ಎನ್‌ಪಿಎ ವಿರುದ್ಧ ಕ್ರಮಕ್ಕೆ ಪಿಎಂಒಗೆ ಪಟ್ಟಿ ರವಾನಿಸಿದ್ದೆ ಎಂದ ರಘುರಾಂ ರಾಜನ್

‘ನಿಷ್ಕ್ರಿಯ ಸಾಲದ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ಕಾರ್ಯಾಲಯಕ್ಕೆ ಪಟ್ಟಿ ರವಾನಿಸಿದ್ದೆ. ಅದರ ಪ್ರಗತಿ ಏನಾಗಿದೆ ಎಂಬುದು ಇನ್ನೂ ನನ್ನ ಅರಿವಿಗೆ ಬಂದಿಲ್ಲ’ ಎಂದಿದ್ದಾರೆ ರಘುರಾಂ ರಾಜನ್. ಸಂಸದೀಯ ಅಂದಾಜು ಸಮಿತಿ ಮುಂದೆ ನಿಷ್ಕ್ರಿಯ ಸಾಲ ಸಮಸ್ಯೆಗಳ ಕುರಿತು ಅವರು ವಿವರಿಸಿದ್ದಾರೆ

"ಭಾರಿ ಮೊತ್ತದ ನಿಷ್ಕ್ರಿಯ ಸಾಲದ ಪ್ರಕರಣಗಳ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಿ, ಒಂದೆರಡು ಪ್ರಕರಣದಲ್ಲಾದರೂ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿದ್ದೆ. ಈ ನಿಟ್ಟಿನಲ್ಲಿ ಯಾವ ಪ್ರಗತಿಯಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ,” ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಂ ರಾಜನ್ ಬಹಿರಂಗಪಡಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ನೇತೃತ್ವದ ಸಂಸದೀಯ ಅಂದಾಜು ಸಮಿತಿಗೆ ನಿಷ್ಕ್ರಿಯ ಸಾಲದ ಬಿಕ್ಕಟ್ಟು ನಿರ್ವಹಣೆ ಕುರಿತಂತೆ ನೀಡಿರುವ 17 ಪುಟಗಳ ವಿವರಣೆಯಲ್ಲಿ ರಾಜನ್ ಈ ಅಂಶ ಪ್ರಸ್ತಾಪಿಸಿದ್ದಾರೆ.

ಆದರೆ, ರಾಜನ್ ಅವರು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪಟ್ಟಿ ನೀಡಿದ್ದರೋ ಅಥವಾ ನರೇಂದ್ರ ಮೋದಿ ಅವರ ಅವಧಿಯಲ್ಲಿ ಪಟ್ಟಿ ರವಾನಿಸಿದ್ದರೋ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪಟ್ಟಿ ರವಾನಿಸಿದ ನಿರ್ದಿಷ್ಟ ಅವಧಿಯ ಬಗ್ಗೆ ಮಾಹಿತಿ ಕೋರಲು ಸಂಸದೀಯ ಅಂದಾಜು ಸಮಿತಿ ನಿರ್ಧರಿಸಿದೆ ಎಂದು ‘ದಿ ವೈರ್’ ವರದಿ ಮಾಡಿದೆ.

2105 ಏಪ್ರಿಲ್ ನಲ್ಲಿ ವಿಶೇಷ ವರದಿ ಪ್ರಕಟಿಸಿದ್ದ ‘ದಿ ಹಿಂದೂಸ್ತಾನ್ ಟೈಮ್ಸ್’ ರಘುರಾಮ್ ರಾಜನ್ ಅವರು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ 17,500 ಕೋಟಿ ರುಪಾಯಿ ಮೊತ್ತ ಬ್ಯಾಂಕ್ ವಂಚನೆ ಪ್ರಕರಣಗಳ ಪಟ್ಟಿ ರವಾನಿಸಿದ್ದರು ಎಂದು ವರದಿ ಮಾಡಿತ್ತು. ಆರ್ಬಿಐ ರವಾನಿಸಿದ್ದ ನಿಷ್ಕ್ರಿಯ ಸಾಲದ ಖಾತೆಗಳು- ವಿನ್ಸಮ್ ಡೈಮಂಡ್ ಅಂಡ್ ಜ್ಯುವೆಲರಿ, ಜೂಮ್ ಡೆವಲಪರ್ಸ್, ತಿವಾರಿ ಗ್ರೂಪ್ಸ್, ಸೂರ್ಯ ವಿನಾಯಕ ಇಂಡಸ್ಟ್ರೀಸ್, ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್, ಫಸ್ಟ್ ಲೀಸಿಂಗ್ ಕಂಪನಿ ಆಫ್ ಇಂಡಿಯಾ, ಬೈಲಾರ್ ಇಂಡಸ್ಟ್ರೀಸ್, ಸೂರ್ಯ ಫಾರ್ಮಸ್ಯೂಟಿಕಲ್ಸ್, ಪ್ರೈಮ್ ಇಂಪೆಕ್ಸ್/ ಪ್ರೈಮ್ ಪಲ್ಸಸ್ ಮತ್ತು ಶಿವರಾಜ್ ಪುರಿ ಎಂದು ‘ಹಿಂದೂಸ್ತಾನ್ ಟೈಮ್ಸ್’ ವಿವರ ಪ್ರಕಟಿಸಿತ್ತು. ಅದಾದ ನಂತರ 2017ರಲ್ಲಿ ಸಿಬಿಐ, ವಿನ್ಸಮ್ ಡೈಮಂಡ್ ವಿರುದ್ಧ ಪ್ರಕರಣ ದಾಖಲಿಸಿತ್ತು.

ನಿಷ್ಕ್ರಿಯ ಸಾಲ ಸಮಸ್ಯೆ ತಡೆಯಲು ಸರ್ಕಾರವು ಮಹಾತ್ವಾಂಕ್ಷಿ ಸಾಲ ನೀಡಿಕೆ ಗುರಿ ನಿಗದಿ ಮಾಡುವುದರಿಂದ ಅಥವಾ ಸಾಲ ಮನ್ನಾ ಮಾಡುವುದರಿಂದ ದೂರ ಇರಬೇಕು. ಚುನಾವಣೆ ಸಮೀಪಿಸಿದಾಗ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ನಿಜ; ಆದರೆ, ಅದಕ್ಕಾಗಿ ಕೃಷಿ ಸಾಲ ಮನ್ನಾ ಮಾಡುವುದಿಲ್ಲ ಎಂದು ಸರ್ವಪಕ್ಷಗಳ ನಡುವೆ ಒಪ್ಪಂದ ಆಗಬೇಕು ಎಂದು ಸಲಹೆ ರಾಜನ್ ಮಾಡಿದ್ದಾರೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಲಗಳು ಮುಖ್ಯವಾಗಿ, ಮುದ್ರ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನೀಡಿದ ಸಾಲಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಮುಂಬರುವ ದಿನಗಳಲ್ಲಿ ಈ ಸಾಲಗಳು ಬೃಹತ್ ಪ್ರಮಾಣದಲ್ಲಿ ನಿಷ್ಕ್ರಿಯ ಸಾಲವಾಗಿ ಪರಿವರ್ತನೆಗೊಳ್ಳುವ ಅಪಾಯ ಇದೆ ಎಂದು ರಾಜನ್ ಎಚ್ಚರಿಸಿದ್ದಾರೆ.

ನಿಷ್ಕ್ರಿಯ ಸಾಲ ಬೆಳೆಯುವಲ್ಲಿ ಭ್ರಷ್ಚಾಚಾರದ ಪಾತ್ರದ ಬಗ್ಗೆ ಪ್ರಸ್ತಾಪಿಸಿರುವ ರಾಜನ್, ಬ್ಯಾಂಕರುಗಳ ಲೆಕ್ಕವಿಲ್ಲದ ಸಂಪತ್ತನ್ನು ಪತ್ತೆಹಚ್ಚದೇ ಈ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳಬಾರದು. ನಿಷ್ಕ್ರಿಯ ಸಾಲ ಬೃಹತ್ತಾಗಿ ಬೆಳೆಯುವಲ್ಲಿ ಭ್ರಷ್ಚಾಚಾರದ ಪಾತ್ರವು ಪ್ರಮುಖವಾದುದು ಎಂದು ಹೇಳಲಾರೆ. ಒಂದು ನಿರ್ದಿಷ್ಟ ಸಾಲಕ್ಕೆ ಸಂಬಂಧಿಸಿದಂತೆ ಎಲ್ಲ ಬ್ಯಾಂಕರುಗಳನ್ನು ಹೊಣೆಗಾರರನ್ನಾಗಿ ಮಾಡುವ ಬದಲು ಬ್ಯಾಂಕ್ ಆಡಳಿತ ಮಂಡಳಿ ಮತ್ತು ತನಿಖಾ ಸಂಸ್ಥೆಗಳು, ಬ್ಯಾಂಕ್ ನೀಡಿದ ಸಾಲ ನಿಷ್ಕ್ರಿಯವಾದಾಗ ಆ ಸಾಲ ನೀಡಿದ ಅವಧಿಯಲ್ಲಿದ್ದ ಬ್ಯಾಂಕಿನ ಸಿಇಒ ಅನ್ನು ಹೊಣೆಗಾರರನ್ನಾಗಿ ಮಾಡಿ ತನಿಖೆ ನಡೆಸಬೇಕು ಮತ್ತು ಅಂತಹ ಸಿಇಒಗಳ ಲೆಕ್ಕವಿಲ್ಲದ ಆಸ್ತಿಗಳನ್ನು ತನಿಖೆಗೆ ಒಳಪಡಿಸಬೇಕು. ತನಿಖೆ ವೇಳೆ ಅಕ್ರಮ ಸಂಪತ್ತು ಪತ್ತೆಯಾದರೆ ಮಾತ್ರ ನಿಷ್ಕ್ರಿಯ ಸಾಲದಲ್ಲಿ ಭ್ರಷ್ಚಾಚಾರ ನಡೆದಿದೆ ಎಂದು ನಿರ್ಧರಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಸಂಸದೀಯ ಅಂದಾಜು ಸಮಿತಿ ಮುಂದೆ ವಿವರಣೆ ನೀಡುವ ಸಂದರ್ಭದಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು, “ನಿಷ್ಕ್ರಿಯ ಸಾಲದ ಸಮಸ್ಯೆಯನ್ನು ರಾಜನ್ ಅವರು ಆರ್ಬಿಐ ಗವರ್ನರ್ ಆಗಿದ್ದ ಅವಧಿಯಲ್ಲೇ ಪತ್ತೆಹಚ್ಚಿದ್ದರು, ಅವರು ಹೆಚ್ಚು ವಿವರಣೆ ನೀಡಬಹುದು,” ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಂದಾಜು ಸಮಿತಿಯು ರಾಜನ್ ಅವರಿಗೆ ವಿವರಣೆ ನೀಡುವಂತೆ ಸೂಚಿಸಿತ್ತು.

ಸೆಪ್ಟಂಬರ್ 6ರಂದು ರಾಜನ್ ಅವರು 17 ಪುಟಗಳ ವಿವರಣೆಯನ್ನು ಸಂಸದೀಯ ಸಮಿತಿಗೆ ಸಲ್ಲಿಸಿದ್ದು, ಅದನ್ನು ತಮ್ಮ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಿದ್ದಾರೆ. ತಮ್ಮ ಅವಧಿಯಲ್ಲಿ ಬ್ಯಾಂಕು ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ತ್ವರಿತವಾಗಿ ತನಿಖಾ ಏಜೆನ್ಸಿಗಳಿಗೆ ವರದಿ ಮಾಡಲು ನಿಗಾ ಸಮಿತಿ ರಚಿಸಲಾಗಿತ್ತು. “ಭಾರಿ ಮೊತ್ತದ ನಿಷ್ಕ್ರಿಯ ಸಾಲದ ಪ್ರಕರಣಗಳ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಿ, ಒಂದೆರಡು ಪ್ರಕರಣದಲ್ಲಾದರೂ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿದ್ದೆ. ಈ ನಿಟ್ಟಿನಲ್ಲಿ ಯಾವ ಪ್ರಗತಿಯಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ,” ಎಂದು ರಾಜನ್ ತಿಳಿಸಿದ್ದಾರೆ.

ಇದನ್ನೂ ಓದಿ : ನಿಷ್ಕ್ರಿಯ ಸಾಲ; ಪ್ರಧಾನಿ ಮೋದಿ ಹೇಳೋದೊಂದು, ಬಿಜೆಪಿ ಹೇಳೋದು ಮತ್ತೊಂದು!

“ಈಗ ನಿಷ್ಕ್ರಿಯ ಸಾಲವಾಗಿ ಪರಿವರ್ತನೆಯಾಗಿರುವ ಬಹುತೇಕ ಸಾಲಗಳು 2006-2008ರ ಅವಧಿಯಲ್ಲಿ ನೀಡಿದಂತಹವು. ಆಗ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿತ್ತು. ಭವಿಷ್ಯದಲ್ಲೂ ಆರ್ಥಿಕತೆಯು ಅದೇ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತದೆ ಎಂಬ ನಿರೀಕ್ಷೆ ಮೀರಿದ ಮುನ್ನಂದಾಜು ಮತ್ತು ಅತ್ಯುತ್ಸಾಹದಿಂದ ಬ್ಯಾಂಕುಗಳು ಭಾರಿ ಪ್ರಮಾಣದಲ್ಲಿ ಸಾಲ ನೀಡಿದವು. ಆದರೆ, 2008 ಜಾಗತಿಕ ಆರ್ಥಿಕ ಹಿಂಜರಿತವು ಇವನ್ನೆಲ್ಲ ಹುಸಿಗೊಳಿಸಿತು. ಇದರ ಜೊತೆಗೆ ಕಲ್ಲಿದ್ದಲು ಗಣಿಗಳನ್ನು ನೀಡಿದ್ದರ ಬಗ್ಗೆ ಇದ್ದ ಅನುಮಾನಗಳು ಮತ್ತು ಮುಂದೆ ತನಿಖೆ ನಡೆಯುವ ಭೀತಿಯಿಂದಾಗಿ ನಿರ್ಧಾರ ಕೈಗೊಳ್ಳುವಲ್ಲಿನ ವಿಳಂಬ ಸೇರಿದಂತೆ ಆಡಳಿತಾತ್ಮಕ ಸಮಸ್ಯೆಗಳೂ ನಿಷ್ಕ್ರಿಯ ಸಾಲ ಹೆಚ್ಚಲು ಕಾರಣವಾಗಿವೆ. ಇದು ಯುಪಿಎ ಮತ್ತು ಎನ್‌ಡಿಎ ಉಭಯ ಸರ್ಕಾರದ ಅವಧಿಯಲ್ಲೂ ಆಗಿದೆ. ಯೋಜನೆಗಳು ಸ್ಥಗಿತಗೊಂಡ ಅಥವಾ ವಿಳಂಬವಾದ ಕಾರಣ ಯೋಜನಾ ವೆಚ್ಚ ದುಪ್ಪಟ್ಟಾಗಿ, ಅಂತಿಮವಾಗಿ ಸಾಲ ಮರುಪಾವತಿ ಮಾಡಲಾಗದ ಸ್ಥಿತಿ ತಲುಪಿವೆ. ದೇಶದಲ್ಲಿ ವಿದ್ಯುತ್ ಕೊರತೆ ಇದ್ದರೂ ಪೂರ್ಣಗೊಳ್ಳದ ವಿದ್ಯುತ್ ಸ್ಥಾವರಗಳು ಸತತ ತೊಂದರೆ ಎದುರಿಸುತ್ತಿರುವುದು ಈಗಲೂ ಸರ್ಕಾರವು ಸಕಾಲದಲ್ಲಿ ತ್ವರಿತಗತಿಯಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂಬುದರ ಪ್ರತಿಬಿಂಬವಾಗಿವೆ,” ಎಂದು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More