ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಮೇಯರ್‌ ಸ್ಥಾನ ಉಳಿಸಿಕೊಳ್ಳಲು ಅಖಾಡಕ್ಕಿಳಿದ ರಾಮಲಿಂಗಾ ರೆಡ್ಡಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಯಲ್ಲೇ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಬಿಟಿಎಂ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಕಣಕ್ಕಿಳಿದಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಅವರ ಜೊತೆಗೂಡಿ ಪಕ್ಷೇತರರಾಗಿ ಗೆದ್ದಿರುವ ಏಳು ಕಾರ್ಪೊರೇಟರ್‌ಗಳನ್ನು ಭೇಟಿ ಮಾಡಿ, ಸೆ.೨೮ರಂದು ನಡೆಯುವ ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ೨೫೯ ಮತಗಳಿದ್ದು, ಮೇಯರ್, ಉಪ ಮೇಯರ್‌ ಸ್ಥಾನ ಪಡೆಯಲು ಸರಳ ಬಹುಮತವಾದ ೧೩೦ ಮತ ಪಡೆಯಬೇಕಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಬಳಿ ೧೨೭ ಮತಗಳಿವೆ. ಬಿಜೆಪಿ ೧೨೩ ಮತ ಹೊಂದಿದೆ.

ಸಹೋದರನನ್ನು ಗೆಲ್ಲಿಸಿಕೊಂಡ ಎಂ ಬಿ ಪಾಟೀಲ್‌

ಬಾಗಲಕೋಟೆ-ವಿಜಯಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಬಲೇಶ್ವರ ಶಾಸಕ ಹಾಗೂ ಮಾಜಿ ಸಚಿವ ಎಂ ಬಿ ಪಾಟೀಲ್‌ ಅವರ ತಮ್ಮ ಸಹೋದರ ಸುನೀಲ ಗೌಡ ಪಾಟೀಲ ಜಯಭೇರಿ ಬಾರಿಸಿದ್ದಾರೆ. ೨,೦೪೦ ಮತ ಪಡೆದ ಅವರು ಮೊದಲ ಬಾರಿಗೆ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಹೋದರರಿಬ್ಬರೂ ವಿಧಾನಸೌಧ ಪ್ರವೇಶಿಸಿದ್ದಾರೆ. ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ರಾಜಿನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಿಜಯಪುರ ಶಾಸಕರಾಗಿ ಯತ್ನಾಳ್‌ ಆಯ್ಕೆಯಾಗಿದ್ದಾರೆ.

ತೆಲಂಗಾಣದಲ್ಲಿ ರಾಜ್ಯ ಸಾರಿಗೆ ಬಸ್ ಉರುಳಿಬಿದ್ದು ೫೨ ಜನರ ಸಾವು

ಜಗತಿಯಾಳ್‌ದಿಂದ ಶನಿವಾರಪೇಟೆ ಕಡೆಗೆ ಪ್ರಯಾಣಿಸುತ್ತಿದ್ದ ತೆಲಂಗಾಣ ರಾಜ್ಯ ಸಾರಿಗೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಪರಿಣಾಮ 52 ಪ್ರಯಾಣಿಕರು ಸಾವನಪ್ಪಿರುವ ದಾರುಣ ಘಟನೆ ನಡೆದಿದೆ. ಬಸ್‌ನಲ್ಲಿ ೫೫ ಜನರು ಪ್ರಯಾಣಿಸುತ್ತಿದ್ದರು ಎಂದು ಕಂದಾಯ ವಿಭಾಗೀಯ ಅಧಿಕಾರಿ ಜಿ ನರೇಂದ್ರ ಮಾಹಿತಿ ನೀಡಿದ್ದಾರೆ. ಘಾಟ್ ರಸ್ತೆಯಾಗಿದ್ದರಿಂದ ಹಾಗೂ ಚಾಲಕನಿಗೆ ಬಸ್‌ ನಿಯಂತ್ರಿಸಲು ಆಗದೇ ಆಯತಪ್ಪಿ ಕಮರಿಗೆ ಉರುಳಿದೆ ಎನ್ನಲಾಗಿದೆ.

ಎಚ್‌ಐವಿ ಏಡ್ಸ್ ಕಾಯಿದೆ ೨೦೧೭ ಜಾರಿಗೊಳಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ಏಡ್ಸ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಯಾವುದೇ ರೀತಿಯ ತಾರತಮ್ಯ ಆದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್‌ಐವಿ ಏಡ್ಸ್ ಕಾಯಿದೆ ೨೦೧೭ ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಅನುಷ್ಠಾನಗೊಳಿಸಿದೆ. ಎಚ್‌ಐವಿ, ಏಡ್ಸ್ ಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡದಿರುವುದು, ಉದ್ಯೋಗ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ತಾರತಮ್ಯ ಮಾಡುವುದು ಇತ್ಯಾದಿಯನ್ನು ತಡೆಗಟ್ಟಲು ಏಪ್ರಿಲ್ 20, 2017ರಂದು ಈ ಕಾಯ್ದೆ ಜಾರಿಯಾಗಿತ್ತು. ನ್ಯಾಯಾಲಯದ ಆದೇಶದ ಹೊರತಾಗಿ ಉದ್ಯೋಗ ಅಥವಾ ಸೇವೆ ಪಡೆಯುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಎಚ್‌ ಐವಿ ಬಗ್ಗೆಯೂ ವಿವರ ಹಂಚಿಕೊಳ್ಳಬಾರದೆಂದು ಕೂಡ ಕಾಯ್ದೆ ಹೇಳುತ್ತದೆ. ಕಾಯಿದೆಯನ್ನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು.

ರುಪಾಯಿ ಕುಸಿತದ ನಡುವೆಯೇ 6.8 ಟನ್ ಚಿನ್ನ ಖರೀದಿಸಿದ ಆರ್‌ಬಿಐ

ಭಾರತೀಯ ಕರೆನ್ಸಿ ರುಪಾಯಿ ಸತತ ಕುಸಿತದ ನಡುವೆಯೇ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚಿನ್ನದ ದಾಸ್ತಾನು ಹೆಚ್ಚಿಸಿಕೊಂಡಿದೆ. ಜುಲೈ ತಿಂಗಳಲ್ಲಿ ಆರ್ಬಿಐ 6.8 ಟನ್ ಚಿನ್ನವನ್ನು ಹೊಸದಾಗಿ ಖರೀದಿಸಿದೆ. 2009ರ ನಂತರ ಇದು ಗರಿಷ್ಠ ಪ್ರಮಾಣದ ಮಾಸಿಕ ಖರೀದಿಯಾಗಿದೆ. 2009 ರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 200 ಟನ್ ಚಿನ್ನ ಖರೀದಿಸಿದ ನಂತರ 2017 ಡಿಸೆಂಬರ್ ನಲ್ಲಿ ಮೂರು ಕ್ವಿಂಟಲ್ ಚಿನ್ನ ಖರೀದಿಸಿತ್ತು. 2018 ಮಾರ್ಚ್ ತಿಂಗಳಲ್ಲಿ 2.2 ಟನ್ ಖರೀದಿಸಿತ್ತು. ಪ್ರಸಕ್ತ ವಿತ್ತೀಯ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 12.7 ಟನ್ ಚಿನ್ನವನ್ನು ಖರೀದಿಸಲಾಗಿದೆ. ಈ ಪೈಕಿ ಜೂನ್- ಜುಲೈ ನಲ್ಲಿ 11.2 ಟನ್ ಖರೀದಿಸಲಾಗಿದೆ.

ರಾಜಸ್ಥಾನದಲ್ಲಿ ಗೆಲುವು ನಮ್ಮದೇ: ಅಮಿತ್ ಶಾ

ಚುನಾವಣೆ ಹತ್ತಿರ ಬಂದಾಗಲೆಲ್ಲ ವಿರೋಧ ಪಕ್ಷಗಳು, ದಾದ್ರಿ ಹತ್ಯೆ ಪ್ರಕರಣವನ್ನು ಕೆಣಕುತ್ತಿದ್ದು, ಪ್ರಶಸ್ತಿ ವಾಪಸಾತಿ, ದೊಂಬಿಹತ್ಯೆಯಂತಹ ಪ್ರಕರಣಗಳ ಹೊರತಾಗಿಯೂ ರಾಜಸ್ಥಾನದಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಜೈಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ಒಂದೆಡೆ ಬಿಜೆಪಿ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ನಿರ್ಣಾಯಕ ಹಾಗೂ ಬಲವಾದ ನಾಯಕತ್ವವನ್ನು ಹೊಂದಿದ್ದರೆ, ಇನ್ನೊಂದೆಡೆ ತಮ್ಮ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಪಕ್ಷಕ್ಕೆ ಯಾವ ನೈತಿಕತೆಯೂ ಇಲ್ಲ. ಇಂತಹ ಪಕ್ಷಗಳಿಗೆ ಮತದಾರರು ಹೇಗೆ ಮತ ಚಲಾಯಿಸುತ್ತಾರೆ. ವಿರೋಧ ಪಕ್ಷಗಳಿಗೆ ಚುನಾವಣೆಯಲ್ಲಿ ಗೆಲ್ಲುವ ನೈತಿಕತೆಯೇ ಇಲ್ಲ,” ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಭಕ್ಷಣೆ ವದಂತಿಯಿಂದಾಗಿ 2015ರ ಸೆಪ್ಟೆಂಬರ್‌ನಲ್ಲಿ ಮೊಹಮ್ಮದ್‌ ಅಕ್ಲಾಖ್ ಅವರನ್ನು ಹತ್ಯೆಗೈಯ್ಯಲಾಗಿತ್ತು.

ಅರ್ಜುನ ಪ್ರಶಸ್ತಿಗೆ ಅಮಿತ್ ಪಂಘಲ್‌ ಹೆಸರು ಶಿಫಾರಸು

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾಡ್ ಸ್ವರ್ಣ ವಿಜೇತ ಬಾಕ್ಸರ್ ಅಮಿತ್ ಪಂಘಲ್ ಅವರನ್ನು ಪ್ರತಿಷ್ಠಿತ ಅರ್ಜುನ ಕ್ರೀಡಾ ಪ್ರಶಸ್ತಿಗೆ ಭಾರತೀಯ ಬಾಕ್ಸಿಂಗ್ ಫೆಡರೇಷನ್ ಶಿಫಾರಸು ಮಾಡಿದೆ. ಪುರುಷರ ಫ್ಲೈವೇಟ್ ೪೯ ಕೆಜಿ ವಿಭಾಗದಲ್ಲಿ ಹಾಲಿ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ವಿಜೇತ ಉಜ್ಬೇಕಿಸ್ತಾನದ ಹಸನ್‌ಬಾಯ್ ಡುಸ್ಟಾಮೊವ್ ವಿರುದ್ಧ ಅಮಿತ್ ಗೆಲುವು ಸಾಧಿಸಿ ಚಿನ್ನ ಗೆದ್ದಿದ್ದರು. ಹದಿನೆಂಟನೇ ಏಷ್ಯಾಡ್‌ನಲ್ಲಿ ಭಾರತಕ್ಕೆ ಬಂದ ಮೊದಲ ಸ್ವರ್ಣ ಪದಕವಿದು. "ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ನನಗೆ ಹೆಮ್ಮೆ ತರಿಸಿದೆ. ನಾನು ಗೆದ್ದ ಪದಕವೇ ಎಲ್ಲವನ್ನೂ ಸಾರುತ್ತಿದೆ,'' ಎಂದು ೨೨ರ ಹರೆಯದ ಅಮಿತ್ ಪಂಘಲ್ ತಿಳಿಸಿದ್ದಾರೆ.

ಭಾರತದ ನೆರವಿಗೆ ಬಾರದ ರಾಹುಲ್ ಮನೋಜ್ಞ ಶತಕ

ಕನ್ನಡಿಗ ಕೆ ಎಲ್ ರಾಹುಲ್ (೧೪೯) ದಾಖಲಿಸಿದ ಅಪೂರ್ವ ಶತಕವಾಗಲೀ ಇಲ್ಲವೇ ಯುವ ಆಟಗಾರ ರಿಷಭ್ ಪಂತ್ (114) ಜತೆಗೂಡಿ ಐದನೇ ವಿಕೆಟ್‌ಗೆ ಪೇರಿಸಿದ ೨೦೪ ರನ್ ಜತೆಯಾಟವಾಗಲೀ ಭಾರತದ ನೆರವಿಗೆ ಬಾರಲಿಲ್ಲ. ಕೆನ್ನಿಂಗ್ಟನ್ ಓವಲ್‌ ಟೆಸ್ಟ್‌ನಲ್ಲಿ ಭಾರತ ತಂಡವನ್ನು ೧೧೮ ರನ್‌ಗಳಿಂದ ಮಣಿಸಿದ ಆತಿಥೇಯ ಇಂಗ್ಲೆಂಡ್, ಐದು ಪಂದ್ಯ ಸರಣಿಯನ್ನು ೪-೧ರಿಂದ ಗೆದ್ದುಬೀಗಿತು. ಇದರೊಂದಿಗೆ ಅಲಸ್ಟೇರ್ ವಿದಾಯಕ್ಕೆ ಇಂಗ್ಲೆಂಡ್ ಗೆಲುವಿನ ಬೀಳ್ಕೊಡುಗೆ ನೀಡಿತು. ೪೬೪ ರನ್ ಗುರಿ ಪಡೆದಿದ್ದ ಭಾರತಕ್ಕೆ ರಾಹುಲ್ ಮತ್ತು ರಿಷಭ್ ಪಂತ್ ಆಸರೆಯಾದರೂ, ಅದಿಲ್ ರಶೀದ್ ಚಮತ್ಕಾರಿ ಎಸೆತಕ್ಕೆ ಬೌಲ್ಡ್ ಆದ ರಾಹುಲ್ ನಿರ್ಗಮಿಸುವುದರೊಂದಿಗೆ ಭಾರತ ಸಂಕಷ್ಟಕ್ಕೆ ಸಿಲುಕಿ ಅಂತಿಮವಾಗಿ ಆತಿಥೇಯರ ಎದುರು ಸೋಲೊಪ್ಪಿಕೊಂಡಿತು.

‘ದಬಾಂಗ್-3’ ಘೋಷಿಸಿದ ಸಲ್ಮಾನ್‌-ಸೋನಾಕ್ಷಿ

ಸಲ್ಮಾನ್ ಖಾನ್‌ ಅಭಿನಯದ ಹಿಟ್‌ ‘ದಬಾಂಗ್‌’ ಸರಣಿಯ ಮೂರನೇ ಸಿನಿಮಾ ಮುಂದಿನ ವರ್ಷ ತಯಾರಾಗಲಿದೆ. ನೂತನ ಸರಣಿಯಲ್ಲಿಯೂ ಸಲ್ಮಾನ್ ಮತ್ತು ಸೋನಾಕ್ಷಿ ಜೋಡಿಯಾಗಿ ನಟಿಸಲಿದ್ದಾರೆ. ಸ್ವತಃ ಸಲ್ಮಾನ್ ಮತ್ತು ಸೋನಾಕ್ಷಿ ಟ್ವಿಟರ್‌ ಅಕೌಂಟ್‌ಗಳಲ್ಲಿ ಸುದ್ದಿಯನ್ನು ಖಚಿತಪಡಿಸಿದ್ದಾರೆ. ‘ದಬಾಂಗ್‌’ ಸರಣಿಯ ಮೊದಲ ಸಿನಿಮಾ ತೆರೆಕಂಡು ಸೆಪ್ಟೆಂಬರ್ 10ಕ್ಕೆ ಎಂಟು ವರ್ಷ. ಅರ್ಬಾಜ್ ಖಾನ್ ನಿರ್ಮಾಣದಲ್ಲಿ ತಯಾರಾಗಿದ್ದ ಚಿತ್ರವನ್ನು ಅಭಿನವ್ ಕಶ್ಯಪ್ ನಿರ್ದೇಶಿಸಿದ್ದರು. ಮುಂದೆ 2012ರಲ್ಲಿ ‘ದಬಾಂಗ್‌2’ ತೆರೆಕಂಡಿತ್ತು. ‘ದಬಾಂಗ್’ ಸಿನಿಮಾದ ಎಂಟನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ಸಲ್ಮಾನ್‌ ಸರಣಿಯ ಹೊಸ ಸಿನಿಮಾ ಘೋಷಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More