ಹಿಂದೂ ವಿರೋಧಿಗಳನ್ನು ಅತ್ಯುಗ್ರವಾಗಿ ವಿರೋಧಿಸುವ ‘ಸನಾತನ ಪ್ರಭಾತ’

ಸಾಮಾಜಿಕ ಕಾರ್ಯಕರ್ತರ ಹತ್ಯೆ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆ ಚರ್ಚೆಯಲ್ಲಿದೆ. ಈ ಸಂಘಟನೆ ನಿಷೇಧ ಕುರಿತ ಚರ್ಚೆ, ಆಗ್ರಹಗಳು ವ್ಯಾಪಕವಾಗುತ್ತಿವೆ. ಸಂಸ್ಥಾ ತನ್ನದೇ ಪತ್ರಿಕೆ ಹೊಂದಿದ್ದು, ಹಿಂದೂ ಧರ್ಮ ಕುರಿತ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಿರುವ ಬಗೆ ಎಂಥದ್ದು? ಎಂಥ ಬರಹಗಳು ಇದರಲ್ಲಿ ಪ್ರಕಟವಾಗುತ್ತಿವೆ?

ಸಮ್ಮೋಹನ ಕಲೆಯನ್ನು ಬಲ್ಲ ವೈದ್ಯ ಜಯಂತ್ ಬಾಲಾಜಿ ಅಠಾವಳೆಯವರಿಂದ ಸ್ಥಾಪನೆಯಾದ ಸನಾತನ ಸಂಸ್ಥಾನ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧವಾಗಿರುವ ಸಂಸ್ಥೆ. ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸುತ್ತ, ಧರ್ಮದ ಅನುಯಾಯಿಗಳಿಗೆ ಸಂತತ್ವವನ್ನು ಪಡೆಯುವುದಕ್ಕೆ ನೆರವಾಗುತ್ತ ಬಂದಿರುವುದಾಗಿ ಸ್ವತಃ ಹೇಳಿಕೊಳ್ಳುತ್ತದೆ. ಈ ವಿಚಾರಗಳನ್ನು ಹರಡುವುದಕ್ಕೆ ತನ್ನದೇ ಆದ ಪತ್ರಿಕೆಯನ್ನು ಹೊಂದಿದೆ. ಅದೇ 'ಸನಾತನ ಪ್ರಭಾತ್‌.'

ಪತ್ರಿಕೆಯಲ್ಲಿರುವ ವಿವರಗಳು ಹೇಳುವಂತೆ, ಈ ಪತ್ರಿಕೆ ೧೯೯೯ರಲ್ಲಿ ನೋಂದಣಿಯಾಗಿದ್ದು, ಪ್ರಸ್ತುತ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್‌, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಕನ್ನಡದಲ್ಲಿ ಸಾಪ್ತಾಹಿಕವಾಗಿ, ಗುಜರಾತಿಯಲ್ಲಿ ಮಾಸಿಕವಾಗಿ, ಹಿಂದಿಯಲ್ಲಿ ಪಾಕ್ಷಿಕವಾಗಿ, ಮರಾಠಿಯಲ್ಲಿ ಸಾಪ್ತಾಹಿಕ ಹಾಗೂ ದೈನಿಕ ಪತ್ರಿಕೆಯಾಗಿ ಹೊರಬರುತ್ತಿದೆ. ೨೦೧೬ರ ಅಕ್ಟೋಬರ್‌ನಿಂದ ಆನ್‌ಲೈನ್‌ನಲ್ಲಿ ಡಿಜಿಟಲ್‌ ರೂಪದಲ್ಲಿ ಲಭ್ಯವಾಗುತ್ತಿದೆ.

ಕಳೆದ ಕೆಲವು ದಿನಗಳಲ್ಲಿ ರಾಜ್ಯದ ವಿದ್ವಾಂಸರಾದ ಎಂ ಎಂ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್‌, ಮಹಾರಾಷ್ಟ್ರದ ವಿಚಾರವಾದಿಗಳಾದ ದಾಬೋಲ್ಕರ್‌ ಮತ್ತು ಪಾನ್ಸರೆ ಹತ್ಯೆ ಹಿನ್ನೆಲೆಯಲ್ಲಿ ಸನಾತನ ಸಂಸ್ಥಾ ಕಾರ್ಯಕರ್ತರ ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ 'ಪ್ರಭಾತ್‌' ಸಾಕಷ್ಟು ಲೇಖನಗಳನ್ನು ಪ್ರಕಟಿಸಿದೆ. ಗೌರಿ ಲಂಕೇಶ್‌ ಹತ್ಯೆ ಸಮರ್ಥನೆ, ಹತ್ಯೆಗೆ ಕಾರಣಗಳನ್ನು ಯುವಕರಿಗೆ ವಿವರಿಸುವ ಸಭೆಗಳು, ಅಭಿಪ್ರಾಯ ಸಂಗ್ರಹ ಒಳಗೊಂಡ ಬರಹಗಳು ಹಲವು ಪ್ರಕಟವಾಗಿವೆ.

ಈ ಲೇಖನ ಬರೆಯುವ ಹೊತ್ತಿಗೆ ಪ್ರಕಟವಾದ ಲೇಖನವೊಂದರ ಚಿತ್ರವನ್ನು ಕೆಳಗೆ ಗಮನಿಸಬಹುದು. 'ಗೌರಿ ಹತ್ಯೆ ಪ್ರಕರಣದಲ್ಲಿ ಅಮಾಯಕರನ್ನು ಬಲಿಪಶು ಮಾಡುವ ಸಂಚಿನ ವಿರುದ್ಧ ಗಣ್ಯರ ಅಭಿಪ್ರಾಯ' ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನದಲ್ಲಿ, ಸಂಸ್ಥಾದ ಪ್ರಮುಖರಾದ ನ್ಯಾಯವಾದಿ ಅಮೃತೇಶ ಅವರನ್ನೂ ಒಳಗೊಂಡಂತೆ, ಯುವ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಹಿಂದುಸ್ಥಾನ ಮರುನಾಮಕರಣ ಸೇವಾ ಸಮಿತಿಯ ಆನಂದ ಕುಲಕರ್ಣಿ, ಹಿತವರ್ಧಕ ಸಂಘದ ಅಧ್ಯಕ್ಷ ಹನುಮಂತ ನಿರಂಜನ, ಉದ್ಯಮಿ ರವಿ ಕಾಮತ್‌, ವಿಶ್ವ ಹಿಂದೂ ಪರಿಷತ್‌ನ ರಮೇಶ್‌ ಬಾಬು, ಶ್ರೀರಾಮ ಸೇನೆಯ ನೀಲಕಂಠ ಕಂದಗಲ್ಲ, ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್‌ ಇನ್ನಷ್ಟು ಮಂದಿಯ ಅಭಿಪ್ರಾಯಗಳಿವೆ.

ಈ ಎಲ್ಲ ಅಭಿಪ್ರಾಯಗಳು ಒಟ್ಟಾರೆಯಾಗಿ, ಪ್ರಗತಿಪರರು ಒತ್ತಡ ಹಾಕಿ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ, ನಕಲಿ ವೈದ್ಯಕೀಯ ತಪಾಸಣೆ ನಡೆಯುತ್ತಿದೆ, ಅಮಾಯಕ ಹಿಂದೂ ಯುವಕರು ಬಲಿಪಶುಗಳಾಗುತ್ತಿದ್ದಾರೆ, ಅಧ್ಯಾತ್ಮ ಹರಡುತ್ತಿರುವ ಸನಾತನ ಸಂಸ್ಥೆ ನಿಷೇಧಕ್ಕೆ ಒತ್ತಡ ನಿರ್ಮಿಸಲಾಗುತ್ತಿದೆ, ಬುದ್ಧಿಜೀವಿಗಳು ದೇಶದಲ್ಲಿ ಆಂತರಿಕ ಕ್ಷೋಭೆ ಕಾರಣವಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ ೫ರಂದು ಗೌರಿ ಲಂಕೇಶ್‌ ಕುರಿತು ಸುದ್ದಿಯೊಂದು ಪ್ರಕಟವಾಗಿದೆ. ಇದರಲ್ಲಿ ಅದೇ ದಿನ, ಗೌರಿ ಲಂಕೇಶ್‌ ಅವರ ನೆನಪಿನಲ್ಲಿ ಹಮ್ಮಿಕೊಂಡ ಗೌರಿ ದಿನ ಕಾರ್ಯಕ್ರಮವನ್ನು ಟೀಕಿಸಲಾಗಿದೆ. ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದೇ ಸನಾತನ ಸಂಸ್ಥಾವನ್ನು ವಿರೋಧಿಸುವುದಕ್ಕೆ ಎಂದು ತರ್ಕಿಸಿದೆ.

ಗೌರಿ ದಿನದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್‌ ನಡೆಸಿದ ಪತ್ರಿಕಾಗೋಷ್ಠಿಯ ಬಗ್ಗೆ ಪ್ರಸ್ತಾಪಿಸಿರುವ ಬರಹದ ಸಾಲುಗಳು ಹೀಗಿವೆ:

‘ಸಮ್ಮೇಳನದಲ್ಲಿ ಏನಿರಲಿದೆ ? ಎಂಬ ಪ್ರಶ್ನೆಗೆ ಒಬ್ಬರಿಂದಲೂ ಸ್ಪಷ್ಟ ಉತ್ತರ ಬರಲಿಲ್ಲ. ಈ ಪ್ರಶ್ನೆ ಬರುತ್ತಲೇ ಪರಸ್ಪರ ಮುಖ ನೋಡಿ ‘ಯಾರು ಮಾತನಾಡುವರು’ ಎಂದು ಪೇಚಿಗೆ ಸಿಲುಕಿದಂತೆ ಪದಾಧಿಕಾರಿಗಳು ಪರಸ್ಪರರತ್ತ ನೋಡುತ್ತಿದ್ದರು. ಒಬ್ಬರು ಗೌರಿ ಹತ್ಯೆ ಮತ್ತು ಕಲ್ಬುರ್ಗಿ ಹತ್ಯೆಯ ನಿಮಿತ್ತ ಸಮ್ಮೇಳನ ಇದೆ ಎಂದರು. ಒಬ್ಬರು ‘ಸಾಹಿತ್ಯ ಮತ್ತು ಕಲಾವಿದರ ಸಮಾವೇಶವಿದೆ’ ಎಂದುಬಿಟ್ಟರು (ಯಾವುದೇ ತಾಳಮೇಳ ಇಲ್ಲದ ಇಂತಹ ಬುದ್ಧಿಜೀವಿಗಳು ಕೇವಲ ಸನಾತನದ ವಿರುದ್ಧ ಒಟ್ಟಾಗುತ್ತಾರೆ, ಇದರಿಂದ ಅವರ ವೈಚಾರಿಕ ಅಸ್ಪಷ್ಟತೆ ಗಮನಕ್ಕೆ ಬರುತ್ತದೆ! -ಸಂಪಾದಕರು) ಒಂದು ಕಾರ್ಯಕ್ರಮದ ಬಗ್ಗೆ ಒಬ್ಬರು ಒಂದು ವಿಷಯ ಪ್ರಸ್ತಾಪಿಸಿದಾಗ ಮತ್ತೊಬ್ಬರು ಬೇರೊಂದು ಹೇಳಿದಾಗ ಮೊದಲಿನವರು ನಾನು ಅದು ಹೇಳುತ್ತಿಲ್ಲ ಇದು ಬೇರೆ ಎಂದುಬಿಟ್ಟರು. ಒಬ್ಬರು ಒಂದು ಕಾರ್ಯಕ್ರಮ ಬೆಳಗ್ಗೆ ಎಂದರೆ, ಒಬ್ಬರು ಸಾಯಂಕಾಲ ಹೇಳಿದರು.

ಸೆಪ್ಟೆಂಬರ್‌ ೩ರಂದು ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ನಡೆಸಿದ ಜನಸಂವಾದ ಸಭೆಯ ವರದಿಯನ್ನು ಪ್ರಭಾತ್‌ ಪ್ರಕಟಿಸಿದೆ. ಇದರಲ್ಲಿ ಹುಬ್ಬಳ್ಳಿಯಲ್ಲಿ ಗೌರಿ ಲಂಕೇಶ ಪ್ರಕರಣದಲ್ಲಿ ಕ್ಷತ್ರಿಯ ಸಮಾಜದ ಯುವಕನನ್ನು ಬಂಧಿಸಿದಾಗ ಸಮಾಜವು ಭವ್ಯ ಮೆರವಣಿಗೆಯನ್ನು ಆಯೋಜಿಸಿ ‘ಸರಕಾರದ ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಎಚ್ಚರಿಸಿದ್ದಾಗಿ ಹೇಳುತ್ತದೆ. ಬರಹ ಇಲ್ಲಿದೆ

ಗೌರಿ ಲಂಕೇಶ್‌ ಹತ್ಯೆ ವಿಷಯದಲ್ಲಿ ಸನಾತನ ಸಂಸ್ಥಾ ಭಾಗಿಯಾಗಿದೆ ಎಂಬ ಅಂಶ ಬೆಳಕಿಗೆ ಬಂದಾಗಿನಿಂದ ಸಂಸ್ಥಾದ ಪತ್ರಿಕೆ 'ಪ್ರಭಾತ್‌' ತನಿಖೆಯ ಕ್ರಮ, ಪ್ರಗತಿಪರರ ಹೋರಾಟ, ಪ್ರಗತಿಪರ ಲೇಖಕಕರ ಮೇಲೆ ಬರಹಗಳ ಮೂಲಕ ದಾಳಿ ನಡೆಸುತ್ತಲೇ ಇದೆ. ಸನಾತನ ಸಂಸ್ಥೆಯ ಕಾರ್ಯಕರ್ತರು ಹತ್ಯೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ 'ಪ್ರಭಾತ್' ಪತ್ರಿಕೆ ಸಂಸ್ಥಾದ ಪರ ಅಭಿಪ್ರಾಯ ರೂಪಿಸುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ೧೧ರಂದೇ ಇಬ್ಬರು ಸ್ವಾಮೀಜಿಗಳ ಅಭಿಪ್ರಾಯಗಳನ್ನು ಪ್ರಕಟಿಸಿದೆ.

ಇಷ್ಟೇ ಅಲ್ಲ, ಸಂಸ್ಥಾ ನಂಬಿರುವ ವಿಚಾರಗಳಿಗೆ ಸ್ಪಂದಿಸದ ಅಥವಾ ಅದಕ್ಕೆ ವ್ಯತಿರಿಕ್ತವಾಗಿ ನಡೆಯುವ ಯಾರನ್ನೂ ಟೀಕಿಸದೆ ಬಿಟ್ಟಿಲ್ಲ. ಹಿಂದುತ್ವ ಪ್ರತಿಪಾದನೆಯಲ್ಲಿ ಬಿಜೆಪಿ ಸನಾತನ ಸಂಸ್ಥಾಗಿಂತ ಭಿನ್ನವಲ್ಲ ಎಂಬುದು ಸಾರ್ವಜನಿಕ ಅಭಿಪ್ರಾಯ. ಬಿಜೆಪಿಯ ಪ್ರಮುಖರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆಗಳ ಬಗ್ಗೆಯೂ ಅಸಮಾಧಾನ ಇರುವುದನ್ನು ‘ಪ್ರಭಾತ್‌’ನಲ್ಲಿ ಪ್ರಕಟವಾದ ಬರಹಗಳು ಹೇಳುತ್ತವೆ.

ಮೀಸಲಾತಿಯ ವಿಷಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಮೃದು ಧೋರಣೆ ತಳೆಯುತ್ತಿದ್ದಾರೆಂದು ಪ್ರಭಾತ್‌ ತನ್ನ ಬರಹದಲ್ಲಿ ಟೀಕಿಸಿದೆ.

ಇದನ್ನೂ ಓದಿ : ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೊಲೀಸರೇ ಅಡ್ಡಿ ಎಂದಿತ್ತು ‘ಸನಾತನ ಪ್ರಭಾತ್‍’!

ಇವುಗಳ ಜೊತೆಗೆ ಕರ್ನಾಟಕದಲ್ಲಿ ಉಗ್ರ ಹಿಂದೂವಾದ, ಧರ್ಮದ ಹೆಸರಿನ ದೌರ್ಜನ್ಯವನ್ನು ವಿರೋಧಿಸುವ ವ್ಯಕ್ತಿ ಅಥವಾ ಸುದ್ದಿಸಂಸ್ಥೆಗಳ ಬಗ್ಗೆ ತಕರಾರಿನ ಬರಹಗಳನ್ನು 'ಸನಾತನ ಪ್ರಭಾತ್'ನಲ್ಲಿ ಕಾಣಬಹುದು. ಹದಿನಾರು ಪುಟಗಳ ಪತ್ರಿಕೆಯ ಮುದ್ರಿತ ಸಂಚಿಕೆಗಳು ಪ್ರಸರಣೆಯಲ್ಲಿವೆ.

ಅಧ್ಯಾತ್ಮವೇ ಮುಖ್ಯವೆಂದು ಹೇಳುವ ಸನಾತನ ಸಂಸ್ಥೆಯ ಮುಖವಾಣಿ ‘ಸನಾತನ ಪ್ರಭಾತ್‌’, ಹಬ್ಬದ, ವ್ರತ ಆಚರಣೆಗಳ ವಿಧಿವಿಧಾನಗಳನ್ನು ಹೇಳುತ್ತಲೇ, ಕಟ್ಟರ್‌ ಹಿಂದೂ ನಿಲುವುಗಳನ್ನು ಪ್ರತಿಪಾದಿಸುತ್ತದೆ, ಹಾಗೆಯೇ, ಹಿಂದೂ ವಿರೋಧಿ ನಿಲುವುಗಳನ್ನು ಉಗ್ರವಾಗಿ ವಿರೋಧಿಸುವ ಮತ್ತು ಪ್ರಕಟಿಸುವ ಬರಹಗಳ ಮೂಲಕ ಅಂಥದ್ದೇ ಅಭಿಪ್ರಾಯಗಳನ್ನು ರೂಪಿಸುವ ಪ್ರಯತ್ನವನ್ನು ಮಾಡುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More