ರಾಜೀವ್ ಹತ್ಯೆ ಮತ್ತು ದ್ವೇಷಪ್ರಿಯರಿಗೆ ನಿಲುಕದ ಅಸೀಮ ಕ್ಷಮೆಯ ಪರಂಪರೆ

ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದವರ ವಿಷಯದಲ್ಲಿ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳು ತೋರುತ್ತ ಬಂದಿರುವ ಕ್ಷಮಾಗುಣದ ಅಸೀಮ ಮಾನವೀಯತೆಯು, ದ್ವೇಷವನ್ನೇ ತನ್ನ ಲಾಂಛನ ಮಾಡಿಕೊಂಡಿರುವ ಇಂದಿನ ಭಾರತೀಯ ಬಹುಸಂಖ್ಯಾತರ ಭಾಷೆಗೆ ಬಹುಶಃ ನಿಲುಕದ ಸಂಗತಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಶಿಫಾರಸು ಮಾಡಿ ರಾಜ್ಯಪಾಲರಿಗೆ ಪತ್ರ ಬರೆಯಲು ತಮಿಳುನಾಡು ಎಐಎಡಿಎಂಕೆ ಸರ್ಕಾರದ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

೧೯೯೧ರಲ್ಲಿ ಅಂದಿನ ಪ್ರಧಾನಿಯಾಗಿ ತಮಿಳುನಾಡಿನ ಶ್ರೀಪೆರಂಬದೂರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ರಾಜೀವ್ ಗಾಂಧಿಯವರನ್ನು, ಮಾನವ ಬಾಂಬ್ ಸ್ಫೋಟಿಸುವ ಮೂಲಕ ಭೀಕರವಾಗಿ ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಳಿನಿ ಶ್ರೀಹರನ್ ಸೇರಿದಂತೆ ಏಳು ಮಂದಿ ಕಳೆದ ೨೮ ವರ್ಷದಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜೀವ್ ಹತ್ಯೆ ಪ್ರಕರಣದಲ್ಲಿ ನಳಿನಿ ಮತ್ತು ಆಕೆಯ ಪತಿ ಎಲ್‌ಟಿಟಿಇ ಗೆರಿಲ್ಲಾ ಮುರುಗನ್ ಸೇರಿದಂತೆ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ, ನಳಿನಿ ಜೈಲಿನಲ್ಲಿಯೇ ಹೆಣ್ಣುಮಗುವಿಗೆ (ಮೇಘರಾ) ಜನ್ಮ ನೀಡಿದ ಬಳಿಕ, ಸೋನಿಯಾ ಗಾಂಧಿ ನಳಿನಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದರು. ಆ ಮನವಿಯ ಪ್ರಕಾರ, ಆಕೆಯ ಶಿಕ್ಷೆಯನ್ನು ಕಡಿತ ಮಾಡಿ ಆಜೀವ ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು.

ಆ ಬಳಿಕ ಆಕೆ, ೨೦೦೭ರಿಂದಲೇ ತನ್ನ ಶಿಕ್ಷೆ ಕಡಿತ ಮಾಡಿ ಬಿಡುಗಡೆ ಮಾಡುವಂತೆ ನಿರಂತರ ಮನವಿ ಮಾಡುತ್ತಲೇ ಇದ್ದರು. ಇದೀಗ ತಮಿಳುನಾಡು ಸರ್ಕಾರ, ಸಂವಿಧಾನದ ೧೬೧ನೇ ವಿಧಿಯನ್ವಯ ಆಕೆಗೆ ಕ್ಷಮಾಪಣೆ ನೀಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಳಿನಿಯ ಕ್ಷಮಾಪಣೆ ಮತ್ತು ಬಿಡುಗಡೆಯ ವಿಷಯ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ.

ಈ ಹಿನ್ನೆಲೆಯಲ್ಲಿ, ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಂತಕರ ವಿಷಯದಲ್ಲಿ ಕಳೆದ ಸರಿಸುಮಾರು ಮೂರು ದಶಕದ ಅವಧಿಯಲ್ಲಿ ನಡೆದುಕೊಂಡ ರೀತಿ ಕೂಡ ಮತ್ತೊಮ್ಮೆ ಸಾರ್ವಜನಿಕರ ಅವಲೋಕನಕ್ಕೆ ಒಳಗಾಗಿದೆ.

ತಾಯ್ತನಕ್ಕೆ ಮಿಡಿದ ಸೋನಿಯಾ

ರಾಜೀವ್ ಗಾಂಧಿ ಹತ್ಯೆಯ ಮಾರನೇ ದಿನವೇ ಬಂಧಿತಳಾಗಿದ್ದ ನಳಿನಿ, ಆತ್ಮಹತ್ಯಾ ಬಾಂಬ್ ದಳದ ಐವರಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದು, ಬಂಧನದ ವೇಳೆ ಗರ್ಭಿಣಿಯಾಗಿದ್ದ ಆಕೆ, ೧೯೯೨ರಲ್ಲಿ ಜೈಲಿನಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆ ಹಿನ್ನೆಲೆಯಲ್ಲಿ, ಆಕೆಯ ತಾಯ್ತನ ಮತ್ತು ಮಗುವಿನ ಭವಿಷ್ಯದ ದೃಷ್ಟಿಯಿಂದ ಮಾನವೀಯ ನೆಲೆಯಲ್ಲಿ ಮಿಡಿದಿದ್ದ ಸೋನಿಯಾ ಗಾಂಧಿ, ತಮ್ಮ ಪತಿ ರಾಜೀವ್ ಗಾಂಧಿಯ ಭೀಕರ ಹತ್ಯೆಯ ನೋವನ್ನು ನೀಗಿ ನಳಿನಿಯ ಮರಣದಂಡನೆಯನ್ನು ಕಡಿತ ಮಾಡುವಂತೆ ಮತ್ತು ಆ ಮೂಲಕ ಆಕೆಯ ಮಗು ಅನಾಥವಾಗುವುದನ್ನು ತಪ್ಪಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ, ತಮಿಳುನಾಡು ಸರ್ಕಾರದ ಶಿಫಾರಸಿನ ಮೇರೆಗೆ ಆ ರಾಜ್ಯದ ರಾಜ್ಯಪಾಲರು ೨೦೦೦ನೇ ಸಾಲಿನಲ್ಲಿ ನಳಿನಿ ಶಿಕ್ಷೆಯನ್ನು ಮರಣದಂಡನೆಯಿಂದ ಆಜೀವ ಶಿಕ್ಷೆಯಾಗಿ ಕಡಿತ ಮಾಡಿದ್ದರು.

ತನ್ನ ಪತಿಯನ್ನು ಭೀಕರವಾಗಿ ಹತ್ಯೆ ಮಾಡಿ, ತನ್ನ ಇಬ್ಬರು ಮಕ್ಕಳನ್ನು ಅನಾಥ ಮಾಡಿದ ಅದೇ ಹಂತಕರನ್ನು ಕ್ಷಮಿಸಿ, ಅವರ ಮಕ್ಕಳು ಅನಾಥರಾಗದಿರಲಿ ಎಂಬ ಅಸಾಧಾರಣ ಮಾನವೀಯತೆ ಪ್ರದರ್ಶಿಸಿದ ಸೋನಿಯಾ ಗಾಂಧಿಯವರ ಜೀವಪರ ಕಾಳಜಿಯ ಫಲವಾಗಿ ನಳಿನಿ ಮರಣದಂಡನೆಯಿಂದ ಪಾರಾಗಿದ್ದರು.

ಅದಾದ ಬಳಿಕ, ೨೦೦೭ರ ನವೆಂಬರಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರು ಹಾಗೂ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ನಳಿನಿ, “ಈಗಾಗಲೇ ನಾನು ನನ್ನ ಬದುಕಿನ ಸುದೀರ್ಘ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದು, ರಾಜಕೀಯ ಕೈದಿಗಳ ಪೈಕಿ ಅತಿ ದೀರ್ಘಾವಧಿ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಆಜೀವ ಶಿಕ್ಷೆಗೆ ಗುರಿಯಾಗಿದ್ದ ಮಹಾತ್ಮ ಗಾಂಧಿ ಹಂತಕರಲ್ಲಿ ಒಬ್ಬಾತ ಕೂಡ ೧೪ ವರ್ಷಗಳ ಬಳಿಕ ಬಿಡುಗಡೆಯಾಗಿದ್ದ. ತಾಯಿ, ಈಗ ಕೊನೆಯ ಪ್ರಯತ್ನವಾಗಿ ನಿಮ್ಮ ಮೊರೆಹೋಗಿದ್ದೇನೆ. ನೀವು ಮಾತ್ರ ಹೆತ್ತ ಮಗಳನ್ನು ನೋಡುವ ನಮ್ಮ ಭಾವನೆಗಳನ್ನು ಅರಿಯಬಲ್ಲಿರಿ. ಹಾಗಾಗಿ ನಿಮ್ಮ ಕರುಣೆ ಮತ್ತು ದಿಟ್ಟ ನಿರ್ಧಾರ ಮಾತ್ರ ಈಗ ನಮ್ಮನ್ನು ಈ ಶಿಕ್ಷೆಯಿಂದ ಪಾರುಮಾಡಬಲ್ಲದು...” ಎಂದು ಗೋಗರೆದಿದ್ದರು. ಆಕೆಯ ಮನವಿಗೆ ಸ್ಪಂದಿಸಿದ ಸೋನಿಯಾ ಕೂಡ, ಆಕೆಯ ಆರೋಗ್ಯ ಮತ್ತು ಬಿಡುಗಡೆಯ ಬಗ್ಗೆ ಆಡಳಿತ ವಲಯದಲ್ಲಿ ವಿಚಾರಣೆ ನಡೆಸಿದ್ದರು. ನಳಿನಿ ಕೂಡ ೨೦೦೭ರಿಂದ ಕೆಲವು ವರ್ಷಗಳ ಕಾಲ ಸೋನಿಯಾ ಅವರಿಗೆ ತಿಂಗಳಿಗೊಂದು ಪತ್ರ ಬರೆಯುತ್ತಿದ್ದರು ಮತ್ತು ಪ್ರತಿ ಪತ್ರದಲ್ಲಿಯೂ ಸೋನಿಯಾ ಅವರನ್ನು ‘ಪ್ರೀತಿಯ ಅಮ್ಮ’ ಎಂದೇ ಸಂಬೋಧಿಸುತ್ತಲೇ ಪತ್ರವನ್ನು ಆರಂಭಿಸುತ್ತಿದ್ದರು ಎಂದು ೨೦೦೮ರ ‘ಔಟ್‌ಲುಕ್’ ವರದಿಯೊಂದು ಹೇಳುತ್ತದೆ.

ಮಾನವೀಯ ಇತಿಹಾಸ ಬರೆದ ಪ್ರಿಯಾಂಕ

ಆ ಬಳಿಕ ೨೦೦೮ರ ಮಾ.೧೯ರಂದು ವೆಲ್ಲೂರು ಜೈಲಿಗೆ ಭೇಟಿ ನೀಡಿದ್ದ ದಿವಂಗತ ರಾಜೀವ್ ಗಾಂಧಿಯವರ ಪುತ್ರಿ ಪ್ರಿಯಾಂಕ, ಸುಮಾರು ಒಂದು ತಾಸು ನಳಿನಿಯೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದರು. ತನ್ನ ತಂದೆಯನ್ನು ಭೀಕರವಾಗಿ ಸ್ಫೋಟಿಸಿ ಹತ್ಯೆ ಮಾಡಿದ ಆತ್ಮಹತ್ಯಾ ದಳದ ಸದಸ್ಯೆಯೊಂದಿಗೆ ಪ್ರಿಯಾಂಕ ನಡೆಸಿದ ಅಂತಃಕರಣದ ಆ ಮಾತುಕತೆಯ ವಿವರಗಳು ಕೆಲವು ತಿಂಗಳ ಬಳಿಕ ಬಹಿರಂಗವಾಗಿದ್ದವು.

ಸತ್ಯ, ಕ್ಷಮೆ ಮತ್ತು ಪಶ್ಚಾತ್ತಾಪದ ಮಿಡಿತಗಳಿಗೆ ಸಾಕ್ಷಿಯಾಗಿದ್ದ ಆ ಮಾತುಕತೆ ಬಹುಶಃ ಜಗತ್ತಿನ ಮಾನವೀಯತೆಯ ಇತಿಹಾಸದಲ್ಲೇ ದಾಖಲಾದ ಅತ್ಯಂತ ಉನ್ನತ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ತನ್ನ ತಂದೆಯ ಹಂತಕಿಯನ್ನು ಕ್ಷಮಿಸುವ ಪ್ರಿಯಾಂಕ ಅವರ ಮಾತುಗಳು, ನಳಿನಿಯ ಜೈಲುವಾಸದ ಅಂತ್ಯದ ಭರವಸೆಯನ್ನೂ ಹುಟ್ಟಿಸಿದ್ದವು. ಆ ಸಂದರ್ಭದಲ್ಲಿ ಯಾವುದೇ ಮಾಧ್ಯಮ ಪ್ರಚಾರದಿಂದ ಈ ವಿಷಯವನ್ನು ದೂರ ಇಡುವುದಾಗಿ ಹೇಳಿದ್ದ ಪ್ರಿಯಾಂಕ, “ಅದೊಂದು ತೀರಾ ಖಾಸಗಿ ಭೇಟಿಯಾಗಿದ್ದು, ಯಾವುದೇ ಹಿಂಸೆ, ದ್ವೇಷ ಮತ್ತು ಸಿಟ್ಟಿನಲ್ಲಿ ನನಗೆ ನಂಬಿಕೆ ಇಲ್ಲ. ನನ್ನ ಬದುಕನ್ನು ಆ ವಿಷಯಗಳು ಆವರಿಸುವುದನ್ನು ಇಚ್ಚಿಸುವುದಿಲ್ಲ,” ಎಂದು ಹೇಳಿದ್ದರು. “ನಾನು ನಳಿನಿಯನ್ನು ಭೇಟಿ ಮಾಡಿದ್ದು, ಒಂದು ರೀತಿಯಲ್ಲಿ ಹಿಂಸೆಯನ್ನು ಶಾಂತಿಯೊಂದಿಗೆ ಮುಖಾಮುಖಿಯಾಗುವ ನನ್ನ ರೀತಿ ಮತ್ತು ನನ್ನ ಬದುಕಿನಲ್ಲಿ ನಾನು ಕಳೆದುಕೊಂಡದ್ದನ್ನು ಸರಿದೂಗಿಸಿಕೊಳ್ಳುವ ಪ್ರಯತ್ನ,” ಎನ್ನುವ ಮೂಲಕ ಪ್ರಿಯಾಂಕಾ ಉದಾತ್ತ ಮಾನವೀಯತೆಯನ್ನು ಮರೆದಿದ್ದರು.

ಆ ಬಳಿಕ, ಭಾರತವಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ನೆಹರೂ-ಗಾಂಧಿ ಕುಟುಂಬದ ಶಾಂತಿಪ್ರಿಯತೆ ಮತ್ತು ಕ್ಷಮಾಗುಣದ ಬಗ್ಗೆ ವ್ಯಾಪಕ ಚರ್ಚೆ ಮತ್ತು ಅಪಾರ ಮೆಚ್ಚುಗೆಯನ್ನು ಹುಟ್ಟುಹಾಕಿದ್ದ ಆ ಭೇಟಿಯ ಕುರಿತು ಇನ್ನಷ್ಟು ವಿವರಗಳು ಹೊರಬಿದ್ದದ್ದು ಎರಡು ವರ್ಷಗಳ ಹಿಂದೆ; ೨೦೧೬ರಲ್ಲಿ ನಳಿನಿ ಬರೆದ 'ರಾಜೀವ್ ಮರ್ಡರ್; ಹಿಡನ್ ಟ್ರುತ್ಸ್ ಅಂಡ್ ಪ್ರಿಯಾಂಕಾ-ನಳಿನಿ ಮೀಟ್' ಕೃತಿ ಹೊರಬಂದಾಗಲೇ.

“ಪ್ರಿಯಾಂಕಾ ಎರಡು ನಿಮಿಷ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ನಾನು ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಆಕೆಯ ನೋಟವನ್ನು ಎದುರಿಸಲು ಮುಖವೆತ್ತುತ್ತಿದ್ದಂತೆ, ಅಕೆಯ ಕೆನ್ನೆಗಳು ದುಃಖದಿಂದ ಕೆಂಪಾದವು. ಒತ್ತರಿಸಿಬಂದ ಅಳುವಿನಲ್ಲಿ ತುಟಿಗಳು ಅದುರಿದವು. ‘ನೀನು ಯಾಕೆ ಹಾಗೆ ಮಾಡಿದೆ? ನನ್ನ ತಂದೆ ಒಳ್ಳೆಯ ಮನುಷ್ಯ, ಮೃದು ವ್ಯಕ್ತಿ, ಎಂಥದ್ದೇ ಇರಲಿ, ನೀವು ಅವರೊಂದಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು’ ಎಂದರು,” ಎಂದು ನಳಿನಿ ಬರೆದುಕೊಂಡಿದ್ದರು.

ತನ್ನ ಕೃತಿಯಲ್ಲಿ ನಳಿನಿ ದಾಖಲಿಸಿರುವ ಈ ಮಾತುಗಳು, ಜೈಲಿನ ನಾಲ್ಕು ಗೋಡೆಯ ನಡುವೆ ಹಂತಕಿ ಮತ್ತು ಹತ್ಯೆಗೀಡಾದ ತಂದೆಯ ಮಗಳ ನಡುವಿನ ಮಾನವೀಯ ಕ್ಷಣಗಳನ್ನು ಹಿಡಿದಿಟ್ಟಿವೆ. ಜೊತೆಗೆ, “೮೫ ನಿಮಿಷಗಳ ಆ ಮಾತುಕತೆಯಲ್ಲಿ ಪ್ರಿಯಾಂಕ ಬಹುತೇಕ ತಾಳ್ಮೆಯಿಂದಲೇ ಇದ್ದರು. ಎಲ್ಲವನ್ನೂ ಕೇಳಿಸಿಕೊಂಡರು. ಆದರೆ, ಉಳಿದ ಹಂತಕರ ಹೆಸರು ಹೇಳುತ್ತಲೇ ಸಿಟ್ಟಿಗೆದ್ದರು,” ಎಂದೂ ನಳಿನಿ ಆ ಕೃತಿಯಲ್ಲಿ ನಮೂದಿಸಿದ್ದಾರೆ.

ಇದನ್ನೂ ಓದಿ : ರಾಜೀವ್ ಗಾಂಧಿ ಹತ್ಯೆ ಆಧರಿಸಿದ ವೆಬ್‌ ಸೀರೀಸ್‌ನಲ್ಲಿ ನವಾಜುದ್ದೀನ್‌ ಸಿದ್ದಿಕಿ?

೨೦೦೭ರಿಂದ ತನ್ನ ಬಿಡುಗಡೆಗೆ ಮತ್ತೆ ಮತ್ತೆ ಮನವಿ ಮಾಡುತ್ತಲೇ ಇರುವ ನಳಿನಿ ಮತ್ತು ರಾಜೀವ್ ಹಂತಕರ ಕ್ಷಮಾಪಣೆಯ ವಿಷಯದಲ್ಲಿ ಮತ್ತೆ-ಮತ್ತೆ ತಮ್ಮ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ತಮ್ಮ ನಿಲುವು ವ್ಯಕ್ತಪಡಿಸುತ್ತಲೇ ಇರುವ ನೆಹರು-ಗಾಂಧಿ ಕುಟುಂಬದ ಮಾನವೀಯ ಸ್ಪಂದನೆಯ ನಡುವೆಯೂ ಆಕೆಯ ಬಿಡುಗಡೆಯ ಕ್ಷಣ ಇಂದಿಗೂ ಬಂದಿಲ್ಲ. ಡಿಎಂಕೆ ಸಂಸ್ಥಾಪಕ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನವಾದ ಸೆಪ್ಟೆಂಬರ್ ೧೫ರಂದು ಪ್ರತಿವರ್ಷ ಸನ್ನಡತೆಯ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವುದು ತಮಿಳುನಾಡು ಸರ್ಕಾರ ಅನುಸರಿಸುತ್ತಿರುವ ಸಂಪ್ರದಾಯ. ಆ ಹಿನ್ನೆಲೆಯಲ್ಲಿ ಈ ಬಾರಿಯಾದರೂ ನಳಿನಿಗೆ ಬಿಡುಗಡೆಯ ಭಾಗ್ಯ ದೊರೆಯುವುದೇ ಎಂಬ ನಿರೀಕ್ಷೆ ಎದ್ದಿದೆ. ಅದಕ್ಕೆ ಪೂರಕವಾಗಿ ಇದೀಗ ತಮಿಳುನಾಡು ಸರ್ಕಾರ ನಳಿನಿ ಸೇರಿದಂತೆ ಶಿಕ್ಷೆಗೆ ಗುರಿಯಾಗಿರುವ ಎಲ್ಲ ಏಳು ಮಂದಿ ಹಂತಕರಿಗೂ ಕ್ಷಮಾಪಣೆ ನೀಡಿ ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.

ಕ್ಷಮಾಗುಣದ ಪರಂಪರೆ

ಈ ನಡುವೆ, ೨೦೦೮ರ ಪ್ರಿಯಾಂಕಾ-ನಳಿನಿ ಭೇಟಿಯಾದಾಗಿನಿಂದಲೂ, ರಾಜೀವ್ ಪುತ್ರ ಹಾಗೂ ಹಾಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಕ್ಷಮಾಪಣೆಯ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಲೇ ಬಂದಿದ್ದಾರೆ.

ಸಹೋದರಿ ಪ್ರಿಯಾಂಕ, ೨೦೦೮ರಲ್ಲಿ ನಳಿನಿಯ ವಿಷಯದಲ್ಲಿ ಕ್ಷಮಾಪಣೆಯ ಮಾತುಗಳನ್ನಾಡಿದ್ದ ಹೊತ್ತಲ್ಲಿ, ಆ ಬಗ್ಗೆ ಪ್ರತಿಕ್ರಿಯಿಸಿದ್ದ ರಾಹುಲ್, “ಈ ವಿಷಯಗಳಲ್ಲಿ ನನಗೆ ನನ್ನದೇ ಆದ ದೃಷ್ಟಿಕೋನವಿದೆ. ಆಕೆಯ (ಪ್ರಿಯಾಂಕಾ) ನಡೆಯ ವಿಷಯದಲ್ಲಿ ನನ್ನ ಅಭ್ಯಂತರವೇನೂ ಇಲ್ಲ,” ಎಂದಿದ್ದರು. ಅಲ್ಲದೆ, “ದ್ವೇಷವನ್ನಾಗಲೀ, ಸೇಡನ್ನಾಗಲೀ ಅಥವಾ ಕೋಪವನ್ನಾಗಲೀ ನಾವು ಬೆಳೆಸಿಕೊಂಡು ಹೋಗುವುದಿಲ್ಲ,” ಎಂದೂ ಸ್ಪಷ್ಟಪಡಿಸಿದ್ದರು. ಆ ಮೂಲಕ, ತಮ್ಮ ಸಹೋದರಿಯ ಮಾದರಿಯಲ್ಲೇ ರಾಹುಲ್ ಕೂಡ ಅಪರೂಪದ ಮಾನವೀಯ ಮಿಡಿತವನ್ನು ವ್ಯಕ್ತಪಡಿಸಿದ್ದರು.

ಆ ಬಳಿಕವೂ ಕೆಲವು ಬಾರಿ, ತಮ್ಮ ಪ್ರೀತಿಯ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರ ಖೂಳ ಕೃತ್ಯದ ಬಗ್ಗೆ ಮಾತನಾಡಿದ್ದ ರಾಹುಲ್, ಹಂತಕ ಕಾರಾಗೃಹ ಶಿಕ್ಷೆಯಿಂದ ಮುಕ್ತಿ ಕೊಡುವ ಕ್ಷಮಾಪಣೆಯ ವಿಷಯವನ್ನು ಪ್ರಸ್ತಾಪಿಸಿದ್ದು ವಿರಳ. ಆದರೆ, ಕಳೆದ ಮಾರ್ಚ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಸಂವಾದವೊಂದರಲ್ಲಿ ರಾಹುಲ್ ಈ ಬಗ್ಗೆ ಮೊದಲ ಬಾರಿಗೆ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದ್ದರು. “ಹಲವು ವರ್ಷಗಳ ಕಾಲ ನಾವು (ತಾವು ಮತ್ತು ಸಹೋದರಿ ಪ್ರಿಯಾಂಕಾ) ಆ ಘಟನೆಯ (ತಮ್ಮ ತಂದೆಯ ಹತ್ಯೆ) ಆಘಾತದಿಂದ ಹೊರಬಂದಿರಲಿಲ್ಲ. ತೀರಾ ಘಾಸಿಗೊಂಡಿದ್ದೆವು. ಆದರೆ, ಹೇಗೋ ಅಂತೂ ಆ ನೋವು ಮತ್ತು ಆಘಾತದಿಂದ ಹೊರಬಂದಿದ್ದೇವೆ. ತಂದೆಯವರ ಹಂತಕರನ್ನು ಸಂಪೂರ್ಣ ಕ್ಷಮಿಸಿದ್ದೇವೆ,” ಎಂದು ಹೇಳಿದ್ದರು.

ಆ ಮೂಲಕ, ತಮ್ಮ ತಂದೆಯ ಹಂತಕರ ವಿಷಯದಲ್ಲಿ ಕುಟುಂಬದ ಮಾನವೀಯತೆಯ ಮಿಡಿತವನ್ನು ಮತ್ತೊಮ್ಮೆ ಸಾದರಪಡಿಸಿದ್ದರು. ಅತ್ಯಂತ ಮೃದು ಸ್ವಭಾವದ, ಸದಾ ನಗುಮುಖದ ಮತ್ತು ಸರಳ ವ್ಯಕ್ತಿತ್ವದ ನಾಯಕ ಹಾಗೂ ನವಭಾರತದ ಕನಸು ಕಂಡಿದ್ದ ಸೌಮ್ಯವಾದಿ ರಾಜೀವ್ ಅವರನ್ನು ಮಾನವ ಬಾಂಬ್ ಸ್ಫೋಟಿಸುವ ಮೂಲಕ ಭೀಕರವಾಗಿ ಹತ್ಯೆ ಮಾಡಿದ ಎಲ್‌ಟಿಟಿಇ ಉಗ್ರರ ವಿಷಯದಲ್ಲಿ ಅವರ ಇಡೀ ಕುಟುಂಬ ದಶಕಗಳಿಂದ ತೋರುತ್ತ ಬಂದಿರುವ ಕ್ಷಮಾಗುಣದ ಅಸೀಮ ಮಾನವೀಯತೆಯು, ದ್ವೇಷ ಮತ್ತು ಅಸೂಯೆಯನ್ನೇ ತನ್ನ ಲಾಂಛನ ಮಾಡಿಕೊಂಡಿರುವ ಇಂದಿನ ಭಾರತೀಯ ಬಹುಸಂಖ್ಯಾತರ ಭಾಷೆಗೆ ಬಹುಶಃ ನಿಲುಕದ ಸಂಗತಿ.

ಗಾಂಧಿ-ನೆಹರೂ ಕುಟುಂಬದ ವಿರುದ್ಧ ಸೇಡು ಮತ್ತು ಅಪಪ್ರಚಾರವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಈ ಹೊತ್ತಲ್ಲಿ ಅಂತಹ ಮಾನವೀಯ ನಡತೆಯ ಪರಂಪರೆಯ ಮೇಲೊಮ್ಮೆ ಕಣ್ಣು ಹಾಯಿಸದೆ ಹೋದರೆ ಇತಿಹಾಸ ಕ್ಷಮಿಸಲಾರದು ಕೂಡ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More