ಎಲ್‌ಟಿಟಿಇ ನಡೆಸಿದ ವಿದ್ವಂಸಕ ಕೃತ್ಯಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಒದಗಿಸಿದವನು. ಈತನಿಗೆ ಹಣಕಾಸು ಸಹಾಯ ಮಾಡುತ್ತಿದ್ದುದು ರಾಜೀವ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವರಾಸನ್‌. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್‌ಟಿಟಿಇ ತಂಡಗಳಿಗೆ ವಾಹನ ಹಾಗೂ ಪ್ರಯಾಣ ಸೌಕರ್ಯ ಒದಗಿಸುವ ಜವಾಬ್ದಾರಿ ರವಿಚಂದ್ರನ್‌ ಹೊತ್ತಿದ್ದನೆಂದು ವಿಚಾರಣೆ ವೇಳೆ ತಿಳಿದುಬಂದಿತ್ತು. ‌

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More