ದೇವನಹಳ್ಳಿ ಗೊಬ್ಬರಗುಂಟೆಯ ಸರ್ಕಾರಿ ಭೂಮಿ ಕಬಳಿಕೆ ಹಿಂದಿನ ರಹಸ್ಯ ಬಯಲು

ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಸರ್ಕಾರಿ ಜಮೀನು, ಖಾಸಗಿ ವ್ಯಕ್ತಿ ಹೆಸರಿಗೆ ಅಕ್ರಮವಾಗಿ ಹಕ್ಕು ಬದಲಾವಣೆಯ ಹಿಂದಿನ ರಹಸ್ಯ ಬಹಿರಂಗಗೊಂಡಿದೆ. ‘ದಿ ಸ್ಟೇಟ್‌’ ಹೊರಗೆಡವಿದ್ದ ಈ ಪ್ರಕರಣ ಭೂಮಿ ನಿರ್ವಹಣೆಯ ಪ್ರಧಾನ ಕಚೇರಿಯಲ್ಲಿ ಸದ್ದು ಮಾಡಿತ್ತು. ಬಹಿರಂಗಗೊಂಡಿರುವ ರಹಸ್ಯವಾದರೂ ಏನು?

ಸರ್ಕಾರಿ ಬೀಳು ಭೂಮಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡುವ ಮೂಲಕ ಹಕ್ಕು ಬದಲಾಯಿಸುತ್ತಿದ್ದ ಜಾಲ ಭೂಮಿ ತಂತ್ರಾಂಶ ನಿರ್ವಹಣೆಯ ಪ್ರಧಾನ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪಗಳಿಗೆ ಮತ್ತಷ್ಟು ಪುಷ್ಠಿ ದೊರೆತಿದೆ.

ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆಯಲ್ಲಿನ ೧೯ ಎಕರೆ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿ ಹೆಸರಿನಲ್ಲಿ ಹಕ್ಕು ಬದಲಾವಣೆಯಾಗಿತ್ತು. ಈ ಪ್ರಕರಣದಲ್ಲಿ ಭೂಮಿ ನಿರ್ವಹಣೆ ಕಚೇರಿಯಲ್ಲೇ ಒಳಸಂಚು ನಡೆದಿದೆ ಎಂದು ಒಂದು ವಾರದ(ಸೆ.೬) ಹಿಂದೆಯೇ ‘ದಿ ಸ್ಟೇಟ್‌’ ವರದಿ ಪ್ರಕಟಿಸಿತ್ತು. ಭೂಮಿ ತಂತ್ರಾಂಶವನ್ನು ಹೊರಗಿನ ವ್ಯಕ್ತಿಗಳು ಬಳಸಲು ಅವಕಾಶವಿಲ್ಲ ಎಂದು ಇದೀಗ ಇಲಾಖೆಯೇ ಹೇಳಿರುವುದು ಕಚೇರಿ ಒಳಗೇ ಒಳಸಂಚು ನಡೆದಿದೆ ಎಂಬುದೂ ಖಚಿತಗೊಂಡಂತಾಗಿದೆ.

ಸೆ.೬ರಂದು ‘ದಿ ಸ್ಟೇಟ್‌’ ಪ್ರಕಟಿಸಿದ್ದ ವರದಿ

ಭೂಮಿ ತಂತ್ರಾಂಶದ ಪ್ರವೇಶಾವಕಾಶದ ಪಾಸ್‌ ವರ್ಡ್‌ ದುರ್ಬಳಕೆ ಆಗಿರುವುದನ್ನು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಖಾತ್ರಿಪಡಿಸಿಕೊಂಡಿದೆ. ಹಾಗೆಯೇ ಈ ಸಂಬಂಧ ತಾಂತ್ರಿಕವಾಗಿ ಲಾಗಿನ್‌ ಆಗಿರುವ ವಿವರಗಳು ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಪರಿಶೀಲಿಸುತ್ತಿದೆ.

ಪ್ರಕರಣದ ಕುರಿತು ‘ದಿ ಸ್ಟೇಟ್‌’ ಸರಣಿ ವರದಿಗಳನ್ನು ಪ್ರಕಟಿಸಿದ ನಂತರ ಇಲಾಖೆಯ ಆಯುಕ್ತ ಮುನೀಶ್‌ ಮೌದ್ಗಿಲ್‌ ಈ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ಈ ಪ್ರಕರಣದಲ್ಲಿ ತಂತ್ರಾಂಶದ ಪ್ರವೇಶಾವಕಾಶದ ಪಾಸ್‌ ವರ್ಡ್‌ ದುರ್ಬಳಕೆ ಆಗಿರುವುದು ಕಂಡು ಬಂದಿದೆ. ಇದು ಭೂಮಿ ತಂತ್ರಾಂಶವನ್ನು ಹ್ಯಾಕ್‌ ಮಾಡಿರುವ ಕಾರ್ಯವಲ್ಲ. ಭೂಮಿ ತಂತ್ರಾಂಶದಲ್ಲಿ ಭೂ ದಾಖಲೆಗಳ ಮಾಹಿತಿ ಕೋಶವು ಅಂತರ್ಜಾಲದಲ್ಲಿ ಇರುವುದಿಲ್ಲ. ಹಾಗೂ ಹೊರಗಿನ ವ್ಯಕ್ತಿಗಳಿಗೆ ಪ್ರವೇಶಾವಕಾಶ ಸಾಧ್ಯವಿಲ್ಲ,” ಎಂದು ಹೇಳಿಕೆಯಲ್ಲಿ ಪ್ರಧಾನವಾಗಿ ಉಲ್ಲೇಖಿಸಿದ್ದಾರೆ.

ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ಹೊರಡಿಸಿರುವ ಪತ್ರಿಕಾ ಹೇಳಿಕೆ

ಇನ್ನು, ಪಾಸ್‌ ವರ್ಡ್‌ ದುರ್ಬಳಕೆ ಮಾಡಿದರೂ ಅದರ ಮೂಲಕ ಅಕ್ರಮವಾಗಿ ಬದಲಾವಣೆ ಮಾಡಲು ಸಾಧ್ಯವಾಗದಂತೆ ಕ್ರಮ ಕೈಗೊಂಡಿರಲಿಲ್ಲ ಎಂದು ಪರಿಭಾವಿಸಬಹುದಾಗಿದೆ. ದೇವನಹಳ್ಳಿ ಗೊಬ್ಬರ ಗುಂಟೆ ಪ್ರಕರಣ ಬೆಳಕಿಗೆ ಬಂದ ನಂತರ ಎಚ್ಚೆತ್ತುಕೊಂಡಿರುವ ಕಂದಾಯ ಇಲಾಖೆ, ಪಾಸ್‌ ವರ್ಡ್‌ ದುರ್ಬಳಕೆ ಆದರೂ ಅದರ ಮೂಲಕ ಅಕ್ರಮವಾಗಿ ಬದಲಾವಣೆ ಮಾಡಲು ಸಾಧ್ಯವಾಗದಂತೆ ಕ್ರಮಗಳನ್ನು ಕೈಗೊಂಡಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ಅದಕ್ಕೂ ಮೊದಲು ಈ ಕ್ರಮಗಳು ಜಾರಿಯಲ್ಲಿದ್ದವೇ ಎಂಬ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿಲ್ಲ.

“ಭೂಮಿ ತಂತ್ರಾಂಶದಲ್ಲಿನ ದತ್ತಾಂಶವನ್ನು ಈಗ ನಿಗೂಢ ಸಂಕೇತ ಭಾಷೆಗೆ ಪರಿವರ್ತಿಸಿದೆ(Encrypt). ಗಣಕೀಕೃತ ವ್ಯವಸ್ಥೆಯ ಆಡಳಿತಾಧಿಕಾರಿಯ ಬೆರಳ ಗುರುತನ್ನು ಸಹಾ ಅಧಿಕೃತಗೊಳಿಸಿದೆ. ತಾಲೂಕಿನಲ್ಲಿ ಸಿಸಿಟಿವಿ ಅಳವಡಿಸಿದೆ,” ಎಂದು ಇಲಾಖೆ ತಿಳಿಸಿದೆ.

ಅದೇ ರೀತಿ, ಪ್ರತಿಯೊಂದು ಪಹಣಿಯನ್ನು ತಂತ್ರಾಂಶದ ಮೂಲಕ ಕೂಲಂಕಷವಾಗಿ ಪರಿಶೀಲಿಸಿರುವ ಇಲಾಖೆ, ಬೇರೆ ಯಾವುದೇ ರೀತಿ ಅಕ್ರಮವಾಗಿ ಬದಲಾವಣೆ ಆಗಿರುವುದು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ನಿರಂತರ ಕ್ರಮಗಳಿಂದಾಗಿ ಭೂಮಿ ದತ್ತಾಂಶ ಮತ್ತು ದಾಖಲೆಗಳು ನಿರಂತರವಾಗಿ ಸುರಕ್ಷಿತವಾಗಿವೆ ಎಂದು ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಗೊಬ್ಬರಗುಂಟೆ ಗ್ರಾಮದ ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೧ ಗುಂಟೆ ಜಮೀನಿನ ಗಣಕೀಕೃತ ಪಹಣಿ ಕಾಲಂ (೯)ರಲ್ಲಿ ಅಕ್ರಮವಾಗಿ ನಮೂದಾಗಿದ್ದ ಹುಚ್ಚಪ್ಪ ಬಿನ್‌ ನಂಜಪ್ಪ ಅವರ ಹೆಸರನ್ನು ತೆಗೆದು, ಈ ಹಿಂದೆ ಇದ್ದಂತೆ ಸರ್ಕಾರಿ ಬೀಳು ಎಂದು ಹಾಗೂ ಪಹಣಿ ಕಾಲಂ(೧೧)ರಲ್ಲಿ ಎಫ್‌ ಐ ಆರ್‌ ಪ್ರಕರಣ ಸಂಖ್ಯೆ ವಿಚಾರಣೆಗೆ ಬಾಕಿ ಇರುತ್ತದೆ,” ಎಂದು ಉಪ ವಿಭಾಗಾಧಿಕಾರಿ ಈಗಾಗಲೇ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಪ್ರಕರಣ ಕುರಿತು ವಿಜಯಪುರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಎಫ್‌ ಐ ಆರ್‌ ದಾಖಲಾಗಿದೆ.

ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳು ೨೦೧೮ರ ಆಗಸ್ಟ್‌ ೩೦ರಂದು ಭೂಮಿ ಕೇಂದ್ರದ ಪಹಣಿಗಳನ್ನು ಪರಿಶೀಲನೆ ಮಾಡಿದ್ದರು. ೨೦೦೨ನೇ ಸಾಲಿನಿಂದ ಈವರೆವಿಗೆ ಪಹಣಿ ಬದಲಾವಣೆ ಆಗಿದೆ ಎಂಬುದು ಕಂಡು ಬಂದಿದೆ. “ಸರ್ವೇ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಸರ್ಕಾರಿ ಬೀಳು ಎಂಬುದು ಹುಚ್ಚಪ್ಪ ಬಿನ್ ನಂಜಪ್ಪ ಎಂಬುವರ ಹೆಸರಿಗೆ ಪಹಣಿ ಕಾಲಂ(೯)ರಲ್ಲಿ ದಾಖಲಾಗಿದೆ. ಆದರೆ, ದೇವನಹಳ್ಳಿ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಪಹಣಿ ತಿದ್ದುಪಡಿ ಮತ್ತು ಮ್ಯುಟೇಷನ್‌ ಆಗಿರುವ ಬಗ್ಗೆ ಯಾವುದೇ ವಹಿವಾಟುಗಳು ನಡೆದಿರುವುದು ಕಂಡು ಬರುವುದಿಲ್ಲ. ಆದರೆ ಪಹಣಿ ಕಾಲಂ(೯)ರಲ್ಲಿ ಹುಚ್ಚಪ್ಪ ಬಿನ್ ನಂಜಪ್ಪ ಅವರ ಹೆಸರಿಗೆ ಖಾತೆ ಎಲ್ಲಿ ಹೇಗೆ ನಮೂದಾಗಿರುತ್ತದೆ ಎಂಬದು ತಿಳಿದು ಬಂದಿಲ್ಲ,” ಎಂದು ಗ್ರಾಮ ಲೆಕ್ಕಿಗರಾದ ಎಂ ಪಿ ರಮ್ಯ ಅವರು ಹೇಳಿಕೆ ನೀಡಿದ್ದರು.

ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಗೊಬ್ಬರಗುಂಟೆ ಸರ್ವೆ ನಂಬರ್‌ ೬೪ರಲ್ಲಿ ೧೯ ಎಕರೆ ೧೪ ಗುಂಟೆ ಜಮೀನು ಸರ್ಕಾರಿ ಬೀಳು ಎಂದು ವರ್ಗೀಕೃತವಾಗಿತ್ತು. ೧೯೬೮-೬೯ರಿಂದ ೨೦೦೧-೦೨ನೇ ಸಾಲಿನ ಕೈ ಬರಹದ ಪಹಣಿ ಮತ್ತು ಆರ್‌ ಟಿ ಸಿ ಕಾಲಂ(೯)ರಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿತ್ತು. ಅಲ್ಲದೆ, ಕಾಲಂ ೧೨(೨)ರಲ್ಲಿ ವಿ ಪಿ ಫಾರೆಸ್ಟ್‌ ಎಂದು ದಾಖಲಾಗಿತ್ತು. ಅಲ್ಲದೆ, ೨೦೧೬-೧೭ನೇ ಸಾಲಿನಲ್ಲಿ ಸರ್ಕಾರದಿಂದ ಗ್ರಾಮ ಲೆಕ್ಕಿಗರಿಗೆ ನೀಡಿರುವ ಗಣಕೀಕೃತ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂದು ದಾಖಲಾಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More